ಗಾಜಿಯಾಬಾದ್,
ಉತ್ತರ ಪ್ರದೇಶದಲ್ಲಿ ನಕಲಿ ರಾಯಭಾರ ಕಚೇರಿ ನಡೆಸುತ್ತಿದ್ದ ವ್ಯಕ್ತಿಯನ್ನು ಗಾಜಿಯಾಬಾದ್ ಪೊಲೀಸರು ಬಂಧಿಸಿದ್ದಾರೆ.
ಹರ್ಷವರ್ಧನ್ ಜೈನ್ ಎಂಬ ವ್ಯಕ್ತಿ, ಗಾಜಿಯಾಬಾದ್‌ನ ಕವಿ ನಗರ ಪ್ರದೇಶದಲ್ಲಿ ಮನೆ ಬಾಡಿಗೆಗೆ ಪಡೆದು ನಕಲಿ ರಾಯಭಾರ ಕಚೇರಿ ನಡೆಸಿದ್ದಾರೆ. ಬಂಧಿತ ಜೈನ್ ಕೂಡ ಅದೇ ಪ್ರದೇಶದ ನಿವಾಸಿಯಾಗಿದ್ದರು.
ಅವರು ವೆಸ್ಟಾರ್ಟಿಕಾ, ಸಬೋರ್ಕಾ, ಬೊಲಿವಿಯಾ ಮತ್ತು ಲಂಡೋನಿಯಾದಂತಹ ಅಪರಿಚಿತ ದೇಶಗಳಿಗೆ ರಾಯಭಾರಿಯೆಂದು ಹೇಳಿಕೊಂಡಿದ್ದರು. ಇದಲ್ಲದೆ, ಅವರು ಐಷಾರಾಮಿ ಕಾರುಗಳಲ್ಲಿ ರಾಜತಾಂತ್ರಿಕ ಅಧಿಕಾರಿಗಳು ಬಳಸುವ ನಂಬರ್ ಪ್ಲೇಟ್‌ಗಳನ್ನು ಬಳಸಿದ್ದಾರೆ. ಅಷ್ಟೇ ಅಲ್ಲ, ಪ್ರಧಾನಿ, ರಾಷ್ಟ್ರಪತಿ ಸೇರಿದಂತೆ ಪ್ರಮುಖ ವ್ಯಕ್ತಿಗಳೊಂದಿಗೆ ಇರುವಂತೆ ಫೋಟೋಗಳನ್ನು ಮಾರ್ಫ್ ಮಾಡಿದ್ದಾರೆ.
ಆತನಿಂದ 44 ಲಕ್ಷ ರೂ. ನಗದು, ವಿದೇಶಿ ಕರೆನ್ಸಿ ನೋಟುಗಳು, ರಾಯಭಾರ ಕಚೇರಿ ಅಧಿಕಾರಿಗಳು ಬಳಸುವ ನಂಬರ್ ಪ್ಲೇಟ್‌ಗಳನ್ನು ಹೊಂದಿರುವ 4 ಕಾರುಗಳು, ಪಾಸ್‌ಪೋರ್ಟ್‌ಗಳು, ವಿದೇಶಾಂಗ ಸಚಿವಾಲಯದ ಮುದ್ರೆ ಹೊಂದಿರುವ ನಕಲಿ ದಾಖಲೆಗಳು, ನಕಲಿ ಪ್ಯಾನ್ ಕಾರ್ಡ್‌ಗಳು, ವಿವಿಧ ದೇಶಗಳು ಮತ್ತು ಕಂಪನಿಗಳ 34 ನಕಲಿ ಮುದ್ರೆಗಳನ್ನು ವಶಪಡಿಸಿಕೊಳ್ಳಲಾಗಿದೆ.
ಹರ್ಷವರ್ಧನ್ ಜೈನ್ ವಿದೇಶಗಳಲ್ಲಿ ಉದ್ಯೋಗಾವಕಾಶಗಳು ಮತ್ತು ವ್ಯಾಪಾರ ಒಪ್ಪಂದಗಳನ್ನು ಮಾಡಿಕೊಡುವುದಾಗಿ ಹೇಳಿಕೊಂಡಿದ್ದು ಅಲ್ಲದೇ ನಕಲಿ ಕಂಪನಿಗಳ ಮೂಲಕ ಹವಾಲಾ ವಹಿವಾಟು ನಡೆಸಿ ಅಕ್ರಮವಾಗಿ ಹಣ ಸಂಪಾದಿಸಿದ್ದಾರೆ.
ಆತನ ವಿರುದ್ಧ ಗಾಜಿಯಾಬಾದ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.