ಭಾರತ್ ಜೋಡೋ ಯಾತ್ರೆಯ ಸಮಾರೋಪ ಸಮಾರಂಭಕ್ಕೆ ಹೆಚ್ಚಿನ ಭದ್ರತೆಗೆ ಮಲ್ಲಿಕಾರ್ಜುನ ಖರ್ಗೆ ಮನವಿ!
ನವದೆಹಲಿ: ಯಾತ್ರೆಯ ಸಮಾರೋಪ ಸಮಾರಂಭಕ್ಕೆ ಸೂಕ್ತ ಭದ್ರತೆ ಒದಗಿಸುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಮನವಿ ಮಾಡಿದ್ದಾರೆ.
ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಸೆಪ್ಟೆಂಬರ್ 7 ರಂದು ಭಾರತ್ ಜೋಡೋ ಯಾತ್ರೆಯನ್ನು ತಮಿಳುನಾಡಿನ ಕನ್ಯಾಕುಮಾರಿಯಲ್ಲಿ ಆರಂಭಿಸಿದ್ದರು. ತರುವಾಯ, ಯಾತ್ರೆಯು ವಿವಿಧ ರಾಜ್ಯಗಳಲ್ಲಿ ಸಂಚರಿಸಿ ಇಂದು ಕಾಶ್ಮೀರದಲ್ಲಿ ನಡೆಯುತ್ತಿದೆ.
ಜನವರಿ 30ರಂದು ಕಾಶ್ಮೀರದ ರಾಜಧಾನಿ ಶ್ರೀನಗರದಲ್ಲಿ ಯಾತ್ರೆ ಮುಕ್ತಾಯವಾಗಲಿದೆ. ರಾಹುಲ್ ಗಾಂಧಿ ಅಲ್ಲಿ ರಾಷ್ಟ್ರಧ್ವಜಾರೋಹಣ ಮಾಡಲಿದ್ದಾರೆ. ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಲು ಖರ್ಗೆಯವರು 21 ಪಕ್ಷಗಳ ನಾಯಕರುಗಳಿಗೆ ಆಹ್ವಾನ ನೀಡಿದ್ದಾರೆ.
ಈ ಸಂದರ್ಭದಲ್ಲಿ ನಿನ್ನೆ (ಜನವರಿ 27) ಕಾಶ್ಮೀರದಲ್ಲಿ ಯಾತ್ರೆ ಕೈಗೊಂಡಿದ್ದ ಕಾಂಗ್ರೆಸ್ ಸಂಸದ ರಾಹುಲ್ ಅವರನ್ನು ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರು. ಅಲ್ಲಿ ಭದ್ರತಾ ಕರ್ತವ್ಯಕ್ಕೆ ಪೊಲೀಸರು ಇಲ್ಲದ ಕಾರಣ ಪಾದಯಾತ್ರೆಯನ್ನು ಸ್ಥಗಿತಗೊಳಿಸಲಾಗಿತ್ತು.
‘ಜನಸಂದಣಿಯನ್ನು ನಿಯಂತ್ರಿಸಬೇಕಾದ ಪೊಲೀಸರು ಎಲ್ಲೂ ಕಾಣಲಿಲ್ಲ. ನಾವು ಸುರಂಗವನ್ನು ದಾಟಿದ ನಂತರ, ಪೊಲೀಸ್ ಭದ್ರತೆಗೆ ಅಡ್ಡಿಯಾಯಿತು. ಭದ್ರತೆ ಕೊರತೆಯಾಗಿದೆ’ ಎಂದು ರಾಹುಲ್ ಆರೋಪಿಸಿದ್ದರು.
ಈ ಹಿನ್ನಲೆಯಲ್ಲಿ ಖರ್ಗೆಯವರು ಅಮಿತ್ ಶಾ ಅವರಿಗೆ ಪತ್ರವೊಂದನ್ನು ಬರೆದು, ‘ಇಂದು ಮತ್ತು ನಾಳೆ ಎರಡು ದಿನ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆಯಲಿರುವ ಯಾತ್ರೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರುವ ಸಾದ್ಯತೆಯಿದೆ.
ಜನವರಿ 30 ರಂದು ಶ್ರೀನಗರದಲ್ಲಿ ನಡೆಯುವ ಸಮಾರೋಪ ಸಮಾರಂಭದಲ್ಲಿ ಹೆಚ್ಚಿನ ಜನರು ಸೇರುತ್ತಾರೆ ಎಂದು ನಾವು ನಿರೀಕ್ಷಿಸುತ್ತಿದ್ದೇವೆ. ಈ ವಿಚಾರದಲ್ಲಿ ನೀವು ತಕ್ಷಣ ಮಧ್ಯಪ್ರವೇಶಿಸಿ, ಶ್ರೀನಗರದಲ್ಲಿ ನಡೆಯಲಿರುವ ಸಮಾರೋಪ ಸಮಾರಂಭಕ್ಕೆ ಹೆಚ್ಚಿನ ರೀತಿಯಲ್ಲಿ ಭದ್ರತೆಯನ್ನು ಒದಗಿಸಲು ಅಧಿಕಾರಿಗಳಿಗೆ ಸೂಕ್ತ ಆದೇಶ ನೀಡಬೇಕು’ ಎಂದು ಮನವಿ ಮಾಡಿದ್ದಾರೆ.
ಕೆಲವು ದಿನಗಳ ಹಿಂದೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದ ಖರ್ಗೆಯವರು ‘ಯಾತ್ರೆಯಲ್ಲಿ ಭದ್ರತೆಯ ಕೊರೆತೆಯಿದೆ’ ಎಂದು ಆಪಾದಿಸಿದ್ದರು. ಇದಕ್ಕೆ ಪ್ರತಿಯುತ್ತರ ನೀಡಿದ್ದ ಗೃಹ ಸಚಿವಾಲಯ, ‘ಯಾತ್ರೆಯಲ್ಲಿ ಭದ್ರತೆಯ ಕೊರತೆ ಇಲ್ಲ’ ಎಂದು ಹೇಳಿದ್ದು ಗಮನಾರ್ಹ.