ಕೊಲಿಜಿಯಂ ಶಿಫಾರಸ್ಸು ಮಾಡಿದ 5 ನ್ಯಾಯಮೂರ್ತಿಗಳ ನೇಮಕ ಶೀಘ್ರ!
ಕೊಲಿಜಿಯಂ ಶಿಫಾರಸ್ಸು ಮಾಡಿದ 5 ನ್ಯಾಯಮೂರ್ತಿಗಳ ನೇಮಕ ಶೀಘ್ರ ಎಂದು ಸುಪ್ರೀಂಗೆ ಕೇಂದ್ರ ಸರ್ಕಾರ ಪ್ರತಿಕ್ರಿಯೆ ನೀಡಿದೆ.
ಹೊಸದಹಲಿ: ಕೊಲಿಜಿಯಂ ಶಿಫಾರಸ್ಸು ಮಾಡಿರುವ ಐವರು ನ್ಯಾಯಮೂರ್ತಿಗಳ ನೇಮಕವನ್ನು ಶೀಘ್ರವೇ ಮಾಡಲಾಗುವುದು ಎಂದು ಕೇಂದ್ರ ಸರಕಾರ ಸುಪ್ರೀಂ ಕೋರ್ಟ್ ಗೆ ಮಾಹಿತಿ ನೀಡಿದೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ಕೊಲಿಜಿಯಂ ಮೂವರು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ಮತ್ತು ಇಬ್ಬರು ನ್ಯಾಯಮೂರ್ತಿಗಳು ಸೇರಿದಂತೆ ಐವರು ನ್ಯಾಯಾಧೀಶರನ್ನು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾಗಿ ಶಿಫಾರಸು ಮಾಡಿತ್ತು.
ನ್ಯಾಯಮೂರ್ತಿಗಳ ನೇಮಕ ವಿಳಂಬಕ್ಕೆ ಸಂಬಂಧಿಸಿದ ಪ್ರಕರಣ ಇಂದು (ಶುಕ್ರವಾರ) ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಗೆ ಬಂದಿತ್ತು. ನ್ಯಾಯಮೂರ್ತಿಗಳಾದ ಕೌಲ್ ಮತ್ತು ಎ.ಎಸ್.ಓಕಾ ಅವರನ್ನೊಳಗೊಂಡ ಪೀಠವು ಇದನ್ನು ಆಲಿಸಿತು.
ಆ ಸಮಯದಲ್ಲಿ ಮಾತನಾಡಿದ ಅಟಾರ್ನಿ ಜನರಲ್ ಆರ್.ವೆಂಕಟರಮಣಿ, ಕೊಲಿಜಿಯಂ ಶಿಫಾರಸ್ಸು ಮಾಡಿರುವ 5 ನ್ಯಾಯಾಧೀಶರನ್ನು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳನ್ನಾಗಿ ಶೀಘ್ರದಲ್ಲೇ ನೇಮಕ ಮಾಡಲಾಗುವುದು ಎಂದರು.
ಇದು ಅತ್ಯಂತ ಮಹತ್ವದ ವಿಚಾರವಾಗಿದ್ದು, ಕೊಲಿಜಿಯಂ ಶಿಫಾರಸು ಮಾಡಿದ ನ್ಯಾಯಮೂರ್ತಿಗಳ ನೇಮಕಕ್ಕೆ ಕೇಂದ್ರ ಸರ್ಕಾರ ವಿಳಂಬ ಮಾಡುತ್ತಿರುವ ಬಗ್ಗೆ ಪೀಠ ಅಸಮಾಧಾನ ವ್ಯಕ್ತಪಡಿಸಿತು. ತುಂಬಾ ಮುಜುಗರ ತರುವಂತಹ ನಿರ್ದಾರವನ್ನು ತೆಗೆದುಕೊಳ್ಳಲು ನಮ್ಮನ್ನು ಬಲವಂತ ಮಾಡಬೇಡಿ ಎಂದೂ ಸೂಚಿಸಿತು.
ಈ ಹಿಂದೆ, ಕೊಲಿಜಿಯಂ, ಡಿಸೆಂಬರ್ 13, 2022 ರಂದು ರಾಜಸ್ಥಾನ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಪಂಕಜ್ ಮಿತ್ತಲ್, ಪಾಟ್ನಾ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಸಂಜಯ್ ಕರೋಲ್, ಮಣಿಪುರ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಬಿವಿ ಸಂಜಯ್ ಕುಮಾರ್, ಪಾಟ್ನಾ ಹೈಕೋರ್ಟ್ ನ್ಯಾಯಮೂರ್ತಿ ಅಶಾನುದ್ದೀನ್ ಅಮಾನುಲ್ಲಾ, ಅಲಹಾಬಾದ್ ಹೈಕೋರ್ಟ್ ನ್ಯಾಯಾಧೀಶ ಮನೋಜ್ ಮಿಶ್ರಾ ಮುಂತಾದ ಐವರು ನ್ಯಾಯಾಧೀಶರನ್ನು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾಗಿ ಸಿಪಾರಸು ಮಾಡಿತ್ತು.
ಈ ಐವರು ನ್ಯಾಯಮೂರ್ತಿಗಳಾಗಿ ಅಧಿಕಾರ ಸ್ವೀಕರಿಸಿದರೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ಸಂಖ್ಯೆ 32ಕ್ಕೆ ಏರಲಿದೆ. ಸುಪ್ರೀಂ ಕೋರ್ಟ್‌ನಲ್ಲಿ ಮುಖ್ಯ ನ್ಯಾಯಮೂರ್ತಿ ಸೇರಿದಂತೆ ಒಟ್ಟು 34 ನ್ಯಾಯಾಧೀಶರು ಇರಬೇಕು. ಪ್ರಸ್ತುತ 27 ನ್ಯಾಯಾಧೀಶರಿದ್ದಾರೆ.