ಕುಡಿಯುವ ನೀರಿನ ಮೇಲ್ಮಟ್ಟದ ಜಲಾಶಯದ ತೊಟ್ಟಿಯಲ್ಲಿ ನಾಯಿಯ ಮೃತದೇಹ!
ತಮಿಳುನಾಡು: ಶಿವಕಾಶಿ ಜಿಲ್ಲೆ, ಪುದುಕೊಟ್ಟೈ ಪಂಚಾಯಿತಿ, ಗಣೇಶ ದೇವಸ್ಥಾನ ಬೀದಿಯಲ್ಲಿ 60,00೦ ಲೀಟರ್ ಸಾಮರ್ಥ್ಯದ ಮೇಲ್ಮಟ್ಟದ ಜಲಾಶಯದ ಸಂಗ್ರಹಾಗಾರವಿದೆ. ಪಂಚಾಯಿತಿ ಆಡಳಿತದ ವತಿಯಿಂದ ಟ್ಯಾಂಕ್ ಶುಚಿಗೊಳಿಸಲು ನಿನ್ನೆ ಕುಡಿಯುವ ನೀರನ್ನು ಸಂಪೂರ್ಣವಾಗಿ ಹರಿಸಲಾಗಿತ್ತು. ಈ ಹಿನ್ನಲೆಯಲ್ಲಿ ಕಾರ್ಮಿಕರು ಇಂದು ಟ್ಯಾಂಕ್ ಸ್ವಚ್ಛಗೊಳಿಸಲು ಹೋದಾಗ ಟ್ಯಾಂಕ್ ಒಳಗೆ ನಾಯಿಯ ಮೃತದೇಹ ಕಂಡುಬಂದಿತು.
ಈ ಬಗ್ಗೆ ಪಂಚಾಯಿತಿ ಕೌನ್ಸಿಲ್‌ಗೆ ತಿಳಿಸಲಾಯಿತು. ಅದರಂತೆ ಪಂಚಾಯಿತಿ ಅಧ್ಯಕ್ಷೆ ಕಾಳೀಶ್ವರಿ, ಎಂ.ಪುದುಪಟ್ಟಿ ಪೊಲೀಸರಿಗೆ ದೂರು ನೀಡಿದ್ದಾರೆ. ಅದರಂತೆ ಶಿವಕಾಶಿ ಉಪ ಪೊಲೀಸ್ ವರಿಷ್ಠಾಧಿಕಾರಿ ಧನಂಜಯ ಹಾಗೂ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು.
ಬಳಿಕ ಜಲಾಶಯದೊಳಗೆ ಬಿದ್ದಿದ್ದ ನಾಯಿಯ ಮೃತದೇಹವನ್ನು ಪಶುವೈದ್ಯಾಧಿಕಾರಿಗಳು ಹೊರತೆಗೆದು ಶವ ಪರೀಕ್ಷೆಗೆ ಒಳಪಡಿಸಲಾಯಿತು. ಪಂಚಾಯಿತಿ ಅಧ್ಯಕ್ಷೆಯ ದೂರಿನ ಮೇರೆಗೆ ಎಂ.ಪುದುಪಟ್ಟಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಸತ್ತ ನಾಯಿಯ ಶವವನ್ನು ಕುಡಿಯುವ ತೊಟ್ಟಿಗೆ ಹಾಕಿದವರು ಯಾರು ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
ಕೆಲವು ದಿಗಳ ಹಿಂದೆ ತಮಿಳುನಾಡಿನ ಪುದುಕೊಟ್ಟೈ ಜಿಲ್ಲೆಯ ವೇಂಗೈವಯಲ್ ಪ್ರದೇಶದ ಪರಿಶಿಷ್ಟ ನಿವಾಸಿಗಳು ವಾಸಿಸುತ್ತಿದ್ದ ಕಾಲೋನಿಯಲ್ಲಿ ಕುಡಿಯುವ ನೀರಿನ ಮೇಲ್ಮಟ್ಟದ ಜಲಾಶಯದ ತೊಟ್ಟಿಯಲ್ಲಿ ಮಾನವ ತ್ಯಾಜ್ಯ ಇರುವುದು ತಮಿಳುನಾಡಿನಾದ್ಯಂತ ಬಾರಿ ಸಂಚಲನ ಮೂಡಿಸಿತ್ತು. ಈ ಘಟನೆ ಸಂಬಂಧ ಸಿಬಿಸಿಐಡಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ವೇಂಗೈವಯಲ್ ನಲ್ಲಿ ನಡೆದ ಅಮಾನವೀಯ ಘಟನೆಯಿಂದ ಜನ ಹೊರಬರಲು ಪ್ರಯತ್ನಿಸುತ್ತಿರುವ ಈ ಸಂದರ್ಭದಲ್ಲಿ, ಶಿವಕಾಶಿ ಬಳಿಯ ಪುದುಕೋಟೈ ಎಂಬ ಗ್ರಾಮದಲ್ಲಿ ಮೇಲ್ಮಟ್ಟದ ನೀರಿನ ತೊಟ್ಟಿಯಲ್ಲಿ ನಾಯಿಯ ಶವ ಬಿದ್ದಿರುವುದು ಜನರ ಆಘಾತಕ್ಕೆ ಕಾರಣವಾಗಿದೆ. ಸತ್ತ ನಾಯಿಯ ಶವವನ್ನು ತೊಟ್ಟಿಗೆ ಹಾಕಿದ ಅಪರಿಚಿತ ವ್ಯಕ್ತಿಗಳ ಕುರಿತು ಕಂದಾಯ ಇಲಾಖೆ ಹಾಗೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಪರಿಶಿಷ್ಟರ ಕಾಲೋನಿಗಳಲ್ಲಿರುವ ನೀರಿನ ಮೇಲ್ಮಟ್ಟದ ಜಲಾಶಯ ತೊಟ್ಟಿಗಳಲ್ಲಿ ಮಾನವ ತ್ಯಾಜ್ಯ ಬೆರಸುವುದು, ಸತ್ತ ನಾಯಿಯ ಶವವನ್ನು ತೊಟ್ಟಿಗೆ ಎಸೆಯುವುದೆಲ್ಲ ಅವರ ಏಳಿಗೆಯನ್ನು ಸಹಿಸಿಕೊಳ್ಳಲಾಗದವರು ಮಾಡುವ ಹೀನ ಕೃತ್ಯವಾಗಿದೆ. ಮಾನವೀಯತೆ ಇರುವ ಯಾರೂ ಇಂತಹ ನೀಚ ಕೆಲಸಕ್ಕೆ ಕೈ ಹಾಕುವುದಿಲ್ಲ. ಜಾತಿ ತಾರತಮ್ಯ ಇಂದಿಗೂ ಜೀವಂತವಾಗಿರುವುದು ಸತ್ಯ. ಆದರೆ ಅದು ಈ ರೀತಿ ವಿಕೃತವಾಗಿರಬಾರದು. ಮಾನಸಿಕ ಕಾಯಿಲೆಯಿಂದ ನೆರಳುತ್ತಿರುವವರ ವಿಕೃತ ಮನಸ್ಥಿತಿ ಬದಲಾಗಬೇಕು.
ಕಂದಾಯ ಇಲಾಖೆ ಹಾಗೂ ಪೊಲೀಸರು ಮಾಡುತ್ತಿರುವ ತನಿಖೆ ತ್ವರಿತವಾಗಿರಬೇಕು; ಶಿಕ್ಷೆ ಕಠಿಣವಾಗಿರಬೇಕು.