ರಷ್ಯಾ ಬ್ಯಾಂಕಿನಿಂದ ಸಾಲ; ಅದಾನಿ ಸಮೂಹದ ಮತ್ತೊಂದು ಹಗರಣ! ಫೋರ್ಬ್ಸ್ ನಿಯತಕಾಲಿಕೆ ಆರೋಪ.
ನವದೆಹಲಿ: ಅದಾನಿ ಸಮೂಹದ ವಿರುದ್ಧ ಫೋರ್ಬ್ಸ್ ನಿಯತಕಾಲಿಕೆ ಮತ್ತೊಂದು ಭ್ರಷ್ಟಾಚಾರದ ಆರೋಪವನ್ನು ಮಾಡಿದೆ. ಅದಾನಿ ಸಮೂಹದ ಷೇರು ಮಾರುಕಟ್ಟೆ ವಂಚನೆ ಕುರಿತು ಅಮೆರಿಕ ಮೂಲದ ಹಿಂಡೆನ್‌ಬರ್ಗ್ ಸಂಶೋಧನಾ ಸಂಸ್ಥೆ ವರದಿಯನ್ನು ಬಿಡುಗಡೆ ಮಾಡಿತ್ತು. ಈ ಹಿನ್ನಲೆಯಲ್ಲಿ ಗೌತಮ್ ಅದಾನಿ ಅವರ ಹಿರಿಯ ಸಹೋದರ ವಿನೋದ್ ಅದಾನಿ, ಸಿಂಗಾಪುರದ ಕಂಪನಿಗಳ ಮೂಲಕ ರಷ್ಯಾದ ಬ್ಯಾಂಕ್‌ಗಳಿಂದ ಸಾಲ ಪಡೆದು ದುಷ್ಕೃತ್ಯ ಎಸಗಿದ್ದಾರೆ ಎಂದು ಫೋರ್ಬ್ಸ್ ನಿಯತಕಾಲಿಕೆ ಆರೋಪಿಸಿದೆ.
ಅದಾನಿ ಸಮೂಹದೊಂದಿಗೆ ಸಂಬಂಧಿಸಿದ ವಿದೇಶಿ ಸಂಸ್ಥೆಗಳು ವಿನೋದ್ ಅದಾನಿಯ ಮೇಲ್ವಿಚಾರಣೆಯಲ್ಲಿ ಕಾರ್ಯನಿರ್ವಹಿಸುತ್ತಿವೆ. ದುಬೈ, ಸಿಂಗಾಪುರ್, ಇಂಡೋನೇಷಿಯಾ ಮುಂತಾದ ದೇಶಗಳಿಂದ ಅದಾನಿ ಸಮೂಹದೊಂದಿಗೆ ಸಂಪರ್ಕದಲ್ಲಿರುವ ಇತರ ಸಂಸ್ಥೆಗಳ ಅಂತರರಾಷ್ಟ್ರೀಯ ವ್ಯಾಪಾರವನ್ನು ವಿನೋದ್ ಅದಾನಿ ನೋಡಿಕೊಳ್ಳುತ್ತಿದ್ದಾರೆ.
ಭಾರತದಲ್ಲಿ ನೆಲಸಿ ವ್ಯಾಪಾರ ಮಾಡದ ಶ್ರೀಮಂತ ಭಾರತೀಯರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ವಿನೋದ್ ಅದಾನಿ, ಸಿಂಗಾಪುರ್ ಮೂಲದ ವ್ಯಾಪಾರ ಮತ್ತು ಹೂಡಿಕೆ ಸಂಸ್ಥೆಯಾದ ‘ಪಿನಾಕಲ್’ ಅನ್ನು ರಹಷ್ಯವಾಗಿ ನಿಯಂತ್ರಿಸುತ್ತಿದ್ದಾರೆ. ಈ ಕಂಪನಿಯ ಮೂಲಕ, ವಿನೋದ್ ಅಧಾನಿ 2020ರಲ್ಲಿ ರಷ್ಯಾದ ವಿಟಿಬಿ ಬ್ಯಾಂಕ್‌ನಿಂದ 2,100 ಕೋಟಿ ರೂಪಾಯಿಗಳ ಸಾಲವನ್ನು ಪಡೆದಿದ್ದಾರೆ. ಪಿನಾಕಲ್ ಮೂಲಕ ಪಡೆದ 2,100 ಕೋಟಿ ರೂಪಾಯಿಗಳಲ್ಲಿ 2,000 ಕೋಟಿ ರೂಪಾಯಿಗಳನ್ನು ಹೆಸರಿಸದ ಷೇರುಗಳಿಗೆ ಮೀಸಲಿಡಲಾಗಿದೆ ಎಂದು ಫೋರ್ಬ್ಸ್ ವರದಿ ಮಾಡಿದೆ.
ರಷ್ಯಾದ ಬ್ಯಾಂಕ್‌ನಿಂದ ಸಾಲಕ್ಕೆ ಗ್ಯಾರಂಟರುಗಳಾಗಿ ‘ಆಫ್ರೋ ಏಷ್ಯಾ’ ಮತ್ತು ‘ವರ್ಲ್ಡ್‌ವೈಡ್’ ಸಂಸ್ಥೆಗಳನ್ನು ಪಿನಾಕಲ್ ಸೂಚಿಸಿದೆ. ಮೇಲಿನ ಎರಡೂ ಕಂಪನಿಗಳು ಅದಾನಿ ಸಮೂಹದ ಷೇರುದಾರರ ಒಡೆತನದಲ್ಲಿದೆ ಎಂದು ಫೋರ್ಬ್ಸ್ ವರದಿ ಮಾಡಿದೆ. ಅದಾನಿ ಸಮೂಹದ ಷೇರು ಮಾರುಕಟ್ಟೆ ವಂಚನೆ ಕುರಿತು ಕೆಲವು ದಿನಗಳ ಹಿಂದೆ ಅಮೆರಿಕ ಮೂಲದ ಹಿಂಡೆನ್‌ಬರ್ಗ್ ಸಂಶೋಧನಾ ಸಂಸ್ಥೆ ವರದಿಯನ್ನು ಬಿಡುಗಡೆ ಮಾಡಿತ್ತು. ಇದು ಅದಾನಿ ಸಮೂಹಕ್ಕೆ ಬಾರಿ ಹಿನ್ನಡೆಯನ್ನು ಉಂಟು ಮಾಡಿರುವ ಹಿನ್ನಲೆಯಲ್ಲಿ ಫೋರ್ಬ್ಸ್ ನಿಯತಕಾಲಿಕೆ ಮಾಡಿರುವ ಆರೋಪ ಹೆಚ್ಹು ವಿವಾದಕ್ಕೆ ಕಾರಣವಾಗಿದೆ.