ಭಾರತದ ಚುನಾವಣಾ ಆಯೋಗ ಪ್ರಧಾನಿ ಮೋದಿಯವರ ಗುಲಾಮ! ಉದ್ಧವ್ ಠಾಕ್ರೆ
ಡಿ.ಸಿ.ಪ್ರಕಾಶ್ ಸಂಪಾದಕರು
ಮುಂಬೈ: ಮಹಾರಾಷ್ಟ್ರದಲ್ಲಿ, ಶಿವಸೇನೆ, ನ್ಯಾಶನಲಿಸ್ಟ್ ಕಾಂಗ್ರೆಸ್ ಮತ್ತು ಕಾಂಗ್ರೆಸ್ ಪಕ್ಷಗಳು ಜಂಟಿಯಾಗಿ ಸೇರಿ ಮಹಾವಿಕಾಸ್ ಅಘಾಡಿ ಸರ್ಕಾರವನ್ನು ರಚಿಸಿದವು. ಶಿವಸೇನೆ ನಾಯಕ ಉದ್ಧವ್ ಠಾಕ್ರೆ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿದ್ದರು.
ಈ ಹಿನ್ನಲೆಯಲ್ಲಿ ಶಿವಸೇನೆಯ ಹಿರಿಯ ಸಚಿವ ಏಕನಾಥ್ ಶಿಂಧೆ ನೇತೃತ್ವದಲ್ಲಿ ಪಕ್ಷದ ಕೆಲವು ಶಾಸಕರು ಬಂಡಾಯವೆದ್ದು ಸರ್ಕಾರಕ್ಕೆ ನೀಡಿದ ಬೆಂಬಲವನ್ನು ವಾಪಸ್ಸು ಪಡೆದರು. ಇದರ ಪರಿಣಾಮವಾಗಿ ಉದ್ಧವ್ ಠಾಕ್ರೆ ನೇತೃತ್ವದ ಮಹಾವಿಕಾಸ್ ಅಘಾಡಿ ಸರ್ಕಾರ ಪತನವಾಯಿತು.
ನಂತರ ಏಕನಾಥ್ ಶಿಂಧೆ ನೇತೃತ್ವದ 40 ಶಿವಸೇನೆ ಶಾಸಕರು, ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಮಹಾರಾಷ್ಟ್ರದಲ್ಲಿ ನೂತನ ಸರ್ಕಾರವನ್ನು ರಚಿಸಿದರು. ಏಕನಾಥ್ ಶಿಂಧೆ ಮರಾಠಾ ಮುಖ್ಯಮಂತ್ರಿಯಾದರು. ನಂತರ ಶಿಂಧೆ ಬಣದವರು ಶಿವಸೇನೆ ಪಕ್ಷದ ಹೆಸರು, ಪಕ್ಷದ ಬಿಲ್ಲು ಮತ್ತು ಬಾಣದ ಚಿಹ್ನೆಯನ್ನು ತಮ್ಮದೆಂದು ಪ್ರತಿಪಾದಿಸಿದರು. ಪಕ್ಷದ ಬಹುಪಾಲು ಸಂಸದರು, ಶಾಸಕರು ತಮ್ಮ ಪರ ಇರುವುದರಿಂದ ಪಕ್ಷದ ಹೆಸರು ಮತ್ತು ಚಿಹ್ನೆಯನ್ನು ತಮ್ಮ ತಂಡಕ್ಕೆ ನೀಡಬೇಕೆಂದು ಶಿಂಧೆ ಆಗ್ರಹಿಸಿದರು. ಇದರ ಬಗ್ಗೆ ಚುನಾವಣಾ ಆಯೋಗಕ್ಕೆ ಪತ್ರವನ್ನೂ ಸಲ್ಲಿಸಿದರು. ಇದಕ್ಕೆ ಉದ್ಧವ್ ಠಾಕ್ರೆ ಕಡೆಯವರು ಆಕ್ಷೇಪ ವ್ಯಕ್ತಪಡಿಸಿ, ನಿಜವಾದ ಶಿವಸೇನೆ ನಾವೇ ಎಂದು ಚುನಾವಣಾ ಆಯೋಗದಲ್ಲಿ ವಾದ ಮಂಡಿಸಿದರು.
ಎರಡೂ ಕಡೆಯ ವಿವರಣೆಗಳು, ದಾಖಲೆಗಳು ಮತ್ತು ಪಕ್ಷದ ನಿಯಮಗಳನ್ನು ಪರಿಶೀಲಿಸಿದ ಚುನಾವಣಾ ಆಯೋಗ, ಶಿವಸೇನೆ ಪಕ್ಷದ ಹೆಸರು, ಪಕ್ಷದ ಚಿಹ್ನೆ ಬಿಲ್ಲು ಮತ್ತು ಬಾಣವನ್ನು ಏಕನಾಥ್ ಶಿಂಧೆ ಬಣಕ್ಕೆ, ಉದ್ಧವ್ ಠಾಕ್ರೆ ತಂಡಕ್ಕೆ ಶಿವಸೇನೆ (ಉದ್ಧವ್ ಬಾಳಾಸಾಹೇಬ್ ಠಾಕ್ರೆ) ಎಂಬ ಹೆಸರನ್ನು ಮತ್ತು ಟಾರ್ಚ್ (ಜ್ಯೋತಿ) ಚಿಹ್ನೆಯನ್ನು ನೀಡಿ ಆದೇಶಿಸಿದೆ.
ಶಿವಸೇನ ಪಕ್ಷದ ಹೆಸರನ್ನು, ಬಿಲ್ಲು ಮತ್ತು ಬಾಣದ ಚಿಹ್ನೆಯನ್ನು ಶಿಂಧೆ ಬಣಕ್ಕೆ ನೀಡಿರುವುದಕ್ಕೆ ಉದ್ಧವ್ ಠಾಕ್ರೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಈ ಬಗ್ಗೆ ಸುಪ್ರೀಂ ಕೋರ್ಟ್‌ನಲ್ಲಿ ಕಾನೂನು ಹೋರಾಟ ನಡೆಸುವುದಾಗಿಯೂ ಉದ್ಧವ್ ಠಾಕ್ರೆ ಹೇಳಿದ್ದಾರೆ.
ಇಂದು ತಮ್ಮ ಮನೆಯ ಮುಂದೆ ಜಮಾಯಿಸಿದ್ದ ಬೆಂಬಲಿಗರೊಂದಿಗೆ ಮಾತನಾಡಿದ ಉದ್ಧವ್ ಠಾಕ್ರೆ, ‘ಪ್ರಧಾನಿ ಮೋದಿಗೆ ಚುನಾವಣಾ ಆಯೋಗವು ಗುಲಾಮವಾಗಿದೆ. ಹಿಂದೆಂದೂ ಮಾಡದ ಕೆಲಸವನ್ನು ಅದು ಮಾಡಿದೆ. ಬೆಂಬಲಿಗರು ತಾಳ್ಮೆಯಿಂದಿರಬೇಕು. ಮುಂಬೈ ಸ್ಥಳೀಯ ಚುನಾವಣೆಗೆ ನಾವು ತಯಾರಿಯಾಗಬೇಕು. ಪಕ್ಷದ ಚಿಹ್ನೆ ಕಳವಾಗಿದೆ. ಕಳ್ಳರಿಗೆ ತಕ್ಕ ಪಾಠವನ್ನು ಕಲಿಸಬೇಕು’ ಎಂದರು.