ರಂಜಾನ್ 2023: ನಾಳೆಯಿಂದ ಉಪವಾಸ (ರೋಝ) ಆರಂಭ; ಆಚರಣೆಗಳು ಮತ್ತು ಕಾರಣ!
ಡಿ.ಸಿ.ಪ್ರಕಾಶ್ ಸಂಪಾದಕರು
ಮುಸ್ಲಿಂ ಬಾಂಧವರ ಪ್ರಮುಖ ಹಬ್ಬಗಳಲ್ಲಿ ಒಂದಾಗಿರುವುದು ರಮದಾನ್, ಇದನ್ನು ರಂಜಾನ್ ಎಂದೂ ಕರೆಯುತ್ತಾರೆ. ತಮ್ಮ ಧಾರ್ಮಿಕ ಬಾಂಧವ್ಯವನ್ನು ಬಲಪಡಿಸುವ ಮತ್ತು ತಮ್ಮ ಸುತ್ತಲಿನ ಜನರೊಂದಿಗೆ ದಯೆ ತೋರುವ ದಿನವಾಗಿಯೂ ಇದನ್ನು ನೋಡಲಾಗುತ್ತದೆ. ಇಸ್ಲಾಂ ಧರ್ಮದ ಪವಿತ್ರ ಗ್ರಂಥವಾದ ಪವಿತ್ರ ಕುರಾನ್ ಅನ್ನು ಈ ದಿನದಂದು ದೇವರಿಂದ ಜನರಿಗೆ ಆಶೀರ್ವದಿಸಲಾಯಿತು (ನೀಡಲಾಯಿತು) ಎಂಬ ನಂಬಿಕೆ ಇದೆ. ಇದಕ್ಕಾಗಿಯೇ ಪ್ರಪಂಚದಾದ್ಯಂತ ಎಲ್ಲಾ ಮುಸ್ಲಿಂ ಬಾಂಧವರು, ರಮದಾನ್ ತಿಂಗಳ ಉದ್ದಕ್ಕೂ, ಪ್ರತಿದಿನ ಬೆಳಿಗ್ಗೆ ಸೂರ್ಯೋದಯದಿಂದ ಸಂಜೆ ಸೂರ್ಯಾಸ್ತದವರೆಗೆ ತಿನ್ನದೆ ಅಥವಾ ನೀರು ಕುಡಿಯದೆ ಉಪವಾಸ ಮಾಡುತ್ತಾರೆ. ಮತ್ತು ಪವಿತ್ರ ಕುರಾನ್ ಅನ್ನು ಪಠಿಸುವ ಮತ್ತು ಪೂಜಿಸುವ ಪವಿತ್ರ ದಿನವೇ ರಂಜಾನ್ ಆಗಿರುತ್ತದೆ.
ಈ ವರ್ಷ (2023) ರಮದಾನ್ ಉಪವಾಸ ಯಾವಾಗ?
ಚಂದ್ರನ ಆಧಾರಿತ ಕ್ಯಾಲೆಂಡರ್ ಅನ್ನು ಆಧರಿಸಿಯೆ ಮುಸ್ಲಿಂ ಬಾಂಧವರು ಉಪವಾಸವನ್ನು ಕೈಗೊಳ್ಳುತ್ತಾರೆ. ಈ ದಿನಾಂಕಗಳು ಕಾಲಕಾಲಕ್ಕೆ ಬದಲಾಗುತ್ತವೆ. ಮೆಕ್ಕಾದಲ್ಲಿ ಅರ್ಧಚಂದ್ರ ಗೋಚರಿಸುವ ದಿನದಂದು ರಮಲಾನ್ ಉಪವಾಸ ಪ್ರಾರಂಭವಾಗುತ್ತದೆ. ಅದರ ಆಧಾರದ ಮೇಲೆ ಈ ವರ್ಷ ಅಂದರೆ 2023 ಮಾರ್ಚ್ 24 ರಂದು ಪ್ರಾರಂಭವಾಗಿ ಏಪ್ರಿಲ್ 23ಕ್ಕೆ ಕೊನೆಗೊಳ್ಳುತ್ತದೆ. ಇದು 29 ರಿಂದ 30 ದಿನಗಳವರೆಗೆ ಇರುತ್ತದೆ. ಮುಂದಿನ ಚಂದ್ರನ ದರ್ಶನವು ಪವಿತ್ರ ತಿಂಗಳ ಅಂತ್ಯವನ್ನು ಸೂಚಿಸುತ್ತದೆ.
ರಂಜಾನ್‌ನಲ್ಲಿ ಚಂದ್ರ ದರ್ಶನದ ಮಹತ್ವ:
ಚಂದ್ರನ ದರ್ಶನವು ರಮಲಾನ್ ತಿಂಗಳ ಆರಂಭ ಮತ್ತು ಅಂತ್ಯವನ್ನು ಸೂಚಿಸುತ್ತದೆ. ರಂಜಾನ್ ಉಪವಾಸದ ಅವಧಿಯ ಆರಂಭದ ಮೊದಲು, ಜನರು ಮತ್ತು ಧಾರ್ಮಿಕ ಮುಖಂಡರುಗಳು ಅರ್ಧಚಂದ್ರನನ್ನು ನೋಡಲು ರಾತ್ರಿ ಆಕಾಶವನ್ನು ನೋಡುತ್ತಾರೆ. ಇದು ಅನೇಕ ವರ್ಷಗಳಿಂದ ಧರ್ಮದಲ್ಲಿ ಅನುಸರಿಸುತ್ತಿರುವ ಸಂಪ್ರದಾಯವೆಂದು ಪರಿಗಣಿಸಲಾಗಿದೆ. ಚಂದ್ರ ದರ್ಶನ ಸಂಪ್ರದಾಯಗಳನ್ನು ಅನುಸರಿಸಲಾಗುವ ಶಾಬಾನ್ ತಿಂಗಳ 29ನೇ ದಿನ ಸೂರ್ಯಾಸ್ತದ ನಂತರ ರಮದಾನ್ ತಿಂಗಳು ಪ್ರಾರಂಭವಾಗುತ್ತದೆ.
ಪವಿತ್ರ ರಂಜಾನ್ ತಿಂಗಳಲ್ಲಿ ಜನರು ಏಕೆ ಉಪವಾಸ ಮಾಡುತ್ತಾರೆ?:
ರಮಲಾನ್ ತಿಂಗಳಲ್ಲಿ ಉಪವಾಸವನ್ನು ಆರಾಧನೆಯ ಕ್ರಮವಾಗಿ ನೋಡಲಾಗುತ್ತದೆ. ರಮದಾನ್ ತಿಂಗಳ ಉದ್ದಕ್ಕೂ ಪ್ರತಿದಿನ ಬೆಳಿಗ್ಗೆ ಸೂರ್ಯೋದಯದಿಂದ ಪ್ರಾರಂಭಿಸಿ, ಸಾಯಂಕಾಲ ಸೂರ್ಯಾಸ್ತದವರೆಗೂ ಊಟ ಮಾಡದೆ, ನೀರು ಕುಡಿಯದೆ ಉಪವಾಸ ಮಾಡುತ್ತಾರೆ. ಇದರೊಂದಿಗೆ ಈ ದಿನಗಳಲ್ಲಿ ನಿರ್ಗತಿಕರಿಗೆ ಮತ್ತು ಬಡವರಿಗೆ ಸಹಾಯ ಮಾಡುವುದು ಮುಸ್ಲಿಂ ಬಾಂಧವರ ಮುಖ್ಯ ಕರ್ತವ್ಯವಾಗಿರುತ್ತದೆ. ಇದರ ಜೊತೆಗೆ, ಈ ಉಪವಾಸದ ಅವಧಿಯಲ್ಲಿ, ಮುಸ್ಲಿಂ ಬಾಂಧವರು ಸಂಪೂರ್ಣ ಪವಿತ್ರ ಕುರಾನ್ ಅನ್ನು ಓದಬೇಕು. ಈ ಅವಧಿಯಲ್ಲಿ ತಾಳ್ಮೆಯ ಅಗತ್ಯವೂ ಇರಬೇಕು. ಇದರೊಂದಿಗೆ ಕೆಟ್ಟ ಅಭ್ಯಾಸಗಳನ್ನೂ ತ್ಯಜಿಸಬೇಕು. ಹೀಗೆ ಮಾಡುವುದರಿಂದ ಭಗವಂತನು ಸದಾ ತಮ್ಮ ಬಳಿ ಸಂಚರಿಸುತ್ತಿರುವಂತೆ ಭಾಸವಾಗುತ್ತದೆ ಎಂದು ನಂಬಲಾಗಿದೆ.
ರಮದಾನ್ ತಿಂಗಳು:
ರಮದಾನ್ ತಿಂಗಳು ಅನುಗ್ರಹದಿಂದ ತುಂಬಿದ ತಿಂಗಳು, ಬಹಳಷ್ಟು ಪ್ರಯೋಜನಗಳನ್ನು ತರುವ ತಿಂಗಳು, ದೋಷನಿವಾರಣೆಯ ತಿಂಗಳು, ಅಲ್ಲಾಹನಿಗೆ ಹತ್ತಿರವಾಗುವ ಅವಕಾಶವನ್ನು ಪಡೆಯುವ ತಿಂಗಳು, ಸ್ವರ್ಗದ ಬಾಗಿಲು ತೆರೆಯುವ ಮತ್ತು ನರಕದ ಬಾಗಿಲು ಮುಚ್ಚುವ ತಿಂಗಳು, ಸೈತಾನನ್ನು ಕಟ್ಟಿ ಹಾಕುವ ತಿಂಗಳು, ಸಾವಿರ ತಿಂಗಳುಗಳಿಗಿಂತ ಹೆಚ್ಚು ವಿಶೇಷವಾದ ರಾತ್ರಿಯನ್ನು ಹೊಂದಿದ ತಿಂಗಳು, ನರಕವಾದಿಗಳು ನರಕದಿಂದ ವಿಮೋಚನೆ ಪಡೆಯುವ ತಿಂಗಳು, ಪವಿತ್ರ ಕುರಾನ್ ಅನ್ನು ಈ ಜಗತ್ತಿಗೆ ಬಹಿರಂಗಪಡಿಸಲು ಅಲ್ಲಾ ಆಯ್ಕೆ ಮಾಡಿದ ತಿಂಗಳು, ದುವಾಗಳನ್ನು ಗುರುತಿಸುವ ಮಾಸವಾಗಿರುವುದರಿಂದ ಈ ತಿಂಗಳು ಹಲವು ವಿಶೇಷತೆಗಳನ್ನು ಹೊಂದಿದೆ ಎಂದು ಮುಸ್ಲಿಂ ಜನರು ನಂಬುತ್ತಾರೆ. ಈ ತಿಂಗಳಲ್ಲಿ ಯಾರು ಸತ್ಕರ್ಮಗಳನ್ನು ಮಾಡದಿದ್ದಾರೋ ಅವರು ಎಲ್ಲಾ ಸತ್ಕರ್ಮಗಳನ್ನು ಕಳೆದುಕೊಳ್ಳುತ್ತಾರೆ ಮತ್ತು ಈ ತಿಂಗಳಲ್ಲಿ ಅಲ್ಲಾಹನಲ್ಲಿ ಕ್ಷಮೆಯನ್ನು ಕೇಳದವನು ಅಲ್ಲಾಹನ ಅನುಗ್ರಹದಿಂದ ದೂರವಿರುತ್ತಾನೆ ಎಂದು ಪ್ರವಾದಿ (ಸ) ಹೇಳಿದ್ದಾರೆ.