2,000 ರೂಪಾಯಿ ನೋಟು ಚಲಾವಣೆಯಲ್ಲಿಲ್ಲ; ಚಲಾವಣೆಯಲ್ಲಿದೆ! ಜನರ ಪ್ರತಿಕ್ರಿಯೆ ಏನು?
ಡಿ.ಸಿ.ಪ್ರಕಾಶ್ ಸಂಪಾದಕರು
ದೇಶದಲ್ಲಿ 500 ರೂಪಾಯಿ ನೋಟುಗಳಿಗಿಂತ 2000 ರೂಪಾಯಿ ನೋಟುಗಳೇ ಚಲಾವಣೆಯಲ್ಲಿದೆ ಎಂದು, ರಿಸರ್ವ್ ಬ್ಯಾಂಕ್ ಲೆಕ್ಕಾಚಾರದ ಪ್ರಕಾರ ರೂ.27.05 ಲಕ್ಷ ಕೋಟಿ 2,000 ನೋಟುಗಳು ಚಲಾವಣೆಯಲ್ಲಿವೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
2,000 ರೂಪಾಯಿ ನೋಟುಗಳನ್ನು ಏಕೆ ಮುದ್ರಿಸಲಾಯಿತು? ಕಪ್ಪುಹಣ ತೊಲಗಿಸಲು ‘ನೋಟು ರದ್ದತಿ’ ಎಂಬ ಹೆಸರಿನಲ್ಲಿ ಡಿಸೆಂಬರ್ 2016ರಲ್ಲಿ, 500 ಮತ್ತು 1000 ರೂಪಾಯಿಗಳನ್ನು ಅಮಾನ್ಯಗೊಳಿಸಿ ಹೊಸ ನೋಟುಗಳನ್ನು ಪರಿಚಯಿಸಲಾಯಿತು. 20, 50, 100 ಮತ್ತು 2,000 ಹೊಸ ನೋಟುಗಳನ್ನು ಚಲಾವಣೆಗೆ ತರಲಾಯಿತು. ಇದು ಕೇಂದ್ರ ಸರ್ಕಾರ ಹೇಳುವ ಕಾರಣ.
ಪಿಚ್ಚೈಕಾರನ್ ಎಂಬ ತಮಿಳು (ಭಿಕ್ಷುಕ) ಚಿತ್ರದ ಒಂದು ದೃಶ್ಯದಲ್ಲಿ, ಎಫ್.ಎಂ.ರೇಡಿಯೋ ಲೈವ್ ಕಾರ್ಯಕ್ರಮಕ್ಕಾಗಿ ಭಿಕ್ಷುಕನೊಬ್ಬನು ನೀಡುವ ಸಂದರ್ಶನದಲ್ಲಿ, ‘ಭಾರತದಲ್ಲಿ ಬಡತನವನ್ನು ತೊಡೆದುಹಾಕಲು ನಿಮ್ಮ ಆಲೋಚನೆ ಏನು’ ಎಂದು ಕೇಳುತ್ತಾರೆ. ಅದಕ್ಕೆ ಆತನು ‘ಭಾರತದಲ್ಲಿ ಬಡತನವನ್ನು ತಪ್ಪಿಸಲು ಇರುವ ಏಕೈಕ ಮಾರ್ಗವೆಂದರೆ 500 ರೂಪಾಯಿ ಮತ್ತು 1000 ರೂಪಾಯಿ ನೋಟುಗಳನ್ನು ರದ್ದುಗೊಳಿಸಬೇಕು. ನಮ್ಮ ದೇಶದ ಬಡತನಕ್ಕೆ ಮುಖ್ಯ ಕಾರಣವಾಗಿರುವುದು ಭ್ರಷ್ಟಾಚಾರ, ಹಾಗೂ ತೆರಿಗೆ ವಂಚನೆ. ಈ ರೀತಿ ಅಕ್ರಮವಾಗಿ ಗಳಿಸಿ ಬಚ್ಚಿಟ್ಟಿರುವುದೆಲ್ಲ ಬರೀ 500, 1000 ರೂಪಾಯಿ ದೊಡ್ಡ ನೋಟುಗಳನ್ನೇ. 1000 ರೂಪಾಯಿ ನೋಟಾಗಿದ್ದರೆ, 100 ಕೋಟಿ ಕೂಡ ಎರಡು ದೊಡ್ಡ ಸೂಟ್ಕೇಸ್ಗಳಲ್ಲಿ ಸಂಗ್ರಹಿಸಿಡಬಹುದು. ಅದೇ 100 ಅಥವಾ 50 ರೂಪಾಯಿಯಾಗಿದ್ದರೆ ದೊಡ್ಡ ಮನೆಯೆ ಬೇಕು’ ಎಂದು ಹೇಳುತ್ತಾರೆ.
ಈ ವಿಚಾರವನ್ನು ಸರಿಯಾಗಿ ಅರ್ಥ ಮಾಡಿಕೊಂಡ ಮೋದಿ ಸರ್ಕಾರ ಅದನ್ನು ಕಾರ್ಯರೂಪಕ್ಕೆ ತರಲು ಆರಂಭಿಸಿತು. 10, 20, 50, 100, 2,000 ಹೊಸ ನೋಟುಗಳನ್ನು ಮುದ್ರಿಸಿತು. “10, 20, 50, 100, 200 ರೂಪಾಯಿ ನೋಟುಗಳೆಲ್ಲ ಬಡವರಿಗಾಗಿ. ಆದರೆ, 2000 ರೂಪಾಯಿ ನೋಟು ಇದೆ ನೋಡಿ ಅದು ಯಾರಿಗೆಂದು ಗೊತ್ತಿಲ್ಲ” ಎಂದು ಹೇಳುತ್ತಾರೆ ತರಕಾರಿ ವ್ಯಾಪಾರಿ ಕೃಷ್ಣಪ್ಪ.
ರಿಸರ್ವ್ ಬ್ಯಾಂಕ್ ಪ್ರಕಾರ ರೂ.27.05 ಲಕ್ಷ ಕೋಟಿ 2,000 ನೋಟುಗಳು ಚಲಾವಣೆಯಲ್ಲಿವೆ. ಹಾಗಾಗಿ ಅಷ್ಟೊಂದು ನೋಟುಗಳು ಚಲಾವಣೆಯಲ್ಲಿ ಇದೆ ಎಂದರೆ, ಅದು ಜನರ ಬಳಿಯೇ ಇರಬೇಕು. ಆದರೆ ಜನರು ಹೇಳುವ ಉತ್ತರವೇ ಬೇರೆಯದಾಗಿದೆ. “ನೋಟು ಅಮಾನ್ಯೀಕರಣ ಗೊಂಡಾಗ ನೋಡಿದ್ದು, ಅಲ್ಲೊಂದು ಇಲ್ಲೊಂದು ಎಂಬಂತೆ ಎರಡು ವರ್ಷಗಳ ಹಿಂದೇ ನೋಡಿದ್ದೆ. ಎಟಿಎಂನಲ್ಲಿ ಬರುತ್ತಿತ್ತು ಈಗ ಅಲ್ಲಿಯೂ ಬರುತ್ತಿಲ್ಲ” ಎಂಬುದಾಗಿದೆ. ಹಾಗಾದರೇ 2000 ರೂಪಾಯಿ ನೋಟು ಯಾರ ಬಳಿ ಇದೆ? ಯಾತಕ್ಕಾಗಿ ಮುದ್ರಿಸಿದರೋ; ಯಾರಿಗಾಗಿ ಮುದ್ರಿಸಿದರೋ ಅವರ ಬಳಿಯೇ ಇರುತ್ತದೆ ಎಂಬುದು ತಾನೆ ಇದರರ್ಥ