ಬೆದರಿಕೆಯ ದ್ವೇಷ ಭಾಷಣಗಳು; ನ್ಯಾಯಾಲಯದ ಕಟ್ಟಡಗಳನ್ನೂ ಬಿಡುತ್ತಿಲ್ಲ!  ಡಿಎಂಕೆ ಮುಖವಾಣಿ 'ಮುರಸೊಲಿ' ಸಂಪಾದಕೀಯ » Dynamic Leader
November 22, 2024
ರಾಜಕೀಯ

ಬೆದರಿಕೆಯ ದ್ವೇಷ ಭಾಷಣಗಳು; ನ್ಯಾಯಾಲಯದ ಕಟ್ಟಡಗಳನ್ನೂ ಬಿಡುತ್ತಿಲ್ಲ!  ಡಿಎಂಕೆ ಮುಖವಾಣಿ ‘ಮುರಸೊಲಿ’ ಸಂಪಾದಕೀಯ

ಕನ್ನಡಕ್ಕೆ: ಡಿ.ಸಿ.ಪ್ರಕಾಶ್
ಸಂಪಾದಕರು, ಡೈನಾಮಿಕ್ ಲೀಡರ್

ಕಳೆದ 4 ತಿಂಗಳಲ್ಲಿ ಮಹಾರಾಷ್ಟ್ರದಲ್ಲಿ ನಡೆದ 50 ಸಾರ್ವಜನಿಕ ಸಭೆಗಳಲ್ಲಿ ದ್ವೇಷದ ಮಾತುಗಳನ್ನು ಆಡಿರುವ ಕುರಿತು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ. ದೆಹಲಿ, ಉತ್ತರಪ್ರದೇಶ ಮತ್ತು ಉತ್ತರಾಖಂಡದಲ್ಲೂ ದ್ವೇಷದ ಭಾಷಣದ ಬಗ್ಗೆ ಅರ್ಜಿಗಳನ್ನು ಸಲ್ಲಿಸಲಾಗಿದೆ. ಈ ಪ್ರಕರಣಗಳು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಕೆ.ಎಂ.ಜೋಸೆಫ್ ಹಾಗೂ ಬಿ.ವಿ.ನಾಗರತ್ನ ಅವರಿದ್ದ ವಿಭಾಗೀಯ ಪೀಠದ ಮುಂದೆ ವಿಚಾರಣೆಗೆ ಬಂದಿತ್ತು.

ಇದರ ಕುರಿತು ಮಾತನಾಡಿದ ನ್ಯಾಯಾಧೀಶರು, “ಪ್ರತಿಯೊಬ್ಬರೂ ದ್ವೇಷದ ಮಾತುಗಳನ್ನು ಆಡುವುದನ್ನು ನಿಯಂತ್ರಿಸಿಕೊಳ್ಳಬೇಕು. ರಾಜಕಾರಣಿಗಳು ರಾಜಕೀಯವನ್ನು ಧರ್ಮದೊಂದಿಗೆ ಬೆರೆಸಿದಾಗ ದೊಡ್ಡ ಸಮಸ್ಯೆ ಎದುರಾಗುತ್ತದೆ. ರಾಜಕೀಯ ಮತ್ತು ಧರ್ಮವನ್ನು ಪ್ರತ್ಯೇಕಿಸಿದಾಗ ಇದು ಕೊನೆಗೊಳ್ಳುತ್ತದೆ. ರಾಜಕಾರಣಿಗಳು ಧರ್ಮವನ್ನು ಬಳಸುವುದನ್ನು ನಿಲ್ಲಿಸಿದರೆ ಇದೆಲ್ಲವೂ ನಿಲ್ಲುತ್ತದೆ. ರಾಜಕೀಯವನ್ನು ಧರ್ಮದೊಂದಿಗೆ ಬೆರೆಸುವುದು ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ ಎಂದು ನಾವು ಇತ್ತೀಚಿನ ತೀರ್ಪಿನಲ್ಲಿ ಹೇಳಿದ್ದೇವೆ. ಟಿವಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿಯೂ ದ್ವೇಷದ ಮಾತುಗಳು ಹೆಚ್ಚಾಗಿವೆ. ನಾವು ಎಲ್ಲಿಗೆ ಹೋಗುತ್ತಿದ್ದೇವೆ ಎಂದು ನೋಡಬೇಕು? ಮಾತಿನಲ್ಲಿ ಸ್ವಲ್ಪ ಸಂಯಮ ಇರಬೇಕಲ್ಲವೇ? ಇಲ್ಲದಿದ್ದರೆ ನಮಗೆ ಬೇಕಾದ ಭಾರತವನ್ನು ಕಟ್ಟಲು ಸಾಧ್ಯವಿಲ್ಲ. ಈ ಮಾತುಗಳಿಂದ ನಮಗೆ ಯಾವ ರೀತಿಯ ಆನಂದ ಸಿಗುತ್ತದೆ” ಎಂದು ನ್ಯಾಯಾಧೀಶರು ತಮ್ಮ ಕಳವಳವನ್ನು ಕಟುವಾದ ಮಾತುಗಳಲ್ಲಿ ಎಚ್ಚರಿಕೆಯ ಭಾವದಿಂದ ವ್ಯಕ್ತಪಡಿಸಿದ್ದಾರೆ.

“ಇತರರನ್ನು ಅವಹೇಳನ ಮಾಡುವ ಉದ್ದೇಶದಿಂದ ‘ಪಾಕಿಸ್ತಾನಕ್ಕೆ ಹೋಗು’ ಎಂದು ಹೇಳುತ್ತಲೇ ಇರುತ್ತಾರೆ. ಆದರೆ ಇತರ ಸಮುದಾಯಗಳೂ ಈ ದೇಶವನ್ನು ಆರಿಸಿಕೊಂಡಿವೆ. ಅವರೂ ನಿಮ್ಮ ಸಹೋದರ ಸಹೋದರಿಯರಂತೆ. ಅವರನ್ನು ಅವಮಾನಿಸುವ ಮತ್ತು ದೇಶದ ಕಾನೂನನ್ನು ಉಲ್ಲಂಘಿಸುವ ಹಕ್ಕು ನಿಮಗೆ ಇದೆಯೇ? ನೆಲದ ಕಾನೂನನ್ನು ಮುರಿದರೆ ಅದು ಇಟ್ಟಿಗೆಯಂತೆ ನಿಮ್ಮ ತಲೆಯ ಮೇಲೆ ಬೀಳುತ್ತದೆ. ನಿಜವಾದ ಅಭಿವೃದ್ಧಿ ಎಂದರೆ ನಮ್ಮ ದೇಶವನ್ನು ಸೂಪರ್ ಪವರ್ ಮಾಡುವುದು. ಅದಕ್ಕಾಗಿ ನಾವು ಕಾನೂನಿನ ನಿಯಮವನ್ನು ಗೌರವಿಸಬೇಕು. ಆಗ ಮಾತ್ರ ನಾವು ನಮ್ಮ ದೇಶವನ್ನು ಬದುಕಲು ಉತ್ತಮ ಸ್ಥಳವನ್ನಾಗಿ ಮಾಡಬಹುದು” ಎಂದು ನ್ಯಾಯಾಧೀಶರು ಬುದ್ಧಿಮಾತು ಹೇಳಿದ್ದಾರೆ.

ಮತೀಯ ರಾಜಕಾರಣ ಮಾಡುವವರೇ ಹೆಚ್ಚು ದ್ವೇಷದ ಮಾತುಗಳನ್ನು ಹಾಡುತ್ತರೆ. ಈ ಬಗ್ಗೆ ಸ್ವತಃ ನ್ಯಾಯಮೂರ್ತಿಗಳೇ ಸ್ಪಷ್ಟನೆ ನೀಡಿದ್ದಾರೆ. ಅಸ್ಸಾಂ, ದೆಹಲಿ, ಗುಜರಾತ್, ಹರಿಯಾಣ, ಕರ್ನಾಟಕ, ಮಧ್ಯಪ್ರದೇಶ, ಉತ್ತರ ಪ್ರದೇಶ ಮತ್ತು ಜಾರ್ಖಂಡ್ ರಾಜ್ಯಗಳಲ್ಲಿ ಅಲ್ಪಸಂಖ್ಯಾತ ಸಮುದಾಯದ ವಿರುದ್ಧ ದ್ವೇಷ ಹಿಂಸಾಚಾರ ನಡೆಯುತ್ತಿದೆ. ಉತ್ತರ ಪ್ರದೇಶವನ್ನು ವಿಶೇಷವಾಗಿ ಉಲ್ಲೇಖಿಸಬೇಕಾಗಿಲ್ಲ. ಪ್ರಜಾಸತ್ತಾತ್ಮಕ ಶಕ್ತಿಗಳು ತಮ್ಮ ಖಂಡನೆ ಮತ್ತು ಎಚ್ಚರಿಕೆಯನ್ನು ವ್ಯಕ್ತಪಡಿಸುತ್ತಲೇ ಇರುತ್ತವೆ.

‘ದೇಶದ ಸಂವಿಧಾನವನ್ನು ಬಲಿಪೀಠದ ಮೇಲೆ ಇಟ್ಟಂತೆ ಆಗಿದೆ. ಬೆಳೆಯುತ್ತಿರುವ ದ್ವೇಷ ರಾಜಕಾರಣವನ್ನು ಕೊನೆಗಾಣಿಸಿ’ ಎಂದು ಕಳೆದ ವರ್ಷ ಮೇ ತಿಂಗಳಲ್ಲಿ 108 ಮಂದಿ ಪ್ರಧಾನಿ ಮೋದಿಗೆ ಪತ್ರ ಬರೆದು ಸಹಿ ಹಾಕಿದ್ದರು. ಮಾಜಿ ನ್ಯಾಯಾಧೀಶರು, ಮಾಜಿ ಲೆಫ್ಟಿನೆಂಟ್ ಗವರ್ನರ್‌ಗಳು, ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರರು, ಮಾಜಿ ವಿದೇಶಾಂಗ ಕಾರ್ಯದರ್ಶಿಗಳು ಈ ಪತ್ರಕ್ಕೆ ಸಹಿ ಹಾಕಿದ್ದರು. ಹಾಗಾಗಿ ಇದು ಅನಾಮಧೇಯ ಪತ್ರವಲ್ಲ. ಅದನ್ನೇ ಈಗ ನ್ಯಾಯಾಲಯ ಹೇಳುತ್ತಿದೆ.

ಸುಪ್ರೀಂ ಕೋರ್ಟ್ ಈ ರೀತಿ ಹೇಳುತ್ತಿರುವುದು ಇದು ಮೊದಲೇನಲ್ಲ. ಕಳೆದ ವರ್ಷ ಅಕ್ಟೋಬರ್‌ನಲ್ಲಿ ನೀಡಿದ ತೀರ್ಪಿನಲ್ಲಿ, ‘ದ್ವೇಷದ ಭಾಷಣಗಳ ಮೇಲೆ ಕ್ರಮ ಕೈಗೊಳ್ಳಲು ಪೊಲೀಸರು ದೂರುಗಳಿಗಾಗಿ ಕಾಯಬಾರದು’ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು ಆದೇಶಿಸಿದ್ದರು. ‘ಮುಸ್ಲಿಮರನ್ನು ಸಾಮಾಜಿಕವಾಗಿ ಬಹಿಷ್ಕರಿಸಬೇಕು’ ಎಂದು ಬಿಜೆಪಿ ಸಂಸದ ಮಾಡಿದ ದ್ವೇಶ ಭಾಷಣದ ವಿರುದ್ಧ ದಾಖಲಾದ ಪ್ರಕರಣವದು. ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಕೆ.ಎಂ.ಜೋಸೆಫ್ ಮತ್ತು ರಿಷಿಕೇಶ್ ರಾಯ್ ಪೀಠವು ಈ ಪ್ರಕರಣದ ಬಗ್ಗೆ ವಿಚಾರಣೆ ನಡೆಸಿತ್ತು.

“ಪ್ರಜಾಪ್ರಭುತ್ವ ಮತ್ತು ಜಾತ್ಯತೀತ ಭಾರತದಲ್ಲಿ ಇಂತಹ ಭಾಷಣಗಳು ಅತ್ಯಂತ ಖಂಡನೀಯವಾದದ್ದು. ಮೂಲಭೂತ ಹಕ್ಕುಗಳು ಮತ್ತು ಕಾನೂನಿನ ನಿಯಮವನ್ನು ರಕ್ಷಿಸುವ ಹೊಣೆಗಾರಿಕೆ ನ್ಯಾಯಾಲಯಗಳಿವೆ. ದೇಶದ ಜಾತ್ಯತೀತತೆಯನ್ನು ಕಾಪಾಡುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಅಗತ್ಯವಾದ ಆದೇಶಗಳನ್ನು ಹೊರಡಿಸಲು ಮುಂದಾಗಬೇಕು’’ ಎಂದು ಆ ಸಂದರ್ಭದಲ್ಲಿ ನ್ಯಾಯಾಧೀಶರು ಹೇಳಿದ್ದರು. ಆದ್ದರಿಂದ ಪೊಲೀಸ್ ಇಲಾಖೆ ಕೂಡಲೇ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಬೇಕು. ಕ್ರಮ ತೆಗೆದುಕೊಂಡರೆ ಸಮಸ್ಯೆ ಗಂಭೀರವಾಗುವುದನ್ನು ತಡೆಯಬಹುದು.

ಮತೀಯ ರಾಜಕಾರಣ ಮಾಡುವವರೇ ಹೆಚ್ಚು ದ್ವೇಷದ ಭಾಷಣಗಳನ್ನು ಮಾಡುತ್ತಾರೆ. ಇದಕ್ಕೆ ಈಗ ಸ್ವತಃ ನ್ಯಾಯಮೂರ್ತಿಗಳೇ ಸ್ಪಷ್ಟನೆಯನ್ನು ನೀಡಿದ್ದಾರೆ. ‘ರಾಜಕೀಯ ಮತ್ತು ಧರ್ಮವನ್ನು ಬೇರ್ಪಡಿಸಿದರೆ; ರಾಜಕಾರಣಿಗಳು ರಾಜಕೀಯದಲ್ಲಿ ಧರ್ಮದ ಬಗ್ಗೆ ಮಾತನಾಡುವುದನ್ನು ನಿಲ್ಲಿಸಿದರೆ; ದ್ವೇಷದ ಮಾತುಗಳು ಕಡಿಮೆಯಾಗುತ್ತವೆ’ ಎಂಬುದೇ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು ತೋರಿದ ಹಾದಿಯಾಗಿದೆ.

ಆದರೆ ಬಿಜೆಪಿಗೆ ಇದರ ಅರಿವೇ ಇಲ್ಲ ಎಂಬುದನ್ನು ಕೇಂದ್ರ ಸಚಿವ ಕಿರಣ್ ರಿಜಿಜು ಅವರ ಭಾಷಣವು ತೋರಿಸುತ್ತಿದೆ. ಇತ್ತೀಚೆಗೆ ‘ಇಂಡಿಯಾ ಟುಡೇ’ ಪತ್ರಿಕೆಯ ವತಿಯಿಂದ ನಡೆದ ವಿಚಾರ ಸಂಕಿರಣದಲ್ಲಿ ಮಾತನಾಡಿದ ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು, “ಭಾರತ ವಿರೋಧಿ ಗುಂಪಿನ ಭಾಗವಾಗಿರುವ ನಿವೃತ್ತ ನ್ಯಾಯಮೂರ್ತಿಗಳು, ನ್ಯಾಯಾಂಗವನ್ನು ವಿರೋಧ ಪಕ್ಷವಾಗಿ ನರ್ತಿಸುವಂತೆ ಒತ್ತಾಯಿಸುತ್ತಿದ್ದಾರೆ” ಎಂದು ಹೇಳಿದ್ದರು. ಇದು ಭಾರತೀಯ ನ್ಯಾಯಾಂಗದ ಮೇಲೆ ಬಿಜೆಪಿಯ ದಾಳಿಯಾಗಿದೆ. ಇದು ನ್ಯಾಯಾಂಗವನ್ನು ಅಸಹ್ಯ ಮಾಡುವುದು ಮತ್ತು ಅದನ್ನು ತಮ್ಮ ಕೋಮು ರಾಜಕಾರಣಕ್ಕೆ ಎಳೆದು ತರುವುದಾಗಿದೆ.

ರಾಜಕೀಯಕ್ಕೆ ಧಾರ್ಮಿಕ ರಂಗು ಹೊಡೆದಂತೆ ನ್ಯಾಯಾಂಗಕ್ಕೂ ಹೊಡೆಯುವ ಪ್ರಯತ್ನ ಇದಾಗಿದೆ. ಬೆದರಿಕೆಯ ದ್ವೇಷ ಭಾಷಣಗಳು, ನ್ಯಾಯಾಲಯದ ಕಟ್ಟಡಗಳನ್ನೂ ಬಿಡಲಿಲ್ಲ.

Related Posts