ನರೇಂದ್ರ ಮೋದಿಯವರಿಂದ ಮತ್ತೊಂದು ನೋಟು ನಿಷೇಧ! ಸಿದ್ದರಾಮಯ್ಯ » Dynamic Leader
November 21, 2024
ರಾಜಕೀಯ

ನರೇಂದ್ರ ಮೋದಿಯವರಿಂದ ಮತ್ತೊಂದು ನೋಟು ನಿಷೇಧ! ಸಿದ್ದರಾಮಯ್ಯ

ಭಾರತದಲ್ಲಿ ರೂ.2000 ನೋಟುಗಳನ್ನು ಹಿಂಪಡೆಯಲು ಆರ್‌ಬಿಐ ನಿರ್ಧರಿಸಿದೆ. ಅದರಂತೆ ಭಾರತದಲ್ಲಿ ರೂ.2000 ನೋಟುಗಳು ಚಲಾವಣೆಯಲ್ಲಿ ಇರುವುದಿಲ್ಲ. ಬ್ಯಾಂಕಿಂಗ್ ಸೇವೆಗಳನ್ನು ಬಳಸುವ ಸಾರ್ವಜನಿಕರಿಗೆ ರೂ.2000 ನೋಟುಗಳನ್ನು ನೀಡದಂತೆ ಆರ್‌ಬಿಐ ಬ್ಯಾಂಕ್‌ಗಳಿಗೆ ಸೂಚಿಸಿದೆ.

“ಜನರು ತಮ್ಮ ಬಳಿಯಿರುವ ರೂ.2000 ನೋಟುಗಳನ್ನು ಸೆಪ್ಟೆಂಬರ್ 30ರೊಳಗೆ ಬ್ಯಾಂಕ್‌ಗಳಲ್ಲಿ ಬದಲಾಯಿಸಿಕೊಳ್ಳಬಹುದು. ಸೆಪ್ಟೆಂಬರ್ 30ರ ನಂತರ ಭಾರತದಲ್ಲಿ ರೂ.2000 ನೋಟುಗಳ ವ್ಯವಹಾರ ಇರುವುದಿಲ್ಲ” ಎಂದು ಆರ್‌ಬಿಐ ಘೋಷಿಸಿದೆ.

ಇದಕ್ಕೆ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯನವರು, “ಬಿಜೆಪಿ ಸರ್ಕಾರಕ್ಕೆ ತಮ್ಮದೇ ನೀತಿಗಳ ಬಗ್ಗೆ ಸ್ಪಷ್ಟತೆ ಇಲ್ಲದಿರುವುದು ಬೇಸರದ ಸಂಗತಿ” ಎಂದು ವ್ಯಂಗ್ಯವಾಡಿದ್ದಾರೆ.

“ಈಗ ರೂ.2000 ಮೌಲ್ಯದ ನೋಟುಗಳನ್ನು ನಿಷೇಧ ಮಾಡಿರುವ ಪ್ರಧಾನಿ ನರೇಂದ್ರ ಮೋದಿಯವರು 2016ರಲ್ಲಿ ರೂ.500 ಮತ್ತು ರೂ.1000 ನೋಟುಗಳನ್ನು ನಿಷೇಧ ಮಾಡಿದಾಗ ತಿಳಿಸಿದ್ದ ಯಾವ ಉದ್ದೇಶಗಳು ಈಡೇರಿವೆ ಎನ್ನುವುದನ್ನು ದೇಶದ ಜನರಿಗೆ ಮೊದಲು ತಿಳಿಸಬೇಕು.

2016ರಲ್ಲೇ ರೂ.2000 ನೋಟುಗಳನ್ನು ಬ್ಯಾನ್ ಮಾಡುವ ಯೋಜನೆ ಇದ್ದಿದರೆ ಅದನ್ನು ಏಕೆ ಪರಿಚಯಿಸಿದರು? ತಮ್ಮ ವೈಫಲ್ಯಗಳಿಂದ ಗಮನವನ್ನು ಬೇರೆಡೆ ಸೆಳೆಯಲು ಈಗ ರೂ.2000 ಮೌಲ್ಯದ ನೋಟು ನಿಷೇಧಿಸುವುದಿದ್ದರೆ 2016ರಲ್ಲಿ ಅದನ್ನು ಚಲಾವಣೆಗೆ ತಂದದ್ದು ಯಾಕೆ? ಯಾವ ಕಾರಣಕ್ಕಾಗಿ ಈಗ ಇದನ್ನು ನಿಷೇಧಿಸಲಾಗಿದೆ? ಕಪ್ಪು ಹಣವನ್ನು ನಿಯಂತ್ರಿಸುವ ನೋಟು ನಿಷೇಧ ಎಂಬ ಪ್ರಬಲ ಅಸ್ತ್ರವನ್ನು ಪ್ರಧಾನಿ ನರೇಂದ್ರ ಮೋದಿ ಅವರು ರಾಜಕೀಯ ಲಾಭಕ್ಕಾಗಿ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ” ಎಂದು ಸಿದ್ದರಾಮಯ್ಯ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಆಕ್ರೋಶವನ್ನು ವ್ಯಕ್ತಪಡಿಸಿದ್ದರೆ.

 

Related Posts