ಪ್ರವೇಶ್ ಶುಕ್ಲಾವನ್ನು ಬಿಡುಗಡೆ ಮಾಡಬೇಕು ಅವರೊಬ್ಬ ಪಂಡಿತ! ಸಂತ್ರಸ್ತ ದಶ್ಮತ್ ರಾವತ್
ಸಹ ಮನುಷ್ಯನ ಮೇಲೆ ಮೂತ್ರ ವಿಸರ್ಜನೆ ಮಾಡಿದ ಪ್ರಕರಣದಲ್ಲಿ ದಿಢೀರ್ ಟ್ವಿಸ್ಟ್; ಬಾಧಿತ ವ್ಯಕ್ತಿ ಆರೋಪಿಯನ್ನು ಖುಲಾಸೆಗೊಳಿಸುವಂತೆ ಮನವಿ ಮಾಡಿರುವುದು ಎಲ್ಲರನ್ನೂ ಚಕಿತಗೊಳಿಸುವಂತೆ ಮಾಡಿದೆ.
ಆರೋಪಿಗೆ ತಾನು ಮಾಡಿರುವುದು ಅಪರಾಧವೆಂದು ಅರಿವಾಗಿರುವುದರಿಂದ ಆತನನ್ನು ಬಿಡುಗಡೆ ಮಾಡಬಹುದು ಎಂದು ಬುಡಕಟ್ಟು ಜನಾಂಗದ ದಶ್ಮತ್ ರಾವತ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮಧ್ಯಪ್ರದೇಶ ಸಿಧಿ ಜಿಲ್ಲೆಗೆ ಸೇರಿದ ಅದಿವಾಸಿ ಯುವಕನ ಮೇಲೆ ಪ್ರವೇಶ್ ಶುಕ್ಲಾ ಎಂಬ ವ್ಯಕ್ತಿ, ಮೂತ್ರ ವಿಸರ್ಜನೆ ಮಾಡಿದ ಅಮಾನವೀಯ ಘಟನೆ ಕೆಲವು ದಿನಗಳ ಹಿಂದೆ ನಡೆದಿತ್ತು. ಅದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ, ದೇಶಾದ್ಯಂತ ಸಂಚಲನ ಮೂಡಿಸಿತು.
ನಂತರದ ತನಿಖೆಯಲ್ಲಿ, ಸಿಧಿ ಜಿಲ್ಲೆಯ 36 ವರ್ಷದ ದಶ್ಮತ್ ರಾವತ್ ಸಂತ್ರಸ್ತನಾಗಿದ್ದು, ಪ್ರವೇಶ್ ಶುಕ್ಲಾ ಎಂಬ ವ್ಯಕ್ತಿ ಈ ಕೃತ್ಯದಲ್ಲಿ ಭಾಗಿಯಾಗಿರುವುದು ಎಂದು ತಿಳಿದುಬಂದಿತು. ಆರೋಪಿ ಪ್ರವೇಶ್ ಶುಕ್ಲಾ, ಕ್ಷೇತ್ರದ ಬಿಜೆಪಿ ಶಾಸಕ ಕೇದಾರ್ ಶುಕ್ಲಾ ಅವರ ಪ್ರತಿನಿಧಿ ಎಂದು ವಿರೋಧ ಪಕ್ಷಗಳು ಬಲವಾಗಿ ಆರೋಪಿಸಿತು. ಆದರೆ, ಶಾಸಕ ಕೇದಾರ್ ಶುಕ್ಲಾ ಅವರು, “ಪ್ರವೇಶ್ ಶುಕ್ಲಾ ಅವರನ್ನು ಕ್ಷೇತ್ರದ ವ್ಯಕ್ತಿಯಾಗಿ ನನಗೆ ತಿಳಿದಿದೆ. ಆದರೆ, ಬಿಜೆಪಿಗೂ ಆತನಿಗೂ ಯಾವುದೇ ಸಂಬಂಧವಿಲ್ಲ” ಎಂದು ಹೇಳಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ಆರೋಪಿಗಳನ್ನು ಬಂಧಿಸಿ ಕಠಿಣ ಕ್ರಮ ಕೈಗೊಳ್ಳುವಂತೆ ಮತ್ತು ರಾಷ್ಟ್ರೀಯ ಭದ್ರತಾ ಕಾಯ್ದೆ (NSA) ಅಡಿಯಲ್ಲಿ ಕ್ರಮ ಕೈಗೊಳ್ಳುವಂತೆ ಆಡಳಿತಕ್ಕೆ ಸೂಚಿಸಿರುವುದಾಗಿ ತಿಳಿಸಿದ್ದರು.ಮತ್ತು ಕಳೆದ ಗುರುವಾರ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಸಂತ್ರಸ್ತನನ್ನು ಭೋಪಾಲ್‌ನಲ್ಲಿರುವ ತಮ್ಮ ನಿವಾಸಕ್ಕೆ ಕರೆದು, ಅವರ ಪಾದಗಳನ್ನು ತೊಳೆದು ಕ್ಷಮೆಯಾಚಿಸಿದರು. ಆದರೆ ಮುಖ್ಯಮಂತ್ರಿಗಳ ಈ ಕ್ರಮ ಬರೀ ನಾಟಕ ಎಂದು ವಿರೋಧ ಪಕ್ಷಗಳು ವ್ಯಂಗ್ಯ ಮಾಡಿದವು.
ಇದನ್ನೂ ಓದಿ: ಆದಿವಾಸಿ ಯುವಕನ ಮೇಲೆ ಮೂತ್ರ ವಿಸರ್ಜನೆ ಮಾಡಿದ ಬಿಜೆಪಿ ಮುಖಂಡನ ಬಂಧನ!
ಸಿಧಿ ಪೊಲೀಸರು ಪ್ರವೇಶ್ ಶುಕ್ಲಾ ವಿರುದ್ಧ ಐಪಿಸಿ ಸೆಕ್ಷನ್ 294 ಮತ್ತು 504, SC/ST ಕಾಯಿದೆ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿ ಕಳೆದ ಬುಧವಾರ ಬಂಧಿಸಿದರು. ಈ ಹಿನ್ನಲೆಯಲ್ಲಿ ಪ್ರವೇಶ್ ಶುಕ್ಲಾ ಅವರಿಂದ ಬಾಧೆಗೊಳಗಾದ ದಶ್ಮತ್ ರಾವತ್, ಆತನನ್ನು ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಬೇಡಿಕೆ ಇಟ್ಟಿದ್ದಾನೆ.
ಇದರ ಬಗ್ಗೆ ಮಾತನಾಡಿದ ಸಂತ್ರಸ್ತ ದಶ್ಮತ್ ರಾವತ್, “ತಪ್ಪು ನಡೆದಿರುವುದು ನಿಜ; ಆದರೂ ಆತನನ್ನು ಬಿಡುಗಡೆ ಮಾಡುವಂತೆ ಸರ್ಕಾರವನ್ನು ಕೋರುತ್ತೇನೆ. ಪ್ರವೇಶ್ ಶುಕ್ಲಾಗೆ ತನ್ನ ತಪ್ಪಿನ ಅರಿವಾಗಿದೆ. ಅವರು ನಮ್ಮ ಹಳ್ಳಿಯ ಪಂಡಿತರು” ಎಂದು ಹೇಳಿದ್ದಾರೆ. ಇದು ಎಲ್ಲರನ್ನೂ ಚಕಿತಗೊಳಿಸುವಂತೆ ಮಾಡಿದೆ.