ರಾಯ್‌ಪುರ: ಪ್ರಧಾನಿ ಮೋದಿ ಎಲ್ಲಿಗೆ ಹೋದರೂ ನನ್ನನ್ನು ನಿಂದಿಸುತ್ತಿದ್ದಾರೆ. ಆದರೆ ನಾನು ಅದರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಛತ್ತೀಸ್‌ಗಢ ಚುನಾವಣಾ ಪ್ರಚಾರದ ವೇಳೆ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಹೇಳಿದ್ದಾರೆ.
ಛತ್ತೀಸ್‌ಗಢದ ಪಲೋಡಾ ಬಜಾರ್ ಜಿಲ್ಲೆಯಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ರಾಹುಲ್ ಗಾಂಧಿ ಮಾತನಾಡಿದರು: ಮೋದಿ ಎಲ್ಲಿಗೆ ಹೋದರೂ ನನ್ನನ್ನು ನಿಂದಿಸುತ್ತಿದ್ದಾರೆ. ಆದರೆ ನಾನು ಅದರ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಮೋದಿ ಗ್ಯಾರಂಟಿ ಎಂದರೆ ಅದು ಅದಾನಿಯ ಗ್ಯಾರಂಟಿಯೇ.
ಛತ್ತೀಸ್‌ಗಢದಲ್ಲಿ ಕೆ.ಜಿ.ಯಿಂದ ಪಿ.ಜಿ.ವರೆಗೆ ಉಚಿತ ಶಿಕ್ಷಣ ನೀಡಲು ಭೂಪೇಶ್ ಬಾಗಲ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಐತಿಹಾಸಿಕ ನಿರ್ಧಾರ ಕೈಗೊಂಡಿದೆ.” ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಜಾತಿವಾರು ಜನಗಣತಿ:
ಮಧ್ಯಪ್ರದೇಶದ ದಾಡಿಯಾ ಜಿಲ್ಲೆಯಲ್ಲಿ ನಡೆದ ಚುನಾವಣಾ ರ‍್ಯಾಲಿಯಲ್ಲಿ ಮಾತನಾಡಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ವಾದ್ರಾ ಅವರು, “ಮಧ್ಯಪ್ರದೇಶದಲ್ಲಿ ನಾವು (ಕಾಂಗ್ರೆಸ್) ಅಧಿಕಾರಕ್ಕೆ ಬಂದರೆ, ಕೃಷಿ ಸಾಲವನ್ನು ಮನ್ನಾ ಮಾಡುತ್ತೇವೆ. ಜಾತಿವಾರು ಜನಗಣತಿ ನಡೆಸುತ್ತೇವೆ.
ಮಧ್ಯಪ್ರದೇಶದಲ್ಲಿ ರಸಗೊಬ್ಬರಕ್ಕಾಗಿ ರೈತರು ಉದ್ದನೆಯ ಸರತಿ ಸಾಲಿನಲ್ಲಿ ಕಾಯುತ್ತಿದ್ದಾರೆ. ಇಲ್ಲಿ ರಸಗೊಬ್ಬರ ಸಿಗುತ್ತಿಲ್ಲ. ಮಧ್ಯಪ್ರದೇಶದಲ್ಲಿ ಚುನಾವಣಾ ಸಂದರ್ಭದಲ್ಲಿ ರಸಗೊಬ್ಬರದ ಚೀಲಗಳ ಮೇಲೆ ಮೋದಿ ಫೋಟೋ ಅಂಟಿಸಿದ್ದಕ್ಕೆ ಚುನಾವಣಾ ಆಯೋಗ ಗೊಬ್ಬರ ವಿತರಣೆಗೆ ನಿಷೇಧ ಹೇರಿದೆ. ಇದರಿಂದ ಮಧ್ಯಪ್ರದೇಶದ ರೈತರು ಕಂಗಾಲಾಗಿದ್ದಾರೆ” ಎಂದು ಮಾತನಾಡಿದ್ದಾರೆ.