ದೇಶದ ಯಾವುದೇ ಭಾಗದಲ್ಲಿದ್ದರೂ ಎಸ್‌ಸಿ ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆ ರಕ್ಷಣೆ ನೀಡುತ್ತದೆ: ಬಾಂಬೆ ಹೈಕೋರ್ಟ್ » Dynamic Leader
October 31, 2024
ದೇಶ

ದೇಶದ ಯಾವುದೇ ಭಾಗದಲ್ಲಿದ್ದರೂ ಎಸ್‌ಸಿ ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆ ರಕ್ಷಣೆ ನೀಡುತ್ತದೆ: ಬಾಂಬೆ ಹೈಕೋರ್ಟ್

ದೇಶದ ಯಾವುದೇ ಭಾಗದಲ್ಲಿದ್ದರೂ, ಜಾತಿ ದೌರ್ಜನ್ಯಕ್ಕೆ ಒಳಗಾದ ಪರಿಶಿಷ್ಟ ಜನರು, ಎಸ್‌ಸಿ ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯಡಿ ರಕ್ಷಣೆ ಪಡೆಯಬಹುದು ಎಂದು ಬಾಂಬೆ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ದೇಶಾದ್ಯಂತ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಮೇಲಿನ ಹಿಂಸಾಚಾರವನ್ನು ತಡೆಗಟ್ಟಲು ಎಸ್‌ಸಿ ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯನ್ನು ಜಾರಿಗೆ ತರಲಾಗಿದೆ. ಇದರ ಅಡಿಯಲ್ಲಿ ದಾಖಲಾಗುವ ಪ್ರಕರಣಗಳನ್ನು ಸುಪ್ರೀಂ ಕೋರ್ಟ್ ಮತ್ತು ರಾಜ್ಯ ಹೈಕೋರ್ಟ್‌ಗಳೂ ವಿಚಾರಣೆ ಮಾಡುತ್ತವೆ.

ಈ ಹಿನ್ನಲೆಯಲ್ಲಿ, ಮಹಾರಾಷ್ಟ್ರದ ಬಾಂಬೆ ಹೈಕೋರ್ಟ್‌ನಲ್ಲಿ ಎಸ್‌ಸಿ ಎಸ್‌ಟಿ ದೌರ್ಜನ್ಯ ಕಾಯ್ದೆಯಡಿ ದೇಶದ ಎಲ್ಲಾ ಭಾಗಗಳಲ್ಲಿ ಸಂತ್ರಸ್ತರ ರಕ್ಷಣೆಗೆ ಸಂಬಂಧಿಸಿದ ಪ್ರಕರಣ ನಿನ್ನೆ ವಿಚಾರಣೆಗೆ ಬಂದಿತ್ತು. ಪ್ರಕರಣವನ್ನು ವಿಚಾರಣೆಗೆ ತೆಗೆದುಕೊಂಡ ನ್ಯಾಯಮೂರ್ತಿಗಳಾದ ರೇವತಿ ಮೋಹಿತ್ ದೆರೆ, ಭಾರತಿ ದಾಂಗ್ರೆ ಮತ್ತು ಜಮಾದಾರ್ ಅವರನ್ನೊಳಗೊಂಡ ತ್ರೀಸದಸ್ಯ ಪೀಠವು,

“ಜಾತಿಯನ್ನು ರಾಜ್ಯದ ಗಡಿಯೊಳಗೆ ಮಾತ್ರ ವ್ಯಾಖ್ಯಾನಿಸಲಾಗಿದೆ ಎಂಬ ವಾದ ಸರಿಯಿಲ್ಲ. ಎಸ್‌ಸಿ ಎಸ್‌ಟಿ ದೌರ್ಜನ್ಯ ತಡೆ ಕಾಯಿದೆಯು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಘನತೆಗೆ ರಕ್ಷಣೆಯ ಹಕ್ಕನ್ನು ನೀಡಿದೆ.

ಸಂಬಂಧಪಟ್ಟ ವ್ಯಕ್ತಿಯು ತಾನು ವಾಸಿಸುವ ರಾಜ್ಯದಲ್ಲಿ ಮಾತ್ರ ಈ ಕಾಯಿದೆಯಡಿ ರಕ್ಷಣೆಯನ್ನು ಪಡೆಯಬಹುದು ಎಂದು ಹೇಳಲಾಗದು. ಬಾಧಿತ ವ್ಯಕ್ತಿ, ಒಂದು ರಾಜ್ಯದಲ್ಲಿ ಎಸ್‌ಸಿ ಎಸ್‌ಟಿ ವರ್ಗಕ್ಕೆ ಸೇರಿದವರಾಗಿದ್ದು, ಅವರು ದೇಶದ ಇತರ ರಾಜ್ಯಗಳಲ್ಲಿ ಆ ವರ್ಗಕ್ಕೆ ಸೇರದಿದ್ದರೂ ಈ ಕಾಯ್ದೆಯಡಿ ರಕ್ಷಣೆ ಪಡೆಯಬಹುದು.

ಪರಿಶಿಷ್ಟ ಜಾತಿ ಮತ್ತು ಪಂಗಡಗಳು ಸಂವಿಧಾನದ ಅಡಿಯಲ್ಲಿ ತಮ್ಮ ಹಕ್ಕುಗಳನ್ನು ಪ್ರತಿಪಾದಿಸಿ, ಕಾನೂನು ರಕ್ಷಣೆಯನ್ನು ಕೋರಿದಾಗಲೆಲ್ಲಾ, ಅವರನ್ನು ಬೆದರಿಸಲಾಗುತ್ತದೆ ಮತ್ತು ಮೋಸ ಗೊಳಿಸಲಾಗುತ್ತದೆ ಎಂಬುದನ್ನು ಅರಿತುಕೊಂಡೆ ಈ ಕಾಯ್ದೆಯನ್ನು ಜಾರಿಮಾಡಲಾಗಿದೆ.

ಎಲ್ಲರನ್ನು ಸಮಾನವಾಗಿ ಕಾಣುವ ಜಾತಿ ರಹಿತ ಸಮಾಜ ನಿರ್ಮಾಣ ಮಾಡುವುದೇ ಸ್ವತಂತ್ರ ಭಾರತದ ಕನಸಾಗಿದೆ” ಎಂದು ಪೀಠ ಅಭಿಪ್ರಾಯಪಟ್ಟಿದೆ.

Related Posts