ತಮಿಳುನಾಡು ಸರ್ಕಾರದಿಂದ ಬಿಜೆಪಿ ಕಾರ್ಯಕರ್ತರು ಕ್ರೂರ ಮತ್ತು ಅಸಂಬದ್ಧ ವರ್ತನೆಯನ್ನು ಎದುರಿಸುತ್ತಿದ್ದಾರೆ! » Dynamic Leader
November 23, 2024
ರಾಜಕೀಯ

ತಮಿಳುನಾಡು ಸರ್ಕಾರದಿಂದ ಬಿಜೆಪಿ ಕಾರ್ಯಕರ್ತರು ಕ್ರೂರ ಮತ್ತು ಅಸಂಬದ್ಧ ವರ್ತನೆಯನ್ನು ಎದುರಿಸುತ್ತಿದ್ದಾರೆ!

ಡಿ.ಸಿ.ಪ್ರಕಾಶ್ ಸಂಪಾದಕರು

ತಮಿಳುನಾಡಿನಲ್ಲಿ ಬಿಜೆಪಿ ನಾಯಕರು ಮಾಧ್ಯಮಗಳ ಗಮನವನ್ನು ಬಿಜೆಪಿಯತ್ತ ತಿರುಗಿಸಲು ಮತ್ತು ತಮಿಳುನಾಡಿನಲ್ಲಿ ಬಿಜೆಪಿ ಪ್ರಮುಖ ಪಕ್ಷವಾಗಿ ಬೆಳೆದಿದೆ ಎಂದು ತೋರಿಸಿ, ಡಿಎಂಕೆಗೆ ಬಿಜೆಪಿಯೇ ಪರ್ಯಾಯ ಎಂಬ ಭ್ರಮೆಯನ್ನು ಮೂಡಿಸಲು ನಿರಂತರವಾಗಿ ವಿವಾದಾತ್ಮಕ ಹೇಳಿಕೆಗಳನ್ನು ನೀಡಿ ಗೊಂದಲವನ್ನು ಸೃಷ್ಟಿಸುತ್ತಿದ್ದಾರೆ. ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಅಧ್ಯಕ್ಷರಾದ ಮೇಲೆ ಇದು ಮಿತಿಮೀರಿ ಹೋಗಿದೆ.

ಪ್ರಚಾರದ ಗೀಳಿನಿಂದ ಸಮಾಜ ಸುಧಾರಣಾ ಚಳವಳಿಯ ಪಿತಾಮಹ ತಂದೆ ಪೆರಿಯಾರ್, ಡಿಎಂಕೆ ಸಂಸ್ಥಾಪಕರಾಗಿರುವ ದಿವಂಗತ ಮಾಜಿ ಮುಖ್ಯಮಂತ್ರಿ ಸಿ.ಎನ್.ಅಣ್ಣಾದುರೈ ಮತ್ತು ಎಂ.ಕರುಣಾನಿಧಿ ಮುಂತಾದವರ ಬಗ್ಗೆ ಮತ್ತು ಹಾಲಿ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ವಿರುದ್ಧ ಅವಹೇಳನಕಾರಿ ಮತ್ತು ಕೀಳು ಅಭಿರುಚಿಯ ಭಾಷಣಗಳನ್ನು ಮಾಡುವುದು, ಪೋಸ್ಟರ್ ಅಂಟಿಸುವುದು, ಸಾಮಾಜಿಕ ಜಾಲತಾಣಗಳಲ್ಲಿ ವಿವಾದಾತ್ಮಕವಾಗಿ ಬರೆಯುವುದು ಮುಂತಾದವುಗಳನ್ನು ಮಾಡುತ್ತಿದ್ದಾರೆ.

ಕೆಲವು ತಿಂಗಳ ಹಿಂದೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ, ಮಾಜಿ ಮುಖ್ಯಮಂತ್ರಿ ದಿವಂಗತ ಜೆ.ಜೆಯಲಲಿತಾ ಅವರ ಬಗ್ಗೆಯೂ ಇಲ್ಲಸಲ್ಲದ ಆರೋಪಗಳನ್ನು ಮಾಡಿ, ಎಐಎಡಿಎಂಕೆ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದರು. ಆವಾಗಲೇ ಮೈತ್ರಿಯಿಂದ ಬಿಜೆಪಿಯನ್ನು ಹೊರಗಿಡುವ ಆಲೋಚನೆಯನ್ನು ಎಐಎಡಿಎಂಕೆ ನಾಯಕರು ಮಾಡಿದ್ದರು. ಆದರೆ, ಜಿಜೆಪಿ ಕೇಂದ್ರ ವರಿಷ್ಟರು ಮಾಡಿದ್ದ ಸಂಧಾನದಿಂದ ಸುಮ್ಮನಾದರು.

ಆದರೆ, ಅಣ್ಣಾಮಲೈ ಸುಮ್ಮನಾಗಲಿಲ್ಲ. ಮತ್ತೆ ಮಾಜಿ ಮುಖ್ಯಮಂತ್ರಿ ಸಿ.ಎನ್.ಅಣ್ಣಾದುರೈ ವಿರುದ್ಧ ಅವಹೇಳನಕಾರಿ ಭಾಷಣ ಮಾಡಿದ್ದಲ್ಲದೇ ಎಐಎಡಿಎಂಕೆ ನಾಯಕರ ವಿರುದ್ಧವೇ ಆರೋಪಗಳನ್ನು ಮಾಡಿದರು. ಇದರಿಂದ ಕೆಂಡಾಮಂಡಲರಾದ ಎಐಎಡಿಎಂಕೆ ನಾಯಕರು ಬಿಜೆಪಿ ಮೈತ್ರಿಯನ್ನು ಮುರಿದುಕೊಂಡು, “ಮುಂಬರುವ 2024ರ ಸಂಸತ್ ಚುನಾವಣೆಯಲ್ಲಿ ಮಾತ್ರವಲ್ಲ, 2026ರ ವಿಧಾನಸಭೆ ಚುನಾವಣೆಯಲ್ಲೂ ಬಿಜೆಪಿಯೊಂದಿಗೆ ಮೈತ್ರಿ ಇಲ್ಲ” ಎಂದು ಘೋಷಿಸಿದರು.

ಬಿಜೆಪಿ ರಾಷ್ಟ್ರೀಯ ನಾಯಕರು ಈ ಬಾರಿ ಮಾಡಿದ ಯಾವ ಪ್ರಯತ್ನಗಳೂ ಕೈಕೊಡಲಿಲ್ಲ; ಮೈತ್ರಿ ಮುರಿದೇ ಹೋಯಿತು. ಮೈತ್ರಿ ಮುರಿಯಲು ಮತ್ತೊಂದು ಕಾರಣವೂ ಇದೆ. ತಮಿಳುನಾಡಿನಲ್ಲಿ ಎಐಎಡಿಎಂಕೆ ನೇತೃತ್ವದಲ್ಲೇ ಚುನಾವಣೆ ಮೈತ್ರಿ ರಚಣೆಯಾಗಿತ್ತು. ಆದರೆ, ಅದನ್ನು ಬಿಜೆಪಿಯವರು ‘ಬಿಜೆಪಿ ನೇತೃತ್ವದ ಮೈತ್ರಿಕೂಟ’ ಎಂದೇ ಹೇಳಿಕೊಂಡು ಬರುತ್ತಿದ್ದರು. ಮತ್ತು ಅದನ್ನೇ ನೆಪ ಮಾಡಿಕೊಂಡು, ‘ನಾವೇ ಸರಿಯಾದ ವಿರೋಧ ಪಕ್ಷ’ ಎಂದು ಎಐಎಡಿಎಂಕೆ ನಾಯಕರ ಬಳಿಯೇ ಹೇಳಿಕೊಂಡಿದ್ದರು.

ಅದುಮಾತ್ರವಲ್ಲ, ಮುಂದಿನ ಸಂಸತ್ ಮತ್ತು ವಿಧಾನಸಭೆ ಚುನಾವಣೆಯನ್ನು ಬಿಜೆಪಿ ನೇತೃತ್ವದಲ್ಲೇ ಎದುರಿಸಲಾಗುವುದು; ಅಣ್ಣಾಮಲೈ ಅವರೇ ಮುಖ್ಯಮಂತ್ರಿ ಅಭ್ಯರ್ಥಿ ಎಂದೆಲ್ಲಾ ಹೇಳಿಕೊಂಡು ತಿರುಗಾಡಿದ ಪರಿಣಾಮದಿಂದಾಗಿ ಎಐಎಡಿಎಂಕೆ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ಮೈತ್ರಿಯಿಂದ ಬಿಜೆಪಿಯನ್ನು ಕಿತ್ತೆಸೆದರು. ‘5 ರಾಜ್ಯಗಳ ಚುನಾವಣೆ ಘೋಷಣೆ ಆಗಿದೆ, ನಂತರ ಸಂಸತ್ ಚುನಾವಣೆ ಬರಲಿದೆ ಅಲ್ಲಿಯವರೆಗೂ ಬಿಜೆಪಿಯಿಂದ ನಮಗೆ ಏನೂ ತೋದರೆಯಿಲ್ಲ’ ಎಂದು ಲೆಕ್ಕಾಚಾರ ಮಾಡಿದ ಎಡಪ್ಪಾಡಿ ಪಳನಿಸ್ವಾಮಿ ಮೈತ್ರಿಯನ್ನು ಮುರಿದುಕೊಂಡು ದೂರ ಸರಿದರು.

ತಮಿಳುನಾಡಿನಲ್ಲಿ ‘ನೋಟಾಗಿಂತ ಕಡಿಮೆ ಮತಗಳನ್ನು ಪಡೆಯುವ ಪಕ್ಷ’ ಎಂಬ ಹಣೆಪಟ್ಟಿಯ ಬಿಜೆಪಿ ಇಂದು ಏಕಾಂಗಿಯಾಗಿ ಹೋರಾಟ ನಡೆಸುತ್ತಿದೆ. ಪಾದಯಾತ್ರೆ ನಡೆಸುವುದು, ಪ್ರೆಸ್ ಮೀಟ್ ಮಾಡುವುದು, ಡಿಎಂಕೆ ಹಾಗೂ ಎಐಎಡಿಎಂಕೆ ನಾಯಕರ ವಿರುದ್ಧ ಅವಹೇಳನಕಾರಿಯಾಗಿ ಭಾಷಣ ಬಿಗಿಯುವುದು ಇತ್ಯಾದಿ. ಒಂದು ಸುಳ್ಳನ್ನು ಮರೆಮಾಚಲು ಇನ್ನೊಂದು ಸುಳ್ಳನ್ನು ಹೇಳುವುದು; ಅದರಿಂದ ತಪ್ಪಿಸಿಕೊಳ್ಳಲು ಮತ್ತೊಂದು ಸುಳ್ಳನ್ನು ಹೇಳುವುದು. ಅದೂ ಸಾಧ್ಯವಾಗದಿದ್ದರೆ ಅವಹೇಳನಕಾರಿಯಾಗಿ ಮಾತನಾಡುವುದು. ಇದುವೇ ತಮಿಳುನಾಡು ಬಿಜೆಪಿಯ ಸ್ಟ್ರಾಟರ್ಜಿ.

ಇದರಿಂದ ಆಡಳಿತರೂಢ ಡಿಎಂಕೆ ಸರ್ಕಾರ, ದ್ರಾವಿಡ ಚಳವಳಿಯ ನೇತಾರರನ್ನು, ಮುಖ್ಯಮಂತ್ರಿಯನ್ನು, ಸಚಿವರುಗಳನ್ನು, ಶಾಸಕರು ಮತ್ತು ಸಂಸದರ ವಿರುದ್ಧ ಅವಹೇಳನಕಾರಿ ಭಾಷಣ ಮಾಡುವವರ ವಿರುದ್ಧ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ವಿವಾದಾತ್ಮಕವಾಗಿ ಕಂಟಂಟ್ ಬರೆಯುವವರ ವಿರುದ್ಧ  ದೂರು ದಾಖಲಿಸಿ ಬಂಧಿಸುತ್ತಿದೆ. ಇದನ್ನು ಕೇಂದ್ರ ಬಿಜೆಪಿ ನಾಯಕರು “ಕ್ರೂರ ಮತ್ತು ಅಸಂಬದ್ಧ ವರ್ತನೆ” ಎಂದು ಬಣ್ಣಿಸಿದ್ದಾರೆ.

ಬಿಜೆಪಿ ಕಾರ್ಯಕರ್ತರು ಕ್ರೂರ ಮತ್ತು ಅಸಂಬದ್ಧ ವರ್ತನೆಯನ್ನು ಅನುಭವಿಸುತ್ತಿದ್ದಾರೆ ಎಂದು ಹೇಳಿರುವ ಕೇಂದ್ರ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ, ನಾಲ್ಕು ಸದಸ್ಯರ ನಿಯೋಗವೊಂದನ್ನು ರಚಿಸಿ, ತಮಿಳುನಾಡಿನಿಂದ ವರದಿ ತರುವಂತೆ ಸೂಚಿಸಿದ್ದಾರೆ. ಭಾನುವಾರ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ, “ಬಿಜೆಪಿ ಕಾರ್ಯಕರ್ತರು ತಮಿಳುನಾಡು ಸರ್ಕಾರದಿಂದ ಕ್ರೂರ ಮತ್ತು ಅಸಂಬದ್ಧ ವರ್ತನೆಯನ್ನು ಎದುರಿಸುತ್ತಿದ್ದಾರೆ. ತಮಿಳುನಾಡಿಗೆ ಭೇಟಿ ನೀಡಲು ನಾಲ್ವರು ಸದಸ್ಯರ ನಿಯೋಗವನ್ನು ರಾಷ್ಟ್ರೀಯ ಅಧ್ಯಕ್ಷ ಜಿ.ಪಿ.ನಡ್ಡಾ ನಾಮನಿರ್ದೇಶನ ಮಾಡಿದ್ದಾರೆ. ಅದರ ವರದಿಯನ್ನು ಆದಷ್ಟು ಬೇಗ ಸಲ್ಲಿಸಿ.” ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಸೂಚಿಸಿದ್ದಾರೆ.

ಬೆಂಗಳೂರು ಉತ್ತರ ಲೋಕಸಭಾ ಸದಸ್ಯ ಡಿ.ವಿ.ಸದಾನಂದಗೌಡ, ಮಧ್ಯಪ್ರದೇಶದ ಮಾಜಿ ಪೊಲೀಸ್ ಆಯುಕ್ತ ಸತ್ಯಪಾಲ್ ಸಿಂಗ್, ಆಂಧ್ರಪ್ರದೇಶ ಬಿಜೆಪಿ ರಾಜ್ಯಾಧ್ಯಕ್ಷ ಡಿ.ಪುರಂದೇಶ್ವರಿ ಮತ್ತು ಬೆಂಗಳೂರು ಕೇಂದ್ರ ಲೋಕಸಭಾ ಸದಸ್ಯ ಪಿ.ಸಿ.ಮೋಹನ್ ಅವರನ್ನೊಳಗೊಂಡ ನಿಯೋಗವು ಇದನ್ನು ಮುನ್ನಡೆಸಲಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಮಾಜಿ ಸಚಿವ ಪೊನ್ ರಾಧಾಕೃಷ್ಣನ್, ಜಾರ್ಖಂಡ್ ರಾಜ್ಯಪಾಲ ಸಿ.ಪಿ.ರಾಧಾಕೃಷ್ಣನ್, ನಾಗಾಲ್ಯಾಂಡ್ ರಾಜ್ಯಪಾಲ ಎಲ್.ಗಣೇಶನ್, ತೆಲಂಗಾಣ ರಾಜ್ಯಪಾಲ ತಮಿಳಿಸೈ ಸೌಂದರರಾಜನ್ ಹಾಗೂ ಕೇಂದ್ರ ಸಚಿವ ಎಲ್.ಮುರುಗನ್ ಮುಂತಾದವರೆಲ್ಲರೂ ಕಟ್ಟಿಬೆಳೆಸಿದ ತಮಿಳುನಾಡು ಬಿಜೆಪಿಯನ್ನು, ಈಗ ಕಂಡವರೆಲ್ಲ ಗೇಲಿ ಮಾಡುವ ಮಟ್ಟಕ್ಕೆ ತಂದಿಟ್ಟಿರುವ ಕೀರ್ತಿ ಹಾಲಿ ಅಧ್ಯಕ್ಷ ಅಣ್ಣಾಮಲೈಗೆ ಸೇರುತ್ತದೆ.

ಅಣಾಮಲೈ ವರ್ತನೆಯಿಂದ ಬೇಸೆತ್ತು ಸಿನಿಮಾ ಹಿರಿಯ ನಟ ಎಸ್.ವಿ.ಶೇಖರ್, ನಟಿ ಗಾಯತ್ರಿ ರಘುರಾಮ್, ಸೀರಿಯಲ್ ಆಕ್ಟರ್ ಡಾ.ಶರ್ಮಿಲಾ ಮುಂತಾದವರೆಲ್ಲ ಪಕ್ಷವನ್ನೇ ಬಿಟ್ಟಿದ್ದಾರೆ. ನೆನ್ನೆ ನಟಿ ಗೌತಮಿ ರಾಜಿನಾಮೆ ನೀಡಿದ್ದಾರೆ. ಬಿಜೆಪಿಯ ಹಲವಾರು ರಾಜ್ಯ ಮುಖಂಡರುಗಳು ಡಿಎಂಕೆ ಹಾಗೂ ಎಐಎಡಿಎಂಕೆ ಪಕ್ಷಗಳಿಗೆ ಸೇರಿಕೊಳ್ಳುತ್ತಿದ್ದಾರೆ. ಇಷ್ಟೆಲ್ಲಾ ಆದರೂ ಅಣ್ಣಾಮಲೈ ಅವರನ್ನು ಆ ಸ್ಥಾನದಿಂದ ಪದಚ್ಯುತಿ ಗೊಳಿಸದೇ ಇರುವುದಕ್ಕೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರ ಕೃಪಾಕಟಾಕ್ಷವೇ ಕಾರಣ ಎಂದು ಹೇಳಲಾಗುತ್ತಿದೆ.  

Related Posts