ಸುಪ್ರೀಂ ಕೋರ್ಟ್ ಆವರಣದಲ್ಲಿ 7 ಅಡಿ ಎತ್ತರದ ಅಂಬೇಡ್ಕರ್ ಪ್ರತಿಮೆ: ರಾಷ್ಟ್ರಪತಿಗಳಿಂದ ಅನಾವರಣ!
ನವದೆಹಲಿ: ಭಾರತೀಯ ಪ್ರಜಾಪ್ರಭುತ್ವಕ್ಕೆ ಮಾರ್ಗದರ್ಶನ ನೀಡುವ ಸಂವಿಧಾನವನ್ನು, ಭಾರತೀಯ ಸಂವಿಧಾನ ಸಭೆಯಿಂದ ರಚಿಸಿ 1949, ನವೆಂಬರ್ 26 ರಂದು ಭಾರತದ ಸಂಸತ್ತಿನಲ್ಲಿ ಅಂಗೀಕರಿಸಲಾಯಿತು. ಈ ನಿಟ್ಟಿನಲ್ಲಿ 2015 ರಿಂದ ಪ್ರತಿ ವರ್ಷ ನವೆಂಬರ್ 26 ಅನ್ನು ದೇಶದಾದ್ಯಂತ ಸಂವಿಧಾನ ದಿನವನ್ನಾಗಿ ಆಚರಿಸಲಾಗುತ್ತದೆ.
ಇಂದು ದೇಶಾದ್ಯಂತ, ಸಂವಿಧಾನವನ್ನು ರಚಿಸಿದ ಸಂವಿಧಾನ ರಚನಾ ಸಭೆಯ ಅಧ್ಯಕ್ಷರಾದ ಡಾ.ಬಿ.ಆರ್.ಅಂಬೇಡ್ಕರ್ ಅವರ ಉನ್ನತ ವಿಚಾರಧಾರೆ ಮತ್ತು ತತ್ವಗಳನ್ನು ಸ್ಮರಿಸುವ ಹಲವು ಕಾರ್ಯಕ್ರಮಗಳು ನಡೆಸಲಾಗುತ್ತದೆ. ಈ ಹಿನ್ನಲೆಯಲ್ಲಿ, ಇಂದು ಭಾರತೀಯ ನ್ಯಾಯಾಂಗದ ಪ್ರಧಾನ ಕಛೇರಿಯಾಗಿರುವ ಸುಪ್ರೀಂ ಕೋರ್ಟ್ ಸಂಕೀರ್ಣದಲ್ಲಿ, ಡಾ.ಬಿ.ಆರ್.ಅಂಬೇಡ್ಕರ್ ಅವರ 7 ಅಡಿ ಎತ್ತರದ ಪ್ರತಿಮೆಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಉದ್ಘಾಟಿಸಿದರು.
ರಾಷ್ಟ್ರಪತಿಯವರೊಂದಿಗೆ ಭಾರತದ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್, ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಅಂಬೇಡ್ಕರ್ ಅವರು ವಕೀಲರ ಉಡುಪು ಧರಿಸಿ ಕೈಯಲ್ಲಿ ಭಾರತದ ಸಂವಿಧಾನವನ್ನು ಹಿಡಿದಿರುವಂತೆ ಪ್ರತಿಮೆಯನ್ನು ನಿರ್ಮಿಸಲಾಗಿದೆ.
ಕಳೆದ ಡಿಸೆಂಬರ್‌ನಲ್ಲಿ ಸುಪ್ರೀಂ ಕೋರ್ಟ್‌ನ ಹಲವು ವಕೀಲರು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳನ್ನು ಭೇಟಿಯಾಗಿ, ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಯನ್ನು ನ್ಯಾಯಾಲಯದ ಆವರಣದಲ್ಲಿ ಸ್ಥಾಪಿಸುವಂತೆ ಮನವಿ ಸಲ್ಲಿಸಿದ್ದರು ಎಂಬುದು ಗಮನಾರ್ಹ.