ಮಾನ್ಯ ಬಿ.ಕೆ.ಹರಿಪ್ರಸಾದ್ ಅವರಿಗೆ ಒಂದು ಬಹಿರಂಗ ಪತ್ರ: ಖಾಸಿಂ ಸಾಬ್ ಎ » Dynamic Leader
October 31, 2024
ರಾಜ್ಯ

ಮಾನ್ಯ ಬಿ.ಕೆ.ಹರಿಪ್ರಸಾದ್ ಅವರಿಗೆ ಒಂದು ಬಹಿರಂಗ ಪತ್ರ: ಖಾಸಿಂ ಸಾಬ್ ಎ

ಕಾಂಗ್ರೆಸ್ಸಿನ ಹಿರಿಯ ಮುಖಂಡರು, ಪೆರಿಯಾರ್ ವಾದಿಗಳು, ಜಾತ್ಯತೀತ ಸಿದ್ಧಾಂತಃ ನಂಬಿರುವ ನೀವು ಇತ್ತೀಚಿಗೆ ಒಂದು ಹೇಳಿಕೆಯನ್ನು ನೀಡಿದ್ದೀರಾ. “ಅಯೋಧ್ಯೆಗೆ ರಾಮಮಂದಿರ ಉದ್ಘಾಟನೆಗೆ ಹೋಗುವವರಿಗೆ ಸರ್ಕಾರವೇ ರಕ್ಷಣೆ ಕೊಡಬೇಕು; ಗೋಧ್ರಾ ದುರಂತದ ರೀತಿ ಮತ್ತೊಮ್ಮೆ ಏನಾದರೂ ಆಗಬಹುದು” ಎನ್ನುವುದು ನಿಮ್ಮ ಹೇಳಿಕೆಯಾಗಿತ್ತು.

ಈ ನಿಮ್ಮ ಹೇಳಿಕೆಗೆ ಪ್ರತಿಕ್ರಿಯೆ ಎಂಬಂತೆ ಗೃಹ ಸಚಿವರಾದ ಡಾ.ಪರಮೇಶ್ವರ್ ರವರು ಇನ್ನೊಂದು ಹೇಳಿಕೆ ನೀಡಿದ್ದರು. “ಗೋಧ್ರಾ ರೀತಿಯ ಮತ್ತೊಂದು ದುರಂತ ಸಂಭವಿಸಲಿದೆ ಎಂಬ ಬಗ್ಗೆ ನನಗೆ ಮಾಹಿತಿ ಇಲ್ಲ. ಗೃಹ ಇಲಾಖೆಗೂ ವಿಷಯ ಗೊತ್ತಿಲ್ಲ” ಎಂಬ ಹೇಳಿಕೆ ಅದಾಗಿತ್ತು.

ಈ ನಿಮ್ಮ ಹೇಳಿಕೆಗಳ ನಡುವೆ ಮುಸ್ಲಿಮರ ಗೊಂದಲ, ಸಂಕಟಗಳು ಎಷ್ಟು ಎಂಬ ಅಂದಾಜು ನಿಮಗೆ ಹಾಗೂ ನಿಮ್ಮ ಪಕ್ಷದ ಮುಖಂಡರಿಗೆ ಇದೆಯೇ? ಗೋಧ್ರಾ ದುರಂತದ ಭಯಾನಕತೆ ನಿಮಗೆ ನೆನಪಿದೆಯೇ? ಅಥವಾ ನಿಮಗೆ ಗೊತ್ತಿದೆಯೇ? ಈ ಘಟನೆಯ ಕುರಿತು ಬಹಿರಂಗವಾಗಿ ಹೇಳಿಕೆ ನೀಡುವಾಗ ಒಬ್ಬ ಜವಾಬ್ದಾರಿಯುತ ಭಾರತೀಯ ನಾಗರೀಕರಾಗಿ ವಿಶೇಷವಾಗಿ ಸಂವಿಧಾನಾತ್ಮಕ ಒಂದು ಸ್ಥಾನದಲ್ಲಿ ಇರುವ ನೀವು ಎಷ್ಟು ಎಚ್ಚರದಿಂದ ಇರಬೇಕು ಎನ್ನುವ ಅರಿವು ನಿಮಗಿದೆಯೇ?

ಗೋಧ್ರಾ ದುರಂತ ಒಂದು ಭೀಕರ ಹಾಗೂ ಭಾರತದ ಕರಾಳ ನೆನಪು. 2002ರ ಫೆಬ್ರುವರಿ 27 ರಂದು ಅಯೋಧ್ಯೆ ರೈಲ್ವೆ ನಿಲ್ದಾಣದಿಂದ ಮರಳುತ್ತಿದ್ದ ರೈಲಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದು, 59 ಮಂದಿ ಯಾತ್ರಿಕರು ಸುಟ್ಟು ಕರಕಲಾದರು. ಅದರ ಬೆನ್ನಲ್ಲೇ ದೇಶದ ವಿವಿಧೆಡೆ ಭುಗಿಲೆದ್ದ ವ್ಯಾಪಕ ಹಿಂಸಾಚಾರದಲ್ಲಿ 790 ಮುಸ್ಲಿಮರು ಮತ್ತು 254 ಹಿಂದೂಗಳು ಪ್ರಾಣ ಕಳೆದುಕೊಂಡರು. ಇದು ಇಂದಿಗೂ ಗುಜರಾತ್ ಹತ್ಯಾಕಾಂಡ ಎಂದೇ ಕರೆಯಲಾಗುತ್ತಿದೆ. ಇದು ಇತಿಹಾಸ.

ಗೋಧ್ರಾ ದುರ್ಘಟನೆಯ ಕುರಿತು ನಾನಾವತಿ-ಮೆಹ್ತಾ ಆಯೋಗಗಳು ವಿಚಾರಣೆ ನಡೆಸಿದವು. 31 ಮುಸ್ಲಿಮರು ತಪ್ಪಿತಸ್ಥರು ಎಂದು ವರದಿ ಬಂತು.‌ ತಪ್ಪಿತಸ್ಥರ ಶಿಕ್ಷೆಯ ತೀರ್ಪನ್ನು ಗುಜರಾತ್ ಹೈಕೋರ್ಟ್ ಎತ್ತಿ ಹಿಡಿಯಿತು.

ಈ ಇತಿಹಾಸದ ಘಟನೆಯ ನಂತರ ನೀವು ಹೇಳ ಬಯತ್ತಿರುವುದೇನು? ಕರ್ನಾಟಕದಲ್ಲಿ ಮತ್ತೆ ಇಂತಹ ಘಟನೆ ಮರುಕಳಿಸಬಹುದು ಎಂಬ ಮಾಹಿತಿಯೇ ಅಥವಾ ಗುಮಾನಿಯೆ? ಅಲ್ಲದೆ ನೀವು “ಇದರ ಬಗ್ಗೆ ನನಗೆ ಮಾಹಿತಿ ಇದ್ದೇ ಮಾತನಾಡುತ್ತಿದ್ದೇನೆ” ಎಂದೂ ಸಹ ಹೇಳಿದ್ದೀರ.

ನೀವು ಒಬ್ಬ ಹಿರಿಯ ಜವಾಬ್ದಾರಿಯುತ ಕಾಂಗ್ರೆಸ್ ನಾಯಕರಾಗಿ, ಇಂತಹ ಗಂಭೀರ ಮಾಹಿತಿಯನ್ನು ಪತ್ರಿಕಾ ಗೋಷ್ಠಿಯಲ್ಲಿ ಬಹಿರಂಗ ಗೊಳಿಸುವ ಅಗತ್ಯವಿತ್ತೆ? ನಿಮಗೆ ಇದೊಂದು ಗಂಭೀರ ಮಾಹಿತಿ ಎಂದಾಗಿದ್ದರೆ, ನಿಮ್ಮದೇ ಪಕ್ಷದ ಸರ್ಕಾರದ ಗೃಹ ಸಚಿವರಿಗೆ ಮಾಹಿತಿ ನೀಡುವುದರ ಮೂಲಕ ತಕ್ಷಣ ರಾಜ್ಯ ಪೊಲೀಸ್ ಇಲಾಖೆಯನ್ನು ಎಚ್ಚರಿಸಿ, ಗುಪ್ತಚರ ಇಲಾಖೆಯನ್ನು ಸಕ್ರಿಯ ಗೊಳಿಸಬೇಕಿತ್ತು.

ಶಾಂತಿ-ಶಿಸ್ತು ಪಾಲಿಸುವ ವಿಷಯದಲ್ಲಿ ಯಾವುದೇ ಪಕ್ಷದ ನೇತೃತ್ವದ ಸರ್ಕಾರದ ರಾಜಕಾರಣದ ಲೆಕ್ಕಾಚಾರ ಸರಿಯಲ್ಲ.  ಕಾಂಗ್ರೆಸ್ ಪಕ್ಷದೊಳಗಿನ ನಾಯಕರ ಒಳ ಭಿನ್ನಮತ ಬಹಿರಂಗ ಕಾಳಗವಾಗಿ, ಅಯೋಧ್ಯೆ ರಾಮ ಮಂದಿರ ಉದ್ಘಾಟನೆಯ ಸಮಾರಂಭದ ಹಿನ್ನೆಲೆಯಲ್ಲಿ ಅಯೋದ್ಯೆ v/s ಮುಸ್ಲಿಂ ಎಂಬಂತೆ ಬಿಂಬಿಸಿ ಸಮಾಜದಲ್ಲಿ ಶಾಂತಿ ಕದಡುವ ದಾಳವಾಗಿಸುವುದೂ ಸಹ ಅನ್ಯಾಯ.

ಭಾರತೀಯ ಮುಸ್ಲಿಮರು ಬಾಬ್ರಿ ಮಸೀದಿಯ ವಿವಾದದಲ್ಲಿ ಸುಪ್ರೀಂ ಕೋರ್ಟಿನ ತೀರ್ಪನ್ನು ಒಪ್ಪಿಕೊಂಡಿದ್ದಾರೆ. ಸುಪ್ರೀಂ ಕೋರ್ಟಿನ ತೀರ್ಪಿನಂತೆಯೇ ಅಲ್ಲಿ ರಾಮಮಂದಿರ ನಿರ್ಮಾಣವಾಗಿದೆ. ಮುಸ್ಲಿಮರಿಗೆ ಮಾತ್ರವಲ್ಲ ಸೌಹಾರ್ದ ಬಯಸುವ ಎಲ್ಲಾ ಭಾರತೀಯರಿಗೂ ದೇಶದಲ್ಲಿ ಈಗ ಶಾಂತಿ ಬೇಕಾಗಿದೆ.

ಬಿಜೆಪಿ ಪಕ್ಷ ರಾಮ ಮಂದಿರದ ಉದ್ಘಾಟನೆಯನ್ನು ರಾಜಕೀಯಕ್ಕೆ, ಹಿಂದೂಗಳ ವೋಟು ಪಡೆಯುವ ತಂತ್ರಗಾರಿಕೆಗೆ ಬಳಸುತ್ತಿದೆ ಎನ್ನುವುದು ಸ್ಪಷ್ಟ. ಅದನ್ನು ರಾಜಕೀಯವಾಗಿ ವಿರೋಧಿಸುವ ಭರದಲ್ಲಿ, ನೀವು ಅನಗತ್ಯ ಕಾನೂನು ಗೊಂದಲಗಳನ್ನು ಸೃಷ್ಟಿಸುತ್ತಿರುವುದು ಮಾತ್ರ ಅಕ್ಷಮ್ಯ.

ಶಾಂತಿ, ಕಾನೂನು, ಶಿಸ್ತು ಪಾಲನೆ ಸರ್ಕಾರದ ಆದ್ಯ ಕರ್ತವ್ಯವಾಗಿದೆ. ಅದನ್ನು ನಿರ್ವಹಿಸುವಾಗ ಕ್ಷುಲ್ಲಕ ರಾಜಕೀಯ ಹೇಳಿಕೆಗಳನ್ನು ನಿಮ್ಮಂತಹ ಪ್ರಬುದ್ಧರು ನೀಡಬಾರದು. ನೈಜವಾಗಿ ನಿಮ್ಮ ಬಳಿ ಈ ಮಾಹಿತಿ ಇದ್ದರೆ, ದಯವಿಟ್ಟು ಈ ಕೂಡಲೇ ಮುಖ್ಯ ಮಂತ್ರಿಗಳಿಗೆ ಹಾಗೂ ಗೃಹ ಸಚಿವರಿಗೆ ಭೇಟಿಮಾಡಿ ದೂರು ನೀಡಿ.

ಈ ದುರ್ಗಟನೆ ನಡೆಯದೆ ತಡೆಯಲು ನಿಷ್ಠಾವಂತಿಕೆಯಿಂದ ಪ್ರಯತ್ನಿಸಿ. ಅದು ಬಿಟ್ಟು ಇಂತಹ ಊಹ-ಪೋಹ ಬಹಿರಂಗ ಹೇಳಿಕೆಗಳನ್ನು ನೀವು ನೀಡ ಬೇಡಿ. ಜಾತ್ಯತೀತ, ಸೌಹಾರ್ದ, ಸಾಮಾಜಿಕ ನ್ಯಾಯಕ್ಕೆ ಒತ್ತು ನೀಡೋಣ. ವಯಕ್ತಿತ್ವ/ಪಕ್ಷ ರಾಜಕಾರಣಕ್ಕೆ ದೂರ ಇಡೋಣ.

ಇಂತಿ ನಿಮ್ಮ ಸೌಹಾರ್ದ ಗೆಳೆಯ,
ಖಾಸಿಂ ಸಾಬ್ ಎ

Related Posts