ಸಂಸತ್ ಚುನಾವಣೆಯಲ್ಲಿ ಹೊಸ ತಂತ್ರ: ಮುಂದಿನ ವಾರ ಬಿಡುಗಡೆಯಾಗಲಿದೆ ಬಿಜೆಪಿಯ ಮೊದಲ ಅಭ್ಯರ್ಥಿ ಪಟ್ಟಿ!? » Dynamic Leader
October 21, 2024
ರಾಜಕೀಯ

ಸಂಸತ್ ಚುನಾವಣೆಯಲ್ಲಿ ಹೊಸ ತಂತ್ರ: ಮುಂದಿನ ವಾರ ಬಿಡುಗಡೆಯಾಗಲಿದೆ ಬಿಜೆಪಿಯ ಮೊದಲ ಅಭ್ಯರ್ಥಿ ಪಟ್ಟಿ!?

ಇದೇ ತಿಂಗಳು 15 ರಿಂದ 22ರ ನಡುವೆ ಯಾವುದೇ ದಿನದಲ್ಲಿ ಭಾರತೀಯ ಜನತಾ ಪಕ್ಷ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪ್ರಕಟಿಸುವ ನಿರೀಕ್ಷೆಯಿದೆ.

ಸಂಸತ್ ಚುನಾವಣೆ ಸಮೀಪಿಸುತ್ತಿದೆ. ಮುಖ್ಯ ಚುನಾವಣಾ ಆಯೋಗದಿಂದ ಚುನಾವಣಾ ಕಾರ್ಯ ಚುರುಕುಗೊಂಡಿದೆ. ಇದೇ ತಿಂಗಳು 22 ರಂದು ಅಯೋಧ್ಯೆ ಮಂದಿರದ ಶಂಕುಸ್ಥಾಪನೆ ಮತ್ತು ಫೆಬ್ರವರಿ 1 ರಂದು ಮಧ್ಯಂತರ ಬಜೆಟ್ ನಂತರ ಯಾವುದೇ ಸಮಯದಲ್ಲಿ ಚುನಾವಣಾ ದಿನಾಂಕವನ್ನು ಘೋಷಿಸಬಹುದು ಎಂದು ನಿರೀಕ್ಷಿಸಲಾಗಿದೆ.

ಮೇ ತಿಂಗಳಿನಲ್ಲಿ ನೂತನ ಸರ್ಕಾರ ಅಧಿಕಾರ ಸ್ವೀಕರಿಸುವ ನಿರೀಕ್ಷೆಯಿರುವುದರಿಂದ ಅವಧಿಗೂ ಮುನ್ನ ಚುನಾವಣೆ ನಡೆಯುವ ಸಾಧ್ಯತೆಯೂ ಇದೆ ಎಂದು ಹೇಳಲಾಗುತ್ತಿದೆ. ಏತನ್ಮಧ್ಯೆ, ಆಡಳಿತಾರೂಢ ಭಾರತೀಯ ಜನತಾ ಪಕ್ಷವು ಈ ಬಾರಿ 400 ರಿಂದ 450 ಸ್ಥಾನಗಳನ್ನು ಗಳಿಸುವ ಗುರಿ ಹೊಂದಿದೆ. ಅಂದರೆ ಚಲಾವಣೆಯಾಗುವ ಒಟ್ಟು ಮತಗಳ ಪೈಕಿ ಶೇ.50ರಷ್ಟು ಮತಗಳನ್ನು ವಶಪಡಿಸಿಕೊಳ್ಳುವ ಸಲುವಾಗಿ ಪ್ರಧಾನಿ ಮೋದಿ ಗಂಭೀರವಾಗಿ ಚಿಂತಿಸುತ್ತಿದ್ದಾರೆ.

ಇದಕ್ಕಾಗಿ ಭಾರತೀಯ ಜನತಾ ಪಕ್ಷವು 3 ವಿಭಾಗಗಳಾಗಿ ವಿಂಗಡಿಸಲಾದ ಎಲ್ಲಾ 543 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಆಯ್ಕೆ ನಡೆಸುತ್ತಿದೆ.  ಇದರಲ್ಲಿ 150 ರಿಂದ 170 ಕ್ಷೇತ್ರಗಳನ್ನು ದುರ್ಬಲ ಕ್ಷೇತ್ರಗಳೆಂದು ಪರಿಗಣಿಸಲಾಗಿದೆ.

ಬಿಜೆಪಿಗೆ ಗೆಲುವಿನ ಸಾಧ್ಯತೆಗಳು ಕಡಿಮೆ ಇರುವ ತಮಿಳುನಾಡು, ಕೇರಳ, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ಒಡಿಶಾ, ಉತ್ತರ ಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ ಮುಂತಾದ 9 ಕ್ಷೇತ್ರಗಳು ಭಾರತೀಯ ಜನತಾ ಪಕ್ಷಕ್ಕೆ ದುರ್ಬಲವೆಂದು ಪರಿಗಣಿಸಲಾಗಿದೆ. ತಮಿಳುನಾಡಿನಲ್ಲಿ 36, ಆಂಧ್ರಪ್ರದೇಶದಲ್ಲಿ 25, ಮಹಾರಾಷ್ಟ್ರದಲ್ಲಿ 24, ಪಶ್ಚಿಮ ಬಂಗಾಳದಲ್ಲಿ 23, ಕೇರಳದಲ್ಲಿ 20, ಉತ್ತರ ಪ್ರದೇಶದಲ್ಲಿ 12, ಬಿಹಾರದಲ್ಲಿ 12, ಒಡಿಶಾದಲ್ಲಿ 12 ಮತ್ತು ತೆಲಂಗಾಣದಲ್ಲಿ 14 ಅತ್ಯಂತ ದುರ್ಬಲ ಕ್ಷೇತ್ರಗಳೆಂದು ಪರಿಗಣಿಸಲಾಗಿದೆ.

ಈ ಪಟ್ಟಿಗೆ ಇನ್ನೂ 20 ಕ್ಷೇತ್ರಗಳನ್ನು ಸೇರಿಸಿ ಒಟ್ಟು 160 ಕ್ಷೇತ್ರಗಳ ಮೇಲೆ ಹೆಚ್ಚಿನ ಗಮನಕೊಡಲು ಬಿಜೆಪಿ ಚಿಂತಿಸುತ್ತಿದೆ. ಈ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಸಿದ್ಧಪಡಿಸುವ ಕೆಲಸವೂ ಸದ್ದಿಲ್ಲದೇ ನಡೆಯುತ್ತಿದೆ; ಎನ್ನಲಾಗುತ್ತಿದೆ. ಉತ್ತರದ ರಾಜ್ಯಗಳಲ್ಲಿ ಮಕರ ಸಂಕ್ರಾಂತಿಯವರೆಗೆ ಯಾವುದೇ ಒಳ್ಳೆಯ ಕೆಲಸವನ್ನು ಪ್ರಾರಂಭಿಸುವುದಿಲ್ಲ. 15ರ ನಂತರವೇ ಹೊಸ ಕಾರ್ಯಗಳನ್ನು ತೊಡಗಿಸಿಕೊಳ್ಳುತ್ತಾರೆ. ಹಾಗಾಗಿ ಭಾರತೀಯ ಜನತಾ ಪಕ್ಷ ಮುಂದಿನ ವಾರ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡುವ ಸಾಧ್ಯತೆ ಇದೆ ಎಂಬ ವರದಿಗಳಿವೆ.

ಅದರಲ್ಲೂ 15 ರಿಂದ 22ರ ನಡುವೆ ಯಾವುದೇ ದಿನದಲ್ಲಿ ಭಾರತೀಯ ಜನತಾ ಪಕ್ಷ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪ್ರಕಟಿಸುವ ನಿರೀಕ್ಷೆಯಿದೆ. ಮುಂದಿನ ಹಂತದಲ್ಲಿ ಭಾರತೀಯ ಜನತಾ ಪಕ್ಷವು ಫೆಬ್ರವರಿ 14 ರೊಳಗೆ ಅಭ್ಯರ್ಥಿಗಳ 2ನೇ ಪಟ್ಟಿಯನ್ನು ಪ್ರಕಟಿಸಲಿದೆ ಎಂದು ಬಿಹಾರ ರಾಜ್ಯ ಬಿಜೆಪಿ ಹಿರಿಯ ಮುಖಂಡರೊಬ್ಬರು ಹೇಳಿದ್ದಾರೆ.

ಮೊದಲ ಮತ್ತು 2ನೇ ಪಟ್ಟಿಯ ಅಭ್ಯರ್ಥಿಗಳಲ್ಲಿ ಶೇ.70 ರಿಂದ ಶೇ.75 ರಷ್ಟು ಹೊಸ ಅಭ್ಯರ್ಥಿಗಳಾಗಿರುತ್ತಾರೆ ಎಂದು ಬಿಜೆಪಿ ವಲಯದಲ್ಲಿ ಹೇಳಲಾಗುತ್ತಿದೆ. ಕರ್ನಾಟಕದಲ್ಲೂ ಅಭ್ಯರ್ಥಿಗಳ ಆಯ್ಕೆ ಸದ್ದು ಮಾಡದೆ ನಡೆಯುತ್ತಿದೆ ಎನ್ನಲಾಗಿದೆ. ಕರ್ನಾಟಕ ಬಿಜೆಪಿ ನಾಯಕರಿಗೆ ತಿಳಿಯದಂತೆ ಕೆಲವು ಪಟ್ಟಿಗಳನ್ನು ಕೇಂದ್ರ ವರಿಷ್ಠರು ಸಿದ್ಧಪಡಿಸಿದ್ದಾರೆ ಎಂದೂ ಹೇಳಲಾಗುತ್ತಿದೆ.

Related Posts