ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
Muda Scam Archives » Dynamic Leader
November 21, 2024
Home Posts tagged Muda Scam
ರಾಜ್ಯ

ಮೈಸೂರು: ಮುಡಾ (ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ) ನಿವೇಶನ ಹಂಚಿಕೆ ಪ್ರಕರಣದಲ್ಲಿ ಆರೋಪಿಯಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಮೈಸೂರಿನ ಲೋಕಾಯುಕ್ತ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗಿದ್ದಾರೆ.

ಮುಡಾ ನಿವೇಶನ ಹಂಚಿಕೆ ಪ್ರಕರಣ ಸಂಬಂಧ ನವೆಂಬರ್ 6 ರಂದು ಮೈಸೂರಿನ ಲೋಕಾಯುಕ್ತ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಲೋಕಾಯುಕ್ತ ಪೊಲೀಸರು ನೋಟಿಸ್ ನೀಡಿದ್ದರು.

ಈ ಹಿನ್ನೆಲೆಯಲ್ಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಬೆಳಗ್ಗೆ 10 ಗಂಟೆಗೆ ಮೈಸೂರಿನ ಲೋಕಾಯುಕ್ತ ಕಚೇರಿಗೆ ಆಗಮಿಸಿದ್ದು, ಮುಡಾ ನಿವೇಶನ ಹಂಚಿಕೆ ಸಂಬಂಧ ವಿಚಾರಣೆ ಎದುರಿಸುತ್ತಿದ್ದಾರೆ. ಈ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ 40 ವರ್ಷದ ರಾಜಕೀಯ ಜೀವನದಲ್ಲಿ ಮೊದಲ ಬಾರಿಗೆ ಪ್ರಕರಣವೊಂದರ ಆರೋಪಿಯಾಗಿ ವಿಚಾರಣೆ ಎದುರಿಸುತ್ತಿದ್ದಾರೆ.

ಪ್ರಕರಣ ಸಂಬಂಧ ಲೋಕಾಯುಕ್ತ ಪೊಲೀಸರು ಈಗಾಗಲೇ ಎಲ್ಲಾ ಆರೋಪಿಗಳ ವಿಚಾರಣೆ ಮುಗಿಸಿದ್ದು, ಇಂದು ಸಿದ್ದರಾಮಯ್ಯನವರನ್ನು ವಿಚಾರಣೆ ಒಳಪಡಿಸಿದ್ದಾರೆ. ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೊದಲನೇ ಆರೋಪಿಯಾಗಿದ್ದಾರೆ. 2ನೇ ಆರೋಪಿ ಅವರ ಪತ್ನಿ ಪಾರ್ವತಿ, 3ನೇ ಆರೋಪಿ ಮಲ್ಲಿಕಾರ್ಜುನ ಹಾಗೂ 4ನೇ ಅರೋಪಿ ದೇವರಾಜು ಸೇರಿ ಹಲವರ ವಿಚಾರಣೆಯನ್ನು ಲೋಕಾಯುಕ್ತ ನಡೆಸಿದೆ.

ಮುಡಾ ಹಗರಣ ಸಂಬಂಧ ಮೈಸೂರಿನ ಲೋಕಾಯುಕ್ತ ಪೊಲೀಸರು ಮುಖ್ಯಮಂತ್ರಿ ಸಿದ್ದರಾಮಯ್ಯ, ಅವರ ಪತ್ನಿ ಪಾರ್ವತಿ, ಸೋದರ ಮಾವ ಮಲ್ಲಿಕಾರ್ಜುನ ಸ್ವಾಮಿ ಮತ್ತು ದೇವರಾಜು ಅವರ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ ಎಂಬುದು ಗಮನಾರ್ಹ.

ರಾಜ್ಯ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಪರ ಇಂದು ಕರ್ನಾಟಕ ಹೈಕೋರ್ಟ್ ನಲ್ಲಿ ಸಲ್ಲಿಸಿದ್ದ ರಿಟ್ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ನಾಗಪ್ರಸನ್ನ ಅವರಿದ್ದ ಪೀಠ ಪ್ರಕರಣದ ವಿಚಾರಣೆಯನ್ನು ಆಗಸ್ಟ್ 29ಕ್ಕೆ ಮುಂದೂಡಿದೆ.

ಇದೇ ವೇಳೆ ಮುಡಾ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಆದೇಶಿಸುವಂತೆ ಸಲ್ಲಿಕೆಯಾಗಿರುವ ಅರ್ಜಿಗಳ ಆದೇಶವನ್ನು ಆಗಸ್ಟ್ 29ಕ್ಕೆ ಮುಂದೂಡುವಂತೆ ಜನಪ್ರತಿನಿಧಿಗಳ ಕೋರ್ಟ್ ಗೆ ಹೈಕೋರ್ಟ್ ಸೂಚಿಸಿದ್ದು ಈ ಮೂಲಕ ಸಿದ್ದರಾಮಯ್ಯ ಅವರಿಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಪರ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ವಾದ ಮಂಡಿಸಿದರೆ, ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಪರ ವಕೀಲ, ಕೇಂದ್ರ ಸರ್ಕಾರದ ಸಾಲಿಸಿಟರ್ ಜನರಲ್ ಆಗಿರುವ ತುಷಾರ್ ಮೆಹ್ತಾ ಅವರು ವಾದ ಮಂಡಿಸಿದರು. ವಾದ-ಪ್ರತಿವಾದ ಆಲಿಸಿದ ನಂತರ ನ್ಯಾಯಮೂರ್ತಿಗಳು ಮಧ್ಯಂತರ ಆದೇಶ ನೀಡಿದರು.

ಸಾಮಾಜಿಕ ಹೋರಾಟಗಾರರಾದ ಸ್ನೇಹಮಯಿ ಕೃಷ್ಣ ಮತ್ತು ಟಿ.ಜೆ.ಅಬ್ರಹಾಂ ಅವರು ಸಲ್ಲಿಸಿರುವ ದೂರುಗಳ ಮುಂದಿನ ವಿಚಾರಣೆಯನ್ನು ಆಗಸ್ಟ್ 20 ಮತ್ತು 21ರಂದು ವಿಶೇಷ ನ್ಯಾಯಾಲಯದಲ್ಲಿ ಕ್ರಮವಾಗಿ ನಡೆಯಲಿದೆ ಎಂದು ಅರ್ಜಿದಾರರ ಪರ ವಕೀಲರು ಸೂಚಿಸಿದ ನಂತರ ಮಧ್ಯಂತರ ಆದೇಶವನ್ನು ನೀಡಲಾಗಿದೆ. ಸಿದ್ದರಾಮಯ್ಯ ಸಲ್ಲಿಸಿರುವ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ದೂರುದಾರರಾದ ಪ್ರತಿವಾದಿಗಳಿಗೆ ಕಾಲಾವಕಾಶ ನೀಡಲಾಗಿದೆ.

ರಾಜಕೀಯ

ಮೈಸೂರು: ಇಂದು ಮೈಸೂರಿನ ತಮ್ಮ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಮುಡಾ ಪ್ರಕರಣದಲ್ಲಿ ರಾಜ್ಯಪಾಲರು ನೀಡಿರುವ ನೋಟೀಸಿಗೆ ಈಗಾಗಲೇ ಉತ್ತರ ನೀಡಲಾಗಿದ್ದು, ಅದನ್ನು ರಾಜಪಾಲರು ಒಪ್ಪಿಕೊಳ್ಳುವ ನಂಬಿಕೆಯಿದೆ ಎಂದು ಹೇಳಿದರು.

“ಮುಡಾ ವಿಷಯದಲ್ಲಿ ಸಂಪೂರ್ಣವಾಗಿ ಕಾನೂನು ಪ್ರಕಾರ ನಡೆದಿದೆ. ನಿವೇಶನ ಹಂಚಿಕೆಯಲ್ಲಿ ಯಾವುದೇ ರೀತಿಯ ಪ್ರಭಾವವನ್ನು ನಾನು ಬೀರಿಲ್ಲ. ಕಾನೂನು ಪ್ರಕಾರವಾಗಿರುವ ಹಿನ್ನೆಲೆಯಲ್ಲಿಯೇ ಬಿಜೆಪಿ ಸರ್ಕಾರದ ಅವಧಿಯಲ್ಲಿ 2021ರಲ್ಲಿ ನನ್ನ ಪತ್ನಿಗೆ ಬದಲಿ ನಿವೇಶನ ನೀಡಲಾಗಿದೆ” ಎಂದು ಹೇಳಿದರು.

“ಮುಡಾ ಅಕ್ರಮವಾಗಿ ನಮ್ಮ ಜಮೀನನ್ನು ಸ್ವಾಧೀನ ಪಡಿಸಿಕೊಂಡಿರುವ ಹಿನ್ನೆಲೆಯಲ್ಲಿ ಬದಲಿ ನಿವೇಶನ ಕೋರಿ 2014ರಲ್ಲಿ ನಾನು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ನನ್ನ ಪತ್ನಿ ಅರ್ಜಿ ಸಲ್ಲಿಸಿದ್ದರು. ಆ ಸಂದರ್ಭದಲ್ಲಿ ನಾನು ಈ ಕುರಿತು ಯಾವುದೇ ಕ್ರಮಗಳನ್ನು ಕೈಗೊಂಡಿರಲಿಲ್ಲ” ಎಂದು ಹೇಳಿದರು.

“ಬಿಜೆಪಿ ಮತ್ತು ಜೆಡಿಎಸ್‌ ಪಕ್ಷಗಳು ಸರ್ಕಾರವನ್ನು ಅಸ್ಥಿರಗೊಳಿಸುವ ಉದ್ದೇಶದಿಂದ ನನ್ನ ಮೇಲೆ ಆಪಾದನೆಗಳನ್ನು ಮಾಡುತ್ತಿವೆ. ಆಪರೇಶನ್‌ ಕಮಲ ನಡೆಸಲು ಪ್ರಯತ್ನಿಸಿದರೂ, ಸರ್ಕಾರ ಅಸ್ಥಿರಗೊಳಿಸಲು ಸಾಧ್ಯವಾಗದ ಕಾರಣ ಇದನ್ನು ಮಾಡುತ್ತಿದ್ದಾರೆ. ನಮ್ಮ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಕಳೆದ ಒಂದು ವರ್ಷದ ಅವಧಿಯಲ್ಲಿ ಯಶಸ್ವಿಯಾಗಿ ಜಾರಿಗೊಳಿಸಿ, ಬಡವರ ಪರವಾಗಿ ಕೆಲಸ ಮಾಡುತ್ತಿರುವುದನ್ನು ಸಹಿಸಲು ಅವರಿಗೆ ಸಾಧ್ಯವಾಗುತ್ತಿಲ್ಲ” ಎಂದು ಕಿಡಿಕಾರಿದರು.

“ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಲು ಸಾಧ್ಯವಿಲ್ಲ ಎಂದು ಸ್ವತಃ ಪ್ರಧಾನಿ ನರೇಂದ್ರ ಮೋದಿಯವರೇ ಹೇಳಿದ್ದರು. ಮೊದಲ ದಿನದಿಂದಲೂ ಗ್ಯಾರಂಟಿ ಯೋಜನೆ ವಿರುದ್ಧವಾಗಿ ಅವರು ಮಾತನಾಡುತ್ತಿದ್ದಾರೆ. ಒಂದು ವೇಳೆ ಗ್ಯಾರಂಟಿ ಯೋಜನೆ ಆರಂಭಿಸಿದರೂ, ಅದನ್ನು ನಿಲ್ಲಿಸಿ ಬಿಡುತ್ತಾರೆ ಎಂದಿದ್ದರು. ಆದರೆ ಗ್ಯಾರಂಟಿ ಯೋಜನೆಗಳ ಯಶಸ್ವಿ ಅನುಷ್ಠಾನದಿಂದ ಅವರು ಹತಾಶರಾಗಿದ್ದಾರೆ” ಎಂದು ಹೇಳಿದರು.

“ಈ ವಯಸ್ಸಿನಲ್ಲಿ ಪೋಕ್ಸೋ ಪ್ರಕರಣದಲ್ಲಿ ಸಿಲುಕಿರುವ ಯಡಿಯೂರಪ್ಪ ಅವರು ನ್ಯಾಯಾಲಯದ ದಯೆಯಿಂದ ಜೈಲು ಪಾಲಾಗದೆ ಬಚಾವಾಗಿದ್ದಾರೆ. 82ರ ವಯಸ್ಸಿನಲ್ಲಿ ಇಂತಹ ಪ್ರಕರಣದಲ್ಲಿ ಚಾರ್ಜ್‌ಶೀಟ್‌ ಹಾಕಿಸಿಕೊಂಡಿರುವ ಯಡಿಯೂರಪ್ಪ ಅವರಿಗೆ ನನ್ನ ಬಗ್ಗೆ ಮಾತನಾಡುವ ಯಾವುದೇ ನೈತಿಕತೆ ಇಲ್ಲ. ಅವರು ನೈತಿಕತೆ ಇದ್ದರೆ ಸಾರ್ವಜನಿಕ ಜೀವನದಿಂದ ನಿವೃತ್ತರಾಗಬೇಕು. ಅವರ ವಿರುದ್ಧ 20ಕ್ಕೂ ಅಧಿಕ ಪ್ರಕರಣಗಳು ಇದ್ದು, ಈ ಕುರಿತು ವಿವರವಾದ ಮಾಹಿತಿಯನ್ನು ನೀಡಲಿದ್ದೇನೆ” ಎಂದು ಗುಡುಗಿದರು.

ಯಡಿಯೂರಪ್ಪ ಅಧಿಕಾರದ ಅವಧಿಯಲ್ಲಿ ಚೆಕ್‌ ಮೂಲಕ ಲಂಚದ ಹಣವನ್ನು ಪಡೆದುಕೊಂಡಿದ್ದರು. ಅಕ್ರಮವಾಗಿ ಡಿನೋಟಿಫಿಕೇಶನ್‌ ಮಾಡಿದ್ದರು. ನಾವು ಅಂತಹ ಯಾವುದೇ ಅಕ್ರಮಗಳನ್ನು ಎಸಗಿಲ್ಲ. ವಿರೋಧ ಪಕ್ಷಗಳು ಸುಳ್ಳನ್ನು ನಿರಂತರವಾಗಿ ಹೇಳುವ ಮೂಲಕ ಸತ್ಯ ಮಾಡಲು ಸಾಧ್ಯವಿಲ್ಲ. ಸತ್ಯಕ್ಕೇ ಅಂತಿಮ ಜಯ ಎಂಬ ವಿಶ್ವಾಸವಿದೆ” ಎಂದು ಹೇಳಿದರು.

ರಾಜಕೀಯ

ಮೈಸೂರು: “ಇಂದು ಮೈಸೂರು ವಿಮಾನ ನಿಲ್ದಾಣದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು “ರಾಜ್ಯಪಾಲರು ಸಂಪೂರ್ಣವಾಗಿ ಕೇಂದ್ರ ಬಿಜೆಪಿ ಸರ್ಕಾರದ ಹಾಗೂ ಬಿಜೆಪಿ, ಜೆಡಿಎಸ್ ಪಕ್ಷದ ಕೈಗೊಂಬೆಯಾಗಿ ಕೆಲಸ ಮಾಡುತ್ತಿದ್ದಾರೆ” ಎಂದು ಅಪಾದಿಸಿದರು.

“ಶೋಕಾಸ್ ನೋಟೀಸು ಕೊಟ್ಟಿರುವುದು ಕಾನೂನುಬಾಹಿರ ಮತ್ತು ಸಂವಿಧಾನಕ್ಕೆ ವಿರುದ್ಧವಾಗಿದೆ. ಕೇಂದ್ರ ಸರ್ಕಾರ ರಾಜಭವನವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಚುನಾಯಿತ ಸರ್ಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿದೆ” ಎಂದು ಕಿಡಿಕಾರಿದರು.

“ನಿನ್ನೆ ನಡೆದ ಸಚಿವ ಸಂಪುಟ ಸಭೆಗೆ ಕೆಟ್ಟ ಸಾಂಪ್ರದಾಯವಾಗುತ್ತದೆ ಎಂದು ನಾನು ಸಭೆಗೆ ಹೋಗದೇ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಸಚಿವ ಸಂಪುಟ ಸಭೆ ನಡೆಸಲು ನೇಮಿಸಲಾಗಿತ್ತು. ಶೋಕಾಸ್ ನೋಟಿಸ್ ಬಗ್ಗೆ ಸುದೀರ್ಘ ಚರ್ಚೆ ಮಾಡಿ, ನೋಟೀಸು ನೀಡಿರುವುದು ಕಾನೂನು ಬಾಹಿರವಾಗಿದ್ದು, ನೋಟೀಸನ್ನು ಹಿಂಪಡೆಯಬೇಕೆಂದು ನಿರ್ಧರಿಸಲಾಗಿದೆ” ಎಂದು ಹೇಳಿದರು.

“ಕೆ.ಜೆ.ಅಬ್ರಹಾಂ ಅವರ ಇತಿಹಾಸ ನೋಡಿದರೆ ಅವರೊಬ್ಬ ಬ್ಲಾಕ್ ಮೇಲರ್ ಎಂದು ಗೊತ್ತಾಗುತ್ತದೆ. ಆತನ ದೂರಿನ ಮೇಲೆ ಕ್ರಮ ಕೈಗೊಂಡಿರುವುದು ಕಾನೂನು ಬಾಹಿರವಾದ ವಿಚಾರ. ಆತ ಈ ರೀತಿ ಅನೇಕ ಜನರ ಮೇಲೆ ದೂರುಗಳನ್ನು ನೀಡಿದ್ದಾರೆ.

ಅಬ್ರಹಾಂ ಅವರು ಜುಲೈ 26 ರಂದು ಬೆಳಿಗ್ಗೆ 11.30ಕ್ಕೆ ದೂರು ನೀಡಿದ್ದು, ಅಂದೇ ರಾಜ್ಯಪಾಲರು ಶೋಕಾಸ್ ನೋಟಿಸ್ ಕೊಟ್ಟಿದ್ದಾರೆ. ಒಂದೇ ದಿನದಲ್ಲಿ ಕಾನೂನು ವಿಷಯವನ್ನು ಒಳಗೊಂಡ ವಿಚಾರವನ್ನು, 136 ಜನ ಶಾಸಕರ ಬೆಂಬಲದಿಂದ ಆಯ್ಕೆಯಾದ ಮುಖ್ಯಮಂತ್ರಿಗೆ ನೋಟೀಸು ಕೊಡುವಾಗ ಎಲ್ಲಾ ಕಾನೂನನ್ನು ಕೂಲಂಕಷವಾಗಿ ಪರಿಶೀಲಿಸಬೇಕು. ಏನು ನೋಡದೇ ಆತುರವಾಗಿ ನಿರ್ಧಾರ ಮಾಡಿದ್ದಾರೆ. ಅಂದೇ ನೋಟೀಸು ನೀಡಿದ್ದಾರೆ” ಎಂದು ಕಿಡಿಕಾರಿದರು.

“ಮುಖ್ಯಮಂತ್ರಿಗಳ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಕ್ ಅವರಿಗೆ ವಿಶೇಷ ಕರ್ತವ್ಯಾಧಿಕಾರಿ ಪ್ರಭು ಶಂಕರ್ ಎಂಬುವರು ಕರೆ ಮಾಡಿ ಶೋಕಾಸ್ ನೋಟಿಸ್ ಸಿದ್ಧವಿದೆ ತೆಗೆದುಕೊಳ್ಳಬೇಕು ಎಂದಿದ್ದಾರೆ. ರಾತ್ರಿಯಾಗಿರುವುದರಿಂದ ಅದನ್ನು ಪಡೆಯಲಾಗಲಿಲ್ಲ. ಮಾರನೇ ದಿನ 2.00 ಗಂಟೆಗೆ ನೋಟೀಸನ್ನು ಆತುರವಾಗಿ ಕೊಟ್ಟಿದ್ದಾರೆ.

ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್

ಶಶಿಕಲಾ ಜೊಲ್ಲೆ, ಮುರುಗೇಶ್ ನಿರಾಣಿ, ಜನಾರ್ಧನ್ ರೆಡ್ಡಿಯವರುಗಳ ಮೇಲೆ ವರ್ಷಗಟ್ಟಲೇ ಇಂದ ದೂರಿದೆ. ಅವರ ಮೇಲೆ ಏಕೆ ಕ್ರಮ ತೆಗೆದುಕೊಂಡಿಲ್ಲ? ನನ್ನ ತಪ್ಪು ಏನೂ ಇಲ್ಲದೆ ಇದ್ದರೂ ಅನಗತ್ಯವಾಗಿ ಈ ರೀತಿ ಮಾಡುತ್ತಿದ್ದಾರೆ” ಎಂದು ಆಕ್ರೋಶ ಹೊರಹಾಕಿದರು.

“ರಾಜ್ಯಪಾಲರಿಗೆ ಸಲಹೆ ನೀಡಬೇಕಿರುವುದು ನಮ್ಮ ಮಂತ್ರಿಮಂಡಲದವರು; ನಾವು ಸಲಹೆ ನೀಡಿಲ್ಲ. ಮುಖ್ಯ ಕಾರ್ಯದರ್ಶಿಗಳು ವಿವರವಾದ ಪತ್ರವನ್ನು ಜುಲೈ 26 ರಂದು ಸಂಜೆ 6.30 ಗಂಟೆಗೆ ರಾಜ್ಯಪಾಲರಿಗೆ ತಲುಪಿಸಿದ್ದಾರೆ. ಅದನ್ನೂ ಅವರು ನೋಡಿಲ್ಲ. ಮೂಡಾ ಪ್ರಕರಣದ ಬಗ್ಗೆ ನ್ಯಾಯಾಂಗ ಆಯೋಗವನ್ನು ಜುಲೈ 14 ರಂದು ಸರ್ಕಾರ ರಚಿಸಿದೆ; ಆಯೋಗದ ವರದಿಯನ್ನು ನಿರೀಕ್ಷಿಸಲಾಗಿದೆ. ತನಿಖೆ ನಡೆಸಿ ತಪ್ಪುಗಳಾಗಿದ್ದರೆ ವರದಿ ಸಲ್ಲಿಸುತ್ತಾರೆ. ಅದನ್ನೂ ಪರಿಗಣಿಸದೆ ರಾಜ್ಯಪಾಲರು ನೋಟೀಸು ನೀಡಿದ್ದಾರೆ” ಎಂದು ಬೇಸರ ವ್ಯಕ್ತಪಡಿಸಿದರು.

“ಶಶಿಕಲಾ ಜೊಲ್ಲೆ, ಮುರುಗೇಶ್ ನಿರಾಣಿ, ಜನಾರ್ಧನ್ ರೆಡ್ಡಿಯವರುಗಳ ಮೇಲೆ ವರ್ಷಗಟ್ಟಲೇ ಇಂದ ದೂರಿದೆ. ಅವರ ಮೇಲೆ ಏಕೆ ಕ್ರಮ ತೆಗೆದುಕೊಂಡಿಲ್ಲ? ನನ್ನ ತಪ್ಪು ಏನೂ ಇಲ್ಲದೆ ಇದ್ದರೂ ಅನಗತ್ಯವಾಗಿ ಈ ರೀತಿ ಮಾಡುತ್ತಿದ್ದಾರೆ” ಎಂದು ಹೇಳಿದರು.

“ರಾಜ್ಯಪಾಲರ ನೋಟೀಸಿನಿಂದ ಆರ್.ಅಶೋಕ್ ಅವರು ಹೆದರಿರಬಹುದು, ನನಗೆ ಯಾಕೆ ಹೆದರಿಕೆಯಾಗಬೇಕು? ಕಾನೂನಿನ ರೀತ್ಯಾ ಅವರು ನೋಟೀಸು ನೀಡಿಲ್ಲ. ತಪ್ಪು ಮಾಡಿದ್ದರೆ ಹೆದರಬೇಕು. ನಾನು ತಪ್ಪು ಮಾಡಿಲ್ಲ” ಎಂದು ಪುನರುಚ್ಚಿಸಿದರು.

“ಬಿಜೆಪಿ ಪಾದಯಾತ್ರೆ ಮಾಡುವ ಬಗ್ಗೆ ನಮ್ಮ ಅಭ್ಯಂತರವಿಲ್ಲ. ಕೇಂದ್ರ ಸಚಿವರು ಹಾಗೂ ಜೆಡಿಎಸ್ ಅಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಅವರು ಈ ಪ್ರಕರಣದಲ್ಲಿ ಏನೂ ಇಲ್ಲ ಎಂದು ಪಾದಯಾತ್ರೆ ಬೇಡ ಎಂದರು. ಮಳೆ ಹೆಚ್ಚಾಗಿದೆ, ಜಲಾಶಯಗಳು ತುಂಬಿ ಪ್ರವಾಹ ಬಂದಿದೆ ಅದರ ಕಡೆಗೆ ಗಮನ ನೀಡಬೇಕೆಂದು ಹೇಳಿದರು. ಈಗ ಅದು ಮರೆತುಹೋಯಿತೇ? ಹಾಗಾದರೆ ಅವರು ಈಗ ಸ್ವ ಇಚ್ಛೆಯಿಂದ ಮಾಡುತ್ತಿಲ್ಲ ಎಂದಾಯಿತು” ಎಂದು ಲೇವಡಿ ಮಾಡಿದರು.

“ಮಳೆಯಿಂದ ಮನೆ ಬಿದ್ದಿರುವುದು, ರಸ್ತೆ ಹಾಳಾಗಿರುವುದು, ಸೇತುವೆಗಳು, ವಿದ್ಯುತ್ ಕಂಬಗಳು ಬಿದ್ದಿರುವುದ್ದರ ಬಗ್ಗೆ ವರದಿ ತರಿಸಲಾಗುತ್ತಿದೆ. ಈ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಮಾಡಲಾಗಿದ್ದು, ಎಸ್.ಡಿ.ಆರ್.ಎಫ್ ಮಾರ್ಗಸೂಚಿ ಪ್ರಕಾರ ಎಷ್ಟು ಕೊಡಬೇಕೋ ಅಷ್ಟು ಪರಿಹಾರ ನೀಡಿ ಮನೆಯನ್ನೂ ಕಟ್ಟಿಕೊಡಲಾಗುವುದು” ಎಂದು ಮಳೆ ಸಂತ್ರಸ್ತರಿಗೆ ಭರವಸೆ ನೀಡಿದರು.

ರಾಜಕೀಯ

ಬೆಂಗಳೂರು: ಸುಳ್ಳು ಹೇಳುವುದು ನಿಮಗೆ ಅಭ್ಯಾಸವೋ, ಆಚಾರವೋ, ಚಾಳಿಯೋ ಗೊತ್ತಿಲ್ಲ. ಹಸಿಹಸಿ ಸುಳ್ಳು ಹೇಳುತ್ತಿರುವ ನಿಮ್ಮಲ್ಲಿ ನೈತಿಕತೆ ಸತ್ತಿದೆ. ಆರೋಪಿ ಸ್ಥಾನದಲ್ಲಿರುವ ನೀವು ನನ್ನ ಬಗ್ಗೆ, ನನ್ನ ತಂದೆಯವರ ಬಗ್ಗೆ ಆಡುತ್ತಿರುವ ಸುಳ್ಳುಗಳು ನಿಮ್ಮ ಯೋಗ್ಯತೆಗೆ ತಕ್ಕುದಲ್ಲ ಸಿದ್ದರಾಮಯ್ಯ ನವರೇ.. ನಮ್ಮ ಬಗ್ಗೆ ಮಾತನಾಡುವ ಯೋಗ್ಯತೆಯೂ ನಿಮಗಿದೆ ಎಂದು ನನಗೆ ಅನಿಸುವುದಿಲ್ಲ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿದ್ದಾರೆ.

ಮೂಡಾದವರು ನನಗೆ ನಿವೇಶನ ಹಂಚಿದ್ದಾರೆ, ನಿಜ. ಸ್ವಾಧೀನ ಪತ್ರವವನ್ನೂ ನೀಡಿದ್ದಾರೆ. ಆ ಪತ್ರವನ್ನು ನಾನು ಮಾಧ್ಯಮಗಳ ಮುಂದೆಯೂ ತೋರಿಸಿದ್ದೇನೆ. ಹಂಚಿದ ನಿವೇಶನದ ಜಾಗವನ್ನು ನನ್ನ ಸುಪರ್ದಿಗೆ ಕೊಡಬೇಕಲ್ಲವೇ? ಕೊಟ್ಟಿಲ್ಲ. ಹಾಗಾದರೆ, ಇದರಲ್ಲಿ ‘ಸಿದ್ದರಾಮಯ್ಯ ಮಾಡಿದ ಸಂಶೋಧನೆ ಏನಿದೆ?’ ‘ಸುಳ್ಳು ಸಂಶೋಧಕ ಸಿದ್ದರಾಮಯ್ಯ’ನವರೇ, ನಿಮ್ಮ ಮುಖಕ್ಕೆ ಮೆತ್ತಿಕೊಂಡಿರುವ ಕೊಳಕನ್ನು ನನ್ನ ಮೇಲೆ, ಇನ್ನಿತರರ ಮೇಲೆ ಸಿಡಿಸಲು ಹೊರಟು ಲಜ್ಜೆಗೇಡಿತನದ ಪರಮಾವಧಿ ಮೆರೆದಿದ್ದೀರಿ ಎಂದು ಕಿಡಿಕಾರಿದ್ದಾರೆ.

‘ಮೂಡಾ ಭೂಮಿಯನ್ನು ಮುಖ್ಯಮಂತ್ರಿ ಕುಟುಂಬ ಮುಕ್ಕಿ ತಿಂದಿದೆ’ ಎಂದು ಇಡೀ ದೇಶ ಮಾತನಾಡುತ್ತಿದೆ. ದಾಖಲೆಗಳು ಹಾದಿಬೀದಿಯಲ್ಲಿ ಹೊರಳಾಡುತ್ತಿವೆ! ನಿಮ್ಮ ಸಮಾಜವಾದಿ ಮುಖವಾಡ, ಅಹಿಂದಾ ಅಲಂಕಾರ, ಸತ್ಯವಂತನ ಸಿಂಗಾರ.. ಇದೆಲ್ಲವೂ ಕಳಚಿಬಿದ್ದಿದೆ. ಅಸಹ್ಯವಾಗುವಷ್ಟು ಅನಾಚಾರ ಮಾಡಿ ಅಹಿಂದ ರಕ್ಷಣೆ ಪಡೆಯಲು ಯತ್ನಿಸುತ್ತಿರುವ ನಿಮ್ಮ ಅಸಹಾಯತೆ ನನಗೆ ಅರ್ಥವಾಗುತ್ತದೆ. ಪಾಪ.. ನಿಮ್ಮ ಪಕ್ಷದವರೇ ನಿಮಗೆ ‘ಶರಪಂಜರ’ ಸೃಷ್ಟಿಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.

ಕುಮಾರಸ್ವಾಮಿ ರಾಜ್ಯಕ್ಕೆ ಕೈಗಾರಿಕೆ ತರಲಿ, ರಾಜ್ಯಕ್ಕೆ ಒಳ್ಳೆಯದು ಮಾಡಲಿ ಎನ್ನುತ್ತೀರಿ. ಅದು ನನಗೆ ಗೊತ್ತಿದೆ. ನಾನು ಕೇಂದ್ರ ಸಚಿವನಾಗಿ ಇನ್ನೂ ಎರಡು ತಿಂಗಳಾಗಿಲ್ಲ. ರಾಜ್ಯದ ಕೆಲಸ ಮಾಡೋಣ ಎಂದರೆ ನಿಮ್ಮ ಅಸಹಕಾರ, ಅಸೂಯೆ ಅಡ್ಡಿ. ಒಂದು ನಾಲಿಗೆ ಮೇಲೆ ಸಹಕಾರ, ಅಸಹಕಾರ.. ಇದು ಹೇಗೆ ಸಾಧ್ಯ ಸಿದ್ದರಾಮಯ್ಯನವರೇ? ಎಂದು ಪ್ರಶ್ನಿಸಿದ್ದಾರೆ.

ಎರಡು ಮುಖ, ಎರಡು ನಾಲಿಗೆ, ಎರಡು ವ್ಯಕ್ತಿತ್ವ, ಎರಡು ನೀತಿ.. ನಿಮ್ಮ ಐಡಿಯಾಲಜಿ! ಆ ಸಿದ್ದಾಲಜಿ (Siddalogy) ನನಗೆ ಗೊತ್ತಿಲ್ಲದಲ್ಲ ಸಿದ್ದರಾಮಯ್ಯನವರೇ.. ರಾಜ್ಯಕ್ಕೆ ಒಳ್ಳೆಯದಾಗಲಿ ಎನ್ನುವ ಆಶಯ ಇರಲಿ, ನನ್ನ ಮೇಲೆ ಅಸೂಯೆ ಏಕೆ? ನಿಮ್ಮ ಸಕಲ ಗುಣಗಳ ಸಿದ್ದಾಲಜಿ ನನಗೆ ಚೆನ್ನಾಗಿಯೇ ಗೊತ್ತಿದೆ ಎಂದು ಹೇಳಿದ್ದಾರೆ.