ಸಿನಿಮಾ Archives » Page 7 of 10 » Dynamic Leader
November 24, 2024
Home Archive by category ಸಿನಿಮಾ (Page 7)

ಸಿನಿಮಾ

ಸಿನಿಮಾ

ಐಶ್ವರ್ಯಾ ರಜನಿಕಾಂತ್ ಸದ್ಯ ‘ಲಾಲ್ ಸಲಾಂ’ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಇದರಲ್ಲಿ ವಿಷ್ಣು ವಿಶಾಲ್ ಮತ್ತು ವಿಕ್ರಾಂತ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ನಟ ರಜನಿಕಾಂತ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಲೈಕಾ ನಿರ್ಮಾಣದ ಈ ಚಿತ್ರಕ್ಕೆ ಎ.ಆರ್.ರಹಮಾನ್‌ ಸಂಗೀತ ಸಂಯೋಜಿಸಿದ್ದಾರೆ.

ನಟ ರಜನೀಕಾಂತ್ ಹಾಗೂ ಮಾಜಿ ಕ್ರಿಕಟಿಗ ಕಪಿಲ್ ದೇವ್

ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದೆ. ‘ಲಾಲ್ ಸಲಾಂ’ ಚಿತ್ರದಲ್ಲಿ ಮೊಯ್ದೀನ್ ಭಾಯ್ ಪಾತ್ರವನ್ನು ನಟ ರಜನಿಕಾಂತ್ ಮಾಡಲಿದ್ದಾರೆ ಎಂದು ಚಿತ್ರತಂಡ ಪ್ರಕಟಿಸಿತ್ತು. ಇತ್ತೀಚೆಗಷ್ಟೇ ನಟ ರಜನಿಕಾಂತ್ ಅವರು ‘ಲಾಲ್ ಸಲಾಂ’ ಚಿತ್ರೀಕರಣಕ್ಕಾಗಿ ಮುಂಬೈಗೆ ತೆರಳಿದ್ದರು.

ಈ ಸಂದರ್ಭದಲ್ಲಿ ನಟ ರಜನಿಕಾಂತ್ ಅವರು ‘ಲಾಲ್ ಸಲಾಂ’ ಚಿತ್ರದ ಹೊಸ ಅಪ್‌ಡೇಟ್ ಹಂಚಿಕೊಂಡಿದ್ದಾರೆ. ಅದರಂತೆ ಮಾಜಿ ಕ್ರಿಕೆಟಿಗ ಕಪಿಲ್ ದೇವ್ ಅವರು ಈ ಚಿತ್ರದಲ್ಲಿ ನಟಿಸಿದ್ದಾರೆ ಎಂಬ ವಿಷಯವನ್ನು ರಜನಿಕಾಂತ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದಾರೆ. “ಮೊದಲ ಬಾರಿಗೆ ವಿಶ್ವಕಪ್ ಗೆಲ್ಲುವ ಮೂಲಕ ಭಾರತವನ್ನು ಹೆಮ್ಮೆಪಡುವಂತೆ ಮಾಡಿದ ಮಹಾನ್, ಗೌರವಾನ್ವಿತ ಮತ್ತು ಅದ್ಭುತ ವ್ಯಕ್ತಿಯಾದ ಕಪಿಲ್ ದೇವ್‌ಜಿ ಅವರೊಂದಿಗೆ ಕೆಲಸ ಮಾಡುವುದು ನನಗೆ ಸಂತೋಷವಾಗಿದೆ” ಎಂದು ಅವರು ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ಇದೀಗ ಅಭಿಮಾನಿಗಳಲ್ಲಿ ನಿರೀಕ್ಷೆಯನ್ನು ಮೂಡಿಸಿದೆ.

ರಾಜಕೀಯ ಸಿನಿಮಾ

“ದಿ ಕೇರಳ ಸ್ಟೋರಿ ಚಲನ ಚಿತ್ರವು ಇಸ್ಲಾಮಿಕ್ ವಿರೋಧಿ ದ್ವೇಷ ರಾಜಕಾರಣವನ್ನು ಪ್ರೇರೇಪಿಸುತ್ತಿದೆ. ಈ ಚಿತ್ರವನ್ನು ಪ್ರಧಾನಿ ನರೇಂದ್ರ ಮೋದಿಯವರು ಬೆಂಬಲಿಸುವುದಾಗಿ ಹೇಳಿದ್ದಾರೆ. ಅವರು ಈ ಚಿತ್ರದ ನಿರ್ಮಾಪಕರೇ ಅಥವಾ ನಿರ್ದೇಶಕರೇ” ಎಂದು ಸಂಸದ ಡಾ.ತೊಲ್ ತಿರುಮಾವಳವನ್ ವ್ಯಂಗ್ಯವಾಡಿದ್ದಾರೆ.

ತಮಿಳುನಾಡಿನಲ್ಲಿ ಚಿತ್ರ ಪ್ರದರ್ಶನಕ್ಕೆ ಪೊಲೀಸ್ ಇಲಾಖೆ ಭದ್ರತೆ ಒದಗಿಸಿರುವುದು ಆಘಾತಕಾರಿಯಾಗಿದೆ. ಈ ಚಿತ್ರದ ಪ್ರದರ್ಶನಕ್ಕೆ ಅವಕಾಶ ನೀಡುವುದನ್ನು ಮುಂದುವರಿಸಿದರೆ ತಮಿಳುನಾಡಿನಲ್ಲಿ ಶಾಂತಿ ಕದಡುತ್ತದೆ. ಆದ್ದರಿಂದ ತಮಿಳುನಾಡು ಸರ್ಕಾರ ಕೂಡಲೇ ಈ ಚಿತ್ರವನ್ನು ನಿಷೇಧಿಸಬೇಕು ಎಂದು  ವಿಡುದಲೈ ಚಿರುತ್ತೈಗಳ್ ಪಕ್ಷದ ಅದ್ಯಕ್ಷ ಹಾಗೂ ಶಿವಗಂಗೈ ಸಂಸದ ಡಾ.ತೊಲ್ ತಿರುಮಾವಳವನ್ ತಮಿಳುನಾಡು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಅವರು ‘ದಿ ಕೇರಳ ಸ್ಟೋರಿ’ ಚಿತ್ರದ ವಿಷಯವನ್ನು ಪ್ರಸ್ತಾಪಿಸಿ, ಚಿತ್ರವು ಭಯೋತ್ಪಾದನೆಯ ಪಿತೂರಿಯನ್ನು ಆಧರಿಸಿದೆ ಎಂದು ಹೇಳಿದರು. “ಇದು ಭಯೋತ್ಪಾದನೆಯ ಕೊಳಕು ಸತ್ಯವನ್ನು ತೋರಿಸುತ್ತದೆ ಮತ್ತು ಭಯೋತ್ಪಾದಕರ ವಿನ್ಯಾಸವನ್ನು ಬಹಿರಂಗಪಡಿಸುತ್ತದೆ” ಎಂದು ರಾಜ್ಯ ವಿಧಾನಸಭಾ ಚುನಾವಣೆಗೆ ಮುನ್ನ ಕರ್ನಾಟಕದ ಬಳ್ಳಾರಿಯಲ್ಲಿ ಜನತೆಯನ್ನುದ್ದೇಶಿಸಿ ಮಾತನಾಡುತ್ತಾ ಪ್ರಧಾನಿ ಮೋದಿ ಹೇಳಿದರು.

ಸಿನಿಮಾ

ವರದಿ: ಅರುಣ್ ಜಿ.,

ಟೀಸರ್ ಬಿಡುಗಡೆ ಮಾಡಿ ಶುಭ ಕೋರಿದ ನಿರ್ದೇಶಕ – ನಿರ್ಮಾಪಕ ಆರ್.ಚಂದ್ರು

ನಟ ಆದಿತ್ಯ ಅಭಿನಯದ ‘ಟೆರರ್’ ಸಿನಿಮಾದ ಟೀಸರ್ ಬಿಡುಗಡೆಯಾಗಿದೆ. ನಾಯಕ ಆದಿತ್ಯ ಅವರ ಹುಟ್ಟುಹಬ್ಬದ ಸಲುವಾಗಿ ಚಿತ್ರತಂಡ ವಿಶೇಷ ಟೀಸರ್ ಬಿಡುಗಡೆ ಮಾಡಿದೆ‌. ನಿರ್ದೇಶಕ – ನಿರ್ಮಾಪಕ ಆರ್.ಚಂದ್ರು ‘ಟೆರರ್’ ಚಿತ್ರದ ಟೀಸರ್ ಬಿಡುಗಡೆಗೊಳಿಸಿದರು. 

“ಟೆರರ್’ ಸಿನಿಮಾದ ಹೆಸರಿನಲ್ಲೆ ಒಂದು ಫೈಯರ್ ಇದೆ. ಟೀಸರಿನಲ್ಲಿ ಕಾಣುವ ಪ್ರತಿಯೊಂದು ಸನ್ನಿವೇಶಗಳು ಗಮನ ಸೆಳೆಯುತ್ತದೆ. ಟೀಸರ್‌ನಲ್ಲಿಯೇ ‘ಟೆರರ್’ ದೊಡ್ಡ ಹಿಟ್ ಆಗುವ ಲಕ್ಷಣಗಳು ಕಾಣುತ್ತಿದೆ” ಎಂದು ಆರ್.ಚಂದ್ರು ಹಾರೈಸಿದರು.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮ.ಹರೀಶ್, ನಿರ್ಮಾಪಕರಾದ ದೇವೇಂದ್ರ ರೆಡ್ಡಿ,  ರಮೇಶ್ ರೆಡ್ಡಿ, ಪ್ರಕಾಶ್, ಶ್ರೀನಗರ ಕಿಟ್ಟಿ ಮುಂತಾದವರು ಟೀಸರ್ ಬಿಡುಗಡೆ ಸಮಾರಂಭಕ್ಕೆ ಆಗಮಿಸಿ ಆದಿತ್ಯ ಅವರಿಗೆ ಹಾಗೂ ಚಿತ್ರತಂಡಕ್ಕೆ ಶುಭ ಕೋರಿದರು.

“ಈ ಕಥೆ ಕೇಳಿದ ಕೂಡಲೇ ನಿರ್ಮಾಪಕ ಸಿಲ್ಕ್ ಮಂಜು, ಈ ಸಿನಿಮಾ ಮಾಡಲು ಒಪ್ಪಿಕೊಂಡರು. ಅವರ ಸಹಕಾರದಿಂದಲೇ ಈ ಸಿನಿಮಾ ಮಾಡಲು ಸಾಧ್ಯವಾಯಿತು.  ಸಿನಿಮಾದಲ್ಲಿ ಆದಿತ್ಯ ನಾಯಕರಾಗಿ ನಟಿಸುತ್ತಿದ್ದಾರೆ. ಶ್ರೀನಗರ ಕಿಟ್ಟಿ ಕೂಡ ಪಾತ್ರವೊಂದರಲ್ಲಿ ಅಭಿನಯಿಸುತ್ತಿದ್ದಾರೆ. ಕೋಟೆ ಪ್ರಭಾಕರ್, ಧರ್ಮ ಮೊದಲಾದವರು ಸಿನಿಮಾದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಈಗಾಗಲೇ 30% ಚಿತ್ರೀಕರಣ ಪೂರ್ಣಗೊಂಡಿದೆ. ಬೆಂಗಳೂರು ಸುತ್ತಮುತ್ತ ಸಿನಿಮಾದ ಬಹುತೇಕ ಚಿತ್ರೀಕರಣ ನಡೆಸಲಾಗಿದೆ” ಎಂದು ನಿರ್ದೇಶಕ ರಂಜನ್ ಶಿವರಾಮ್ ಗೌಡ ಹೇಳಿದರು.

“ಕನ್ನಡ ಚಿತ್ರರಂಗಕ್ಕೆ “A” ಎಂಬ ಉತ್ತಮ ಚಿತ್ರಕೊಟ್ಟ ನಿರ್ಮಾಪಕ ಸಿಲ್ಕ್ ಮಂಜು ಅವರ ನಿರ್ಮಾಣದಲ್ಲಿ ಈ ಚಿತ್ರ ನಿರ್ಮಾಣವಾಗುತ್ತಿದೆ. ರಂಜನ್ ಅವರು ಹೇಳಿದ ಕಥೆ ಇಷ್ಟವಾಯಿತು. ನನ್ನ ಹುಟ್ಟುಹಬ್ಬಕ್ಕಾಗಿ ವಿಶೇಷ ಟೀಸರ್ ಬಿಡುಗಡೆ ಮಾಡಿರುವ ಚಿತ್ರತಂಡಕ್ಕೆ ಇಲ್ಲಿ ಆಗಮಿಸಿರುವ ಪ್ರತಿಯೊಬ್ಬರಿಗೂ ನನ್ನ ಧನ್ಯವಾದ” ಎಂದರು ನಾಯಕ ಆದಿತ್ಯ. 

“ಎ ಸಿನಿಮಾ ಬಿಡುಗಡೆಯಾಗಿ 25 ವರ್ಷ ಆದ ಮೇಲೆ ಮತ್ತೊಂದು ನಿರೀಕ್ಷಿತ ಸಿನಿಮಾ ಮಾಡುತ್ತಿದ್ದೇವೆ. ನಿಮ್ಮೆಲ್ಲರ ಪ್ರೋತ್ಸಾಹವಿರಲಿ” ಎಂದರು ನಿರ್ಮಾಪಕ ಸಿಲ್ಕ್ ಮಂಜು.

ಸಿನಿಮಾ

ವರದಿ: ಅರುಣ್ ಜಿ.,

ಒಂದು ಕಡೆ ಚುನಾವಣೆ ಮತ್ತೊಂದು ಕಡೆ ಐಪಿಎಲ್ ಇದರ ನಡುವೆ ಕಳೆದವಾರ ಬಿಡುಗಡೆಯಾದ ರಾಘವೇಂದ್ರ ಸ್ಟೋರ್ಸ್ ಚಿತ್ರ ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ.‌ ಈ ಸಂತೋಷವನ್ನು ಚಿತ್ರತಂಡದ ಸದಸ್ಯರು ಮಾಧ್ಯಮದ ಮುಂದೆ ಹಂಚಿಕೊಂಡರು. ‌

ಚುನಾವಣೆ, ಐಪಿಎಲ್ ನಡುವೆ ಈ ಚಿತ್ರ ಬಿಡುಗಡೆ ಮಾಡುತ್ತಾರಾ? ಎಂದು ಎಷ್ಟೋ ಜನ‌ ಕೇಳುತ್ತಿದ್ದರು. ಆದರೆ ನಿರ್ಮಾಪಕ ವಿಜಯ್ ಕಿರಗಂದೂರ್ ಅವರು ಕಂಟೆಂಟ್ ಚೆನ್ನಾಗಿದ್ದರೆ ಜನ ಖಂಡಿತವಾಗಿ ನೋಡುತ್ತಾರೆ ಎಂಬ ನಂಬಿಕೆಯಿಂದ ಈ ಚಿತ್ರವನ್ನು ಬಿಡುಗಡೆ ಮಾಡಿದರು.‌ ಅವರ ಮಾತು ನಿಜವಾಯಿತು. ಜನ ನಮ್ಮ ಚಿತ್ರಕ್ಕೆ ತೋರುತ್ತಿರುವ ಮೆಚ್ಚುಗೆಗೆ ಮನತುಂಬಿ ಬಂದಿದೆ ಹಾಗೂ ಒಂದೊಳ್ಳೆಯ ತಂಡದ ಜೊತೆಗೆ ಕೆಲಸ ಮಾಡಿದ್ದು ಖುಷಿಯಾಗಿದೆ‌. ರಾಯರ ಹೆಸರಿನ ಈ ಚಿತ್ರಕ್ಕೆ ರಾಯರೆ ಯಶಸ್ಸು ನೀಡುತ್ತಿದ್ದಾರೆ ಎಂದರು ನಾಯಕ ಜಗ್ಗೇಶ್.

ನಾವು ಈ ಸಿನಿಮಾ ಬಿಡುಗಡೆಗೂ ಹತ್ತು ದಿನಗಳ ಮುಂಚೆ ಪ್ರಮೋಷನ್ ಶುರು ಮಾಡಿದ್ದು. ಆನಂತರ ಬಿಡುಗಡೆಯಾದ ಟ್ರೇಲರ್ ಹಾಗೂ ಹಾಡಿಗೆ ಒಳ್ಳೆಯ ರೆಸ್ಪಾನ್ಸ್ ಬಂತು. ನನ್ನ ಈ ಹಿಂದಿನ‌ ಸಿನಿಮಾಗಳ ಜಾನರ್ ಬೇರೆ. ಈ ಸಿನಿಮಾ ಜಾನರ್‌ ಬೇರೆ. ಲೇಟ್ ಮ್ಯಾರೇಜ್ ಹಾಗೂ ಆನಂತರ ಅವರಿಗೆ ಮಕ್ಕಳಾಗದ ಸಮಸ್ಯೆ ಬಗ್ಗೆಗಿನ ಕಥಾಹಂದರವನ್ನು ಈ ಚಿತ್ರ  ಹೊಂದಿದೆ.  ಚಿತ್ರವನ್ನು ಜನ ಮೆಚ್ಚಿಕೊಂಡಿದ್ದಾರೆ. ಯಶಸ್ಸಿಗೆ ಕಾರಣರಾದ ನನ್ನ ತಂಡಕ್ಕೆ,‌ ನಿರ್ಮಾಣ ಮಾಡಿರುವ ಖ್ಯಾತ ಹೊಂಬಾಳೆ ಫಿಲಂಸ್ ನ ವಿಜಯ್ ಕಿರಗಂದೂರ್ ಅವರಿಗೆ ಹಾಗೂ ಜಗ್ಗೇಶ್ ಅವರ ಆದಿಯಾಗಿ ಚಿತ್ರದಲ್ಲಿ ‌ನಟಿಸಿರುವ ಎಲ್ಲಾ ಕಲಾವಿದರಿಗೆ ಧನ್ಯವಾದ ತಿಳಿಸುತ್ತೇನೆ ಎಂದರು ನಿರ್ದೇಶಕ ಸಂತೋಷ್ ಆನಂದರಾಮ್.

ಚಿತ್ರದಲ್ಲಿ ಅಭಿನಯಿಸಿರುವ ಶ್ವೇತ ಶ್ರೀವಾಸ್ತವ್, ದತ್ತಣ್ಣ, ಮಿತ್ರ, ರವಿಶಂಕರ್ ಗೌಡ, ಚಿತ್ಕಲಾ ಬಿರಾದಾರ್, ಕೆ.ಆರ್.ಜಿ ಸ್ಟುಡಿಯೋಸ್ ನ ಯೋಗಿ ಜಿ ರಾಜ್, ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್, ಛಾಯಾಗ್ರಹಕ ಶ್ರೀಶ ಕುದುವಳ್ಳಿ ಮುಂತಾದವರು ಈ ಸಂದರ್ಭದಲ್ಲಿ ಚಿತ್ರದ ಕುರಿತು ಮಾತನಾಡಿದರು.

ಸಿನಿಮಾ

ವರದಿ: ಅರುಣ್ ಜಿ.,

ಶಿವರಾಜಕುಮಾರ್, ಉಪೇಂದ್ರ, ರಾಜ್ ಬಿ. ಶೆಟ್ಟಿ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿರುವ ‘45’ ಚಿತ್ರದ ಮುಹೂರ್ತ ಇತ್ತೀಚೆಗೆ ಮೈಸೂರಿನಲ್ಲಿ ನೆರವೇರಿತು. ದೇವರ ಮೇಲೆ ಚಿತ್ರೀಕರಿಸಲಾದ ಮೊದಲ ದೃಶ್ಯಕ್ಕೆ ಗೀತಾ ಶಿವರಾಜಕುಮಾರ್ ಕ್ಲಾಪ್ ಮಾಡುವ ಮೂಲಕ ಚಿತ್ರಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಚಿತ್ರರಂಗದ ಅನೇಕ ಕಲಾವಿದರು, ತಂತ್ರಜ್ಞರು, ಗಣ್ಯರು ಹಾಜರಿದ್ದು ಚಿತ್ರತಂಡಕ್ಕೆ ಶುಭ ಕೋರಿದರು.

‘45’ ಚಿತ್ರವನ್ನು ಸೂರಜ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಎಂ.ರಮೇಶ್ ರೆಡ್ಡಿ ನಿರ್ಮಿಸುತ್ತಿದ್ದು, ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ, ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗುತ್ತಿದ್ದಾರೆ. ಈ ಚಿತ್ರಕ್ಕೆ ಅವರೇ ಕಥೆ-ಚಿತ್ರಕಥೆ ಬರೆದು ಸಂಗೀತ ಸಂಯೋಜಿಸಿದ್ದು, ಸತ್ಯ ಹೆಗಡೆ ಛಾಯಾಗ್ರಹಣ ಮಾಡುತ್ತಿದ್ದಾರೆ. ಅನಿಲ್ ಕುಮಾರ್ ಸಂಭಾಷಣೆ ಬರೆದಿದ್ದು, ಕೆ.ಎಂ.ಪ್ರಕಾಶ್ ಅವರ ಸಂಕಲನ ಈ ಚಿತ್ರಕ್ಕಿದೆ.

ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶಿವರಾಜಕುಮಾರ್, ‘ಇದೊಂದು ಫಿಲಾಸಫಿಕಲ್ ಎಂಟರ್ ಟೈನರ್ ಎಂದು ಚಿತ್ರವನ್ನು ಬಣ್ಣಿಸುತ್ತಾರೆ. ಕಳೆದ ಒಂದು ವರ್ಷದಿಂದ ಈ ಚಿತ್ರದ  ಪ್ರೀ-ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದೆ. ಅರ್ಜುನ್ ಜನ್ಯ ಕಥೆ ಹೇಳಿದಾಗ ತುಂಬಾ ಇಷ್ಟವಾಗಿತ್ತು. ಆ ನಂತರ ಅನಿಮೇಶನ್ ರೂಪದಲ್ಲಿ ಚಿತ್ರವನ್ನು ತೋರಿಸಿದ್ದಾರೆ. ಅವರೊಬ್ಬ ಪ್ರತಿಭಾವಂತ. ಈ ಸಿನಿಮಾದ ನಂತರ ಭಾರತದ ಟಾಪ್ ನಿರ್ದೇಶಕರ ಸಾಲಿನಲ್ಲಿ ಅರ್ಜುನ್ ಜನ್ಯ ಕೂಡ ಒಬ್ಬರಾಗುತ್ತಾರೆ ಎಂಬ ನಂಬಿಕೆಯಿದೆ. ತುಂಬಾ ಪ್ರಬುದ್ಧವಾಗಿರುವ ಪಾತ್ರ ಈ ಚಿತ್ರದಲ್ಲಿದೆ’ ಎಂದರು.

‘ಸಾಮಾನ್ಯವಾಗಿ ನಟರಿಗೆ ನಿರ್ದೇಶಕರು ಚಿತ್ರದ ಕಥೆ ಹೇಳಿದರೆ, ಅರ್ಜುನ್ ಜನ್ಯ ನನಗೆ ಚಿತ್ರವನ್ನೇ ತೋರಿಸಿದರು. ಒಂದು ಚಿತ್ರಕ್ಕೆ ನಾವು ಸಹ ಸಾಕಷ್ಟು ತಯಾರಿ ಮಾಡಿಕೊಳ್ಳುವುದರಿಂದ, ಮೊದಲು ನನ್ನ ತಂಡದ ಬಗ್ಗೆ ನನಗೆ ಹೆಮ್ಮೆ ಇತ್ತು. ಆದರೆ ಅರ್ಜುನ್ ಜನ್ಯ ಮತ್ತು ಅವರ ತಂಡದ ಕೆಲಸ ನೋಡಿ ಆಶ್ಚರ್ಯವಾಯಿತು. ಅವರು ಈ ಚಿತ್ರಕ್ಕೆ ಮಾಡಿಕೊಂಡ ತಯಾರಿ ಅದ್ಭುತ. ಒಬ್ಬ ನಟನಾಗಿ, ಪ್ರೇಕ್ಷಕನಾಗಿ ಸಿನಿಮಾದ ಬಗ್ಗೆ ಸಾಕಷ್ಟು ಕುತೂಹಲ ಮತ್ತು ನಿರೀಕ್ಷೆಯಿದೆ’ ಎಂದು ರಾಜ್ ಬಿ ಶೆಟ್ಟಿ ಹೇಳಿದರು.

‘ಮೊದಲ ಬಾರಿಗೆ ಹೆಸರಾಂತ ಕಲಾವಿದರು ಮತ್ತು ತಂತ್ರಜ್ಞರ ಜೊತೆ ಈ ಸಿನಿಮಾದಲ್ಲಿ ಅಭಿನಯಿಸುತ್ತಿರುವುದಕ್ಕೆ ತುಂಬಾ ಖುಷಿಯಾಗುತ್ತಿದೆ.  ಬೋಲ್ಡ್ ಆಗಿರುವಂತ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ’ ಎಂದರು ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿರುವ ಕೌಸ್ತುಭ ಮಣಿ.

ನಿರ್ಮಾಪಕ ರಮೇಶ್ ರೆಡ್ಡಿ ಅವರಿಗೆ ಅರ್ಜುನ್ ಜನ್ಯ ಹೇಳಿದ ಕಥೆ ಬಹಳ ಇಷ್ಟವಾಯಿತಂತೆ. ‘ಚಿತ್ರದ ಘೋಷಣೆಯಾಗಿ ಹಲವು ತಿಂಗಳಾದರೂ ನಿಧಾನಕ್ಕೆ ಸಾಗುತ್ತಿತ್ತು. ಈ ಬಗ್ಗೆ ಅರ್ಜುನ್ ಜನ್ಯ ಅವರನ್ನು ಕೇಳಿದಾಗ, ಅವರು ಅನಿಮೇಶನ್ ಮೂಲಕ ಸಿನಿಮಾ ತೋರಿಸಿದರು. ಚಿತ್ರೀಕರಣ ಶುರುವಾಗುವುದಕ್ಕಿಂತ ಮೊದಲೇ, ಚಿತ್ರ ತೋರಿಸಿದರು. ನಾವು ಅಂದುಕೊಂಡಿರುವುದಕ್ಕಿಂತ ಸಿನಿಮಾ ಚೆನ್ನಾಗಿ ಬರುತ್ತದೆ ಎಂಬ ನಂಬಿಕೆಯಿದೆ’ ಎಂದರು ರಮೇಶ್ ರೆಡ್ಡಿ.

ಕೊನೆಗೆ ಮಾತನಾಡಿದ ಅರ್ಜುನ್ ಜನ್ಯ, ‘ಚಿತ್ರೀಕರಣ ಈಗ ಶುರುವಾಗುತ್ತಿದ್ದರೂ, ಸುಮಾರು 9 ತಿಂಗಳ ಕಾಲ ಪ್ರೀ-ಪ್ರೊಡಕ್ಷನ್ ಕೆಲಸಗಳನ್ನು ಮಾಡಿ ಈಗ ಚಿತ್ರೀಕರಣಕ್ಕೆ ಹೊರಡುತ್ತಿದ್ದೇವೆ. ಮೊದಲು ಶಿವಣ್ಣ ಅವರಿಗೆ ಕಥೆ ಹೇಳಿದಾಗ, ನೀವೇ ಈ ಸಿನಿಮಾ ಮಾಡಿ ಎಂದು ಹುರುದಿಂಬಿಸಿದರು. ಈ ಚಿತ್ರದ ಮೂಲಕ ಒಂದು ದೊಡ್ಡ ಫಿಲಾಸಫಿಯನ್ನು ಸರಳ ರೀತಿಯಲ್ಲಿ, ಕ್ಲಾಸ್ ಮತ್ತು ಮಾಸ್ ಆಗಿ ಹೇಳುವ ಪ್ರಯತ್ನ ಮಾಡುತ್ತಿದ್ದೇನೆ ಎಂದರು. 

‘45’ ಚಿತ್ರಕ್ಕೆ 80 ದಿನಗಳ ಕಾಲ ಬೆಂಗಳೂರು, ಮೈಸೂರು ಮುಂತಾದ ಕಡೆ ಚಿತ್ರೀಕರಣ ನಡೆಯಲಿದೆ. ಕನ್ನಡವಲ್ಲದೆ ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲೂ ಮೂಡಿಬರುತ್ತಿರುವ ಈ ಚಿತ್ರವನ್ನು 2024ರಲ್ಲಿ ಬಿಡುಗಡೆ ಮಾಡುವುದಕ್ಕೆ ಚಿತ್ರತಂಡ ಯೋಜನೆ ಹಾಕಿಕೊಂಡಿದೆ.

ಸಿನಿಮಾ

ಡಿ.ಸಿ.ಪ್ರಕಾಶ್ ಸಂಪಾದಕರು

‘ದಿ ಕೇರಳ ಸ್ಟೋರಿ’ ಚಿತ್ರದ ಕಥೆಯು ಕೇರಳದ ಹಿಂದೂ ಮಹಿಳೆಯರನ್ನು ಇಸ್ಲಾಂಗೆ ಮತಾಂತರಗೊಳಿಸಿ ಐಸ್‌ಐಸ್ ಸಂಘಟನೆಗೆ ಸೇರಿಸುವುದಾಗಿದೆ.

‘ದಿ ಕೇರಳ ಸ್ಟೋರಿ’ ಸಿನಿಮಾ ಕೇರಳ ಮಾತ್ರವಲ್ಲದೆ ರಾಷ್ಟ್ರಮಟ್ಟದಲ್ಲಿಯೂ ಗಮನ ಸೆಳೆದಿದೆ. ಭಾರಿ ವಿವಾದವನ್ನು ಸೃಷ್ಠಿಸಿರುವ ಈ ಚಿತ್ರವು ಮೇ 5 ರಂದು ತೆರೆಗೆ ಬರಲಿದೆ. ಕೇರಳದ ಆಡಳಿತ ಮಾರ್ಕ್ಸ್‌ವಾದಿ ಕಮ್ಯುನಿಸ್ಟ್ ಪಕ್ಷ, ವಿರೋಧ ಪಕ್ಷ ಕಾಂಗ್ರೆಸ್ ಸೇರಿದಂತೆ ವಿವಿಧ ಪಕ್ಷಗಳು ಈ ಚಿತ್ರಕ್ಕೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿವೆ.

ಈ ಚಿತ್ರದ ಟೀಸರ್ ನವೆಂಬರ್ 2 ರಂದು ಬಿಡುಗಡೆಯಾಗಿದೆ. ಅದರಲ್ಲಿ ಕೇರಳದಲ್ಲಿ ಕಾಣೆಯಾಗಿರುವ 32,000 ಮಹಿಳೆಯರ ಹಿನ್ನೆಲೆಯನ್ನು ಚಿತ್ರ ಬಹಿರಂಗಪಡಿಸಲಿದೆ ಎಂದು ಹೇಳಲಾಗಿತ್ತು. ಸಾಮಾನ್ಯ ಮಹಿಳೆಯರನ್ನು ಭಯೋತ್ಪಾದಕರನ್ನಾಗಿಸುವ ಅಪಾಯಕಾರಿ ಆಟ ಕೇರಳದಲ್ಲಿ ಎಲ್ಲರ ಕಣ್ಮುಂದೆ ನಡೆಯುತ್ತಿದೆ ಎಂದೂ ಹೇಳಿದೆ.

ಈ ಹಿನ್ನಲೆಯಲ್ಲಿ ಕೆಲ ದಿನಗಳ ಹಿಂದೆ ‘ದಿ ಕೇರಳ ಸ್ಟೋರಿ’ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿತ್ತು. ಅದರಲ್ಲಿ ಕೇರಳದ ಕಾಲೇಜು ಹಾಸ್ಟೆಲ್‌ ಒಂದರ ಕೊಠಡಿಯಲ್ಲಿ ನಾಲ್ವರು ಮಹಿಳೆಯರು ತಂಗಿರುತ್ತಾರೆ. ಅವರಲ್ಲಿ ಒಬ್ಬ ಮುಸ್ಲಿಂ ಮಹಿಳೆಯು ಇರುತ್ತಾಳೆ. ಆ ಮುಸ್ಲಿಂ ಮಹಿಳೆಯನ್ನು ಅನುಸರಿಸುವ ಉಳಿದ ಮಹಿಳೆಯರು ಸಹ ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳುತ್ತಾರೆ. ನಂತರ ಐಸ್‌ಐಸ್ ಭಯೋತ್ಪಾದಕ ಸಂಘಟನೆಗೆ ಕೆಲಸ ಮಾಡಲು ಗಡಿಪಾರು ಮಾಡುವ ದೃಶ್ಯಗಳಿವೆ.

ಅದಾ ಶರ್ಮಾ ಹಿಂದೂ ಹುಡುಗಿ ಶಾಲಿನಿ ಉನ್ನಿಕೃಷ್ಣನ್ ಪಾತ್ರದಲ್ಲಿ ನಟಿಸಿದ್ದಾರೆ. ‘ಲವ್ ಜಿಹಾದ್’ ಮೂಲಕ ಆಕೆಯನ್ನು ಪ್ರೇಮದ ಬಲೆಗೆ ಬೀಳಿಸಿ, ಮುಸ್ಲಿಂ ಹುಡುಗಿ ಫಾತಿಮಾಳಾಗಿ ಪರಿವರ್ತಿಸಲಾಗುತ್ತದೆ. ನಂತರ ಶಾಲಿನಿ ಸೇರಿದಂತೆ 48 ಜನರನ್ನು ಐಸ್‌ಐಸ್ ಗಾಗಿ ಕೆಲಸ ಮಾಡಲು ವಿದೇಶಕ್ಕೆ ಕರೆದೊಯ್ಯುವ ದೃಶ್ಯಗಳು ಬರುತ್ತವೆ.

ಮತ್ತೊಂದು ದೃಶ್ಯದಲ್ಲಿ, ಇತರ ಮಹಿಳೆಯರೊಂದಿಗೆ ಸಂಬಂಧವನ್ನು ಬೆಳೆಸಿಕೊಂಡಿರುವ ಮುಸ್ಲಿಂ ರೂಪದ ಕೆಲವು ಯುವಕರು,  ಮಹಿಳೆಯರನ್ನು ತಮ್ಮ ಬಳಿಗೆ ಒಪ್ಪಿಸುವಂತೆ ಹೇಳುತ್ತಾರೆ. ನಂತರ ಶಾಲಿನಿ ಉನ್ನಿಕೃಷ್ಣನ್ ಅವರನ್ನು ಮತಾಂತರಗೊಳಿಸಿ, ಮದುವೆಯಾಗಿ, ಪಾಕಿಸ್ತಾನಕ್ಕೆ ಕಳ್ಳಸಾಗಣೆ ಮಾಡುವ ದೃಶ್ಯಗಳಿವೆ. ಇನ್ನು 20 ವರ್ಷಗಳಲ್ಲಿ ಕೇರಳ ಇಸ್ಲಾಮಿಕ್ ರಾಜ್ಯವಾಗಲಿದೆ ಎಂದು ಕೇರಳದ ಮಾಜಿ ಮುಖ್ಯಮಂತ್ರಿಯೊಬ್ಬರು ಹೇಳಿರುವ ಒಂದು ಸಾಲು ಟ್ರೈಲರ್ ನಲ್ಲಿದೆ. ಚಿತ್ರವು ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಎಂಬ ನಾಲ್ಕು ಭಾಷೆಗಳಲ್ಲಿ ಮೇ 5 ರಂದು ಬಿಡುಗಡೆಯಾಗಲಿದೆ.

ಇಂತಹ ಚಿತ್ರವನ್ನು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತೀವ್ರವಾಗಿ ಖಂಡಿಸಿದ್ದಾರೆ. “ದಿ ಕೇರಳ ಸ್ಟೋರಿ’ ಚಿತ್ರದ ಟ್ರೇಲರ್ ಜಾತ್ಯತೀತತೆಯ ನೆಲೆಗಟ್ಟಿನ ಕೇರಳವನ್ನು ಧಾರ್ಮಿಕ ಉಗ್ರವಾದದ ಕೇಂದ್ರವೆಂದು ಬಿಂಬಿಸಲು ಸಂಘಪರಿವಾರ ಹೊರಟಿದೆ. ಸಂಘಪರಿವಾರವು ನಕಲಿ ಕಥೆಗಳೊಂದಿಗೆ ಚಿತ್ರಗಳ ಮೂಲಕ ಪ್ರತ್ಯೇಕತಾವಾದಿ ರಾಜಕೀಯವನ್ನು ಹರಡಲು ಪ್ರಯತ್ನಿಸುತ್ತಿದೆ. ಅವರು ಯಾವುದೇ ಸತ್ಯ ಅಥವಾ ಪುರಾವೆಗಳಿಲ್ಲದೆ ಪುರಾಣಗಳನ್ನು ಹರಡುತ್ತಿದ್ದಾರೆ.

ಈ ಚಿತ್ರವು ಸುಳ್ಳನ್ನು ಹಬ್ಬಿಸುತ್ತಿರುವ ಸಂಘಪರಿವಾರದ ಕಾರ್ಖಾನೆಯ ಉತ್ಪನ್ನವಾಗಿದೆ. ಕೇರಳದಲ್ಲಿ ಚುನಾವಣಾ ರಾಜಕೀಯದಲ್ಲಿ ಲಾಭ ಗಳಿಸಲು ಸಂಘಪರಿವಾರವು ವಿವಿಧ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಅದರಲ್ಲಿ `ದಿ ಕೇರಳ ಸ್ಟೋರಿ’ ಸಿನಿಮಾ ಕೂಡ ಒಂದು” ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಟೀಕಿಸಿದ್ದಾರೆ.

ಈ ಚಿತ್ರಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ತಿರುವನಂತಪುರಂ ಸಂಸದ ಶಶಿ ತರೂರ್, “ಇದು ನಿಮ್ಮ ಕೇರಳದ ಕಥೆಯಾಗಿರಬಹುದು. ಆದರೆ ಇದು ನಮ್ಮ ಕೇರಳದ ಕಥೆಯಲ್ಲ” ಎಂದು ಹೇಳಿದ್ದಾರೆ. ಕಾಂಗ್ರೆಸ್ ಪಕ್ಷದ ಕೇರಳ ವಿಧಾನಸಭೆಯ ವಿರೋಧಪಕ್ಷದ ನಾಯಕ ವಿ.ಡಿ.ಸತೀಶನ್ ಮಾತನಾಡಿ, “ಈ ಚಿತ್ರವು ಸುಳ್ಳಿನಿಂದ ಕೂಡಿದೆ. ಇದರಲ್ಲಿ ಮುಸ್ಲಿಮರನ್ನು ಬಹಳ ತಪ್ಪಾಗಿ ನಿರೂಪಿಸಲಾಗಿದೆ. ಸುಳ್ಳಿನ ಕಂತೆಯಾಗಿರುವ ಈ ಚಿತ್ರದಲ್ಲಿ ಕೇರಳದ 32,000 ಮಹಿಳೆಯರನ್ನು ಮತಾಂತರ ಮಾಡಿ ಐಸ್‌ಐಸ್ ಭಯೋತ್ಪಾದನಾ ಸಂಘಟನೆಗಳು ಇರುವ ಪ್ರದೇಶಗಳಿಗೆ ಕಳುಹಿಸಲಾಗುತ್ತಿದೆ ಎಂದು ಹೇಳಲಾಗಿದೆ.

ದ್ವೇಷದ ಬೀಜಗಳನ್ನು ಬಿತ್ತಿ, ಧಾರ್ಮಿಕ ಸಾಮರಸ್ಯವನ್ನು ಹಾಳು ಮಾಡುವ ಉದ್ದೇಶದಿಂದ ಈ ಚಿತ್ರವನ್ನು ನಿರ್ಮಿಸಲಾಗಿದೆ. ಕೇರಳದ ಕೀರ್ತಿಯನ್ನು ಕೆಡಿಸುವುದು ಅವರ ಉದ್ದೇಶವಾಗಿದೆ. ಇದರ ಹಿಂದೆ ಸಂಘಪರಿವಾರದ ಕೈವಾಡವಿದೆ. ಹೀಗಾಗಿ ರಾಜ್ಯ ಸರ್ಕಾರ ಈ ಚಿತ್ರ ಪ್ರದರ್ಶನಕ್ಕೆ ಅನುಮತಿ ನೀಡಬಾರದು” ಎಂದು ಹೇಳಿದ್ದಾರೆ.

ಇತ್ತೀಚೆಗೆ ‘ಲವ್ ಜಿಹಾದ್’ ಎಂಬ ಪದವನ್ನು ಕೇರಳದಲ್ಲೂ ಸೃಷ್ಟಿಸಲಾಗಿದೆ. ‘ಹಿಂದೂ ಯುವತಿಯರನ್ನು ಪ್ರೀತಿಸಿ, ಮತಾಂತರಕ್ಕೆ ಒತ್ತಾಯಿಸುವ ಮುಸ್ಲಿಂ ಯುವಕರು ಆ ಮಹಿಳೆಯರನ್ನು ಪಾಕಿಸ್ತಾನ, ಅಫ್ಘಾನಿಸ್ತಾನ, ಸಿರಿಯಾದಂತಹ ದೇಶಗಳಿಗೆ ಕಳ್ಳಸಾಗಣೆ ಮಾಡಿ, ಇಸ್ಲಾಮಿಕ್ ಭಯೋತ್ಪಾದಕ ಸಂಘಟನೆಗಳ ಚಟುವಟಿಕೆಗೆ ಬಳಸಿಕೊಳ್ಳುತ್ತಾರೆ’ ಎನ್ನುವುದು ‘ಲವ್ ಜಿಹಾದ್’ ಅರ್ಥ ಎನ್ನಲಾಗುತ್ತಿದೆ.

ಕೇರಳದಲ್ಲಿ ಲವ್ ಜಿಹಾದ್ ನಡೆಯುತ್ತಿದೆ ಎಂದು ಕೆಲವರು ಹೇಳುತ್ತಿರುವಾಗಲೇ, ‘‘ನಮ್ಮ ಕಾನೂನಿನಲ್ಲಿ ಲವ್ ಜಿಹಾದ್ ಎಂಬುದೇ ಇಲ್ಲ. ಅಂತಹ ಯಾವುದೇ ಪ್ರಕರಣ ಎಲ್ಲಿಯೂ ವರದಿಯಾಗಿಲ್ಲ ಎಂದು ಕೇಂದ್ರ ಗುಪ್ತಚರ ಸಂಸ್ಥೆಗಳು ಹೇಳಿವೆ” ಎಂದು 2020ರಲ್ಲಿ ಸಂಸತ್ತಿನಲ್ಲಿ ಕೇಂದ್ರ ಸಚಿವ ಕಿಶನ್ ರೆಡ್ಡಿ ಹೇಳಿದರು.

ಈ ನಡುವೆ, ಕೇರಳದಲ್ಲಿ 32,000 ಮಹಿಳೆಯರು ನಾಪತ್ತೆಯಾಗಿದ್ದಾರೆ ಎಂದು ಮತ್ತು ಹಿಂದೂ ಮಹಿಳೆಯರನ್ನು ಪ್ರೀತಿಸಿ, ಬಲವಂತವಾಗಿ ಮತಾಂತರಗೊಳಿಸಿ, ಅವರನ್ನು ಇಸ್ಲಾಮಿಕ್ ರಾಷ್ತ್ರಗಳಿಗೆ ಅಪಹರಣ ಮಾಡಲಾಗುತ್ತಿದೆ ಎಂದು ಚಲನಚಿತ್ರ ನಿರ್ಮಿಸಲಾಗಿದೆ. ಚಿತ್ರದ ನಿರ್ದೇಶಕರು, ನಾಲ್ಕು ವರ್ಷಗಳ ಕಾಲ ಕೇರಳದಲ್ಲಿ ಫೀಲ್ಡ್ ರಿಸರ್ಚ್ ಮಾಡಿ, ವಾಸ್ತವ ಮಾಹಿತಿ ಆಧರಿಸಿ ‘ದಿ ಕೇರಳ ಸ್ಟೋರಿ’ ಮಾಡಿದ್ದಾರೆ ಎಂದು ಚಿತ್ರತಂಡದವರು ಹೇಳುತ್ತಿದ್ದಾರೆ. ಇದನ್ನು ವಿರೋಧಿಸುತ್ತಿರುವ ರಾಜಕೀಯ ಪಕ್ಷಗಳು ಸಂಸತ್ತಿನಲ್ಲಿ ಕೇಂದ್ರ ಸಚಿವರೇ ನಿರಾಕರಿಸಿರುವಾಗ ನಕಲಿ ಮಾಹಿತಿ ಬಳಸಿ ಸಿನಿಮಾ ಮಾಡುವುದು ಹೇಗೆ ಎಂದು ಪ್ರಶ್ನಿಸುತ್ತಿವೆ.

ಚಿತ್ರ ಮೇ 5 ರಂದು ಬಿಡುಗಡೆಯಾಗುತ್ತಿದೆ. ಆಡಳಿತಾರೂಢ ಮಾರ್ಕ್ಸ್‌ವಾದಿ ಪಕ್ಷದ ವಿರೋಧದಿಂದಾಗಿ ಕೇರಳದಲ್ಲಿ ಚಿತ್ರ ಬಿಡುಗಡೆಯಾಗುತ್ತದೋ ಇಲ್ಲವೋ ಗೊತ್ತಿಲ್ಲ. ಆದರೆ, ಬೇರೆ ರಾಜ್ಯಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ. ಸಮಾಜದಲ್ಲಿ ಶಾಂತಿ, ಧಾರ್ಮಿಕ ಸೌಹಾರ್ದತೆ ಕದಡುವ ಸಿನಿಮಾ ಮಾಡುವುದು ಸರಿಯಲ್ಲ ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತರು.

ಹಿಂದಿ ಚಲನಚಿತ್ರ ದಿ ಕೇರಳ ಸ್ಟೋರಿ ಬಿಡುಗಡೆಯನ್ನು ತಡೆಯುವ ಅರ್ಜಿಯನ್ನು ಇಂದು ಸುಪ್ರೀಂ ಕೋರ್ಟ್ ತಿರಸ್ಕರಿಸಿರುವುದು ಗಮನಾರ್ಹ.

ಸಿನಿಮಾ

ವರದಿ: ಅರುಣ್ ಜಿ.,

ವಿದ್ಯಾ ಶ್ರೀಮುರಳಿ ಅರ್ಪಿಸುತ್ತಿರುವ ಈ ಚಿತ್ರದ ಶೀರ್ಷಿಕೆ ಬಿಡುಗಡೆ ಮಾಡಿ ಶುಭಕೋರಿದ ನಟ ಶ್ರೀಮುರಳಿ.

ವಿದ್ಯಾ ಶ್ರೀಮುರಳಿ ಅರ್ಪಿಸುವ, F3 ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಾಣವಾಗಿರುವ ಹಾಗೂ ನೀನಾಸಂ ಸತೀಶ್ ನಾಯಕರಾಗಿ ನಟಿಸಿರುವ “ಮ್ಯಾಟ್ನಿ” ಚಿತ್ರ ಜೂನ್‌ನಲ್ಲಿ ಬಿಡುಗಡೆಯಾಗಲಿದೆ‌. ಈಗ ಅದೇ ಸಂಸ್ಥೆಯ ಲಾಂಛನದಲ್ಲಿ “ಎಲ್ಲಾ ನಿನಗಾಗಿ” ಎಂಬ ನೂತನ ಚಿತ್ರ ಆರಂಭವಾಗಿದೆ‌. ವಿದ್ಯಾ ಶ್ರೀಮುರಳಿ ಅವರೆ ಈ ಚಿತ್ರವನ್ನೂ ಅರ್ಪಿಸುತ್ತಿದ್ದಾರೆ‌. ರಾಹುಲ್ ಆರ್ಕಾಟ್ ಹಾಗೂ ಧನ್ಯ ರಾಮಕುಮಾರ್ ಈ ಚಿತ್ರದ ನಾಯಕ – ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಕಾಶಿ ನಿರ್ದೇಶಿಸುತ್ತಿದ್ದಾರೆ. ಇತ್ತೀಚೆಗೆ ಈ ನೂತನ ಚಿತ್ರದ‌ ಸ್ಕ್ರಿಪ್ಟ್ ಪೂಜೆ ಹಾಗೂ ಶೀರ್ಷಿಕೆ ಅನಾವರಣ ಮಹಾಲಕ್ಷ್ಮಿ ಲೇಔಟ್‌ನ ಪಂಚಮುಖಿ ದೇವಸ್ಥಾನದಲ್ಲಿ ನೆರವೇರಿತು. ಖ್ಯಾತ ನಟ ಶ್ರೀಮುರಳಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಚಿತ್ರತಂಡಕ್ಕೆ ಶುಭ ಕೋರಿದರು. ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ “ಎಲ್ಲಾ ನಿನಗಾಗಿ” ಎಂದು ಹೆಸರಿಡಲಾಗಿದೆ. ಮೇ ಎರಡನೇ ವಾರದಲ್ಲಿ ಚಿತ್ರೀಕರಣ ಆರಂಭವಾಗಲಿದೆ.

ಸಿನಿಮಾ

ವರದಿ: ಅರುಣ್ ಜಿ.,

ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಹೃದಯಶಿವ ನಿರ್ದೇಶನ.

ಮಂಡ್ಯ, ಮುಂಗಾರು ಮಳೆ, ಗಾಳಿಪಟ ಸೇರಿದಂತೆ ಅನೇಕ ಸೂಪರ್ ಹಿಟ್ ಚಿತ್ರಗಳಿಗೆ ಹಾಡು‌ ಬರೆದಿರುವ ಸಾಹಿತಿ ಹೃದಯಶಿವ ನಿರ್ದೇಶನದ “ಬಿಸಿಲು ಕುದುರೆ” ಚಿತ್ರ ಇದೇ ಏಪ್ರಿಲ್ 21 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಅದಕ್ಕೂ ಮುನ್ನ ಚಿತ್ರದ ಹಾಡುಗಳ ಬಿಡುಗಡೆ ಸಮಾರಂಭ ನಡೆಯಿತು.

“ಕನ್ನಡ ಚಿತ್ರರಂಗದೊಂದಿಗೆ ನನಗೆ ಎರಡು ದಶಕಗಳ ನಂಟು. ಕನ್ನಡದ ಹಲವು ಚಿತ್ರಗಳಿಗೆ ಹಾಡು ಬರೆದಿದ್ದೇನೆ. ಕನ್ನಡದಲ್ಲಿ ಇದು ನನ್ನ ಮೊದಲ ನಿರ್ದೇಶನದ ಚಿತ್ರ. ಅರುಣ್ಯದಂಚಿನಲ್ಲಿ ತುಂಡುಭೂಮಿ ಹೊಂದಿರುವ ರೈತನ ಬವಣೆಯ ಕುರಿತಾದ ಚಿತ್ರವಿದು. ಒಂದೇ ಸರಕಾರದಡಿ ಕಾರ್ಯ ನಿರ್ವಹಿಸುವ ಅರಣ್ಯ ಇಲಾಖೆ ಹಾಗೂ ಕಂದಾಯ ಇಲಾಖೆಗಳ ನಡುವೆ ಸಮನ್ವಯತೆ ಇಲ್ಲದೆ ಹೋದಾಗ ಕಾಡಂಚಿನ ರೈತನ ಪಾಡು ಏನಾಗುತ್ತದೆ ಎಂಬುದೇ ಕಥಾಹಂದರ. ಇಮ್ತಿಯಾಜ್ ಸುಲ್ತಾನ್ ಸಂಗೀತ ನಿರ್ದೇಶನದಲ್ಲಿ ಮೂರು ಹಾಡುಗಳು ಹಾಗೂ ಮೂರು ಬಿಟ್ಸ್ ಗಳು ಸುಮಧುರವಾಗಿ ಮೂಡಿಬಂದಿವೆ. ಅನೂಪ್ ಸೀಳಿನ್, ರವೀಂದ್ರ ಸೊರಗಾವಿ, ಇಮ್ತಿಯಾಜ್ ಸುಲ್ತಾನ್ ಹಾಡಿದ್ದಾರೆ.

ಸಂಪತ್ ಮೈತ್ರೇಯ, ಸುನೀತಾ, ಕರಿಸುಬ್ಬು, ಮಳವಳ್ಳಿ ಸಾಯಿಕೃಷ್ಣ, ವಿಕ್ಟರಿ ವಾಸು, ಜೊಸೈಮನ್ ಮುಂತಾದವರು ನಮ್ಮ ಚಿತ್ರದಲ್ಲಿ ನಟಿಸಿದ್ದಾರೆ. ಚಿತ್ರ ಇದೇ ಏಪ್ರಿಲ್ 21 ರಂದು ಬಿಡುಗಡೆಯಾಗಲಿದೆ ನೋಡಿ ಹಾರೈಸಿ” ಎಂದು ನಿರ್ದೇಶಕ ಹಾಗೂ ನಿರ್ಮಾಪಕ ಹೃದಯಶಿವ ತಿಳಿಸಿದರು.

ತುಂಬಾ ಒಳ್ಳೆಯ ಪಾತ್ರ ನಿರ್ವಹಿಸಿರುವ ತೃಪ್ತಿ ಇದೆ ಎಂದರು ನಟ ಸಂಪತ್ ಮೈತ್ರೇಯ.

ಚಿತ್ರದಲ್ಲಿ ನಟಿಸಿರುವ ಸುನೀತಾ, ಕರಿಸುಬ್ಬು, ಜೊಸೈಮನ್, ವಿಕ್ಟರಿ ವಾಸು, ವೆಂಕಟೇಶ್, ಭಾಸ್ಕರ್ ಸೂರ್ಯ ತಮ್ಮ ಪಾತ್ರದ ಬಗ್ಗೆ ಮಾಹಿತಿ ನೀಡಿದರು. ಛಾಯಾಗ್ರಹಕ ನಾಗಾರ್ಜುನ್.ಡಿ ಹಾಗೂ ಸಂಕಲನಕಾರ ಬಿ.ಎಸ್.ಕೆಂಪರಾಜು “ಬಿಸಿಲು ಕುದುರೆ” ಬಗ್ಗೆ ಮಾತನಾಡಿದರು.

ಸಿನಿಮಾ

ವರದಿ: ಅರುಣ್ ಜಿ.,

ಇಂದಿನ ವಿದ್ಯಾರ್ಥಿಗಳೆ ಮುಂದಿನ ಸತ್ ಪ್ರಜೆಗಳು ಎಂಬ ಮಾತಿದೆ. ಅದಕ್ಕೆ ಅನುಗುಣವಾಗಿ ಈಗಿನ ಶಿಕ್ಷಣ ವ್ಯವಸ್ಥೆ ಹಾಗೂ ವಿದ್ಯಾರ್ಥಿಗಳನ್ನು  ಕುರಿತಾದ ಕಥಾಹಂದರ ಹೊಂದಿರುವ “SCAM (1770)” ಚಿತ್ರ ಬರುತ್ತಿದೆ. 

ಡಿ.ಕ್ರಿಯೇಷನ್ಸ್ ಲಾಂಛನದಲ್ಲಿ ದೇವರಾಜ್ ಆರ್ ನಿರ್ಮಿಸಿರುವ,  ವಿಕಾಸ್ ಪುಷ್ಪಗಿರಿ ನಿರ್ದೇಶಿಸಿರುವ ಈ ಚಿತ್ರದ ಮೊದಲ ಪೋಸ್ಟರ್ ಇತ್ತೀಚೆಗೆ ಬಿಡುಗಡೆಯಾಯಿತು. ಬೆಂಗಳೂರು ನಗರದ ಆಟದ ಮೈದಾನವೊಂದರಲ್ಲಿ ಸುಮಾರು  20 ತಂಡಗಳು ಭಾಗವಹಿಸಿರುವ ಕ್ರಿಕೆಟ್ ಟೂರ್ನಮೆಂಟ್ ನಡೆಯುತ್ತಿದ್ದು. ಆ ತಂಡಗಳ ನಾಯಕರು (ವಿದ್ಯಾರ್ಥಿಗಳು) “SCAM (1770)” ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿದರು.

ಇದೊಂದು ಪ್ರಸ್ತುತ ಶಿಕ್ಷಣ ವ್ಯವಸ್ಥೆ ಆಧಾರಿತ ಚಿತ್ರ. ಸತ್ಯ ಘಟನೆಗಳನ್ನು ಕಟ್ಟಿಕೊಂಡು ವಾಸ್ತವದಲ್ಲಿ ಏನೆನೆಲ್ಲಾ ನಡೆಯುತ್ತಿದೆ ಎಂಬ  ವಿಚಾರವನ್ನು ಇಟ್ಟುಕೊಂಡು ಮಾಡಿರುವ ಸಿನಿಮಾನೆ SCAM (1770) ವಿದ್ಯಾರ್ಥಿಗಳು, ಪೋಷಕರು ಹಾಗೂ ಶಿಕ್ಷಣ ಸಂಸ್ಥೆ ನಡೆಸುತ್ತಿರುವವರು ನೋಡಲೇ ಬೇಕಾದ ಚಿತ್ರವಿದು ಎಂದು ನಿರ್ದೇಶಕ ವಿಕಾಸ್ ಪುಷ್ಪಗಿರಿ ತಿಳಿಸಿದ್ದಾರೆ. 

ಡಿ.ಕ್ರಿಯೇಷನ್ಸ್ ಇತ್ತೀಚೆಗೆ ಆಕ್ಟ್-1978 ಮತ್ತು 19.20.21 ಎಂಬ ಸದಭಿರುಚಿ ಚಿತ್ರಗಳನ್ನು ನೀಡಿದ್ದು,  ದೇವರಾಜ್ ಆರ್ ಅವರ ನಿರ್ಮಾಣದ ಈ ಚಿತ್ರಕ್ಕೆ ಡಾ.ಇಂದು ನಟೇಶ್ ಹಾಗೂ ನೇತ್ರಾವತಿ (ಅಡ್ವೊಕೇಟ್) ಕಥೆ ಬರೆದಿದ್ದಾರೆ. ಚಿತ್ರ ಕಥೆಯನ್ನು ಶಂಕರ್ ರಾಮನ್ ಹಾಗೂ ವಿಕಾಸ್ ಪುಷ್ಪಗಿರಿ ಬರೆದಿದ್ದಾರೆ. ಸಂಭಾಷಣೆ ಶಂಕರ್ ರಾಮನ್ ಅವರದು. ಸತೀಶ್ ಆರ್ಯನ್ ಸಂಗೀತ ನಿರ್ದೇಶನ. ಶೋಯೆಬ್ ಛಾಯಾಗ್ರಹಣ, ಸುರೇಶ್ ಆರ್ಮುಗಂ ಸಂಕಲನ, ಕಲೈ – ರಾಮು ನೃತ್ಯ ನಿರ್ದೇಶನ ಹಾಗೂ ಚಂದ್ರು ಬಂಡೆ ಸಾಹಸ ನಿರ್ದೇಶನವಿದೆ.

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಚಿತ್ರದ ಖ್ಯಾತಿಯ ರಂಜನ್ (ದಡ್ಡ ಪ್ರವೀಣ), ಬಿ.ಸುರೇಶ್, ಅವಿನಾಶ್, ಶ್ರೀನಿವಾಸಪ್ರಭು, ರಮೇಶ್ ಪಂಡಿತ್, ರಾಘು ಶಿವಮೊಗ್ಗ, ನಾರಾಯಣ ಸ್ವಾಮಿ, ಉಗ್ರಂ ಸಂದೀಪ್, ಹರಿಣಿ, ಹಂಸ, ಸುನೇತ್ರ ಪಂಡಿತ್, ಶೃತಿ ನಾಯಕ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. 

ಈಗಾಗಲೇ “SCAM (1770)” ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದ್ದು, ಸದ್ಯದಲ್ಲೇ ಪ್ರಥಮ ಪ್ರತಿ ಸಿದ್ದವಾಗಲಿದೆ.

ಏಪ್ರಿಲ್ 15 ಕ್ಕೆ ಈ ಸಿನಿಮಾದ ಟೀಸರ್ ಬಿಡುಗಡೆಯಾಗಲಿದೆ.

ಸಿನಿಮಾ

ವರದಿ: ಅರುಣ್ ಜಿ.,

ದಂತಚೋರ ವೀರಪ್ಪನ್​ ಅವರ ಮಗಳು ಹಾಗೂ ತಮಿಳುನಾಡಿನ ಭಾರತೀಯ ಜನತಾ ಪಕ್ಷದ ಯುವ ಘಟಕದ ಉಪಾಧ್ಯಕ್ಷೆಯಾಗಿರುವ ವಿಜಯಲಕ್ಷ್ಮಿ ಇದೀಗ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದು, ‘ಮಾವೀರನ್​ ಪಿಳ್ಳೈ’ ಎಂಬ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಈಗಾಗಲೇ ಚಿತ್ರದ ಚಿತ್ರೀಕರಣ ಸಂಪೂರ್ಣವಾಗಿದ್ದು, ಇತ್ತೀಚೆಗೆ ಹಾಡುಗಳ ಬಿಡುಗಡೆಯಗಿದೆ.

ಚೆನ್ನೈನ ಪ್ರಸಾದ್​ ಲ್ಯಾಬ್​ನಲ್ಲಿ ನಡೆದ ಈ ಸಮಾರಂಭದಲ್ಲಿ ವೀರಪ್ಪನ್​ ಪತ್ನಿ ಮುತ್ತುಲಕ್ಷ್ಮಿ, ಆಲ್​ ಪೀಪಲ್ಸ್​ ಪೊಲಿಟಿಕಲ್​ ಪಾರ್ಟಿ ಅಧ್ಯಕ್ಷೆ ರಾಜೇಶ್ವರಿ ಪ್ರಿಯಾ, ನಟ ಕೂಲ್​ ಸುರೇಶ್​, ನಿರ್ದೇಶಕ ಪೇರರಸು, ನಿರ್ಮಾಪಕ ಕೆ.ಎನ್.​ಆರ್.​ರಾಜ ಮುಂತಾದವರು ಹಾಜರಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ನಿರ್ಮಾಪಕ ರಾಜ, ‘ಪ್ರತಿ ಸಂಸಾರದಲ್ಲೂ ಕುಡಿತದಿಂದ ಒಂದಲ್ಲ ಒಂದು ಸಮಸ್ಯೆಗಳು ಎದುರಾಗುತ್ತವೆ. ಕುಡಿತದಿಂದ ಆಗುವ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಈ ಚಿತ್ರವನ್ನು ನಿರ್ಮಿಸಿದ್ದೇವೆ’ ಎಂದು ಹೇಳಿದರು.

ವಿಜಯಲಕ್ಷ್ಮಿ ಅವರಿಗೆ ಬಾಲ್ಯದಿಂದಲೂ ನಟಿಸುವ ಆಸಕ್ತಿ ಇತ್ತಂತೆ. ‘ಮೊದಲಿನಿಂದಲೂ ನಟಿಸುವ ತುಡಿತ ಇತ್ತು. ಈಗ ಅವಕಾಶ ಸಿಕ್ಕಿದೆ. ಕುಡಿತದಿಂದಾಗಿ ಪ್ರತೀ ಮನೆಯಲ್ಲೂ ಸಾಕಷ್ಟು ಮಹಿಳೆಯರು ಕಷ್ಟಗಳನ್ನು ಅನುಭವಿಸುತ್ತಿದ್ದಾರೆ. ಅಂಥ ಮಹಿಳೆಯರ ಕುರಿತು ಈ ಚಿತ್ರದಲ್ಲಿ ಬೆಳಕು ಚೆಲ್ಲಲಾಗಿದೆ. ಅದೇ ಕಾರಣಕ್ಕೆ ಈ ಚಿತ್ರದಲ್ಲಿ ನಟಿಸುವುದಕ್ಕೆ ಒಪ್ಪಿಕೊಂಡೆ’ ಎಂದು ಹೇಳಿದರು.

ಒಂದು ಚಿತ್ರದಲ್ಲಿ ಯಾರು ನಟಿಸಿದ್ದಾರೆ ಅಥವಾ ಚಿತ್ರವನ್ನು ಯಾರು ನಿರ್ದೇಶಿಸಿದ್ದಾರೆ ಎಂಬುದು ಮುಖ್ಯವಲ್ಲ, ಚಿತ್ರದ ಕಥಾವಸ್ತು ಮುಖ್ಯ ಎಂದ ನಿರ್ದೇಶಕ ಪೇರರಸು, ‘ನಮ್ಮ ಚಿತ್ರರಂಗದಲ್ಲಿ ಮುಖ್ಯಮಂತ್ರಿಗಳ ಮಗನೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಹಾಗೆಯೇ, ವೀರಪ್ಪನ್​ ಮಗಳು ಸಹ ಇದೀಗ ಚಿತ್ರರಂಗಕ್ಕೆ ಬಂದಿದ್ದಾರೆ. ಚಿತ್ರರಂಗ ಎಲ್ಲರನ್ನೂ ಕೈಬೀಸಿ ಕರೆಯುತ್ತಿದೆ. ನಾವು ಸಹ ವಿಜಯಲಕ್ಷ್ಮಿ ಅವರನ್ನು ಬಹಳ ಪ್ರೀತಿಯಿಂದ ಚಿತ್ರರಂಗಕ್ಕೆ ಬರಮಾಡಿಕೊಳ್ಳುತ್ತಿದ್ದೇವೆ’ ಎಂದು ವಿಜಯಲಕ್ಷ್ಮಿ ಅವರಿಗೆ ಚಿತ್ರರಂಗಕ್ಕೆ ಸ್ವಾಗತ ಕೋರಿದರು.

‘ಇಂದು ದೊಡ್ಡವರಷ್ಟೇ ಅಲ್ಲ, ಸಣ್ಣ ಮಕ್ಕಳು ಸಹ ಕುಡಿಯುವ ವೀಡಿಯೋಗಳು ಬಿಡುಗಡೆಯಾಗಿ ಎಲ್ಲರಿಗೂ ಆಘಾತ ತಂದಿದೆ. ಈ ಚಿತ್ರದಲ್ಲಿ ‘ಸಾರಾಯಂ ಅಭಯಂ’ ಎಂಬ ಹಾಡಿದ್ದು, ಕುಡಿತದ ವಿರುದ್ಧದ ಅಭಿಯಾನದಲ್ಲಿ ಬಳಸಿಕೊಳ್ಳಬಹುದು. ಜನ ಮತ ಚಲಾಯಿಸುತ್ತಾರೋ, ಇಲ್ಲವೋ ಎಂಬ ಭಯದಿಂದ ಯಾವ ರಾಜಕಾರಿಣಿಯೂ ಕುಡಿತವನ್ನು ನಿಷೇಧಿಸುವ ಮಾತಾಡುವುದಿಲ್ಲ. ಅವರ ಭಾಷಣಗಳಲ್ಲಿ, ಮಾತುಗಳಲ್ಲಿ ಕುಡಿತ ಕುರಿತು ಪ್ರಸ್ತಾಪವೇ ಇರುವುದಿಲ್ಲ. ಮುಂದಿನ ದಿನಗಳಲ್ಲಿ ಸಾರಾಯಿ ತರಹ ಗಾಂಜ ಅಂಗಡಿಗಳು ಪ್ರಾರಂಭವಾದರೂ ಆಶ್ಚರ್ಯವಿಲ್ಲ. ಆಗಾಗ ಆನ್​ಲೈನ್​ ರಮ್ಮಿಯಿಂದ ಜನ ಸಾಯುವ ಬಗ್ಗೆ ಕೇಳುತ್ತಿರುತ್ತೇವೆ. ಆದರೆ, ಕುಡಿತದಿಂದ ಪ್ರತೀ ದಿನ ನೂರಾರು ಜನ ಸಾಯುತ್ತಿದ್ದಾರೆ. ಆನ್​ಲೈನ್​ ರಮ್ಮಿಯನ್ನು ನಿಷೇಧಿಸಬೇಕು ಎನ್ನುವವರು ಕುಡಿತವನ್ನು ನಿಷೇಧಿಸಬೇಕು ಎಂದು ಆಗ್ರಹಿಸುವುದಿಲ್ಲ. ಮಹಿಳೆಯರಿಗೆ ಸಾವಿರಾರು ರೂಪಾಯಿ ಬೇಕಿಲ್ಲ. ಅವರಿಗೆ ಎಸಿ ಬಸ್​ ಬೇಕಿಲ್ಲ. ನೀಟ್​ ಪರೀಕ್ಷೆಗಳು ಮುಖ್ಯವಲ್ಲ. ಜನಸಾಮಾನ್ಯರಿಗೆ ಸಮಸ್ಯೆ ಆಗಿರುವ ಸಾರಾಯಿಯನ್ನು ಮೊದಲು ನಿಷೇಧಿಸಿ’ ಎಂದು ಆಗ್ರಹಿಸಿ.

ಈ ಚಿತ್ರಕ್ಕೆ ಮಂಜುನಾಥ ಅವರ ಛಾಯಾಗ್ರಹಣ ಮತ್ತು ರವಿವರ್ಮ ಸಂಗೀತವಿದೆ. ಪ್ರೇಮ್​ ಹಿನ್ನೆಲೆ ಸಂಗೀತ ಸಂಯೋಜಿಸಿದರೆ, ಜೂಲಿಯನ್​ ಸಂಕಲನಕಾರರಾಗಿ ದುಡಿದಿದ್ದಾರೆ.