ಸಿನಿಮಾ Archives » Page 8 of 10 » Dynamic Leader
November 24, 2024
Home Archive by category ಸಿನಿಮಾ (Page 8)

ಸಿನಿಮಾ

ಸಿನಿಮಾ

ವರದಿ: ಅರುಣ್ ಜಿ.,

ಅಶ್ವಿನ್ ಬಿ.ಸಿ.ನಿರ್ಮಿಸಿರುವ, ಅಶೋಕ್ ಚಕ್ರವರ್ತಿ ನಿರ್ದೇಶನದಲ್ಲಿ ತ್ರಿವಿಕ್ರಮ್ ಹಾಗೂ ಡಯಾನ ಅವರು ನಾಯಕ – ನಾಯಕಿಯಾಗಿ ನಟಿಸಿರುವ “ಸಕೂಚಿ” ಚಿತ್ರ ಬಿಡುಗಡೆಯಾಗಿ ಯಶಸ್ವಿ ಇಪ್ಪತ್ತೈದು ದಿನಗಳ ಪ್ರದರ್ಶನ ಕಂಡಿದೆ. ಈ ಸಂತಸವನ್ನು ಚಿತ್ರತಂಡದ ಸದಸ್ಯರು ಮಾಧ್ಯಮಗೋಷ್ಠಿಯಲ್ಲಿ ಹಂಚಿಕೊಂಡರು.

ಕನ್ನಡದಲ್ಲಿ ಈಗ ವಾರಕ್ಕೆ ಹತ್ತಕ್ಕೂ ಹೆಚ್ಚು ಚಿತ್ರಗಳು ಬಿಡುಗಡೆಯಾಗುತ್ತಿದೆ. ಈ ಸಂದರ್ಭದಲ್ಲಿ ನಮ್ಮ ಚಿತ್ರ ಇಪ್ಪತ್ತೈದು ದಿನಗಳ ಯಶಸ್ವಿ ಪ್ರದರ್ಶನ ಕಂಡಿರುವುದು ಖುಷಿಯಾಗಿದೆ. ಇದಕ್ಕೆ ಕಾರಣರಾದ ನಿರ್ಮಾಪಕರಿಗೆ, ನನ್ನ ತಂಡಕ್ಕೆ, ಮಾಧ್ಯಮದವರಿಗೆ ಹಾಗೂ ಪ್ರೇಕ್ಷಕರಿಗೆ ಧನ್ಯವಾದ ತಿಳಿಸುತ್ತೇನೆ. ಈ ವಾರದಿಂದ ಬೆಂಗಳೂರಿನಲ್ಲಿ ನಾಲ್ಕೈದು ಚಿತ್ರಮಂದಿರಗಳು ಹೆಚ್ಚಾಗುವ ಸಾಧ್ಯತೆಯಿದೆ. ಬುಕ್ ಮೈ ಶೋನಲ್ಲಿ 8.3 ರೇಟಿಂಗ್ ಇದೆ. ಚಿತ್ರ ನೋಡಿದ ಪ್ರೇಕ್ಷಕರು ಚಿತ್ರದಲ್ಲಿ ಬರುವ ಮಾರಮ್ಮ, ಬೆಂಕಿ ಮುಂತಾದ ಪಾತ್ರಗಳ ಬಗ್ಗೆ ಮೆಚ್ಚುಗೆ ಮಾತುಗಳಾಡುತ್ತಿದ್ದಾರೆ. ಓಟಿಟಿ, ಡಬ್ಬಿಂಗ್ ಹಕ್ಕು ಇವುಗಳ ಬಗ್ಗೆ ಮಾತುಕತೆ ನಡೆಯುತ್ತಿದೆ. ಮುಂದೆ “ಸಕೂಚಿ” ಭಾಗ 2 ಮಾಡುವ ಯೋಚನೆಯಿದೆ ಎಂದು ನಿರ್ದೇಶಕ ಅಶೋಕ್ ಚಕ್ರವರ್ತಿ ತಿಳಿಸಿದರು. 

ಚಿತ್ರಕ್ಕೆ ಸಿಗುತ್ತಿರುವ ಪ್ರಶಂಸೆಗೆ ನಾಯಕಿ ಡಯಾನ ಸಂತಸ ವ್ಯಕ್ತಪಡಿಸಿದರು. ಚಿತ್ರದಲ್ಲಿ ನಟಿಸಿರುವ ಸಂಜಯ್ ರಾಜ್, ಹರೀಶ್ ಯಾದವ್, ಮಾರಮ್ಮ ಪಾತ್ರಧಾರಿ, ನೃತ್ಯ ನಿರ್ದೇಶಕ ಆನಂದ್, ಸತ್ಯ ಪಿಕ್ಚರ್ಸ್ ನ ಪ್ರಶಾಂತ್ ಹಾಗೂ ಸಂಗೀತ ನಿರ್ದೇಶಕ ಗಣೇಶ್ ಗೋವಿಂದಸ್ವಾಮಿ ಯಶಸ್ವಿ ಪತ್ರಿಕಾಗೋಷ್ಠಿಯಲ್ಲಿ ಚಿತ್ರದ ಕುರಿತು ಮಾತನಾಡಿದರು.

ಸಿನಿಮಾ

ವರದಿ: ಅರುಣ್ ಜಿ.,

ನವಿ ನಿರ್ಮಿತಿ ಲಾಂಛನದಲ್ಲಿ ನಮಿತಾರಾವ್ ನಿರ್ಮಿಸಿರುವ, ವಿಕ್ರಮ್ ಸೂರಿ ನಿರ್ದೇಶನದ “ಚೌಕಾಬಾರ” ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭ ಇತ್ತೀಚೆಗೆ ಅದ್ದೂರಿಯಾಗಿ ನಡೆಯಿತು. ಖ್ಯಾತ ಸಾಹಿತಿಗಳಾದ ಹೆಚ್.ಎಸ್.ವೆಂಕಟೇಶ್ ಮೂರ್ತಿ, ಬಿ.ಆರ್.ಲಕ್ಷ್ಮಣರಾವ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಆಧ್ಯಕ್ಷ ಭಾ.ಮ.ಹರೀಶ್,  ನಟ ಸುಂದರರಾಜ್, ಲಹರಿ ವೇಲು, ರಘು ಭಟ್, ನಿರ್ಮಾಪಕ ಸಂಜಯ್ ಗೌಡ, ಸಚಿವ ಆರ್.ಅಶೋಕ್ ಪುತ್ರ ಶರತ್, ಉದ್ಯಮಿ ಉಮೇಶ್ ಕುಮಾರ್‌, ಸಂಜಯ್ ಸೂರಿ ಸೇರಿದಂತೆ ಅನೇಕ ಗಣ್ಯರು ಹಾಗೂ ಚಿತ್ರತಂಡದ ಸದಸ್ಯರು ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಉಪಸ್ಥಿತರಿದ್ದರು.

ವಿಕ್ರಮ್ ಸೂರಿ ನನಗೆ “ಚಿನ್ನಾರಿ‌ಮುತ್ತ” ಚಿತ್ರದ ಸಮಯದಿಂದಲೂ ಪರಿಚಯ. ಸಾಹಿತ್ಯದ ಬಗ್ಗೆ ವಿಶೇಷ ಕಾಳಜಿಯಿರುವ ವಿಕ್ರಮ್ ಸೂರಿ – ನಮಿತಾರಾವ್ ದಂಪತಿ ನನ್ನ ಹತ್ತಿರ ಈ ಚಿತ್ರಕ್ಕೆ ಹಾಡೊಂದು ಬರೆಸಿದ್ದಾರೆ. ಹಾಡುಗಳು ಹಾಗೂ ಟ್ರೇಲರ್ ಚೆನ್ನಾಗಿದೆ. ಚಿತ್ರ ಕೂಡ ಚೆನ್ನಾಗಿರುತ್ತದೆ ಎಂದರು ಹಿರಿಯ ಸಾಹಿತಿ ಹೆಚ್.ಎಸ್.ವೆಂಕಟೇಶ್ ಮೂರ್ತಿ.

ನಾನು ಹಾಗೂ ಹೆಚ್.ಎಸ್.ವಿ ಇಬ್ಬರು ಈ ಚಿತ್ರಕ್ಕೆ ಹಾಡು ಬರೆದಿರುವುದು ಖುಷಿಯಾಗಿದೆ. ನಮ್ಮ ಹಾಡಿಗೆ ಅಶ್ವಿನ್ ಕುಮಾರ್ ಉತ್ತಮವಾಗಿ ರಾಗ ಸಂಯೋಜನೆ ಮಾಡಿದ್ದಾರೆ. ಚಿತ್ರ ಯಶಸ್ವಿಯಾಗಲಿ ಎಂದು ಸಾಹಿತಿ ಬಿ.ಆರ್.ಲಕ್ಷ್ಮಣರಾವ್ ಹಾರೈಸಿದರು. ಭಾ.ಮ.ಹರೀಶ್, ಸುಂದರರಾಜ್,  ಲಹರಿ ವೇಲು, ರಘು ಭಟ್, ಸಂಜಯ್ ಗೌಡ ಮುಂತಾದ ಗಣ್ಯರು “ಚೌಕಾಬಾರ” ಚಿತ್ರ ಯಶಸ್ವಿಯಾಗಲೆಂದು ಶುಭ ಕೋರಿದರು.

ಮಣಿ ಆರ್ ರಾವ್ ಅವರ ಕಾದಂಬರಿ ಆಧಾರಿತ “ಚೌಕಾಬಾರ” ಚಿತ್ರ, ಇದೇ ಮಾರ್ಚ್ ಹತ್ತರಂದು ಬಿಡುಗಡೆಯಾಗಲಿದೆ. ಚಿತ್ರದ ಆರಂಭದಿಂದಲೂ ನಿಮ್ಮೆಲ್ಲರ ಪ್ರೋತ್ಸಾಹ ಅಪಾರ. ಮುಂದು ಕೂಡ ನಿಮ್ಮ ಪ್ರೋತ್ಸಾಹ ಮುಂದುವರೆಯಲಿ ಎಂದರು ನಿರ್ಮಾಪಕಿ – ನಟಿ ನಮಿತಾರಾವ್ ಹಾಗೂ ನಿರ್ದೇಶಕ ವಿಕ್ರಮ್ ಸೂರಿ.  ಚಿತ್ರದ ನಾಯಕ ವಿಹಾನ್ ಪ್ರಭಂಜನ್, ನಟಿ ಕಾವ್ಯ ರಮೇಶ್ ಮುಂತಾದ ಕಲಾವಿದರು ಸಮಾರಂಭದಲ್ಲಿದ್ದರು. .

ಸಿನಿಮಾ

ವರದಿ: ಅರುಣ್ ಜಿ.,

ಉತ್ಸಾಹಿ ಯುವಕರ ತಂಡದಿಂದ ಮೂಡಿಬಂದಿರುವ ‘ಕಡಲತೀರದ ಭಾರ್ಗವ’ ಚಿತ್ರದ ಟ್ರೇಲರ್ ಮತ್ತು ಹಾಡುಗಳು ಈಗಾಗಲೇ ಪ್ರೇಕ್ಷಕರ ಗಮನ ಸೆಳೆದಿವೆ. ಈಗ ಚಿತ್ರವು ಇದೇ ಮಾರ್ಚ್ 03ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

‘ಕಡಲತೀರದ ಭಾರ್ಗವ’ ಎಂದರೆ ಮೊದಲಿಗೆ ನೆನಪಿಗೆ ಬರುವುದು ಡಾ.ಶಿವರಾಮ ಕಾರಂತರು. ಕನ್ನಡ ನಾಡಿನಲ್ಲಿ ಅವರು ‘ಕಡಲತೀರದ ಭಾರ್ಗವ’ ಎಂಬ ಬಿರುದಿನಿಂದಲೇ ಅವರು ಪ್ರಸಿದ್ಧರಾದವರು. ಆದರೆ, ಅವರಿಗೂ, ಈ ಚಿತ್ರಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲ, ಇದು ಅವರ ಜೀವನದ ಕಥೆಯಲ್ಲ ಎನ್ನುತ್ತಾರೆ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆಯುವುದರ ಜೊತೆಗೆ ನಿರ್ದೇಶನ ಮಾಡಿರುವ ಪನ್ನಗ ಸೋಮಶೇಖರ್.

ಈ ಕುರಿತು ಮಾತನಾಡಿದ ಅವರು, ‘ಕಡಲು ಎಂದರೆ ಅಂತ್ಯವಿಲ್ಲದ್ದು ಅಥವಾ ಅನಂತ ಎಂದರ್ಥ. ಆ ಕಡಲನ್ನು ನಮ್ಮ ಚಿತ್ರದಲ್ಲಿ ಒಂದು ವಿಷಯಕ್ಕೆ ಹೋಲಿಸಿದ್ದೇನೆ. ಇನ್ನು, ಭಾರ್ಗವರಾಮ ಅಥವಾ ಪರಶುರಾಮ ಎನ್ನುವುದು ನಮ್ಮ ಪುರಾಣಗಳಲ್ಲಿ ಬರುವ ಒಂದು ಪವರ್ಫುಲ್ ಪಾತ್ರ. ಇಲ್ಲಿ ನಾಯಕ ಭಾರ್ಗವ, ಪರಶುರಾಮನ ಗುಣಲಕ್ಷಣಗಳನ್ನು ಹೊಂದಿರುತ್ತಾನೆ. ಏನೇ ಆದರೂ ಗುರಿ ಸಾಧಿಸುತ್ತೇನೆ ಎಂಬ ಛಲದಿಂದ ಮುನ್ನಡೆಯುತ್ತಿರುತ್ತಾನೆ. ಹಾಗಾಗಿ, ಚಿತ್ರಕ್ಕೆ ‘ಕಡಲತೀರದ ಭಾರ್ಗವ’ ಎಂದು ಹೆಸರಿಟ್ಟಿದ್ದೇವೆ. ಇದೊಂದು ಸೈಕಲಾಜಿಕಲ್ ಥ್ರಿಲ್ಲರ್ ಚಿತ್ರವಾಗಿದ್ದು, ಡಾ.ಶಿವರಾಮ ಕಾರಂತರಿಗೂ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ. ಅವರಿಗೆ ಧಕ್ಕೆ ತರುವಂತಹ ಯಾವುದೇ ಕೆಲಸವನ್ನೂ ಮಾಡಿಲ್ಲ. ಈಗಾಗಲೇ ಚಿತ್ರವನ್ನು ಹಲವರಿಗೆ ತೋರಿಸಿದ್ದೇವೆ. ಚಿತ್ರ ನೋಡಿದವರೆಲ್ಲರೂ ಮೆಚ್ಚಿಕೊಂಡಿದ್ದಾರೆ. ಶೀರ್ಷಿಕೆಗೆ ನ್ಯಾಯ ಸಲ್ಲಿಸಿದ್ದೇನೆ ಎಂದು ಅಭಿಪ್ರಾಯ ಪಟ್ಟಿದ್ದಾರೆ’ ಪನ್ನಗ ಸೋಮಶೇಖರ್.

 

‘ಒಬ್ಬ ಮನುಷ್ಯನಲ್ಲಿ ಎಲ್ಲ ತರಹದ ಭಾವನೆಗಳಿರುತ್ತವೆ. ಆ ಎಮೋಷನ್ಗಳನ್ನು ಇಟ್ಟುಕೊಂಡು ಮಾಡಿರುವ ಕಥೆಯೇ ‘ಕಡಲತೀರದ ಭಾರ್ಗವ’’ ಎನ್ನುತ್ತಾರೆ ಚಿತ್ರದ ನಾಯಕರಲ್ಲೊಬ್ಬರಾದ ವರುಣ್ ರಾಜು. ‘ಚಿತ್ರದ ಟ್ರೇಲರ್ಗೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಟ್ರೇಲರ್ ನೋಡಿದವರೆಲ್ಲ, ಬಹಳ ಗ್ರಿಪ್ಪಿಂಗ್ ಆಗಿದೆ, ಕಥೆ ಗೊತ್ತಾಗುತ್ತಿಲ್ಲ, ಹೊಸಬರೇ ಸೇರಿ ಈ ಚಿತ್ರ ಮಾಡಿದ್ದು ಎಂದನಿಸುತ್ತಿಲ್ಲ ಎಂದು ಹೇಳುತ್ತಿದ್ದಾರೆ. ನಾಳೆ ಚಿತ್ರ ನೋಡುವ ಪ್ರೇಕ್ಷಕರು ಸಹ ಇದೇ ಅಭಿಪ್ರಾಯಪಟ್ಟರೆ ನಮ್ಮ ಶ್ರಮ ಸಾರ್ಥಕ’ ಎನ್ನುತ್ತಾರೆ ವರುಣ್.

ಈಗಾಗಲೇ ‘ಕಡಲತೀರದ ಭಾರ್ಗವ’ ಚಿತ್ರದ ಮೊದಲ ಟಿಕೆಟ್ ದಾಖಲೆಯ ಎರಡೂವರೆ ಲಕ್ಷ ರೂಗಳಿಗೆ ಹರಾಜಿನಲ್ಲಿ ಮಾತಾಟವಾಗಿದೆ. ನಾಯಕ ವರುಣ್ ರಾಜು ಅವರ ಸಂಬಂಧಿಯೂ ಆದ ಮೋಹನ್ ರಾಜು ದುಡ್ಡು ಕೊಟ್ಟು ಮೊದಲ ಟಿಕೆಟ್ ಪಡೆದಿದ್ದಾರೆ. ‘ಕಡಲತೀರದ ಭಾರ್ಗವ’ ಚಿತ್ರದ ಹಿಂದೆ ಉತ್ಸಾಹಿ ಯುವಕರ ತಂಡವಿದ್ದು, ಈ ಚಿತ್ರವನ್ನು ಎವ ಕಲಾ ಸ್ಟುಡಿಯೋಸ್ನಡಿ ವರುಣ್ ರಾಜು ಮತ್ತು ಭರತ್ ಗೌಡ ಜಂಟಿಯಾಗಿ ನಿರ್ಮಿಸಿದ್ದಾರೆ. ಭರತ್ ಗೌಡ, ಶ್ರುತಿ ಪ್ರಕಾಶ್, ವರುಣ್ ರಾಜು, ರಾಘವ್ ನಾಗ್, ಕೆ.ಎಸ್.ಶ್ರೀಧರ್, ಅಶ್ವಿನ್ ಹಾಸನ್ ಮುಂತಾದವರು ನಟಿಸಿರುವ ಈ ಚಿತ್ರಕ್ಕೆ ಅನಿಲ್ ಸಿ.ಜೆ.ಅವರ ಸಂಗೀತ ಮತ್ತು ಕೀರ್ತನ್ ಪೂಜಾರಿ ಛಾಯಾಗ್ರಹಣವಿದೆ.

ಸಿನಿಮಾ

ವರದಿ: ಅರುಣ್ ಜಿ.,

ನಟ ಅನೀಶ್ ತೇಜೇಶ್ವರ್, ನಿರ್ದೇಶಕ ಅಭಿಷೇಕ್ ಶೆಟ್ಟಿ ಕಾಂಬಿನೇಶನ್ ನಲ್ಲಿ ಮೂಡಿ ಬರ್ತಿರುವ ಸಿನಿಮಾ ‘ಆರಾಮ್ ಅರವಿಂದ್ ಸ್ವಾಮಿ’. ಮಾಸ್ ಹೀರೋ ಆಗಿ ಮಿಂಚಿದ್ದ ಅನೀಶ್ ತೇಜೇಶ್ವರ್ ಇದೇ ಮೊದಲ ಬಾರಿಗೆ ರೋಮ್ಯಾಂಟಿಕ್ ಕಾಮಿಡಿ ಸಬ್ಜೆಕ್ಟ್ ಒಳಗೊಂಡ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಟೈಟಲ್ ಮೂಲಕ ಗಮನ ಸೆಳೆದಿರುವ ಈ ಚಿತ್ರದಿಂದ ಹೊಸದೊಂದು ಅಪ್ಡೇಟ್ ಹೊರಬಿದ್ದಿದೆ.

ರೋಮ್ಯಾಂಟಿಕ್ ಕಾಮಿಡಿ ಸಬ್ಜೆಕ್ಟ್ ಒಳಗೊಂಡ ‘ಆರಾಮ್ ಅರವಿಂದ್ ಸ್ವಾಮಿ’ ಚಿತ್ರಕ್ಕೆ ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಸಂಗೀತ ನಿರ್ದೇಶನ ನೀಡುತ್ತಿದ್ದಾರೆ. ಚಿತ್ರತಂಡ ಅಧೀಕೃತವಾಗಿ ಮಾಹಿತಿ ಹಂಚಿಕೊಂಡಿದ್ದು, ಅರ್ಜುನ್ ಜನ್ಯ ಎಂಟ್ರಿಯಿಂದ ಸಿನಿಮಾ ಮೇಲಿನ ನಿರೀಕ್ಷೆಯೂ ದುಪ್ಪಟ್ಟಾಗಿದೆ. 

‘ನಮ್ ಗಣಿ ಬಿಕಾಂ ಪಾಸ್, ‘ಗಜಾನನ ಅಂಡ್ ಗ್ಯಾಂಗ್’ ಸಿನಿಮಾಗಳ ಮೂಲಕ ಭರವಸೆ ಮೂಡಿಸಿರುವ ಅಭಿಷೇಕ್ ಶೆಟ್ಟಿ ನಿರ್ದೇಶನದಲ್ಲಿ ಮೂಡಿ ಬರ್ತಿರುವ ಮೂರನೇ ಸಿನಿಮಾವಿದು. ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದು, ಮಿಲನ ನಾಗರಾಜ್ ಹಾಗೂ ಹೃತಿಕ ಶ್ರೀನಿವಾಸ್ ಅನೀಶ್ ಜೊತೆ ಸ್ಕ್ರೀನ್ ಶೇರ್ ಮಾಡುತ್ತಿದ್ದಾರೆ. 

‘ಅಕಿರ’ ಸಿನಿಮಾ ಖ್ಯಾತಿಯ ಶ್ರೀಕಾಂತ್ ಪ್ರಸನ್ನ, ‘ಗುಳ್ಟು’ ಸಿನಿಮಾ ಖ್ಯಾತಿಯ ಪ್ರಶಾಂತ್ ರೆಡ್ಡಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಬೆಂಗಳೂರು ಸುತ್ತಮುತ್ತ ಎರಡು ಶೆಡ್ಯೂಲ್ ಚಿತ್ರೀಕರಣ ಕಂಪ್ಲೀಟ್ ಮಾಡಿರುವ ಚಿತ್ರತಂಡ ಮೂರನೇ ಶೆಡ್ಯೂಲ್ ಕೇರಳದಲ್ಲಿ ಸೆರೆ ಹಿಡಿಯಲು ಪ್ಲ್ಯಾನ್ ಮಾಡಿಕೊಂಡಿದೆ. ಚಿತ್ರಕ್ಕೆ ಸಾಗರ್ ಛಾಯಾಗ್ರಹಣ, ಉಮೇಶ್ ಸಂಕಲನವಿದೆ.

ಸಿನಿಮಾ

ವರದಿ: ಅರುಣ್ ಜಿ.,

ಗೆಲುವಿಗೆ ನೂರು ಜನ ಅಪ್ಪಂದಿರು, ಸೋಲಿಗೆ ಮಾತ್ರ ಒಬ್ಬನೇ… ಅನ್ನೋ ಮಾತಿದೆಯಲ್ಲಾ ಹಾಗೇ ಚಿತ್ರರಂಗದಲ್ಲಿ ಕೂಡಾ. ಎಲ್ಲವೂ ನಾನೇ, ನನ್ನಿಂದಲೇ ಎನ್ನುವ ಈಗೇ ಬೆಳೆದಿರುತ್ತದೆ. ಎಲ್ಲೆಲ್ಲಿಂದಲೋ ಬಂದವರು ಒಂದು ಕಡೆ ಸೇರಿ ಏನೋ ಸಾಧಿಸುತ್ತಾರೆ. ಅಲ್ಲೀತನಕ ಇದ್ದ ಒಗ್ಗಟ್ಟು ಒಂದೇ ಏಟಿಗೆ ದಿಕ್ಕಾಪಾಲಾಗಿರುತ್ತದೆ.

ಅದಾಗಲೇ ಎರಡು ಬಾರಿ ಸೋಲು ಕಂಡ ನಿರ್ದೇಶಕ, ಅವನನ್ನು ಅವಮಾನಿಸುವ ಬೆಳೆದು ನಿಂತ ಹೀರೋಗಳು, ಸೆಟೆದು ನಿಂತವನು ಮಾಡೋದು ಏನೇನೂ ಅಲ್ಲದ, ಯಾವುದೋ ಶಾಲೆಯಲ್ಲಿ ಪಾಠ ಮಾಡುವ ಮೇಷ್ಟ್ರನ್ನು ಕರೆತಂದು ಹೀರೋ ಮಾಡುತ್ತಾನೆ. ಆ ಪ್ರಯತ್ನ ಏನಾಗುತ್ತದೆ? ಸಿನಿಮಾವೊಂದರ ಯಶಸ್ಸಿನ ಜೊತೆ ಜೊತೆಗೇ ಹುಟ್ಟಿಕೊಳ್ಳುವ ಅಭಿಮಾನಿಳು, ಎಲ್ಲದರಿಂದ ವಿಮುಕ್ತನಾಗಬಯಸುವ ಸೂಪರ್ ಸ್ಟಾರ್, ಅವನ ಪ್ರೇಯಸಿ… ಹೀಗೆ ಸಿನಿಮಾರಂಗದ ಇಂಚಿಂಚೂ ವಿವರಗಳನ್ನು ಬಿಚ್ಚಿಟ್ಟಿರುವ ಚಿತ್ರ ಸೌತ್ ಇಂಡಿಯನ್ ಹೀರೋ. ಸಾಮಾನ್ಯಕ್ಕೆ ಸಿನಿಮಾದೊಳಗೆ ಸಿನಿಮಾದ ವಿಚಾರಗಳನ್ನು ಹೇಳಿರುವ ಸಿನಿಮಾಗಳು ಗೆದ್ದಿರುವುದು ಕಡಿಮೆ. ಆರಂಭದಲ್ಲಿ ಉಪೇಂದ್ರ ʼಶ್!ʼ, ʻಎʼ ಥರದ ಸಿನಿಮಾಗಳಲ್ಲಿ ಇಂಥ ಪ್ರಯತ್ನ ಮಾಡಿದ್ದರು. ಆ ನಂತರ ಹರೀಶ್ ರಾಜ್ ಕಲಾಕಾರ್ ಎನ್ನುವ ಸಿನಿಮಾದಲ್ಲಿ ಇದೇ ರೀತಿಯ ಚಿತ್ರರಂಗದ ಒಳಸುಳಿಗಳನ್ನು ತೆರೆದಿಟ್ಟಿದ್ದರು. ಈಗ ನಿರ್ದೇಶಕ ನರೇಶ್ ಕುಮಾರ್ ಬೇರೆಯದ್ದೇ ಕೋನದಲ್ಲಿ ಸಿನಿಮಾರಂಗದ ವಿವರಗಳನ್ನು ಕಟ್ಟಿಕೊಟ್ಟಿದ್ದಾರೆ.

ಈ ಹಿಂದೆ ಫಸ್ಟ್ ರ‍್ಯಾಂಕ್‌ ರಾಜು ಮತ್ತು ರಾಜು ಕನ್ನಡ ಮೀಡಿಯಂ ಎಂಬೆರಡು ಸಿನಿಮಾಳನ್ನು ನಿರ್ದೇಶಿಸಿದ್ದವರು ನರೇಶ್. ತೀರಾ ಹೊಸಬರನ್ನು ಬಳಸಿಕೊಂಡು ಅತ್ಯುತ್ತಮ ಕಂಟೆಂಟ್ ಕೊಡುವ ತಾಕತ್ತಿರುವ ನಿರ್ದೇಶಕ.  ಏನೇನೂ ಹಿನ್ನೆಲೆ ಇಲ್ಲದೆ ಬಂದು ಸಿನಿಮಾ ಹೀರೋ ಆಗುವವರು, ಅವರನ್ನು ರೂಪಿಸುವ ನಿರ್ದೇಶಕ, ನಿರ್ಮಾಪಕ, ಎಲ್ಲಕ್ಕಿಂತಾ ಮುಖ್ಯವಾಗಿ ಹೀರೋಗಳನ್ನು ಆರಾಧಿಸುವ ಅಭಿಮಾನಿಗಳು, ಎಲ್ಲವನ್ನೂ ಗಮನಿಸುವ ಮೀಡಿಯಾಗಳು – ಎಲ್ಲರ ದೃಷ್ಟಿಯಲ್ಲಿ ಸೌತ್ ಇಂಡಿಯನ್ ಹೀರೋ ಸಿನಿಮಾ ಕ್ರಿಯೇಟ್ ಆದಂತಿದೆ. ಇದಲ್ಲದೆ, ಸಿನಿಮಾ ನಟರ ವರಸೆಗಳನ್ನು, ಅವರಾಡುವ ಆಟಗಳನ್ನು ಲೇವಡಿ ಮಾಡುವ, ತಿವಿಯುವ ಕೆಲಸ ಕೂಡಾ ಈ ಚಿತ್ರದಲ್ಲಿ ಆಗಿದೆ. ಸದ್ಯ ಕಣ್ಣಮುಂದೆ ಇರುವ ಹೀರೋಗಳು, ಅವರ ಅಭಿಮಾನಿಗಳ ಚಿತ್ರಣವನ್ನು ಕಣ್ಣ ಮುಂದೆ ತಂದಿದ್ದಾರೆ.

ಸಾರ್ಥಕ್ ಸಿನಿಮಾದಲ್ಲಿ ಹೀರೋ ಆಗುವ ಮುಂಚೆ ಮತ್ತು ನಂತರದ ದೃಶ್ಯಗಳಲ್ಲಿ ಅಗತ್ಯಕ್ಕೆ ತಕ್ಕಷ್ಟು ನಟಿಸಿದ್ದಾರೆ. ನಾಯಕಿ ಕಾಶಿಮಾ ಮತ್ತು ವಿಜಯ್ ಚೆಂಡೂರು ಪಾತ್ರಗಳಿಗೆ ಹೆಚ್ಚು ಸ್ಕೋಪ್ ಸಿಕ್ಕಿದೆ. ಇಡೀ ಸಿನಿಮಾದಲ್ಲಿ ಹೆಚ್ಚು ಗಮನ ಸೆಳೆಯುವುದು ಅಶ್ವಿನ್ ಪಲ್ಲಕ್ಕಿ ನಟನೆ. ಅಮಿತ್ ಎಷ್ಟು ಕೃತಕವೋ ಅಶ್ವಿನ್ ಅಷ್ಟೇ ಸಹಜವಾಗಿ ನಟಿಸಿದ್ದಾರೆ. ಮನರಂಜನೆಯ ಜೊತೆಗೆ ಚಿತ್ರರಂಗದ ಒಳಮರ್ಮಗಳನ್ನು ತಿಳಿದುಕೊಳ್ಳುವ ಬಯಕೆ ಇರುವವರು ಖಂಡಿತಾ ಈ ಚಿತ್ರವನ್ನು ನೋಡಬಹುದು.

ಸಿನಿಮಾ

ವರದಿ: ಅರುಣ್ ಜಿ.,

ಬುಡಕಟ್ಟು ಜನರ ಬದುಕೇ ಹೀಗಾ? ಒಂದಲ್ಲಾ ಒಂದು ಭಯದಲ್ಲೇ ಇವರು ಬದುಕಬೇಕಾ? ಕಾಡು, ಮೃಗಗಳ ನಡುವೆ ಜೀವಿಸುವ ಈ ಜನ ಅಲ್ಲಿನ ಪಶು, ಪ್ರಾಣಿಗಳಿಗಿಂತಾ ಹೆಚ್ಚು ಭಯಪಡೋದು ಸರ್ಕಾರ ಮತ್ತು ಪೊಲೀಸ್ ಅಧಿಕಾರಿಗಳಿಗೆ. ಯಾವ ಹೊತ್ತಿನಲ್ಲಿ ಬೇಕಾದರೂ ಇವರು ಆದಿವಾಸಿಗಳ ಮಾನ, ಪ್ರಾಣ, ಬದುಕುವ ಹಕ್ಕುಗಳಿಗೆ ಸಂಚಕಾರ ತರಬಹುದು.

ʻಗೌಳಿʼ ಎನ್ನುವ ಚಿತ್ರವೊಂದು ಬಿಡುಗಡೆಯಾಗಿದೆ. ಬಹುಕಾಲದ ನಂತರ ಶ್ರೀನಗರ ಕಿಟ್ಟಿ ನಾಯಕನಾಗಿ ಮರುಪ್ರವೇಶಿಸಿರುವ ಸಿನಿಮಾ ಇದು. ತಾನೇ ಕಟ್ಟಿದ ಹಸು, ಮೇಕೆಗಳನ್ನೂ ಕೊಯ್ಯಲು ಕೊಡದ, ಅವುಗಳು ನೀಡುವ ಹಾಲು, ಸಗಣಿ ಮಾರಿ ಬದುಕುವ ಹೂಮನಸ್ಸಿನ ವ್ಯಕ್ತಿ ಗೌಳಿ. ಏಳನೇ ಕ್ಲಾಸು ಓದಿದ್ದರೂ ಊರಮಕ್ಕಳಿಗೆಲ್ಲಾ ಪಾಠ ಮಾಡುವ ಪತ್ನಿ. ಜೊತೆಗೆ ಮುದ್ದುಮುದ್ದಾದ ಮಗಳು. ಅದೊಂದು ದಿನ ಎದುರಾಗುವ ತಿರುವಿನಿಂದ ಇಡೀ ಕುಟುಂಬದ ನೆಮ್ಮದಿಯೇ ಹಾಳಾಗಿಬಿಡುತ್ತದೆ. ದುಷ್ಟ ಪೊಲೀಸು ಈ ದೇಶದಲ್ಲಿ ಸಂವಿಧಾನ, ಕಾನೂನುಗಳಿವೆ ಅನ್ನೋದನ್ನೇ ಮರೆತು ಏನೇನು ಬೇಕೋ ಅದೆಲ್ಲವನ್ನೂ ಮಾಡಿಬಿಡುತ್ತದೆ. ಜೊತೆಗೆ ಇನ್ಯಾವುದೋ ದುಷ್ಟ ಕೂಟ ಕೂಡಾ ಬೆನ್ನು ಬೀಳುತ್ತದೆ. ಅಂತಿಮವಾಗಿ ಗೌಳಿ ಯಾರನ್ನೆಲ್ಲಾ ಕಾಪಾಡುತ್ತಾನೆ? ಯಾರನ್ನು ಕಳೆದುಕೊಳ್ಳುತ್ತಾನೆ ಅನ್ನೋದೇ ಚಿತ್ರದ ಅಂತ್ಯ.

ನಿರ್ದೇಶಕ ಸೂರಾ ಮೊದಲ ಸಿನಿಮಾಗೇ ಅಪ್ಪಟ ದೇಸೀ ಕತೆಯನ್ನು ಕೈಗೆತ್ತಿಕೊಂಡಿದ್ದಾರೆ. ಈ ವರೆಗೆ ಯಾರೂ ಹೇಳದೇ ಉಳಿದಿರುವ  ವಿಚಾರಗಳನ್ನು ಟಚ್ ಮಾಡಿದ್ದಾರೆ. 

ತೆರೆಯಲ್ಲಿ ಕತೆ ಟೇಕಾಫ್ ಸ್ವಲ್ಪ ತಡವಾಗಿದೆ. ಮೊದಲ ಭಾಗದಲ್ಲಿ ಚಿತ್ರಕತೆ, ನಿರೂಪಣೆ ಶೈಲಿ ಗ್ರಾಫ್ಗೆ ಸರಿಯಾಗಿ ಕೂತಿಲ್ಲ. ಈ ಸಿನಿಮಾದ ಕ್ಲೈಮ್ಯಾಕ್ಸ್ ಎಷ್ಟು ಸುದೀರ್ಘವಾಗಿದೆಯೆಂದರೆ, ದ್ವಿತೀಯ ಭಾಗವನ್ನು ಪೂರ್ತಿಯಾಗಿ ಆವರಿಸಿಕೊಂಡಿದೆ. ನಿರ್ದೇಶಕರು ಕ್ಯಾರೆಕ್ಟರ್ ಡಿಸೈನ್ಗೆ ಕೊಟ್ಟ ಗಮನವನ್ನು ಕಂಟೆಂಟ್ಗೂ ಕೊಡಬಹುದಿತ್ತು ಅಂತನ್ನಿಸುತ್ತದೆ. ಇದರ ಹೊರತಾಗಿ ಗೌಳಿ ಕನ್ನಡದ ಮಟ್ಟಿಗೆ ನೀಟಾದ ಸಿನಿಮಾ. ಸಿಕ್ಕಿರುವ ಕಡಿಮೆ ಸೌಲಭ್ಯಗಳಲ್ಲಿ ಮೌಲ್ಯಯುತ ವಿಚಾರಗಳನ್ನು ಕಟ್ಟಿಕೊಟ್ಟಿದ್ದಾರೆ. ಆಯ್ಕೆ ಮಾಡಿಕೊಂಡಿರುವ ಬ್ಯಾಕ್ ಡ್ರಾಪ್ಗೆ ಜೊತೆಗೆ ಸಂದೀಪ್ ವಲ್ಲೂರಿ ಅವರ ಕ್ಯಾಮೆರಾ ವರ್ಕ್ ಸೇರಿ ದೃಶ್ಯಗಳ ಒಟ್ಟಂದವನ್ನು ಹೆಚ್ಚಿಸಿದೆ. ಗೌಳಿಯಲ್ಲಿ ಅತಿ ಹೆಚ್ಚು ಸ್ಕೋರ್ ಮಾಡಿರೋದು ಸಂಗೀತ ನಿರ್ದೇಶಕ ಶಶಾಂಕ್ ಶೇಷಗಿರಿ. ಹಿನ್ನೆಲೆ ಸಂಗೀತ ಸಿನಿಮಾದ ಫೀಲ್ ಹೆಚ್ಚಿಸಿದೆ. ವಿಕ್ರಂ ಮೋರ್ ಮತ್ತು ಅರ್ಜುನ್ ಸಂಯೋಜಿಸಿರುವ ಸಾಹಸ ದೃಶ್ಯಗಳು ಗೌಳಿಯ ತಾಕತ್ತು ಹೆಚ್ಚಿಸಿವೆ. ಕಿಟ್ಟಿ-ಪಾವನಾ ನಟನೆಯ ಬಗ್ಗೆ ಮಾತಾಡಂಗಿಲ್ಲ. ಶರತ್ ಲೋಹಿತಾಶ್ವ ದುಷ್ಟ ಪೊಲೀಸ್ ಆಗಿ ಭಯ ಪಡಿಸುತ್ತಾರೆ. ಯಶ್ ಶೆಟ್ಟಿ ಕಣ್ಣುಗಳು, ಭಾವಾಭಿನಯಗಳೆಲ್ಲಾ ನೋಡುಗರನ್ನು ಬೆಚ್ಚಿ ಬೀಳಿಸುತ್ತದೆ. ರಂಗಾಯಣ ರಘು ತಮ್ಮ ಮಾಮೂಲಿ ಶೈಲಿಗಿಂತಾ ಸ್ವಲ್ಪ ಭಿನ್ನವಾಗಿ ಕಾಣಿಸಿಕೊಂಡಿದ್ದಾರೆ.

ಓಟಿಟಿಗೆ ಬರೋ ತನಕ ಕಾಯದೆ, ಕಾಸು ಕೊಟ್ಟು ನೋಡಲು ಅರ್ಹವಾಗಿರುವ ಸಿನಿಮಾ ಗೌಳಿ. ತಪ್ಪದೇ ನೋಡಿ.

ಸಿನಿಮಾ ರೇಟಿಂಗ್: 3.5/5

ಸಿನಿಮಾ

ಅರುಣ್ ಜಿ.,

ಎಲ್ಲ ಸಿನಿಮಾಗಳೂ ಕೆಜಿಎಫ್ಫು, ಕಾಂತಾರಾನೇ ಆಗಲು ಸಾಧ್ಯವಿಲ್ಲ. ಒಂದೊಂದು ಸಿನಿಮಾದಲ್ಲೂ ಒಂದೊಂದು ಬಗೆಯ ಕಂಟೆಂಟ್ ಇರುತ್ತದೆ. ಉತ್ತಮ ಸಿನಿಮಾ ಅನ್ನಿಸಿದಾಗ ಅದನ್ನು ಜನ ಮೆಚ್ಚಿ ನೋಡಿದಾಗಲೇ ಅವು ಹಿಟ್ ಅನ್ನಿಸಿಕೊಳ್ಳೋದು. ಬರುವ ಎಲ್ಲ ಸಿನಿಮಾಗಳೂ ಗುಣಮಟ್ಟ ಹೊಂದಿರೋದಿಲ್ಲ ಅನ್ನೋದೂ ನಿಜ. ಆದರೆ ಅಲ್ಲೊಂದು ಇಲ್ಲೊಂದು ಕ್ವಾಲಿಟಿ ಚಿತ್ರಗಳು ಬಂದಾಗ ಅದನ್ನು ಪ್ರೋತ್ಸಾಹಿಸಬೇಕಿರುವುದು ಬರಿಯ ಪ್ರೇಕ್ಷಕರ ಜವಾಬ್ದಾರಿ ಮಾತ್ರವಲ್ಲ, ಇಂಡಸ್ಟ್ರಿ ಕೂಡಾ ಸಾಥ್ ನೀಡಬೇಕು.

ಎಲ್ಲೋ ಕೆಲವು ಸಿನಿಮಾಗಳಿಗೆ ಕಿಚ್ಚ, ರಕ್ಷಿತ್ ಶೆಟ್ಟರ ಥರದವರು ಬಂದು ಕೈ ಹಿಡಿದ ಉದಾಹರಣೆಗಳಿವೆ. ಅದನ್ನು ಬಿಟ್ಟು ಕನ್ನಡದ ಬೇರೆ ಯಾವ ಹೀರೋಗಳೂ ಗುಣಮಟ್ಟದ ಸಿನಿಮಾಗಳು ಬಂದಾಗ ಅದರ ಬೆನ್ನಿಗೆ ನಿಂತು ಗೆಲ್ಲಿಸಿದ್ದು ಕಡಿಮೆ. ತಾವಾಯಿತು, ತಮ್ಮ ಪಾಡಾಯಿತು, ಯಾರು ಗೆದ್ದರೆಷ್ಟು? ಬಿಟ್ಟರೆಷ್ಟು ಎನ್ನುವ ಮನಸ್ಥಿತಿಯ ಸ್ಟಾರುಗಳೇ ಇಲ್ಲಿ ಹೆಚ್ಚು! ಸದ್ಯ ಕನ್ನಡದಲ್ಲಿ ದೊಡ್ಡಟ್ಟಿ ಬೋರೇಗೌಡ ಎನ್ನುವ ಸಿನಿಮಾವೊಂದು ತೆರೆ ಕಂಡಿದೆ. ನಿಜಕ್ಕೂ ಈ ನೆಲದ ಘಮಲಿನ ಸಿನಿಮಾ ಅದು. ಗ್ರಾಮಾಂತರ ಪ್ರದೇಶಗಳಲ್ಲಿ ಒಬ್ಬ ಬಡವ ಒಂದು ಮನೆ ಕಟ್ಟಿಸೋದು ಎಷ್ಟು ಕಷ್ಟ? ಸಣ್ಣದೊಂದು ಗೂಡು ಕಟ್ಟಲು ಈ ವ್ಯವಸ್ಥೆ ಹೇಗೆಲ್ಲಾ ಸತಾಯಿಸಿಬಿಡುತ್ತದೆ… ಅದರ ಜೊತೆಗೆ ಎದುರಾಗುವ ಕೌಟುಂಬಿಕ ಸಮಸ್ಯೆಗಳನ್ನೆಲ್ಲಾ ಸೇರಿಸಿ ನಿರ್ದೇಶಕ ಕೆ.ಎಂ.ರಘು ಚೆಂದದ ಸಿನಿಮಾವೊಂದನ್ನು ರೂಪಿಸಿದ್ದಾರೆ.

ಈ ಹಿಂದೆ ತರ್ಲೆ ವಿಲೇಜ್ ಮತ್ತು ಪರಸಂಗ ಎಂಬ ಸಿನಿಮಾಗಳನ್ನು ನಿರ್ದೇಶಿಸಿದ್ದವರು ರಘು. ಪರಸಂಗ ಸಿನಿಮಾದ ʻಮರಳಿಬಾರದೂರಿಗೆ ನಿನ್ನ ಪಯಣʼ ಹಾಡು ಇವತ್ತಿಗೂ ಎಲ್ಲೆಂದರಲ್ಲಿ ಕೇಳಿಸುತ್ತಲೇ ಇರುತ್ತದೆ. ದೊಡ್ಡಟ್ಟಿ ಬೋರೇಗೌಡ ಸಿನಿಮಾದಲ್ಲೂ ಬಹುತೇಕ ಹೊಸ ಮುಖಗಳನ್ನು ಆಯ್ಕೆ ಮಾಡಿಕೊಂಡು ಉತ್ತಮ ಪ್ರಯತ್ನ ಮಾಡಿದ್ದಾರೆ. ಈ ಚಿತ್ರ ತೆರೆಗೆ ಬಂದಿದೆ. ನೋಡಿದವರೆಲ್ಲಾ ಮೆಚ್ಚಿ ಮಾತಾಡಿದ್ದಾರೆ. ವಿಮರ್ಶಕರು ಕೂಡಾ ಅಪಾರವಾಗಿ ಇಷ್ಟ ಪಟ್ಟಿದ್ದಾರೆ. ಆದರೆ ಕನ್ನಡ ಚಿತ್ರರಂಗದ ಯಾವೊಬ್ಬ ಸ್ಟಾರ್ ಗಳೂ ಈ ಸಿನಿಮಾವನ್ನು ಪ್ರೋತ್ಸಾಹಿಸಿಲ್ಲ ಅಂತಾ ನಿರ್ದೇಶಕ ರಘು ಬೇಸರಿಸಿಕೊಂಡಿದ್ದಾರೆ. ಈ ಕುರಿತು ವಿಡಿಯೋವೊಂದನ್ನು ಬಿಟ್ಟು  ತಮ್ಮ ಆಂತರ್ಯದ ನೋವನ್ನು ಬಹಿರಂಗಗೊಳಿಸಿದ್ದಾರೆ.

ಸಿನಿಮಾ

ಅರುಣ್ ಜಿ.,

ಪ್ರೇಮಪೂಜ್ಯಂ ಖ್ಯಾತಿಯ ಬೃಂದಾ ಆಚಾರ್ಯ ಅಭಿನಯದ ಈ ಚಿತ್ರ ಫೆಬ್ರವರಿ 24 ರಂದು ಬಿಡುಗಡೆ!

ಕನ್ನಡದಲ್ಲಿ ಕಂಟೆಂಟ್ ಓರಿಯಂಟೆಡ್ ಚಿತ್ರಗಳನ್ನು ಜನ ಮೆಚ್ಚಿಕೊಳ್ಳುತ್ತಿದ್ದಾರೆ. ಉತ್ತಮ ಕಂಟೆಂಟ್ ವುಳ್ಳ ಜೂಲಿಯೆಟ್‌ 2 ಚಿತ್ರ ಸಹ ಫೆಬ್ರವರಿ 24ರಂದು ಬಿಡುಗಡೆಯಾಗುತ್ತಿದೆ. ಪ್ರೇಮಪೂಜ್ಯಂ ಚಿತ್ರದ ಖ್ಯಾತಿಯ ಬೃಂದಾ ಆಚಾರ್ಯ ಈ ಚಿತ್ರದ ಪ್ರಮುಖಪಾತ್ರದಲ್ಲಿ ನಟಿಸಿದ್ದಾರೆ. ವಿರಾಟ್ ಬಿ ಗೌಡ ನಿರ್ದೇಶಿಸಿದ್ದಾರೆ. ಇತ್ತೀಚಿಗೆ ಈ ಚಿತ್ರದ ಟ್ರೇಲರ್ ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿದ್ದು, ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದೆ.

‘ಜೂಲಿಯೆಟ್ 2 ಮಹಿಳಾ ಪ್ರಧಾನ ಚಿತ್ರ. ತೊಂದರೆಗೆ ಸಿಲುಕಿದ ಹೆಣ್ಣುಮಗಳೊಬ್ಬಳು ಹೇಗೆ ಪ್ರತಿಕಾರ ತೀರಿಸಿಕೊಳ್ಳುತ್ತಾಳೆ? ಎಂಬುದು ಪ್ರಮುಖ ಕಥಾಹಂದರ. ಸಾಮಾನ್ಯವಾಗಿ “ಜೂಲಿಯೆಟ್‌” ಎಂದ ತಕ್ಷಣ ಪ್ರೇಮಕಥೆ ಅಂದುಕೊಳ್ಳುವುದು ವಾಡಿಕೆ. ಆದರೆ ಇದು ಲವ್ ಸ್ಟೋರಿ ಅಲ್ಲ‌. ಇಲ್ಲಿ ರೋಮಿಯೋ ಇರುವುದಿಲ್ಲ.

ಇಲ್ಲಿ ತಪ್ಪು ಮಾಡಿದವರಿಗೆ ಇಲ್ಲೇ ಶಿಕ್ಷೆ. ಎಂಬುದನ್ನು ಸಿನಿಮಾ ಮೂಲಕ ಹೇಳ ಹೊರಟ್ಟಿದ್ದೇವೆ. ಹಾಡುಗಳು ಹಾಗೂ ಟ್ರೇಲರ್ ಮೂಲಕ ನಮ್ಮ ಚಿತ್ರ ಜನರ ಮನ ತಲುಪಿದೆ. ಅಪ್ಪ – ಮಗಳ ಬಾಂಧವ್ಯದ ಸನ್ನಿವೇಶಗಳು ಜನರ ಮನಸ್ಸಿಗೆ ಹತ್ತಿರವಾಗಲಿದೆ. ಬೆಳ್ತಂಗಡಿ ಬಳಿಯ ಪಶ್ಚಿಮಘಟ್ಟದ ಕಾಡೊಂದರಲ್ಲೇ ಹೆಚ್ಚಿನ ಚಿತ್ರೀಕರಣ ಮಾಡಿದ್ದೇವೆ. ಇದು ನನ್ನ ಪ್ರಥಮ ಚಿತ್ರ. ನೋಡಿ ಹಾರೈಸಿ’ ಎಂದರು ನಿರ್ದೇಶಕ ವಿರಾಟ್ ಬಿ ಗೌಡ.

‘ನಿರ್ದೇಶಕರು ಹೇಳಿದ ಕಥೆ ಇಷ್ಟವಾಯಿತು. ನಾನು ಜೂಲಿಯೆಟ್‌ ಪಾತ್ರದಲ್ಲಿ ಅಭಿನಯಿಸಿದ್ದೇನೆ. ಇದೊಂದು ವಿಭಿನ್ನ ಕಥೆ ಎನ್ನಬಹುದು. ಮಹಿಳೆ ಅಬಲೆಯಲ್ಲ; ಸಬಲೆ. ಎಂದು ನಿರ್ದೇಶಕರು ಹೇಳ ಹೊರಟ್ಟಿದ್ದಾರೆ‌. ತಂದೆ-ಮಗಳ ಬಾಂಧವ್ಯದ ಸನ್ನಿವೇಶಗಳು ಮನ ಮಿಡಿಯತ್ತದೆ. ಕಾಡಿನಲ್ಲಿ ನಡೆದ ಚಿತ್ರೀಕರಣದ ಅನುಭವ‌ ಮರೆಯಲು ಅಸಾಧ್ಯ. ಎಲ್ಲರೂ ಬೆವರು ಸುರಿಸಿ ಚಿತ್ರ‌ ಮಾಡಿದ್ದೇವೆ ಎನ್ನುತ್ತಾರೆ. ನಾವು ರಕ್ತ ಸುರಿಸಿ ಸಿನಿಮಾ ಮಾಡಿದ್ದೇವೆ ಎನ್ನಬಹುದು. ಏಕೆಂದರೆ ಕಾಡಿನಲ್ಲಿ ಜಿಗಣೆಗಳು ಅಷ್ಟು ಕಾಟ ಕೊಟ್ಟಿದೆ’ ಎಂದು ನಾಯಕಿ ಬೃಂದಾ ಆಚಾರ್ಯ ಚಿತ್ರದ ಬಗ್ಗೆ ತಮ್ಮ ಅನುಭವ ಹಂಚಿಕೊಂಡರು.

ಬೃಂದಾ ಆಚಾರ್ಯ

ಚಿತ್ರದಲ್ಲಿ ಅಭಿನಯಿಸಿರುವ ಶ್ರೀಕಾಂತ್ ಹಾಗೂ ರಾಯ್ ಅವರು ತಮ್ಮ ಪಾತ್ರದ ಬಗ್ಗೆ ಮಾತನಾಡಿದರು. ಲಿಖಿತ್ ಆರ್ ಕೋಟ್ಯಾನ್ ನಿರ್ಮಿಸಿರುವ ಈ ಚಿತ್ರಕ್ಕೆ ಸಚಿನ್ ಬಸ್ರೂರ್ ಅವರ ಬಿ.ಜಿ.ಎಂ ಹಾಗೂ shanto v anto ಅವರ ಛಾಯಾಗ್ರಹಣವಿದೆ. ಬೃಂದಾ ಆಚಾರ್ಯ, ಅನೂಪ್ ಸಾಗರ್, ಖುಷ್ ಆಚಾರ್ಯ, ರವಿ, ರಾಧೇಶ್ ಶೆಣೈ, ಶ್ರೀಕಾಂತ್, ರಾಯ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ಸಿನಿಮಾ

ಅರುಣ್ ಜಿ.,

ಅನೇಕ ಗಣ್ಯರ ಸಮ್ಮುಖದಲ್ಲಿ, ಚೆನ್ನೈ ನಗರದಲ್ಲಿ ಅದ್ದೂರಿಯಾಗಿ ಬಿಡುಗಡೆಯಾಯಿತು “ನಮಾಮಿ ನಮಾಮಿ” ಹಾಡು.

ಇಡೀ ಭಾರತಾದ್ಯಂತ ಬಿಡುಗಡೆಗೂ ಮುಂಚೆಯೇ ಎಲ್ಲರ ಗಮನ ಸೆಳೆದಿರುವ ಆರ್.ಚಂದ್ರು ನಿರ್ದೇಶನದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ನಾಯಕರಾಗಿ ಹಾಗೂ  ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ ವಿಶೇಷಪಾತ್ರದಲ್ಲಿ ಅಭಿನಯಿಸಿರುವ ಕನ್ನಡದ ಹೆಮ್ಮೆಯ ಪ್ಯಾನ್ ಇಂಡಿಯಾ ಸಿನಿಮಾ “ಕಬ್ಜ” ಚಿತ್ರದಿಂದ ಮಹಾಶಿವರಾತ್ರಿಗೆ ಮಹಾಶಿವನನ್ನು ಕೊಂಡಾಡುವ “ನಮಾಮಿ ನಮಾಮಿ” ಎಂಬ ಸುಮಧುರ ಗೀತೆ ಬಿಡುಗಡೆಯಾಗಿದೆ. ಕಿನಾಲ್ ರಾಜ್ ಬರೆದಿರುವ ಈ ಹಾಡನ್ನು ಖ್ಯಾತ ಗಾಯಕಿ ಐಶ್ವರ್ಯ ರಂಗರಾಜನ್ ಸುಶ್ರಾವ್ಯವಾಗಿ ಹಾಡಿದ್ದಾರೆ. ಖ್ಯಾತ ನಟಿ ಶ್ರೇಯಾ ಶರಣ್ ಈ ಹಾಡಿನಲ್ಲಿ ನಟಿಸಿದ್ದಾರೆ. ರವಿ ಬಸ್ರೂರ್ ಸಂಗೀತ ನೀಡಿರುವ ಈ ಹಾಡು ಐದು ಭಾಷೆಗಳಲ್ಲಿ ಬಿಡುಗಡೆಯಾಗಿದೆ. 

ಈ ಹಾಡಿನ ಬಿಡುಗಡೆ ಸಮಾರಂಭ ಇತ್ತೀಚೆಗೆ ಚೆನ್ನೈನಲ್ಲಿ ಅದ್ದೂರಿಯಾಗಿ ನಡೆಯಿತು. ಸಾಕಷ್ಟು ಗಣ್ಯರು ಈ ಸುಂದರ ಸಮಾರಂಭಕ್ಕೆ ಸಾಕ್ಷಿಯಾದರು.

ಚಿತ್ರ ಸಾಗಿ ಬಂದ ಬಗ್ಗೆ ಹಾಗೂ ಹಾಡಿನ ಕುರಿತು ಮಾಹಿತಿ ನೀಡಿದ ನಿರ್ದೇಶಕ ಆರ್.ಚಂದ್ರು, “ಕಬ್ಜ”  ಚಿತ್ರದ ಹಾಡುಗಳನ್ನು ಹೈದರಾಬಾದ್, ಚೆನ್ನೈ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಬಿಡುಗಡೆ ಮಾಡುತ್ತಿದ್ದೇವೆ. ಹೋದ ಕಡೆ ಚಿತ್ರದ ಕುರಿತು ಕೇಳಿಬರುತ್ತಿರುವ ಪ್ರಶಂಸನೀಯ ಮಾತುಗಳಿಗೆ ಮನ ತುಂಬಿ ಬಂದಿದೆ. ನನ್ನ ತಂಡಕ್ಕೆ ಹಾಗೂ ಸಹಕಾರ ನೀಡುತ್ತಿರುವ ಪ್ರತಿಯೊಬ್ಬರಿಗೂ ಧನ್ಯವಾದ ತಿಳಿಸಿದರು.

“ಕಬ್ಜ” ಚಿತ್ರದಲ್ಲಿ ನಟಿಸಿರುವುದು ಖುಷಿಯಾಗಿದೆ. ಶಿವನನ್ನು ಆರಾಧಿಸುವ ಈ ಹಾಡು ಬಹಳ ಮಧುರವಾಗಿದೆ. ನನ್ನ ಪಾತ್ರ ಕೂಡ ಚೆನ್ನಾಗಿದೆ. ಸದ್ಯದಲ್ಲೇ ಚಿತ್ರ ಬಿಡುಗಡೆಯಾಗಲಿದೆ. ಎಲ್ಲರೂ ಪ್ರೋತ್ಸಾಹ ನೀಡಿ ಎಂದರು ನಟಿ ಶ್ರೇಯಾ ಶರಣ್.

ಶ್ರೀ.ಸಿದ್ದೇಶ್ವರ ಎಂಟರ್ ಪ್ರೈಸಸ್ ಮೂಲಕ ನಿರ್ಮಾಣವಾಗಿರುವ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ “ಕಬ್ಜ” ಚಿತ್ರದ ಟೀಸರ್ ಹಾಗೂ ಹಾಡುಗಳ ಬಗ್ಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಫೆಬ್ರವರಿ 26 ರಂದು ಶಿಡ್ಲಘಟ್ಟದಲ್ಲಿ ಲಕ್ಷಾಂತರ ಜನರ ಸಮ್ಮುಖದಲ್ಲಿ ನಡೆಯುವ ಅದ್ದೂರಿ ಸಮಾರಂಭದಲ್ಲಿ ಕಮರ್ಷಿಯಲ್ ಹಾಡೊಂದು ಲೋಕಾರ್ಪಣೆಯಾಗಲಿದೆ.

ಪ್ರಪಂಚದಾದ್ಯಂತ ಅಭಿಮಾನಿಗಳು ಕಾಯುತ್ತಿರುವ “ಕಬ್ಜ” ಚಿತ್ರ ಮಾರ್ಚ್ 17 ರಂದು (ಪನೀತ್ ರಾಜಕುಮಾರ್ ಜನ್ಮದಿನದಂದು) ಅದ್ದೂರಿಯಾಗಿ ಬಿಡುಗಡೆಯಾಗಲಿದೆ.

ಸಿನಿಮಾ

ಅರುಣ್ ಜಿ.,

ದೃವ ಸರ್ಜಾ ಅಭಿನಯದ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಚಿತ್ರ ಮಾರ್ಟಿನ್. ಎ.ಪಿ. ಅರ್ಜುನ್‌ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಚಿತ್ರವನ್ನು ವಾಸವಿ ಎಂಟರ್ ಪ್ರೈಸಸ್ ಅಡಿಯಲ್ಲಿ ಉದಯ್ ಕೆ.ಮೆಹ್ತಾ ಅವರು ನಿರ್ಮಿಸುತ್ತಿರುವ 9ನೇ ಚಿತ್ರ ಇದಾಗಿದೆ. ಮಾರ್ಟಿನ್ ಚಿತ್ರದ ಪ್ಯಾನ್ ಇಂಡಿಯಾ ಟೀಸರ್ ಇದೇ ತಿಂಗಳ 23 ರಂದು ಅದ್ದೂರಿಯಾಗಿ ಬಿಡುಗಡೆಯಾಗುತ್ತಿದೆ. ಈ ಕುರಿತು ಮಾಹಿತಿ ನೀಡಲು ಕರೆದಿದ್ದ ಪತ್ರಿಕಾಗೋಷ್ಟಿಯಲ್ಲಿ ಹಾಜರಿದ್ದ ಚಿತ್ರತಂಡ ಒಂದಷ್ಟು ಮಾಹಿತಿಗಳನ್ನು ಹಂಚಿಕೊಂಡಿತು, 

ಮೊದಲು ಮಾತನಾಡಿದ ನಿರ್ಮಾಪಕ ಉದಯ್ ಕೆ.ಮೆಹ್ತಾ ‘ಕಳೆದ ಆಗಸ್ಟ್ 15ಕ್ಕೆ ನಮ್ಮ ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡುವುದರೊಂದಿಗೆ ಚಿತ್ರವನ್ನು ಆರಂಭಿಸಿದೆವು. ಈಗಾಗಲೇ ಚಿತ್ರದ ಟಾಕಿ ಪೋರ್ಷನ್ ಮುಗಿದಿದ್ದು, ಹಾಡುಗಳ ಚಿತ್ರೀಕರಣ ಮಾತ್ರ ಬಾಕಿ ಇದೆ. ಫೆಬ್ರವರಿ 23 ರಂದು ವಿಐಪಿ ಅಭಿಮಾನಿಗಳಿಗೋಸ್ಕರ ಪೇಯ್ಡ್ ಪ್ರೀಮಿಯರ್ ಟೀಸರ್ ಪ್ರದರ್ಶನವನ್ನು ವೀರೇಶ್  ಚಿತ್ರಮಂದಿರದಲ್ಲಿ ಏರ್ಪಡಿಸಿದ್ದೇವೆ. ಹಾಗಂತ ಇದರಿಂದ ಹಣ ಮಾಡುವ ಉದ್ದೇಶವಿಲ್ಲ, ಚಿತ್ರಮಂದಿರದಲ್ಲಿ ಹೆವಿ ಕ್ರೌಡ್ ಆಗಬಾರದೆಂಬ ಉದ್ದೇಶ ನಮ್ಮದು. ಇದರಿಂದ ಬಂದ ಹಣವನ್ನು ಗೋಶಾಲೆಗೆ ಕೊಡುತ್ತಿದ್ದೇವೆ. ಅಲ್ಲದೆ ಅದೇ ದಿನ ಸಂಜೆ ತಮ್ಮ ಮೊಬೈಲ್‌ಗಳಲ್ಲೇ ಅಭಿಮಾನಿಗಳು ಮಾರ್ಟಿನ್ ಟೀಸರ್ ನೋಡಬಹುದು. ಅಲ್ಲದೆ 5 ಭಾಷೆಗಳಲ್ಲಿ ನಿರ್ಮಾಣವಾಗುತ್ತಿರುವ ಚಿತ್ರ ಇದಾಗಿರುವುದರಿಂದ ಬೇರೆ ಭಾಷೆಗಳ ಮಾದ್ಯಮದವರನ್ನು ಆಹ್ವಾನಿಸಿ ಪ್ಯಾನ್ ಇಂಡಿಯಾ ಪ್ರೆಸ್‌ಮೀಟ್ ಮಾಡುತ್ತಿದ್ದೇವೆ. ಆರಂಭದಲ್ಲಿ ನಮ್ಮ ಚಿತ್ರ ಇಷ್ಟು ದೊಡ್ಡ ಮಟ್ಟದಲ್ಲಿ ಆಗುತ್ತೆ ಅಂದುಕೊಂಡಿರಲಿಲ್ಲ, ಬರುಬರುತ್ತಾ ದೊಡ್ಡದಾಗುತ್ತಾ ಹೋಯಿತು’ ಎಂದು ಹೇಳಿದರು.

ನಿರ್ದೇಶಕ ಎ.ಪಿ.ಅರ್ಜುನ್ ಮಾತನಾಡುತ್ತ ‘ಮಾರ್ಟಿನ್ ನಮ್ಮ ಕನ್ನಡದ ಸಿನಿಮಾ. ಮೊದಲು ನಮ್ಮವರ ಜೊತೆ ಮಾಹಿತಿ ಹಂಚಿಕೊಂಡು ನಂತರ ಬೇರೆಯವರ ಮುಂದೆ ಹೋಗುತ್ತಿದ್ದೇವೆ. ಇದು ಎಲ್ಲಾ ಕಡೆಗೂ ಸಲ್ಲುವ ಯೂನಿವರ್ಸಲ್ ಕಥೆಯಾಗಿದ್ದರಿಂದ, ಬೇರೆ ಬೇರೆ ಭಾಷೆಗಳಲ್ಲಿ ನಿರ್ಮಿಸಿದ್ದೇವೆ. ಕಳೆದ 2021ರ ಸೆಪ್ಟೆಂಬರ್‌ನಲ್ಲಿ ಚಿತ್ರ ಆರಂಭವಾಯಿತು. ಇಷ್ಟುದಿನ, ಈ ಮಟ್ಟದಲ್ಲಿ ಆಗುತ್ತೆ ಅಂದ್ಕೊಂಡಿರಲಿಲ್ಲ, ಹೈದರಾಬಾದ್‌ ನಲ್ಲಿ ಸೆಟ್ ಹಾಕಿ 45 ದಿನ ಶೂಟ್ ಮಾಡಿದೆವು. ವೈಜಾಕ್‌ನಲ್ಲಿ ಚೇಸ್‌ಸೀನ್ 20 ದಿನಗಳವರೆಗೆ ಆಯಿತು, ಜೊತೆಗೆ ಆಗಾಗ ಬರುತ್ತಿದ್ದ ಮಳೆಯಿಂದಲೂ ತಡವಾಯಿತು. ಇನ್ನು ಕಾಶ್ಮೀರದಲ್ಲಿ 25 ದಿನ  ಅಲ್ಲದೆ ಮುಂಬೈನಲ್ಲಿ ಚೇಸಿಂಗ್ ಸೀನ್  ಚಿತ್ರೀಕರಣ ಮಾಡಿಕೊಂಡು ಬಂದೆವು. ಒಂದೊಂದು ಕಡೆ ಶೂಟ್ ಮಾಡಿಕೊಂಡು ಬಂದಾಗಲೂ ಒಂದಷ್ಟು ದಿನ ಗ್ಯಾಪ್ ಬೇಕಾಯಿತು. ಚಿತ್ರದಲ್ಲಿ ದ್ರುವ ಅವರಿಗೆ ತುಂಬಾ ಗೆಟಪ್ ಇದೆ, ನನ್ನ ಕೆರಿಯರ್‌ನಲ್ಲೇ ಅತಿದೊಡ್ಡ ಪವರ್ ಪ್ಯಾಕ್ಡ್ ಚಿತ್ರವಿದು. ವಿಶೇಷವಾದ ಮೋಕೋಬೋಟ್ ಕ್ಯಾಮೆರಾದಲ್ಲಿ 52 ದಿನ ಕ್ಲೈಮ್ಯಾಕ್ಸ್ ಸೀನ್ ಚಿತ್ರೀಕರಿಸಿದ್ದೇವೆ. ರಾಮ್ ಲಕ್ಷ್ಮಣ್ ಆಕ್ಷನ್ ಹಾಗೂ ರವಿವರ್ಮಾ ಚೇಸಿಂಗ್ ಸೀನ್ ಮಾಡಿದ್ದಾರೆ. ಸದ್ಯ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೆಯುತ್ತಿದೆ. ಪರೀಕ್ಷೆಗಳು, ಐಪಿಎಲ್, ಚುನಾವಣೆ ಮುಗಿದ ನಂತರ ಚಿತ್ರವನ್ನು ರಿಲೀಸ್ ಮಾಡುವ ಯೋಜನೆಯಿದೆ ಎಂದು ಹೇಳಿದರು.

ನಾಯಕ ದ್ರುವ ಮಾತನಾಡಿ ’23ರ ಸಂಜೆ 5.55ಕ್ಕೆ ಲಹರಿ ಯುಟ್ಯೂಬ್ ಚಾನೆಲ್‌ನಲ್ಲಿ ನಮ್ಮ ಚಿತ್ರದ ಟೀಸರ್ ರಿಲೀಸಾಗುತ್ತಿದೆ. ಈ ಚಿತ್ರದಲ್ಲಿ ನನ್ನ ಪಾತ್ರ ಈವರೆಗೆ ಮಾಡಿದ್ದಕ್ಕಿಂತ ಬೇರೆ ಥರನೇ ಇದೆ. ಇಡೀ ಸಿನಿಮಾದಲ್ಲಿ  ತುಂಬಾ ಕಡಿಮೆ ಡೈಲಾಗ್ ಇದ್ದು,  ಆಕ್ಷನ್ ಸೀನ್ ಜಾಸ್ತಿ ಇರುತ್ತದೆ’ ಎಂದು ಹೇಳಿದರು. ಛಾಯಾಗ್ರಾಹಕ ಸತ್ಯ ಹೆಗಡೆ ಮಾತನಾಡಿ ಕ್ಯಾಮೆರಾ ವರ್ಕ್ ಬಗ್ಗೆ ಮಾಹಿತಿ ನೀಡಿದರು. ಬಹುಭಾಷಾ ನಟಿ ವೈಭವಿ ಶಾಂಡಿಲ್ಯ ಚಿತ್ರದ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ತೆಲುಗಿನ ಮಣಿ ಶರ್ಮಾ ಅವರ ಸಂಗೀತ ಸಂಯೋಜನೆ, ಕೆಜಿಎಫ್ ಖ್ಯಾತಿಯ ರವಿ ಬಸ್ರೂರು ಅವರ ಹಿನ್ನೆಲೆ ಸಂಗೀತ ಈ ಚಿತ್ರಕ್ಕಿದೆ. ಕಾಶ್ಮೀರದ ಮೈನಸ್ 7 ಡಿಗ್ರೀ ತಾಪಮಾನ ಇರುವ ಲೊಕೇಶನ್‌ಗಳಲ್ಲಿ ಆಕ್ಷನ್‌ಸೀನ್ ಚಿತ್ರೀಕರಿಸಲಾಗಿದೆ. ಕಾಶ್ಮೀರದ ಐಸ್‌ವಾರ್ ಸಾಹಸ ದೃಶ್ಯಗಳ ಜೊತೆಗೆ ರೋಮಾಂಚನಕಾರಿ ಸ್ಕೇಟಿಂಗ್ ಆ್ಯಕ್ಷನ್ ಸೀನ್‌ಗಳು ಚಿತ್ರದ ಹೈಲೈಟ್.