ವಿದೇಶ Archives » Page 2 of 12 » Dynamic Leader
November 21, 2024
Home Archive by category ವಿದೇಶ (Page 2)

ವಿದೇಶ

ವಿದೇಶ

ಡಿ.ಸಿ.ಪ್ರಕಾಶ್

ಲೆಬನಾನ್‌ನಲ್ಲಿ ಪೇಜರ್‌ಗಳ ಸ್ಫೋಟದ ಬಗ್ಗೆ ವಿವಿಧ ಹೊಸ ಮಾಹಿತಿಗಳು ಹೊರಬೀಳುತ್ತಿವೆ. ಲೆಬನಾನ್‌ನಿಂದ ಇಸ್ರೇಲ್ ವಿರುದ್ಧ ಕಾರ್ಯಾಚರಣೆ ನಡೆಸುತ್ತಿರುವ ಹಿಜ್ಬುಲ್ಲಾ ಉಗ್ರಗಾಮಿ ಗುಂಪು ತಮ್ಮ ಸಂವಹನಕ್ಕಾಗಿ ಪೇಜರ್‌ಗಳನ್ನು ಪೋರ್ಟಬಲ್ ಸಾಧನವಾಗಿ ಬಳಸುತ್ತಿದೆ. ಈ ಎಲ್ಲಾ ಸಾಧನಗಳು ನಿನ್ನೆ ರಾತ್ರಿ ಒಂದೇ ಸಮಯದಲ್ಲಿ ಇದ್ದಕ್ಕಿದ್ದಂತೆ ಸ್ಫೋಟಗೊಂಡಿವೆ. ಇದರಲ್ಲಿ 9 ಮಂದಿ ಸಾವನ್ನಪ್ಪಿದ್ದಾರೆ. 2,800 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ಹಿಜ್ಬುಲ್ಲಾ ಸಂಘಟನೆಗೆ ಬಂದ ಪೇಜರ್‌ಗಳನ್ನು ಮುಂಚಿತವಾಗಿಯೇ ತಡೆಗಟ್ಟಿ, ಪಾರ್ಸೆಲ್‌ಗಳನ್ನು ಇಸ್ರೇಲಿ ಗುಪ್ತಚರ ಇಲಾಖೆ ಪಡೆದುಕೊಂಡಿದ್ದು, ನಂತರ ಪೇಜರ್‌ಗಳ ಒಳಗೆ ಸ್ಫೋಟಕಗಳನ್ನು ಇರಿಸಿ, ಸಂದೇಶವನ್ನು ಸ್ವೀಕರಿಸಿದಾಗ ಅವು ಸ್ಫೋಟಗೊಳ್ಳುವ ಹಾಗೆ ಮಾಡಲಾಗಿದೆ. ಇದೆಲ್ಲವೂ ಐದು ತಿಂಗಳ ಹಿಂದೆಯೆ ನಡೆದಿತ್ತು ಎಂದು ಹೇಳಲಾಗುತ್ತಿದೆ.

ನಂತರ ಆ ಪೇಜರ್ ಪಾರ್ಸೆಲ್‌ಗಳನ್ನು ಹಿಜ್ಬುಲ್ಲಾ ಸಂಘಟನೆ ಕೈ ಸೇರುವ ಹಾಗೆ ಮಾಡಿದ್ದು, ಅವುಗಳಲ್ಲಿ ಸ್ಫೋಟಕಗಳಿವೆ ಎಂದು ತಿಳಿಯದೆ ಅದನ್ನು ಅವರು ಬಳಸುತ್ತಿದ್ದರು. ಇಸ್ರೇಲಿ ಗುಪ್ತಚರ ಸಂಸ್ಥೆಗಳು ನಿಗದಿತ ಸಮಯದಲ್ಲಿ ಸಂದೇಶಗಳನ್ನು ಕಳುಹಿಸಿ ನಿನ್ನೆ ಸ್ಫೋಟಿಸಿದ್ದಾರೆ. ಈ ರೀತಿ ಪೇಜರ್‌ಗಳ ಮೂಲಕ ದಾಳಿ ನಡೆಸುತ್ತಿರುವುದು ವಿಶ್ವದಲ್ಲಿ ಇದೇ ಮೊದಲಬಾರಿ ಆಗಿರುವುದರಿಂದ ಇಡೀ ವಿಶ್ವವೇ ಬೆಚ್ಚಿಬಿದ್ದಿದೆ.

ಪೇಜರ್ ಎಂದರೇನು?
ಪೇಜರ್‌ಗಳು 20ನೇ ಶತಮಾನದ ಕೊನೆಯಲ್ಲಿ ಅಭಿವೃದ್ಧಿಪಡಿಸಲಾದ ಜನಪ್ರಿಯ ಸಂವಹನ ಸಾಧನವಾಗಿದೆ. ಇದು ನಿಸ್ತಂತು ಸಂವಹನ ಸಾಧನವಾಗಿದೆ. ಏಕಮುಖ ಸಂವಹನಕ್ಕೆ ಅನುಕೂಲಕರವಾದದ್ದು. ಸಂದೇಶವನ್ನು ಸ್ವೀಕರಿಸುವವರು ಪ್ರತ್ಯುತ್ತರಿಸಲು ಸಾಧ್ಯವಿಲ್ಲ. ಭಾರತದಲ್ಲಿಯೂ 20ನೇ ಶತಮಾನದ ಕೊನೆಯ ದಶಕದಲ್ಲಿ ಚಲಾವಣೆಯಲ್ಲಿತ್ತು. ಕಾಲಾನಂತರದಲ್ಲಿ ಮಾರುಕಟ್ಟೆಯಿಂದ ಕಣ್ಮರೆಯಾಯಿತು.

ಮೊಬೈಲ್ ಫೋನ್‌ಗಳು, ಪಠ್ಯ ಸಂದೇಶ ಕಳುಹಿಸುವಿಕೆ ಇತ್ಯಾದಿಗಳ ಪ್ರಗತಿಯೊಂದಿಗೆ ಪೇಜರ್‌ಗಳ ಬಳಕೆ ನಿಂತುಹೋಯಿತು.

ಪೇಜರ್‌ಗಳು ಹೇಗೆ ಕೆಲಸ ಮಾಡುತ್ತವೆ?
ಅತ್ಯಾಧುನಿಕ ಸಾಧನಗಳ ಆಗಮನದ ಹೊರತಾಗಿಯೂ, ಕೆಲವು ಪ್ರಮುಖ ಪ್ರದೇಶಗಳಲ್ಲಿ ಪೇಜರ್ಗಳು ಇನ್ನೂ ಬಳಕೆಯಲ್ಲಿವೆ. ಇದಕ್ಕೆ ಅದರಲ್ಲಿರುವ ವಿಶಿಷ್ಟ ಅನುಕೂಲತೆಗಳೆ ಕಾರಣ. ಅದರ ಬಳಕೆಯನ್ನು ವಿಶ್ವಾಸಾರ್ಹವೆಂದು ಪರಿಗಣಿಸಲಾಗುತ್ತದೆ.

ಪೇಜರ್‌ಗಳಲ್ಲಿನ ಬ್ಯಾಟರಿಗಳು ದೀರ್ಘಾವಧಿಯ ಜೀವಿತಾವಧಿಯನ್ನು ಹೊಂದಿವೆ. ಹೀಗಾಗಿ, ಸಿಗ್ನಲ್‌ಗಳು ಲಭ್ಯವಿಲ್ಲದ ಪ್ರದೇಶಗಳಲ್ಲಿ, ಆಸ್ಪತ್ರೆಗಳ ಒಳಗೆ ಇದನ್ನು ಬಳಸಲಾಗುತ್ತದೆ.

ಒಮ್ಮೆ ಚಾರ್ಜ್ ಮಾಡಿದರೆ ಒಂದು ವಾರದವರೆಗೆ ಬಳಸಬಹುದು. ಪೇಜರ್ಗಳ ಮೂಲಕ ಸಂವಹನ ನಡೆಸುವುದು ಹೆಚ್ಚು ಸುರಕ್ಷಿತ ಮತ್ತು ಖಾಸಗಿ ಎಂದು ಪರಿಗಣಿಸಲಾಗಿದೆ.

ಉದಾಹರಣೆಗೆ, ಆರೋಗ್ಯ ರಕ್ಷಣೆಯಲ್ಲಿ, ವೈದ್ಯಕೀಯ ಉಪಕರಣಗಳೊಂದಿಗೆ ಮಧ್ಯಪ್ರವೇಶಿಸುವ ಅಪಾಯದಿಂದಾಗಿ ಸೆಲ್ ಫೋನ್‌ಗಳನ್ನು ಬಳಸಲಾಗದ ಪರಿಸರದಲ್ಲಿ ತ್ವರಿತವಾಗಿ ಸಂವಹನ ನಡೆಸಬೇಕಾದ ವೈದ್ಯರು ಮತ್ತು ದಾದಿಯರಿಗೆ ಪೇಜರ್‌ಗಳು ಅತ್ಯಗತ್ಯವಾಗಿದೆ.

ಪೊಲೀಸ್ ಮತ್ತು ಅಗ್ನಿಶಾಮಕ ಇಲಾಖೆಗಳು ಸೇರಿದಂತೆ ತುರ್ತು ಸೇವೆಗಳು ತ್ವರಿತ ಎಚ್ಚರಿಕೆಗಳಿಗಾಗಿ ಪೇಜರ್‌ಗಳನ್ನು ಅವಲಂಬಿಸಿವೆ.

ವಿದೇಶ

ಡಿ.ಸಿ.ಪ್ರಕಾಶ್

ವಿಶ್ವವನ್ನೇ ಬೆಚ್ಚಿಬೀಳಿಸಿದ ಅವಳಿ ಗೋಪುರದ ದಾಳಿ ನಡೆದು ಇಂದಿಗೆ 23 ವರ್ಷಗಳು. ದಾಳಿಯ ದಿನವಾದ ಸೆಪ್ಟೆಂಬರ್ 11 ಅನ್ನು ಅಮೆರಿಕದಲ್ಲಿ ಕಪ್ಪು ದಿನವಾಗಿ ಆಚರಿಸಲಾಗುತ್ತದೆ. ಈ ದುರಂತ ನಡೆದಿದ್ದು ಹೇಗೆ?… ಇತಿಹಾಸದಲ್ಲಿ ಸ್ವಲ್ಪ ಹಿಂದಕ್ಕೆ ಹೋಗೋಣ….

ಈ ಭೀಕರ ದಾಳಿಯು ಸೆಪ್ಟೆಂಬರ್ 11, 2001 ರಂದು ಬೆಳಿಗ್ಗೆ 8.46ಕ್ಕೆ ನ್ಯೂಯಾರ್ಕ್ ನಗರದಲ್ಲಿ ನಡೆಯಿತು. 19 ಅಲ್ ಖೈದಾ ಭಯೋತ್ಪಾದಕರು 4 ಪ್ರಯಾಣಿಕ ವಿಮಾನಗಳನ್ನು ಅಪಹರಿಸಿ, ನ್ಯೂಯಾರ್ಕ್‌ನಲ್ಲಿರುವ ವರ್ಲ್ಡ್ ಟ್ರೇಡ್ ಸೆಂಟರ್, ಸೇನಾ ಪ್ರಧಾನ ಕಛೇರಿಯಾದ ಪೆಂಟಗನ್, ಮತ್ತು ಪೆನ್ಸಿಲ್ವೇನಿಯಾ ಪ್ರದೇಶ ಮುಂತಾದ ಮೂರು ಕಡೆ ದಾಳಿಯನ್ನು ನಡೆಸಿದರು.

81 ಪ್ರಯಾಣಿಕರು ಮತ್ತು 11 ಸಿಬ್ಬಂದಿಯೊಂದಿಗೆ ವಾಷಿಂಗ್ಟನ್‌ನಿಂದ ಲಾಸ್ ಏಂಜಲೀಸ್‌ಗೆ ತೆರಳುತ್ತಿದ್ದ ಅಮೆರಿಕನ್ ಏರ್‌ಲೈನ್ಸ್ ವಿಮಾನವನ್ನು ಹೈಜಾಕ್ ಮಾಡಿದ ಉಗ್ರರು, ನ್ಯೂಯಾರ್ಕ್‌ನ ಅವಳಿ ಗೋಪುರಕ್ಕೆ ಅಪ್ಪಳಿಸಿ ಸ್ಫೋಟಿಸಿದರು. ಸತತ 18 ನಿಮಿಷಗಳ ಅಂತರದಲ್ಲಿ, ವಾಷಿಂಗ್ಟನ್ ಏರ್‌ಪೋರ್ಟ್‌ನಿಂದ 56 ಪ್ರಯಾಣಿಕರು ಮತ್ತು 9 ಸಿಬ್ಬಂದಿಯೊಂದಿಗೆ ಟೇಕ್ ಆಫ್ ಆಗಿದ್ದ ಮತ್ತೊಂದು ವಿಮಾನವು ಬೆಳಿಗ್ಗೆ 9.03ಕ್ಕೆ ಅವಳಿ ಗೋಪುರದ ದಕ್ಷಿಣ ಭಾಗದ ಕಟ್ಟಡದ ಮೇಲೆ ಅಪ್ಪಳಿಸಿತು.

ಈ ಕ್ರೂರ ದಾಳಿಯಿಂದ ಗಗನಚುಂಬಿ ಕಟ್ಟಡಗಳು ಕ್ಷಣಾರ್ಧದಲ್ಲಿ ನೆಲಸಮಗೊಂಡವು. ಅಲ್ಲಿ ಕೆಲಸ ಮಾಡುತ್ತಿದ್ದ ಸಾವಿರಾರು ಜನ ಹಾಗೂ ರಸ್ತೆಯಲ್ಲಿ ಹೋಗುತ್ತಿದ್ದವರು ದಾರುಣವಾಗಿ ಸಾವನ್ನಪ್ಪಿದರು. ಮುಂದಿನ ಕೆಲವು ನಿಮಿಷಗಳಲ್ಲಿ, ನಿಖರವಾಗಿ 9.37ಕ್ಕೆ, ಮುಂದಿನ ದಾಳಿಯು ಅಮೆರಿಕದ ವಿಶ್ವದ ಅತ್ಯಂತ ಶಕ್ತಿಶಾಲಿ ಮಿಲಿಟರಿ ಪ್ರಧಾನ ಕಛೇರಿಯಾದ ಪೆಂಟಗನ್ ಮೇಲೆ ನಡೆದಿತ್ತು. ಮತ್ತೊಂದು ವಿಮಾನವು ಪೆನ್ಸಿಲ್ವೇನಿಯಾದ ಮೈದಾನದಲ್ಲಿ ಪತನಗೊಂಡು ಸ್ಫೋಟಗೊಂಡಿತು.

ಸೂಪರ್ ಪವರ್ ಅಮೆರಿಕಕ್ಕೆ ಎಚ್ಚರಿಕೆಯಂತೆ ನಡೆದ ಈ ದಾಳಿಗಳಲ್ಲಿ 2,977 ಅಮಾಯಕರು ದಾರುಣವಾಗಿ ಸಾವನ್ನಪ್ಪಿದರು. ಸಾವಿರಕ್ಕೂ ಹೆಚ್ಚು ಮಂದಿ ಗಾಯಗೊಂಡರು. ಇದು ಇತಿಹಾಸದಲ್ಲಿ ಅತ್ಯಂತ ಭೀಕರ ಭಯೋತ್ಪಾದಕ ದಾಳಿ ಎಂದೂ ದಾಖಲಾಯಿತು. ಇದರ ಬೆನ್ನಲ್ಲೇ ಭಯೋತ್ಪಾದನೆ ವಿರುದ್ಧ ಸಮರ ಸಾರಿದ್ದ ಅಮೆರಿಕ, 2011ರಲ್ಲಿ ಅಲ್-ಖೈದಾ ಭಯೋತ್ಪಾದಕ ಆಂದೋಲನದ ನಾಯಕ ಒಸಾಮಾ ಬಿನ್ ಲಾಡೆನ್ ನನ್ನು ಹೊಡೆದುರುಳಿಸಿತು.

ವಿಶ್ವವನ್ನೇ ಬೆಚ್ಚಿ ಬೀಳಿಸಿದ ಈ ಅವಳಿ ಗೋಪುರದ ದಾಳಿಯಲ್ಲಿ ಪ್ರಾಣ ಕಳೆದುಕೊಂಡವರ ಸ್ಮರಣಾರ್ಥ ಅಮೆರಿಕದಲ್ಲಿ ಸೆಪ್ಟೆಂಬರ್ 11ನ್ನು ದೇಶಪ್ರೇಮಿಗಳ ದಿನವನ್ನಾಗಿಯೂ ಆಚರಿಸಲಾಗುತ್ತದೆ.

ರಾಜಕೀಯ ವಿದೇಶ

ಭಾರತ ಎಲ್ಲರಿಗೂ ಸೇರಿದ್ದು ಎಂಬುದು ಬಿಜೆಪಿಗೆ ಅರ್ಥವಾಗುತ್ತಿಲ್ಲ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ಹಾಗೂ ಕಾಂಗ್ರೆಸ್ ಸಂಸದ ರಾಹುಲ್ ಹೇಳಿದ್ದಾರೆ.

ಅಮೆರಿಕದಲ್ಲಿ ನೆಲಸಿರುವ ಭಾರತೀಯ ಮೂಲದವರ ನಡುವೆ ಮಾತನಾಡಿದ ರಾಹುಲ್ ಗಾಂಧಿ, “ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟವಾದ ಕೆಲವೇ ನಿಮಿಷಗಳಲ್ಲಿ ಬಿಜೆಪಿ ಮತ್ತು ಭಾರತದ ಪ್ರಧಾನಿ ಮೋದಿ ಬಗ್ಗೆ ಜನರಲ್ಲಿ ಇದ್ದ ಭಯ ಮಾಯವಾಗಿದೆ. ಈ ಭಯದ ವಾತಾವರಣವನ್ನು ಹುಟ್ಟುಹಾಕಲು ಅವರಿಗೆ ವರ್ಷಗಳೇ ಬೇಕಾಯಿತು. ಆದರೆ ಇದು ಕೆಲವೇ ಸೆಕೆಂಡುಗಳಲ್ಲಿ ಕಣ್ಮರೆಯಾಯಿತು.

ಕೆಲವು ರಾಜ್ಯಗಳು ಇತರ ರಾಜ್ಯಗಳಿಗಿಂತ ಕೀಳು ಎಂದು ಆರ್‌ಎಸ್‌ಎಸ್ ಹೇಳುತ್ತಿದೆ. ಕೆಲವು ಭಾಷೆಗಳು ಇತರ ಭಾಷೆಗಳಿಗಿಂತ ಕೀಳು.. ಕೆಲವು ಧರ್ಮಗಳು ಇತರ ಧರ್ಮಗಳಿಗಿಂತ ಕೀಳು.. ಕೆಲವು ಸಮುದಾಯಗಳು ಇತರ ಸಮುದಾಯಗಳಿಗಿಂತ ಕೀಳು.. ಪ್ರತಿಯೊಂದು ರಾಜ್ಯವು ತನ್ನದೇ ಆದ ಇತಿಹಾಸ ಮತ್ತು ಸಂಪ್ರದಾಯವನ್ನು ಹೊಂದಿದೆ. ಮರಾಠಿ, ತಮಿಳು, ಬಂಗಾಳಿ ಮತ್ತು ಮಣಿಪುರಿ ಇವೆಲ್ಲವೂ ಕೀಳು ಭಾಷೆಗಳು ಎಂಬುದು ಆರ್‌ಎಸ್‌ಎಸ್ ಸಿದ್ಧಾಂತ.

ಭಾರತ ಎಲ್ಲರಿಗೂ ಸೇರಿದ್ದು ಎಂಬುದು ಬಿಜೆಪಿಗೆ ಅರ್ಥವಾಗುತ್ತಿಲ್ಲ. ನಮ್ಮ ಸಂವಿಧಾನವು ಭಾರತವನ್ನು ಒಕ್ಕೂಟ ಎಂದು ಒತ್ತಿಹೇಳುತ್ತದೆ. ಲೋಕಸಭೆ ಚುನಾವಣೆಗೆ 3 ತಿಂಗಳ ಮೊದಲು ನಮ್ಮ ಎಲ್ಲಾ ಬ್ಯಾಂಕ್ ಖಾತೆಗಳನ್ನು ಸ್ಥಗಿತ ಗೊಳಿಸಲಾಯಿತು. ನಾವು ಏನೂ ಮಾಡಲು ಸಾಧ್ಯವಿಲ್ಲ ಎಂದು ಅವರು ಭಾವಿಸಿದ್ದರು. ಆದರೆ ನಾವು ಧೈರ್ಯದಿಂದ ಚುನಾವಣೆ ಎದುರಿಸಿದ್ದೇವೆ. ಎಂದು ಹೇಳಿದ್ದಾರೆ.

ವಿದೇಶ

ರಕ್ಷಿಸಲ್ಪಟ್ಟವರಲ್ಲಿ 30 ಮಂದಿಯನ್ನು ಭಾರತಕ್ಕೆ ಕಳುಹಿಸಲಾಗಿದ್ದು, ಉಳಿದ 17 ಮಂದಿಯನ್ನು ಭಾರತಕ್ಕೆ ಕಳುಹಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ರಾಯಭಾರಿ ಕಚೇರಿ ತಿಳಿಸಿದೆ.

ಲಾವೋಸ್, ಆಗ್ನೇಯ ಏಷ್ಯಾದ ಥೈಲ್ಯಾಂಡ್ ಬಳಿ ಇರುವ ದೇಶ. ಈ ದೇಶದಲ್ಲಿ ಐಟಿ ಕಂಪನಿಗಳಲ್ಲಿ ಉದ್ಯೋಗ ನೀಡುವುದಾಗಿ ಹೇಳಿ ಭಾರತೀಯರನ್ನು ಕರೆತರಲಾಗಿದೆ. ಆದರೆ, ಅವರು ಬಲವಂತವಾಗಿ ಸೈಬರ್ (Cybercrime) ಅಪರಾಧಗಳಲ್ಲಿ ತೊಡಗಿಸಿಕೊಳ್ಳಲು ದೂಡಲ್ಪಟ್ಟಿದ್ದಾರೆ. ಭಾರತೀಯ ರಾಯಭಾರಿ ಕಚೇರಿ ಅವರನ್ನು ರಕ್ಷಿಸುವ ಕಾರ್ಯದಲ್ಲಿ ತೊಡಗಿದೆ.

ಆ ರೀತಿಯಲ್ಲಿ, ಆ ದೇಶದ ಬೋಹಿಯೊ ಪ್ರಾಂತ್ಯದ ವಿಶೇಷ ಆರ್ಥಿಕ ವಲಯದಲ್ಲಿ 47 ಭಾರತೀಯರಿಗೆ ಬೋಗಸ್ ಐಟಿ ಕಂಪನಿಗಳಲ್ಲಿ ಉದ್ಯೋಗ ಕೊಡಿಸಿ, ಅವರನ್ನು ಸೈಬರ್ ಅಪರಾಧಗಳಲ್ಲಿ ತೊಡಗಿಸಿಕೊಳ್ಳಲು ಒತ್ತಾಯಿಸಲಾಗಿದೆ.

ಈ ಬಗ್ಗೆ ಲಾವೋಸ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಗೆ ಮಾಹಿತಿ ಲಭ್ಯವಾಗಿದ್ದು, ಆ ದೇಶದ ಅಧಿಕಾರಿಗಳ ಜೊತೆಗೆ ಭಾರತೀಯ ರಾಯಭಾರಿ ಕಚೇರಿಯ ಅಧಿಕಾರಿಗಳು ಹಠಾತ್ ಸಂಶೋಧನೆ ನಡೆಸಿದ್ದಾರೆ.

ಆ ಸಮಯದಲ್ಲಿ, ವಿಶೇಷ ಆರ್ಥಿಕ ವಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದ ನಕಲಿ ಐಟಿ ಕಂಪನಿಯೊಂದು ಸೈಬರ್ ಅಪರಾಧದಲ್ಲಿ ತೊಡಗಿಸಿಕೊಳ್ಳಲು ಬಲವಂತಗೊಳಿಸಿದ್ದ 47 ಭಾರತೀಯರನ್ನು ರಕ್ಷಿಸಲಾಗಿದೆ.

ರಕ್ಷಿಸಲ್ಪಟ್ಟವರಲ್ಲಿ 30 ಮಂದಿಯನ್ನು ಭಾರತಕ್ಕೆ ಕಳುಹಿಸಲಾಗಿದ್ದು, ಉಳಿದ 17 ಮಂದಿಯನ್ನು ಭಾರತಕ್ಕೆ ಕಳುಹಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ರಾಯಭಾರಿ ಕಚೇರಿ ತಿಳಿಸಿದೆ. ಅಲ್ಲದೆ, ಲಾವೋಸ್‌ನಲ್ಲಿನ ನಕಲಿ ಉದ್ಯೋಗವಕಾಶಗಳನ್ನು ನಂಬಿ, ಭಾರತೀಯರು ಮೂರ್ಖರಾಗಬಾರದು ಎಂದು ಭಾರತದ ರಾಯಭಾರ ಕಚೇರಿ ಕೇಳಿಕೊಂಡಿದೆ.

ವಿದೇಶ

ಇಸ್ಲಾಮಾಬಾದ್,
ಪಾಕಿಸ್ತಾನದ ಬಲೂಚಿಸ್ತಾನ್ ಪ್ರಾಂತ್ಯದ ಸೇನಾ ಶಿಬಿರದ ಮೇಲೆ ಇಂದು ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ 102 ಪಾಕಿಸ್ತಾನಿ ಸೈನಿಕರು ಹುತಾತ್ಮರಾಗಿದ್ದಾರೆ.

ಪಾಕಿಸ್ತಾನದ ಬಲೂಚಿಸ್ತಾನ್ ಪ್ರಾಂತ್ಯದ ಮುಸಾಖೆಲ್ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿನ್ನೆ ಭಯೋತ್ಪಾದಕರು ಪ್ರಯಾಣಿಕರ ಬಸ್ ಮತ್ತು ಟ್ರಕ್ ಅನ್ನು ಹೈಜಾಕ್ ಮಾಡಿದ್ದರು. ಭಯೋತ್ಪಾದಕರು ಎರಡು ವಾಹನಗಳಿಂದ ಜನರನ್ನು ಮತ್ತೊಂದು ಸ್ಥಳಕ್ಕೆ ಕರೆದೊಯ್ದು ಗುಂಡಿಕ್ಕಿ ಕೊಂದರು. ಇದರಲ್ಲಿ 23 ಮಂದಿ ಸಾವನ್ನಪ್ಪಿದ್ದರು.

ಈ ಭೀಕರ ಘಟನೆಯನ್ನು ಬಲೂಚಿಸ್ತಾನ ಮುಖ್ಯಮಂತ್ರಿ ಸರ್ಫ್ರಾಜ್ ಬುಗ್ತಿ (Sarfraz Bugti) ತೀವ್ರವಾಗಿ ಖಂಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ, ಇಂದು ರಾಸ್ಬೆಲ್ಲಾದಲ್ಲಿ (Rasbella) ಸೇನಾ ಶಿಬಿರದ ಮೇಲೆ ನಡೆದ ದಾಳಿಯಲ್ಲಿ 102 ಪಾಕಿಸ್ತಾನಿ ಸೈನಿಕರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ವಿದೇಶ

ಡಿ.ಸಿ.ಪ್ರಕಾಶ್

“ರಷ್ಯಾ-ಉಕ್ರೇನ್ ಸಂಘರ್ಷದಲ್ಲಿ ಭಾರತ ತಟಸ್ಥವಾಗಿಲ್ಲ ಮತ್ತು ಶಾಂತಿಯ ಪರವಾಗಿದೆ” ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಉಕ್ರೇನ್‌ಗೆ ಐತಿಹಾಸಿಕ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ (Volodymyr Zelenskyy) ಅವರನ್ನು ಅವರ ನಿವಾಸದಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದರು. ಇಬ್ಬರೂ ನಾಯಕರು ಪ್ರತ್ಯೇಕವಾಗಿ ಮತ್ತು ನಂತರ ಎರಡೂ ದೇಶಗಳ ನಿಯೋಗಗಳೊಂದಿಗೆ ಸಂವಾದ ನಡೆಸಿದರು. ಈ ವೇಳೆ ಮಾತನಾಡಿದ ನರೇಂದ್ರ ಮೋದಿ, ”ಸಂವಾದ ಮತ್ತು ರಾಜತಾಂತ್ರಿಕ ಪ್ರಯತ್ನಗಳಿಂದ ಮಾತ್ರ ಸಂಘರ್ಷವನ್ನು ಬಗೆಹರಿಸಿಕೊಳ್ಳಬಹುದು ಎಂಬುದು ಭಾರತದ ನಿಲುವಾಗಿದೆ.

ಉಕ್ರೇನ್ ಮತ್ತು ರಷ್ಯಾ ಮಾತುಕತೆಗಳಲ್ಲಿ ತೊಡಗಬೇಕು. ಅದರ ಮೂಲಕ ಸಂಘರ್ಷಕ್ಕೆ ಪರಿಹಾರ ಕಂಡುಕೊಳ್ಳಬೇಕು. ಶಾಂತಿ ಪ್ರಯತ್ನಗಳಿಗೆ ಪೂರ್ವಭಾವಿ ಕೊಡುಗೆಗಳನ್ನು ನೀಡಲು ಭಾರತ ಸಿದ್ಧವಾಗಿದೆ. ಈ ಸಂಘರ್ಷದಲ್ಲಿ ಭಾರತ ತಟಸ್ಥವಾಗಿಲ್ಲ. ಮೊದಲಿನಿಂದಲೂ ಅದು ಒಂದು ಕಡೆ ಇದೆ. ಅದು ಶಾಂತಿಯ ಕಡೆ. ಈ ಘರ್ಷಣೆಯಲ್ಲಿ ಮೊದಲ ಬಲಿಪಶು ಮಗುವಾಗಿರುವುದು ಹೃದಯವಿದ್ರಾವಕವಾಗಿದೆ” ಎಂದರು.

ಈ ಭೇಟಿಗೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ಬಿಡುಗಡೆ ಮಾಡಿರುವ ‘ಎಕ್ಸ್’ ಪೋಸ್ಟ್ ನಲ್ಲಿ, “ಉಕ್ರೇನ್‌ಗೆ ನನ್ನ ಭೇಟಿ ಐತಿಹಾಸಿಕವಾದದ್ದು. ಭಾರತ-ಉಕ್ರೇನ್ ಸ್ನೇಹವನ್ನು ಗಾಢವಾಗಿಸುವ ಉದ್ದೇಶದಿಂದ ನಾನು ಈ ಮಹಾನ್ ರಾಷ್ಟ್ರಕ್ಕೆ ಬಂದಿದ್ದೇನೆ. ನಾನು ಅಧ್ಯಕ್ಷ ಝೆಲೆನ್ಸ್ಕಿಯೊಂದಿಗೆ ರಚನಾತ್ಮಕ ಮಾತುಕತೆ ನಡೆಸಿದ್ದೇನೆ. ಭಾರತವು ಯಾವಾಗಲೂ ಶಾಂತಿ ನೆಲೆಸಬೇಕು ಎಂದು ಬಲವಾಗಿ ನಂಬುತ್ತದೆ. ಉಕ್ರೇನ್ ಸರ್ಕಾರ ಮತ್ತು ಆ ಜನತೆಯ ಆತಿಥ್ಯಕ್ಕಾಗಿ ಧನ್ಯವಾದಗಳು” ಎಂದು ಹೇಳಿದ್ದಾರೆ.

ಈ ಭೇಟಿಯ ಸಂದರ್ಭದಲ್ಲಿ ಭಾರತ ಮತ್ತು ಉಕ್ರೇನ್ ನಡುವೆ 4 ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. ಝೆಲೆನ್ಸ್ಕಿಯೊಂದಿಗಿನ ಸಭೆಯ ಬಗ್ಗೆ ಅವರ ‘ಎಕ್ಸ್’ ಪೇಜ್ ನಲ್ಲಿ, “ನಾನು ಅಧ್ಯಕ್ಷ ಝೆಲೆನ್ಸ್ಕಿಯೊಂದಿಗೆ ಬಹಳ ಫಲಪ್ರದ ಚರ್ಚೆಗಳನ್ನು ನಡೆಸಿದ್ದೇನೆ. ಭಾರತವು ಉಕ್ರೇನ್‌ನೊಂದಿಗೆ ಆರ್ಥಿಕ ಸಂಬಂಧಗಳನ್ನು ಗಾಢವಾಗಿಸಲು ಉತ್ಸುಕವಾಗಿದೆ. ಕೃಷಿ, ತಂತ್ರಜ್ಞಾನ, ವೈದ್ಯಕೀಯ ಮತ್ತು ಇತರ ಕ್ಷೇತ್ರಗಳಲ್ಲಿ ಸಹಕಾರವನ್ನು ಹೆಚ್ಚಿಸುವ ಮಾರ್ಗಗಳನ್ನು ನಾವು ಚರ್ಚಿಸಿದ್ದೇವೆ. ಸಾಂಸ್ಕೃತಿಕ ಸಂಬಂಧಗಳನ್ನು ಮತ್ತಷ್ಟು ಗಟ್ಟಿಗೊಳಿಸಲು ನಾವು ಸಹ ಒಪ್ಪಿಕೊಂಡಿದ್ದೇವೆ. ನಾವು ಸಂಘರ್ಷಗಳ ಬಗ್ಗೆಯೂ ಚರ್ಚಿಸಿದ್ದೇವೆ. ಶಾಂತಿ ಕಾಪಾಡುವುದು ಬಹಳ ಮುಖ್ಯ. ಸಂಘರ್ಷವನ್ನು ಶಾಂತಿಯುತವಾಗಿ ಪರಿಹರಿಸುವುದೇ ಮಾನವೀಯತೆಗೆ ಉತ್ತಮವಾದದ್ದು” ಎಂದು ಅವರು ಪೋಸ್ಟ್ ಮಾಡಿದ್ದಾರೆ.

ಈ ಭೇಟಿಯ ಸಂದರ್ಭದಲ್ಲಿ, 4 BHISHM ಕ್ಯೂಬ್‌ಗಳನ್ನು (ಮೊಬೈಲ್ ಆಸ್ಪತ್ರೆಗಳು) ಉಕ್ರೇನ್ ಅಧ್ಯಕ್ಷರ ಬಳಿ ಹಸ್ತಾಂತರಿಸಲಾಯಿತು. BHISHM Cubes ಎಲ್ಲಾ ಕ್ಲಿನಿಕಲ್ ಸನ್ನಿವೇಶಗಳಿಗೆ ಸೂಕ್ತವಾದ ಮೊದಲ ಸಾಲಿನ ಆರೈಕೆ ಔಷಧಿಗಳು ಮತ್ತು ಸಲಕರಣೆಗಳೊಂದಿಗೆ ಆಂತರಿಕವಾಗಿ ವಿನ್ಯಾಸಗೊಳಿಸಲಾಗಿದೆ. ಉಕ್ರೇನ್‌ನಲ್ಲಿ ಗಾಯಗೊಂಡವರಿಗೆ ತ್ವರಿತ ಚಿಕಿತ್ಸೆ ನೀಡಲು ಇವು ಸಹಾಯ ಮಾಡುತ್ತವೆ. ಇದು ಉಕ್ರೇನ್‌ಗೆ ಮಾನವೀಯ ನೆರವು ನೀಡುವ ಭಾರತದ ಬದ್ಧತೆಯನ್ನು ಒತ್ತಿಹೇಳುತ್ತದೆ ಎಂದು ವಿದೇಶಾಂಗ ಇಲಾಖೆ ಹೇಳಿದೆ.

ಪ್ರಧಾನಿಯವರ ಮಾತುಕತೆಯ ಕುರಿತು ಕೀವ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಿದೇಶಾಂಗ ಸಚಿವ ಜೈಶಂಕರ್, “ಬಹಳ ವಿವರವಾದ, ಅತ್ಯಂತ ಮುಕ್ತ ಮತ್ತು ಅತ್ಯಂತ ರಚನಾತ್ಮಕ ಚರ್ಚೆ ನಡೆಯಿತು. ಭಾರತವು ಶಾಂತಿ ಶೃಂಗಸಭೆಯಲ್ಲಿ ಭಾಗವಹಿಸುವುದನ್ನು ಮುಂದುವರಿಸಬೇಕೆಂದು ಉಕ್ರೇನಿಯನ್ ಕಡೆಯವರು ಬಯಸುತ್ತಾರೆ. ಪ್ರಧಾನಿ ಮೋದಿ ಮತ್ತು ಅಧ್ಯಕ್ಷ ಝೆಲೆನ್ಸ್ಕಿ ನಡುವಿನ ಹೆಚ್ಚಿನ ಸಮಯ ಸಂಘರ್ಷದ ಬಗ್ಗೆ ಇತ್ತು.

ಭಾರತ ಇದುವರೆಗೆ 17 ಮಾನವೀಯ ನೆರವು ನೀಡಿದೆ. ಇಂದು ನಾವು 10 ಜನರೇಟರ್ ಸೆಟ್‌ಗಳ ಜೊತೆಗೆ 22 ಟನ್‌ಗಳಷ್ಟು ವೈದ್ಯಕೀಯ ಬೆಂಬಲ ಸಾಧನಗಳನ್ನು ಒಳಗೊಂಡಿರುವ BHISHM ಕ್ಯೂಬ್‌ಗಳನ್ನು ಹಸ್ತಾಂತರಿಸಿದ್ದೇವೆ. ಭಾರತದ ಪ್ರಧಾನಿ ಮತ್ತು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ನಡುವಿನ ಮಾತುಕತೆಗಳು ದ್ವಿಪಕ್ಷೀಯ ಬಾಂಧವ್ಯವನ್ನು ಬಲಪಡಿಸುವ ಬಗ್ಗೆ ಕೇಂದ್ರೀಕರಿಸಿದ್ದವು. ವ್ಯಾಪಾರ, ಆರ್ಥಿಕತೆ, ರಕ್ಷಣೆ, ಔಷಧ, ಕೃಷಿ, ಶಿಕ್ಷಣ ಸೇರಿದಂತೆ ವಿವಿಧ ಕ್ಷೇತ್ರಗಳ ಕುರಿತು ಚರ್ಚೆ ನಡೆಸಲಾಯಿತು.

1992ರಲ್ಲಿ ರಾಜತಾಂತ್ರಿಕ ಸಂಬಂಧಗಳು ಸ್ಥಾಪನೆಯಾದ ನಂತರ ಭಾರತದ ಪ್ರಧಾನಿಯೊಬ್ಬರು ಉಕ್ರೇನ್‌ಗೆ ಭೇಟಿ ನೀಡುತ್ತಿರುವುದು ಇದೇ ಮೊದಲು. ಈ ಸಭೆಯಲ್ಲಿ ಪ್ರಧಾನಿ ಮೋದಿ ಅವರು ಉಕ್ರೇನ್ ಅಧ್ಯಕ್ಷರನ್ನು ಭಾರತಕ್ಕೆ ಭೇಟಿ ನೀಡುವಂತೆ ಆಹ್ವಾನಿಸಿದರು. ಝೆಲೆನ್ಸ್ಕಿ ಅವರ ಅನುಕೂಲಕ್ಕೆ ತಕ್ಕಂತೆ ಭಾರತಕ್ಕೆ ಬರುತ್ತಾರೆ ಎಂದು ನಾವು ನಿರೀಕ್ಷಿಸುತ್ತೇವೆ.

ರಷ್ಯಾದಿಂದ ಭಾರತವು ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುತ್ತಿರುವ ಬಗ್ಗೆ ಪ್ರಧಾನಿ ಮೋದಿ ಅವರು ಅಧ್ಯಕ್ಷ ಝೆಲೆನ್ಸ್ಕಿ ಅವರಿಗೆ ತಿಳಿಸಿದರು. ಮಾರುಕಟ್ಟೆ ಪರಿಸ್ಥಿತಿ ಏನು ಮತ್ತು ಭಾರತ ಏನು ಮಾಡಿದೆ ಎಂದು ವಿವರಿಸಿದರು. ಕಚ್ಚಾ ತೈಲವನ್ನು ಮಾರಾಟ ಮಾಡುವ ಅನೇಕ ದೇಶಗಳಿಗೆ ಪ್ರಸ್ತುತ ನಿಷೇಧ ಹೇರಲಾಗಿದೆ. ಇದರಿಂದಾಗಿ ಮಾರುಕಟ್ಟೆ ತುಂಬಾ ಬಿಗಿಯಾಗಿದೆ. ಅಂತಹ ಒತ್ತಾಯ ಏಕೆ ಇದೆ? ಒಟ್ಟಾರೆಯಾಗಿ ಅಂತರಾಷ್ಟ್ರೀಯ ಆರ್ಥಿಕತೆಯ ಲಾಭಕ್ಕಾಗಿ ಬೆಲೆಗಳು ಏಕೆ ನ್ಯಾಯಯುತ ಮತ್ತು ಸ್ಥಿರವಾಗಿರಬಾರದು ಎಂಬುದನ್ನು ವಿವರಿಸಲಾಯಿತು” ಎಂದು ಹೇಳಿದರು.

ವಿದೇಶ

ಅಮೆರಿಕ ಅಧ್ಯಕ್ಷರಾಗಿದ್ದ ಬರಾಕ್ ಒಬಾಮ, ವಿದೇಶಾಂಗ ಕಾರ್ಯದರ್ಶಿಯಾಗಿದ್ದ ಹಿಲರಿ ಕ್ಲಿಂಟನ್ ಮತ್ತು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಬಾನ್ ಕಿ ಮೂನ್ ಈ ಮನೆಗೆ ಭೇಟಿ ನೀಡಿದ್ದಾರೆ.

ಮ್ಯಾನ್ಮಾರ್‌ನಲ್ಲಿ ಮಿಲಿಟರಿ ಆಡಳಿತದ ವಿರುದ್ಧ ಹೋರಾಡಿದ ಆಂಗ್ ಸಾನ್ ಸೂಕಿ (Aung San Suu Kyi) ಅವರನ್ನು ವರ್ಷಗಳ ಕಾಲ ಗೃಹಬಂಧನದಲ್ಲಿ ಇಡಲಾಗಿತ್ತು. 2010ರಲ್ಲಿ ಅವರನ್ನು ಗೃಹಬಂಧನದಿಂದ ಬಿಡುಗಡೆ ಮಾಡಲಾಯಿತು. ಆ ನಂತರ ರಾಜಕೀಯದಲ್ಲಿ ಸಕ್ರಿಯರಾಗಿ 2020ರ ಚುನಾವಣೆಯಲ್ಲಿ ಗೆದ್ದರು. ಆದರೆ ಫೆಬ್ರವರಿ 2021ರಲ್ಲಿ, ಅವರ ಆಡಳಿತವನ್ನು ಉರುಳಿಸಿ, ಮಿಲಿಟರಿ ಅಧಿಕಾರವನ್ನು ವಹಿಸಿಕೊಂಡಿತು. ಆಗ ಅವರಿಗೆ 27 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು. ಸೆರೆಮನೆಯಲ್ಲಿದ್ದ ಅವರು ಸದ್ಯ ಗೃಹಬಂಧನದಲ್ಲಿ ಇದ್ದಾರೆ.

ಈ ಹಿನ್ನೆಲೆಯಲ್ಲಿ, ಯಾಂಗೋನ್ ಸರೋವರದ ದಡದಲ್ಲಿರುವ 1.9 ಎಕರೆ ಜಮೀನಿನಲ್ಲಿ ಅವರ ತಾಯಿಯ ಮನೆ ಇದೆ. ಈ ಮನೆಗೆ ಅವರ ಅಣ್ಣ ಹಕ್ಕು ಪ್ರತಿಪಾದಿಸಿದರು. ಹಾಗಾಗಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲಾಯಿತು. ಆಗ ನ್ಯಾಯಾಲಯವು ಮನೆಯನ್ನು ಹರಾಜು ಮಾಡುವಂತೆ ಆದೇಶಿಸಿತು. ಇದರ ಮೂಲ ಬೆಲೆಯನ್ನು 142 ಮಿಲಿಯನ್ ಅಮೆರಿಕ ಡಾಲರ್ ಎಂದು ನಿಗದಿಪಡಿಸಲಾಯಿತು.

ಇಂದು ಮನೆ ಹರಾಜು ಮಾಡುವುದಾಗಿ ಘೋಷಿಸಲಾಗಿತ್ತು. ಆದರೆ ಯಾರೂ ಬಿಡ್ ಕೇಳಲಿಲ್ಲ. ಇದರಿಂದ ಮನೆ ಹರಾಜು ಆಗಲಿಲ್ಲ. ಈ ರೀತಿ ಆಗುತ್ತಿರುವುದು ಇದು 2ನೇ ಬಾರಿ.

ಅವರ ತಂದೆ ಜನರಲ್ ಆಂಗ್ ಸಾನ್ ಅವರನ್ನು ಮ್ಯಾನ್ಮಾರ್‌ನ ಸ್ವಾತಂತ್ರ್ಯ ನಾಯಕ ಎಂದು ಹೇಳಲಾಗುತ್ತದೆ. ಅವರನ್ನು 1947ರಲ್ಲಿ ಹತ್ಯೆ ಮಾಡಲಾಯಿತು. ಹೀಗಾಗಿ ಆಂಗ್ ಸಾನ್ ಅವರ ಪತ್ನಿ (ಸೂಕಿ ಅವರ ತಾಯಿ) ಕಿನ್ ಕಿ ಅವರಿಗೆ ಸರ್ಕಾರವು ಈ ಮನೆಯನ್ನು ನೀಡಿತ್ತು. ಇದು ಬ್ರಿಟಿಷರ ಕಾಲದ ಶೈಲಿಯ ಎರಡು ಅಂತಸ್ತಿನ ಮನೆ.

ಆಂಗ್ ಸಾನ್ ಸೂಕಿಯನ್ನು ಈ ಮನೆಯಲ್ಲಿ 15 ವರ್ಷಗಳ ಕಾಲ ಗೃಹಬಂಧನದಲ್ಲಿ ಇರಿಸಲಾಗಿದೆ. ಅಮೆರಿಕ ಅಧ್ಯಕ್ಷರಾಗಿದ್ದ ಬರಾಕ್ ಒಬಾಮ, ವಿದೇಶಾಂಗ ಕಾರ್ಯದರ್ಶಿಯಾಗಿದ್ದ ಹಿಲರಿ ಕ್ಲಿಂಟನ್ ಮತ್ತು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಬಾನ್ ಕಿ ಮೂನ್ ಈ ಮನೆಗೆ ಭೇಟಿ ನೀಡಿದ್ದಾರೆ.

ಆಂಗ್ ಸಾನ್ ಸೂಕಿ ಅವರು ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತೆಯೂ ಆಗಿದ್ದಾರೆ. ಅವರು ತಮ್ಮ ಜೀವನದ ಬಹುಪಾಲು ದಿನಗಳನ್ನು ಜೈಲಿನಲ್ಲೇ ಕಳೆದಿದ್ದಾರೆ ಎಂಬುದು ಗಮನಾರ್ಹ.

ವಿದೇಶ

ಢಾಕಾ: “ದೇಶದಲ್ಲಿ ಅಲ್ಪಸಂಖ್ಯಾತರ ಮೇಲಿನ ದಾಳಿ ಕ್ರೂರವಾಗಿದೆ. ವಿದ್ಯಾರ್ಥಿಗಳ ಕಾರ್ಯಗಳು ಎಲ್ಲಾ ಧರ್ಮದ ಜನರನ್ನು ರಕ್ಷಿಸುವಂತಿರಬೇಕು” ಎಂದು ಬಾಂಗ್ಲಾದೇಶದ ಹಂಗಾಮಿ ಸರ್ಕಾರದ ಅಧ್ಯಕ್ಷ ಮುಹಮ್ಮದ್ ಯೂನಸ್ (Muhammad Yunus) ಹೇಳಿದ್ದಾರೆ.

ಮೀಸಲಾತಿಗಾಗಿ ವಿದ್ಯಾರ್ಥಿಗಳ ಪ್ರತಿಭಟನೆ ಹಿಂಸಾಚಾರದಲ್ಲಿ ಕೊನೆಗೊಂಡಿದೆ. ಶೇಖ್ ಹಸೀನಾ (Sheikh Hasina) ಬಾಂಗ್ಲಾದೇಶದ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿ ದೇಶವನ್ನು ತೊರೆದರು. ನೊಬೆಲ್ ಪ್ರಶಸ್ತಿ ವಿಜೇತ ಅರ್ಥಶಾಸ್ತ್ರಜ್ಞ ಮುಹಮ್ಮದ್ ಯೂನಸ್ (84), ನೇತೃತ್ವದಲ್ಲಿ ಬಾಂಗ್ಲಾದೇಶದ ಮಧ್ಯಂತರ ಸರ್ಕಾರವು ಅಧಿಕಾರ ವಹಿಸಿಕೊಂಡಿದೆ.

ಈ ಹಿನ್ನೆಲೆಯಲ್ಲಿ, ಬಾಂಗ್ಲಾದೇಶದ ವಿಶ್ವವಿದ್ಯಾನಿಲಯವೊಂದರಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಮುಹಮ್ಮದ್ ಯೂನಸ್, “ದೇಶದಲ್ಲಿ ಅಲ್ಪಸಂಖ್ಯಾತರ ಮೇಲಿನ ದಾಳಿ ಕ್ರೂರವಾಗಿದೆ. ವಿದ್ಯಾರ್ಥಿಗಳು ಹಿಂದೂ, ಕ್ರೈಸ್ತ, ಬೌದ್ಧ ಧರ್ಮ ಸೇರಿದಂತೆ ಎಲ್ಲ ಧರ್ಮದ ಜನರನ್ನು ರಕ್ಷಿಸಬೇಕು.

ಅನೇಕ ಜನರು ನಿಮ್ಮ ಪ್ರಯತ್ನಗಳನ್ನು ವ್ಯರ್ಥ ಮಾಡಲು ಯೋಜಿಸುತ್ತಾರೆ. ಈ ಬಾರಿ ವಿಫಲರಾಗಬೇಡಿ. ಬಾಂಗ್ಲಾದೇಶವನ್ನು ಅಭಿವೃದ್ಧಿಪಡಿಸುವುದು ವಿದ್ಯಾರ್ಥಿಗಳ ಕೈಯಲ್ಲಿದೆ. ನಾವೆಲ್ಲರೂ ಒಗ್ಗಟ್ಟಾಗಿ ಹೋರಾಡಬೇಕು” ಎಂದರು.

ವಿದೇಶ

• ಡಿ.ಸಿ.ಪ್ರಕಾಶ್ 

ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತದಂತೆಯೇ ಬಾಂಗ್ಲಾದೇಶದಲ್ಲಿ ಮುಸ್ಲಿಂ ಸಂಪ್ರದಾಯವಾದಿ ಆಡಳಿತವನ್ನು ಸ್ಥಾಪಿಸಲು ಪಾಕಿಸ್ತಾನದ ಐಎಸ್‌ಐ ಸಕ್ರಿಯವಾಗಿ ಪ್ರಯತ್ನಿಸುತ್ತಿದೆ!

ಹಿಂದೂ ಮಹಾಸಾಗರವು ವಿಶ್ವದ 3ನೇ ಅತಿದೊಡ್ಡ ಸಾಗರವಾಗಿದೆ. ಅಂತರರಾಷ್ಟ್ರೀಯ ಕಚ್ಚಾ ತೈಲ ವ್ಯಾಪಾರದಲ್ಲಿ ಶೇ.80ರಷ್ಟು ಮತ್ತು ಅಂತಾರಾಷ್ಟ್ರೀಯ ಸರಕು ವ್ಯಾಪಾರದಲ್ಲಿ ಶೇ.40ರಷ್ಟು  ಈ ಕಡಲ ಪ್ರದೇಶದ ಮೂಲಕವೇ ನಡೆಯುತ್ತದೆ. ಪ್ರಸ್ತುತ ಈ ಪ್ರದೇಶದಲ್ಲಿ ಭಾರತ ಪ್ರಾಬಲ್ಯ ಹೊಂದಿದೆ.

ಇದಕ್ಕೆ ಸವಾಲೆಸೆಯಲು ಚೀನಾ ‘ಒಂದು ರಸ್ತೆ, ಒಂದು ವಲಯ’ ಉಪಕ್ರಮದ ಅಡಿಯಲ್ಲಿ ಭಾರತದ ನೆರೆಯ ರಾಷ್ಟ್ರಗಳನ್ನು ತನ್ನ ಮಿತ್ರರಾಷ್ಟ್ರಗಳಾಗಿ ಪರಿವರ್ತಿಸಲು ಪ್ರಯತ್ನಿಸುತ್ತಿದೆ. ಇದರ ಭಾಗವಾಗಿ, ಬಾಂಗ್ಲಾದೇಶದ ಬಂದರುಗಳು ಮತ್ತು ಮೂಲಸೌಕರ್ಯ ಯೋಜನೆಗಳಲ್ಲಿ ಚೀನಾ ಭಾರಿ ಹೂಡಿಕೆ ಮಾಡಿಕೊಂಡು ಬರುತ್ತಿದೆ. ಆದರೂ, ಆ ದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಭಾರತಕ್ಕೇ ಆಧ್ಯತೆ ನೀಡುತ್ತಿದ್ದರು.

ಇದರಿಂದಾಗಿ ಬಾಂಗ್ಲಾದೇಶದ ವ್ಯಾಪಾರದಲ್ಲಿ ಭಾರತದ ಕೈ ಮೇಲಾಗಿದೆ. ಬಾಂಗ್ಲಾದೇಶದಲ್ಲಿ ಸುಮಾರು 350ಕ್ಕೂ ಹೆಚ್ಚು ಭಾರತೀಯ ಕಂಪನಿಗಳು ಕಾರ್ಯನಿರ್ವಹಿಸುತ್ತಿವೆ. 19,000ಕ್ಕೂ ಹೆಚ್ಚು ಭಾರತೀಯರು ಬಾಂಗ್ಲಾದಲ್ಲಿ ಕೆಲಸ ಮಾಡುತ್ತಿದ್ದಾರೆ.

ಶೇಖ್ ಹಸೀನಾ ಇತ್ತೀಚೆಗೆ ಹೇಳಿದಂತೆ, “ಬಾಂಗ್ಲಾದೇಶದ ತೀಸ್ತಾ ನದಿ ಅಭಿವೃದ್ಧಿ ಯೋಜನೆಯನ್ನು ಕಾರ್ಯಗತಗೊಳಿಸಲು ಚೀನಾ ಉತ್ಸುಕವಾಗಿದೆ. ಆದರೆ, ಈ ಯೋಜನೆಯನ್ನು ಭಾರತಕ್ಕೆ ಹಸ್ತಾಂತರಿಸಲಾಗುವುದು” ಎಂದು ಹೇಳಿದರು.

ಸತತವಾಗಿ ಭಾರತದ ಪರವಾಗಿದ್ದ ಶೇಖ್ ಹಸೀನಾ ಆಡಳಿತವನ್ನು ಕಿತ್ತೊಗೆಯಲು ಚೀನಾ ನಿರ್ಧರಿಸಿತು. ಇದಕ್ಕಾಗಿ ಆ ದೇಶವು ಪಾಕಿಸ್ತಾನದ ಐಎಸ್‌ಐ ಜೊತೆ ರಹಸ್ಯವಾಗಿ ಕೈ ಜೋಡಿಸಿದೆ. ಬಾಂಗ್ಲಾದೇಶಕ್ಕೆ ನುಸುಳಲು ಮತ್ತು ಗಲಭೆಗಳನ್ನು ಎಬ್ಬಿಸಲು ಐಎಸ್‌ಐ ಗೂಢಚಾರರಿಗೆ ಚೀನಾ ಉದಾರವಾಗಿ ಹಣವನ್ನು ನೀಡಿದೆ ಎಂದು ವರದಿಗಳಾಗಿದೆ.

ಈ ಕುರಿತು ಹೇಳುತ್ತಿರುವ ಭಾರತೀಯ ಗುಪ್ತಚರ ಮೂಲಗಳು, ‘ಜಮಾತ್-ಎ-ಇಸ್ಲಾಮಿ ಎಂಬ ಸಂಪ್ರದಾಯವಾದಿ ಸಂಘಟನೆ ಬಾಂಗ್ಲಾದೇಶದಲ್ಲಿ ಕಾರ್ಯನಿರ್ವಹಿಸುತ್ತಿದೆ. ಅದರ ವಿದ್ಯಾರ್ಥಿ ಸಂಘಕ್ಕೆ ಸೇರಿದ ಇಸ್ಲಾಮಿ ಛತ್ರ ಶಿಬಿರ್ (Islami Chhatra Shibir) ವಿದ್ಯಾರ್ಥಿಗಳಿಗೆ ಪಾಕಿಸ್ತಾನದ ಐಎಸ್‌ಐ (ISI) ಕಳೆದ ಕೆಲವು ವರ್ಷಗಳಿಂದ ವಿಶೇಷ ತರಬೇತಿ ನೀಡುತ್ತಿದೆ. ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ಶಿಬಿರಗಳಲ್ಲಿ ಅವರಿಗೆ ಶಸ್ತ್ರಾಸ್ತ್ರ ತರಬೇತಿ ನೀಡಲಾಗುತ್ತಿದೆ.

ಐಎಸ್‌ಐ ಮೂಲಕ ತರಬೇತಿ ಪಡೆದ ಇವರು, ಬಾಂಗ್ಲಾದೇಶ ವಿದ್ಯಾರ್ಥಿ ಸಂಘದ ಪ್ರತಿಭಟನೆಯನ್ನು ಗಲಭೆಯಾಗಿ ಪರಿವರ್ತಿಸಿ ಅಪಾರ ಪ್ರಮಾಣದ ಪ್ರಾಣಹಾನಿ ಮಾಡಿದ್ದಾರೆ. ಇದಕ್ಕಾಗಿ ಚೀನಾ ಐಎಸ್‌ಐಗೆ ಭಾರಿ ಮೊತ್ತದ ಹಣ ನೀಡಿದೆ.

ದಾವೂದ್ ಇಬ್ರಾಹಿಂನೊಂದಿಗೆ ಸಂಪರ್ಕ: ಬಾಂಗ್ಲಾದೇಶದ ಪ್ರಮುಖ ವಿರೋಧ ಪಕ್ಷವಾದ ಬಿಎನ್‌ಪಿಯ (Bangladesh Nationalist Party) ನಾಯಕ ತಾರಿಕ್ ರೆಹಮಾನ್ (Tarique Rahman) ಅವರು ಬ್ರಿಟನ್ ರಾಜಧಾನಿ ಲಂಡನ್‌ನಲ್ಲಿ ವಾಸಿಸುತ್ತಿದ್ದಾರೆ. ಅವರು ಮತ್ತು ಹಿರಿಯ ಐಎಸ್‌ಐ ಮುಖ್ಯಸ್ಥ ಜಾವಿದ್ ಇತ್ತೀಚೆಗೆ ಸೌದಿ ಅರೇಬಿಯಾದ ಜೆಡ್ಡಾದಲ್ಲಿ ಭೇಟಿಯಾಗಿದ್ದರು. ಆಗ ಶೇಖ್ ಹಸೀನಾ ಅವರ ಆಡಳಿತವನ್ನು ಕಿತ್ತೊಗೆಯಲು ಸಂಚು ರೂಪಿಸಲಾಗಿದೆ.

ಬಿಎನ್‌ಪಿ ಮುಖ್ಯಸ್ಥ ತಾರಿಕ್ ರೆಹಮಾನ್, ಮುಂಬೈನ ಭೂಗತ ಲೋಕ ಪಾತಕಿ ದಾವೂದ್ ಇಬ್ರಾಹಿಂ ಜೊತೆ ನಿಕಟ ಸಂಪರ್ಕ ಹೊಂದಿದ್ದಾರೆ. ದುಬೈನಲ್ಲಿರುವ ದಾವೂದ್ ಇಬ್ರಾಹಿಂ ಆಸ್ತಿಯನ್ನು ತಾರಿಕ್ ರೆಹಮಾನ್ ಖರೀದಿಸಿದ್ದಾರೆ.

ಬಾಂಗ್ಲಾದೇಶದ ಚಿತ್ತಗಾಂಗ್‌ನಲ್ಲಿ ಇತ್ತೀಚೆಗೆ 10 ಟ್ರಕ್‌ಗಳಲ್ಲಿ ಸಾಗಿಸಲಾಗಿದ್ದ ಬಂದೂಕುಗಳು ಮತ್ತು ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಶಸ್ತ್ರಾಸ್ತ್ರಗಳನ್ನು ಇಸ್ಲಾಮಿ ಛತ್ರ ಶಿಬಿರ್ ಸಂಘಟನೆಗೆ ಸೇರಿದ ವಿದ್ಯಾರ್ಥಿಗಳಿಗೆ ಕಳುಹಿಸಲಾಗಿತ್ತು.

ಇದರ ಹಿಂದೆ ತಾರಿಕ್ ರೆಹಮಾನ್ ಮತ್ತು ದಾವೂದ್ ಇಬ್ರಾಹಿಂ ಇದ್ದಾರೆ. ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತದಂತೆಯೇ ಬಾಂಗ್ಲಾದೇಶದಲ್ಲಿ ಮುಸ್ಲಿಂ ಸಂಪ್ರದಾಯವಾದಿ ಆಡಳಿತವನ್ನು ಸ್ಥಾಪಿಸಲು ಪಾಕಿಸ್ತಾನದ ಐಎಸ್‌ಐ ಸಕ್ರಿಯವಾಗಿ ಪ್ರಯತ್ನಿಸುತ್ತಿದೆ’ ಎಂದು ಭಾರತೀಯ ಗುಪ್ತಚರ ಇಲಾಖೆಯ ಮೂಲಗಳಿಂದ ತಿಳಿದು ಬಂದಿದೆ.

ವಿದೇಶ

“ಪ್ರಸ್ತುತ ಜಾಗತಿಕ ವಾಸ್ತವದೊಂದಿಗೆ ನಾವು ಯುದ್ಧವನ್ನು ನಿರ್ವಹಿಸಲು ಸಾಧ್ಯವಿಲ್ಲ. ಗಾಜಾಕ್ಕೆ ಬರುತ್ತಿರುವ ಮಾನವೀಯ ನೆರವು ಇಸ್ರೇಲ್‌ಗೆ ಅಪಾಯವನ್ನು ತಂದೊಡ್ಡುತ್ತದೆ.” – ಇಸ್ರೇಲ್ ಹಣಕಾಸು ಮಂತ್ರಿ.

ಇಸ್ರೇಲ್ – ಹಮಾಸ್ ನಡುವೆ ಒಂದು ವರ್ಷದಿಂದ ಯುದ್ಧ ನಡೆಯುತ್ತಿದೆ. ಕಳೆದ 24 ಗಂಟೆಗಳಲ್ಲಿ ಇಸ್ರೇಲ್ ದಾಳಿಯಲ್ಲಿ ಕನಿಷ್ಠ 40 ಜನರು ಸಾವನ್ನಪ್ಪಿದ್ದಾರೆ ಮತ್ತು 71 ಮಂದಿ ಗಾಯಗೊಂಡಿದ್ದಾರೆ ಎಂದು ಗಾಜಾದ ಆರೋಗ್ಯ ಸಚಿವಾಲಯ ತಿಳಿಸಿದೆ. ಗಾಜಾ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ ಕನಿಷ್ಠ 39,623 ಜನರು ಸಾವನ್ನಪ್ಪಿದ್ದಾರೆ. 91,469 ಜನರು ಗಾಯಗೊಂಡಿದ್ದಾರೆ ಎಂದು ಅಧಿಕೃತವಾಗಿ ವರದಿಯಾಗಿದೆ.

ಈ ಹಿನ್ನೆಲೆಯಲ್ಲಿ, ಇಸ್ರೇಲ್‌ನ ಹಣಕಾಸು ಮಂತ್ರಿ ಮತ್ತು ಬಲಪಂಥೀಯ ಬೆಂಬಲಿಗರಾದ ಬೆಜಲೆಲ್ ಸ್ಮೊಟ್ರಿಚ್ (Bezalel Smotrich) ಅವರು ಯಾದ್ ಬಿನ್ಯಾಮಿನ್‌ (Yad Binyamin)ನಲ್ಲಿ ಇಸ್ರೇಲ್ ಹಯೋಮ್ ಔಟ್‌ಲೆಟ್ (Hayom Outlet) ಆಯೋಜಿಸಿದ್ದ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದರು.

ಬೆಂಜಮಿನ್ ನೆತನ್ಯಾಹು ಅವರೊಂದಿಗೆ ಇಸ್ರೇಲ್‌ ಹಣಕಾಸು ಮಂತ್ರಿ ಬೆಜಲೆಲ್ ಸ್ಮೊಟ್ರಿಚ್

“2005ರಲ್ಲಿ ಇಸ್ರೇಲ್ ಗಾಜಾದಿಂದ ಹೊರನಡೆಯದಿದ್ದರೆ, ಅಕ್ಟೋಬರ್ 7ರ ದಾಳಿ ನಡೆಯುತ್ತಿರಲಿಲ್ಲ. ಪ್ರಸ್ತುತ ಜಾಗತಿಕ ವಾಸ್ತವದೊಂದಿಗೆ ನಾವು ಯುದ್ಧವನ್ನು ನಿರ್ವಹಿಸಲು ಸಾಧ್ಯವಿಲ್ಲ. ಗಾಜಾಕ್ಕೆ ಬರುತ್ತಿರುವ ಮಾನವೀಯ ನೆರವು ಇಸ್ರೇಲ್‌ಗೆ ಅಪಾಯವನ್ನು ತಂದೊಡ್ಡುತ್ತದೆ.

ನಮ್ಮ ಒತ್ತೆಯಾಳುಗಳನ್ನು ಹಿಂತಿರುಗಿಸುವವರೆಗೆ ಗಾಜಾದ 2 ಮಿಲಿಯನ್ ನಾಗರಿಕರು ಹಸಿವಿನಿಂದ ಸಾವನ್ನಪ್ಪಿದರೂ ಸಹ, ಗಾಜಾ ಪಟ್ಟಿಗೆ ಮಾನವೀಯ ನೆರವನ್ನು ತಡೆಹಿಡಿಯುವುದು ನೈತಿಕವಾಗಿ ಸಮರ್ಥನೆಯಾಗಿದೆ. ಆದರೆ ಅಂತಾರಾಷ್ಟ್ರೀಯ ಸಮುದಾಯ ಅದಕ್ಕೆ ಅವಕಾಶ ನೀಡುವುದಿಲ್ಲ.

ಅದಕ್ಕಾಗಿಯೇ ನಾವು ಗಾಜಾಕ್ಕೆ ಸಹಾಯವನ್ನು ಅನುಮತಿಸುತ್ತಿದ್ದೇವೆ. ನಾವು ಇಂದು ಒಂದು ನಿರ್ದಿಷ್ಟ ವಾಸ್ತವದಲ್ಲಿ ಬದುಕುತ್ತಿದ್ದೇವೆ. ಆದ್ದರಿಂದ ಈ ಯುದ್ಧಕ್ಕೆ ಅಂತಾರಾಷ್ಟ್ರೀಯ ಮನ್ನಣೆಯ ಅಗತ್ಯವಿದೆ.” ಎಂದು ಹೇಳಿದ್ದಾರೆ.