ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
July 2023 » Page 4 of 7 » Dynamic Leader
October 23, 2024
Home 2023 July (Page 4)
ರಾಜ್ಯ

ಬೆಂಗಳೂರು: ಅಪಘಾತದಲ್ಲಿ ಮೃತಪಟ್ಟ ಕೆ.ಎಸ್.ಆರ್.ಟಿ.ಸಿ ಚಾಲನಾ ಸಿಬ್ಬಂದಿಗಳಾದ ಜಿ.ವಿ.ಚಲಪತಿ, ಪಿ.ಎನ್.ನಾಗರಾಜು ಅವರ ಎರಡು ಕುಟುಂಬದ ಅವಲಂಬಿತರಿಗೆ ತಲಾ ರೂ.1 ಕೋಟಿ ಅಪಘಾತ ಪರಿಹಾರ ಚೆಕ್ ವಿತರಣೆಯನ್ನು ಕರಾರಸಾ ನಿಗಮದ ಕೇಂದ್ರ ಕಛೇರಿಯಲ್ಲಿ ಇಂದು ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಅವರಿಂದ ಮಾಡಲಾಯಿತು.

ಕೆ.ಎಸ್.ಆರ್.ಟಿ.ಸಿ ಯು ದೇಶದಲ್ಲಿಯೇ ಪ್ರಪ್ರಥಮವಾಗಿ ಕಾರ್ಮಿಕ ಕಲ್ಯಾಣದ ವಿನೂತನ ಯೋಜನೆ ಅಡಿಯಲ್ಲಿ ಸಿಬ್ಬಂದಿಗಳಿಗೆ ರೂ.1 ಕೋಟಿ ಮೊತ್ತದ ಅಪಘಾತ ವಿಮೆಯನ್ನು (On duty & Off Duty ಅಪಘಾತ) ಜಾರಿಗೊಳಿಸಿದೆ.

ಮೃತಪಟ್ಟ ಚಾಲನಾ ಸಿಬ್ಬಂದಿಗಳನ್ನು ಮರಳಿ ತರಲು ಸಾಧ್ಯವಿಲ್ಲ. ಆದರೆ, ಅವರ ಕುಟುಂಬಗಳ ಸುಭದ್ರತೆಗಾಗಿ ನಿಗಮವು ಜಾರಿಗೊಳಿಸಿರುವ ಈ ಅಪಘಾತ ಪರಿಹಾರ ವಿಮಾ ಯೋಜನೆಯು ಬಹಳ ಉತ್ತಮವಾಗಿದ್ದು, ಈ ಯೋಜನೆಯನ್ನು ಸದ್ಯದಲ್ಲಿಯೇ ಇತರೆ ರಸ್ತೆ ಸಾರಿಗೆ ಸಂಸ್ಥೆಗಳಲ್ಲಿ ಜಾರಿಗೊಳಿಸಲು ಕೂಡಲೇ ಕ್ರಮ ಜರುಗಿಸಲು ಸೂಚಿಸಲಾಗುವುದು.

ಕುಟುಂಬದವರು ಹಣವನ್ನು‌ ಬ್ಯಾಂಕಿನಲ್ಲಿ ಸ್ಥಿರ ಠೇವಣಿಯನ್ನು ಇಟ್ಟು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹಾಗೂ ತಮ್ಮ ಮುಂದಿನ ಜೀವನಕ್ಕಾಗಿ ಕಾಪಾಡಿಕೊಳ್ಳಬೇಕು. ನಿಗಮದ ಸಿಬ್ಬಂದಿಗಳ ಹಾಗೂ ಕುಟುಂಬದವರ ಹಿತಾಸಕ್ತಿ ಕಾಪಾಡಲು ನಾವು ಸದಾ ಸಿದ್ದರಿದ್ದೇವೆ.

ಈ ಕಾರ್ಯಕ್ರಮದಲ್ಲಿ ವಿ.ಅನ್ಬುಕುಮಾರ್ ಭಾಆಸೇ., ಎಸ್‌ಬಿಐ ಬ್ಯಾಂಕಿನ ವ್ಯವಸ್ಥಾಪಕರು ಹಾಗೂ ಕಾರ್ಮಿಕ ಸಂಘಟನೆಗಳ ಮುಖಂಡರುಗಳಾದ ಹೆಚ್.ವಿ.ಅನಂತ ಸುಬ್ಬರಾವ್, ಬಿ.ಜಯದೇವರಾಜೇ ಅರಸು, ಜಿ.ಎಸ್.ಮಹದೇವಯ್ಯ, ಹೆಚ್.ಡಿ.ರೇವಪ್ಪ, ಎಸ್.ನಾಗರಾಜ, ವೆಂಕಟರಮಣಪ್ಪ ಮತ್ತು ಇತರರು ಹಾಗೂ ನಿಗಮದ ಅಧಿಕಾರಿ/ಸಿಬ್ಬಂದಿಗಳು ಭಾಗವಹಿಸಿದ್ದರು.

ದೇಶ

ತಿರುವನಂತಪುರಂ: ಸಕಾಲಕ್ಕೆ ಸಂಬಳ ನೀಡದ ಕಾರಣ, ಕುಟುಂಬವನ್ನು ಹಸಿವಿನಿಂದ ಪಾರು ಮಾಡಲು, ಕೂಲಿ ಕೆಲಸಕ್ಕೆ ಹೋಗಲು ನಿರ್ಧರಿಸಿದ ಸರ್ಕಾರಿ ಬಸ್ ಚಾಲಕ, ಅದಕ್ಕಾಗಿ ವಾರದಲ್ಲಿ ಮೂರು ದಿನ ರಜೆ ನೀಡುವಂತೆ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.

ಕೇರಳದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದ ಮಾರ್ಕ್ಸ್‌ವಾದಿ ಕಮ್ಯುನಿಸ್ಟ್ ಸರ್ಕಾರವಿದೆ. ಇಲ್ಲಿನ ರಾಜ್ಯ ಸಾರಿಗೆ ಸಂಸ್ಥೆ ತೀವ್ರವಾದ ಆರ್ಥಿಕ ಮುಗ್ಗಟ್ಟನ್ನು ಎದುರಿಸುತ್ತಿದೆ. ಕಳೆದ ತಿಂಗಳ ಸಂಬಳವನ್ನು ಇನ್ನೂ ನೀಡಿಲ್ಲ; ಪಿಂಚಣಿಯೂ ನೀಡಿಲ್ಲ. ಇವರಿಗೆ ಸಕಾಲದಲ್ಲಿ ವೇತನ ನೀಡುವಂತೆ ಕೇರಳ ಹೈಕೋರ್ಟ್ ಹಲವು ಬಾರಿ ಆದೇಶ ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ.

ಈ ಹಿನ್ನಲೆಯಲ್ಲಿ ತ್ರಿಶೂರ್ ಜಿಲ್ಲೆಯ ಚಾಲಕುಡಿ ಡಿಪೋದಲ್ಲಿ ಕೆಲಸ ಮಾಡುತ್ತಿರುವ ಚಾಲಕ ಅಜು ಎಂಬುವವರು, ಸಾರಿಗೆ ಸಂಸ್ಥೆ ಅಧಿಕಾರಿಗಳಿಗೆ ಬರೆದಿರುವ ಪತ್ರದಲ್ಲಿ, ಹಲವು ವರ್ಷಗಳಿಂದ ನಿಗದಿತ ಅವಧಿಯಲ್ಲಿ ವೇತನ ಸಿಗುತ್ತಿಲ್ಲ. ಕೆಲವೊಮ್ಮೆ ಸಂಬಳವನ್ನು ಎರಡು ತಿಂಗಳಿಗೊಮ್ಮೆ ಪಾವತಿಸಲಾಗುತ್ತದೆ. ಇದರಿಂದ ಕುಟುಂಬ ನಿರ್ವಹಣೆ ಸಾಧ್ಯವಾಗುತ್ತಿಲ್ಲ.

ಮಕ್ಕಳ ಶಿಕ್ಷಣ ಶುಲ್ಕ ಕಟ್ಟಲೂ ಸಾಧ್ಯವಾಗುತ್ತಿಲ್ಲ. ಜೀವನ ಸಾಗಿಸುವುದು ಬಹಳ ಕ‍ಷ್ಟವಾಗಿದೆ. ಕೂಲಿ ಕೆಲಸಕ್ಕೆ ಹೋದರೆ ದಿನಕ್ಕೆ 1000 ರೂಪಾಯಿ ಸಿಗುತ್ತದೆ. ಇದಕ್ಕಾಗಿ ನನಗೆ ವಾರದಲ್ಲಿ ಮೂರು ದಿನ ರಜೆ ನೀಡಬೇಕು. ಎಂದು ಪತ್ರದಲ್ಲಿ ಹೇಳಿದ್ದಾರೆ. ಈ ಪತ್ರ ಪ್ರಸಾರವಾಗುತ್ತಿದ್ದಂತೆ, ಕೇರಳ ಸರ್ಕಾರದ ಕಳಪೆ ಕ್ರಮಗಳೇ ಸಾರಿಗೆ ನಿಗಮದ ಈ ಸ್ಥಿತಿಗೆ ಕಾರಣ ಎಂದು ವಿರೋಧ ಪಕ್ಷಗಳು ಖಂಡಿಸಿವೆ.  

ಕ್ರೀಡೆ ದೇಶ

ಬ್ರಿಜ್ ಭೂಷಣ್ ಶಿಕ್ಷೆಗೆ ಅರ್ಹರು; ಆಟಗಾರರಿಗೆ ಲೈಂಗಿಕ ಕಿರುಕುಳ ನೀಡಿದ್ದು ನಿಜ ಎಂದು ದೆಹಲಿ ಪೊಲೀಸರು ಸಲ್ಲಿಸಿರುವ ಚಾರ್ಜ್ ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ.

ಭಾರತೀಯ ಕುಸ್ತಿ ಫೆಡರೇಶನ್ ಅಧ್ಯಕ್ಷ ಬ್ರಿಜ್ ಭೂಷಣ್ ಸಿಂಗ್ ಅವರು ಮಹಿಳಾ ಕುಸ್ತಿ ಪಟುಗಳಿಗೆ ಲೈಂಗಿಕ ಕಿರುಕುಳ ನೀಡಿರುವುದು ನಿಜ ಎಂದು ದೆಹಲಿ ಪೊಲೀಸರು ಸಲ್ಲಿಸಿರುವ ಚಾರ್ಜ್‌ ಶೀಟ್‌ನಲ್ಲಿ ವರದಿಯಾಗಿದೆ ಎಂಬ ಅಂಶ ಸಂಚಲನ ಮೂಡಿಸಿದೆ. ಬಿಜೆಪಿ ಸಂಸದ ಮತ್ತು ಭಾರತೀಯ ಕುಸ್ತಿ ಒಕ್ಕೂಟದ ಅಧ್ಯಕ್ಷ ಬ್ರಿಜ್ ಭೂಷಣ್ ಸಿಂಗ್ ತಮಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಮಹಿಳಾ ಕುಸ್ತಿ ಪಟುಗಳು ಮತ್ತು ಇತರ ಕ್ರೀಡಾಪಟುಗಳು ನಡೆಸಿದ ಪ್ರತಿಭಟನೆಗಳು ವಿಶ್ವದಾದ್ಯಂತ ಗಮನ ಸೆಳೆದವು.

ಆದರೆ ಬ್ರಿಜ್ ಭೂಷಣ್ ವಿರುದ್ಧ ಪೋಕ್ಸೊ ಕಾಯ್ದೆ ಸೇರಿದಂತೆ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದರೂ ಅವರ ವಿರುದ್ಧ ಯಾವುದೇ ಬಂಧನವಾಗಿಲ್ಲ. ಈ ಹಿನ್ನಲೆಯಲ್ಲಿ, ದೆಹಲಿ ಪೊಲೀಸರು ಜೂನ್ 13 ರಂದು ದೆಹಲಿ ನ್ಯಾಯಾಲಯದಲ್ಲಿ ಬ್ರಿಜ್ ಭೂಷಣ್ ವಿರುದ್ಧ ಆರೋಪಪಟ್ಟಿ ಸಲ್ಲಿಸಿದ್ದರು. ಅದಕ್ಕೆ ಸಂಬಂಧಿಸಿದ ಮಾಹಿತಿ ಇದೀಗ ಬಹಿರಂಗವಾಗಿದೆ.

17 ವರ್ಷದ ಬಾಲಕಿ ಸೇರಿದಂತೆ 6 ಆಟಗಾರರಿಗೆ ಬ್ರಿಜ್ ಭೂಷಣ್ ಸಿಂಗ್ ನಿರಂತರವಾಗಿ, ಆಗಾಗ ಲೈಂಗಿಕ ಕಿರುಕುಳ ನೀಡುತ್ತಿದ್ದರು ಎಂದು ಆರೋಪ ಪಟ್ಟಿಯಲ್ಲಿ ಹೇಳಲಾಗಿದೆ. ಆಟಗಾರರನ್ನು ಅಕ್ರಮವಾಗಿ ಹಿಂಬಾಲಿಸಿ ಮಾಹಿತಿ ಸಂಗ್ರಹಿಸುತ್ತಿದ್ದರು. ಅವರ ಘನತೆಗೆ ಧಕ್ಕೆ ತರುವ ರೀತಿಯಲ್ಲಿ ಹಲ್ಲೆ ನಡೆಸಿದ್ದರು ಎನ್ನಲಾಗಿದೆ. 15 ಸಾಕ್ಷಿಗಳು ಇದನ್ನು ದೃಢಪಡಿಸಿರುವುದರಿಂದ ಬ್ರಿಜ್ ಭೂಷಣ್ ಶಿಕ್ಷೆಗೆ ಅರ್ಹರು ಎಂದು ದೆಹಲಿ ಪೊಲೀಸರು ಸಲ್ಲಿಸಿರುವ ಚಾರ್ಜ್ ಶೀಟ್‌ನಲ್ಲಿ ತಿಳಿಸಲಾಗಿದೆ.

ದೇಶ

ಜನಸೇನಾ ಪಕ್ಷದ ನಾಯಕ ನಟ ಪವನ್ ಕಲ್ಯಾಣ್ ಆಂಧ್ರಪ್ರದೇಶದ ಏಲ್ಲೂರಿನಲ್ಲಿ ಪಾದಯಾತ್ರೆ ನಡೆಸಿದರು. ಅಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, “ಆಂಧ್ರಪ್ರದೇಶದಲ್ಲಿ ಕಳೆದ 4 ವರ್ಷಗಳಲ್ಲಿ 30 ಸಾವಿರ ಮಹಿಳೆಯರು ನಾಪತ್ತೆಯಾಗಿದ್ದಾರೆ. ಈ ಪೈಕಿ 12 ಸಾವಿರ ಮಹಿಳೆಯರನ್ನು ರಕ್ಷಿಸಲಾಗಿದೆ. ಉಳಿದ 18,000 ಮಹಿಳೆಯರ ಸ್ಥಿತಿ ತಿಳಿದುಬಂದಿಲ್ಲ.

ಮುಖ್ಯಮಂತ್ರಿ ಜಗನ್ಮೋಹನ್ ರೆಡ್ಡಿ ಈ ಕುರಿತು ಅಧ್ಯಯನ ಸಭೆಯನ್ನು ಏಕೆ ನಡೆಸಲಿಲ್ಲ? ಮನೆಯಲ್ಲಿರುವ ಮಹಿಳೆಯರು ಪ್ರೀತಿಸುತ್ತಿದ್ದಾರೆಯೇ ಅಥವಾ ವಿಧವೆಯರೇ ಎಂಬ ವಿವರಗಳನ್ನು ಸಮಾಜ ವಿರೋಧಿಗಳ ಕೈಗೆ ನೀಡಲಾಗುತ್ತಿದೆ. ವಿವರಗಳನ್ನು ಸಂಗ್ರಹಿಸಿದ ನಂತರ, ಮಹಿಳೆಯರನ್ನು ಪ್ರೀತಿಯ ಬಲೆಯಲ್ಲಿ ಬೀಳುವಂತೆ ಮಾಡಿ, ಮಹಿಳೆಯರ ವಿರುದ್ಧ ಅಪಹರಣದಂತಹ ಕೃತ್ಯಗಳು ನಡೆಯುತ್ತಿವೆ” ಎಂದು ಆರೋಪಿಸಿದರು.

ಇದು ಆಂಧ್ರಪ್ರದೇಶದಲ್ಲಿ ಸಂಚಲನ ಮೂಡಿಸಿದೆ. ಪವನ್ ಕಲ್ಯಾಣ್ ಅವರ ಭಾಷಣಕ್ಕೆ ವಿವರಣೆ ಕೋರಿ ರಾಜ್ಯ ಮಹಿಳಾ ಆಯೋಗ ನೋಟಿಸ್ ಜಾರಿಗೊಳಿಸಿದೆ. ಇದರ ಬಗ್ಗೆ ಮಾತನಾಡಿದ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ವಾಸಿ ರೆಡ್ಡಿ ಪದ್ಮಾ, “ಆಂಧ್ರಪ್ರದೇಶದಲ್ಲಿ 30,000 ಮಹಿಳೆಯರು ನಾಪತ್ತೆಯಾಗಿದ್ದಾರೆ ಎಂದು ಜನಸೇನಾ ಪಕ್ಷದ ನಾಯಕ ಪವನ್ ಕಲ್ಯಾಣ್ ಹೇಳಿದ್ದಾರೆ. ಅವರಿಗೆ ಈ ಅಂಕಿಅಂಶಗಳನ್ನು ಕೊಟ್ಟವರು ಯಾರು? ಯಾವ ಕೇಂದ್ರ ಗುಪ್ತಚರ ಸಂಸ್ಥೆ ಅವರಿಗೆ ಹೇಳಿದೆ?

ನಟ ಪವನ್ ಕಲ್ಯಾಣ್ ಅವರಂಥವರು ಶಾಲಾ ಪ್ರೀತಿ, ಕಾಲೇಜು ಪ್ರೇಮ ಎಂದು ಸಿನಿಮಾಗಳಲ್ಲಿ ನಟಿಸುತ್ತಾರೆ. ಅದರಿಂದಲೇ ಸಾಂಸ್ಕೃತಿಕ ಅವನತಿ ಉಂಟಾಗುತ್ತದೆ. 18 ವರ್ಷದ ಹುಡುಗಿಯರು ನಾಪತ್ತೆಯಾಗಲು ಅವರಂತಹವರು ನಟಿಸಿದ ಸಿನಿಮಾಗಳೇ ಕಾರಣ. ಪವನ್ ಕಲ್ಯಾಣ್ ಅವರು ಮಾತನಾಡಿದ ಅಂಕಿಅಂಶಗಳಿಗೆ ಸಾಕ್ಷ್ಯ ಒದಗಿಸಬೇಕು. ಇಲ್ಲದಿದ್ದಲ್ಲಿ ಮಹಿಳೆಯರ ಕ್ಷಮೆ ಕೇಳಬೇಕು. ರಾಜಕೀಯ ಲಾಭಕ್ಕಾಗಿ ಮಹಿಳೆಯರಲ್ಲಿ ತಲ್ಲಣ ಮೂಡಿಸುವ ಮಾತುಗಳನ್ನಾಡಿದ್ದಾರೆ. 10 ದಿನಗಳೊಳಗೆ ಸಾಕ್ಷಿಯ ಒದಗಿಸಬೇಕು” ಎಂದು ಹೇಳಿದ್ದಾರೆ.

AP Women’s Commission seeks proof for Pawan Kalyan’s claims of human trafficking
The state Women’s Commission has asked Pawan Kalyan to furnish proof for his “panic-inducing” statement that women were being abducted in AP with the involvement of village volunteers and YSRCP leaders.

ರಾಜಕೀಯ

ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳು ಹಾಗೂ ಕಾನೂನು ಮಾಪನ ಶಾಸ್ತ್ರ ಇಲಾಖೆ ವಿಧಾನಸೌಧದಲ್ಲಿ ಇಂದು ಹಮ್ಮಿಕೊಂಡಿದ್ದ “ಅನ್ನ ಭಾಗ್ಯ” ಯೋಜನೆಯಡಿ ಫಲಾನುಭವಿಗಳಿಗೆ ನೇರ ನಗದು ವರ್ಗಾವಣೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡಿ, ಮಾತನಾಡಿದರು:

“ಅನ್ನಭಾಗ್ಯ ಯೋಜನೆ ಘೋಷಣೆ ಆದ ತಕ್ಷಣ ರಾಜ್ಯಕ್ಕೆ ಅಕ್ಕಿ ಕೊಡುವುದನ್ನು ಬಂದ್ ಮಾಡುವ ಮೂಲಕ, ಕೇಂದ್ರದ ಬಿಜೆಪಿ ಸರ್ಕಾರ ಬಡವರ ವಿರೋಧಿಯಾದ ಡರ್ಟಿ ಪಾಲಿಟಿಕ್ಸ್ ಮಾಡುತ್ತಿದೆ. ಅಕ್ಕಿಯನ್ನು ನಮಗೆ ಪುಕ್ಕಟ್ಟೆಯಾಗಿ ಕೊಡುತ್ತಿರಲಿಲ್ಲ; ಕೆಜಿಗೆ 34 ರೂ. ನಮ್ಮಿಂದ ತೆಗೆದುಕೊಳ್ಳುತ್ತಿದ್ದರು.

ಕನ್ನಡ ನಾಡಿನ ಜನರಿಗೆ ಅಕ್ಕಿ ಕೊಡುವುದನ್ನು ಬಂದ್ ಮಾಡಿದ ಕೇಂದ್ರ ಸರ್ಕಾರ, ಬಳಿಕ ಇ-ಹರಾಜು ಮೂಲಕ ಆ ಅಕ್ಕಿಯನ್ನು ಹರಾಜು ಹಾಕಲು ಮುಂದಾಯಿತು. ಆದರೆ, ಈಗ ಇ-ಹರಾಜು ಮೂಲಕ ಅಕ್ಕಿ ಖರೀದಿಸಲು ಯಾರೂ ಮುಂದೆ ಬರುತ್ತಿಲ್ಲ ಎಂದು ಮಾಧ್ಯಮಗಳು ವರದಿ ಮಾಡಿವೆ. ಇದನ್ನು ನಾವು ಡರ್ಟಿ ಪಾಲಿಟಿಕ್ಸ್ ಅಂತ ಕರೆಯಬೇಕೋ ಬೇಡವೋ? ಇದನ್ನು ಕರ್ನಾಟಕದ ಜನತೆಯ ವಿರುದ್ಧದ ದ್ವೇಷದ ರಾಜಕಾರಣ ಎಂದು ಕರೆಯಬೇಕೋ ಬೇಡವೋ?

4 ಕೋಟಿ 42 ಲಕ್ಷ ಫಲಾನುಭವಿಗಳಿಗೆ ಈಗ ತಲಾ 170 ರೂ. ನೇರವಾಗಿ ಅವರ ಖಾತೆಗೆ ವರ್ಗಾವಣೆ ಆಗುತ್ತಿದೆ. ಬಡವರು, ಮಧ್ಯಮ ವರ್ಗದವರು ಎರಡು ಹೊತ್ತು ಅನ್ನ ತಿಂದರೆ ಬಿಜೆಪಿಗೆ ಯಾಕೆ ಹೊಟ್ಟೆಯುರಿ? ನಾಡಿನ ಜನತೆ ತಮ್ಮ ಖಾತೆಗೆ ಬರುವ ಹಣವನ್ನು ಊಟ, ಆಹಾರಕ್ಕಾಗಿ ಖರ್ಚು ಮಾಡಿ ನೆಮ್ಮದಿಯ ಬದುಕು ನಡೆಸಬೇಕು ಎಂದು ಮನವಿ ಮಾಡುತ್ತೇನೆ” ಎಂದರು.

ರಾಜ್ಯ

ಬೆಂಗಳೂರಿನಲ್ಲಿ ರಾಜ್ಯ ಹಾಗೂ ಹೊರ ರಾಜ್ಯದ ಮುಸ್ಲಿಂ ಮಹಿಳೆಯರ ಅನುಕೂಲಕ್ಕಾಗಿ ಹಮೀದ್ ಷಾ ಕಾಂಪ್ಲೆಕ್ಸ್ ಟ್ರಸ್ಟ್ ನಿರ್ಮಿಸಿದ ಭವ್ಯ ಸೌಲಭ್ಯಪೂರ್ಣ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿನಿಯರಿಗೆ ಉಚಿತ ವಸತಿ ಸೌಲಭ್ಯ ನೀಡಲಾಗುತ್ತಿದೆ. ಸುಸಜ್ಜಿತವಾಗಿ ನಿರ್ಮಿಸಿರುವ, ಸುರಕ್ಷೆಗೆ ಪ್ರಮುಖ ಆಧ್ಯತೆ ನೀಡಿರುವ ಇಸ್ಲಾಮಿಕ್ ವಾತಾವರಣದ ಹಾಸ್ಟೆಲ್‌ನಲ್ಲಿ ಅತ್ಯುತ್ತಮ ಆಹಾರ ಒದಗಿಸಲಾಗುತ್ತಿದೆ. 

ಬೆಂಗಳೂರೆಂಬ ಮಾಯಾನಗರಿಯಲ್ಲಿ ಮುಸ್ಲಿಂ ಯುವತಿಯರಿಗೆ ಅತ್ಯುತ್ತಮ ಆಶ್ರಯ ತಾಣವಾಗಿರುವ ಹಮೀದ್ ಷಾ ಹಾಸ್ಟೆಲ್, ಮಹಾನಗರದ ಹೃದಯಭಾಗದಲ್ಲಿ ಇರುವುದರಿಂದ ಯುವತಿಯರಿಗೆ ಎಲ್ಲಾ ಭಾಗಕ್ಕೂ ಇಲ್ಲಿಂದ ಸಂಪರ್ಕ ಸಾಧಿಸಬಹುದಾಗಿದೆ.

ಜನಾಬ್ ಜಿ.ಎ.ಬಾವಾ ಅವರ ನೇತೃತ್ವದಲ್ಲಿ ವಕ್ಪ್ ಬೋರ್ಡ್ ಆಸ್ತಿಯಲ್ಲಿ ನಿರ್ಮಿಸಿರುವ ಈ ಸೌಲಭ್ಯಪೂರ್ಣ ಹಾಸ್ಟೆಲ್‌, ಮಹಿಳೆಯರಿಂದಲೇ ನಿರ್ವಹಿಸಲ್ಪಡುತ್ತಿದ್ದು ವಿದ್ಯಾರ್ಥಿನಿಯರ ದಿನಚರಿ ಮತ್ತು ಚಟುವಟಿಕೆಯಲ್ಲಿ ನಿಗಾ ಇರಿಸಿಕೊಂಡು ಕಾರ್ಯ ನಿರ್ವಹಿಸುತ್ತದೆ. ನಮಾಝ್ ಕೊಠಡಿ, ಸ್ಟಡಿ ರೂಂ ಸೇರಿದಂತೆ ಅತ್ಯುತ್ತಮ ಹಾಸ್ಟೆಲ್ ರೂಂನ ಸೌಲಭ್ಯ ಇಲ್ಲಿ ಒದಗಿಸಲಾಗಿದೆ. 

ಹಮೀದ್ ಷಾ ಕಾಂಪ್ಲೆಕ್ಸ್ ಮಸೀದಿಯ ಸಮೀಪವೇ ಇದೆ. ಈ ಹಾಸ್ಟೆಲ್‌ನ ಕೊಠಡಿಯಲ್ಲಿ, ಯುವತಿಯರಿಗೆ ಕಲಿಯಲು ಹಾಗೂ ವಿಶ್ರಾಂತಿ ಪಡೆಯಲು ಮನೆಯ ವಾತಾವರಣವನ್ನು ನಿರ್ಮಿಸಿ ಕೊಡಲಾಗಿದೆ.

ಕಮ್ಯೂನಿಟಿ ಸೆಂಟರ್‌ನ ಶೈಕ್ಷಣಿಕ ಯೋಜನೆಯ ರುವಾರಿಯಲ್ಲಿ ಒಬ್ಬರಾಗಿರುವ ಜನಾಬ್ ಜಿ.ಎ.ಬಾವಾರವರು ಕಳೆದ ಒಂದು ವರ್ಷದಿಂದ ಇಲ್ಲಿ ಕಮ್ಯೂನಿಟಿ ಸೆಂಟರಿನ ಹಲವು ವಿದ್ಯಾರ್ಥಿನಿಯರಿಗೆ ಉಚಿತ ಹಾಸ್ಟೆಲ್ ಸೌಲಭ್ಯ ನೀಡಿ ಸಹಕರಿಸುತ್ತಿದ್ದು ಅದೇ ರೀತಿ ಜಿಲ್ಲೆಯ ಯಾವುದೇ ಭಾಗದ ಯುವತಿಯರು ಬೆಂಗಳೂರಿನಲ್ಲಿ ಉಧ್ಯೋಗ, ಶಿಕ್ಷಣ ಪಡೆಯುತ್ತಿದ್ದರೆ ಅವರಿಗೆ ಸೌಲಭ್ಯಪೂರ್ಣ ಹಾಸ್ಟೆಲ್‌ ಬೇಕಿದ್ದರೆ ಕಮ್ಯೂನಿಟಿ ಸೆಂಟರನ್ನು ಸಂಪರ್ಕಿಸಲು ತಿಳಿಸಿರುತ್ತಾರೆ.

ಸಂಪರ್ಕ ಮಾಡಲು: 9845899107

Source: Sunni Today

ರಾಜಕೀಯ

ಕೇಂದ್ರದಲ್ಲಿ ಅಧಿಕಾರ ಹಿಡಿಯಲು ಇದೇ 18 ರಂದು ಬೆಂಗಳೂರಿನಲ್ಲಿ ವಿರೋಧ ಪಕ್ಷಗಳ ನಾಯಕರ ಸಭೆ ನಡೆಯಲಿದ್ದು, ಅದೇ ದಿನ ದೆಹಲಿಯಲ್ಲಿ ಆಡಳಿತಾರೂಢ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟದ (NDA) ಸಮಾಲೋಚನಾ ಸಭೆಯೂ ನಡೆಯಲಿದೆ.

ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು, ಆಡಳಿತಾರೂಢ ಬಿಜೆಪಿ ಸರ್ಕಾರದ ವಿರುದ್ಧ, ಕಾಂಗ್ರೆಸ್ ಸೇರಿದಂತೆ 17 ಪ್ರತಿಪಕ್ಷಗಳು ಒಗ್ಗೂಡಿ ಜೂನ್ 23ರಂದು ಬಿಹಾರದ ಪಾಟ್ನಾದಲ್ಲಿ ಸಮಾಲೋಚನಾ ಸಭೆ ನಡೆಸಿದ್ದವು. ಆ ವೇಳೆ ಬಿಜೆಪಿ ವಿರುದ್ಧ ಒಗ್ಗಟ್ಟಿನಿಂದ ಚುನಾವಣೆ ಎದುರಿಸುವ ಹಾಗೂ ಅದಕ್ಕೆ ರಣತಂತ್ರ ರೂಪಿಸುವ ಕುರಿತು ಚರ್ಚೆ ನಡೆಸಲಾಯಿತು.

ಈ ಹಿನ್ನಲೆಯಲ್ಲಿ ವಿರೋಧ ಪಕ್ಷಗಳ ತಂತ್ರಗಾರಿಕೆಯನ್ನು ಮಣಿಸಲು, ಆಡಳಿತಾರೂಢ ಬಿಜೆಪಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟ ಪಕ್ಷಗಳ ಸಮಾಲೋಚನಾ ಸಭೆಯನ್ನು ಇದೇ 18 ರಂದು ದೆಹಲಿಯಲ್ಲಿ ನಡೆಸಲಾಗುತ್ತಿದೆ ಎಂದು ಬಿಜೆಪಿಯ ಉನ್ನತ ಮೂಲಗಳಿಂದ ತಿಳಿದುಬಂದಿದೆ.

ಬಿಜೆಪಿ ರಾಷ್ಟ್ರೀಯ ನಾಯಕರ ಪ್ರಕಾರ, 18 ರಂದು ದೆಹಲಿಯಲ್ಲಿ ಎನ್‌ಡಿಎ ಪಕ್ಷಗಳ ಮುಖಂಡರ ಸಭೆ ನಡೆಯಲಿದೆ. ಆ ಸಭೆಯಲ್ಲಿ, ಇತ್ತೀಚೆಗೆ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದಿಂದ ಬೇರ್ಪಟ್ಟು, ಮಹಾರಾಷ್ಟ್ರದ ಉಪ ಮುಖ್ಯಮಂತ್ರಿಯಾಗಿರುವ ಅಜಿತ್ ಪವಾರ್, ಶಿವಸೇನೆಯಿಂದ ಬೇರ್ಪಟ್ಟಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಪಾಲ್ಗೊಳ್ಳುವ ಸಾಧ್ಯತೆ ಇದೆ.

ಈ ಇಬ್ಬರು ನಾಯಕರ ನೇತೃತ್ವದ ಪಕ್ಷಗಳು ಮುಂಬರುವ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳಲಿವೆ. ಮಾಜಿ ಕೇಂದ್ರ ಸಚಿವ ಮತ್ತು ಲೋಕ ಜನಶಕ್ತಿ ಪಕ್ಷದ ನಾಯಕ ದಿವಂಗತ ರಾಮ್ ವಿಲಾಸ್ ಪಾಸ್ವಾನ್ ಅವರ ಪುತ್ರ ಚಿರಾಗ್ ಪಾಸ್ವಾನ್ ಅವರೊಂದಿಗೆ ಮಾತುಕತೆ ನಡೆಸಲಾಗುತ್ತಿದೆ. ಅವರ ಪಕ್ಷವು ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟಕ್ಕೆ ಮತ್ತೆ ಸೇರಿಕೊಳ್ಳಲಿದೆ.

ಓಂ ಪ್ರಕಾಶ್ ರಾಜ್‌ಬರ್ ಅವರ ಸುಹೇಲ್‌ದೇವ್ ನೇತೃತ್ವದ ಭಾರತೀಯ ಸಮಾಜ ಪಕ್ಷ ಮತ್ತು ವಿಕಶೀಲ್ ಇನ್ಸಾನ್ ಪಕ್ಷದ ಮುಖೇಶ್ ಸಾಹ್ನಿ ಅವರೊಂದಿಗೆ ಸಿದ್ದಾಂತದ ಆಧಾರದ ಮೇಲೆ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಹಾಗಾಗಿ ಪಕ್ಷಗಳ ಮುಖಂಡರು ಈ ಸಮಾಲೋಚನಾ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಮತ್ತೊಬ್ಬ ಪ್ರಭಾವಿ ದಲಿತ ನಾಯಕ ಜಿತನ್ ರಾಮ್ ಮಾಂಝಿ ಅವರು ಎನ್‌ಡಿಎಗೆ ಮರು ಸೇರ್ಪಡೆಗೊಂಡಿರುವ ಹಿನ್ನೆಲೆಯಲ್ಲಿ ಸಮಾಲೋಚನಾ ಸಭೆಯಲ್ಲಿ ಭಾಗವಹಿಸುವ ಸಾಧ್ಯತೆ ಇದೆ.

ಅಂತೆಯೇ, ಸಿರೋಮಣಿ ಅಕಾಲಿ ದಳ (ಎಸ್‌ಎಡಿ) ಅಧ್ಯಕ್ಷ ಸುಖ್‌ಬೀರ್ ಸಿಂಗ್ ಬಾದಲ್ ಮತ್ತು ತೆಲುಗು ದೇಶಂ ಪಕ್ಷದ (ಟಿಡಿಪಿ) ಅಧ್ಯಕ್ಷ ಚಂದ್ರಬಾಬು ನಾಯ್ಡು ಅವರೊಂದಿಗೆ ಮಾತುಕತೆ ನಡೆಯುತ್ತಿರುವುದರಿಂದ ಅವರೂ ಈ ಸಭೆಯಲ್ಲಿ ಭಾಗವಹಿಸುವ ಸಾಧ್ಯತೆಯಿದೆ. ಇತ್ತೀಚೆಗೆ ನಡೆದ ಕರ್ನಾಟಕ ಚುನಾವಣೆಯಲ್ಲಿ ಅಧಿಕಾರ ಕಳೆದುಕೊಂಡಿರುವ ಬಿಜೆಪಿ, ಈ ವರ್ಷಾಂತ್ಯದಲ್ಲಿ ನಡೆಯಲಿರುವ 5 ರಾಜ್ಯಗಳ ಚುನಾವಣೆಯಲ್ಲೂ ಹಿನ್ನಡೆ ಎದುರಿಸಲಿದೆ ಎಂದು ಹೇಳಲಾಗುತ್ತಿದೆ.

ಅಲ್ಲದೆ ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಯಲ್ಲೂ ಬಿಜೆಪಿಗೆ ಹಿನ್ನಡೆಯಾಗಲಿದೆ ಎಂದು ಹೇಳಲಾಗುತ್ತಿದೆ. ಈ ಹಿನ್ನಲೆಯಲ್ಲಿ, ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟಕ್ಕೆ ಬಿಡಿ ಪಕ್ಷಗಳನ್ನು ಸೇರಿಸಿಕೊಳ್ಳುವ ಕೆಲಸ ಮಾಡಲಾಗುತ್ತಿದೆ. 18 ರಂದು ನಡೆಯಲಿರುವ ಎನ್‌ಡಿಎ ಪಕ್ಷಗಳ ಸಭೆಯಲ್ಲಿ ಯಾವ್ಯಾವ ಪಕ್ಷಗಳು ಭಾಗವಹಿಸಲಿವೆ ಹಾಗೂ ಯಾವ ಪಕ್ಷಗಳು ಬಹಿಷ್ಕಾರ ಮಾಡಲಿವೆ ಎಂಬುದು ತಿಳಿಯುತ್ತದೆ.

ದೇಶ

ಉತ್ತರ ಪ್ರದೇಶ ರಾಜ್ಯದಲ್ಲಿ ಯುವಕನೊಬ್ಬನ ಮೇಲೆ ತೀವ್ರವಾಗಿ ಹಲ್ಲೆ ನಡೆಸಿ, ಆತನ ನಾಲಿಗೆಯಿಂದ ಚಪ್ಪಲಿಯನ್ನು ನೆಕ್ಕುವಂತೆ ಮಾಡಿರುವ ಅಮಾನುಷ ಘಟನೆಯೊಂದು ಭಾರೀ ಆಘಾತವನ್ನುಂಟು ಮಾಡಿದೆ. ಇದಕ್ಕೆ ಸಂಬಂಧಿಸಿದ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

ವೀಡಿಯೊದಲ್ಲಿ, ಒಬ್ಬ ವ್ಯಕ್ತಿಯು ಮರದ ಹಾಸಿಗೆಯ ಮೇಲೆ ಕುಳಿತು, ತನ್ನ ಕಾಲುಗಳನ್ನು ಚಾಚುತ್ತಾನೆ; ಹದಿಹರೆಯದ ಯುವಕ ಆತನ ಚಪ್ಪಲಿಯನ್ನು ನಾಲಿಗೆಯಿಂದ ನೆಕ್ಕಿ ಸ್ವಚ್ಛಗೊಳಿಸುವ ದೃಶ್ಯ ಕಂಡುಬರುತ್ತಿದೆ. ಅಲ್ಲದೆ, ಯುವಕ ಕಿವಿ ಹಿಡಿದು ತಾನು ಮಾಡಿದ್ದು ತಪ್ಪು ಎಂದು ಬಸ್ಕಿ ಹೊಡೆಯುತ್ತಾನೆ. ಅದೇ ರೀತಿ ಮತ್ತೊಂದು ವೀಡಿಯೊದಲ್ಲಿ ಆ ವ್ಯಕ್ತಿ ಯುವಕನ ಕೈಯನ್ನು ತಿರುಚಿ, ಕೆಳಗೆ ತಳ್ಳಿ ಹಲ್ಲೆ ನಡೆಸುತ್ತಿರುವುದು ಕಂಡುಬರುತ್ತದೆ.

ಉತ್ತರ ಪ್ರದೇಶದ ಸೋನಭದ್ರ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ವೀಡಿಯೊ ವೈರಲ್ ಆದ ನಂತರ ಪೊಲೀಸರು ತನಿಖೆ ನಡೆಸಿ ಕ್ರಮ ಕೈಗೊಂಡಿದ್ದಾರೆ. ತನಿಖೆಯಿಂದ ಆ ವ್ಯಕ್ತಿ ವಿದ್ಯುತ್ ಇಲಾಖೆಯ ಲೈನ್‌ಮ್ಯಾನ್ ತೇಜಪಾಲಿ ಸಿಂಗ್ ಎಂಬುದು ಗೊತ್ತಾಗಿದೆ. ಹಲ್ಲೆಗೊಳಗಾದ ವ್ಯಕ್ತಿ ದಲಿತ ಸಮುದಾಯಕ್ಕೆ ಸೇರಿದ ರಾಜೇಂದ್ರ ಎಂಬುದು ತಿಳಿದುಬಂದಿದೆ.

ತರುವಾಯ ತೇಜಪಾಲಿ ಸಿಂಗ್ ಮೇಲೆ ಎಸ್‌ಸಿ.ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ರಾಜೇಂದ್ರನ ಮಾವನ ಮನೆಯಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದ್ದು, ಈ ವಿಚಾರವಾಗಿ ಲೈನ್‌ಮ್ಯಾನ್ ತೇಜಪಾಲಿ ಸಿಂಗ್ ಜೋತೆ ವಾಗ್ವಾದ ಮಾಡಿದ ಕಾರಣಕ್ಕೆ ರಾಜೇಂದ್ರನ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ದೇಶ

ಸಹ ಮನುಷ್ಯನ ಮೇಲೆ ಮೂತ್ರ ವಿಸರ್ಜನೆ ಮಾಡಿದ ಪ್ರಕರಣದಲ್ಲಿ ದಿಢೀರ್ ಟ್ವಿಸ್ಟ್; ಬಾಧಿತ ವ್ಯಕ್ತಿ ಆರೋಪಿಯನ್ನು ಖುಲಾಸೆಗೊಳಿಸುವಂತೆ ಮನವಿ ಮಾಡಿರುವುದು ಎಲ್ಲರನ್ನೂ ಚಕಿತಗೊಳಿಸುವಂತೆ ಮಾಡಿದೆ.

ಆರೋಪಿಗೆ ತಾನು ಮಾಡಿರುವುದು ಅಪರಾಧವೆಂದು ಅರಿವಾಗಿರುವುದರಿಂದ ಆತನನ್ನು ಬಿಡುಗಡೆ ಮಾಡಬಹುದು ಎಂದು ಬುಡಕಟ್ಟು ಜನಾಂಗದ ದಶ್ಮತ್ ರಾವತ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮಧ್ಯಪ್ರದೇಶ ಸಿಧಿ ಜಿಲ್ಲೆಗೆ ಸೇರಿದ ಅದಿವಾಸಿ ಯುವಕನ ಮೇಲೆ ಪ್ರವೇಶ್ ಶುಕ್ಲಾ ಎಂಬ ವ್ಯಕ್ತಿ, ಮೂತ್ರ ವಿಸರ್ಜನೆ ಮಾಡಿದ ಅಮಾನವೀಯ ಘಟನೆ ಕೆಲವು ದಿನಗಳ ಹಿಂದೆ ನಡೆದಿತ್ತು. ಅದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ, ದೇಶಾದ್ಯಂತ ಸಂಚಲನ ಮೂಡಿಸಿತು.

ನಂತರದ ತನಿಖೆಯಲ್ಲಿ, ಸಿಧಿ ಜಿಲ್ಲೆಯ 36 ವರ್ಷದ ದಶ್ಮತ್ ರಾವತ್ ಸಂತ್ರಸ್ತನಾಗಿದ್ದು, ಪ್ರವೇಶ್ ಶುಕ್ಲಾ ಎಂಬ ವ್ಯಕ್ತಿ ಈ ಕೃತ್ಯದಲ್ಲಿ ಭಾಗಿಯಾಗಿರುವುದು ಎಂದು ತಿಳಿದುಬಂದಿತು. ಆರೋಪಿ ಪ್ರವೇಶ್ ಶುಕ್ಲಾ, ಕ್ಷೇತ್ರದ ಬಿಜೆಪಿ ಶಾಸಕ ಕೇದಾರ್ ಶುಕ್ಲಾ ಅವರ ಪ್ರತಿನಿಧಿ ಎಂದು ವಿರೋಧ ಪಕ್ಷಗಳು ಬಲವಾಗಿ ಆರೋಪಿಸಿತು. ಆದರೆ, ಶಾಸಕ ಕೇದಾರ್ ಶುಕ್ಲಾ ಅವರು, “ಪ್ರವೇಶ್ ಶುಕ್ಲಾ ಅವರನ್ನು ಕ್ಷೇತ್ರದ ವ್ಯಕ್ತಿಯಾಗಿ ನನಗೆ ತಿಳಿದಿದೆ. ಆದರೆ, ಬಿಜೆಪಿಗೂ ಆತನಿಗೂ ಯಾವುದೇ ಸಂಬಂಧವಿಲ್ಲ” ಎಂದು ಹೇಳಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ಆರೋಪಿಗಳನ್ನು ಬಂಧಿಸಿ ಕಠಿಣ ಕ್ರಮ ಕೈಗೊಳ್ಳುವಂತೆ ಮತ್ತು ರಾಷ್ಟ್ರೀಯ ಭದ್ರತಾ ಕಾಯ್ದೆ (NSA) ಅಡಿಯಲ್ಲಿ ಕ್ರಮ ಕೈಗೊಳ್ಳುವಂತೆ ಆಡಳಿತಕ್ಕೆ ಸೂಚಿಸಿರುವುದಾಗಿ ತಿಳಿಸಿದ್ದರು.ಮತ್ತು ಕಳೆದ ಗುರುವಾರ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಸಂತ್ರಸ್ತನನ್ನು ಭೋಪಾಲ್‌ನಲ್ಲಿರುವ ತಮ್ಮ ನಿವಾಸಕ್ಕೆ ಕರೆದು, ಅವರ ಪಾದಗಳನ್ನು ತೊಳೆದು ಕ್ಷಮೆಯಾಚಿಸಿದರು. ಆದರೆ ಮುಖ್ಯಮಂತ್ರಿಗಳ ಈ ಕ್ರಮ ಬರೀ ನಾಟಕ ಎಂದು ವಿರೋಧ ಪಕ್ಷಗಳು ವ್ಯಂಗ್ಯ ಮಾಡಿದವು.

ಇದನ್ನೂ ಓದಿ: ಆದಿವಾಸಿ ಯುವಕನ ಮೇಲೆ ಮೂತ್ರ ವಿಸರ್ಜನೆ ಮಾಡಿದ ಬಿಜೆಪಿ ಮುಖಂಡನ ಬಂಧನ!

ಸಿಧಿ ಪೊಲೀಸರು ಪ್ರವೇಶ್ ಶುಕ್ಲಾ ವಿರುದ್ಧ ಐಪಿಸಿ ಸೆಕ್ಷನ್ 294 ಮತ್ತು 504, SC/ST ಕಾಯಿದೆ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿ ಕಳೆದ ಬುಧವಾರ ಬಂಧಿಸಿದರು. ಈ ಹಿನ್ನಲೆಯಲ್ಲಿ ಪ್ರವೇಶ್ ಶುಕ್ಲಾ ಅವರಿಂದ ಬಾಧೆಗೊಳಗಾದ ದಶ್ಮತ್ ರಾವತ್, ಆತನನ್ನು ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಬೇಡಿಕೆ ಇಟ್ಟಿದ್ದಾನೆ.

ಇದರ ಬಗ್ಗೆ ಮಾತನಾಡಿದ ಸಂತ್ರಸ್ತ ದಶ್ಮತ್ ರಾವತ್, “ತಪ್ಪು ನಡೆದಿರುವುದು ನಿಜ; ಆದರೂ ಆತನನ್ನು ಬಿಡುಗಡೆ ಮಾಡುವಂತೆ ಸರ್ಕಾರವನ್ನು ಕೋರುತ್ತೇನೆ. ಪ್ರವೇಶ್ ಶುಕ್ಲಾಗೆ ತನ್ನ ತಪ್ಪಿನ ಅರಿವಾಗಿದೆ. ಅವರು ನಮ್ಮ ಹಳ್ಳಿಯ ಪಂಡಿತರು” ಎಂದು ಹೇಳಿದ್ದಾರೆ. ಇದು ಎಲ್ಲರನ್ನೂ ಚಕಿತಗೊಳಿಸುವಂತೆ ಮಾಡಿದೆ.

ರಾಜಕೀಯ

ಯೋಜನೆಗಳ ಅನುಷ್ಠಾನಕ್ಕಾಗಿ ಬಡವರ-ಮಧ್ಯಮ ವರ್ಗದವರ ಮೇಲೆ ಯಾವುದೇ ತೆರಿಗೆ ಹಾಕಿಲ್ಲ, ಜನರಿಗೆ ಹೊರೆ ಆಗಬಾರದು ಎನ್ನುವ ಕಾರಣಕ್ಕೇ ಪೆಟ್ರೋಲ್-ಡೀಸೆಲ್ ಮೇಲೆ ತೆರಿಗೆ ಹಾಕಲಿಲ್ಲ, ಬೆಲೆ ಏರಿಕೆ ಮಾಡಿಲ್ಲ.

ಗ್ಯಾರಂಟಿ ಯೋಜನೆಗಳಿಗೆ ಪ್ರಸಕ್ತ ಸಾಲಿಗೆ 35,410 ಕೋಟಿ ರೂ. ಅಗತ್ಯವಿದ್ದು, ಜನಸಾಮಾನ್ಯರಿಗೆ ಹೊರೆಯಾಗದಂತೆ ಸಂಪನ್ಮೂಲ ಕ್ರೋಢೀಕರಣ ಮಾಡಲಾಗುವುದು. ಪೆಟ್ರೋಲ್-ಡೀಸೆಲ್ ಮೇಲೆ ತೆರಿಗೆ ಹೆಚ್ಚಳ ಮಾಡಿಲ್ಲ. ಬಡವರು-ಮಧ್ಯಮ ವರ್ಗದವರನ್ನು ಹೆಚ್ಚುವರಿ ತೆರಿಗೆ ಹೊರೆಯಿಂದ ಮುಕ್ತರಾಗಿಸಿದ್ದೇವೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

“ಗ್ಯಾರಂಟಿ ಯೋಜನೆಗಳಿಗೆ 13,500 ಕೋಟಿ ರೂ. ರಾಜಸ್ವ ಸಂಗ್ರಹ ಗುರಿ ಹೆಚ್ಚಳ ಹಾಗೂ 8,000 ಕೋಟಿ ರೂ. ಹೆಚ್ಚುವರಿ ಸಾಲದ ಮೂಲಕ ಮತ್ತು ಉಳಿದ ಸಂಪನ್ಮೂಲವನ್ನು ಯೋಜನೆಗಳ ಆದ್ಯತೆಯನ್ನು ನಿಗದಿಪಡಿಸುವ ಮೂಲಕ ಹೊಂದಾಣಿಕೆ ಮಾಡಿಕೊಳ್ಳಲಾಗಿದೆ. ಈ ಯೋಜನೆಗಳ ಅನುಷ್ಠಾನಕ್ಕಾಗಿ ಬಡವರ-ಮಧ್ಯಮ ವರ್ಗದವರ ಮೇಲೆ ಯಾವುದೇ ತೆರಿಗೆ ಹಾಕಿಲ್ಲ, ಜನರಿಗೆ ಹೊರೆ ಆಗಬಾರದು ಎನ್ನುವ ಕಾರಣಕ್ಕೇ ಪೆಟ್ರೋಲ್-ಡೀಸೆಲ್ ಮೇಲೆ ತೆರಿಗೆ ಹಾಕಲಿಲ್ಲ, ಬೆಲೆ ಏರಿಕೆ ಮಾಡಿಲ್ಲ.

ವಿತ್ತೀಯ ಹೊಣೆಗಾರಿಕೆ ಕಾಯ್ದೆಯಡಿ 3 ಮಾನದಂಡಗಳನ್ನು ಪಾಲಿಸಬೇಕಿದ್ದು, ಈ ಪೈಕಿ 2023-24ರ ಬಜೆಟ್‌ನಲ್ಲಿ 2 ಮಾನದಂಡಗಳನ್ನು ಕಾಯ್ದುಕೊಳ್ಳುವ ಮೂಲಕ ಆರ್ಥಿಕ ಶಿಸ್ತನ್ನು ಕಾಪಾಡಿಕೊಳ್ಳಲಾಗಿದೆ. ವಿತ್ತೀಯ ಹೊಣೆಗಾರಿಕೆ ಕಾಯ್ದೆಯಡಿ ವಿತ್ತೀಯ ಕೊರತೆ ಶೇ.3 ರಷ್ಟಿರಬೇಕು, ಸಾಲದ ಪ್ರಮಾಣ ಜಿಡಿಪಿಯ ಶೇ.25%ರ ಒಳಗೆ ಇರಬೇಕು. ಉಳಿತಾಯ ಬಜೆಟ್ (revenue surplus) ಇರಬೇಕು ಎನ್ನುವ ಮಾನದಂಡಗಳಿವೆ. ವಿತ್ತೀಯ ಕೊರತೆ ಶೇ.2.6 ರಷ್ಟಿದ್ದು, ಸಾಲ ಜಿಡಿಪಿಯ ಶೇ.22.3 % ರಷ್ಟಿದೆ. ಹೀಗೆ 2 ಮಾನದಂಡಗಳನ್ನು ಪಾಲಿಸಿ ವಿತ್ತೀಯ ಶಿಸ್ತನ್ನು ಕಾಯ್ದುಕೊಳ್ಳಲಾಗಿದೆ.

ಈ ಆಯವ್ಯಯಲ್ಲಿ 2,50,933 ಕೋಟಿ ರೂ. ರಾಜಸ್ವ ವೆಚ್ಚ, ಬಂಡವಾಳ ವೆಚ್ಚ 54,374 ಕೋಟಿ ರೂ.ಗಳಾಗಿದ್ದು, 2022-23ರ ಬಜೆಟ್‌ಗೆ ಹೋಲಿಸಿದರೆ ಶೇ.23ರಷ್ಟು ರಾಜಸ್ವ ವೆಚ್ಚ ಹಾಗೂ ಶೇ.16ರಷ್ಟು ಬಂಡವಾಳ ವೆಚ್ಚ ಹೆಚ್ಚಾಗುತ್ತದೆ. ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ 2021-22ರಲ್ಲಿ ವಿತ್ತೀಯ ಕೊರತೆ 14,699 ಕೋಟಿ ರೂ.ಗಳಷ್ಟಿತ್ತು. ನಮ್ಮ ಸರ್ಕಾರದ ರಾಜಸ್ವ ಕೊರತೆ 12,523 ಕೋಟಿ ರಷ್ಟಿದೆ, ವಿತ್ತೀಯ ಕೊರತೆ 66,646 ಕೋಟಿ ರೂ. ಇದು ಜಿಎಸ್‌ಡಿಪಿಯ ಶೇ.2.6ರಷ್ಟಿದೆ. ರಾಜ್ಯದ ಹೊಣೆಗಾರಿಕೆ 5,71,665 ಕೋಟಿ ರೂ.ಗಳಷ್ಟಿದ್ದು, ಇದು ಜಿಎಸ್‌ಡಿಪಿ ಶೇ.22.3 ರಷ್ಟಿದೆ. 2023-24 ಕ್ಕೆ ರಾಜ್ಯವು ಪಡೆಯುವ ಸಾಲ 85,818 ಕೋಟಿ ರೂ.ಗಳೆಂದು ಅಂದಾಜಿಸಲಾಗಿದೆ.

ವಾಣಿಜ್ಯ ತೆರಿಗೆ ಫೆಬ್ರವರಿ ಆಯವ್ಯಯಕ್ಕಿಂತ 4,000 ಕೋಟಿ ರೂ. ಹೆಚ್ಚುವರಿ ಗುರಿ ನಿಗದಿಪಡಿಸಲಾಗಿದೆ. ಅಬಕಾರಿ ಸುಂಕ ಗುರಿ 1,000 ಕೋಟಿ ರೂ. ಹೆಚ್ಚಳ ಮಾಡಿದೆ. ಇದನ್ನು ಸೇರಿದಂತೆ ತೆರಿಗೆ ಸಂಗ್ರಹದ ಒಟ್ಟಾರೆ ಗುರಿಯನ್ನು 13,500 ಕೋಟಿ ರೂ.ಗಳಷ್ಟು ಹೆಚ್ಚಳ ಮಾಡಿದೆ” ಎಂದು ಹೇಳಿದ್ದಾರೆ.