ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
January 2024 » Page 5 of 8 » Dynamic Leader
October 23, 2024
Home 2024 January (Page 5)
ದೇಶ

ಚಂಡೀಗಢ: ಪಂಜಾಬ್‌ನ ಫರೀದ್ಕೋಟ್ ಜಿಲ್ಲೆ ಕೊಟ್ಕಾಪುರದ ಡಿಎವಿ ಪಬ್ಲಿಕ್ ಸ್ಕೂಲ್‌ನಲ್ಲಿ ಆರೋಗ್ಯ ಕಾರ್ಯಕರ್ತರಿಗಾಗಿ ಪರೀಕ್ಷೆ ನಡೆಸಲಾಯಿತು. ಇದರಲ್ಲಿ ಯುವಕನೊಬ್ಬ ತನ್ನ ಗೆಳತಿಗಾಗಿ ಸ್ತ್ರೀ ವೇಷ ಧರಿಸಿ ಪರೀಕ್ಷೆ ಬರೆದಿರುವ ಘಟನೆ ಸಂಚಲನ ಮೂಡಿಸಿದೆ.

ಹಣೆಯಲ್ಲಿ ಕುಂಕುಮ ಸ್ಟಿಕ್ಕರ್, ಕೈಯಲ್ಲಿ ಕೆಂಪು ಬಳೆಗಳು ಹಾಗೂ ಮಹಿಳೆಯರ ಬಟ್ಟೆ ಧರಿಸಿದ್ದ ಈತನನ್ನು ಬಯೋಮೆಟ್ರಿಕ್ ಉಪಕರಣದ ಸಹಾಯದಿಂದ ಪರೀಕ್ಷೆಗೊಳಪಡಿಸಿದಾಗ ಪುರುಷ ಎಂಬುದು ತಿಳಿದು ಬಂದಿದೆ.

ಇದರ ಬೆನ್ನಲ್ಲೇ ಈತ ಬಾಸಿಲ್ಕಾ ಪ್ರದೇಶದ ಅಂಗ್ರೇಜ್ ಸಿಂಗ್ ಎಂಬುವವನಾಗಿದ್ದು, ತನ್ನ ಗೆಳತಿ ಪರಮ್‌ಜಿತ್ ಕೌರ್ನ ಆಧಾರ್ ಮತ್ತು ಮತದಾರರ ಚೀಟಿಯನ್ನು ನಕಲಿ ಮಾಡಿರುವುದು ಬೆಳಕಿಗೆ ಬಂದಿದೆ.

ಇದನ್ನು ಅನುಸರಿಸಿ ಆತನನ್ನು ವಿಚಾರಣಗೆ ಒಳಪಡಿಸಿದಾಗ ಈತ ಬಸಿಲ್ಕಾ ಪ್ರದೇಶದ ಅಂಗ್ರೇಜ್ ಸಿಂಗ್ ಎಂಬುವವನಾಗಿದ್ದು, ತನ್ನ ಗೆಳತಿ ಪರಮ್‌ಜಿತ್ ಕೌರ್ನ ಆಧಾರ್ ಮತ್ತು ಮತದಾರರ ಚೀಟಿಯನ್ನು ನಕಲಿ ಮಾಡಿ ಪರೀಕ್ಷೆ ಬರೆದಿದ್ದ ಎಂಬುದು ಬೆಳಕಿಗೆ ಬಂದಿದೆ.

ಇದರ ಬೆನ್ನಲ್ಲೇ ಆಡಳಿತ ಮಂಡಳಿ ಪರಮ್‌ಜಿತ್ ಕೌರ್ ಅರ್ಜಿಯನ್ನು ತಿರಸ್ಕರಿಸಿತ್ತು. ಅಂಗ್ರೇಜ್ ಸಿಂಗ್ ಅವರನ್ನೂ ಪೊಲೀಸರು ಬಂಧಿಸಿದ್ದಾರೆ. ದಾಖಲೆಗಳ ಹೊರತಾಗಿಯೂ, ಬಯೋಮೆಟ್ರಿಕ್ ಸಾಧನದಲ್ಲಿನ ಅವರ ಬೆರಳಚ್ಚುಗಳು ನಿಜವಾದ ಅಭ್ಯರ್ಥಿಗೆ ಹೊಂದಿಕೆಯಾಗದ ಕಾರಣ ಅಂಗ್ರೇಜ್ ಸಿಂಗ್ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಘಟನೆಯಲ್ಲಿ ಬೇರೆ ಯಾರಾದರೂ ಭಾಗಿಯಾಗಿದ್ದಾರೆಯೇ ಎಂಬ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ದೇಶ

ಲಖನೌ: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ತಮ್ಮ ಪಕ್ಷ ಏಕಾಂಗಿಯಾಗಿ ಕಣಕ್ಕಿಳಿಯಲಿದೆ ಎಂದು ಬಿಎಸ್‌ಪಿ ವರಿಷ್ಠೆ ಮಾಯಾವತಿ ಸೋಮವಾರ ಹೇಳಿದ್ದಾರೆ ಆದರೆ ಚುನಾವಣೋತ್ತರ ಮೈತ್ರಿಯನ್ನು ಅವರು ತಳ್ಳಿಹಾಕಲಿಲ್ಲ.

ತಮ್ಮ ಜನ್ಮದಿನದಂದು ರಾಜ್ಯ ಪಕ್ಷದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕೀಯದಿಂದ ನಿವೃತ್ತಿ ಹೊಂದುವ ಕುರಿತು ಮಾಧ್ಯಮದ ಒಂದು ವಿಭಾಗದ ವರದಿಗಳನ್ನು ಸ್ಪಷ್ಟವಾಗಿ ನಿರಾಕರಿಸಿದರು.

ಏಪ್ರಿಲ್-ಮೇ ತಿಂಗಳಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಗೆ ಪಕ್ಷವು ಯಾವುದೇ ಮೈತ್ರಿ ಮಾಡಿಕೊಳ್ಳುವುದಿಲ್ಲ ಮತ್ತು ಏಕಾಂಗಿಯಾಗಿ ಹೋಗಲಿದೆ ಎಂದು ಅವರು ಹೇಳಿದರು.

ದೇಶ

ಇಂಫಾಲ: ಹಿರಿಯ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಣಿಪುರದಿಂದ ಮುಂಬೈಗೆ ಪಾದಯಾತ್ರೆ ನಡೆಸುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಅವರು ಮಣಿಪುರದಲ್ಲಿ ಎರಡನೇ ಹಂತದ ಏಕತಾ ಯಾತ್ರೆಯನ್ನು ಆರಂಭಿಸಿದ್ದಾರೆ. “ಭಾರತ್ ಜೋಡೋ ನ್ಯಾಯ ಯಾತ್ರೆ” ಎಂದು ಕರೆಯಲ್ಪಡುವ ಈ ಯಾತ್ರೆಯು ಮಣಿಪುರದ ತೌಬಲ್ ಜಿಲ್ಲೆಯಿಂದ ಪ್ರಾರಂಭವಾಗಿದೆ.

ಅದೇ ರೀತಿ ಅಸ್ಸಾಂನ 2 ಸ್ಥಳಗಳಲ್ಲಿ ರಾತ್ರಿ ವಿಶ್ರಾಂತಿಗೆ ರಾಜ್ಯ ಸರ್ಕಾರ ಅನುಮತಿ ನಿರಾಕರಿಸಿದೆ. ಇದಕ್ಕಾಗಿ ಪರ್ಯಾಯ ಸ್ಥಳಗಳ ವ್ಯವಸ್ಥೆ ಮಾಡಲಾಗಿದೆ. ಇಷ್ಟೆಲ್ಲಾ ಗದ್ದಲಗಳ ನಡುವೆಯೇ ರಾಹುಲ್ ಗಾಂಧಿಯ ಪಾದಯಾತ್ರೆ ಆರಂಭವಾಗಿರುವುದು ಗಮನಾರ್ಹ.

ದೇಶ

ನವದೆಹಲಿ: ಇಂದು (ಜನವರಿ 14) ನವದೆಹಲಿಯಲ್ಲಿ ಕೇಂದ್ರ ಸಚಿವ ಎಲ್.ಮುರುಗನ್ ಅವರ ನಿವಾಸದಲ್ಲಿ ನಡೆದ ಪೊಂಗಲ್ ಆಚರಣೆಯಲ್ಲಿ ಪ್ರಧಾನಿ ಮೋದಿ ಭಾಗವಹಿಸಿದ್ದರು.

ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವ ಎಲ್.ಮುರುಗನ್ ಪ್ರತಿ ವರ್ಷ ದೆಹಲಿಯ ತಮ್ಮ ಮನೆಯಲ್ಲಿ ಪೊಂಗಲ್ ಆಚರಿಸುತ್ತಾರೆ. ಈ ವರ್ಷ ಪೊಂಗಲ್ ಹಬ್ಬದ ನಿಮಿತ್ತ ಕರಗಾಟ್ಟಂ, ಪರಯಾಟ್ಟಾಂ, ಸಿಲಂಬಾಟ್ಟಂ ಸೇರಿದಂತೆ ವಿವಿಧ ಕಲಾತ್ಮಕ ಕಾರ್ಯಕ್ರಮಗಳು ನಡೆದವು. ಮುರುಗನ್ ಅವರ ಮನೆಯನ್ನು ಕಬ್ಬು, ಅರಿಶಿನ ಮತ್ತು ಬಾಳೆ ತೋರಣಗಳಿಂದ ಅಲಂಕರಿಸಲಾಗಿತ್ತು. ಮನೆಯ ಮುಂದೆ ಹಸು ಮತ್ತು ಜಲ್ಲಿಕಟ್ಟು ಗೂಳಿಯನ್ನು ಕಟ್ಟಲಾಗಿತ್ತು.

ಪ್ರಧಾನಿ ಮೋದಿ ಅವರು ತಮಿಳು ಸಾಂಪ್ರದಾಯಿಕ ಉಡುಗೆಯಾದ ಪಂಚೆ ಮತ್ತು ಶರ್ಟ್ ಧರಿಸಿ ಸಮಾರಂಭದಲ್ಲಿ ಭಾಗವಹಿಸಿದ್ದರು. ತರುವಾಯ, ಮೋದಿ ಅವರು ಮಡಕೆಯಲ್ಲಿ ಪೊಂಗಲ್ ಹಾಕಿ, ಎಲ್ಲರಿಗೂ ತಮಿಳು ಭಾಷೆಯಲ್ಲಿ ಪೊಂಗಲ್ ಶುಭಾಶಯ ಕೋರಿದರು.

ಪೊಂಗಲ್ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮೋದಿ ಅವರು ತಿರುಕ್ಕುರಳ್ ಅನ್ನು ಉಲ್ಲೇಖಿಸಿ ಮಾತನಾಡಿದರು: 

“ತಳ್ಳಾ ವಿಳೈಯುಳುಂ ತಕ್ಕಾರುಂ ತಾಳ್ವಿಲಾ
ಸೆಲ್ವರುಂ ಸೇರ್ವದು ನಾಡು”
(ಅರ್ಥ: ಕಡಿಮೆಯಾಗದ ಉತ್ಪನ್ನ, ಯೋಗ್ಯ ವಿದ್ವಾಂಸರು, ಅನಂತ ಸಂಪತ್ತಿನ ಒಡೆಯರು ಎಲ್ಲರೂ ಕೂಡಿ ಬಾಳುವುದೇ ದೇಶ)

“ಪೊಂಗಲ್ ಸಮಯದಲ್ಲಿ ಕೊಯ್ಲು ಮಾಡಿದ ಭತ್ತವನ್ನು ದೇವರಿಗೆ ಅರ್ಪಿಸುವುದು ಸಾಂಪ್ರದಾಯಿಕವಾಗಿದೆ. ನಮ್ಮ ಪ್ರತಿಯೊಂದು ಹಬ್ಬಗಳು ರೈತರೊಂದಿಗೆ ಸಂಬಂಧ ಹೊಂದಿವೆ. ತಮಿಳು ಮಹಿಳೆಯರು ತಮ್ಮ ಮನೆಗಳಲ್ಲಿ ಹಾಕುವ ಬಣ್ಣಬಣ್ಣದ ರಂಗೋಲಿ (ಕೋಲಂ) ಗಳಲ್ಲಿ ದೊಡ್ಡ ವೈಭವ ಅಡಗಿದೆ. ಅನೇಕ ಬಿಂದುಗಳು ಸೇರಿ ಒಂದು ರಂಗೋಲಿಯಾದಂತೆ, ವೈವಿಧ್ಯಮಯವಾದ ಜನರು ಒಂದಾಗುವುದರಿಂದ ದೇಶ ಸುಂದರವಾಗುತ್ತದೆ. ವೈವಿಧ್ಯಮಯವಾದ ಜನರನ್ನು ಒಂದುಗೂಡಿಸುವ ಕೆಲಸವನ್ನು ಕಾಶಿ ತಮಿಳು ಸಂಗಮ್ ಮಾಡುತ್ತಿದೆ” ಎಂದು ಹೇಳಿದರು.

ಪೊಂಗಲ್ ಹಬ್ಬದ ಕಾರ್ಯಕ್ರಮದಲ್ಲಿ  ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ತೆಲಂಗಾಣ ಮತ್ತು ಪುದುಚೇರಿ ರಾಜ್ಯಪಾಲರಾದ ತಮಿಳಿಸೈ, ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ, ಜಾರ್ಖಂಡ್ ರಾಜ್ಯಪಾಲ ಸಿ.ಪಿ.ರಾಧಾಕೃಷ್ಣನ್, ಬಿಜೆಪಿಯ ಹಿರಿಯ ಮುಖಂಡರುಗಳು ಮತ್ತು ಉದ್ಯಮಿಗಳು ಭಾಗವಹಿಸಿದ್ದರು.

ದೇಶ

ಡಿ.ಸಿ.ಪ್ರಕಾಶ್ ಸಂಪಾದಕರು

ಮಾಲ್ಡೀವ್ಸ್ ಅಧ್ಯಕ್ಷ ಮೊಹಮದ್ ಮುಯಿಸು ಐದು ದಿನಗಳ ಚೀನಾ ಪ್ರವಾಸದಲ್ಲಿದ್ದಾರೆ. ಪ್ರವಾಸೋದ್ಯಮ ವಲಯದಲ್ಲಿ ಸಹಕಾರ ಸೇರಿದಂತೆ 20 ಪ್ರಮುಖ ಒಪ್ಪಂದಗಳಿಗೆ ಮಾಲ್ಡೀವ್ಸ್ ಮತ್ತು ಚೀನಾ ಸಹಿ ಹಾಕಿವೆ ಎಂಬ ಮಾಹಿತಿ ಬಂದಿದೆ. ಚೀನಾ ಸರ್ಕಾರ ಮಾಲ್ಡೀವ್ಸ್ ಅಧ್ಯಕ್ಷರಿಗೆ 21 ಗನ್ ಸಲ್ಯೂಟ್‌ನೊಂದಿಗೆ ರೆಡ್ ಕಾರ್ಪೆಟ್ ಸ್ವಾಗತವನ್ನು ನೀಡಿತು.

ಮಾಲ್ಡೀವ್ಸ್ ಹಿಂದೂ ಮಹಾಸಾಗರದಲ್ಲಿರುವ ಒಂದು ಪುಟ್ಟ ದೇಶ. ಆದರೆ ಚೀನಾ ಅದನ್ನು ಚಿಕ್ಕ ದೇಶ ಎಂದು ಪರಿಗಣಿಸುವ ಬದಲು ತನಗೆ ಸಮಾನವಾದ ಸಾರ್ವಭೌಮ ರಾಷ್ಟ್ರ ಎಂಬ ಗೌರವವನ್ನು ನೀಡಿದೆ. ಇಂತಹ ವಿಷಯಗಳಿಂದಲೇ ಚೀನಾ ಗೆಲ್ಲುತ್ತಿದೆ ಎಂದರೆ ಅತಿಶಯೋಕ್ತಿಯಲ್ಲ.

ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಲಕ್ಷದ್ವೀಪಕ್ಕೆ ಭೇಟಿ ನೀಡಿದ್ದರು. ಅವರ ಪ್ರವಾಸವನ್ನು ಮಾಲ್ಡೀವ್ಸ್ ನ ಮೂವರು ಮಂತ್ರಿಗಳು ಟೀಕಿಸಿದ್ದರು. ಇದು ಸಂಪೂರ್ಣವಾಗಿ ಖಂಡನೀಯ. ಭಾರತದ ಪ್ರಧಾನಿ, ಭಾರತದ ಲಕ್ಷದ್ವೀಪ ಭೇಟಿಯನ್ನು ಟೀಕಿಸುವ ಹಕ್ಕು ಮಾಲ್ಡೀವ್ಸ್ ಎಂಬ ಇನ್ನೊಂದು ದೇಶದ ಮಂತ್ರಿಗಳಿಗೆ ಇಲ್ಲ. ಈ ಹಿನ್ನೆಲೆಯಲ್ಲಿ, ಆ ಮೂರು ಸಚಿವರನ್ನು ಆ ದೇಶದ ಅಧ್ಯಕ್ಷರು ಸಂಪುಟದಿಂದ ಅಮಾನತುಗೊಳಿಸಿದರು. ಆ ತ್ವರಿತ ಕ್ರಮ ಶ್ಲಾಘನೀಯ.

ಏತನ್ಮಧ್ಯೆ, ಇತ್ತೀಚಿನ ದಿನಗಳಲ್ಲಿ ಭಾರತ ಮತ್ತು ಮಾಲ್ಡೀವ್ಸ್ ನಡುವಿನ ಸಂಬಂಧಗಳು ತೀರ ಹದಗೆಟ್ಟಿವೆ; ಅತ್ಯಂತ ನಿಕಟ ನೆರೆಯ ಮಾಲ್ಡೀವ್ಸ್, ಭಾರತದ ಪ್ರಭಾವದ ವಲಯದಿಂದ ಹೊರ ಹೋಗುವ ಹಂತಕ್ಕೆ ತಲುಪಿದೆ. ಇದು ಸಂಪೂರ್ಣವಾಗಿ ದಕ್ಷಿಣ ಏಷ್ಯಾ ಪ್ರದೇಶದ ಬಗ್ಗೆ ಮೋದಿ ನೇತೃತ್ವದ ಸರ್ಕಾರದ ಪ್ರತಿಕೂಲ ವಿದೇಶಾಂಗ ನೀತಿಯೇ ಕಾರಣವಾಗಿದೆ.

ಮೋದಿಯವರು ಅಧಿಕಾರಕ್ಕೆ ಬಂದ ನಂತರ, ಕಳೆದ ಕೆಲವು ವರ್ಷಗಳಿಂದ ತನ್ನ ಹತ್ತಿರದ ನೆರೆಹೊರೆಯ ದೇಶಗಳಾದ ಮಾಲ್ಡೀವ್ಸ್, ಶ್ರೀಲಂಕಾ, ಭೂತಾನ್, ನೇಪಾಳ, ಬಾಂಗ್ಲಾದೇಶ, ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದ ಜೊತೆಗಿನ ಉತ್ತಮ ಬಾಂಧವ್ಯಕ್ಕಿಂತ ಕಹಿಯೇ ಹೆಚ್ಚಾಗಿದೆ.

ಈ ಎಲ್ಲಾ ದೇಶಗಳಲ್ಲಿ, ಕೆಲವು ವರ್ಷಗಳ ಹಿಂದೆ ಅಮೆರಿಕ ಹೆಚ್ಚಿನ ಪ್ರಭಾವವನ್ನು ಹೊಂದಿತ್ತು. ಕಳೆದೆರಡು ವರ್ಷಗಳಲ್ಲಿ ಆ ಪ್ರಭಾವ ಕೊಂಚ ಪಲ್ಲಟಗೊಂಡು, ಚೀನಾದತ್ತ ಮುಖಮಾಡಿದೆ. ಅದಕ್ಕೆ ಮುಖ್ಯ ಕಾರಣ, ಅತ್ಯಂತ ಹಿಂದುಳಿದ ದೇಶಗಳೊಂದಿಗೆ “ಬೆಲ್ಟ್ ಅಂಡ್ ರೋಡ್” ಎಂದು ಕರೆಯಲ್ಪಡುವ ಜಾಗತಿಕ ಕಾರಿಡಾರ್ ಯೋಜನೆಯೊಂದಿಗೆ ಚೀನಾ ವ್ಯಾಪಾರ ಸಂಬಂಧವನ್ನು ಹೊಂದಿದ್ದು, ಅದರ ಮೂಲಕ ಆ ದೇಶಗಳ ಮೂಲಸೌಕರ್ಯಕ್ಕೆ ನೆರವು ನೀಡುತ್ತಿದ್ದೆ.

ಇದರಲ್ಲಿ ಸೇರ್ಪಡೆಯಾಗದ ಏಕೈಕ ದಕ್ಷಿಣ ಏಷ್ಯಾದ ದೇಶವೆಂದರೆ ಅದು ಭಾರತ. ಭಾರತವು ಅಮೆರಿಕ ಪಾಲುದಾರರಾಗಿ ಕಾರ್ಯನಿರ್ವಹಿಸುವುದರಿಂದ ತಮಗೆ ಪ್ರಯೋಜನವಿಲ್ಲ ಎಂದು ನೆರೆಯ ದೇಶಗಳು ದೂರ ಸರಿಯುತ್ತಿವೆ. ಭಾರತ, ನೆರೆಹೊರೆ ಸ್ನೇಹಿತರನ್ನು ಕಳೆದುಕೊಂಡು ಮಾಡುವುದಾದರು ಏನು? ಎಂಬುದು ಎಲ್ಲರ ಪ್ರಶ್ನೆಯಾಗಿದೆ.

ರಾಜಕೀಯ

ನವದೆಹಲಿ: ಕೇಂದ್ರದಲ್ಲಿ ಆಡಳಿತಾರೂಢ ಬಿಜೆಪಿಯನ್ನು ಸೋಲಿಸಲು ವಿರೋಧ ಪಕ್ಷಗಳು ಒಟ್ಟಾಗಿ ‘ಇಂಡಿಯಾ’ ಮೈತ್ರಿಕೂಟವನ್ನು ರಚಿಸಿವೆ.

ಕಾಂಗ್ರೆಸ್, ಡಿಎಂಕೆ, ತೃಣಮೂಲ ಕಾಂಗ್ರೆಸ್, ಸಂಯುಕ್ತ ಜನತಾ ದಳ, ಸಮಾಜವಾದಿ ಪಕ್ಷ ಮತ್ತು ಇತರ ಪ್ರಮುಖ ವಿರೋಧ ಪಕ್ಷಗಳಾದ ‘ಇಂಡಿಯಾ’ ಮೈತ್ರಿಕೂಟ ಇದುವರೆಗೆ ಮೂರು ಬಾರಿ ಸಭೆ ನಡೆಸಿದೆ. ಈ ಸಭೆಯಲ್ಲಿ ಮೈತ್ರಿಕೂಟದ ಕಾರ್ಯಚಟುವಟಿಕೆಗಳ ಕುರಿತು ಚರ್ಚಿಸಲಾಯಿತು.

ಆದಾಗ್ಯೂ ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರು? ಎಂಬುದು ಅಧಿಕೃತವಾಗಿ ಘೋಷಣೆಯಾಗಿಲ್ಲ. ಏತನ್ಮಧ್ಯೆ, ‘ಇಂಡಿಯಾ’ ಮೈತ್ರಿಕೂಟದ ಸಂಯೋಜಕರನ್ನಾಗಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಆಯ್ಕೆ ಮಾಡಬೇಕು ಮತ್ತು ಜನವರಿ ಅಂತ್ಯದೊಳಗೆ ಸೀಟು ಹಂಚಿಕೆ ಬಗ್ಗೆ ಚರ್ಚಿಸಬೇಕು ಎಂದು ಒತ್ತಾಯಿಸಲಾಯಿತು.

ಈ ಹಿನ್ನಲೆಯಲ್ಲಿ, ಇಂದು ವೀಡಿಯೋ ಕಾನ್ಫರೆನ್ಸ್ ಮೂಲಕ ‘ಇಂಡಿಯಾ’ ಮೈತ್ರಿಕೂಟದ ಪಕ್ಷದ ನಾಯಕರ ಸಮಾಲೋಚನೆ ಸಭೆ ನಡೆಯಿತು.

ಕಾಂಗ್ರೆಸ್ ಪರವಾಗಿ ಮಲ್ಲಿಕಾರ್ಜುನ ಖರ್ಗೆ, ಡಿ.ಎಂ.ಕೆ ಅಧ್ಯಕ್ಷ ಎಂ.ಕೆ.ಸ್ಟಾಲಿನ್, ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ ಶರದ್ ಪವಾರ್ ಸೇರಿದಂತೆ 14 ಪಕ್ಷಗಳ ಮುಖಂಡರುಗಳು ವೀಡಿಯೋ ಕಾನ್ಫರೆನ್ಸ್ ಮೂಲಕ ಸಭೆಯಲ್ಲಿ ಭಾಗವಹಿಸಿದ್ದರು. ಮಮತಾ ಬ್ಯಾನರ್ಜಿ ಈ ಸಭೆಯಲ್ಲಿ ಭಾಗವಹಿಸಲಿಲ್ಲ. ಕ್ಷೇತ್ರ ಹಂಚಿಕೆ ಕುರಿತು ಇಂದಿನ ಸಭೆಯಲ್ಲಿ ಸಮಾಲೋಚನೆ ನಡೆಸಲಾಯಿತು.

ಈ ಸಭೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ‘ಇಂಡಿಯಾ’ ಮೈತ್ರಿಕೂಟದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ ಎಂಬ ಮಾಹಿತಿ ಹೊರಬಿದ್ದಿದೆ. ನಿತೀಶ್ ಕುಮಾರ್ ಅವರು ಅಧ್ಯಕ್ಷರ ಸ್ಥಾನಕ್ಕೆ ನಿರಾಕರಿಸಿದ ಹಿನ್ನೆಲೆಯಲ್ಲಿ ಖರ್ಗೆ ಅವರ ಹೆಸರನ್ನು ಅಧ್ಯಕ್ಷರ ಸ್ಥಾನಕ್ಕೆ ಪ್ರಸ್ತಾಪಿಸಲಾಗಿದೆ ಎಂದು ತಿಳಿದುಬಂದಿದೆ.

ಮೈತ್ರಿಕೂಟದ ಸಂಯೋಜಕರಾಗಿ ನಿತೀಶ್ ಕುಮಾರ್ ಅವರನ್ನು ನೇಮಿಸಲು ನಿರ್ಧರಿಸಿದ್ದಾರೆ. ಎಲ್ಲಾ ಸಮ್ಮಿಶ್ರ ಪಕ್ಷಗಳು ಒಮ್ಮತದ ಬೆಂಬಲ ನೀಡಿದರೆ ಈ ಜವಾಬ್ದಾರಿಯನ್ನು ನಿತೀಶ್ ಕುಮಾರ್ ವಹಿಸಿಕೊಳ್ಳುವುದಾಗಿ ಹೇಳಿದ್ದಾರೆ.

ಮೈತ್ರಿಕೂಟದ ಸಮಾಲೋಚನಾ ಸಭೆಯಲ್ಲಿ ಭಾಗವಹಿಸದ ಉದ್ಧವ್ ಠಾಕ್ರೆಯವರು ಅದರ ಸಂಬಂಧ ವಿವರಣೆ ನೀಡಿದ್ದಾರೆ: “ಈ ವಿಷಯದಲ್ಲಿ ಯಾವುದೇ ತಪ್ಪು ತಿಳುವಳಿಕೆ ಇರಬಾರದು. ನಾನು ನಿಗದಿತ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಬೇಕಾಗಿದ್ದರಿಂದ, ಸಮಾಲೋಚನಾ ಸಭೆಗೆ ಹಾಜರಾಗಿಲ್ಲ. ಇಂತಹ ಪರಿಸ್ಥಿತಿಯಲ್ಲಿ, ಸಭೆಗೆ ಹಾಜರಾಗುವುದು ಕಷ್ಟವಾಗಿರುತ್ತದೆ. ಸಭೆಯಲ್ಲಿ ಭಾಗವಹಿಸಲು ಸಾಧ್ಯವಿಲ್ಲ ಎಂದು ಈಗಾಗಲೇ ತಿಳಿಸಿದ್ದೇನೆ” ಎಂದು ಹೇಳಿದರು.

‘ಇಂಡಿಯಾ’ ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಸದ್ಯಕ್ಕೆ ಅಗತ್ಯವಿಲ್ಲ ಎಂದು ಶರದ್ ಪವಾರ್ ಹೇಳಿದ್ದಾರೆ. “ಚುನಾವಣೆಯಲ್ಲಿ ಮತ ಕೇಳಲು ಯಾರನ್ನಾದರೂ ಪ್ರಧಾನಿ ಅಭ್ಯರ್ಥಿಯನ್ನಾಗಿ ಸೂಚಿಸುವ ಅಗತ್ಯವಿಲ್ಲ. ಚುನಾವಣೆ ನಂತರ ನಾಯಕನನ್ನು ಆಯ್ಕೆ ಮಾಡೋಣ. 1977ರ ಚುನಾವಣೆಯ ಸಮಯದಲ್ಲಿ, ವಿರೋಧ ಪಕ್ಷಗಳು ಮೊರಾರ್ಜಿ ದೇಸಾಯಿ ಅವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಸೂಚಿಸಲಿಲ್ಲ. ವಿರೋಧ ಪಕ್ಷಗಳು ಗೆದ್ದ ನಂತರ ಅವರು ಪ್ರಧಾನಿಯಾಗಿ ಆಯ್ಕೆಯಾದರು” ಎಂದು ಹೇಳಿದರು.

ಬೆಂಗಳೂರು

ಬೆಂಗಳೂರು: ಹೈಗ್ರೌಂಡ್ಸ್ ಪೊಲೀಸ್ ಠಾಣಾ ಸರಹದ್ದಿನ ರೇಸ್ ಕೋರ್ಸ್ ರಸ್ತೆಯ ಬೆಂಗಳೂರು ಟರ್ಫ್ ಕ್ಲಬ್ ಆವರಣದಲ್ಲಿ ಯಾವುದೇ ಅಧಿಕೃತ ಪರವಾನಗಿ ಇಲ್ಲದೇ ಅಕ್ರಮ ಹಣ ಸಂಪಾದನೆ ಮಾಡುವ ದುರುದ್ದೇಶದಿಂದ ಕೆಲವು ವ್ಯಕ್ತಿಗಳು ಟರ್ಫ್ ಕ್ಲಬ್ ಪ್ರವಾಗಿರುವ ಲೀಗಲ್ ಬುಕ್ಕಿಗಳೆಂದು ಹೇಳಿಕೊಂಡು ಬೆಂಗಳೂರು ಟರ್ಫ್ ಕ್ಲಬ್ ಗೆ ಸಮನಾಂತರವಾಗಿ (ಪ್ಯಾರಲಲ್) ಸಾರ್ವಜನಿಕರು ಹಾಗೂ ಪಂಟರುಗಳಿಂದ ಹಣವನ್ನು ಪಣವಾಗಿ ಕಟ್ಟಿಸಿಕೊಂಡು ವಂಚಿಸಿರುತ್ತಾರೆ.

ಅಕ್ರಮ ರೇಸ್ ಬೆಟ್ಟಿಂಗ್ ಎಂಬ ಜೂಜಾಟ ನಡೆಸುತ್ತಿರುವುದು ಮತ್ತು ಕೆಲವು ಪರವಾನಗಿ ಪಡೆದ ಏಜೆಂಟುಗಳು ಸರ್ಕಾರದ ಆದೇಶಗಳನ್ನು ಸ್ಟಾಲ್‌ಗಳಲ್ಲಿ ಪ್ರಕಟಿಸದೇ ಸರಿಯಾಗಿ ಲೆಕ್ಕ ನಿರ್ವಹಣೆ ಮಾಡದೇ ಗಿರಾಕಿಗಳಿಗೆ ಪಡೆದುಕೊಂಡ ಹಣಕ್ಕೆ ಯಾವುದೇ ಸೂಕ್ತ ದಾಖಲೆಗಳನ್ನು ನಿರ್ವಹಣೆ ಮಾಡದೇ ಅನಧಿಕೃತ ರೇಸ್ ಬೆಟ್ಟಿಂಗ್ ಜೂಜಾಟದಲ್ಲಿ ತೊಡಗಿಕೊಂಡು ಸರ್ಕಾರಕ್ಕೆ ತೆರಿಗೆ ವಂಚಿಸಿ ಮೋಸ ಮಾಡಿರುತ್ತಾರೆ.

ಈ ಕುರಿತು ಖಚಿತ ಮಾಹಿತಿ ಸಂಗ್ರಹಿಸಿದ ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಅಧಿಕಾರಿ ಹಾಗೂ ಸಿಬ್ಬಂದಿಯವರುಗಳು ದಾಳಿ ನಡೆಸಿ, ಅಕ್ರಮ ರೇಸ್ ಬೆಟ್ಟಿಂಗ್ ಜೂಜಾಟದಲ್ಲಿ ತೊಡಗಿದ್ದ ಒಟ್ಟು 66 ವ್ಯಕ್ತಿಗಳನ್ನು ವಶಕ್ಕೆ ಪಡೆದು ಕೃತ್ಯಕ್ಕೆ ಬಳಸಿದ 55 ಮೊಬೈಲ್ ಗಳು, ದಾಖಲಾತಿಗಳು ಹಾಗೂ ರೂ.3,45,78,140/- (ಮೂರು ಕೋಟಿ ನಲವತ್ತೈದು ಲಕ್ಷದ ಎಪ್ಪತ್ತೆಂಟು ಸಾವಿರದ ನೂರ ನಲವತ್ತು) ಹಣ ವಶಕ್ಕೆ ಪಡೆದುಕೊಂಡಿರುತ್ತಾರೆ.

ಈ ಕಾರ್ಯಚರಣೆಯಲ್ಲಿ 09 ವ್ಯಕ್ತಿಗಳು ತಲೆ ಮರೆಸಿಕೊಂಡಿರುತ್ತಾರೆ. ಈ ಕುರಿತು ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ; ತನಿಖೆ ಮುಂದುವರಿಯುತ್ತಿದೆ.  

ದೇಶ

ನವದೆಹಲಿ: ಉಕ್ರೇನ್ ವಿರುದ್ಧದ ಯುದ್ಧದ ನಂತರ ಯುರೋಪಿಯನ್ ರಾಷ್ಟ್ರಗಳು ರಷ್ಯಾದ ಕಚ್ಚಾ ತೈಲ ಆಮದನ್ನು ನಿಷೇಧಿಸಿತು. ಆದರೆ ಭಾರತದಲ್ಲಿ ಸಂಸ್ಕರಿಸಿದ ರಷ್ಯಾದ ಕಚ್ಚಾ ತೈಲವನ್ನು ಯುರೋಪಿಯನ್ ರಾಷ್ಟ್ರಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ವಿತರಿಸಲಾಗಿದೆ.

ಉಕ್ರೇನ್ ವಿರುದ್ಧದ ರಷ್ಯಾದ ಆಕ್ರಮಣಕ್ಕೆ ಪ್ರತಿಯಾಗಿ, ಕಳೆದ ವರ್ಷ ಡಿಸೆಂಬರ್‌ನಲ್ಲಿ ಯುರೋಪಿಯನ್ ರಾಷ್ಟ್ರಗಳು ಕಚ್ಚಾ ತೈಲ ಆಮದಿನ ಮೇಲೆ ನಿಷೇಧ ಹೇರಿದ್ದವು. ಆದರೆ, ನಿರ್ಬಂಧದ ಮೊದಲು ಯುರೋಪ್ ರಾಷ್ಟ್ರಗಳು ತೈಲ ಅಗತ್ಯತೆಯ ಶೇ.30ರಷ್ಟು ರಷ್ಯಾದಿಂದ ಖರೀದಿಸಿಕೊಂಡಿತ್ತು.

ಈ ಹಿನ್ನಲೆಯಲ್ಲಿ, ಭಾರತದಲ್ಲಿ ಸಂಸ್ಕರಿಸಿದ ರಷ್ಯಾದ ಕಚ್ಚಾ ತೈಲವನ್ನು ಯುರೋಪಿಯನ್ ರಾಷ್ಟ್ರಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ವಿತರಿಸಲಾಗಿದೆ. ಭಾರತವು ರಷ್ಯಾದೊಂದಿಗೆ ತಟಸ್ಥ ಸಂಬಂಧವನ್ನು ಹೊಂದಿದೆ. ಅಂತೆಯೇ ಭಾರತವು ಪಾಶ್ಚಿಮಾತ್ಯ ದೇಶಗಳೊಂದಿಗೆ ಉತ್ತಮ ಬಾಂಧವ್ಯವನ್ನು ಕಾಯ್ದುಕೊಳ್ಳುತ್ತಿದೆ.

ಪ್ರಸ್ತುತ, ಭಾರತವು ರಷ್ಯಾದಿಂದ ಕೈಗೆಟುಕುವ ಬೆಲೆಯಲ್ಲಿ ಕಚ್ಚಾ ತೈಲವನ್ನು ಖರೀದಿಸಿ, ಅದನ್ನು ದೇಶೀಯವಾಗಿ ಪರಿಷ್ಕರಿಸಿ, ಶೇ.115 ಕಿಂತಲೂ ಹೆಚ್ಚಿನದನ್ನು ಯುರೋಪಿಯನ್ ರಾಷ್ಟ್ರಗಳಿಗೆ ಅಭೂತಪೂರ್ವ ದರದಲ್ಲಿ ವಿತರಿಸಲಾಗುತ್ತಿದೆ.

ಆರ್ಥಿಕ ನಿರ್ಬಂಧಗಳಿಂದಾಗಿ ರಷ್ಯಾದ ಉತ್ಪನ್ನಗಳ ಕಚ್ಚಾ ತೈಲವು ಭಾರಿ ನಷ್ಟವನ್ನು ಅನುಭವಿಸುತ್ತಿದೆ ಎಂಬುದು ಗಮನಾರ್ಹ.

ರಾಜಕೀಯ

ಬೆಂಗಳೂರು: “ರಾಮನ ಮೇಲಿನ ಭಕ್ತಿಯನ್ನು ಬಿಜೆಪಿ ರಾಜಕೀಯ ಗೊಳಿಸಿ ಲಾಭ ಪಡೆಯಲು ಯತ್ನಿಸುತ್ತಿದೆ. ಮುಂದಿನ ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಜನರನ್ನು ಭಾವನಾತ್ಮಕವಾಗಿ ಪ್ರಚೋಧಿಸಿ ಮತ ಬ್ಯಾಂಕ್ ಭದ್ರಗೊಳಿಸುತ್ತಿದೆ. ಈ ಮೂಲಕ ಬಿಜೆಪಿ ಲೋಕಸಭಾ ಚುನಾವಣೆಗೆ ಸಿದ್ದವಾಗುತ್ತಿದೆ” ಎಂದು ವೆಲ್‌ಫೇರ್ ಪಾರ್ಟಿ ಆಫ್ ಇಂಡಿಯಾದ ಕರ್ನಾಟಕ ರಾಜ್ಯಾಧ್ಯಕ್ಷ ಅಡ್ವಕೇಟ್ ತಾಹೇರ್ ಹುಸೇನ್ ಹೇಳಿದ್ದಾರೆ.

ಅವರು ಮುಂದುವರಿಯುತ್ತಾ “ಧಾರ್ಮಿಕ ನಂಬಿಕೆಗಳನ್ನು ಬಳಸಿ ಮುಗ್ದ ಜನರನ್ನು ಭಾವನಾತ್ಮಕವಾಗಿ ಕೆರಳಿಸುವ ಯಾವುದೇ  ಪಕ್ಷಗಳು ರಾಜಕೀಯ ಮಾಡಿದರೂ ಅದು ಖಂಡನಾರ್ಹ. ಕಾಂಗ್ರೆಸ್ ಕೂಡ ಆರಂಭದಲ್ಲಿ ಬಿಜೆಪಿಯ ಹಾದಿಯಲ್ಲಿ ಸಾಗುವ ಸೂಚನೆ ನೀಡಿದ್ದರೂ ಈಗ ಅದರಿಂದ ದೂರ ನಿಲ್ಲುವುದಾಗಿ ಹೇಳಿದ್ದು ಸ್ವಾಗತಾರ್ಹ” ಎಂದು ಹೇಳಿದ್ದಾರೆ.

ರಾಮನ ಮೇಲಿನ ಭಕ್ತಿಗಿಂತ ರಾಜಕೀಯವೇ ಮೇರೆ ಮೀರುತ್ತಿದೆ. ರಾಮ ಮಂದಿರ ಪೂರ್ಣಗೊಳ್ಳುವ ಮುನ್ನವೇ ತರಾತುರಿಯ ಉದ್ಘಾಟನೆಗೆ ಬಿಜೆಪಿ ಮುಂದಾಗುತ್ತಿರುವುದು ಏತಕ್ಕೆ? ಲೋಕಸಭೆ ಚುನಾವಣೆ ಆಸನ್ನವಾಗಿರುವಾಗ, ವಿಷಯವಿಲ್ಲದೇ ತಡಕಾಡುವ ಬಿಜೆಪಿಗೆ ಇದರ ಅಗತ್ಯವಿತ್ತು. ರಾಮಮಂದಿರ ವಿವಾದದಿಂದಲೇ ಸಾಕಷ್ಟು ಫಸಲು ತೆಗೆದ ಪಕ್ಷದಿಂದ ಇನ್ನೇನು ತಾನೇ ನಿರೀಕ್ಷಿಸಬಹುದು?” ಎಂದು ಅವರು ಪ್ರಶ್ನಿಸಿದ್ದಾರೆ.

ರಾಜ್ಯ

“ಯಾವ ಧರ್ಮದಲ್ಲಿ ಹಸಿದವರಿಗೆ ಅನ್ನ ಕೊಡುವುದಿಲ್ಲವೋ ಅಂಥ ಧರ್ಮದಲ್ಲಿ ನನಗೆ ನಂಬಿಕೆ ಇಲ್ಲ” ಎಂದು ವಿವೇಕಾನಂದರು ತಿಳಿಸಿದರು: ಸಿದ್ದರಾಮಯ್ಯ

ಶಿವಮೊಗ್ಗ: ಶಿವಮೊಗ್ಗದಲ್ಲಿ ಲಕ್ಷಾಂತರ ಯುವಸಮೂಹದ ಸಮ್ಮುಖದಲ್ಲಿ ರಾಜ್ಯ ಸರ್ಕಾರದ ಐತಿಹಾಸಿಕ ಗ್ಯಾರಂಟಿ “ಯುವನಿಧಿ” ಯೋಜನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿಸಿ ಮಾತನಾಡಿದರು.

ಯಾವ ಧರ್ಮದಲ್ಲಿ ಹಸಿದವರಿಗೆ ಅನ್ನ ಕೊಡುವುದಿಲ್ಲವೋ ಅಂಥ ಧರ್ಮದಲ್ಲಿ ನನಗೆ ನಂಬಿಕೆ ಇಲ್ಲ ಎಂದು ವಿವೇಕಾನಂದರು ಘೋಷಿಸಿದ್ದರು. ಇವರ ಜನ್ಮ ದಿನದಂದೇ ನನ್ನ ಯುವಕ, ಯುವತಿಯರು ಭ್ರಮ‌ನಿರಸನರಾಗದಂತೆ ಅವರ ಭವಿಷ್ಯಕ್ಕೆ ಶಕ್ತಿ ತುಂಬುವ ಸಲುವಾಗಿ ಯುವನಿಧಿ ಜಾರಿ ಮಾಡುತ್ತಿದ್ದೇವೆ ಎಂದು ಹೇಳಿದರು.

ನಾನು ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಸುರ್ಜೇವಾಲ ಅವರು ಚುನಾವಣಾ ಪೂರ್ವ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಐದೂ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ ಎಂದು ಹೇಳಿದರು.

ನಿರುದ್ಯೋಗ ಸಮಸ್ಯೆ, ರೈತರ ಸಮಸ್ಯೆ ಹೆಚ್ಚಾಗಿ, ಆಹಾರ ಪದಾರ್ಥಗಳ ಬೆಲೆ ಗಗನಕ್ಕೆ ಏರಿರುವ ಸಂದರ್ಭದಲ್ಲಿ ಸಮಾಜದ ಎಲ್ಲಾ ವರ್ಗಗಳ ಸಮಸ್ಯೆಗೆ ಪರಿಹಾರವಾಗಿ ನಾವು ಗ್ಯಾರಂಟಿ ಯೋಜನೆಗಳನ್ನು ರೂಪಿಸಿದೆವು; ಪ್ರಣಾಳಿಕೆಯಲ್ಲಿ ಘೋಷಿಸಿದೆವು. ಘೋಷಿಸಿದಂತೆ ಜಾರಿ ಮಾಡಿದ್ದೇವೆ ಎಂದು ಸಮರ್ಥಿಸಿಕೊಂಡರು.

ಮೊದಲ ಗ್ಯಾರಂಟಿ ಶಕ್ತಿ ಯೋಜನೆಯಿಂದಾಗಿ ಮಹಿಳೆಯರು, ಯುವತಿಯರು 130 ಕೋಟಿ 28 ಲಕ್ಷ ಉಚಿತ ಟಿಕೇಟ್ ಪಡೆದು ಪ್ರಯಾಣ ಮಾಡಿದ್ದಾರೆ. 1 ಕೋಟಿ 65 ಲಕ್ಷ ಕುಟುಂಬಗಳಿಗೆ ಉಚಿತವಾಗಿ 200 ಯೂನಿಟ್ ವರೆಗೂ ಉಚಿತ ವಿದ್ಯುತ್ ನೀಡುತ್ತಿದ್ದೇವೆ. ಈ ಕೋಟಿ ಕುಟುಂಬಗಳು ನಯಾಪೈಸೆ ವಿದ್ಯುತ್ ಬಿಲ್ ಕಟ್ಟುವ ಹಾಗಿಲ್ಲ ಎಂದು ಹೇಳಿದರು.

ಇದೇ ರೀತಿ 5 ಕೆಜಿ ಅಕ್ಕಿ, 5 ಕೆಜಿ ಅಕ್ಕಿಯ ಬದಲಿಗೆ ಹಣವನ್ನು ಪ್ರತೀ ಕುಟುಂಬಗಳಿಗೆ ಕೊಡುತ್ತಿದ್ದೇವೆ. 1 ಕೋಟಿ 17 ಲಕ್ಷ ಮಹಿಳೆಯರಿಗೆ, ಯುವತಿಯರಿಗೆ ಪ್ರತೀ ತಿಂಗಳು 2,000 ರೂ ತಲುಪಿಸುತ್ತಿದ್ದೇವೆ‌. ಇಂಥ ಸಾಧನೆ ಹಿಂದೆ ಯಾವ ಕಾಲದಲ್ಲೂ ಆಗಿಲ್ಲ. ಇದನ್ನೆಲ್ಲಾ ಮಾಡಿದ್ದು ನಾವು. ನಮ್ಮದು ನುಡಿದಂತೆ ಮಾಡಿ ತೋರಿಸಿದ ಸರ್ಕಾರ ಎಂದು ಹೇಳಿದರು.

ಯುವಕ ಯುವತಿಯರಿಗೆ ಹಣದ ಜತೆಗೆ ಉದ್ಯೋಗ ಪಡೆದುಕೊಳ್ಳಲು ಅಗತ್ಯವಾದ ಕೌಶಲ್ಯ ತರಬೇತಿಯನ್ನೂ ನೀಡಿ ಅವರಿಗೆ ಉದ್ಯೋಗ ಕೊಡಿಸುವ ದಿಕ್ಕಿನಲ್ಲಿ ನಮ್ಮ ಪ್ರಯತ್ನ ಮುಂದುವರೆಯಲಿದೆ. ಯುವಕ ಯುವತಿಯರು ಭ್ರಮ‌ನಿರಸನರಾಗದಂತೆ ಅವರ ಭವಿಷ್ಯಕ್ಕೆ ಶಕ್ತಿ ತುಂಬುವ ಸಲುವಾಗಿ ಈ ಯುವನಿಧಿ ಯೋಜನೆ ಜಾರಿ ಮಾಡಿದ್ದೇವೆ ಎಂದು ಹೇಳಿದರು.

ವಿವೇಕಾನಂದರ ಜನ್ಮ ದಿನದಂದೇ ಯುವನಿಧಿ ಯೋಜನೆಯನ್ನು ನಾವು ಜಾರಿ ಮಾಡಿದ್ದೇವೆ. ಈಗಾಗಲೇ 70 ಸಾವಿರ ಯುವಕ-ಯುವತಿಯರು ಯೋಜನೆಗೆ ನೋಂದಣಿ ಮಾಡಿಕೊಂಡಿದ್ದಾರೆ‌. ರಾಜೀವ್ ಗಾಂಧಿ ಅವರು ದೇಶದ ಯುವಕರ ಭವಿಷ್ಯಕ್ಕಾಗಿ ಸದಾ ತುಡಿಯುತ್ತಿದ್ದರು. ಅವರ ಆಶಯಕ್ಕೆ ಪೂರಕವಾಗಿ ಯುವನಿಧಿ ಯೋಜನೆ ಮತ್ತು ನಮ್ಮ ಸರ್ಕಾರ ಕೆಲಸ ಮಾಡಲಿದೆ. ಪ್ರತಿ ನಿರುದ್ಯೋಗಿ ಯುವಕ ಯುವತಿಯರು ಯೋಜನೆಗೆ ನೋಂದಾಯಿಸಿಕೊಂಡು ಅನುಕೂಲ ಪಡೆದುಕೊಳ್ಳಬೇಕು ಎಂದು ಮನವಿ ಮಾಡೀದರು.

ಯಾವ ಧರ್ಮದಲ್ಲಿ ಹಸಿದವರಿಗೆ ಅನ್ನ ಕೊಡುವುದಿಲ್ಲವೋ ಅಂಥ ಧರ್ಮದಲ್ಲಿ ನನಗೆ ನಂಬಿಕೆ ಇಲ್ಲ ಎಂದು ವಿವೇಕಾನಂದರು ತಿಳಿಸಿದರು. 1985ರಲ್ಲಿ ರಾಜೀವ್ ಗಾಂಧಿ ಅವರು ದೇಶದಲ್ಲಿ ಮೊದಲ ಬಾರಿಗೆ ವಿವೇಕಾನಂದ ಜಯಂತಿಯನ್ನು ಆರಂಭಿಸಿದರು. ಸಾಮಾಜಿಕ ನ್ಯಾಯದ ಬಗ್ಗೆ ಕೇವಲ ಭಾಷಣ ಮಾಡಿದರೆ ಸಾಲದು, ಅದಕ್ಕೆ ಕಾರ್ಯಕ್ರಮಗಳನ್ನು ರೂಪಿಸಬೇಕು; ಜಾರಿಗೆ ತರಬೇಕು. ನಮ್ಮ ಕಾಂಗ್ರೆಸ್ ಸರ್ಕಾರ ಮಾಡುತ್ತಿರುವುದು ಅದನ್ನೇ. ಹೋರಾಟದ ಹಿನ್ನೆಲೆಯ ಜಿಲ್ಲೆ ಶಿವಮೊಗ್ಗದಿಂದಲೇ “ರಾಜ್ಯ ಸರ್ವ ಜನಾಂಗದ ಶಾಂತಿಯ ತೋಟ” ಆಗಲಿ. ಇದಕ್ಕಾಗಿ ಜನ ಚಳವಳಿ ನಡೆಯಲಿ ಎಂದು ಹೇಳಿದರು.

ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ, ಇಂಧನ ಸಚಿವ ಕೆ.ಜೆ.ಜಾರ್ಜ್, ಪ್ರಾಥಮಿಕ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಕ್ರೀಡಾ ಸಚಿವ ನಾಗೇಂದ್ರ, ಮೀನುಗಾರಿಕಾ ಸಚಿವ ಮಾಂಕಳ ವೈದ್ಯ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಕೆ.ಗೋವಿಂದರಾಜು, ಸಂಸದ ಬಿ.ವೈ.ರಾಘವೇಂದ್ರ, ಶಾಸಕರಾದ ಭೀಮಣ್ಣ ನಾಯಕ್, ಸಂಗಮೇಶ್, ತಮ್ಮಯ್ಯ, ಬೇಳೂರು ಗೋಪಾಲಕೃಷ್ಣ, ರಾಜೇಗೌಡ, ಶಾರದಾ ಪೂರ್ಯಾನಾಯಕ, ಚನ್ನಬಸಪ್ಪ, ತರೀಕೆರೆ ಶ್ರೀನಿವಾಸ್, ಅರುಣ್ ಕುಮಾರ್ ಸೇರಿ ಹಲವು ಪ್ರಮುಖರು ವೇದಿಕೆಯಲ್ಲಿ ಉಪಸ್ಥಿತರಿದ್ದರು.