ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
ಪಾಕಿಸ್ತಾನ್ Archives » Dynamic Leader
November 25, 2024
Home Posts tagged ಪಾಕಿಸ್ತಾನ್
ಕ್ರೀಡೆ ದೇಶ

ಚೆನ್ನೈ: ವಿಶ್ವ ಕಪ್ ಕ್ರಿಕೆಟ್‌ನ ಬಹು ನಿರೀಕ್ಷಿತ ಭಾರತ-ಪಾಕಿಸ್ತಾನ ಲೀಗ್ ಪಂದ್ಯವು ಗುಜರಾತ್‌ನ ಅಹಮದಾಬಾದ್‌ನಲ್ಲಿರುವ ವಿಶ್ವದ ಅತಿದೊಡ್ಡ ಕ್ರೀಡಾಂಗಣವಾದ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಿತು.

ಭಾರತ ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಪಾಕಿಸ್ತಾನ ತಂಡವು 42.5 ಓವರ್‌ಗಳಲ್ಲಿ 191 ರನ್‌ಗಳಿಸಿ ಎಲ್ಲ ವಿಕೆಟ್ ಕಳೆದುಕೊಂಡಿತು. ಪಾಕಿಸ್ತಾನ ತಂಡದ ಅಬ್ದುಲ್ಲಾ ಶಫೀಕ್ ಮತ್ತು ಇಮಾಮ್ ಉಲ್ ಹಕ್ ಉತ್ತಮ ಆರಂಭ ನೀಡಿದರು. ಪಂದ್ಯದ ವೇಳೆ ಅಭಿಮಾನಿಗಳು ಹಲವು ಬಾರಿ ಜಯಶ್ರೀರಾಮ್ ಘೋಷಣೆ ಕೂಗಿದರು.

ಮತ್ತು ಪಾಕಿಸ್ತಾನದ ಪ್ರಮುಖ ಆಟಗಾರ ‘ರಿಜ್ವಾನ್’ 49 ರನ್‌ಗಳಿಗೆ ಔಟಾಗಿ ಪೆವಿಲಿಯನ್‌ಗೆ ಮರಳಿದಾಗ ‘ಜಯಶ್ರೀರಾಮ್’ ಘೋಷಣೆಗಳು ಮೊಳಗಿದವು. ಇದನ್ನು ಹಲವರು ಟೀಕಿಸಿದ್ದಾರೆ. ಆಟವನ್ನು ಆಟವಾಗಿ ತೆಗೆದುಕೊಳ್ಳಬೇಕು ಎಂದು ಹೇಳಿದ್ದಾರೆ.

ಇದಕ್ಕೆ ಸಂಬಂಧಿಸಿದ ವೀಡಿಯೋವೊಂದನ್ನು ಹಂಚಿಕೊಂಡಿರುವ ತಮಿಳುನಾಡು ಕ್ರೀಡಾ ಸಚಿವ ಉದಯನಿಧಿ ಸ್ಟಾಲಿನ್, “ಆತಿಥ್ಯಕ್ಕೆ ಹೆಸರುವಾಸಿಯಾದ ಭಾರತದಲ್ಲಿ ಪಾಕಿಸ್ತಾನಿ ಆಟಗಾರರ ವಿರುದ್ಧ ಘೋಷಣೆಗಳು ಸ್ವೀಕಾರಾರ್ಹವಲ್ಲ. ಕ್ರೀಡೆ ಎಂಬುದು ರಾಷ್ಟ್ರಗಳ ನಡುವೆ ಒಗ್ಗೂಡಿಸುವ ಶಕ್ತಿಯಾಗಬೇಕು.

ಕ್ರೀಡೆಗಳು ಯಾವಾಗಲೂ ನಿಜವಾದ ಸಹೋದರತ್ವವನ್ನು ಬೆಳೆಸಬೇಕು. ದ್ವೇಷ ಹರಡಲು ಕ್ರೀಡೆಯನ್ನು ಸಾಧನವಾಗಿ ಬಳಸಿಕೊಳ್ಳುತ್ತಿರುವುದು ಖಂಡನೀಯ” ಎಂದು ಅಭಿಪ್ರಾಯಪಟ್ಟಿದ್ದಾರೆ.

ವಿದೇಶ

ವಾಷಿಂಗ್ಟನ್: ಮುಂಬೈ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮೆರಿಕದಲ್ಲಿ ಬಂಧಿಸಲಾಗಿದ್ದ ಉಗ್ರ ತಹವ್ವೂರ್ ರಾಣಾನನ್ನು ಭಾರತಕ್ಕೆ ಹಸ್ತಾಂತರಿಸಲು ಅಮೆರಿಕ ನ್ಯಾಯಾಲಯವು ಅನುಮತಿ ನೀಡಿದೆ. 2008ರಲ್ಲಿ ಮುಂಬೈನಲ್ಲಿ ನಡೆದ ಉಗ್ರರ ದಾಳಿಯಲ್ಲಿ 166 ಮಂದಿ ಸಾವನ್ನಪ್ಪಿದ್ದರು. ದಾಳಿಯ ಪ್ರಮುಖ ಶಂಕಿತ ಡೇವಿಡ್ ಹೆಡ್ಲಿಯನ್ನು ಅಮೆರಿಕಾದಲ್ಲಿ ಬಂಧಿಸಲಾಗಿತ್ತು. ಆತನು ಈಗ 35 ವರ್ಷಗಳ ಜೈಲು ಶಿಕ್ಷೆಯನ್ನು ಅನುಭವಿಸುತ್ತಿದ್ದಾರೆ.

ಡೇವಿಡ್ ಹೆಡ್ಲಿ

ಆತನ ಸ್ನೇಹಿತ ಮತ್ತು ಸಹ-ಸಂಚುಕೋರ ಪಾಕಿಸ್ತಾನ ಮೂಲದವನಾಗಿದ್ದು ಕೆನಡಾದಲ್ಲಿ ನೆಲಸಿದ್ದ ಉದ್ಯಮಿ ತಹವ್ವೂರ್ ರಾಣಾವನ್ನು 2020ರಲ್ಲಿ ಅಮೆರಿಕಾದಲ್ಲಿ ಬಂಧಿಸಲಾಗಿತ್ತು. ದಾಳಿಯಲ್ಲಿ ಆತನ ಪಾತ್ರದ ಕುರಿತು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ತನಿಖೆಯನ್ನು ನಡೆಸುತ್ತಿದೆ. ಆತನನ್ನು ವಾಂಟೆಡ್ ಕ್ರಿಮಿನಲ್ ಎಂದು ಘೋಷಿಸಿ, ಹಸ್ತಾಂತರಿಸುವಂತೆ ಕೋರಿ ಸಿಬಿಐ ಅಮೆರಿಕದ ಚಿಕಾಗೋ ನ್ಯಾಯಾಲಯದಲ್ಲಿ ಅರ್ಜಿಯನ್ನು ಸಲ್ಲಿಸಿತು.

ಮುಂಬೈ ದಾಳಿ

ಲಾಸ್ ಏಂಜಲೀಸ್ ಕೇಂದ್ರ ಜಿಲ್ಲಾ ನ್ಯಾಯಾಧೀಶೆ ಜಾಕ್ವೆಲಿನ್ ಸೂಲ್ಜಿಯನ್ ಅವರು ಮೇ 16 ರಂದು ಹೊರಡಿಸಿದ ಆದೇಶದಲ್ಲಿ, “2008ರ ಮುಂಬೈ ಭಯೋತ್ಪಾದನಾ ದಾಳಿಯ ಶಂಕಿತ ತಹವ್ವೂರ್ ರಾಣಾನನ್ನು ಭಾರತಕ್ಕೆ ಹಸ್ತಾಂತರಿಸಬಹುದು. ಅವರು ಆರೋಪಿಸಲಾದ ಅಪರಾಧಗಳಿಗಾಗಿ ಅವರನ್ನು ಹಸ್ತಾಂತರಿಸಲು ಆದೇಶಿಸಲಾಗಿದೆ” ಎಂದು ತೀರ್ಪನ್ನು ನೀಡಿದ್ದಾರೆ.

ದೇಶ

ಶ್ರೀನಗರ: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಬಂಧಿಸಿರುವ ಹಿನ್ನಲೆಯಲ್ಲಿ, ದೇಶದಲ್ಲಿ ಅವರ ಬೆಂಬಲಿಗರು ತೀವ್ರ ರೀತಿಯ ಪ್ರತಿಭಟನೆಯನ್ನು ನಡೆಸುತ್ತಿದ್ದಾರೆ. ಕಲ್ಲು ತೂರಾಟದಂತಹ ಘಟನೆಗಳಿಂದ ಹಲವೆಡೆ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನಲೆಯಲ್ಲಿ ‘ಅಸ್ಥಿರ ಪಾಕಿಸ್ತಾನ ನಮಗೆ ಅಪಾಯಕಾರಿ’ ಎಂದು ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಹೇಳಿದ್ದಾರೆ.

ಭ್ರಷ್ಟಾಚಾರ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಹಾಜರಾದ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ‘ರೇಂಜರ್ಸ್’ ಎಂದು ಕರೆಯಲ್ಪಡುವ ಗಡಿ ಭದ್ರತಾ ಪಡೆಗಳು ನ್ಯಾಯಾಲಯದ ಕಿಟಕಿಯನ್ನು ಒಡೆದು ಒಳಗೆ ಪ್ರವೇಶಿಸಿ ಕ್ಷಿಪ್ರವಾಗಿ ಬಂಧಿಸಿತು. ಇದರಿಂದ ಕೆರಳಿದ ಇಮ್ರಾನ್ ಬೆಂಬಲಿಗರು, ದೇಶದ ಸೇನೆ ಹಾಗೂ ಐಎಸ್‌ಐ ಕೇಂದ್ರ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಏಕಾಏಕಿ ಸೇನಾ ಪ್ರಧಾನ ಕಚೇರಿಯ ಮುಖ್ಯ ದ್ವಾರವನ್ನು ಮುರಿದು ಒಳ ಪ್ರವೇಶಿಸಿದ ಪ್ರತಿಭಟನಾಕಾರರು, ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಪ್ರತಿಭಟನೆಯನ್ನು ನಿಯಂತ್ರಿಸಲು ಅಶ್ರುವಾಯು ಶೆಲ್‌ಗಳನ್ನು ಪ್ರಯೋಗಿಸಲಾಗಿದೆ. ಇದರಿಂದ ಅಲ್ಲಿ ಕೋಲಾಹಲ ಉಂಟಾಗಿತ್ತು.

ಈ ನಿಟ್ಟಿನಲ್ಲಿ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಅವರು, “ಅಸ್ಥಿರ ಪಾಕಿಸ್ತಾನ ನಮಗೆ ಅಪಾಯಕಾರಿಯಾಗಿದೆ, ನಮ್ಮ ಉಪಖಂಡದಲ್ಲಿರುವ ದೇಶವು ಶಾಂತಿಯುತ ಮತ್ತು ಸ್ಥಿರವಾಗಿರಬೇಕು. ಆ ದೇಶವು ಚೆನ್ನಾಗಿರಬೇಕೆಂದು ನಾನು ಬಯಸುತ್ತೇನೆ. ನಮ್ಮ ನೆರೆಯ ದೇಶದವರು ಉತ್ತಮ ಮತ್ತು ಶಾಂತಿಯುತ ಜೀವನವನ್ನು ಪಡೆಯುತ್ತಾರೆ ಎಂದು ನಾನು ಭಾವಿಸುತ್ತೇನೆ” ಎಂದರು.

ದೇಶ

ನವದೆಹಲಿ: ಪಾಕಿಸ್ತಾನ, ಅಫ್ಘಾನಿಸ್ತಾನ, ಬಾಂಗ್ಲಾದೇಶದಲ್ಲಿ ನೆಲೆಸಿರುವ ಮುಸ್ಲಿಮೇತರ ಅಲ್ಪಸಂಖ್ಯಾತರಿಗೆ ಭಾರತೀಯ ಪೌರತ್ವವನ್ನು ನೀಡಲು ಒಂಬತ್ತು ರಾಜ್ಯಗಳ 31 ಜಿಲ್ಲಾಧಿಕಾರಿಗಳಿಗೆ ಅಧಿಕಾರವನ್ನು ನೀಡಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಲೋಕಸಭೆಯ ಪ್ರಶ್ನೋತ್ತರ ವೇಳೆಯಲ್ಲಿ ಉತ್ತರಿಸಿದ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರಾಯ್, ‘ಪಾಕಿಸ್ತಾನ, ಅಫ್ಘಾನಿಸ್ತಾನ, ಬಾಂಗ್ಲಾದೇಶದಂತಹ ದೇಶಗಳಲ್ಲಿ ವಾಸಿಸುವ ಹಿಂದೂಗಳು, ಸಿಖ್ಖರು, ಬೌದ್ಧರು, ಜೈನರು, ಪಾರ್ಸಿಗಳು ಮತ್ತು ಕ್ರಿಶ್ಚಿಯನ್ನರಿಗೆ, ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಹೊರತುಪಡಿಸಿ, ಪೌರತ್ವ ಕಾಯಿದೆ 1955ರ ಅಡಿಯಲ್ಲಿ ಭಾರತೀಯ ಪೌರತ್ವವನ್ನು ನೀಡಲಾಗುತ್ತಿದೆ.

ಪೌರತ್ವಕ್ಕಾಗಿ ಬಂದಿರುವ ಅರ್ಜಿಗಳ ಮೇಲೆ ಶೀಗ್ರದಲ್ಲಿ ಕ್ರಮ ಕೈಗೊಂಡು ಕೂಡಲೇ ಪೌರತ್ವ ನೀಡಲು, ಒಂಬತ್ತು ರಾಜ್ಯಗಳ 31 ಜಿಲ್ಲಾಧಿಕಾರಿಗಳಿಗೆ ಅಧಿಕಾರವನ್ನು ನೀಡಲಾಗಿದೆ.

ಅದರಂತೆ ಛತ್ತೀಸ್ ಗಢ, ಗುಜರಾತ್, ಮಧ್ಯಪ್ರದೇಶ, ಮಹಾರಾಷ್ಟ್ರ, ರಾಜಸ್ಥಾನ, ಉತ್ತರ ಪ್ರದೇಶ, ಹರಿಯಾಣ, ಪಂಜಾಬ್ ಹಾಗೂ ನವದೆಹಲಿಯ 31 ಕಲೆಕ್ಟರ್‌ಗಳಿಗೆ ಪೌರತ್ವ ನೀಡುವ ಸಂಬಂಧ ನಿರ್ಧಾರಗಳನ್ನು ಕೈಗೊಳ್ಳಲು ಅಧಿಕಾರ ನೀಡಲಾಗಿದೆ’ ಎಂದು ಹೇಳಿದರು.