ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
ಶೂದ್ರರು Archives » Dynamic Leader
October 23, 2024
Home Posts tagged ಶೂದ್ರರು
ಲೇಖನ

ಪ್ರವಚನ: ಪೆರಿಯಾರ್
ಕನ್ನಡಕ್ಕೆ: ಡಿ.ಸಿ.ಪ್ರಕಾಶ್

‘ದಲಿತರ ಪ್ರಗತಿಗಾಗಿ ದುಡಿಯುತ್ತಿದ್ದೇವೆ’ ಎಂದು ಅಂದುಕೊಂಡು, ‘ಅವರಿಗಾಗಿ ದುಡಿಯುತ್ತಿದ್ದೇವೆ’ ಎಂದು ಹೇಳಿಕೊಂಡು ತಿರುಗಾಡುವುದೆಲ್ಲವೂ ಅವರನ್ನು ವಂಚಿಸಲಿಕ್ಕಾಗಿಯೇ ಎಂಬುದು ನನ್ನ ಅಭಿಪ್ರಾಯ. ಅಂದರೆ, ಯುರೋಪಿಯನ್ನರು ಭಾರತದ ಒಳಿತಿಗಾಗಿಯೇ ಭಾರತವನ್ನು ಆಳುತ್ತಿದ್ದಾರೆ ಎಂಬಂತಿದೆ. ಇದರಲ್ಲಿ ಬೇರೇನು ವಿಶೇಷತೆಯಿಲ್ಲ.

ನಮ್ಮ ದೇಶದಲ್ಲಿ ‘ದಲಿತ’ ಎಂಬ ಜಾತಿಯ ಹೆಸರು ಇರುವುದರಿಂದಲೇ ‘ಶೂದ್ರ’ ಎಂಬ ಜಾತಿಯ ಹಸರೂ ನಮ್ಮಲ್ಲಿದೆ. ‘ದಲಿತ’ ಎಂಬ ಜಾತಿ ಹೆಸರಿಗಿಂತ ‘ಶೂದ್ರ’ ಎಂಬ ಜಾತಿಯ ಹೆಸರೇ ಅವಹೇಳನಕಾರಿಯಾದದ್ದು. ಹಿಂದೂ ಶಾಸ್ತ್ರದ ಪ್ರಕಾರ, ದಲಿತ ಮಹಿಳೆಯರಲ್ಲಿ ಪತಿವ್ರತೆಯರೂ, ಪರಿಪೂರ್ಣ ತಾಯಿ, ತಂದೆಗೆ ಜನಿಸಿದವರೂ ಇರಬಹುದು. ಶೂದ್ರರಲ್ಲಿ ಹಾಗಿರಲು ಸಾಧ್ಯವಿಲ್ಲ. ಏಕೆಂದರೆ ‘ಶೂದ್ರಳು’ ಎಂದರೆ ದಾಸಿ, ವೇಶ್ಯೆಯ ಮಗಳು ಎಂಬುದು ಇದರರ್ಥ. ‘ಶೂದ್ರ’ ಎಂದರೆ ದಾಸಿಯ ಮಗ, ವೇಶ್ಯೆಯ ಮಗ ಎಂದರ್ಥ. ಇದನ್ನು ಒಪ್ಪದವನು ಹಿಂದೂ ಆಗಲಾರ ಎಂಬುದು ಶಾಸ್ತ್ರದ ನಿಯಮ.

ಆದ್ದರಿಂದ, ‘ಶೂದ್ರ’ ಎಂದು ಕರೆಯಲ್ಪಡುವ ನನ್ನಂತವರು, ‘ದಲಿತ’ ಎಂದು ಕರೆಸಿಕೊಳ್ಳುವವರ ಪ್ರಗತಿಗಾಗಿ ದುಡಿಯುತ್ತಿದ್ದೇನೆ ಎಂದು ಹೇಳಿಕೊಳ್ಳುವುದೆಲ್ಲವೂ ನಮ್ಮನ್ನು ‘ಶೂದ್ರ’ ಎಂದು ಯಾರೂ ಭಾವಿಸಬಾರದು ಎಂಬುದಕ್ಕಾಗಿಯೇ ಹೊರತು ಇದರಲ್ಲಿ ಬೇರೇನೂ ಇಲ್ಲ. ಹಾಗಾಗಿ, ನಾನು ನನಗಾಗಿ ಶ್ರಮಿಸುತ್ತಿರುವುದು ನಿಮ್ಮ ದೃಷ್ಟಿಯಲ್ಲಿ ನಿಮಗಾಗಿ ಶ್ರಮಿಸುತ್ತಿರುವುದಾಗಿ ತೋರುತ್ತದೆ. ನಿನ್ನನ್ನು ಕೀಳಾಗಿ ಕಾಣುವ ಮಹಿಳೆಯರು ಮತ್ತು ಪುರುಷರು, ತಮ್ಮನ್ನು ಇತರರು ನಿಮಗಿಂತ ಕೀಳಾಗಿ ಕಾಣುತ್ತಿದ್ದಾರೆ ಎಂಬುದು ಅರ್ಥವಾಗುತ್ತಿಲ್ಲ. ಇತರರನ್ನು ಕೀಳಾಗಿ ಭಾವಿಸುವ ಅಜ್ಞಾನದಿಂದಾಗಿ, ತಮ್ಮನ್ನು ಮತ್ತವರು ಕೀಳಾಗಿ ಭಾವಿಸುವುದು ತಮಗೆ ಹೀನವಾಗಿ ಕಾಣುವುದಿಲ್ಲ.

ಈ ಹಿನ್ನೆಲೆಯಲ್ಲಿ, ನಿಮ್ಮಲ್ಲಿನ ತಪ್ಪುಗಳನ್ನು ಪತ್ತೆಹಚ್ಚಿ, “ನಿಮ್ಮ ದೇಹದಲ್ಲಿ ದುರ್ವಾಸನೆ ಬೀಸುತ್ತಿದೆ; ನೀವು ಸ್ನಾನ ಮಾಡುವುದಿಲ್ಲ; ಬಟ್ಟೆ ಒಗೆಯುವುದಿಲ್ಲ; ನೀವು ಗೋಮಾಂಸ ತಿನ್ನುತ್ತೀರಿ; ನೀವು ಮದ್ಯಪಾನ ಮಾಡುತ್ತೀರಿ; ಇದನ್ನು ಬಿಟ್ಟುಬಿಡಿ” ಎಂದು ಉಪದೇಶ ಮಾಡುತ್ತಾರೆ.

ನೀವು ಬಟ್ಟೆ ಒಗೆಯದೆ, ಸ್ನಾನ ಮಾಡದೆ ಇರುವುದಕ್ಕೆ ಯಾರು ಹೊಣೆ ಎಂದು ಅವರು ಭಾವಿಸುತ್ತಿಲ್ಲ. ನಿಮಗೆ ಕುಡಿಯಲು ನೀರೇ ಇಲ್ಲದಿರುವಾಗ ಸ್ನಾನ ಮಾಡುವುದಾದರೂ ಹೇಗೆ! ಕೊಳಕು ಮತ್ತು ವಾಸನೆ ನಿಮ್ಮ ಜೊತೆಯಲ್ಲಿ ಹುಟ್ಟಿದ್ದೇ ಎಂದು ನಾನು ನಿಮ್ಮನ್ನು ಕೇಳುತ್ತೇನೆ.

ಸ್ನಾನ ಮಾಡಲು, ಬಟ್ಟೆ ಒಗೆಯಲು, ಹಲ್ಲುಜ್ಜಲು ನೀರು ಕೊಡದೆ, ಮಠಾಧೀಶರುಗಳನ್ನು, ಶಂಕರಾಚಾರ್ಯರನ್ನು ತಂದು ಮನೆಯಲ್ಲಿ ಕೂಡಿಹಾಕಿದರೆ ಅವರ ಬಟ್ಟೆ ಶುಚಿಯಾಗಿರುತ್ತದೆಯೇ! ಅವರ ಬಟ್ಟೆ ಸ್ವಚ್ಛವಾಗಿರುತ್ತದೆಯೇ? ಅವರ ದೇಹ ಮತ್ತು ಬಾಯಿ ದುರ್ವಾಸನೆ ಹೊಡೆಯುವುದಿಲ್ಲವೇ? ಯೋಚಿಸಿ ನೋಡಿ. ನೀವು ಒಬ್ಬರನ್ನು ಹಸಿವಿಗೆ ದೂಡಿ, ಅವನು ಸತ್ತ ಮೇಲೆ, “ಅವನು ಹಸಿವಿನಿಂದ ಸತ್ತಿದ್ದಾನೆ ಪಾಪಿ” ಎಂದು ಹೇಳಿದರೆ, ಆ ಪಾಪಿ ಯಾರೆಂದು ಯೋಚಿಸಿ ನೋಡಿ!

ಅಲ್ಲದೆ, ಗೋಮಾಂಸ ತಿಂದು ಮದ್ಯಪಾನ ಮಾಡುತ್ತಿರುವುದೇ ನೀವು ದಲಿತರಾಗಿರಲು ಕಾರಣ ಎಂದು ಹೇಳುವುದು ಸಮಂಜಸವಲ್ಲ. ಗೋಮಾಂಸ ತಿಂದು ಮದ್ಯ ಸೇವಿಸುವವರೆ ಇಂದು ಜಗತ್ತನ್ನು ಆಳುತ್ತಿದ್ದಾರೆ. ಅಲ್ಲದೆ, ನೀವು ಗೋಮಾಂಸ ತಿನ್ನುತ್ತಿರುವುದು ನಿಮ್ಮ ತಪ್ಪಲ್ಲ. ನಿಮಗೆ, ಇತರರಂತೆ ಸರಿಯಾಗಿ ಸಂಪಾದಿಸುವ, ಉದಾರವಾಗಿ ತಿನ್ನುವ, ಬೀದಿಯಲ್ಲಿ ನಡೆಯುವ, ಸ್ವತಂತ್ರವಾಗಿ ಎಲ್ಲಿಯಾದರೂ ಹೋಗಿ ದುಡಿದು ಸಂಪಾದಿಸುವ ಅವಕಾಶವನ್ನು ನೀಡದಿರುವುದರಿಂದ, ಸ್ವಲ್ಪ ಹಣಕ್ಕೆ ಹೆಚ್ಚು ಆಹಾರವಾಗಬಹುದಾದ ಗೋಮಾಂಸವನ್ನು ತಿನ್ನಬೇಕಾಯಿತು.

ಗೋಮಾಂಸವನ್ನು ಅನುಮತಿಸುವ ಧರ್ಮಗಳಿಗೆ ಸೇರಿದ ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರಲ್ಲಿಯೂ ಕೆಲವರು ಸ್ವಲ್ಪ ಧಾರಾಳವಾಗಿ ಹಣ ಸಂಪಾದಿಸಲು ತೊಡಗಿದ ಕೂಡಲೇ “ನಮ್ಮಲ್ಲಿ ಗೋಮಾಂಸ ತಿನ್ನುವ ಪದ್ಧತಿ ಇಲ್ಲ” ಎಂದು ಹೇಳುತ್ತಾರೆ. ಆದ್ದರಿಂದ, ನಮ್ಮ ದೇಶದಲ್ಲಿ ದನದ ಮಾಂಸ ತಿನ್ನಲು ಬಡತನವೇ ಮುಖ್ಯ ಕಾರಣವಾಗಿದೆ. ಅಲ್ಲದೆ, ಮೇಕೆ, ಕೋಳಿ, ಮೀನು ಮತ್ತು ಹಂದಿ ಮಾಂಸಕ್ಕಿಂತ ದನದ ಮಾಂಸ ತಿನ್ನುವುದು ಅಷ್ಟುದೊಡ್ಡ ಪಾಪವಾಗಿದೆಯೇ?

ಕೋಳಿ, ಮೀನು ಮತ್ತು ಹಂದಿಗಳು ಲಾಲಾರಸ, ಹುಳುಗಳು, ಕೊಳಕು ಮತ್ತು ಮಲವನ್ನು ತಿನ್ನುತ್ತವೆ. ಹಾಗಿರುವಾಗ, ಇದನ್ನು ತಿನ್ನುವ ಉತ್ತರದ ಬ್ರಾಹ್ಮಣರಿಂದ ದಕ್ಷಿಣದ ಶೂದ್ರರವರೆಗೂ ಒಳ್ಳೆಯ ಜಾತಿ ಮತ್ತು ಸ್ಪರ್ಶಕ್ಕೆ ಅರ್ಹರಾಗಿರುವಾಗ! ಹುಲ್ಲು, ಹತ್ತಿ, ಹೊಟ್ಟು ತಿನ್ನುವ ಹಸುವಿನ ಮಾಂಸ ತಿಂದ ಮಾತ್ರಕ್ಕೆ ಮನುಷ್ಯ ಹೇಗೆ ಕೀಳಾಗುತ್ತಾನೆ? ಬದಲಾಗಿ, ದನದ ಮಾಂಸ ತಿನ್ನುವವರನ್ನು “ಮುಟ್ಟಬೇಡ; ಬೀದಿಯಲ್ಲಿ ನಡೆಯಬೇಡ; ಹೊಂಡದಲ್ಲಿ ನೀರು ಕುಡಿಯಬೇಡ; ಊರಿನೊಳಗೆ ಇರಬೇಡ” ಎನ್ನುತ್ತಾರ! ಇದು ನಿಜವಾದ ಕಾರಣವೇ ಅಲ್ಲ. ಇದು ಉದ್ದೇಶಪೂರ್ವಕವಾಗಿ, ಬೇಕೆಂದೇ ನಿಮ್ಮನ್ನು ಶೋಷಿಸಲು ಯೋಗ್ಯ ಬೇಜವಾಬ್ದಾರಿಯ ಕಾರಣವಾಗಿದೆ ಎಂಬುದು ನನ್ನ ಅಭಿಪ್ರಾಯ.

ಮದ್ಯಪಾನ ಮತ್ತು ಗೋಮಾಂಸವನ್ನು ತಿರಸ್ಕರಿಸುವುದನ್ನು ನಾನು ವಿರೋಧಿಸುತ್ತಿಲ್ಲ. ಮದ್ಯಪಾನ ಮತ್ತು ಗೋಮಾಂಸವನ್ನು ತ್ಯಜಿಸುವುದರಿಂದ ನಿಮ್ಮ ಜಾತಿ  ಮೇಲೇರುತ್ತದೆ ಎಂದು ಕೆಲವರು ಹೇಳುವ ಅಸಂಬದ್ಧ ಕಾರಣವನ್ನು ನಾನು ಒಪ್ಪಲಾರೆ. ನಿಮ್ಮ ಜಾತಿ ಮೇಲೇರಲು ಮದ್ಯ ಮತ್ತು ಗೋಮಾಂಸವನ್ನು ತ್ಯಜಿಸಿ ಎಂದು ನಾನು ಕೇಳುವುದಿಲ್ಲ. ಅದಕ್ಕಾಗಿ ನೀವು ತ್ಯಜಿಸುವ ಅಗತ್ಯವೂ ಇಲ್ಲ.

ನಮ್ಮ ದೇಶದಲ್ಲಿ, ತೆಂಗಿನಮರ ಮತ್ತು ತಾಳೆ ಮರಗಳಿಂದ ಸಿಗುವ ಸೇಂದಿ, ತಯಾರಿಸುವ ಸಾರಾಯಿ ಮತ್ತು ವಿದೇಶಗಳಿಂದ ಬರುವ ಮದ್ಯಪಾನಗಳು, ಚೆನ್ನೈ ಪ್ರಾಂತ್ಯದ 15.20 ಕೋಟಿ ರೂ.ಗಳ ವಹಿವಾಟಿನ ಎಲ್ಲ ರೀತಿಯ ಮದ್ಯಪಾನಗಳನ್ನು ನೀವೇ ಕುಡಿಯುತ್ತಿದ್ದಿರಾ? ಇದನ್ನು ಯಾರಾದರೂ ನಂಬುತ್ತಾರೆಯೇ? ಯಾರೂ ನಂಬುವುದಿಲ್ಲ. ಆದ್ದರಿಂದ ನೀವು, ಜಾತಿಯ ಉನ್ನತಿಯ ಉದ್ದೇಶದಿಂದ ಇವುಗಳನ್ನು ಬಿಡಲು ಬಯಸಿದರೆ, ಮೊದಲು ಇತರರು ಬಿಡಲಿ.

ಮದ್ಯವು ಮಾನವ ನೈತಿಕತೆಗೆ ವಿರುದ್ಧವಾಗಿದೆ ಎಂಬುದನ್ನು ನಾನು ಒಪ್ಪುತ್ತೇನೆ. ಮದ್ಯಪಾನ ನಿಷಧಕ್ಕಾಗಿ ನಾನೂ ಒಂದಿಷ್ಟು ಸೇವೆ ಸಲ್ಲಿಸಿದ್ದೇನೆ. ಆದರೆ ಜಾತಿ ಉನ್ನತಿಗಾಗಿ ಎಲ್ಲ ಜಾತಿಯವರು ಸೇವಿಸುವ ಮದ್ಯಕ್ಕೆ ಯಾವುದೇ ನಿಷೇಧವಿರುವುದಿಲ್ಲ. ಆದ್ದರಿಂದ, ಜಾತಿ ಔನ್ನತ್ಯಕ್ಕೆ ಮದ್ಯಪಾನ ನಿಶೇಧ, ಮಾಂಸಾಹಾರ ವರ್ಜನೆ ಅಗತ್ಯ ಎಂದು ಹೇಳುತ್ತಿರುವುದು ಉದ್ದೇಶಪೂರ್ವಕವಾಗಿ ಹೇಳುತ್ತಿರುವ ಸುಳ್ಳು.

ಆದರೂ, ನಿಮ್ಮಲ್ಲಿರುವ ಕೆಲವು ತಪ್ಪುಗಳನ್ನು ಹೇಳದೆ ಇರಲು ಆಗುತ್ತಿಲ್ಲ. ಅಂದರೆ, ನಿಮ್ಮ ಜಾತಿಗೆ ನೀವೇ ಅವಮಾನವನ್ನು ತಂದುಕೊಳ್ಳುತ್ತಿದ್ದೀರಿ. ಅನಗತ್ಯವಾಗಿ ಯಾರನ್ನು ಕಂಡರೂ ‘ಸ್ವಾಮಿ’ ಎಂದು ನಮಸ್ಕರಿಸುತ್ತೀರಿ. ನೀವು ಕೀಳು ಎಂಬ ಭಾವನೆ ನಿಮ್ಮ ರಕ್ತದಲ್ಲಿದೆ. ಅದು ಬದಲಾಗಬೇಕು. ನೀವು ಒಬ್ಬರನ್ನು ಕಂಡಾಗ, ಅವರ ಮತ್ತು ನಿಮ್ಮ ನಡುವಿನ ವ್ಯತ್ಯಾಸವೇನು ಎಂಬುದು ನಿಮ್ಮ ಮನಸ್ಸಿನಲ್ಲಿ ಉದ್ಭವಿಸಬೇಕು. ಸ್ವಾಭಿಮಾನದ ಬಗ್ಗೆ ಎಚ್ಚರವಿರದ ಜಾತಿಗಳನ್ನು ಬೆಳೆಸಿದರೂ ಮೇಲೇಳುವುದಿಲ್ಲ. ಅವನಿಗೆ ತಾನೊಬ್ಬ ಮನುಷ್ಯ ಎಂಬ ಭಾವನೆ ಮೊದಲು ಬರಬೇಕು.

ನೀವು ಇನ್ನು ಮುಂದೆ ಯಾರನ್ನೂ ‘ಸ್ವಾಮಿ’ ಎಂದು ಕರೆಯಬಾರದು. ಬೇಕಿದ್ದರೆ ‘ಸರ್’ ಎಂದು ಕರೆಯಿರಿ. ನೀವಾಗಿಯೇ ನುಸುಳಿಕೊಳ್ಳುವುದು, ದೂರವಾಗುವುದು ಮುಂತಾದ ದುರ್ಗುಣಗಳು ನಿಮ್ಮನ್ನು ಬಿಟ್ಟು ದೂರವಾಗಬೇಕು. ಆಗ ಮಾತ್ರ ನಿಮ್ಮನ್ನು ಸಮಾನವಾಗಿ ಪರಿಗಣಿಸಲಾಗುತ್ತದೆ.

Source: Thoughts of Periyar E.V.R-1
ತಮಿಳುನಾಡಿನ ಶಿವಗಂಗೈ ಜಿಲ್ಲೆ, ಸಿರಾವಯಲ್ ನಲ್ಲಿ ದಿನಾಂಕ: 07.04.1926 ರಂದು ಪೆರಿಯಾರ್ ಮಾಡಿದ ಪ್ರವಚನ: ದಿನಾಂಕ: 25.04.1926 ರಂದು ‘ಕುಡಿ ಅರಸು’ (Republic) ಪತ್ರಿಕೆಯಲ್ಲಿ ಪ್ರಕಟವಾಗಿದೆ.