ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
5 ಗ್ಯಾರಂಟಿ ಯೋಜನೆ Archives » Dynamic Leader
October 16, 2024
Home Posts tagged 5 ಗ್ಯಾರಂಟಿ ಯೋಜನೆ
ರಾಜಕೀಯ

ಬೆಂಗಳೂರು: ಈ ಬಾರಿ ಕರ್ನಾಟಕದಲ್ಲಿ “ಇಂಡಿಯಾ” ಮೈತ್ರಿಕೂಟದ ಕಾಂಗ್ರೆಸ್ ಅಭ್ಯರ್ಥಿಗಳಿಗೆ ತಮ್ಮ ಬೆಂಬಲ ಎಂದು “ಕರ್ನಾಟಕ ತಮಿಳರ ಸಂಘ” ತೀರ್ಮಾನಿಸಿದೆ ಎಂದು ಅದರ ಅಧ್ಯಕ್ಷ ಪ್ರಕಾಶ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕರ್ನಾಟಕದಲ್ಲಿ ಸುಮಾರು 80 ಲಕ್ಷ ತಮಿಳರಿದ್ದಾರೆ. ಬೆಂಗಳೂರು ದಕ್ಷಿಣ, ಬೆಂಗಳೂರು ಉತ್ತರ, ಬೆಂಗಳೂರು ಕೇಂದ್ರ,  ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಮೈಸೂರು, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಶಿವಮೊಗ್ಗ ಮುಂತಾದ ಜಿಲ್ಲೆಗಳಲ್ಲಿ ಮತ್ತು ಕೋಲಾರದ ಕೆಜಿಎಫ್‌ನಲ್ಲಿ ವ್ಯಾಪಕವಾಗಿ ವಾಸಿಸುತ್ತಿದ್ದಾರೆ. ಲೋಕಸಭೆ, ವಿಧಾನಸಭೆ ಚುನಾವಣೆಗಳಲ್ಲಿ ಬೆಂಗಳೂರು ದಕ್ಷಿಣ, ಬೆಂಗಳೂರು ಉತ್ತರ, ಬೆಂಗಳೂರು ಕೇಂದ್ರ, ಶಿವಮೊಗ್ಗ ಮತ್ತು ಕೋಲಾರದ ಕೆಜಿಎಫ್‌ನಲ್ಲಿ ತಮಿಳರೆ ನಿರ್ಣಾಯಕರು.

ಆದರೆ, ತಮಿಳರಿಗೆ ಇಲ್ಲಿ ಯಾವುದೇ ರಾಜಕೀಯ ಪ್ರಾತಿನಿತ್ಯ ನೀಡುವುದಿಲ್ಲ. ಇಲ್ಲಿ ಎಲ್ಲರಿಗೂ ಜಾತಿ ಆಧಾರದ ಮೇಲೆಯೆ ಅವಕಾಶ ನೀಡಲಾಗುತ್ತಿದೆ. ಆದರೆ ಬೆಂಗಳೂರಿನಲ್ಲಿ ಯಾರೊಬ್ಬರೂ ತಮ್ಮ ಜಾತಿಯ ಮತಗಳಿಂದ ಗೆದ್ದು ಬರುವುದಿಲ್ಲ. ಗೆಲ್ಲಬೇಕಾದರೆ ಅವರಿಗೆ ತಮಿಳರು ಮತ್ತು ಕೊಳಗೇರಿ ಜನರ ಮತಗಳು ಬೇಕು. ಬೆಂಗಳೂರಿನ ಕೊಳಗೇರಿ ಪ್ರದೇಶಗಳಲ್ಲಿ ವಾಸಿಸುವ ಜನರಲ್ಲಿ ಸುಮಾರು ಶೇ.60ರಷ್ಟು ಜನ ತಮಿಳು ಭಾಷಿಕರಾಗಿದ್ದಾರೆ ಎಂಬುದು ಇಲ್ಲಿ ಗಮನಾರ್ಹ.

ಕಳೆದ ರಾಜ್ಯ ಬಿಜೆಪಿ ಸರ್ಕಾರದಲ್ಲಿ, ಮತಾಂತರ ನಿಷೇಧ ಕಾಯಿದೆ, ಗೋಹತ್ಯೆ ನಿಷೇಧ ಕಾಯಿದೆ ಮುಂತಾದ ಸಂವಿಧಾನ ವಿರೋಧಿ ಕಾಯಿದೆಗಳನ್ನು ತಂದು ಅಲ್ಪಸಂಖ್ಯಾತರ ಮೇಲೆ ನಿರಂತರವಾಗಿ ದಬ್ಬಾಳಿಕೆ ಮಾಡಲಾಯಿತು. ಇದರಿಂದ ಕರ್ನಾಟಕದಲ್ಲಿ ಮುಸ್ಲಿಮರು ಮಾತ್ರವಲ್ಲ ತಮಿಳು ಕ್ರೈಸ್ತರು ಮತ್ತು ಆದಿ ದ್ರಾವಿಡ (ತಮಿಳರು) ಸಮುದಾಯವು ಕೂಡ ದಬ್ಬಾಳಿಕೆಯನ್ನು ಎದುರಿಸಬೇಕಾಯಿತು.

ಬೆಂಗಳೂರು ಮಹಾನಗರದ ಸುತ್ತಮುತ್ತ ಮತ್ತು ಕೆಜಿಎಫ್‌ನಲ್ಲಿರುವ ಕ್ರೈಸ್ತರಲ್ಲಿ ಶೇ.80ರಷ್ಟು ಜನ ತಮಿಳು ಕ್ರೈಸ್ತರಾಗಿದ್ದಾರೆ. ರಾಜ್ಯದಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ನೇತೃದ ಕಾಂಗ್ರೆಸ್ ಸರ್ಕಾರ ಬಂದಮೇಲೆ ರಾಜ್ಯದಲ್ಲಿ ಅಲ್ಪಸಂಖ್ಯಾತರು ವಿಶೇಷವಾಗಿ ತಮಿಳು ಕ್ರೈಸ್ತರು ಹಾಗೂ ಆದಿ ದ್ರಾವಿಡ ಸಮುದಾಯವು ನಿಟ್ಟುಸಿರು ಬಿಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

2024-25ನೇ ಸಾಲಿನ ಕರ್ನಾಟಕ ಬಜೆಟ್‌ನಲ್ಲಿ ಕ್ರಿಶ್ಚಿಯನ್ ಸಮುದಾಯದ ಅಭಿವೃದ್ಧಿಗೆ ರೂ.500 ಕೋಟಿ ನಿರೀಕ್ಷಿಸಲಾಗಿತ್ತು. ಆದರೆ, ರೂ.200 ಕೋಟಿಯಷ್ಟೆ ಘೋಷಣೆ ಮಾಡಲಾಗಿದೆ. ತಮಿಳು ಕ್ರೈಸ್ತರಿಗೆ ಇದರಲ್ಲೂ ಸ್ವಲ್ಪ ಮಟ್ಟಿಗೆ ಪಾಲು ದೊರೆತಿದೆ. ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿದ 5 ಗ್ಯಾರಂಟಿ (ಅನ್ನ ಭಾಗ್ಯ, ಗೃಹಲಕ್ಷ್ಮಿ, ಗೃಹ ಜ್ಯೋತಿ, ಉಚಿತ ಪ್ರಯಾಣ, ಯುವನಿಧಿ)  ಯೋಜನೆಯಿಂದ ಕರ್ನಾಟಕ ತಮಿಳರು ಹೆಚ್ಚಾಗಿ ಅನುಕೂಲ ಪಡೆದಿದ್ದಾರೆ. ವಿಶೇಷವಾಗಿ ಕೊಳಗೇರಿಗಳಲ್ಲಿ ವಾಸವಾಗಿರುವ ಅಸಂಘಟಿ ತಮಿಳು ಕೂಲಿ ಕಾರ್ಮಿಕರು ಹೆಚ್ಚಿನ ರೀತಿಯಲ್ಲಿ ಅನುಕೂಲತೆಯನ್ನು ಪಡೆದುಕೊಂಡಿದ್ದಾರೆ.

ಕೆಲವು ದಿನಗಳ ಹಿಂದೆ, ಕೇಂದ್ರ ಸಚಿವೆ ಹಾಗೂ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಅವರು, ರಾಮೇಶ್ವರಂ ಕೆಫೆಯಲ್ಲಿ ಸಂಭವಿಸಿದ ಸ್ಫೋಟದಲ್ಲಿ ಭಾಗಿಯಾಗಿರುವ ಶಂಕಿತ ಆರೋಪಿ ತಮಿಳುನಾಡಿನವರು ಎಂದು ಹೇಳಿಕೆ ನೀಡಿದ್ದರು. ಇದಕ್ಕೆ ತಮಿಳರ ಮಧ್ಯೆ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಶೋಭಾ ಕರಂದ್ಲಾಜೆ ವಿರುದ್ಧ ತಮಿಳುನಾಡಿನಲ್ಲಿ ಪ್ರಕರಣಗಳು ದಾಖಲಾದವು. ಡಿಎಂಕೆ ದೂರಿನ ಮೇರೆಗೆ, ಕರ್ನಾಟಕದಲ್ಲೂ ಚುನಾವಣಾ ಆಯೋಗ ಪ್ರಕರಣ ದಾಖಲಿಸಿದೆ. ಶೋಭಾ ಕರಂದ್ಲಾಜೆ ಅವರ ಈ ಹೇಳಿಕೆಯಿಂದ ಕರ್ನಾಟಕ ತಮಿಳರು ಆಘಾತಕ್ಕೆ ಒಳಗಾಗಿದ್ದಾರೆ.

ಸಾಮಾಜಿಕ ನ್ಯಾಯಕ್ಕಾಗಿ ಮತ್ತು ಸಮಾನ ಅವಕಾಶಕ್ಕಾಗಿ ಕಾಂಗ್ರೆಸ್ ಪಕ್ಷವು ದೇಶಾದ್ಯಂತ ಜಾತಿಗಣತಿ ನಡೆಸುವ ಆಶ್ವಾಸನೆಯನ್ನು ನೀಡಿದೆ. ಇದರಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ, ಹಿಂದುಳಿದ ಮತ್ತು ಅತೀ ಹಿಂದುಳಿದ, ಹಾಗೂ ಅಲ್ಪಸಂಖ್ಯಾತ ಸಮುದಾಯಗಳು ಶೈಕ್ಷಣಿಕವಾಗಿ, ಔದ್ಯೋಗಿಕವಾಗಿ ಹಾಗೂ ಆರ್ಥಿಕವಾಗಿ ಇನ್ನು ಹೆಚ್ಚಾಗಿ ಪ್ರಗತಿ ಹೊಂದಲು ಅನುಕೂಲವಾಗಬಹುದು; ಇದು ಸ್ವಾಗತಾರ್ಹ.

ಮೋದಿ ಸರ್ಕಾರಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲ; ಅತ್ಯಾಚಾರವೆಂಬುದು ಸಾಮಾನ್ಯವಾಗಿದೆ. ಅಲ್ಪಸಂಖ್ಯಾತರಿಗೆ ಭದ್ರತೆಯಿಲ್ಲ. ಬಿಜೆಪಿ ಸಂಸದರ ವರ್ತನೆಗೆ ಕಡಿವಾಣವಿಲ್ಲ. ಅವರ ನಾಲಿಗೆಯಲ್ಲಿ ಹಿಡಿತವಿಲ್ಲ; ಸಂವಿಧಾನ ಬದಲಿಸುವ ಬಗ್ಗೆ ಮಾತನಾಡುತ್ತಾರೆ. ರಾಜ್ಯದ, ತಮ್ಮ ಕ್ಷೇತ್ರದ ಬಗ್ಗೆ ಕಾಳಜಿಯಿಲ್ಲ; ಅವರಿಗೆ ಜನರ ಸಮಸ್ಯೆಗಳು ಅರ್ಥವಾಗುತ್ತಿಲ್ಲ. ಒಟ್ಟಾರೆಯಾಗಿ ಪ್ರಧಾನಿ ಮೋದಿಯ ಮುಂದೆ ಮಾತನಾಡುವುದೇ ಇಲ್ಲ. ಇಂತಹ ಸಂಸದರು ಮತ್ತೊಮ್ಮೆ ಬೇಕೆ?

ದಕ್ಷಿಣ ರಾಜ್ಯಗಳ ಮೇಲೆ ಹಿಂದಿ ಏರಿಕೆ, ಜಿಎಸ್‌ಟಿಯಲ್ಲಿ ತಾರತಮ್ಯ, ಉದ್ಯೋಗದ ನೇಮಕಾತಿಯಲ್ಲಿ ಉತ್ತರದವರಿಗೆ ಆದ್ಯತೆ, ಅತಿವೃಷ್ಟಿ-ಅನಾವೃಷ್ಟಿಯ ಕಾಲದಲ್ಲಿ ಅನುದಾನದ ನಿರಾಕರಣೆ, ಹಣ ನೀಡುತ್ತೇವೆ ಎಂದರೂ ರಾಜ್ಯಕ್ಕೆ ಅಕ್ಕಿ ಕೊಡದೆ “ಭಾರತ್ ರೈಸ್” ಹೆಸರಿನಲ್ಲಿ ಹಕ್ಕಿಯನ್ನು ಕಡಿಮೆ ಬೆಲೆಗೆ ನೇರವಾಗಿ ಮಾರಟ ಮಾಡುವುದು ಮುಂತಾದ ಇನ್ನು ಹಲವಾರು ಜನವಿರೋಧಿ ಕಾರ್ಯಗಳಿಂದ ಜನ ಬೇಸತ್ತು ಹೋಗಿದ್ದಾರೆ.

ಆದ್ದರಿಂದ ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಈ ಬಾರಿ ಕರ್ನಾಟಕ ತಮಿಳರ ಸಂಘವು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡುವ ತೀರ್ಮಾನವನ್ನು ಮಾಡಿದೆ. ಬೆಂಗಳೂರು ದಕ್ಷಿಣ, ಬೆಂಗಳೂರು ಉತ್ತರ, ಬೆಂಗಳೂರು ಕೇಂದ್ರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಮೈಸೂರು, ಶಿವಮೊಗ್ಗ ಮತ್ತು ಕೋಲಾರದ ಕೆಜಿಎಫ್‌ನಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ತಿಗಳನ್ನು ಬೆಂಬಲಿಸಿ ಪ್ರಚಾರ ಮಾಡುವುದರೊಂದಿಗೆ ಅವರ ಗೆಲುವಿಗೆ ಎಲ್ಲಾ ರೀತಿಯಲ್ಲೂ ಸಹಕಾರ ನೀಡುವುದೆಂದು ತೀರ್ಮಾನಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ರಾಜಕೀಯ

ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲದಿದ್ದರೆ ಐದು ಗ್ಯಾರಂಟಿಗಳು ರದ್ದಾಗುತ್ತವೆ ಎಂದು ಮಾಗಡಿ ವಿಧಾನಸಭೆ ಕ್ಷೇತ್ರದ ಶಾಸಕ ಹೆಚ್.ಸಿ.ಬಾಲಕೃಷ್ಣ ಅವರು ಹೇಳಿರುವುದು ಕಾಂಗ್ರೆಸ್ ಸರಕಾರದ ಅಸಲಿ ಆಲೋಚನೆಯನ್ನು ಬಯಲು ಮಾಡಿದೆ. ಕೊಟ್ಟ ಕೈಯ್ಯಲ್ಲೆ ಕಸಿದುಕೊಳ್ಳುವ ಹುನ್ನಾರ ಇಲ್ಲಿ ಸ್ಫುಟವಾಗಿ ಗೋಚರಿಸುತ್ತಿದೆ ಎಂದು ಯುವ ಜೆಡಿಎಸ್ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.  

ಪಕ್ಷ, ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳ ಅಪ್ಪಣೆ ಇಲ್ಲದೆ ಶಾಸಕರು ಇಂಥ ಮಹತ್ವದ ಹೇಳಿಕೆಯನ್ನು ಅದೂ ಚುನಾವಣೆ ಹೊತ್ತಿನಲ್ಲಿ ಕೊಡಲು ಸಾಧ್ಯವೇ? ಅಲ್ಲಿಗೆ ಯುದ್ಧಕ್ಕೆ ಮೊದಲೇ ಕಾಂಗ್ರೆಸ್ ಸೋಲೊಪ್ಪಿಕೊಂಡಿದೆ. ಗ್ಯಾರಂಟಿಗಳ ಸಮರ್ಪಕ ಅನುಷ್ಠಾನಕ್ಕೆ ಒದ್ದಾಡುತ್ತಿರುವ ಸರಕಾರವು, ತನ್ನ ಶಾಸಕರೊಬ್ಬರ ಮೂಲಕ ರದ್ದು ಮಾಡುತ್ತೇವೆ ಎಂದು ಹೇಳಿಸಿದೆ ಎಂದೇ ಭಾವಿಸಬೇಕಾಗುತ್ತದೆ. ಅದು ನಿಜವೂ ಹೌದು ಎನ್ನುವುದು ನನ್ನ ಭಾವನೆ ಎಂದು ಹೇಳಿದ್ದಾರೆ.

ಆ ಶಾಸಕರ ಹೇಳಿಕೆಯ ಧಾಟಿ ಹೇಗಿದೆ ಎಂದರೆ, ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿ, ಇಲ್ಲವಾದರೆ ನಿಮಗೆ ಕೊಟ್ಟಿರುವ ಗ್ಯಾರಂಟಿಗಳನ್ನು ಮುಲಾಜಿಲ್ಲದೆ ರದ್ದು ಮಾಡುತ್ತೇವೆ ಎಂದು ಬ್ಲ್ಯಾಕ್ ಮೇಲ್ ಮಾಡುವ ಧಾಟಿಯಲ್ಲಿದೆ ಇದು ಪ್ರಜಾಪ್ರಭುತ್ವಕ್ಕೆ, ಜನರ ನಂಬಿಕೆಗೆ ಎಸಗಿದ ಅಪಚಾರವಾಗಿದೆ ಎಂದು ಕಿಡಿಕಾರಿದ್ದಾರೆ.

ಆ ಶಾಸಕರು ಹಾಗೂ ಕಾಂಗ್ರೆಸ್ ಪಕ್ಷ ಅರ್ಥ ಮಾಡಿಕೊಳ್ಳಬೇಕು. ಚುನಾವಣೆಯಲ್ಲಿ ಗೆಲ್ಲುವ ಏಕೈಕ ಉದ್ದೇಶದಿಂದ ನೀವು ಪಂಚ ಗ್ಯಾರಂಟಿಗಳ ಭರವಸೆ ಕೊಟ್ಟಿದ್ದಿರಿ. ಆಮೇಲೆ ಅವುಗಳನ್ನು ಜಾರಿ ಮಾಡಿದ್ದೀರಿ. ‘ಗ್ಯಾರಂಟಿ ಕೊಡಿ, ನಿಮಗೆ ವೋಟು ಹಾಕುತ್ತೇವೆ’ ಎಂದು ಜನರೇನು ಕೇಳಿರಲಿಲ್ಲ. ವಾಸ್ತವ ಸ್ಥಿತಿ ಹೀಗಿದ್ದ ಮೇಲೆ ಈಗ ಗ್ಯಾರಂಟಿಗಳನ್ನು ಅದ್ಹೇಗೆ ವಾಪಸ್ ಪಡೆಯುತ್ತೀರಿ? ಕಾಂಗ್ರೆಸ್ ಸರಕಾರದ ವರ್ತನೆಗೆ ನನ್ನ ಹಾಗೂ ನಮ್ಮ ಪಕ್ಷದ ತೀವ್ರ ವಿರೋಧವಿದೆ ಎಂದು ಹೇಳಿದ್ದಾರೆ.  

ರಾಜ್ಯ

ಬೆಂಗಳೂರು: ನಮ್ಮ ಸರ್ಕಾರದ 5 ಗ್ಯಾರಂಟಿ ಯೋಜನೆಗಳು ಸ್ವತಂತ್ರ ಭಾರತದ ಯಾವುದೇ ಸರ್ಕಾರ ಮಾಡಿರದ ಅತ್ಯಂತ ಕ್ರಾಂತಿಕಾರಕ ಯೋಜನೆಯಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂ ರಾವ್ ಹೇಳಿದ್ದಾರೆ.

ಮಹಿಳಾ ಸಬಲೀಕರಣ ಹಾಗೂ ಬಡವರಿಗೆ ಆರ್ಥಿಕ ಸ್ವಾವಲಂಬನೆ ಕಲ್ಪಿಸುವ ಈ ಯೋಜನೆಗಳು ಬಡವರ ಪಾಲಿಗೆ ಆಶಾಕಿರಣವಾಗಿದೆ. ಈ ಯೋಜನೆಗಳನ್ನು ನಮ್ಮ ಸರ್ಕಾರ ನಿಲ್ಲಿಸುವ ಮಾತೇ ಇಲ್ಲ. ಮಾಗಡಿ ಶಾಸಕ ಬಾಲಕೃಷ್ಣ ಹೇಳಿಕೆ ಅವರ ವೈಯಕ್ತಿಕ. ಈಗಾಗಲೇ ಮುಖ್ಯಮಂತ್ರಿಗಳು ಯೋಜನೆ ನಿಲ್ಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ನಮ್ಮ ನಿಲುವು ಕೂಡ ಇದೇ ಆಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಜನರ ಸಾರ್ವತ್ರಿಕ ಕಲ್ಯಾಣದ ದೃಷ್ಟಿಯಿಂದ ಪ್ರಾರಂಭವಾದ ಗ್ಯಾರಂಟಿ ಯೋಜನೆಗಳು, ಈ ನಾಡಿನ ಜನರ ಬದುಕನ್ನು ಬದಲಾಯಿಸಿವೆ. ನಮ್ಮ ಸರ್ಕಾರ 5 ಗ್ಯಾರಂಟಿ ಯೋಜನೆಗಳನ್ನು ಇನ್ನಷ್ಟೂ ಪರಿಣಾಮಕಾರಿಯಾಗಿ ಅನುಷ್ಟಾನಕ್ಕೆ ತರಲು ಪ್ರಯತ್ನಿಸುತ್ತದೆಯೇ ಹೊರತು ಯೋಜನೆ ಸ್ಥಗಿತಗೊಳಿಸುವ ಯಾವ ಉದ್ದೇಶವೂ ಇಲ್ಲ ಎಂದು ಆಶ್ವಾಸನೆ ನೀಡಿದ್ದಾರೆ.

ನಾವು ನುಡಿದಂತೆ ನಡೆಯುವವರು ಎಂಬುದನ್ನು ಈಗಾಗಲೇ ಯೋಜನೆಯ ಅನುಷ್ಟಾನದ ಮೂಲಕ ತೋರಿಸಿದ್ದೇವೆ. ಅದೇ ರೀತಿ ಈ ಗ್ಯಾರಂಟಿ ಯೋಜನೆಗಳು ಯಾವುದೇ ವಿಘ್ನವಿಲ್ಲದಂತೆ ಮುಂದುವರೆಯುತ್ತವೆ ಎಂಬ ವಾಗ್ದಾನ ನೀಡುತ್ತೇವೆ ಎಂದು ಹೇಳಿದ್ದಾರೆ.

ರಾಜ್ಯ

ಕೊಡಗು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೊಡಗು ಜಿಲ್ಲೆಯಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಿ, ಬೃಹತ್ ಜನ ಸಾಗರವನ್ನು ಉದ್ದೇಶಿಸಿ ಮಾತನಾಡಿದರು.

“ನಾವು ತಂದ ಗ್ಯಾರಂಟಿಗಳನ್ನು ಮೋದಿಯವರು ಆಡಿಕೊಂಡರು. ಜಾರಿಗೆ ತಂದರೆ ರಾಜ್ಯ ಆರ್ಥಿಕವಾಗಿ ದಿವಾಳಿಯಾಗುತ್ತದೆ ಎಂದರು. ಈಗ ಅದೇ ಮೋದಿಯವರೇ ನಮ್ಮ ಗ್ಯಾರಂಟಿ ಕಾರ್ಯಕ್ರಮಗಳನ್ನು ಕಾಪಿ ಮಾಡುತ್ತಿದ್ದಾರೆ. ನಮ್ಮ ಸರ್ಕಾರ ಐದಕ್ಕೆ ಐದೂ ಗ್ಯಾರಂಟಿಗಳನ್ನು ಜಾರಿ ಮಾಡಿ ಆರ್ಥಿಕವಾಗಿ ಇನ್ನೂ ಸದೃಢವಾಗಿದೆ” ಎಂದು ಹೇಳಿ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಸಮರ್ಥಿಸಿಕೊಂಡರು.

“ಪ್ರಧಾನಿ ನರೇಂದ್ರ ಮೋದಿ ಅವರ ಅವಧಿಯಲ್ಲಿ ದೇಶದ ಸಾಲ 173 ಲಕ್ಷ ಕೋಟಿಗೆ ಏರಿಕೆಯಾಗಿದೆ. ಕಳೆದ 10 ವರ್ಷಗಳ ಮೋದಿ ಅವಧಿಯಲ್ಲಿ 120 ಲಕ್ಷ ಕೋಟಿ ಸಾಲ ಮಾಡಿದ್ದಾರೆ. ಕಾಂಗ್ರೆಸ್ ಏನು ಮಾಡಿದೆ ಎಂದು ಕೇಳುವ ನೈತಿಕ ಹಕ್ಕು ಬಿಜೆಪಿಗೆ ಇಲ್ಲ. ಏಕೆಂದರೆ ದೇಶದಲ್ಲಿರುವ ಎಲ್ಲಾ ಪ್ರತಿಷ್ಠಿತ ಸಂಸ್ಥೆಗಳು, ವಿಶ್ವವಿದ್ಯಾಲಯಗಳು, ಅಣೆಕಟ್ಟುಗಳು ಆಗಿದ್ದು ಬಿಜೆಪಿಯೇತರ ಕಾಂಗ್ರೆಸ್ ಮತ್ತು ಇತರೆ ಸರ್ಕಾರಗಳ ಅವಧಿಯಲ್ಲಿ ನಿರ್ಮಾಣವಾದವು. ನಿಮ್ಮ ಅವಧಿಯಲ್ಲಿ ಏನು ಮಾಡಿದ್ದೀರಿ ಮೋದಿ ಅವರೇ?” ಎಂದು ಕಿಡಿಕಾರಿದರು.

“ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿದ್ರಲ್ಲಾ ಮೋದಿಯವರೇ. ಮಾಡಿದ್ರಾ? ಎಲ್ಲಿ 20 ಕೋಟಿ ಉದ್ಯೋಗ? ಅಡುಗೆ ಅನಿಲ, ಪೆಟ್ರೋಲ್, ಡೀಸೆಲ್, ಗೊಬ್ಬರ, ಕಾಳು ಬೇಳೆ, ಅಡುಗೆ ಎಣ್ಣೆ ಬೆಲೆ ಕಡಿಮೆ ಆಗುತ್ತೆ ಅಂದ್ರಲ್ಲಾ, ಕಡಿಮೆ ಮಾಡಿದ್ರಾ ಮೋದಿಯವರೇ?” ಎಂದು ಪ್ರಧಾನಿಯನ್ನು ಪ್ರಶ್ನಿಸಿದರು.

“ದೇಶದ ಸಾಲ ತೀರಿಸಿ ಬಿಡ್ತೀನಿ ಅಂದ್ರಲ್ಲಾ ತೀರಿದೆಯಾ? ನೀವು ಬರುವ ಮೊದಲು ದೇಶದ ಸಾಲ 53 ಲಕ್ಷ ಕೋಟಿ ಸಾಲ ಇತ್ತು. ನಿಮ್ಮ ಹತ್ತು ವರ್ಷಗಳಲ್ಲಿ ದೇಶದ ಸಾಲ 173 ಲಕ್ಷ ಕೋಟಿ ಆಗಿದೆ. ನಿಮ್ಮೊಬ್ಬರ ಅವಧಿಯಲ್ಲಿ 120 ಲಕ್ಷ ಕೋಟಿ ಮಾಡಿದ್ದೀರಿ. ಇದೆನಾ ನಿಮ್ಮ ಸಾಧನೆ? ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ ಎಲ್ಲಾದರೂ ಜಾರಿಯಾಗಿದೆಯಾ? ಸಣ್ಣ ಉದಾಹರಣೆ ಇದ್ದರೆ ಹೇಳಿ. ಅಚ್ಛೇ ದಿನ್ ಆಯೆಗಾ ಎಂದಿರಿ? ಕಹಾಂ ಹೈ ಅಚ್ಛೆ ದಿನ್ ಮೋದೀಜಿ?” ಎಂದು ವ್ಯಂಗ್ಯವಾಡಿದರು.

“ಮಂಡಲ್ ಕಮಿಷನ್ ವರದಿ ಹಿಂದುಳಿದ ವರ್ಗಗಳ ಏಳಿಗೆಗಾಗಿ ಶ್ರಮಿಸಿದ್ದು ಪ್ರಧಾನಿಗಳಾಗಿದ್ದ ವಿ.ಪಿ.ಸಿಂಗ್ ಮತ್ತು ನರಸಿಂಹರಾಯರು. ನಿಮ್ಮ‌ಸಾಧನೆ ಏನು? ಈ ಬಗ್ಗೆ ಯಾವ ಕಾರ್ಯಕ್ರಮಗಳನ್ನು ನಿಮ್ಮ ಅವಧಿಯಲ್ಲಿ ಕೊಟ್ಟಿದ್ದೀರಿ?” ಎಂದು ಮೋದಿಯನ್ನು ಪ್ರಶ್ನಿಸಿದರು.

“ಬಿಜೆಪಿಯವರು ತಮ್ಮ ಪ್ರಣಾಳಿಕೆಗಳಲ್ಲಿ ಕೊಟ್ಟ ಆಶ್ವಾಸನೆಗಳಲ್ಲಿ ಶೇ.10 ರಷ್ಟನ್ನೂ ಜಾರಿ ಮಾಡಲೇ ಇಲ್ಲ. ನಾವು ನುಡಿದಂತೆ ನಡೆದಿದ್ದೇವೆ. ಕೊಟ್ಟ ಮಾತಿನಂತೆ ನಡೆದುಕೊಂಡು ಜನರ ಋಣ ತೀರಿಸಿದ್ದೇವೆ. ಇದನ್ನು ಕಾರ್ಯಕರ್ತರು ಮನೆ ಮನೆಗೆ ತಲುಪಿಸಬೇಕು. ನಾಡಿನ ಯುವಕರಿಗೆ ಉದ್ಯೋಗ ನೀಡದೆ, ಕೇವಲ ಯುವ ಸಮೂಹವನ್ನು, ವಿದ್ಯಾರ್ಥಿ ಸಮೂಹವನ್ನು ಭಾವನಾತ್ಮಕವಾಗಿ ಕೆರಳಿಸಿ ಅವರ ಬದುಕಿನ ಜೊತೆ ಚೆಲ್ಲಾಟ ಆಡಿದ್ದಾರೆ. ಈ ಕಾರಣಕ್ಕಾಗಿ ಜನತೆ ಬಿಜೆಪಿಯನ್ನು ತಿರಸ್ಕರಿಸಬೇಕು” ಎಂದು ಜನರಲ್ಲಿ ಮನವಿ ಮಾಡಿದರು.

ರಾಜಕೀಯ

ಬೆಂಗಳೂರು: ಬಿಜೆಪಿ ಪಕ್ಷದವರು ಅಧಿವೇಶನದಲ್ಲಿ ನಮ್ಮ ಗ್ಯಾರಂಟಿ ಯೋಜನೆಗಳ ಬಗ್ಗೆ ಅನಗತ್ಯವಾಗಿ ಗದ್ದಲ ಎಬ್ಬಿಸುತ್ತಿದ್ದಾರೆ. ಈಗಾಗಲೇ ನಮ್ಮ ಸರ್ಕಾರ, ನಾವು ಕೊಟ್ಟ 5 ಗ್ಯಾರಂಟಿಗಳ ಪೈಕಿ 3 ಗ್ಯಾರಂಟಿ ಅನುಷ್ಠಾನಕ್ಕೆ ತಂದಿದೆ. ಗೃಹಲಕ್ಷ್ಮಿ ಯೋಜನೆ ಆಗಸ್ಟ್ 15 ರಿಂದ ಚಾಲನೆಯಾಗಲಿದೆ‌. ಯುವನಿಧಿ ಯೋಜನೆಗೂ ಚಾಲನೆ ದೊರೆಯಲಿದೆ. ಹೀಗಿರುವಾಗ ಬಿಜೆಪಿಯವರಿಗೆ ಏನು ಸಮಸ್ಯೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಕೇಳಿದ್ದಾರೆ.

ನಾವು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದರೂ ಬಿಜೆಪಿ ಸದನದ ಒಳಗೆ ಹಾಗೂ ಹೊರಗೆ ಪ್ರತಿಭಟನೆ ನಡೆಸುತ್ತಿರುವುದು ಹತಾಶೆಯಿಂದಲೇ ಹೊರತು ಮತ್ಯಾವ ಕಾರಣದಿಂದಲೂ ಅಲ್ಲ. ನಮ್ಮ ಗ್ಯಾರಂಟಿ ಯೋಜನೆಗಳ ಜನಪ್ರಿಯತೆ ಬಿಜೆಪಿ ನಾಯಕರ ನಿದ್ದೆ ಹಾಗೂ ನೆಮ್ಮದಿ ಕೆಡಿಸಿದೆ. ಹಾಗಾಗಿ ಬಿಜೆಪಿ ನಾಯಕರ ಪ್ರತಿಭಟನೆ ಅತೃಪ್ತ ಆತ್ಮಗಳ ವೃಥಾ ಆಲಾಪದಂತೆ ಕಾಣುತ್ತಿದೆ.

ಬಿಜೆಪಿಯವರು ನಮ್ಮ ಗ್ಯಾರಂಟಿ ಯೋಜನೆಗಳ ಬಗ್ಗೆ ಅಧಿವೇಶನದಲ್ಲಿ ಅಂಗಿ ಹರಿದುಕೊಳ್ಳುತ್ತಿದ್ದಾರೆ, ಕೇಂದ್ರ ಅಕ್ಕಿ ಕೊಡದ ಬಗ್ಗೆ ಚಕಾರ ಎತ್ತಿದ್ದರೆ ರಾಜ್ಯದ ಜನ ಭೇಷ್ ಎನ್ನುತ್ತಿದ್ದರು. ಕೇಂದ್ರ ಸರ್ಕಾರ ಅಕ್ಕಿ ಕೊಡದಿದ್ದಾಗ ರಾಜ್ಯ ಬಿಜೆಪಿಯವರ ನಾಲಗೆಯ‌ ಪಸೆ ಆರಿ ಹೋಗಿತ್ತು. ಈಗ ಅಕ್ಕಿ ಕೊಡಿ ಎನ್ನುತ್ತಿದ್ದಾರೆ ಇವರಿಗೆ ಯಾವ ನೈತಿಕತೆ ಇದೆ? ಎಂದು ಪ್ರಶ್ನಿಸಿದ್ದಾರೆ.

ರಾಜಕೀಯ

ಬೆಂಗಳೂರು: ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್ ಪಕ್ಷ ನೀಡಿದ್ದ ಗೃಹ ಜ್ಯೋತಿ, ಗೃಹ ಲಕ್ಷ್ಮಿ, ಅನ್ನ ಭಾಗ್ಯ, ಯುವ ನಿಧಿ, ಮಹಿಳೆಯರಿಗೆ ಸರ್ಕಾರಿ ಬಸ್ ಸಂಚಾರ ಉಚಿತ ಮುಂತಾದ  5 ಗ್ಯಾರಂಟಿ ಯೋಜನೆಗಳ ಜಾರಿ ಹಿನ್ನೆಲೆಯಲ್ಲಿ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರ್ಕಾರದ ಎಲ್ಲಾ ಸಚಿವರುಗಳು ಮತ್ತು ಸಂಬಂಧಪಟ್ಟ ಇಲಾಖೆಗಳ ಹಿರಿಯ ಅಧಿಕಾರಿಗಳ ಜತೆ ಮಹತ್ವದ ಸಭೆ ನಡೆಸಿದರು.

ನಂತರ ಈ ವಿಚಾರದ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು, “ನಾವು ಚುನಾವಣಾ ಪೂರ್ವದಲ್ಲಿ ಭರವಸೆ ನೀಡಿದ್ದ ನಮ್ಮ ಎಲ್ಲಾ 5 ಗ್ಯಾರೆಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಲು ತೀರ್ಮಾನಿಸಿದ್ದೇವೆ. ಜೂನ್ 2 ರಂದು ನಡೆಯಲಿರುವ ಸಚಿವ ಸಂಪುಟದ ಸಭೆಯಲ್ಲಿ ಚರ್ಚಿಸಿ ಅವುಗಳನ್ನು ಜಾರಿಗೆ ಕೊಡುತ್ತೇವೆ” ಎಂದು ಭರವಸೆಯ ಮಾತುಗಳನ್ನು ಆಡಿದರು.

—–

ರಾಗಿ ಬೆಳೆಗಾರರು ಮತ್ತು ರೈತ ಸಮುದಾಯದ ಅಹವಾಲುಗಳನ್ನು ಆಲಿಸಿದ ಮುಖ್ಯಮಂತ್ರಿ: ಕ್ರಮಕ್ಕೆ ಅಧಿಕಾರಿಗಳಿಗೆ ಸೂಚನೆ!

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗೃಹ ಕಚೇರಿ ಕೃಷ್ಣಾದಲ್ಲಿ ರಾಗಿ ಬೆಳೆಗಾರರು ಮತ್ತು ರೈತ ಸಮುದಾಯದ ಅಹವಾಲುಗಳನ್ನು ಆಲಿಸಿ, ತಾಂತ್ರಿಕ ಸಮಸ್ಯೆಯನ್ನು ಸರಿಪಡಿಸುವ ಮೂಲಕ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ರೈತರಿಗೆ ಸಮರ್ಪಕವಾಗಿ ಹಣ ಪಾವತಿಯಾಗುವಂತೆ ಕ್ರಮಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.