ನಮಗೆ ಜನರ ‘ಮತ’ಕ್ಕಿಂತ, ಜನರ ‘ಹಿತ’ ಮುಖ್ಯ: ಮಾಗಡಿ ಶಾಸಕ ಬಾಲಕೃಷ್ಣ ಹೇಳಿಕೆ ಅವರ ವೈಯಕ್ತಿಕ! ದಿನೇಶ್ ಗುಂಡೂ ರಾವ್
ಬೆಂಗಳೂರು: ನಮ್ಮ ಸರ್ಕಾರದ 5 ಗ್ಯಾರಂಟಿ ಯೋಜನೆಗಳು ಸ್ವತಂತ್ರ ಭಾರತದ ಯಾವುದೇ ಸರ್ಕಾರ ಮಾಡಿರದ ಅತ್ಯಂತ ಕ್ರಾಂತಿಕಾರಕ ಯೋಜನೆಯಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂ ರಾವ್ ಹೇಳಿದ್ದಾರೆ.
ಮಹಿಳಾ ಸಬಲೀಕರಣ ಹಾಗೂ ಬಡವರಿಗೆ ಆರ್ಥಿಕ ಸ್ವಾವಲಂಬನೆ ಕಲ್ಪಿಸುವ ಈ ಯೋಜನೆಗಳು ಬಡವರ ಪಾಲಿಗೆ ಆಶಾಕಿರಣವಾಗಿದೆ. ಈ ಯೋಜನೆಗಳನ್ನು ನಮ್ಮ ಸರ್ಕಾರ ನಿಲ್ಲಿಸುವ ಮಾತೇ ಇಲ್ಲ. ಮಾಗಡಿ ಶಾಸಕ ಬಾಲಕೃಷ್ಣ ಹೇಳಿಕೆ ಅವರ ವೈಯಕ್ತಿಕ. ಈಗಾಗಲೇ ಮುಖ್ಯಮಂತ್ರಿಗಳು ಯೋಜನೆ ನಿಲ್ಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ನಮ್ಮ ನಿಲುವು ಕೂಡ ಇದೇ ಆಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಜನರ ಸಾರ್ವತ್ರಿಕ ಕಲ್ಯಾಣದ ದೃಷ್ಟಿಯಿಂದ ಪ್ರಾರಂಭವಾದ ಗ್ಯಾರಂಟಿ ಯೋಜನೆಗಳು, ಈ ನಾಡಿನ ಜನರ ಬದುಕನ್ನು ಬದಲಾಯಿಸಿವೆ. ನಮ್ಮ ಸರ್ಕಾರ 5 ಗ್ಯಾರಂಟಿ ಯೋಜನೆಗಳನ್ನು ಇನ್ನಷ್ಟೂ ಪರಿಣಾಮಕಾರಿಯಾಗಿ ಅನುಷ್ಟಾನಕ್ಕೆ ತರಲು ಪ್ರಯತ್ನಿಸುತ್ತದೆಯೇ ಹೊರತು ಯೋಜನೆ ಸ್ಥಗಿತಗೊಳಿಸುವ ಯಾವ ಉದ್ದೇಶವೂ ಇಲ್ಲ ಎಂದು ಆಶ್ವಾಸನೆ ನೀಡಿದ್ದಾರೆ.
ನಾವು ನುಡಿದಂತೆ ನಡೆಯುವವರು ಎಂಬುದನ್ನು ಈಗಾಗಲೇ ಯೋಜನೆಯ ಅನುಷ್ಟಾನದ ಮೂಲಕ ತೋರಿಸಿದ್ದೇವೆ. ಅದೇ ರೀತಿ ಈ ಗ್ಯಾರಂಟಿ ಯೋಜನೆಗಳು ಯಾವುದೇ ವಿಘ್ನವಿಲ್ಲದಂತೆ ಮುಂದುವರೆಯುತ್ತವೆ ಎಂಬ ವಾಗ್ದಾನ ನೀಡುತ್ತೇವೆ ಎಂದು ಹೇಳಿದ್ದಾರೆ.