ಬೆಂಗಳೂರು: ಬೆಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಹಾಗೂ ಬೆಂಗಳೂರು ಜಿಲ್ಲೆಗೆ ಸೇರಿರುವ ಒಟ್ಟು 32 ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ಕಾರ್ಯವು ನಗರದ 5 ಸ್ಥಳಗಳಲ್ಲಿ ಏರ್ಪಡಿಸಲಾಗಿದ್ದು, ಮತ ಎಣಿಕೆ ಸ್ಥಳಗಳಲ್ಲಿ ಹಾಗೂ ನಗರ ವ್ಯಾಪ್ತಿಯಲ್ಲಿ ಕಾನೂನು ಸುವ್ಯವಸ್ಥೆ ನಿರ್ವಹಣೆ ದೃಷ್ಠಿಯಿಂದ ಸಕಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಿದೆ.
1. ಮತ ಎಣಿಕೆ ಕೇಂದ್ರ: ಮೌಂಟ್ ಕಾರ್ಮಲ್ ಕಾಲೇಜು, ವಸಂತ ನಗರ. ವಿಧಾನಭಾ ಕ್ಷೇತ್ರಗಳು: ಕೆ.ಆರ್.ಪುರ, ಮಹಾಲಕ್ಷ್ಮಿ ಲೇಔಟ್, ಮಲ್ಲೇಶ್ವರಂ, ಹೆಬ್ಬಾಳ, ಪುಲಿಕೇಶಿನಗರ, ಸರ್ವಜ್ಞನಗರ ಹಾಗೂ ಸಿ.ವಿ.ರಾಮನ್ ನಗರ. ಉಸ್ತುವಾರಿ ಅಧಿಕಾರಿಗಳು: ಡಿಸಿಪಿ ಪೂರ್ವ ಮತ್ತು ಡಿಸಿಪಿ ಕೇಂದ್ರ ವಿಭಾಗ.
2. ಮತ ಎಣಿಕೆ ಕೇಂದ್ರ: ಸೆಂಟ್ ಜೋಷಫ್ ಇಂಡಿಯನ್ ಹೈಸ್ಕೂಲ್. ವಿಧಾನಭಾ ಕ್ಷೇತ್ರಗಳು: ಆನೇಕಲ್, ಬೆಂಗಳೂರು ದಕ್ಷಿಣ, ಮಹದೇವಪುರ, ಬ್ಯಾಟರಾಯನಪುರ, ಯಲಹಂಕ ಹಾಗೂ ದಾಸರಹಳ್ಳಿ. ಉಸ್ತುವಾರಿ ಅಧಿಕಾರಿಗಳು: ಡಿಸಿಪಿ ಅಪರಾಧ ಮತ್ತು ಡಿಸಿಪಿ ವೈಟ್ ಫೀಲ್ಡ್ ವಿಭಾಗ.
3. ಮತ ಎಣಿಕೆ ಕೇಂದ್ರ: ಬಿಎಂಎಸ್ ಮಹಿಳಾ ಕಾಲೇಜು, ಬಸವನಗುಡಿ. ವಿಧಾನಭಾ ಕ್ಷೇತ್ರಗಳು: ಶಾಂತಿನಗರ, ಗಾಂಧಿನಗರ, ರಾಜಾಜಿನಗರ, ಚಿಕ್ಕಪೇಟೆ, ಚಾಮರಾಜಪೇಟೆ, ಆರ್.ಆರ್.ನಗರ ಹಾಗೂ ಶಿವಾಜಿನಗರ. ಉಸ್ತುವಾರಿ ಅಧಿಕಾರಿಗಳು: ಡಿಸಿಪಿ ದಕ್ಷಿಣ ವಿಭಾಗ ಮತ್ತು ಡಿಸಿಪಿ ಕಮಾಂಡ್ ಸೆಂಟರ್.
4. ಮತ ಎಣಿಕೆ ಕೇಂದ್ರ: ಎಸ್.ಎಸ್.ಎಂ.ಆರ್.ವಿ ಕಾಲೇಜು, ತಿಲಕನಗರ. ವಿಧಾನಭಾ ಕ್ಷೇತ್ರಗಳು: ಪದ್ಮನಾಭ ನಗರ, ಗೋವಿಂದರಾಜನಗರ, ವಿಜಯನಗರ, ಜಯನಗರ, ಬಿಟಿಎಂ ಲೇಔಟ್, ಬೊಮ್ಮನಹಳ್ಳಿ ಹಾಗೂ ಬಸವನಗುಡಿ. ಉಸ್ತುವಾರಿ ಅಧಿಕಾರಿಗಳು: ಡಿಸಿಪಿ ಆಗ್ನೇಯ ವಿಭಾಗ ಮತ್ತು ಡಿಸಿಪಿ ಸಿಎಆರ್ ದಕ್ಷಿಣ.
5. ಮತ ಎಣಿಕೆ ಕೇಂದ್ರ: ಆಕಾಶ್ ಇಂಟರ್ ನ್ಯಾಷನಲ್ ಸ್ಕೂಲ್, ದೇವನಹಳ್ಳಿ. ವಿಧಾನಭಾ ಕ್ಷೇತ್ರಗಳು: ಹೊಸಕೋಟೆ, ದೇವನಹಳ್ಳಿ, ದೊಡ್ಡಬಳ್ಳಾಪುರ ಹಾಗೂ ನೆಲಮಂಗಲ. ಉಸ್ತುವಾರಿ ಅಧಿಕಾರಿಗಳು: ಡಿಸಿಪಿ ಈಶಾನ್ಯ ವಿಭಾಗ ಮತ್ತು ಡಿಸಿಪಿ ವಿವಿಐಪಿ ಭದ್ರತೆ.
ಮತ ಎಣಿಕೆ ದಿನದಂದು ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗರೂಕತಾ ಕ್ರಮವಾಗಿ ಭಾರತೀಯ ದಂಡ ಪ್ರಕ್ರಿಯ ಸಂಹಿತೆ 1973ರ ಕಲಂ 144 ಮತ್ತು ಪ್ರಜಾಪ್ರತಿನಿಧಿ ಕಾಯ್ದೆ 1951ರ ಉಪಬಂಧಗಳು ಅನ್ವಯವಾಗುವಂತೆ ದಿನಾಂಕ: 13-05-2023ರ ಮಧ್ಯರಾತ್ರಿ 12 ಗಂಟೆಯವರೆಗೆ ಬೆಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಪ್ರತಿಬಂಧಕಾಜ್ಞೆಯನ್ನು ವಿಧಿಸಿರುವುದರ ಜೊತೆಗೆ ಮೇಲ್ಕಂಡ ಅವಧಿಯಲ್ಲಿ ನಗರದಾದ್ಯಂತ ಮದ್ಯ ಮಾರಾಟವನ್ನು ನಿಷೇಧಿಸಲಾಗಿರುತ್ತದೆ.
ಮೇಲ್ಕಂಡ ಮುಂಜಾಗರೂಕತಾ ಕ್ರಮಗಳ ಜೊತೆಗೆ ಚುನಾವಣಾ ಫಲಿತಾಂಶವು ಪ್ರಕಟವಾದ ನಂತರ ದಿನಾಂಕ: 13-05-2023ರ ಮುಂಜಾಣೆಯಿಂದ ದಿನಾಂಕ: 14-05-2023ರ ಬೆಳಗ್ಗೆವರೆಗೆ ಸಶಸ್ತ್ರ ದಳವನ್ನು ಸನ್ನದ್ಧ ಸ್ಥಿತಿಯಲ್ಲಿ ಇರುವಂತೆ ಕ್ರಮ ವಹಿಸಲಾಗಿರುತ್ತದೆ. ಈ ಬಂದೋಬಸ್ತ್ ಕರ್ತವ್ಯಕ್ಕೆ ಅಪರ ಪೊಲೀಸ್ ಅಯ್ಯುಕ್ತರು, ಪೂರ್ವ ಮತ್ತು ಪಶ್ಚಿಮ ರವರ ನೇರ ಉಸ್ತುವಾರಿಯಲ್ಲಿ 10 ಡಿಸಿಪಿ, 15 ಎಸಿಪಿ, 38 ಪೊಲೀಸ್ ಇನ್ಸ್ ಪೆಕ್ಟರ್, 250 ಪಿಎಸ್ಐ 1200 ಸಿಬ್ಬಂಧಿಗಳ ಜೊತೆಗೆ 12 ಕೇಂದ್ರಿಯ ಸಿ.ಎ.ಪಿ.ಎಫ್ ತುಕಡಿ, 36 ಕೆ.ಎಸ್.ಆರ್.ಪಿ / ಸಿಎಆರ್ ತುಕಡಿಗಳನ್ನು ನಿಯೋಜಿಸಲಾಗಿದೆ. ಅಲ್ಲದೇ ಸರಹದ್ದಿನಲ್ಲಿ ವಿಶೇಷ ಗಸ್ತು ನೇಮಕ ಮಾಡಿದ್ದು, ಪ್ರತಿಯೊಂದು ವಿಭಾಗದ ಉಸ್ತುವಾರಿಗೆ ಒಬ್ಬರು ಸಹಾಯಕ ಪೊಲೀಸ್ ಆಯುಕ್ತರನ್ನು ನಿಯೋಜಿಸಲಾಗಿದೆ.