ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
Eknath-Shinde Archives » Dynamic Leader
November 23, 2024
Home Posts tagged Eknath-Shinde
ರಾಜಕೀಯ

ಡಿ.ಸಿ.ಪ್ರಕಾಶ್ ಸಂಪಾದಕರು

ಭಾರತದ ಉದ್ಯಮಿ ಅದಾನಿಯು ವಂಚನೆ ಮತ್ತು ಅವ್ಯವಹಾರದ ಆರೋಪಕ್ಕೆ ಒಳಗಾಗಿ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಹಿನ್ನಲೆಯಲ್ಲಿ ಎನ್‌ಸಿಪಿ ನಾಯಕ ಶರದ್ ಪವಾರ್ ಅವರನ್ನು ಏಕೆ ಭೇಟಿಯಾದರು?

‘ಇನ್ನು 15 ದಿನಗಳಲ್ಲಿ ಮಹಾರಾಷ್ಟ್ರದಲ್ಲಿ ಎರಡು ಬಾಂಬ್‌ಗಳು ಸ್ಫೋಟಗೊಳ್ಳಲಿದೆ’ ಎಂದು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ನಾಯಕ ಶರದ್ ಪವಾರ್ ಪುತ್ರಿ ಹಾಗೂ ಸಂಸದೆ ಸುಪ್ರಿಯಾ ಸುಳೆ ಹೇಳಿದ್ದಾರೆ. ಈ ಹಿನ್ನಲೆಯಲ್ಲಿ ಉದ್ಯಮಿ ಅಧಾನಿ, ಶರದ್ ಪವಾರ್ ಅವರನ್ನು ಭೇಟಿ ಮಾಡಿದ್ದಾರೆ. ಗೌತಮ್ ಅದಾನಿಯು ಮುಂಬೈನಲ್ಲಿರುವ ಶರದ್ ಪವಾರ್ ಅವರ ‘ಸಿಲ್ವರ್ ಓಕ್’ ನಿವಾಸಕ್ಕೆ ಏಪ್ರಿಲ್ 20 ರಂದು ಭೇಟಿ ನೀಡಿದರು. ಅಲ್ಲಿ ಶರದ್ ಪವಾರ್ ಮತ್ತು ಅದಾನಿ ಭೇಟಿ ಸುಮಾರು ಎರಡು ಗಂಟೆಗಳ ಕಾಲ ನಡೆಯಿತು ಎಂದು ವರದಿಗಳು ಹೇಳುತ್ತವೆ.

ಸುಪ್ರಿಯಾ ಸುಳೆ

ಶರದ್ ಪವಾರ್ ಅವರ ಸಂಬಂಧಿ ಅಜಿತ್ ಪವಾರ್, ಬಿಜೆಪಿಯೊಂದಿಗೆ ಕೈಜೋಡಿಸುತ್ತಾರೆ ಎಂಬ ಊಹಾಪೋಹದ ಸುದ್ಧಿಗಳು ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿರುವ ಈ ವೇಳೆಯಲ್ಲಿ, ಇಂತಹ ಭೇಟಿ ನಡೆದಿರುವುದು ಹೆಚ್ಚು ಮಹತ್ವವನ್ನು ಪಡೆದುಕೊಂಡಿದೆ. ಅಲ್ಲದೆ, ಈ ಭೇಟಿ ಹಲವು ಅನುಮಾನಗಳಿಗೂ ಎಡೆಮಾಡಿಕೊಟ್ಟಿದೆ.

ಶರದ್ ಪವಾರ್ ಮತ್ತು ಅದಾನಿ

ಅದಾನಿ ಸಮೂಹವು ವಿವಿಧ ಅಕ್ರಮಗಳಲ್ಲಿ ಭಾಗಿಯಾಗಿದೆ ಎಂದು ಹಿಂಡೆನ್‌ಬರ್ಗ್ ವರದಿಯು ಪುರಾವೆಗಳೊಂದಿಗೆ ಆರೋಪಿಸಿತ್ತು. ಈ ವಿಚಾರವಾಗಿ ಕಾಂಗ್ರೆಸ್ ಸೇರಿದಂತೆ ಬಹುತೇಕ ವಿರೋಧ ಪಕ್ಷಗಳು ಅದಾನಿಯನ್ನು ಕಟುವಾಗಿ ಟೀಕಿಸಿದವು. ಉದ್ಯಮಿ ಅದಾನಿ ಮತ್ತು ಪ್ರಧಾನಿ ಮೋದಿ ನಡುವಿನ ಸಂಪರ್ಕದ ಬಗ್ಗೆ ರಾಹುಲ್ ಗಾಂಧಿ ಸಂಸತ್ತಿನಲ್ಲಿ ಪ್ರಶ್ನೆ ಎತ್ತಿದರು. ಮೋದಿ ಮತ್ತು ಅದಾನಿ ಒಟ್ಟಿಗೆ ವಿಮಾನದಲ್ಲಿ ಪ್ರಯಾಣಿಸುತ್ತಿರುವ ಫೋಟೋವನ್ನೂ ರಾಹುಲ್ ಗಾಂಧಿ ಸಂಸತ್ತಿನಲ್ಲಿ ತೋರಿಸಿದರು. ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ಅದಾನಿಯನ್ನು ತೀವ್ರವಾಗಿ ವಿರೋಧಿಸುತ್ತಿದ್ದರೂ ಶರದ್ ಪವಾರ್ ಅದಾನಿಯನ್ನು ಬೆಂಬಲಿಸಿಕೊಂಡು ಬಂದರು.

ರಾಹುಲ್ ಗಾಂಧಿ

ಅದಾನಿ ವಿಚಾರದಲ್ಲಿ ಜಂಟಿ ಸಂಸದೀಯ ಸಮಿತಿ ರಚಿಸಿ ತನಿಖೆ ನಡೆಸಬೇಕು ಎಂಬುದು ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳ ಪ್ರಮುಖ ಬೇಡಿಕೆಯಾಗಿತ್ತು. ಆದರೆ ‘ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣ ನಡೆಯುತ್ತಿರುವುದರಿಂದ ಸಂಸದೀಯ ಜಂಟಿ ಸಮಿತಿಯ ತನಿಖೆ ಅಗತ್ಯವಿಲ್ಲ’ ಎಂದು ಶರದ್ ಪವಾರ್ ಹೇಳಿದರು. ಮಹಾರಾಷ್ಟ್ರದಲ್ಲಿ ಶರದ್ ಪವಾರ್ ನೇತೃತ್ವದ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷವು ಕಾಂಗ್ರೆಸ್ ಮತ್ತು ಉದ್ಧವ್ ಠಾಕ್ರೆ ಅವರ ಶಿವಸೇನೆಯೊಂದಿಗೆ ಮೈತ್ರಿ ಮಾಡಿಕೊಂಡಿದೆ. ಈ ಹಿನ್ನೆಲೆಯಲ್ಲಿ ಶರದ್ ಪವಾರ್ ಹಾಗೂ ಗೌತಮ್ ಅದಾನಿ ಭೇಟಿ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.

ಮಹುವಾ ಮೊಯಿತ್ರಾ

ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ಅವರು ಅದಾನಿ ವಿಚಾರವನ್ನು ತೀವ್ರವಾಗಿ ಟೀಕಿಸಿಕೊಂಡು ಬರುತ್ತಿದ್ದಾರೆ. ಕೆಲ ದಿನಗಳ ಹಿಂದೆ ಅವರು ನೀಡಿದ ಮಾಹಿತಿಯೊಂದು ರಾಜಕೀಯ ವಲಯದಲ್ಲಿ ಭಾರೀ ಸಂಚಲನ ಮೂಡಿಸಿತು. ಅದೇನೆಂದರೆ, ‘ಗೌತಮ್ ಅಧಾನಿ ನನ್ನನ್ನು ಮತ್ತು ಇತರ ಕೆಲವರನ್ನು ಸ್ನೇಹಿತರ ಮೂಲಕ ಸಂಪರ್ಕಿಸಲು ಪ್ರಯತ್ನಿಸಿದರು. ಆದರೆ ಅದು ಸಾಧ್ಯವಾಗಲಿಲ್ಲ’ ಎಂದು ಮಹುವಾ ಮೊಯಿತ್ರಾ ಹೇಳಿದರು.

ಆ ಕೆಲವರಲ್ಲಿ ಶರದ್ ಪವಾರ್ ಕೂಡ ಒಬ್ಬರು ಎಂಬುದು ಈ ಭೇಟಿಯ ಮೂಲಕ ಬಹಿರಂಗವಾಗಿದೆ. ಅವರ ಭೇಟಿಯ ನಂತರ ಪ್ರತಿಕ್ರಿಯಿಸಿದ ಮಹುವಾ ಮೊಯಿತ್ರಾ, ‘ಯಾವುದೇ ರಾಜಕಾರಣಿ ಉದ್ಯಮಿ ಅದಾನಿಯನ್ನು ಭೇಟಿ ಮಾಡಬಾರದು’ ಎಂದು ಹೇಳಿದರು. ‘ಅದಾನಿ ಜತೆ ಮುಖಾಮುಖಿಯಾಗಿ ಚರ್ಚಿಸಲು ಏನೂ ಇಲ್ಲ. ಹಿಂಡೆನ್‌ಬರ್ಗ್ ವರದಿಯ ಆರೋಪಗಳ ಆಧಾರದ ಮೇಲೆ ಸರ್ಕಾರ ಕ್ರಮ ಕೈಗೊಳ್ಳೂವ ತನಕ ಯಾವುದೇ ರಾಜಕಾರಣಿ ಅದಾನಿಯನ್ನು ಭೇಟಿ ಮಾಡಬಾರದು’ ಎಂದು ಮಹುವಾ ಮೊಯಿತ್ರಾ ಹೇಳುತ್ತಾರೆ. ಮತ್ತು ಶರದ್ ಪವಾರ್ ಅವರು ಅದಾನಿಯನ್ನು ಭೇಟಿಯಾಗಿರುವುದನ್ನೂ ಟೀಕಿಸಿದ್ದಾರೆ.

ಉದ್ಧವ್ ಠಾಕ್ರೆ

ನವೆಂಬರ್ 2019ರಲ್ಲಿ ಶಿವಸೇನೆ ನಾಯಕ ಉದ್ಧವ್ ಠಾಕ್ರೆ ಮಹಾರಾಷ್ಟ್ರದ ಮುಖ್ಯಮಂತ್ರಿಯಾದರು. ಕಾಂಗ್ರೆಸ್ ಮತ್ತು ಶರದ್ ಪವಾರ್ ಅವರ ರಾಷ್ಟ್ರೀಯವಾದಿ ಕಾಂಗ್ರೆಸ್ ಸೇರಿದಂತೆ ಪಕ್ಷಗಳನ್ನು ಒಳಗೊಂಡ ಮಹಾ ವಿಕಾಸ್ ಅಗಾಡಿ ಸಮ್ಮಿಶ್ರ ಸರ್ಕಾರ ಅಲ್ಲಿ ನಡೆಯಿತು. ಇದ್ದಕ್ಕಿದ್ದಂತೆ ಶಿವಸೇನೆಯಿಂದ ಬೇರ್ಪಟ್ಟ ಏಕನಾಥ್ ಶಿಂಧೆ ರಾಜ್ಯದ ಮುಖ್ಯಮಂತ್ರಿಯಾದರು. ಆಡಳಿತ ಬದಲಾವಣೆಗೂ ಮುನ್ನ ಅದಾನಿ ಮತ್ತು ಶರದ್ ಪವಾರ್ ಭೇಟಿ ನಡೆಯಿತು ಎಂಬುದು ಗಮನಾರ್ಹ.

ಅಜಿತ್ ಪವಾರ್

ಪ್ರಸ್ತುತ ಉದ್ಧವ್ ಠಾಕ್ರೆ ಹೂಡಿರುವ ಪ್ರಕರಣದಲ್ಲಿ ಏಕನಾಥ್ ಶಿಂಧೆ ಬೆಂಬಲಿಗ ಶಾಸಕರು ಅನರ್ಹಗೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಮುಂದೆ ಯಾರು ಸರ್ಕಾರ ರಚಿಸುತ್ತಾರೆ ಎಂಬ ಪ್ರಶ್ನೆ ಎದ್ದಿದೆ. ಈ ಹಿನ್ನಲೆಯಲ್ಲೇ ಅಜಿತ್ ಪವಾರ್ ಬಿಜೆಪಿ ಜೊತೆ ಸೇರಿ ಸರ್ಕಾರ ರಚಿಸಲು ಮುಂದಾಗಿದ್ದಾರೆ ಎಂಬ ವರದಿಗಳು ಹೊರಬಿದ್ದಿದ್ದವು. ಈ ಹಿನ್ನೆಲೆಯಲ್ಲಿ ಅದಾನಿ ಹಾಗೂ ಶರದ್ ಪವಾರ್ ಭೇಟಿ ನಾನಾ ಊಹಾಪೋಹಗಳಿಗೆ ಕಾರಣವಾಗಿದೆ.

ಏಕನಾಥ್ ಶಿಂಧೆ

ಶರದ್ ಪವಾರ್ ಮತ್ತು ಅದಾನಿ ಭೇಟಿಗೂ ಮಹಾರಾಷ್ಟ್ರ ರಾಜಕಾರಣದ ಮುಂದಿನ ನಡೆಗಳಿಗೂ ಸಂಬಂಧ ಇರುವ ಸಾಧ್ಯತೆಗಳು ಇದೆ ಎಂದೂ ಹೇಳಲಾಗುತ್ತಿದೆ. ಮತ್ತು ಈ ಸಭೆಯಲ್ಲಿ ಹಿಂಡೆನ್‌ಬರ್ಗ್ ವರದಿಯಿಂದ ಉಂಟಾದ ಬಿಕ್ಕಟ್ಟು ಮತ್ತು ವಿರೋಧ ಪಕ್ಷಗಳ ಹೋರಾಟದಿಂದ ಅದಾನಿ ಸಮೂಹಕ್ಕೆ ಉದ್ಭವಿಸಿರುವ ಒತ್ತಡದ ಬಗ್ಗೆಯೂ ಅವರು ಖಂಡಿತವಾಗಿ ಚರ್ಚಿಸಿರುತ್ತಾರೆ ಎಂದು ಹೇಳಲಾಗುತ್ತಿದೆ.

ರಾಜಕೀಯ

“ಮಹಾರಾಷ್ಟ್ರದಲ್ಲಿರುವ ಬಿಜೆಪಿ ಡಬಲ್ ಎಂಜಿನ್ ಸರಕಾರ ಪದೇಪದೆ ಕಾಲುಕೆರೆದು ಕಿತಾಪತಿ ಮಾಡುತ್ತಿದೆ. ಚೀನಾ ಮನಸ್ಥಿತಿಯ ಆ ರಾಜ್ಯವು ಕರ್ನಾಟಕವನ್ನು ಶತ್ರು ದೇಶದಂತೆ ನೋಡುತ್ತಿದೆ. ಕೇಂದ್ರ ಬಿಜೆಪಿ ಸರಕಾರ ಇದೆಲ್ಲವನ್ನು ನೋಡಿಕೊಂಡು ಮೌನವಾಗಿದೆ. ಒಕ್ಕೂಟ ವ್ಯವಸ್ಥೆಯ ಅವಸಾನಕ್ಕೆ ಇದೇ ಕಾರಣವಾಗಬಹುದು” ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.

“ಒಂದಲ್ಲ ಎರಡಲ್ಲ, ಪ್ರತಿಯೊಂದು ವಿಷಯದಲ್ಲೂ ಮಹಾರಾಷ್ಟ್ರವು ಕರ್ನಾಟಕವನ್ನು ಕೆರಳಿಸುತ್ತಿದೆ. ರಾಜ್ಯದ ಗಡಿ ಒಳಗಿರುವ 865 ಗ್ರಾಮಗಳ ಜನರಿಗೆ ಆರೋಗ್ಯ ವಿಮೆ ಜಾರಿ ಮಾಡಿದ ಆ ರಾಜ್ಯ ಸರಕಾರದ ನಡೆ ಒಕ್ಕೂಟ ವ್ಯವಸ್ಥೆಯನ್ನು ಒಡೆಯುವ ನೇರ, ಧೂರ್ತ ಪ್ರಯತ್ನವಾಗಿದೆ.

ಮಹಾರಾಷ್ಟ್ರವು ಒಕ್ಕೂಟ ವ್ಯವಸ್ಥೆಯ ಎಲ್ಲಾ ಎಲ್ಲೆಗಳನ್ನು ಮೀರಿ ಅಹಂಕಾರದಿಂದ ವರ್ತಿಸುತ್ತಿದೆ. ಬಿಜೆಪಿ ಸರ್ಕಾರ ‘ಶಿಂಧೆ ಸೂತ್ರದ ಗೊಂಬೆ’ ಯಾಗಿ ಅಂತಹ ರಾಜಕಾರಣಕ್ಕೆ ಕರ್ನಾಟಕವನ್ನು ಬಲಿ ಕೊಡಲು ಹೊರಟಿದೆಯಾ? ಎನ್ನುವ ಅನುಮಾನ ನನ್ನದು. ಇಲ್ಲವಾದರೆ, ಮಹಾರಾಷ್ಟ್ರ ಈ ಪರಿಯ ಉದ್ಧಟತನ ತೋರುತ್ತಿದ್ದರೂ ಮೋದಿ ಸರಕಾರದ ಮೌನವೇಕೆ?

ಕರ್ನಾಟಕದಲ್ಲಿ ಇಡೀ ಭಾರತವೇ ಅಡಗಿದೆ. ಕಾಶ್ಮೀರದಿಂದ ಕನ್ಯಾಕಮಾರಿಯವರೆಗೆ, ಗುಜರಾತಿನಿಂದ ಒಡಿಶಾವರೆಗೆ ಎಲ್ಲ ಕಡೆಯಿಂದಲೂ ಅನ್ನ ಅರಸಿಕೊಂಡು ಬಂದವರಿಗೆ ಆಶ್ರಯ ನೀಡಿದೆ. ಆ ಅನ್ನಕ್ಕೆ ಮಣ್ಣು ಹುಯ್ಯುವ ಹೀನ ಕೆಲಸವನ್ನು ಮಹಾರಾಷ್ಟ್ರ ಎಗ್ಗಿಲ್ಲದೆ ಮಾಡುತ್ತಿದೆ. ಕನ್ನಡಿಗರು ಸುಮ್ಮನಿರುವ ಕಾಲ ಮುಗಿದಿದೆ.

ಭಾರತ ಸ್ವತಂತ್ರ್ಯಗೊಂಡಾಗ ಎಲ್ಲರಿಗಿಂತ ಮೊದಲೇ ಒಕ್ಕೂಟ ವ್ಯವಸ್ಥೆಗೆ ಒಳಪಟ್ಟವರು ನಾವು. ನಮ್ಮ ಉದಾರತೆಯೇ ನಮಗೆ ಇಂದು ಮುಳುವಾಗಿದೆಯಾ? ನೆಲ, ಜಲ, ಭಾಷೆ, ಅನುದಾನ ಸೇರಿ ಪ್ರತಿ ವಿಷಯದಲ್ಲೂ ಕನ್ನಡಿಗರು ಮಲತಾಯಿ ಮಕ್ಕಳಾಗಿದ್ದಾರೆ!! ಇನ್ನೆಷ್ಟು ದಿನ ಈ ಅನ್ಯಾಯ?” ಎಂದು ಮಹಾರಾಷ್ಟ್ರ ಬಿಜೆಪಿ ಡಬಲ್ ಎಂಜಿನ್ ಸರ್ಕಾರವನ್ನು ಮತ್ತು ಬಿಜೆಪಿಯ ಕೇಂದ್ರ ನಾಯಕರ ವಿರುದ್ಧ ತಮ್ಮ ಆಕ್ರೊಷವನ್ನು ವ್ಯಕ್ತ ಪಡಿಸಿ ಸರಣಿ ಟ್ವೀಟ್ ಮಾಡಿದ್ದಾರೆ. Ahead of elections in Karnataka, Maharashtra issues order to extend medical benefits to border villages.

ದೇಶ ರಾಜ್ಯ

ಡಿ.ಸಿ.ಪ್ರಕಾಶ್ ಸಂಪಾದಕರು

ಮುಂಬೈ: ಮಹಾರಾಷ್ಟ್ರದಲ್ಲಿ, ಶಿವಸೇನೆ, ನ್ಯಾಶನಲಿಸ್ಟ್ ಕಾಂಗ್ರೆಸ್ ಮತ್ತು ಕಾಂಗ್ರೆಸ್ ಪಕ್ಷಗಳು ಜಂಟಿಯಾಗಿ ಸೇರಿ ಮಹಾವಿಕಾಸ್ ಅಘಾಡಿ ಸರ್ಕಾರವನ್ನು ರಚಿಸಿದವು. ಶಿವಸೇನೆ ನಾಯಕ ಉದ್ಧವ್ ಠಾಕ್ರೆ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿದ್ದರು.

ಈ ಹಿನ್ನಲೆಯಲ್ಲಿ ಶಿವಸೇನೆಯ ಹಿರಿಯ ಸಚಿವ ಏಕನಾಥ್ ಶಿಂಧೆ ನೇತೃತ್ವದಲ್ಲಿ ಪಕ್ಷದ ಕೆಲವು ಶಾಸಕರು ಬಂಡಾಯವೆದ್ದು  ಸರ್ಕಾರಕ್ಕೆ ನೀಡಿದ ಬೆಂಬಲವನ್ನು ವಾಪಸ್ಸು ಪಡೆದರು. ಇದರ ಪರಿಣಾಮವಾಗಿ ಉದ್ಧವ್ ಠಾಕ್ರೆ ನೇತೃತ್ವದ ಮಹಾವಿಕಾಸ್ ಅಘಾಡಿ ಸರ್ಕಾರ ಪತನವಾಯಿತು.

ನಂತರ ಏಕನಾಥ್ ಶಿಂಧೆ ನೇತೃತ್ವದ 40 ಶಿವಸೇನೆ ಶಾಸಕರು, ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಮಹಾರಾಷ್ಟ್ರದಲ್ಲಿ ನೂತನ ಸರ್ಕಾರವನ್ನು ರಚಿಸಿದರು. ಏಕನಾಥ್ ಶಿಂಧೆ ಮರಾಠಾ ಮುಖ್ಯಮಂತ್ರಿಯಾದರು. ನಂತರ ಶಿಂಧೆ ಬಣದವರು ಶಿವಸೇನೆ ಪಕ್ಷದ ಹೆಸರು, ಪಕ್ಷದ ಬಿಲ್ಲು ಮತ್ತು ಬಾಣದ ಚಿಹ್ನೆಯನ್ನು ತಮ್ಮದೆಂದು ಪ್ರತಿಪಾದಿಸಿದರು. ಪಕ್ಷದ ಬಹುಪಾಲು ಸಂಸದರು, ಶಾಸಕರು ತಮ್ಮ ಪರ ಇರುವುದರಿಂದ ಪಕ್ಷದ ಹೆಸರು ಮತ್ತು ಚಿಹ್ನೆಯನ್ನು ತಮ್ಮ ತಂಡಕ್ಕೆ ನೀಡಬೇಕೆಂದು ಶಿಂಧೆ ಆಗ್ರಹಿಸಿದರು. ಇದರ ಬಗ್ಗೆ ಚುನಾವಣಾ ಆಯೋಗಕ್ಕೆ ಪತ್ರವನ್ನೂ ಸಲ್ಲಿಸಿದರು. ಇದಕ್ಕೆ ಉದ್ಧವ್ ಠಾಕ್ರೆ ಕಡೆಯವರು ಆಕ್ಷೇಪ ವ್ಯಕ್ತಪಡಿಸಿ, ನಿಜವಾದ ಶಿವಸೇನೆ ನಾವೇ ಎಂದು ಚುನಾವಣಾ ಆಯೋಗದಲ್ಲಿ ವಾದ ಮಂಡಿಸಿದರು.

ಎರಡೂ ಕಡೆಯ ವಿವರಣೆಗಳು, ದಾಖಲೆಗಳು ಮತ್ತು ಪಕ್ಷದ ನಿಯಮಗಳನ್ನು ಪರಿಶೀಲಿಸಿದ ಚುನಾವಣಾ ಆಯೋಗ, ಶಿವಸೇನೆ ಪಕ್ಷದ ಹೆಸರು, ಪಕ್ಷದ ಚಿಹ್ನೆ ಬಿಲ್ಲು ಮತ್ತು ಬಾಣವನ್ನು ಏಕನಾಥ್ ಶಿಂಧೆ ಬಣಕ್ಕೆ, ಉದ್ಧವ್ ಠಾಕ್ರೆ ತಂಡಕ್ಕೆ ಶಿವಸೇನೆ (ಉದ್ಧವ್ ಬಾಳಾಸಾಹೇಬ್ ಠಾಕ್ರೆ) ಎಂಬ ಹೆಸರನ್ನು ಮತ್ತು ಟಾರ್ಚ್ (ಜ್ಯೋತಿ) ಚಿಹ್ನೆಯನ್ನು ನೀಡಿ ಆದೇಶಿಸಿದೆ.

ಶಿವಸೇನ ಪಕ್ಷದ ಹೆಸರನ್ನು, ಬಿಲ್ಲು ಮತ್ತು ಬಾಣದ ಚಿಹ್ನೆಯನ್ನು ಶಿಂಧೆ ಬಣಕ್ಕೆ ನೀಡಿರುವುದಕ್ಕೆ ಉದ್ಧವ್ ಠಾಕ್ರೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಈ ಬಗ್ಗೆ ಸುಪ್ರೀಂ ಕೋರ್ಟ್‌ನಲ್ಲಿ ಕಾನೂನು ಹೋರಾಟ ನಡೆಸುವುದಾಗಿಯೂ ಉದ್ಧವ್ ಠಾಕ್ರೆ ಹೇಳಿದ್ದಾರೆ.

ಇಂದು ತಮ್ಮ ಮನೆಯ ಮುಂದೆ ಜಮಾಯಿಸಿದ್ದ ಬೆಂಬಲಿಗರೊಂದಿಗೆ ಮಾತನಾಡಿದ ಉದ್ಧವ್ ಠಾಕ್ರೆ, ‘ಪ್ರಧಾನಿ ಮೋದಿಗೆ ಚುನಾವಣಾ ಆಯೋಗವು ಗುಲಾಮವಾಗಿದೆ. ಹಿಂದೆಂದೂ ಮಾಡದ ಕೆಲಸವನ್ನು ಅದು ಮಾಡಿದೆ. ಬೆಂಬಲಿಗರು ತಾಳ್ಮೆಯಿಂದಿರಬೇಕು. ಮುಂಬೈ ಸ್ಥಳೀಯ ಚುನಾವಣೆಗೆ ನಾವು ತಯಾರಿಯಾಗಬೇಕು. ಪಕ್ಷದ ಚಿಹ್ನೆ ಕಳವಾಗಿದೆ. ಕಳ್ಳರಿಗೆ ತಕ್ಕ ಪಾಠವನ್ನು ಕಲಿಸಬೇಕು’ ಎಂದರು.