ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
Karnataka Muslim Unity Archives » Page 2 of 2 » Dynamic Leader
November 21, 2024
Home Posts tagged Karnataka Muslim Unity (Page 2)
ರಾಜ್ಯ

ಕರ್ನಾಟಕ ರಾಜ್ಯದ ಅಲ್ಪಸಂಖ್ಯಾತ ಮುಸ್ಲಿಮ್ ಸಮುದಾಯದ ಸಾಮಾಜಿಕ-ಆರ್ಥಿಕ-ಉದ್ಯೋಗ ಕ್ಷೇತ್ರಗಳಲ್ಲಿನ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರದ 2023-24ರ ಬಜೆಟ್ ನಲ್ಲಿ, ಸಾಮಾಜಿಕ ನ್ಯಾಯದ ಯೋಜನೆಗಳನ್ನು ಘೋಷಣೆ ಮಾಡಲು ಕರ್ನಾಟಕ ಮುಸ್ಲಿಮ್ ಯುನಿಟಿ ಮನವಿ ಮಾಡಿದೆ.

ಅಲ್ಪಸಂಖ್ಯಾತರ ಕಲ್ಯಾಣ, ವಸತಿ ಮತ್ತು ವಕ್ಫ್ ಸಚಿವ ಜಮೀರ್ ಅಹ್ಮದ್ ಖಾನ್ ರವರ ಮುಖಾಂತರ ಕರ್ನಾಟಕ ಮುಸ್ಲಿಮ್ ಯುನಿಟಿಯ ಮುಖಂಡರುಗಳು ಮಾನ್ಯ ಮುಖ್ಯಮಂತ್ರಿಗಳಿಗೆ ಸಲ್ಲಿಸಿರುವ ಮನವಿ ಪತ್ರದಲ್ಲಿ, “ರಾಜ್ಯದಲ್ಲಿ ತಮ್ಮ ನೇತೃತ್ವದಲ್ಲಿ ಅಸ್ತಿತ್ವಕ್ಕೆ ಬಂದಿರುವ ಪೂರ್ಣ ಬಹುಮತದ ಸರಕಾರಕ್ಕೆ ನಾಡಿನ ಸಮಸ್ತ ಮುಸ್ಲಿಮರ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದೇವೆ. ಈ ಹಿಂದಿನ ಕೋಮುವಾದಿ ಭ್ರಷ್ಟ ಸರ್ಕಾರದ ದುರಾಡಳಿತಕ್ಕೆ ಬೇಸತ್ತ ಜನ ತಮಗೆ ನೀಡಿರುವ ಚಾರಿತ್ರಿಕ ಅವಕಾಶವಿದು ಎಂದು ನಾವು ಭಾವಿಸುತ್ತೇವೆ.

ತಮಗೆ ತಿಳಿದಿರುವಂತೆ ಈ ರಾಜ್ಯದ ಮುಸ್ಲಿಮ್ ಸಮುದಾಯ ಕಳೆದ ನಾಲ್ಕು ವರ್ಷಗಳಲ್ಲಿ ಹಿಂದೆಂದಿಗಿಂತಲೂ ಅತೀ ಹೆಚ್ಚು ನೋವನ್ನು ಅನುಭವಿಸಿದ್ದು, ದಿನನಿತ್ಯದ ಬದುಕಿನಲ್ಲಿ ಭದ್ರತೆಯ ಸಮಸ್ಯೆಗಳನ್ನು ಅನುಭವಿಸಿದ್ದಾರೆ. ರಾಜ್ಯದಲ್ಲಿ ನಡೆದ 2023ರ ಚುನಾವಣೆಯಲ್ಲಿ ಸಂಪೂರ್ಣವಾಗಿ ಕಾಂಗ್ರೆಸ್ ಪಕ್ಷಕ್ಕೆ ಮುಸ್ಲಿಮರು ಮತ ನೀಡಿದ್ದಾರೆ. ಇದರ ಮೂಲಕ ರಾಜ್ಯದ ಅಭಿವೃದ್ದಿಗೆ, ತಮ್ಮ ನೇತೃತ್ವದ ಸರಕಾರಕ್ಕೆ, ಮುಸ್ಲಿಮರು ಬೆಂಬಲ ನೀಡಿದ್ದಾರೆ ಎಂಬುದು ಸಾಬೀತಾಗಿದೆ.

ಇಂತಹ ಸಂದರ್ಭದಲ್ಲಿ ಕಳೆದ ನಾಲ್ಕು ವರ್ಷಗಳ ಆಡಳಿತದ ಸರ್ಕಾರದಲ್ಲಿ ನಿರ್ಲಕ್ಷ್ಯ / ಅವಕಾಶಗಳ ವಂಚನೆಗೆ ಒಳಗಾಗಿರುವ ನಾಡಿನ ಮುಸ್ಲಿಮ್ ಸಮುದಾಯಕ್ಕೆ ತಮ್ಮ ಘನ ಸರಕಾರ ಸೂಕ್ತ ಸಾಮಾಜಿಕ ನ್ಯಾಯ ನೀಡುತ್ತದೆ ಎನ್ನುವ ವಿಶ್ವಾಸದೊಂದಿಗೆ ಕರ್ನಾಟಕ ಮುಸ್ಲಿಮ್ ಯುನಿಟಿಯು, ರಾಜ್ಯದ ಸಮಸ್ತ ಮುಸ್ಲಿಮ್ ಸಮುದಾಯದ ಪರವಾಗಿ, ನಮ್ಮ ಆಶೋತ್ತರ ಬೇಡಿಕೆಗಳನ್ನು ತಮ್ಮ ಮುಂದೆ ಮಂಡಿಸುತ್ತಿದೆ” ಎಂದು ಸಚಿವರ ಬಳಿ, ಮುಖ್ಯಮಂತ್ರಿಗಳಿಗೆ ನೀಡಿರುವ ಮನವಿ ಪತ್ರದಲ್ಲಿ ಮನವರಿಕೆ ಮಾಡಲಾಗಿದೆ.

ತಮ್ಮ ನೇತೃತ್ವದಲ್ಲಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ 10 ಸಾವಿರ ಕೋಟಿ ರೂಪಾಯಿಗಳನ್ನು ಅನುದಾನ ಒದಗಿಸಲಾಗುವದು ಎಂದು ಭರವಸೆ ನೀಡಿರುವುದು ಅಭಿನಂದನೀಯ. ಅದರಂತೆ, ಈ ವರ್ಷದ ಬಜೆಟ್‍ನಲ್ಲಿಯೇ ಸದರಿ ಅನುದಾನವನ್ನು ಘೋಷಿಸಬೇಕು ಎಂದು ಕರ್ನಾಟಕ ಮುಸ್ಲಿಮ್ ಯುನಿಟಿಯ ರಾಜ್ಯ ಸಮಿತಿ ಮುಖಂಡರ ತಂಡ ಸಚಿವರನ್ನು ಒತ್ತಾಸಿದೆ.

ಅಲ್ಲದೆ, ತಮ್ಮ ನೇತೃತ್ವದ ಹಿಂದಿನ ಸರ್ಕಾರದಲ್ಲಿ ಜಾರಿಯಲ್ಲಿದ್ದ ಎಲ್ಲಾ ಯೋಜನೆಗಳನ್ನು ಹೆಚ್ಚಿನ ಭೌತಿಕ ಗುರಿಯೊಂದಿಗೆ 2023-24ನೇ ಸಾಲಿನಿಂದ ಮರು ಜಾರಿಗೊಳಿಸಬೇಕು. 2ಬಿ ಪ್ರವರ್ಗದಡಿಯಲ್ಲಿ ನೀಡುತ್ತಿದ್ದ 4% ಮೀಸಲಾತಿಯನ್ನು EWS ಪ್ರವರ್ಗಕ್ಕೆ ವರ್ಗಾಯಿಸಿರುವುದನ್ನು ರದ್ದು ಪಡಿಸಬೇಕು. ಮತ್ತೊಮ್ಮೆ ಅದೇ 2ಬಿ ಪ್ರವರ್ಗದಲ್ಲಿ ಮೀಸಲಾತಿಯನ್ನು ಮುಂದುವರಿಸಬೇಕು. ಅಲ್ಲದೆ ರಾಜ್ಯದಲ್ಲಿ ಸುಮಾರು ಒಂದು ಕೋಟಿಗೂ ಹೆಚ್ಚು ಜನಸಂಖ್ಯೆಯುಳ್ಳ ಮುಸ್ಲಿಮರ ಮೀಸಲಾತಿಯನ್ನು ಶೇ.8ಕ್ಕೆ ಹೆಚ್ಚಿಸಬೇಕು.

ನ್ಯಾ.ರಾಜೇಂದ್ರ ಸಾಚಾರ್ ಶಿಫಾರಸ್ಸಿನಂತೆ ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುವ ಪ್ರದೇಶಗಳಲ್ಲಿ ಮುಸ್ಲಿಂ ಪೋಲಿಸ್ ಅಧಿಕಾರಿಯನ್ನು ನೇಮಿಸುವುದಲ್ಲದೇ ಹೆಚ್ಚಿನ ಪ್ರಮಾಣದಲ್ಲಿ ಮುಸ್ಲಿಂ ಸಿಬ್ಬಂದಿಗಳನ್ನು ನಿಯೋಜಿಸಬೇಕು.

ಅಕಾಡೆಮಿ, ಪ್ರಾಧಿಕಾರಗಳಲ್ಲಿ ಅವುಗಳ ಅಧ್ಯಕ್ಷ ಮತ್ತು ಸದಸ್ಯ ಸ್ಥಾನಗಳಿಗೆ ಸೂಕ್ತ ಪ್ರಮಾಣದಲ್ಲಿ ಮುಸ್ಲಿಂ ಪ್ರಾತಿನಿಧ್ಯವನ್ನು ಒದಗಿಸಿಕೊಡಬೇಕು.

ರಾಜ್ಯದಲ್ಲಿ ನಿಗಮ / ಮಂಡಳಿಗಳ ಅಧ್ಯಕ್ಷರುಗಳ ನೇಮಕಾತಿಯಲ್ಲಿ ಮುಸ್ಲಿಂ ಸಮುದಾಯಕ್ಕೆ ಕನಿಷ್ಠ 25ರಷ್ಟು ಪ್ರಾತಿನಿಧ್ಯ ನೀಡಬೇಕು. ಸದಸ್ಯರು / ನಿರ್ದೇಶಕರ ನೇಮಕಾತಿಯಲ್ಲಿ ಕನಿಷ್ಠ ಒಬ್ಬರು ಅಲ್ಪಸಂಖ್ಯಾತರನ್ನು ನಾಮನಿರ್ದೇಶನ ಮಾಡುವುದರೊಂದಿಗೆ ಇದನ್ನು ಕಡ್ಡಾಯಗೊಳಿಸಲು ನಿಯಮಗಳನ್ನು ತಿದ್ದುಪಡಿ ಮಾಡಿ ಜಾರಿಗೊಳಿಸಬೇಕು.

ಅಗತ್ಯ ಪ್ರದೇಶಗಳಲ್ಲಿ ಇದೇ ವರ್ಷದಲ್ಲಿ 100 ಅಲ್ಪಸಂಖ್ಯಾತ ವಸತಿ ನಿಲಯಗಳನ್ನು ಮಂಜೂರು ಮಾಡಬೇಕು ಮುಂತಾದ ಬೇಡಿಕೆ ಹಾಗೂ ಹಕ್ಕೋತ್ತಾಯದ ಮನವಿ ಪತ್ರವನ್ನು ಅಲ್ಪಸಂಖ್ಯಾತರ ಕಲ್ಯಾಣ, ವಸತಿ ಮತ್ತು ವಕ್ಫ್ ಸಚಿವರಾದ ಜಮೀರ್ ಅಹ್ಮದ್ ಖಾನ್ ರವರಿಗೆ ಸಲ್ಲಿಸಲಾಯಿತು.

ಈ ಸಂಧರ್ಭದಲ್ಲಿ ಕರ್ನಾಟಕ ಮುಸ್ಲಿಮ್ ಯುನಿಟಿಯ ರಾಜ್ಯ ಅಧ್ಯಕ್ಷರಾದ ಜಬ್ಬಾರ್ ಕಲಬುರ್ಗಿ, ಗೌರವಾಧ್ಯಕ್ಷರಾದ ಜಿ.ಎ.ಬಾವ, ಎಂ.ಎಲ್.ಸರಕಾವಸ್, ಸಂಚಾಲಕರು, ಉತ್ತರ ಕರ್ನಾಟಕ ಹಾಗೂ ಕರ್ನಾಟಕ ಮುಸ್ಲಿಮ್ ಯುನಿಟಿಯ ರಾಜ್ಯ ಸಮಿತಿಯ ಮುಖಂಡರುಗಳು ಉಪಸ್ಥಿತರಿದ್ದರು.

ರಾಜ್ಯ

ರಾಜ್ಯದಲ್ಲಿ ಈಗ ಸೌಹಾರ್ದತೆ ನೆಲೆಸಿದೆ; ಅದನ್ನು ಹಾಳು ಮಾಡುವವರು ಯಾರೇ ಆಗಲಿ, ಯಾವುದೇ ಸಮುದಾಯವಾಗಲಿ, ಅವರ ವಿರುದ್ಧ ಕ್ರಮಕೈಗೊಳ್ಳಲು ಹಿಂಜರಿಕೆ ಬೇಡ.

ಬೆಂಗಳೂರು: ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನಲ್ಲಿ ಇತ್ತೀಚಿಗೆ ನಡೆದ ಸಂಘಟನೆಯ ಸಭೆಯೊಂದರಲ್ಲಿ ಮುಸ್ಲಿಮರ ವಿರುದ್ಧ ನಿಂದನಾತ್ಮಕ, ಅವಹೇಳನಕಾರಿಯಾಗಿ ಹಾಗೂ ಮುಸ್ಲಿಮರು ತರಕಾರಿ, ಮೀನು ಮಾರಾಟಕ್ಕೆ ಹಿಂದೂಗಳ ಮನೆಗೆ ಬಂದರೆ ಗುಂಡಿಕ್ಕಿ ಎಂಬ ಹೇಳಿಕೆ ನೀಡಿರುವ ಬಜರಂಗ ದಳದ ರಘು ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಕರ್ನಾಟಕ ಮುಸ್ಲಿಮ್ ಯುನಿಟಿಯ ರಾಜ್ಯ ಕಾರ್ಯಾಧ್ಯಕ್ಷ ಶೇಕಬ್ಬ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಹೇಳಿಕೆಯೊಂದನ್ನು ಬಿಡುಗಡೆ ಮಾಡಿರುವ ಅವರು, “ಮತೀಯ ದ್ವೇಷ ಮತ್ತು ಕೋಮು ಗಲಭೆಗೆ ಪ್ರಚೋದನೆ ನೀಡುವಂತಹ ಭಾಷಣ ಮಾಡಿ, ಸಮಾಜದ ಸ್ವಾಸ್ಥ್ಯಕ್ಕೆ ಧಕ್ಕೆ ಸೃಷ್ಟಿಯಾಗುವಂತಹ ಹೇಳಿಕೆಯನ್ನು ರಘು ನೀಡಿದ್ದಾರೆ. ಶಾಂತಿ ಕದಡುವ ಹೇಳಿಕೆಯಿಂದ ಸಹಬಾಳ್ವೆಗೆ ಧಕ್ಕೆ ಬರುವ ಕಾರಣ, ಸರ್ಕಾರ, ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಕೇಳಿಕೊಳ್ಳುತ್ತೇನೆ.

ರಾಜ್ಯದಲ್ಲಿ ಈಗ ಸೌಹಾರ್ದತೆ ನೆಲೆಸಿದೆ; ಅದನ್ನು ಹಾಳು ಮಾಡುವವರು ಯಾರೇ ಆಗಲಿ, ಯಾವುದೇ ಸಮುದಾಯವಾಗಲಿ, ಅವರ ವಿರುದ್ಧ ಕ್ರಮಕೈಗೊಳ್ಳಲು ಹಿಂಜರಿಕೆ ಬೇಡ” ಎಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ರಾಜ್ಯ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ನೂತನ ರಾಜ್ಯ ಸರ್ಕಾರದ ಮೊದಲ ಬಜೆಟ್‍ನಲ್ಲಿ, ರಾಜ್ಯದ ಮುಸ್ಲಿಂ ಸಮುದಾಯದ ಅಭಿವೃದ್ಧಿಗೆ, ಈ ಹಿಂದೆ ಮುಖ್ಯಮಂತ್ರಿಗಳು ಭರವಸೆ ನೀಡಿದಂತೆ, ಅನುದಾನ ನೀಡಬೇಕೆಂದು ಒತ್ತಾಯಿಸಿ, ನಾಡಿನ ಮುಸ್ಲಿಂ ಸಮುದಾಯದ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ‘ಮುಸ್ಲಿಂ ಚಿಂತಕರ ಚಾವಡಿ’ಯ ನಿಯೋಗವು, ಗುರುವಾರ ಸಂಜೆ ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳಿಗೆ ಖುದ್ದು ಮನವಿಯನ್ನು ಸಲ್ಲಿಸಿತು.

ಮನವಿ ಸಲ್ಲಿಕೆಗೂ ಮುನ್ನ ನಿಯೋಗದ ಸದಸ್ಯರು, ಮುಖ್ಯಮಂತ್ರಿಗಳೊಂದಿಗೆ ರಾಜ್ಯದ ಮುಸ್ಲಿಂ ಸಮುದಾಯ ಎದುರಿಸುತ್ತಿರುವ ವಿವಿಧ ಸಮಸ್ಯೆಗಳ ಬಗ್ಗೆ ವಿವರವನ್ನು ಹಂಚಿಕೊಂಡರು. ಮುಸ್ಲಿಂ ಚಿಂತಕರ ಚಾವಡಿಯ ರಾಜ್ಯ ಸಮಿತಿ ಕಾರ್ಯದರ್ಶಿ ಅನಿಸ್ ಪಾಶಾ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಮುಸ್ಲಿಂ ಚಿಂತಕರ ಚಾವಡಿಯ ನಿಯೋಗದ ಸದಸ್ಯರನ್ನು ಪರಿಚಯಿಸಿ, ಚಾವಡಿಯ ಕಾರ್ಯವೈಖರಿಯ ಬಗ್ಗೆ ಮುಖ್ಯಮಂತ್ರಿಗಳಿಗೆ ತಿಳಿಸಿಕೊಟ್ಟರು.

ನಿಯೋಗದ ಹಿರಿಯ ಸದಸ್ಯರಾದ ಬರಹಗಾರ್ತಿ, ಹಾಸನದ ಬಾನು ಮುಷ್ತಾಕ್ ಅವರು, ರಾಜ್ಯದ ಮುಸ್ಲಿಂ ಮಹಿಳೆಯರು ವಿವಿಧ ಕ್ಷೇತ್ರಗಳಲ್ಲಿ ಎದುರಿಸುತ್ತಿರುವ ಸಮಸ್ಯೆಗಳು, ಸರ್ಕಾರದಿಂದ ಮುಸ್ಲಿಂ ಮಹಿಳೆಯರ ಸಬಲೀಕರಣಕ್ಕಾಗಿ ಆಗಬೇಕಾದ ಸಹಾಯ ಹಾಗೂ ಯೋಜನೆಗಳನ್ನು ರೂಪಿಸುವ ಬಗ್ಗೆ ಮುಖ್ಯಮಂತ್ರಿ ಅವರೊಂದಿಗೆ ವಿಚಾರ ವಿನಿಮಯ ಮಾಡಿಕೊಂಡರು. 

ನಿಯೋಗದಲ್ಲಿ ಹಾಜರಿದ್ದು ಮಾತನಾಡಿದ ಕಾಂಗ್ರೆಸ್ ಮುಖಂಡ, ರಾಯಚೂರಿನ ಡಾ.ರಜಾಕ್ ಉಸ್ತಾದ್ ಅವರು, ಮುಸ್ಲಿಂ ಸಮುದಾಯ ಕಳೆದ ಹಲವು ವರ್ಷಗಳಿಂದ ರಾಜ್ಯದಲ್ಲಿ ಎದುರಿಸುತ್ತಿರುವ ಸಮಸ್ಯೆಗಳು, ಈ ಹಿಂದಿನ ಸರ್ಕಾರ ನಿಲ್ಲಿಸಿದ ಯೋಜನೆಗಳು, ಸವಲತ್ತುಗಳ ಬಗ್ಗೆ ವಿವರಿಸಿದರು. ಶಿಕ್ಷಣ, ಉದ್ಯೋಗ, ಕೈಗಾರಿಕೆ, ವಿವಿಧ ಕ್ಷೇತ್ರಗಳಲ್ಲಿ ಮುಸ್ಲಿಮರ ಪ್ರಾತಿನಿಧ್ಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಮುಸ್ಲಿಮರ ಸಬಲೀಕರಣಕ್ಕೆ ರಾಜ್ಯ ಸರ್ಕಾರ ಮುಂದಾಗಬೇಕೆಂದು ಒತ್ತಾಯಿಸಿದರು. 

ವಿಜಯನಗರ ಜಿಲ್ಲೆಯ ಪ್ರೊ.ರಹಮತ್ ತರೀಕೆರೆ ಹಾಗೂ ಮೈಸೂರಿನ ಪ್ರೊ.ಮುಜಾಫರ್ ಅಸ್ಸಾದಿ ಅವರು ಮಾತನಾಡಿ, ಕಳೆದ ಹಲವು ವರ್ಷಗಳಲ್ಲಿ ಮುಸ್ಲಿಂ ಸಮುದಾಯದ ಅಭಿವೃದ್ಧಿ ಹೇಗೆ ಕುಂಠಿತ ಆಗಿದೆ. ರಾಜ್ಯ ಸರ್ಕಾರ ಮುಸ್ಲಿಮರ ಅಭಿವೃದ್ಧಿಗೆ ಈ ಹಿಂದೆ ಚುನಾವಣೆ ವೇಳೆ ಕಾಂಗ್ರೆಸ್ ಪಕ್ಷ ಭರವಸೆ ನೀಡಿದಂತೆ ಹೆಚ್ಚಿನ ಅನುದಾನವನ್ನು ನೀಡಿ, ಸಮುದಾಯದ ಅಭಿವೃದ್ಧಿಗೆ ಮುಂದಾಗಬೇಕೆಂದು ಒತ್ತಾಯಿಸಿದರು. 

ದಾವಣಗೆರೆಯ ಬರಹಗಾರ ಜೆ.ಕಲೀಂಭಾಷಾ, ಬೀದರ್ ನ ಸಾಮಾಜಿಕ ಕಾರ್ಯಕರ್ತ ಮಸ್ತಾನ್ ಬಿರಾದಾರ್, ವಿಜಯನಗರದ ಬರಹಗಾರ ಬಿ.ಪೀರ್ ಬಾಷ ಸೇರಿದಂತೆ ಹಲವರು ನಿಯೋಗದಲ್ಲಿದ್ದರು. ನಿಯೋಗದ ಸದಸ್ಯರ ಎಲ್ಲ ಅಭಿಪ್ರಾಯಗಳನ್ನು ಮುಕ್ತವಾಗಿ ಕೇಳಿಸಿಕೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಈಗಾಗಲೇ ಚುನಾವಣೆ ವೇಳೆ ಭರವಸೆ ನೀಡಿರುವಂತೆ ಮುಸ್ಲಿಂ ಸಮುದಾಯದ ಅಭಿವೃದ್ಧಿಗೆ ಅಗತ್ಯ ಇರುವ ಎಲ್ಲ ರೀತಿಯ ಅನುದಾನ ನೀಡಲು ಪ್ರಯತ್ನಿಸುವೆ. ಈಗಾಗಲೇ ಬಜೆಟ್ ತಯಾರಿ ಬಹುತೇಕ ಪೂರ್ಣ ಆಗಿರುವ ಹಿನ್ನೆಲೆಯಲ್ಲಿ ಮತ್ತು ಐದು ಗ್ಯಾರಂಟಿಗಳನ್ನು ಸರ್ಕಾರ ಈಡೇರಿಸಲು ಮುಂದಾಗಿದ್ದು, ಈ ಸಾಲಿನಲ್ಲಿ ಸಾಧ್ಯವಾದಷ್ಟೂ ಅನುದಾನವನ್ನು ಮುಸ್ಲಿಂ ಸಮುದಾಯದ ಅಭಿವೃದ್ಧಿಗೆ ನೀಡಲಾಗುವುದು. ಮುಂಬರುವ ದಿನಗಳಲ್ಲಿ ತಾವೆಲ್ಲ ಒತ್ತಾಯ ಮಾಡಿರುವಂತೆ ಸಮಗ್ರ ಅಭಿವೃದ್ಧಿಗೆ ಚಿಂತನೆ ಮಾಡಲಾಗುವುದೆಂದು ತಿಳಿಸಿದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಾಸೀರ್ ಅಹಮದ್ ಹಾಜರಿದ್ದರು.

ರಾಜ್ಯ

ಕರ್ನಾಟಕ ಮುಸ್ಲಿಮ್ ಯುನಿಟಿಯ ರಾಜ್ಯ ಕಾರ್ಯಕಾರಿ ಸಮಿತಿಯು ಪುನರ್ ರಚನೆಯಾಗಿದ್ದು, ಜನಾಬ್ ಜಬ್ಬಾರ್ ಕಲಬುರ್ಗಿ ಅವರನ್ನು ನೂತನ ರಾಜ್ಯಾಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ. ಎಂದು ಕೆ.ಎಂ.ಯುನ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಖಾಸಿಂ ಸಾಬ್ ರವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಜೊತೆಗೆ ಗೌರವ ಅಧ್ಯಕ್ಷರಾಗಿ ನಿವೃತ್ತ ಪೊಲೀಸ್ ಅಧಿಕಾರಿಗಳಾದ ಜಿ.ಎ.ಬಾವ ರವರನ್ನು, ಶೇಕಬ್ಬ ಅವರನ್ನು ಕಾರ್ಯಾಧ್ಯಕ್ಷರಾಗಿ, ಉತ್ತರ ಕರ್ನಾಟಕದ ಸಂಚಾಲಕರಾಗಿ ಬಾಗಲಕೋಟೆ ಜಿಲ್ಲೆಯ ವಕ್ಫ್ ಬೋರ್ಡ್ನ ಅಧ್ಯಕ್ಷರಾದ ಎಂ.ಎಲ್.ಸರ್ಕಾವಾಸ ಅವರನ್ನು, ದಕ್ಷಿಣ ಕರ್ನಾಟಕದ ಸಂಚಾಲಕರಾಗಿ ಚಿಕ್ಕಮಗಳೂರಿನ ಅಬ್ದುಲ್ ವಾಹಿದ್ ಮಾಗುಂಡಿ ಅವರನ್ನು ನೇಮಿಸಲಾಯಿತು. ಅಲ್ಲದೆ ಒಟ್ಟು 21 ಸದಸ್ಯರ ರಾಜ್ಯಕಾರ್ಯಕಾರಿ ಸಮಿತಿಯನ್ನು ಪುನರ್ ರಚಿಸಲಾಗಿದೆ ಎಂದು ಖಾಸಿಂ ಸಾಬ್ ತಿಳಿಸಿದ್ದಾರೆ.

ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಮುಸ್ಲಿಮರು ಕಾಂಗ್ರೆಸ್ ಪಕ್ಷವನ್ನು ನಂಬಿ ಮತಗಳನ್ನು ಚಲಾಯಿಸಿದ್ದಾರೆ. ಮುಸ್ಲಿಂ ಸಮುದಾಯವು ಇತಿಹಾಸದಲ್ಲಿ ಇಷ್ಟೊಂದು ಭರ್ಜರಿಯಾಗಿ ಕಾಂಗ್ರೆಸ್ಸಿಗೆ ಅತಿಹೆಚ್ಚು ಮತ ಚಲಾಯಿಸಿರುವುದು ಇದೇ ಮೊದಲು. ಆ ಕಾರಣಕ್ಕಾಗಿ ವರ್ತಮಾನದಲ್ಲಿ ಮುಸ್ಲಿಮ್ ಸಮುದಾಯಕ್ಕೆ ಈ ಸರ್ಕಾರದ ಮೇಲೆ ಬಹಳಷ್ಟು ನಿರೀಕ್ಷೆಗಳಿವೆ. ಎಂಬುದನ್ನು ರಾಜ್ಯ ಸರ್ಕಾರ ಮರೆಯಬಾರದು ಎಂದು ಕರ್ನಾಟಕ ಮುಸ್ಲಿಮ್ ಯುನಿಟಿಯ ನೂತನ ಅಧ್ಯಕ್ಷರಾದ ಜಬ್ಬಾರ್ ಕಲಬುರ್ಗಿ ಯವರು ಪತ್ರಿಕಾ ಹೇಳಿಕೆಯಲ್ಲಿ ತಮ್ಮ ಅಭಿಪ್ರಾಯವನ್ನು ತಿಳಿಸಿದರು.

ಕೆ.ಎಂ.ಯು ರಾಜ್ಯ ಪ್ರಧಾನ ಕಾರ್ಯದರ್ಶಿ ಖಾಸಿಂ ಸಾಬ್

2ಬಿ ಮೀಸಲಾತಿ ಪರಿಹಾರ ಮುಂತಾದ ಹಲವು ಬೇಡಿಕೆಗಳು ಸೇರಿದಂತೆ ಪರಿಹರಿಸುವುದು ರಾಜ್ಯ ಸರ್ಕಾರದ ಜವಾಬ್ದಾರಿಯಾಗಿದೆ. ಕರ್ನಾಟಕದ ಮುಸ್ಲಿಮ್ ಸಮುದಾಯವು ಇದೀಗ ರಾಜಕೀಯವಾಗಿ ಅತ್ಯಂತ ಪ್ರಬುದ್ಧವಾಗಿದೆ. ಆದ್ದರಿಂದ ಈ ಸತ್ಯವನ್ನು ಅರಿತು ರಾಜ್ಯ ಸರ್ಕಾರವು ಮುಸ್ಲಿಮ್ ಸಮುದಾಯದ ಸಮಗ್ರ ಕಲ್ಯಾಣ ಹಾಗೂ ಸಾಮಾಜಿಕ ನ್ಯಾಯದ ಬೇಡಿಕೆಗಳನ್ನು ಈಡೇರಿಸುವ ಯೋಜನೆಗಳನ್ನು ಕಾರ್ಯಗತ ಗೊಳಿಸುವುದು ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ರಾಜ್ಯ ಸರ್ಕಾರದ ಎಲ್ಲಾ ಸಚಿವರುಗಳ ಹೊಣೆಗಾರಿಕೆಯಾಗಿದೆ.

ಕರ್ನಾಟಕದ ಅಲ್ಪಸಂಖ್ಯಾತ ಮುಸ್ಲಿಮ್ ಸಮುದಾಯವು ಕಳೆದ ನಾಲ್ಕು ವರ್ಷಗಳಲ್ಲಿ ಸಾಕಷ್ಟು ನೋವು, ಅನ್ಯಾಯ, ಹಿಂಸೆ ಅನುಭವಿಸಿದೆ. ಗೋವು ಸಂರಕ್ಷಕರ ಹೆಸರಿನಲ್ಲಿ ಅನೈತಿಕ ಪೋಲಿಸ್ ಗಿರಿ, 4% ಒಬಿಸಿ ಮೀಸಲಾತಿ ಮತ್ತು ಅಲ್ಪಸಂಖ್ಯಾತ ವಿಧ್ಯಾರ್ಥಿ ವೇತನವನ್ನು ಕಡಿತಗೊಳಿಸಿ, ಸುಮಾರ 6 ಲಕ್ಷಕ್ಕೂ ಹೆಚ್ಚು ಮಕ್ಕಳ ಭವಿಷ್ಯವನ್ನು ಹಾಳು ಮಾಡಿರುವುದು, ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಹಾಗೂ ನಿಗಮದಲ್ಲಿ ಜಾರಿಯಲ್ಲಿದ್ದ ಯೋಜನೆಗಳನ್ನು ದ್ವೇಷದಿಂದ ರದ್ದುಗೊಳಿಸಿ, ಅನುದಾನಗಳನ್ನು ಕಡಿತಗೊಳಿಸಿದ ಕಾರಣ ರಾಜ್ಯದ ಮುಸ್ಲಿಮರಿಗೆ ಅಘಾದ ನೋವು ಮತ್ತು ಅನ್ಯಾಯವಾಗಿದೆ.

ಈ ಎಲ್ಲಾ ಮುಸ್ಲಿಮರ ಮೇಲಿನ ಅಸಮಾನತೆಗಳನ್ನು ಹೋಗಲಾಡಿಸಿ, ನ್ಯಾಯ ಮತ್ತು ಭದ್ರತೆಯನ್ನು ಕೊಡುವುದು ಈ ಸರ್ಕಾರದ ಹೊಣೆ ಮತ್ತು ಜವಾಬ್ದಾರಿ ಎಂದು ಕರ್ನಾಟಕ ಮುಸ್ಲಿಂ ಯುನಿಟಿಯ ನೂತನ ರಾಜ್ಯಾಧ್ಯಕ್ಷರಾದ ಜಬ್ಬಾರ್ ಕಲಬುರ್ಗಿ ಹೇಳಿಕೆ ನೀಡಿದ್ದಾರೆ. ರಾಜ್ಯದ ಮುಸ್ಲಿಮರ ಸಾಮಾಜಿಕ ನ್ಯಾಯ, ಎಲ್ಲಾ ಕ್ಷೇತ್ರಗಳಲ್ಲಿ ಸಮಪಾಲು ಹಾಗು ಸರಕಾರಿ ಯೋಜನೆಗಳ ಸಮಗ್ರ ಬಳಕೆಯ ಗುರಿಯುಳ್ಳ ಕರ್ನಾಟಕ ಮುಸ್ಲಿಮ್ ಯೂನಿಟಿಯು ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲಾ ಜಿಲ್ಲಾ, ತಾಲ್ಲೂಕುಗಳ ಮಟ್ಟದಲ್ಲಿ ವಿಸ್ತರಿಸಿ ಇಡೀ ರಾಜ್ಯಾದಂತ್ಯ ಮುಸ್ಲಿಮರ ಸಾಮಾಜಿಕ ಜಾಗೃತಿಯಲ್ಲಿ ತೊಡಗಲಿದೆ ಎಂದು ಖಾಸಿಂ ಸಾಬ್ ತಿಳಿಸಿದರು.

ರಾಜಕೀಯ

ಕಾಂಗ್ರೆಸ್ ಪಕ್ಷದ ಭರ್ಜರಿ ಗೆಲುವಿನ ಹಿನ್ನೆಲೆಯಲ್ಲಿ ಮುಸ್ಲಿಮ್ ಮತದಾರರ ಪಾತ್ರವನ್ನು ಗುರುತಿಸಿ ಸೂಕ್ತ ಸ್ಥಾನ – ಮಾನಗಳನ್ನು ನೀಡಲು ಕರ್ನಾಟಕ ಮುಸ್ಲಿಮ್ ಯುನಿಟಿ ಒತ್ತಾಯ.

ಈ ಭಾರಿ ಕರ್ನಾಟಕದಲ್ಲಿ ಮುಸ್ಲಿಂ ಸಮುದಾಯವು ಕಾಂಗ್ರೆಸ್ ಪಕ್ಷಕ್ಕೆ ಬಹಳ ಮುತುವರ್ಜಿಯಿಂದ ತಮ್ಮ ಮತಗಳನ್ನು ಚಲಾಯಿಸಿದ್ದಾರೆ. ಮುಸ್ಲಿಂ ಸಮುದಾಯವು ಇತಿಹಾಸದಲ್ಲಿ ಇಷ್ಟೊಂದು ಭರ್ಜರಿಯಾಗಿ ಕಾಂಗ್ರೆಸ್ಸಿಗೆ ಅತಿಹೆಚ್ಚು ಮತ ಚಲಾಯಿಸಿರುವುದು ಇದೇ ಮೊದಲು. ಕಾಂಗ್ರೆಸ್ಸಿನೊಂದಿಗೆ ಮುಸ್ಲಿಂ ಸಮುದಾಯಕ್ಕೆ ಬಹಳಷ್ಟು ನಿರೀಕ್ಷೆಗಳಿವೆ

2ಬಿ ಮೀಸಲಾತಿ ಪರಿಹಾರ ಮುಂತಾದ ಹಲವು ಬೇಡಿಕೆಗಳು ಇವೆ. ಇದೆಲ್ಲವನ್ನೂ ಪರಿಹರಿಸುವುದು ಕಾಂಗ್ರೆಸ್ಸಿನ ಜವಾಬ್ದಾರಿಯಾಗಿದೆ. ಕರ್ನಾಟಕದಲ್ಲಿ ದಲಿತರ ನಂತರ ಎರಡನೇ ಅತಿ ದೊಡ್ಡ ಮತದಾರರನ್ನು ಹೊಂದಿರುವ ಮುಸ್ಲಿಮ್ ಸಮುದಾಯಕ್ಕೆ ಒಂದು ಪಕ್ಷವನ್ನು ಜಯಿಸಲಿಕ್ಕೂ ಅಥವಾ ಸೋಲಿಸಲಿಕ್ಕೂ ಸಾಧ್ಯವೆಂಬ ಸತ್ಯ ಈ ಚುನಾವಣೆಯಲ್ಲಿ ಸಾಬೀತಾಗಿದೆ. ಕರ್ನಾಟಕದ ಮುಸ್ಲಿಮ್ ಸಮುದಾಯವು ಇದೀಗ ರಾಜಕೀಯವಾಗಿ ಅತ್ಯಂತ ಪ್ರಬುದ್ಧವಾಗಿದೆ. ಆದ್ದರಿಂದ ಈ ಸತ್ಯವನ್ನು ಅರಿತು ಕಾಂಗ್ರೆಸ್ ಪಕ್ಷ / ಸರ್ಕಾರ ಮುಸ್ಲಿಮ್ ಸಮುದಾಯದ ಸಾಮಾಜಿಕ ನ್ಯಾಯದ ಬೇಡಿಕೆಗಳನ್ನು ಈಡೇರಿಸುವ ಯೋಜನೆಗಳನ್ನು ಮಾಡಿದರೆ ಮಾತ್ರ ಕಾಂಗ್ರೆಸ್ ಕರ್ನಾಟಕದಲ್ಲಿ ಮಾತ್ರವಲ್ಲ ಮುಂದಿನ ಲೋಕಸಭಾ ಚುನಾವಣೆಯಲ್ಲೂ ಜಯಗಳಿಸಬಹುದು. ಕಾಂಗ್ರೆಸ್ಸಿನ ನೇತಾರರು ಇದರ ಬಗ್ಗೆ ವಿಶೇಷವಾಗಿ ಚಿಂತಿಸಬೇಕಾಗಿದೆ.

ಕರ್ನಾಟಕದ ಅಲ್ಪಸಂಖ್ಯಾತ ಮುಸ್ಲಿಮ್ ಸಮುದಾಯವು ಕಳೆದ ನಾಲ್ಕು ವರ್ಷದಲ್ಲಿ  ಸಾಕಷ್ಟು ನೋವು, ಅನ್ಯಾಯ, ಹಿಂಸೆ ಅನುಭವಿಸಿರುತ್ತಾರೆ. ಮಹಿಳೆಯರ ಶಿಕ್ಷಣದ ವಿಚಾರ (ಹಿಜಾಬ್) ದಲ್ಲಿ ಗೊಂದಲವನ್ನು ಸೃಷ್ಠಿ ಮಾಡಲಾಗಿತ್ತು. ದೇವಸ್ಥಾನ ಪ್ರದೇಶದಲ್ಲಿ ಮುಸ್ಲಿಮರು ವ್ಯಾಪಾರ ಮಾಡಬಾರದು ಎಂದು ಸಂಘಿಗಳಿಂದ ತಾಕೀತು ಮಾಡಲಾಗಿತ್ತು. ಅನಗತ್ಯವಾಗಿ ಗೋವು ಸಂರಕ್ಷಕರ ಹೆಸರಿನಲ್ಲಿ ಅನೈತಿಕ ಪೋಲಿಸ್ ಗಿರಿ ಮಾಡಲಾಗಿತ್ತು. ಲವ್‌ ಜೀಹಾದ್‌ ಹೆಸರಲ್ಲಿ ಮುಸ್ಲಿಮ್ ಯುವಕ/ಯುವತಿಯರ ಮೇಲೆ ವಿನಾ ಕಾರಣ ದೌರ್ಜನ್ಯ ಮಾಡಲಾಗುತಿತ್ತು. 4% ಮೀಸಲಾತಿಯನ್ನು ರದ್ದುಗೊಳಿಸಿ, ಲಿಂಗಾಯತರಿಗೆ ಮತ್ತು ಒಕ್ಕಲಿಗರಿಗೆ ಮರುಹಂಚಿಕೆ ಮಾಡಿ, ಮುಸ್ಲಿಮರನ್ನು ಇ ಡಬ್ಲ್ಯೂಎಸ್ ಕೋಟಾಗೆ ವರ್ಗಾವಣೆಮಾಡಿ ಗೊಂದಲವನ್ನು ಸೃಷ್ಠಿಸಿತು. ಗಣನೀಯವಾಗಿ ಅಲ್ಪಸಂಖ್ಯಾತ ವಿಧ್ಯಾರ್ಥಿ ವೇತನವನ್ನು ಕಡಿತ ಗೋಳಿಸಿ ಸುಮಾರ 6 ಲಕ್ಷಕ್ಕೂ ಹೆಚ್ಚು ಮಕ್ಕಳ ವಿಧ್ಯಾರ್ಥಿ ವೇತನದಿಂದ ವಂಚನೆ ಮಾಡಿತು. ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಹಾಗೂ ನಿಗಮದಿಂದ ಜಾರಿಯಲ್ಲಿದ್ದ ಯೋಜನೆಗಳನ್ನು ದ್ವೇಶದಿಂದ ರದ್ದುಗೊಳಿಸಿತು.

ಅನುದಾನ ಕಡಿತಗೊಳಿಸಿ ಮುಸ್ಲಿಂ ಸಮುದಾಯವನ್ನು ಹೆದರಿಕೆಯಲ್ಲಿಡುವ ಪ್ರಯತ್ನವನ್ನು ಸರ್ಕಾರದಿಂದಲೇ ಮಾಡಲಾಗಿತ್ತು. ಸಿ.ಎ.ಎ. ಮತ್ತು ಎನ್.ಆರ್.ಸಿ ಹೋರಾಟದಲ್ಲಿ ಮಂಗಳೂರಿನಲ್ಲಿ ಗೋಲಿಬಾರ್ ನಡೆಸಿ ಮುಗ್ದ ಮುಸ್ಲಿಮರ ಸಾವಿಗೆ ಕಾರಣವಾಯಿತು. ಮಂಗಳೂರು ಹಾಗೂ ನರಗುಂದದಲ್ಲಿ ಕೋಮುದ್ವೇಶದ ಕಾರಣ ಕೊಲೆಗಳಾದರೂ ಕನಿಷ್ಠ ಮಾನವಿಯತೆ ತೋರದಿರುವದು ಮತ್ತು ಅವರಿಗೆ ಸೂಕ್ತ ಪರಿಹಾರ ನೀಡದೆ ತಾರತಮ್ಯ ಮಾಡಿರುವದು ಮುಸ್ಲಿಮ್ ಭೇಗುದಿಗೆ ಕಾರಣವಾಗಿತ್ತು. ಇದೆಲ್ಲವನ್ನು ಸೂಕ್ಷ್ಮವಾಗಿ ನೋಡುತ್ತಿದ್ದ ಮುಸ್ಲಿಮ್ ಸಮುದಾಯಕ್ಕೆ 2023ರ ಸಾರ್ವತ್ರಿಕ ಚುನಾವಣೆ ವರವಾಗಿ ಬಂದಿತು.

ಈ ಮೇಲಿನ ಎಲ್ಲ ಬೆಳವಣಿಗೆಗಳನ್ನ ಹತ್ತಿರದಲ್ಲಿ ಕಂಡಿದ್ದ ಮುಸ್ಲಿಮರಲ್ಲಿ ಸಾಕಷ್ಟು ಜಾಗೃತಿ ಉಂಟಾಗಿತ್ತು. ಹೀಗಾಗಿ ರಾಜ್ಯದ ಮುಸ್ಲಿಮ್ ಸಮುದಾಯ ಕಾಂಗ್ರೆಸ್ ಪಕ್ಷವನ್ನು ಇಡಿಯಾಗಿ ಬೆಂಬಲಿಸಿ ಶೇ.95ರಷ್ಟು ಪೂಲಿಂಗ್ ಮಾಡಿರುವುದರಿಂದ ರಾಜ್ಯದಲ್ಲಿ ಬಿಜೆಪಿ ಸೋತು ಕಾಂಗ್ರೆಸ್ ಪಕ್ಷ ಅಧಿಕಾರದ ಗದ್ದುಗೆ ಹಿಡಿಯಲು ಮುಸ್ಲಿಮರು ಬಹುಮುಖ್ಯ ಪಾತ್ರವನ್ನುವಹಿಸಿದರು. ಇದಕ್ಕಾಗಿ ಕರ್ನಾಟಕ ಮುಸ್ಲಿಮ್ ಯೂನಿಟಿಯು, ಸಮುದಾಯದ ಎಲ್ಲಾ ಮುಖಂಡರುಗಳಿಗೆ, ಉಲೇಮಾಗಳಿಗೆ, ಚಿಂತಕರಿಗೆ ಹಾಗೂ ರಾಜ್ಯದ ಸಮಸ್ತ ಮುಸ್ಲಿಮ್ ಮತದಾರರಿಗೆ ಅಭಿನಂದಿಸುತ್ತದೆ.

ಕರ್ನಾಟಕದಲ್ಲಿ ಮುಸ್ಲಿಂ ಮತಗಳು ವಿಭಜನೆಯಾಗದೆ ಇಂದು ಬಹುಮತದ ಗೆಲುವು ಸಾಧಿಸಿರುವ ಕಾಂಗ್ರೆಸ್ ಪಕ್ಷದಲ್ಲಿ 9  ಮುಸ್ಲಿಂ ಅಭ್ಯರ್ಥಿಗಳು ಗೆದ್ದು ಬಿಗಿದ್ದಾರೆ. ಇವರಲ್ಲಿ ಬಹುತೇಕರಿಗೆ ಸರ್ಕಾರದಲ್ಲಿ ಪ್ರಾತಿನಿಧ್ಯ ಸಿಗಬೇಕು ಎಂಬುದು ಕರ್ನಾಟಕ ಮುಸ್ಲಿಮ್ ಯೂನಿಟಿಯ ಹೊಕ್ಕೋತ್ತಾಯವಾಗಿದೆ. ಹಾಗೆಯೇ ಕರ್ನಾಟಕದ ಎಲ್ಲಾ ವಿಶ್ವವಿದ್ಯಾಲಯದ ಸಿಂಡಿಕೇಟ್ ಗಳಲ್ಲಿ ಮುಸ್ಲಿಮರಿಗೆ ಸೂಕ್ತ ಆಧ್ಯತೆ, ಸರ್ಕಾರದ ಎಲ್ಲಾ ಪ್ರಮುಖ ನಿಗಮ / ಮಂಡಳಿಗಳಲ್ಲಿ ಸೂಕ್ತ ಆಧ್ಯತೆ ನೀಡಬೇಕು, ರಾಜ್ಯದ ಎಲ್ಲಾ ಅಲ್ಪಸಂಖ್ಯಾತ ನಿಗಮ / ಮಂಡಳಿಗಳನ್ನು ಸಂಪೂರ್ಣ ಹಾಗು ಖಡ್ದಾಯವಾಗಿ ಭರ್ತಿಮಾಡ ಬೇಕು. ಅದರಲ್ಲೂ ವಿಶೇಷವಾಗಿ ರಾಜ್ಯಾದ್ಯಂತ ಚುನಾವಣಾ ಪ್ರವಾಸ ಕೈಕೊಂಡು, ಮುಸ್ಲಿಮರ ಮತಗಳನ್ನು ಕ್ರೋಢೀಕರಿಸಿದ, ಕರ್ನಾಟಕ ಮುಸ್ಲಿಮ್ ಜನನಾಯಕ, ಪ್ರಖರ ವಾಗ್ಮಿ, ಅರ್ಹ, ಅಹಿಂದ ಮುಖಂಡರೂ ಆಗಿರುವ ಶ್ರೀ.ಬಿ.ಜಡ್.ಜಮೀರ್ ಅಹ್ಮದ್ ಖಾನ್ ರವರಿಗೆ  ಉಪಮುಖ್ಯಮಂತ್ರಿ ಸ್ಥಾನವನ್ನು ನೀಡಿ, ಕಾಂಗ್ರೆಸ್ ಪಕ್ಷದೊಂದಿಗೆ ನಿಂತಿರುವ ಸಮುದಾಯದ ಉಪಕಾರ ಸ್ಮರಿಸಬೇಕು ಎಂದು ಕಾಂಗ್ರೆಸ್ ಪಕ್ಷಕ್ಕೆ ಕರ್ನಾಟಕ ಮುಸ್ಲಿಮ್ ಯುನಿಟಿ ಸಂಘಟನೆ ಒತ್ತಾಯ ಮಾಡುತ್ತಿದೆ.

ಗೆಲುವಿನ ಸಂಭ್ರಮದಲ್ಲಿ ಶೇ.95ರಷ್ಟು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಿರುವ ಮುಸ್ಲಿಮ್ ಸಮಾಜವನ್ನು ಮರೆಯಬಾರದು. ಮುಸ್ಲಿಮ್ ಸಮುದಾಯಕ್ಕೆ ನೀಡಿರುವ 2ಬಿ ಮೀಸಲಾತಿಯ ಪ್ರಕರಣವನ್ನು ತಕ್ಷಣಕ್ಕೆ ಬಗೆಹರಿಸಬೇಕು. ದಲಿತರಿಗೆ ನೀಡಿರುವ ಭರವಸೆಯನ್ನೂ ಈಡೇರಿಸಬೇಕು ಎಂದು ಕರ್ನಾಟಕ ಮುಸ್ಲಿಂ ಯೂನಿಟಿ ಒತ್ತಾಯಿಸುತ್ತಿದೆ. ಅಲ್ಲದೆ ಕಾಂಗ್ರೆಸ್ ಪಕ್ಷದಿಂದ ಗೆದ್ದಿರುವ ಸಮುದಾಯದ ಒಂಬತ್ತು ಅಭ್ಯರ್ಥಿಗಳಿಗೆ ಹಾಗೂ ರಾಜ್ಯದ ಧಿಮಂತ ನಾಯಕ ಶ್ರೀ.ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಶ್ರೀ. ಡಿ.ಕೆ. ಶಿವಕುಮಾರ್ ರವರನ್ನು ಈ ಮೂಲಕ ಕೆ.ಎಮ್.ಯು ಅಭಿನಂದಿಸುತ್ತಿದೆ.

ರಾಜ್ಯ

ಡಿ.ಸಿ.ಪ್ರಕಾಶ್ ಸಂಪಾದಕರು

ಒಬಿಸಿ ಕೆಟಗರಿಯಲ್ಲಿ ಮುಸ್ಲಿಮರಿಗೆ ನೀಡಲಾಗಿದ್ದ ಶೇ 4ರಷ್ಟು ಮೀಸಲಾತಿಯನ್ನು ರದ್ದುಗೊಳಿಸಿ, ಅವೈಜ್ಞಾನಿಕವಾಗಿ EWS ವರ್ಗದಲ್ಲಿ ಸೇರಿಸಿರುವುದು ಸಾಮಾಜಿಕ ದಬ್ಬಾಳಿಕೆ ಎಂದು ಒತ್ತಿ ಹೇಳಿದರೂ ಅದನ್ನು ಒಪ್ಪಿಕೊಳ್ಳಲು ನಿರಾಕರಿಸಿದ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರದ ನೀತಿ ನಿರ್ಧಾರಗಳ ವಿರುದ್ಧ ವಿವಿಧ ಮುಸ್ಲಿಂ ಸಂಘಟನೆಗಳು ಮತ್ತು ವ್ಯಕ್ತಿಗಳು ಸಲ್ಲಿಸಿರುವ ಹಲವು ಅರ್ಜಿಗಳನ್ನು ವಿಚಾರಣೆಗೆ ಕೈಗೆತ್ತಿಕೊಂಡ ನ್ಯಾಯಪೀಠ, ಸರ್ಕಾರದ ನಡೆಯು ಅಸ್ಥಿರ ಹಾಗೂ ದೋಷಪೂರಿತವಾಗಿರುವಂತೆ ಕಾಣಿಸುತ್ತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ.

ಒಬಿಸಿ ಕೆಟಗರಿಯಲ್ಲಿ ಮುಸ್ಲಿಮರಿಗೆ ನೀಡಲಾಗಿದ್ದ ಶೇ 4ರಷ್ಟು ಮೀಸಲಾತಿಯನ್ನು ರದ್ದುಗೊಳಿಸಿರುವ ನಿರ್ಧಾರವನ್ನು ಏಪ್ರಿಲ್ 18ರವರೆಗೂ ಜಾರಿಗೊಳಿಸುವುದಿಲ್ಲ ಎಂದು ಕರ್ನಾಟಕ ಸರ್ಕಾರ ಸುಪ್ರೀಂಕೋರ್ಟ್‌ಗೆ ಗುರುವಾರ ಭರವಸೆ ನೀಡಿದೆ.

ನ್ಯಾಯಾಲಯದ ಎದುರು ಹಾಜರುಪಡಿಸಿರುವ ದಾಖಲೆಗಳನ್ನು ಗಮನಿಸಿದರೆ, ಮೇಲ್ನೋಟಕ್ಕೆ ಕರ್ನಾಟಕ ಸರ್ಕಾರದ ನಿರ್ಧಾರವು ‘ಸಂಪೂರ್ಣ ತರ್ಕರಹಿತ ಕಲ್ಪನೆ’ ಎಂಬಂತೆ ಕಾಣಿಸುತ್ತದೆ ಎಂಬುದಾಗಿ ನ್ಯಾಯಮೂರ್ತಿಗಳಾದ ಕೆ.ಎಂ.ಜೋಸೆಫ್ ಹಾಗೂ ಬಿ.ವಿ.ನಾಗರತ್ನ ಅವರನ್ನೊಳಗೊಂಡ ನ್ಯಾಯಪೀಠ ಅಸಮಾಧಾನ ವ್ಯಕ್ತಪಡಿಸಿದೆ.

ರಾಜ್ಯದ ಜನಸಂಖ್ಯೆಯಲ್ಲಿ ಶೇ.13ರಷ್ಟಿರುವ ಮುಸ್ಲಿಂ ಜನಸಂಖ್ಯೆ ವಿರುದ್ಧ ತಾರತಮ್ಯ ಮಾಡುವ ಮೂಲಕ ಸಮಾನತೆಯ ಸಾಂವಿಧಾನಿಕ ತತ್ವವನ್ನು ಹಾಗೂ ಜಾತ್ಯತೀತತೆಯನ್ನು ಕರ್ನಾಟಕ ಸರ್ಕಾರ ಉಲ್ಲಂಘನೆ ಮಾಡಿದೆ ಎಂದು ಅರ್ಜಿದಾರರು ವಾದಿಸಿದರು. ತನ್ನ ನಿರ್ಧಾರವನ್ನು ಸಮರ್ಥಿಸಿಕೊಳ್ಳಲು ಸರ್ಕಾರವು ಯಾವುದೇ ಅಧ್ಯಯನ ನಡೆಸಿಲ್ಲ ಅಥವಾ ಯಾವುದೇ ಪ್ರಾಯೋಗಿಕ ದತ್ತಾಂಶ ಸಂಗ್ರಹಿಸಿಲ್ಲ ಎಂದು ಪ್ರತಿಪಾದಿಸಿದರು.

ಈ ನಿರ್ಧಾರವನ್ನು ಸಮರ್ಥಿಸಿಕೊಂಡ ರಾಜ್ಯ ಸರ್ಕಾರ, ರಾಜ್ಯದಲ್ಲಿನ ವಿವಿಧ ಸಮುದಾಯಗಳ ಸಮಾಜೋ- ಆರ್ಥಿಕ ಸ್ಥಿತಿಗತಿಯನ್ನು ಪರಿಶೀಲಿಸಿ ಆಯೋಗ ಸಲ್ಲಿಸಿದ್ದ ಶಿಫಾರಸಿನ ಆಧಾರದಲ್ಲಿ ಇದನ್ನು ಕೈಗೊಳ್ಳಲಾಗಿದೆ ಎಂದು ಹೇಳಿತು. ರಾಜ್ಯದ ಜನಸಂಖ್ಯೆಯಲ್ಲಿ ಒಟ್ಟು ಶೇ.40 ರಷ್ಟಿರುವ ಒಕ್ಕಲಿಗರು ಮತ್ತು ಲಿಂಗಾಯತರ ಪ್ರಮಾಣದ ಐತಿಹಾಸಿಕ ಹಾಗೂ ಸಾಂಸ್ಕೃತಿಕ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ. ಈ ಸಮುದಾಯಗಳು ಅಧಿಕ ಮೀಸಲಾತಿಗೆ ಅರ್ಹವಾಗಿವೆ ಎಂದು ಸರ್ಕಾರ ತಿಳಿಸಿದೆ.

ಆದರೆ ಆಯೋಗದ ವರದಿಯ ಸಿಂಧುತ್ವದ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಕೋರ್ಟ್, ತನ್ನ ನಿರ್ಧಾರಕ್ಕೆ ಪೂರಕವಾದ ಮತ್ತಷ್ಟು ಪುರಾವೆಗಳನ್ನು ಒದಗಿಸುವಂತೆ ಸರ್ಕಾರಕ್ಕೆ ಸೂಚಿಸಿದೆ. ಹಿಂದಿನ ಕಾಂಗ್ರೆಸ್ ಸರ್ಕಾರವು 2013ರಲ್ಲಿ ಜಾರಿಗೊಳಿಸಿದ ಮೀಸಲಾತಿಯಲ್ಲಿ ಮುಸ್ಲಿಮರ ಶೇ.4ರಷ್ಟನ್ನು ಹೇಗೆ ಗುರುತಿಸಲಾಗಿದೆ ಎಂಬ ವಿವರಣೆ ನೀಡುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಲಾಗಿದೆ.

1992ರಲ್ಲಿ ಸುಪ್ರೀಂಕೋರ್ಟ್ ನೀಡಿದ್ದ ನಿರ್ಣಾಯಕ ತೀರ್ಪಿನಲ್ಲಿ ನಿಗದಿಪಡಿಸಲಾಗಿದ್ದ ಶೇ.50ರ ಮೀಸಲಾತಿಯ ಮಿತಿಯನ್ನು ಕರ್ನಾಟಕ ಸರ್ಕಾರದ ನಿರ್ಧಾರ ಮೀರಿದೆ ಎಂಬುದನ್ನು ಕೋರ್ಟ್ ಗಮನಿಸಿದೆ. ಈ ಮಿತಿಯನ್ನು ದಾಟಲು ಅಸಾಧಾರಣ ಸನ್ನಿವೇಶ ಹಾಗೂ ನಿರಾಕರಿಸಲಾಗದ ಕಾರಣಗಳು ಅತಿ ಅಗತ್ಯ ಎಂದು ಕೋರ್ಟ್ ತಿಳಿಸಿದೆ.

ಬಳಿಕ ಏಪ್ರಿಲ್ 18ಕ್ಕೆ ವಿಚಾರಣೆ ಮುಂದೂಡಿದ ನ್ಯಾಯಾಲಯ, ಕರ್ನಾಟಕ ಸರ್ಕಾರ ಹಾಗೂ ಒಕ್ಕಲಿಗ ಮತ್ತು ಲಿಂಗಾಯತ ಪ್ರತಿನಿಧಿಗಳು ಅರ್ಜಿಗಳಿಗೆ ತಮ್ಮ ಪ್ರತಿಕ್ರಿಯೆ ಸಲ್ಲಿಸುವಂತೆ ಹೇಳಿದೆ. ಮುಂದಿನ ಆದೇಶದವರೆಗೂ ಈ ನಿರ್ಧಾರದ ಆಧಾರದಲ್ಲಿ ಯಾವುದೇ ನೇಮಕಾತಿ ಅಥವಾ ಪ್ರವೇಶಾತಿ ನಡೆಸದಂತೆ ನಿರ್ದೇಶನ ನೀಡಿದೆ. ಒಟ್ಟಾರೆಯಾಗಿ ಇದು ಬಿಜೆಪಿ ಸರ್ಕಾರದಿಂದ ಮೀಸಲಾತಿ ವಂಚಿತರಾದ ಮುಸ್ಲಿಮರ ಕಾನೂನಾತ್ಮಕ ಹೋರಾಟಕ್ಕೆ ಸಿಕ್ಕಿದ ಮೊದಲ ಜಯವಾಗಿದೆ. Muslim OBC Reservation: Supreme Court Slams Karnataka Govt For Scrapping 4 percent Quota.

ರಾಜಕೀಯ

ಬೆಂಗಳೂರು: ಹಿಂದುಳಿದ ವರ್ಗದಲ್ಲಿ ಮುಸ್ಲಿಮರಿಗೆ ಸಂವಿಧಾನ ಬದ್ಧವಾಗಿ ನೀಡಿರುವ ಶೇಕಡಾ 4ರ ಮೀಸಲಾತಿಯನ್ನು ಏಕಾ ಏಕಿ ರದ್ದು ಮಾಡುವ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ಮುಸ್ಲಿಂ ದ್ವೇಷವನ್ನು ಬಹಿರಂಗಪಡಿಸಿದ್ದಾರೆ. ರಾಜ್ಯ ಸರಕಾರದ ಈ ಸಂವಿಧಾನ ವಿರೋಧಿ ಕ್ರಮದ ವಿರುದ್ಧ ಕಾನೂನು ಹೋರಾಟ ನಡೆಸುವುದಾಗಿ ಕರ್ನಾಟಕ ಮುಸ್ಲಿಂ ಯುನಿಟಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.

ರಾಜ್ಯದಲ್ಲಿ ನಾಗನಗೌಡ ಸಮಿತಿಯಿಂದ ಹಿಡಿದು ನ್ಯಾ.ಚಿನ್ನಪ್ಪ ರೆಡ್ಡಿ ಆಯೋಗದವರೆಗೆ ಕಳೆದ 60 ವರ್ಷಗಳಲ್ಲಿ ಬಂದಿರುವ ಎಲ್ಲ ಆಯೋಗಗಳೂ ಮುಸ್ಲಿಮರನ್ನು ಹಿಂದುಳಿದ ವರ್ಗ ಎಂದೇ ಗುರುತಿಸಿದೆ. ನ್ಯಾ.ಚಿನ್ನಪ್ಪ ರೆಡ್ಡಿ ಆಯೋಗದ ಅಧ್ಯಯನ ಪೂರ್ಣ ವರದಿಯ ಹಿನ್ನೆಲೆಯಲ್ಲಿ ಹಿಂದುಳಿದ ವರ್ಗದಲ್ಲಿ 4% ಮೀಸಲಾತಿಯನ್ನು ಮುಸ್ಲಿಮರಿಗೆ ನೀಡಲಾಗಿದೆ. ಇದನ್ನು ಏಕಾ ಏಕಿ ರದ್ದು ಪಡಿಸಿರುವುದು ಸಂವಿಧಾನ ವಿರೋಧಿ ಕ್ರಮ. ಇದನ್ನು ಒಪ್ಪಲು ಸಾಧ್ಯವಿಲ್ಲ. ಚುನಾವಣೆ ಹತ್ತಿರ ಬಂದಿರುವ ಸಮಯದಲ್ಲಿ ಮುಸ್ಲಿಮರು ಮತ್ತು ಲಿಂಗಾಯತ / ಒಕ್ಕಲಿಗ ಸಮುದಾಯದ ಮಧ್ಯೆ ವೈಷಮ್ಯ ಹುಟ್ಟಿಸಲು ಬಿಜೆಪಿ ಸರ್ಕಾರ ಯತ್ನಿಸುತ್ತಿದೆ. ಈ ಮೂಲಕ ರಾಜಕೀಯ ದುರ್ಲಾಭ ಪಡೆಯಲು ಮುಖ್ಯಮಂತ್ರಿ ಬೊಮ್ಮಾಯಿ ಸಂಚು ಹೂಡಿದ್ದಾರೆ. ಈ ಸಂಚಿಗೆ ಮುಸ್ಲಿಮರು ಬಲಿಯಾಗಬಾರದು. ಸಂಯಮದಿಂದ ವರ್ತಿಸಬೇಕು. ಯಾವುದೇ ಬೀದಿ ಹೋರಾಟಕ್ಕೆ ಇಳಿಯದೆ, ಈ ಕ್ರಮದ ವಿರುದ್ಧ ಕಾನೂನು ಹೋರಾಟವನ್ನು ಕೈಗೆತ್ತಿಕೊಳ್ಳಬೇಕು. ಕರ್ನಾಟಕ ಮುಸ್ಲಿಂ ಯೂನಿಟಿ ಕಾನೂನು ತಜ್ಞರ ಜೊತೆಗೆ ಈಗಾಗಲೆ ಸಮಾಲೋಚನೆ ನಡೆಸುತ್ತಿದ್ದು ಕಾನೂನು ಹೋರಾಟವನ್ನು ಕೈಗೆತ್ತಿಕೊಳ್ಳಲಿದೆ.

ಜಯಪ್ರಕಾಶ್ ಹೆಗ್ಡೆ ನೇತೃತ್ವದ ರಾಜ್ಯ ಹಿಂದುಳಿದ ವರ್ಗಗಳ ಶಿಫಾರಸ್ಸಿನ ಅನ್ವಯ ಮುಸ್ಲಿಂ ಮೀಸಲಾತಿಯನ್ನು ರದ್ದುಗೊಳಿಸಲಾಗಿದೆ. ಅವರನ್ನು ಮುಂದುವರಿದ ವರ್ಗ ಎಂದು ಪರಿಗಣಿಸಿ, ಆರ್ಥಿಕವಾಗಿ ದುರ್ಬಲ ವರ್ಗಕ್ಕೆ (EWS) ಸೇರಿಸಿ, ಮೀಸಲಾತಿ ಕೊಡಲಾಗುವುದು (EWS) ಎಂದು ಮುಖ್ಯ ಮಂತ್ರಿಯವರು ಹೇಳಿದ್ದಾರೆ. ಜಯಪ್ರಕಾಶ್ ಹೆಗ್ಡೆ ಆಯೋಗವು ಈ ಕುರಿತು ಯಾವ ಸಮೀಕ್ಷೆಯನ್ನೂ ಮಾಡದೆ ಹೇಗೆ ನಿರ್ಧಾರ ಕೈ ಗೊಂಡಿದೆ? ಜಯಪ್ರಕಾಶ್ ಹೆಗ್ಡೆ ಆಯೋಗವು ರಹಸ್ಯ ಸಮೀಕ್ಷೆ ಏನಾದರೂ ಮಾಡಿದೆಯೆ? ಹಾಗಿದ್ದರೆ ಆ ವರದಿಯನ್ನು ಸರ್ಕಾರ ಬಹಿರಂಗ ಪಡಿಸಬೇಕು ಎಂದು ಕರ್ನಾಟಕ ಮುಸ್ಲಿಂ ಯೂನಿಟಿಯು ಒತ್ತಾಯಿಸಿದೆ. ಮುಸ್ಲಿಮರ ಮೀಸಲಾತಿಯನ್ನು ಸಂವಿಧಾನ ಬದ್ಧವಾಗಿ ರಕ್ಷಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಜಿಲ್ಲಾ ಮಟ್ಟದಲ್ಲಿ ಸಮಾಲೋಚನೆ ನಡೆಸಲಾಗುವುದು. ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯದ ಸ್ವಾಮೀಜಿಗಳ ಸಲಹೆಯನ್ನೂ ಪಡೆದು ಮುಂದು ವರಿಯಲಾಗುವುದು. ಸಮುದಾಯ ಯಾವುದೇ ಭಾವಾವೇಶಕ್ಕೆ ಒಳಗಾಗದೆ ಕಾನೂನು ಹೋರಾಟದ ಮೂಲಕ ನ್ಯಾಯ ಪಡೆಯಲು ಯತ್ನಿಸಬೇಕು ಎಂದು ಮುಸ್ಲಿಂ ಯೂನಿಟಿ ಮನವಿ ಮಾಡಿದೆ. karnataka Government scraps Reservation For muslim

ರಾಜ್ಯ

ಚಿತ್ರದುರ್ಗ: ಕರ್ನಾಟಕ ಮುಸ್ಲಿಂ ಯುನಿಟಿಯ ರಾಜ್ಯ ಕಾರ್ಯಕಾರಿ ಸಮಿತಿ ಸಭೆಯು ಕಳೆದ ಮಾರ್ಚ್ 15 ರಂದು ಚಿತ್ರದುರ್ಗದ ಅಹ್ಮದ್ ಪ್ಯಾಲೆಸ್ ನಲ್ಲಿ ನಡೆಯಿತು. ರಾಜ್ಯಾಧ್ಯಕ್ಷರಾದ ಅಬ್ದುಲ್ ಸತ್ತಾರ್ ಬೆಂಗಳೂರು, ರಾಜ್ಯ ಉಪಾಧ್ಯಕ್ಷರಾದ ನಾಸೀರ್ ಇಂಪಾಲ್ ಚಿಕ್ಕಮಗಳೂರು, ಕಾರ್ಯಾಧ್ಯಕ್ಷರಾದ ಜಿ.ಎ.ಬಾವಾ ಬೆಂಗಳೂರು, ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ.ಖಾಸಿಂ ಸಾಬ್, ಉತ್ತರ ಕರ್ನಾಟಕ ಸಂಚಾಲಕರಾದ ಜಬ್ಬಾರ್ ಕಲಬುರ್ಗಿ, ದಕ್ಷಿಣ ಕರ್ನಾಟಕ ಸಂಚಾಲಕರಾದ ಅಬ್ದುಲ್ ವಾಹಿದ್ ಮಾಗುಂಡಿ ಸೇರಿದಂತೆ ಸಂಘಟನಾ ಕಾರ್ಯದರ್ಶಿ ಜಾಬೀರ್ ತಂಙಳ್ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದ ಈ ಸಮಾಲೋಚನ ಸಭೆಯಲ್ಲಿ ಕರ್ನಾಟಕ ಮುಸ್ಲಿಮ್ ಯುನಿಟಿಯ ಬೆಂಗಳೂರು ನಗರ ಜಿಲ್ಲಾಧ್ಯಕ್ಷರಾಗಿ ಸೈಯದ್ ನದೀಮ್ ಹಾಗು ಚಿಕ್ಕಬಳ್ಳಾಪುರ ಜಿಲ್ಲಾಧ್ಯಕ್ಷರಾಗಿ ಸಾದಿಕ್ ಅವರನ್ನು ಆಯ್ಕೆ ಮಾಡಲಾಗಿದೆ.

ರಾಜ್ಯದ ಮುಸ್ಲಿಮರ ಸಾಮಾಜಿಕ ನ್ಯಾಯ ಹಾಗೂ ಮೀಸಲಾತಿಗಾಗಿ ಸಕ್ರಿಯವಾಗಿ ಕೆಲಸ ಮಾಡುತ್ತಿರುವ KMU ಸಂಘಟನೆಯ ರಾಜ್ಯ ಕಾರ್ಯಕಾರಿ ಸಮಿತಿಯ ಸಮಾವೇಶದಲ್ಲಿ ಕರ್ನಾಟಕ ಮುಸ್ಲಿಮ್ ಯುನಿಟಿಯ ಬೆಂಗಳೂರು ನಗರ ಜಿಲ್ಲಾಧ್ಯಕ್ಷರಾಗಿ ಕನ್ನಡಪರ ಹೋರಾಟಗಾರರು, ಯುವ ಉದ್ಯಮಿ ಹಾಗೂ ಗುರುಕುಲ ಮೆಂಟರ್ಸ್ ಫೌಂಡೇಷನ್ ಸಂಸ್ಥಾಪಕರು ಆಗಿರುವ ಸೈಯದ್ ನದೀಮ್ ಎಸ್ (ಕನ್ನಡ ನದೀಮ್) ಹಾಗೂ ಚಿಕ್ಕಬಳ್ಳಾಪುರ ಜಿಲ್ಲಾಧ್ಯಕ್ಷರಾಗಿ ಯುವ ಮುಖಂಡರೂ ಆಗಿರುವ ಯುವ ಉದ್ಯಮಿ ಚಿಂತಾಮಣಿ ಸಾದಿಕ್ ರವರನ್ನು ಆಯ್ಕೆಮಾಡಲಾಗಿದೆ.