ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
Rahul Gandhi Archives » Page 8 of 8 » Dynamic Leader
October 23, 2024
Home Posts tagged Rahul Gandhi (Page 8)
ದೇಶ ರಾಜಕೀಯ

ಡಿ.ಸಿ.ಪ್ರಕಾಶ್ ಸಂಪಾದಕರು

ಬೆಂಗಳೂರು: ‘ಅದಾನಿ ಗ್ರೂಪ್ ಕಂಪೆನಿಗಳು ಅಕ್ರಮಗಳಲ್ಲಿ ತೊಡಗಿವೆ’ ಎಂದು ಹಿಂಡೆನ್‌ಬರ್ಗ್ ವರದಿ ಮಾಡಿದ ನಂತರ ಅದಾನಿ ಎಂಟರ್‌ಪ್ರೈಸಸ್ ಷೇರುಗಳು ತೀವ್ರ ಕುಸಿತವನ್ನು ಅನುಭವಿಸಿದವು. ಇದು ಭಾರತದ ಆರ್ಥಿಕತೆಯ ಮೇಲೆ ದೊಡ್ಡ ರೀತಿಯಲ್ಲಿ ಪರಿಣಾಮವನ್ನು ಬೀರುತ್ತದೆ ಎಂದು ವಿರೋಧ ಪಕ್ಷಗಳು ಹಾಗೂ ಆರ್ಥಿಕ ತಜ್ಞ್ಯರೆಲ್ಲ ಕಳವಳ ವ್ಯಕ್ತ ಪಡಿಸುತ್ತಿದ್ದಾರೆ. ವಿರೋಧಪಕ್ಷಗಳ ಒಕ್ಕೊರಳಿನ ಒತ್ತಾಯದಿಂದ ಸಂಸತ್ ನಲ್ಲಿ ಕಲಾಪಗಳು ನಡೆಯದೆ ಹಲವಾರು ಬಾರಿ ಮುಂದೂಡಲ್ಪಟ್ಟವು.

ಈ ಹಿನ್ನಲೆಯಲ್ಲಿ ಫೆಬ್ರವರಿ 8 ರಂದು ಸುಮಾರು 9 ಗಂಟೆಗಳ ಕಾಲ ಸಂಸತ್ತಿನಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಅದಾನಿಯ ಬಗ್ಗೆ ಯಾವುದೇ ಅಭಿಪ್ರಾಯ ವ್ಯಕ್ತಪಡಿಸದೆ, ನೆಹರು ಕುಟುಂಬವನ್ನು ತರಾಟೆಗೆ ತೆಗೆದುಕೊಂಡರು. ‘ನೆಹರೂ ವಂಶಸ್ಥರೇಕೆ ಅವರ ಉಪನಾಮ ಬಳಸಲ್ಲ’ ಎಂಬುದನ್ನು ಒಂದು ವಿಷಯವಾಗಿ ಮುನ್ನಲೆಗೆ ತಂದು, ಬಿಜೆಪಿ ಸದಸ್ಯರನ್ನು ನಗೆಗಡಲಲ್ಲಿ ತೇಲಿಸಲು ಲೇವಡಿ, ಹಾಸ್ಯ ಚಟಾಕಿ ಹಾರಿಸುತ್ತಾ ಕಾಲ ಕಳೆದರು. ದೇಶವಿರುವ ಪರಿಸ್ಥಿತಿಯಲ್ಲಿ ಮೋದಿಗೆ ಹಾಷ್ಯತನ ಬೇಕೆ? ಎಂಬುದನ್ನು ಜನ  ಕೇಳುತ್ತಿದ್ದಾರೆ. ಭಾರತೀಯ ಪದ್ಧತಿಯಂತೆ – ಪ್ರಪಂಚದ ಪದ್ಧತಿಯಂತೆ ಗಂಡು ಮಕ್ಕಳ ಕುಟುಂಬದ ಹೆಸರೇ ಮುಂದುವರಿಯುತ್ತದೆ. ನೆಹರೂಗೆ ಮಗನಿರಲಿಲ್ಲ. ಇಂದಿರಾ ಒಬ್ಬಳೇ ಮಗಳು. ಆದ್ದರಿಂದ ಅವರ ಪತಿ ಫಿರೋಜ್ ಗಾಂಧಿಯ ಹೆಸರನ್ನು ಉಪನಾಮವಾಗಿ ಬಳಸುತ್ತಿದ್ದಾರೆ. ಇದು ಪ್ರಧಾನಿಗೆ ಗೊತ್ತಿಲ್ಲವೇ?

2014ರಲ್ಲಿ ಅದಾನಿ ಪುತ್ರನ ವಿವಾಹವಾಗಿತ್ತು. ಈ ಮದುವೆಗೆ ಜಗತ್ತಿನಾದ್ಯಂತ ಕ್ಲಾಸ್ ಒನ್ ಶ್ರೀಮಂತರೆಲ್ಲ ಬಂದು ಹೋದರು. ಆದರೆ, ನರೇಂದ್ರ ಮೋದಿಯವರು ಮಾತ್ರ ಮೂರು ದಿನಗಳು ಅಲ್ಲಿಯೇ ಉಳಿದು, ಅದಾನಿ ಪುತ್ರನ ವಿವಾಹದ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ಆದರೆ, ಮೋದಿ ಅವರ ತಾಯಿ ಇತ್ತೀಚೆಗೆ ನಿಧನರಾದಾಗ, ಅವರು ಕೆಲವೇ ಗಂಟೆಗಳಲ್ಲಿ ಅವರ ಅಂತಿಮ ವಿಧಿಗಳನ್ನು ಪೂರ್ಣಗೊಳಿಸಿ ಹೊರನಡೆದರು. ಪ್ರದಾನಿ ಮೋದಿಗೆ ತಾಯಿಗಿಂತ ದೇಶ ಸೇವೆಯೇ ದೊಡ್ಡದು ಎಂಬಂತೆ ಅಂದು ಬಿಂಬಿಸಲಾಯಿತು. ಆದರೆ, ಮೋದಿಗೆ ತನ್ನ ತಾಯಿಗಿಂತ, ಈ ದೇಶದ ಸೇವೆಗಿಂತ; ಅದಾನಿ ಪುತ್ರನ ವಿವಾಹವೇ ಅಂದು ಮುಖ್ಯವಾಗಿತ್ತು ಎಂಬುದನ್ನು ಇನ್ನು ಯಾರೂ ಮರೆತಿಲ್ಲ.    

‘ಮೂವತ್ತು ವರ್ಷಗಳಿಂದ ಕುಟುಂಬದೊಂದಿಗೆ ಇರಲಿಲ್ಲ’ ಎಂದು ಪ್ರಧಾನಿ ನರೇಂದ್ರ ಮೋದಿ ಈ ಹಿಂದೆ ಹೇಳಿದ್ದರು. ಹಾಗಾದರೆ, ಇಷ್ಟು ವರ್ಷ ಅಮ್ಮನನ್ನು ಸಾಕುತ್ತಿದ್ದ ಅಣ್ಣನೂ ಸೇರಿದಂತೆ ಜೊತೆಯಲ್ಲಿ ಹುಟ್ಟಿದವರು ಬಂದು ಶಾಸ್ತ್ರೋಕ್ತವಾಗಿ ನಡೆದುಕೊಂಡಿರಬೇಕು ಅಲ್ಲವೇ? ಆದರೆ, ಅಂದು ನಾವು ಮೋದಿಯನ್ನು ಮಾತ್ರ ನೋಡುತ್ತಿದ್ದೆವು. ಪ್ರಧಾನಿಯ ತಾಯಿಯ ಸಾವನ್ನು ಹಾಗೂ ಪ್ರಧಾನಿಯನ್ನು ಲೈವ್ ಟೆಲಿಕಾಸ್ಟ್ ಮಾಡಿ, ತಮ್ಮ ಟಿ.ಆರ್.ಪಿ.ಯನ್ನು ಹೆಚ್ಚಿಸಿಕೊಂಡ ಮಾದ್ಯಮಗಳು, ಪ್ರಧಾನಿ ನರೇಂದ್ರ ಮೋದಿಗೆ ತಾಯಿಗಿಂತ ಈ ದೇಶ ಸೇವೆಯೇ ದೊಡ್ಡದು ಎಂಬಂತೆ ಬಿಂಬಿಸಿದವು. 

ಸಂಸತ್ತಿನಲ್ಲಿ ಮಾತನಾಡಿದ ರಾಹುಲ್ ಗಾಂಧಿಯವರು, ನೀವು (ಮೋದಿ) ಇಸ್ರೇಲ್, ಶ್ರೀಲಂಕಾ ಮತ್ತು ಬಾಂಗ್ಲಾದೇಶಕ್ಕೆ ಭೇಟಿ ನೀಡಿದಾಗ ಅದಾನಿ ವ್ಯವಹಾರವನ್ನು ಪಡೆಯುತ್ತಾರೆ. ಹಾಗಾದರೆ ನಿಮ್ಮ ಮತ್ತು ಅದಾನಿ ನಡುವೆ ಏನಿದೆ? ಎಂಬುದನ್ನು ಈ ದೇಶಕ್ಕೆ ತಿಳಿಸಿಕೊಡಿ ಎಂದು ಸಂಸತ್ ನಲ್ಲಿ ಪ್ರಧಾನಿ ನರೇಂದ್ರ ಮೋದಿಯನ್ನು ಪ್ರಶ್ನೆ ಮಾಡುತ್ತಾರೆ. ಸಂಸದ ರಾಹುಲ್ ಗಾಂಧಿಯ ಈ ಗುರುತರವಾದ ಪ್ರಶ್ನೆಗೆ (ಆರೋಪಕ್ಕೆ) ಮೋದಿಯವರು ತಕ್ಕ ಉತ್ತರ ನೀಡುತ್ತಾರೆ ಎಂದು ಈ ದೇಶವೇ ಎದುರು ನೋಡುತ್ತಿರುವಾಗ, ಸಂಸತ್ತಿನಲ್ಲಿ ಸುಮಾರು ಒಂಬತ್ತು ಗಂಟೆಗಳ ಕಾಲ ಭಾಷಣ ಮಾಡಿದ ಮೋದಿ, ವಿರೋಧ ಪಕ್ಷಗಳನ್ನು ಲೇವಡಿಯಿಂದ, ಹಾಸ್ಯ ಹಾಗೂ ಉಡಾಫೆಯ ಮಾತುಗಳಿಂದ ತಿವಿದು, ವಿರೋಧ ಪಕ್ಷಗಳ ಗುರುತರವಾದ ಆರೋಪಗಳನ್ನು ದಿಕ್ಕು ತಪ್ಪಿಸಿ, ಪ್ರಶ್ನೆ ಮಾಡಿದವರನ್ನೇ ಅಪರಾಧಿಯನ್ನಾಗಿಸುವ ಪ್ರಯತ್ನವನ್ನು ಮಾಡಿದರು.

‘ದೇಶಭಕ್ತಿಯೇ ಕಿಡಿಗೇಡಿಗಳ ಕೊನೆಯ ಆಶ್ರಯ ತಾಣ’ ಎಂಬ ಸ್ಯಾಮ್ಯುಯೆಲ್ ಜಾನ್ಸನ್ ಅವರ ಹೇಳಿಕೆಯನ್ನು ಸಮರ್ಥಿಸಿಕೊಳ್ಳಲು, ಮೋದಿ ಸರ್ಕಾರ ಅಧಿಕಾರ ವರ್ಗದೊಂದಿಗೆ ಕೈಜೋಡಿಸಿ, ತನ್ನ ತಪ್ಪುಗಳನ್ನು ಯಾರೂ ಪ್ರಶ್ನಿಸದಂತೆ ಮುಚ್ಚಿಹಾಕಲು, ತನ್ನ ಅಕ್ರಮಗಳನ್ನು ಸಮರ್ಥಿಸಿಕೊಳ್ಳಲು ಮುಂದಾಗಿದೆ. ದೇಶಭಕ್ತಿ, ರಾಷ್ಟ್ರೀಯ ಭದ್ರತೆ ಹಾಗೂ ರಾಷ್ಟ್ರದ ಅಭಿವೃದ್ಧಿಯ ಸುಳ್ಳು ವಿಚಾರಗಳನ್ನು ಮುಂದಿಡುವುದು ಈಗ ಅವರಿಗೆ ವಾಡಿಕೆಯಾಗಿದೆ.

ದೇಶ ರಾಜಕೀಯ

ಡಿ.ಸಿ.ಪ್ರಕಾಶ್ ಸಂಪಾದಕರು

ನವದೆಹಲಿ: ಸತತ ಮೂರು ದಿನಗಳ ಕಾಲ ಸಂಸತ್ತಿನ ಉಭಯ ಸದನಗಳನ್ನು ಅಮಾನತುಗೊಳಿಸಿದ ನಂತರ ಇಂದು (ಮಂಗಳವಾರ) ಬೆಳಗ್ಗೆ 11 ಗಂಟೆಗೆ ಮತ್ತೆ ಪ್ರಾರಂಭಗೊಂಡಿತು. ಲೋಕಸಭೆಯಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ಕಲಾಪ ಆರಂಭಿಸುತ್ತಿದ್ದಂತೆ ಪ್ರತಿಪಕ್ಷಗಳು ‘ಅದಾನಿ ಗ್ರೂಪ್’ ವಿಷಯವನ್ನು ಪ್ರಸ್ತಾಪಿಸಲು ಯತ್ನಿಸಿದವು.

ಇದಕ್ಕೆ ಪ್ರಶ್ನೋತ್ತರ ಸಮಯವನ್ನು ಬಳಸಿಕೊಳ್ಳುವಂತೆ ಸ್ಪೀಕರ್ ಓಂ ಬಿರ್ಲಾ ಸೂಚಿಸಿದರೂ ವಿರೋಧ ಪಕ್ಷಗಳು ತಮ್ಮ ಬೇಡಿಕೆಯನ್ನು ಮುಂದುವರೆಸಿದವು. ಹೀಗಾಗಿ ಕಲಾಪವನ್ನು ಮಧ್ಯಾಹ್ನ 12ಕ್ಕೆ ಮುಂದೂಡಲಾಯಿತು. ಒಂದು ಗಂಟೆ ಕಾಲ ಮುಂದೂಡಿದ ಕಲಾಪವು ಮತ್ತೆ ಪುನರಾರಂಭವಾದಾಗ, ಬಿಜೆಪಿ ಲೋಕಸಭಾ ಸದಸ್ಯ ಸಿ.ಪಿ.ಜೋಶಿ ರಾಷ್ಟ್ರಪತಿ ಭಾಷಣಕ್ಕೆ ಧನ್ಯವಾದ ಅರ್ಪಿಸುವ ನಿರ್ಣಯವನ್ನು ಮಂಡಿಸಿದರು. ಇದಕ್ಕೂ ಮುನ್ನ ಲೋಕಸಭೆ ಸದಸ್ಯರು ಟರ್ಕಿ-ಸಿರಿಯಾ ಭೂಕಂಪದ ಸಂತ್ರಸ್ತರಿಗೆ ಸಂತಾಪ ಸೂಚಿಸಿದರು.

ಲೋಕಸಭೆಯಲ್ಲಿ ಸಿ.ಪಿ.ಜೋಶಿ ರಾಷ್ಟ್ರಪತಿಗಳ ಭಾಷಣದ ಮೇಲಿನ ಧನ್ಯವಾದವನ್ನು ಓದುತ್ತಿದ್ದಂತೆಯೇ ಪ್ರತಿಪಕ್ಷಗಳ ಸದಸ್ಯರು ಸಂಸತ್ತಿನ ಮಧ್ಯಭಾಗಕ್ಕೆ ಬಂದು ಘೋಷಣೆಗಳನ್ನು ಕೂಗಿದರು. ಸ್ಪೀಕರ್ ಓಂ ಬಿರ್ಲಾ ಅವರು ಮತ್ತೆ ಸದನವನ್ನು ಮಧ್ಯಾಹ್ನ 1.30ಕ್ಕೆ ಮುಂದೂಡಿದರು.

ಇದಾದ ಬಳಿಕ ಆರಂಭವಾದ ಲೋಕಸಭೆಯಲ್ಲಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಮಾತನಾಡಿ, ‘ಭಾರತೀಯ ಏಕತಾ ಯಾತ್ರೆಯ (ಭಾರತ್ ಜೋಡೋ ಯಾತ್ರೆ) ಸಮಯದಲ್ಲಿ ನಾವು ದೇಶಾದ್ಯಂತ ಜನರ ಧ್ವನಿಯನ್ನು ಕೇಳಿದ್ದೇವೆ. ಯಾತ್ರೆಯ ಆರಂಭದಲ್ಲಿ ಸ್ವಲ್ಪ ಕಷ್ಟವಾಗಿತ್ತು. ಯಾತ್ರೆಯ ವೇಳೆ ಮಕ್ಕಳು, ಮಹಿಳೆಯರು ಹಾಗೂ ವೃದ್ಧರ ಕುಂದುಕೊರತೆಗಳನ್ನು ಆಲಿಸಿದೆವು.

ಏಕತಾ ಯಾತ್ರೆಯ ಸಂದರ್ಭದಲ್ಲಿ ಸಾವಿರಾರು ರೈತರು ತಮ್ಮ ಅಹವಾಲುಗಳನ್ನು ಹೇಳಿಕೊಂಡರು. ಕೃಷಿ ಉತ್ಪನ್ನಗಳಿಗೆ ಸರಿಯಾದ ಬೆಲೆ ಸಿಗುತ್ತಿಲ್ಲ, ಭೂಮಿಯನ್ನು ಕಸಿದುಕೊಳ್ಳಲಾಗುತ್ತಿದೆ ಎಂದು ತಮ್ಮ ಅಳಲನ್ನು ತೋಡಿಕೊಂಡರು. ಆದಿವಾಸಿಗಳು ಮಸೂದೆಯ ಬಗ್ಗೆ ಪ್ರಶ್ನೆ ಮಾಡಿದರು.

ಲೋಕಸಭೆ

ಸೇನೆಯ ಮೇಲೆ ಅಗ್ನಿವೀರ್ ಯೋಜನೆ ಹೇರಲಾಗುತ್ತಿದೆ ಹಾಗೂ ಅನೇಕರನ್ನು ಕೆಲಸದಿಂದ ವಜಾ ಮಾಡಲಾಗಿದೆ ಎಂದೂ ಹೇಳಿದರು. ಕೆಲಸ ಸಿಗದವರಿಗೆ ಅದಕ್ಕಾದ ಕಾರಣವನ್ನು ವಿವರಿಸಬೇಕಿತ್ತು. ಜನರಿಗೆ ಶಸ್ತ್ರಾಸ್ತ್ರ ತರಬೇತಿಯನ್ನು ನೀಡಿ ನಂತರ ಸಮುದಾಯಕ್ಕೆ ಹಿಂತಿರುಗುವಂತೆ ಹೇಳಲಾಗುತ್ತಿದೆ ಇದು ಹಿಂಸಾಚಾರಕ್ಕೆ ಕಾರಣವಾಗಬಹುದು ಎಂದು ನಿವೃತ್ತ ಅಧಿಕಾರಿಗಳು ಹೇಳುತ್ತಾರೆ.

ಜನರು ಅಗ್ನಿವೀರ್ ಯೋಜನೆ ಬಗ್ಗೆಯೂ ಮಾತನಾಡಿದ್ದಾರೆ. ಭಾರತೀಯ ಯುವಕರು, 4 ವರ್ಷಗಳ ನಂತರ ತಮ್ಮನ್ನು ಹೊರಹೋಗುವಂತೆ ಕೇಳಿಕೊಂಡ ಬಗ್ಗೆ ನಮಗೆ ತಿಳಿಸಿದರು. ಅಗ್ನಿವೀರ್ ಯೋಜನೆ ಆರ್‌ಎಸ್‌ಎಸ್ ಹಾಗೂ ಗೃಹ ಸಚಿವಾಲಯದಿಂದ ಬಂದಿದೆಯೇ ಹೊರತು ಸೇನೆಯಿಂದಲ್ಲ. ಅದು ಎನ್ಎಸ್ಎ ಅಜಿತ್ ದೋವಲ್ ಮುಖಾಂತರ ಸೇನೆಯ ಮೇಲೆ ಬಲವಂತವಾಗಿ ಹೇರಿದ್ದಾರೆ ಎಂದು ನಿವೃತ್ತ ಅಧಿಕಾರಿಗಳು ಹೇಳುತ್ತಿದ್ದಾರೆ.

ಅಧ್ಯಕ್ಷರ ಭಾಷಣದಲ್ಲಿ ನಿರುದ್ಯೋಗ ಮತ್ತು ಹಣದುಬ್ಬರದ ಬಗ್ಗೆ ಉಲ್ಲೇಖಗಳಿಲ್ಲ.

ತಮಿಳುನಾಡು, ಕೇರಳದಿಂದ ಹಿಮಾಚಲ ಪ್ರದೇಶದವರೆಗೆ ಎಲ್ಲೆಲ್ಲೂ ‘ಅಧಾನಿ’ ಎಂಬ ಒಂದೇ ಹೆಸರನ್ನು ಪದೆ ಪದೇ ಕೇಳುತ್ತಿದ್ದೇವೆ. ಅದು ‘ಅದಾನಿ’, ‘ಅದಾನಿ’, ‘ಅದಾನಿ’ ಎಂಬುದಾಗಿದೆ. ‘ಅದಾನಿ ಮಾಡದ ವ್ಯವಹಾರಗಳು ಇಲ್ಲ; ಅದರಲ್ಲಿ ಅವರು ಎಂದಿಗೂ ವಿಫಲರಾಗಿಲ್ಲ’. ಇದು ಹೇಗೆ ಎಂದು ಜನ ನನ್ನನ್ನು ಕೇಳುತ್ತಿದ್ದಾರೆ. ಪ್ರಧಾನಿಗೂ ಅದಾನಿಗೂ ಏನು ಸಂಬಂಧ? ಪ್ರತಿ ವೃತ್ತಿಯಲ್ಲೂ ಅವರು ಹೇಗೆ ಯಶಸ್ವಿಯಾಗುತ್ತಾರೆ.

ಅದಾನಿ ಈಗ 8-10 ಕ್ಷೇತ್ರಗಳಲ್ಲಿದ್ದಾರೆ. ಅವರು 2014 ರಿಂದ 2022 ರವರೆಗೆ 8 ಬಿಲಿಯನ್ ಡಾಲರ್‌ಗಳಿಂದ 140 ಬಿಲಿಯನ್ ಡಾಲರ್‌ಗೆ ಹೋಗಿದ್ದು ಹೇಗೆ ಎಂದು ಯುವಕರು ನಮ್ಮನ್ನು ಪ್ರಶ್ನಿಸುತ್ತಾರೆ.

ಕಾಶ್ಮೀರ, ಹಿಮಾಚಲ ಪ್ರದೇಶದಿಂದ ಹಿಡಿದು ಬಂದರುಗಳು, ವಿಮಾನ ನಿಲ್ದಾಣಗಳು ಮತ್ತು ನಾವು ನಡೆಯುವ ರಸ್ತೆಗಳ ವರೆಗೆ ಎಲ್ಲದರಲ್ಲೂ ಅದಾನಿಯೇ ಇದ್ದಾರೆ’ ಎಂದು ಅವರು ಹೇಳಿದರು.

ದೇಶ

ನವದೆಹಲಿ: ಯಾತ್ರೆಯ ಸಮಾರೋಪ ಸಮಾರಂಭಕ್ಕೆ ಸೂಕ್ತ ಭದ್ರತೆ ಒದಗಿಸುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾಗೆ  ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಮನವಿ ಮಾಡಿದ್ದಾರೆ.

ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಸೆಪ್ಟೆಂಬರ್ 7 ರಂದು ಭಾರತ್ ಜೋಡೋ ಯಾತ್ರೆಯನ್ನು ತಮಿಳುನಾಡಿನ ಕನ್ಯಾಕುಮಾರಿಯಲ್ಲಿ ಆರಂಭಿಸಿದ್ದರು. ತರುವಾಯ, ಯಾತ್ರೆಯು ವಿವಿಧ ರಾಜ್ಯಗಳಲ್ಲಿ ಸಂಚರಿಸಿ ಇಂದು ಕಾಶ್ಮೀರದಲ್ಲಿ ನಡೆಯುತ್ತಿದೆ.

ಜನವರಿ 30ರಂದು ಕಾಶ್ಮೀರದ ರಾಜಧಾನಿ ಶ್ರೀನಗರದಲ್ಲಿ ಯಾತ್ರೆ ಮುಕ್ತಾಯವಾಗಲಿದೆ. ರಾಹುಲ್ ಗಾಂಧಿ ಅಲ್ಲಿ ರಾಷ್ಟ್ರಧ್ವಜಾರೋಹಣ ಮಾಡಲಿದ್ದಾರೆ. ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಲು ಖರ್ಗೆಯವರು 21 ಪಕ್ಷಗಳ ನಾಯಕರುಗಳಿಗೆ ಆಹ್ವಾನ ನೀಡಿದ್ದಾರೆ.

ಈ ಸಂದರ್ಭದಲ್ಲಿ ನಿನ್ನೆ (ಜನವರಿ 27) ಕಾಶ್ಮೀರದಲ್ಲಿ ಯಾತ್ರೆ ಕೈಗೊಂಡಿದ್ದ ಕಾಂಗ್ರೆಸ್ ಸಂಸದ ರಾಹುಲ್ ಅವರನ್ನು ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರು. ಅಲ್ಲಿ ಭದ್ರತಾ ಕರ್ತವ್ಯಕ್ಕೆ ಪೊಲೀಸರು ಇಲ್ಲದ ಕಾರಣ ಪಾದಯಾತ್ರೆಯನ್ನು ಸ್ಥಗಿತಗೊಳಿಸಲಾಗಿತ್ತು.

‘ಜನಸಂದಣಿಯನ್ನು ನಿಯಂತ್ರಿಸಬೇಕಾದ ಪೊಲೀಸರು ಎಲ್ಲೂ ಕಾಣಲಿಲ್ಲ. ನಾವು ಸುರಂಗವನ್ನು ದಾಟಿದ ನಂತರ, ಪೊಲೀಸ್ ಭದ್ರತೆಗೆ ಅಡ್ಡಿಯಾಯಿತು. ಭದ್ರತೆ ಕೊರತೆಯಾಗಿದೆ’ ಎಂದು ರಾಹುಲ್ ಆರೋಪಿಸಿದ್ದರು.

ಈ ಹಿನ್ನಲೆಯಲ್ಲಿ ಖರ್ಗೆಯವರು ಅಮಿತ್ ಶಾ ಅವರಿಗೆ ಪತ್ರವೊಂದನ್ನು ಬರೆದು, ‘ಇಂದು ಮತ್ತು ನಾಳೆ ಎರಡು ದಿನ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆಯಲಿರುವ ಯಾತ್ರೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರುವ ಸಾದ್ಯತೆಯಿದೆ.

ಜನವರಿ 30 ರಂದು ಶ್ರೀನಗರದಲ್ಲಿ ನಡೆಯುವ ಸಮಾರೋಪ ಸಮಾರಂಭದಲ್ಲಿ ಹೆಚ್ಚಿನ ಜನರು ಸೇರುತ್ತಾರೆ ಎಂದು ನಾವು ನಿರೀಕ್ಷಿಸುತ್ತಿದ್ದೇವೆ. ಈ ವಿಚಾರದಲ್ಲಿ ನೀವು ತಕ್ಷಣ ಮಧ್ಯಪ್ರವೇಶಿಸಿ, ಶ್ರೀನಗರದಲ್ಲಿ ನಡೆಯಲಿರುವ ಸಮಾರೋಪ ಸಮಾರಂಭಕ್ಕೆ ಹೆಚ್ಚಿನ ರೀತಿಯಲ್ಲಿ ಭದ್ರತೆಯನ್ನು ಒದಗಿಸಲು ಅಧಿಕಾರಿಗಳಿಗೆ ಸೂಕ್ತ ಆದೇಶ ನೀಡಬೇಕು’ ಎಂದು ಮನವಿ ಮಾಡಿದ್ದಾರೆ.

ಕೆಲವು ದಿನಗಳ ಹಿಂದೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದ ಖರ್ಗೆಯವರು ‘ಯಾತ್ರೆಯಲ್ಲಿ ಭದ್ರತೆಯ ಕೊರೆತೆಯಿದೆ’ ಎಂದು ಆಪಾದಿಸಿದ್ದರು. ಇದಕ್ಕೆ ಪ್ರತಿಯುತ್ತರ ನೀಡಿದ್ದ ಗೃಹ ಸಚಿವಾಲಯ, ‘ಯಾತ್ರೆಯಲ್ಲಿ ಭದ್ರತೆಯ ಕೊರತೆ ಇಲ್ಲ’ ಎಂದು ಹೇಳಿದ್ದು ಗಮನಾರ್ಹ.

ದೇಶ ಬೆಂಗಳೂರು ರಾಜಕೀಯ ರಾಜ್ಯ

ಬೆಂಗಳೂರು: ದ್ವೇಷ ಮತ್ತು ಹಿಂಸಾಚಾರದ ವಿರುದ್ಧ ಹೋರಾಡುತ್ತಾ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ 3500 ಕಿ.ಮೀ. ನಡೆದು ಜನರಲ್ಲಿ ಸೌಹಾರ್ದತೆಯ ಸಂದೇಶವನ್ನು ಹರಡಿಸಿರುವ ರಾಹುಲ್ ಗಾಂಧಿಯವರ ನಡೆಗೆ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ.ದೇವೇಗೌಡರು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.  

2023, ಜನವರಿ 10 ರಂದು ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರಿಗೆ ಪತ್ರ ಬರೆದು, ಜನವರಿ 30 ರಂದು ಶ್ರೀನಗರದಲ್ಲಿ ನಡೆಯಲಿರುವ ಭಾರತ್ ಜೋಡೋ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಳ್ಳುವಂತೆ ಆಹ್ವಾನ ನೀಡಿದ್ದರು. ಮಲ್ಲಿಕಾರ್ಜುನ ಖರ್ಗೆಯವರ ಆಹ್ವಾನ ಪತ್ರಕ್ಕೆ ಇಂದು ಪ್ರತಿಯುತ್ತರ ನೀಡಿದ ದೇವೇಗೌಡರು, ‘ಭಾರತ್ ಜೋಡೋ ಯಾತ್ರೆಯ ಸಮಾರೋಪ ಸಮಾರಂಭಕ್ಕೆ ನನ್ನನ್ನು ಆಹ್ವಾನಿಸಿರುವುದಕ್ಕೆ ಧನ್ಯವಾದಗಳು, ರಾಷ್ಟ್ರಪಿತ ಹುತಾತ್ಮರಾದ ದಿನದಂದು ಶ್ರೀನಗರದಲ್ಲಿ ಕಾರ್ಯಕ್ರಮವನ್ನು ಆಯೋಜಿಸುವುದು ತುಂಬಾ ಸೂಕ್ತವಾಗಿದೆ.

ನಾನು ಕಾರ್ಯಕ್ರಮಕ್ಕೆ ಖುದ್ದಾಗಿ ಹಾಜರಾಗಲು ಸಾಧ್ಯವಾಗದಿದ್ದರೂ ನನ್ನ ಶುಭಾಶಯಗಳು ರಾಹುಲ್ ಗಾಂಧಿಯವರಿಗಿದೆ. ಅವರು ದ್ವೇಷ ಮತ್ತು ಹಿಂಸಾಚಾರದ ವಿರುದ್ಧ ಹೋರಾಡುತ್ತಿದ್ದಾರೆ ಮತ್ತು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ 3500 ಕಿ.ಮೀ. ನಡೆದು ಜನರಲ್ಲಿ ಸೌಹಾರ್ದತೆಯ ಸಂದೇಶವನ್ನು ಹರಡಿಸಿದ್ದಾರೆ. ದಯವಿಟ್ಟು ಅವರಿಗೆ ನನ್ನ ಆಳವಾದ ಮೆಚ್ಚುಗೆಯನ್ನು ಸೂಚಿಸಿ’ ಎಂದು ಮಲ್ಲಿಕಾರ್ಜುನ ಖರ್ಗೆಯವರಿಗೆ ಇಂದು ಬರೆದ ಪತ್ರದಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ತಿಳಿಸಿದ್ದಾರೆ. 

ದೇಶ

ಹೊಸದಿಲ್ಲಿ: ಕಾಶ್ಮೀರದಲ್ಲಿ ಭಾರತ ಜೋಡೋ ಯಾತ್ರೆ ನಡೆಸುವ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೆಲವೆಡೆ ಪಾದಯಾತ್ರೆಯನ್ನು ತಪ್ಪಿಸಿ, ವಾಹನದಲ್ಲಿ ಹೋಗುವಂತೆ ಕೇಂದ್ರ ಗುಪ್ತಚರ ಮತ್ತು ಭದ್ರತಾ ಸಂಸ್ಥೆಗಳು ಎಚ್ಚರಿಕೆ ನೀಡಿವೆ ಎಂಬ ವರದಿಗಳು ಹೊರಬಿದ್ದಿವೆ. ರಾಹುಲ್ ಗಾಂಧಿ ಅವರ ಪ್ರಯಾಣದ ಮಾರ್ಗ ಮತ್ತು ರಾತ್ರಿಯ ವಾಸ್ತವ್ಯದ ಭದ್ರತಾ ಅಂಶಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ವರದಿಗಳು ತಿಳಿಸಿವೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕಳೆದ ವರ್ಷ ಸೆಪ್ಟೆಂಬರ್ 7ರಂದು ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯಿಂದ ಭಾರತ ಜೋಡೋ ಯಾತ್ರೆ ಆರಂಭಿಸಿದ್ದರು. ತಮಿಳುನಾಡು, ಕೇರಳ, ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ. ಮಧ್ಯಪ್ರದೇಶ, ಮಹಾರಾಷ್ಟ್ರ, ದೆಹಲಿ, ಪಂಜಾಬ್, ಹರಿಯಾಣ ಮುಂತಾದ ಹಲವು ರಾಜ್ಯಗಳಲ್ಲಿ ಯಾತ್ರೆ ಕೈಗೊಂಡಿರುವ ಅವರು ಶೀಘ್ರದಲ್ಲೇ ಜಮ್ಮು ಮತ್ತು ಕಾಶ್ಮೀರದಲ್ಲಿ ಯಾತ್ರೆ ಕೈಗೊಳ್ಳಲಿದ್ದಾರೆ.

ಜನವರಿ 19ರಂದು ರಾಹುಲ್ ಗಾಂಧಿ ಲಕ್ಕನ್‌ಪುರ ಪ್ರವೇಶಿಸಲಿದ್ದಾರೆ. ರಾತ್ರಿ ಅಲ್ಲೇ ಇದ್ದು ಮರುದಿನ ಬೆಳಗ್ಗೆ ಕಥುವಾಗೆ ಹೊರಡುತ್ತಾರೆ. ನಂತರ ರಾತ್ರಿ ಚಟ್ವಾಲ್ ನಲ್ಲಿ ತಂಗುತ್ತಾರೆ. ಜನವರಿ 21 ರಂದು ಬೆಳಿಗ್ಗೆ ಹೀರಾನಗರದಿಂದ ಡ್ಯೂಕರ್ ಹವೇಲಿ ವರೆಗೆ ಪಾದಯಾತ್ರೆ ನಡೆಯಲಿದೆ. ಜನವರಿ 22 ರಂದು ವಿಜಯಪುರದಿಂದ ಸತ್ವಾರಿಗೆ ಪಾದಯಾತ್ರೆ ಮುನ್ನಡೆಯಲಿದೆ.

ಜನವರಿ 25 ರಂದು ರಾಹುಲ್ ಗಾಂಧಿ ಅವರು ಕಾಶ್ಮೀರದ ಬನಿಹಾಲ್‌ನಲ್ಲಿ ರಾಷ್ಟ್ರಧ್ವಜಾರೋಹಣ ಮಾಡಲಿದ್ದಾರೆ, ನಂತರ ಅನಂತನಾಗ್ ಜಿಲ್ಲೆಯ ಮೂಲಕ ಪ್ರಯಾಣಿಸಿ 2 ದಿನಗಳಲ್ಲಿ ಶ್ರೀನಗರವನ್ನು ತಲುಪಲಿದ್ದಾರೆ. ಶ್ರೀನಗರಕ್ಕೆ ಭೇಟಿ ನೀಡಿದಾಗ ರಾಹುಲ್ ಅವರ ಜೊತೆಯಲ್ಲಿ ಅತ್ಯಂತ ಸೀಮಿತ ಸಂಖ್ಯೆಯ ಜನರು ಮಾತ್ರ ಭಾಗವಹಿಸಬೇಕೆಂದು ಭದ್ರತಾ ಸಂಸ್ಥೆಗಳು ಸೂಚಿಸಿರುವುದಾಗಿ ಹೇಳಲಾಗುತ್ತಿದೆ.

ಕೆಲ ರಸ್ತೆಗಳು ಉದ್ವಿಗ್ನವಾಗಿರುವುದು ಗೊತ್ತಿರುವುದರಿಂದ ಮೆರವಣಿಗೆ ಮಾಡುವ ಬದಲು ಕಾರಿನಲ್ಲಿ ಹೋಗುವಂತೆ ರಾಹುಲ್ ಗಾಂಧಿಗೆ ಸೂಚಿಸಲಾಗಿದೆಯಂತೆ.

ಜನವರಿ 30 ರಂದು ಶ್ರೀನಗರದಲ್ಲಿ ರಾಹುಲ್ ಗಾಂಧಿ ನೇತೃತ್ವದಲ್ಲಿ ವಿರೋಧ ಪಕ್ಷಗಳ ಸಭೆ ನಡೆಯಲಿದ್ದು, ಅಲ್ಲಿ ರಾಹುಲ್ ಗಾಂಧಿಯ ಭಾರತ್ ಜೋಡೋ ಯಾತ್ರೆ ಪೂರ್ಣಗೊಳ್ಳಲಿದೆ.

ಈ ಸಭೆಯಲ್ಲಿ ಆಮ್ ಆದ್ಮಿ ಪಕ್ಷ, ಚಂದ್ರಶೇಖರ ರಾವ್ ಅವರ ಭಾರತ ರಾಷ್ಟ್ರ ಸಮಿತಿ, ವೈಎಸ್‌ಆರ್ ಕಾಂಗ್ರೆಸ್, ಬಿಜು ಜನತಾ ದಳ, ಅಕಾಲಿದಳ, ಎಐಎಡಿಎಂಕೆ ಮತ್ತು ಓವೈಸಿ ಅವರ ಎಐಎಂಐಎಂಗೆ ಆಹ್ವಾನ ನೀಡಬಾರದು ಎಂದು ಹಿರಿಯ ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿಯ ಸುರಕ್ಷತೆಗೆ ಸಂಬಂಧಿಸಿದ ಸೂಚನೆಗಳು ಬಿಡುಗಡೆ ಮಾಡಲಾಗಿದೆ.

Z+ ಭದ್ರತೆ: ರಾಹುಲ್ ಗಾಂಧಿಗೆ ಈಗ Z+ ವರ್ಗದ ಭದ್ರತೆ ನೀಡಲಾಗಿದೆ. ಅದರಂತೆ 8 ರಿಂದ 9 ಕಮಾಂಡೋಗಳು ದಿನದ 24 ಗಂಟೆಯೂ ಅವರ ಸುತ್ತ ಕಾವಲು ಕಾಯಲಿದ್ದಾರೆ. ಕಳೆದ ತಿಂಗಳು ರಾಹುಲ್ ಗಾಂಧಿ ಅವರು ತಮ್ಮ ಯಾತ್ರೆಯ ಮಾರ್ಗದಲ್ಲಿ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದರು ಎಂಬುದು ಗಮನಾರ್ಹ.

ದೇಶ ರಾಜಕೀಯ ರಾಜ್ಯ

ಡಿ.ಸಿ.ಪ್ರಕಾಶ್, ಸಂಪಾದಕರು

ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆ ಮುಕ್ತಾಯವಾಗುತ್ತಿದ್ದಂತೆ, ಯಾತ್ರೆಗಳು ನಡೆಯದ ರಾಜ್ಯಗಳಲ್ಲಿ ಕಾಂಗ್ರೆಸ್ ಘಟಕಗಳು ರಾಷ್ಟ್ರೀಯ ನಾಯಕರುಗಳ ನಿರ್ದೇಶನದಂತೆ ರಾಜ್ಯಾದ್ಯಂತ ಯಾತ್ರೆಗಳನ್ನು ನಡೆಸುತ್ತಿವೆ. ಭಾರತ್ ಜೋಡೋ ಯಾತ್ರೆಯ ಮುಂದುವರಿದ ಭಾಗವಾಗಿ, ಕಾಂಗ್ರೆಸ್ ಪಕ್ಷವು ಜನವರಿ 26 ರಿಂದ ಎರಡು ತಿಂಗಳ ಅವಧಿಯ ‘ಹಾತ್ ಸೇ ಹಾತ್ ಜೋಡೋ’ (ಕೈ ಜೋಡಿಸೋಣ) ಅಭಿಯಾನವನ್ನು ಅಂತಿಮಗೊಳಿಸಿದೆ. ಪ್ರಧಾನ ಕಾರ್ಯದರ್ಶಿ ಪ್ರಿಯಂಕಾ ಗಾಂಧಿ ಮುದಳುತ್ವದಲ್ಲಿ ಈ ಯಾತ್ರೆಗಳು ನಡೆಯಲಿವೆ.

ಈ ಯಾತ್ರೆಯ ಒಂದು ಭಾಗವು, ಎಲ್ಲಾ ಗ್ರಾಮ ಪಂಚಾಯತಿಗಳು ಮತ್ತು ಮತದಾನದ ಚಾವಡಿಗಳನ್ನು ಒಳಗೊಂಡಿರುವ, ಕ್ಷೇತ್ರ ಮಟ್ಟದಲ್ಲಿ ನಡೆಯುವ ಪ್ರಯಾಣವಾಗಿರುತ್ತದೆ. ಈ ಯಾತ್ರೆಯ ಕುರಿತ ರಾಹುಲ್ ಗಾಂಧಿಯ ಪತ್ರವನ್ನು ಪ್ರಧಾನಿ ನರೇಂದ್ರ ಮೋದಿಯ ವಿರುದ್ಧದ ಅಪರಾಧಪತ್ರಿಕೆಯಾಗಿ ಎಲ್ಲಡೆಯು ವಿತರಿಸಲಾಗುವುದು. ಪ್ರತಿ ರಾಜ್ಯದಲ್ಲೂ ಮಹಿಳಾ ಯಾತ್ರೆಗಳನ್ನು ಸಂಘಟಿಸಿ ಪ್ರಿಯಾಂಕಾ ಗಾಂಧಿಯೇ ಅದನ್ನು ಮುನ್ನಡೆಸುತ್ತಾರೆ ಎಂದು ಹೇಳಲಾಗುತ್ತಿದೆ.

ಬಿಹಾರ ಕಾಂಗ್ರೆಸ್ ಮುಖಂಡ ಅಖಿಲೇಶ್ ಪ್ರಸಾದ್ ಸಿಂಗ್, ಬಂಕಾ ಜಿಲ್ಲೆಯ ಐತಿಹಾಸಿಕವಾದ ಮಂದರ್ ಮಲೆನಾಡಿನಿಂದ ಬುದ್ಧ ಗಯಾವರೆಗೆ 1,250 ಕಿ.ಮೀ., ರಾಜ್ಯಮಟ್ಟದ ಕಾಂಗ್ರೆಸ್ ಯಾತ್ರೆಯನ್ನು ಗುರುವಾರ ಪ್ರಾರಂಭಿಸಿದ್ದಾರೆ.

ಅದೇ ರೀತಿ ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್ ಮುಖಂಡ ಆದಿರ್ ರಂಜನ್ ಚೌದ್ರಿಕೂಡ ಯಾತ್ರೆಯನ್ನು ಆಯೋಜಿಸಿದ್ದಾರೆ. ರಾಜ್ಯಾದ್ಯಂತ ಸುಮಾರು 800 ಕಿ.ಮೀ., ದೂರದ ಯಾತ್ರೆಯನ್ನು ಅವರು ಮುನ್ನಡೆಸಲಿದ್ದಾರೆ. ಕೆಲವು ದಿನಗಳ ಹಿಂದೆ ಗಂಗಾ ಸಾಗರದ ದಕ್ಷಿಣ ತುದಿಯಿಂದ ಡಾರ್ಜಿಲಿಂಗ್ ವರೆಗೆ ನಡಿಗೆ ಪ್ರಯಾಣ ನಡೆಸಿದ್ದರು.

ಅಸ್ಸಾಂನ ಪೂರ್ವ ಭಾಗದಲ್ಲಿ, ಪಶ್ಚಿಮ ಬಂಗಾಳ-ಅಸ್ಸಾಂ ಗಡಿಯಲ್ಲಿ ತುಪ್ರಿ ಜಿಲ್ಲೆಯ ಕೋಲಕ್ಕಂಜ್ ನಿಂದ ರಾಜ್ಯದ ಪೂರ್ವ ಪ್ರದೇಶದಲ್ಲಿರುವ ಸದಿಯಾ ವರೆಗೆ, ರಾಜ್ಯಾದ್ಯಂತ 835 ಕಿಲೋಮೀಟರ್ ವರೆಗೆ ಒಂದು ಕಠಿಣವಾದ ತಂಡವನ್ನು ರಚಿಸಿಕೊಂಡು ಕಾಂಗ್ರೆಸ್ ಮುಖಂಡ ಭೂಪೇನ್ ಕುಮಾರ್ ಭೋರ ಕೆಲವು ದಿನಗಳ ಹಿಂದೆ ಯಾತ್ರೆಯನ್ನು ಮುಗಿಸಿದ್ದರು.

ಕರ್ನಾಟಕದಲ್ಲಿ ಕಾಂಗ್ರೆಸ್‌ ಪಕ್ಷದ ರಾಜ್ಯ ಉಸ್ತುವಾರಿ ರಣದೀಪಸಿಂಗ್‌ ಸುರ್ಜೆವಾಲಾ ನೇತೃತ್ವದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸೇರಿದಂತೆ ಪಕ್ಷದ ಎಲ್ಲ ನಾಯಕರು ಒಂದೇ ಬಸ್‌ ಹತ್ತಲಿದ್ದು, ಯಾತ್ರೆಯುದ್ದಕ್ಕೂ ಆಯೋಜಿಸಲಾಗುತ್ತಿರುವ ಸಮಾವೇಶಗಳಲ್ಲಿ ಪಾಲ್ಗೊಂಡು ಒಗ್ಗಟ್ಟು ಪ್ರದರ್ಶಿಸುವ ಯೋಜನೆ ಹಾಕಿಕೊಂಡಿದ್ದಾರೆ.

ಬಿಜೆಪಿ ಸರ್ಕಾರದ ಜನವಿರೋಧಿ ನೀತಿಗಳ ಕುರಿತು ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸುವ ಮೂಲಕ ಈ ಬಾರಿ ರಾಜ್ಯದಲ್ಲಿ ಅಧಿಕಾರಕ್ಕೆ ಬರಲೇಬೇಕೆಂದು ಪಣ ತೊಟ್ಟಿರುವ ಕಾಂಗ್ರೆಸ್‌ ಪಕ್ಷ, ಜನವರಿ 11 ರಿಂದ ‘ಪ್ರಜಾ ಧ್ವನಿ’ ಯಾತ್ರೆಯನ್ನು ಹಮ್ಮಿಕೊಂಡಿದ್ದು, ಇದಕ್ಕಾಗಿ ಭರದಿಂದ ಸಿದ್ಧತೆಗಳನ್ನು ಕೈಗೊಂಡಿದೆ.

‘ಪ್ರಜಾ ಧ್ವನಿ’ ಯಾತ್ರೆಗಾಗಿಯೇ ಸಕಲ ಸೌಲಭ್ಯ ಹೊಂದಿರುವ ಎರಡು ಬಸ್‌ಗಳನ್ನು ವಿಶೇಷವಾಗಿ ನಿರ್ಮಿಸಲಾಗಿದ್ದು, ತಲಾ 40 ಜನ ನಾಯಕರನ್ನು ಒಳಗೊಂಡ ಎರಡು ಬಸ್‌ಗಳು ಜನವರಿ 11ರಿಂದ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸಂಚರಿಸಲಿವೆ. ಈ ಸಂದರ್ಭದಲ್ಲಿ ಪ್ರತಿ ಜಿಲ್ಲೆಯಲ್ಲೂ ಬೃಹತ್‌ ಸಮಾವೇಶ ನಡೆಯಲಿದ್ದು, ಸಾರ್ವಜನಿಕರು ಸೇರಿದಂತೆ ಪಕ್ಷದ ಕಾರ್ಯಕರ್ತರು ಅತ್ಯಧಿಕ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮಾಡಲು ಈಗಾಗಲೇ ಪಕ್ಷ ಸೂಚನೆಯನ್ನು ನೀಡಿದೆ.

ಭಾರತದಲ್ಲಿ ರಾಹುಲ್ ಗಾಂಧಿ ಮಾತ್ರ (ಭಾರತ್ ಜೋಡೋ) ಯಾತ್ರೆ ನಡೆಸುತ್ತಿಲ್ಲ. ಬಿಜೆಪಿಯ ಜನವಿರೋಧಿ, ಆಡಳಿತ ವಿರೋಧಿ ನೀತಿಯನ್ನು ಖಂಡಿಸಿ, ಜಿಲ್ಲೆ ಜಿಲ್ಲೆಗಳಲ್ಲಿ, ಗಲ್ಲಿ ಗಲ್ಲಿಗಳಲ್ಲಿ ಕಾಂಗ್ರೆಸ್ ಪಕ್ಷವು ಜನಸಾಮಾನ್ಯರೊಂದಿಗೆ ಸೇರಿ ಯಾತ್ರೆಗಳನ್ನು ನಡೆಸುತ್ತಿರುವುದು ವಿಶೇಷ.