ರೌಡಿಸಂ ಕಥೆಗೆ “ಸ್ಟಾರ್” ಟೈಟಲ್: ನೂತನ ಚಿತ್ರಕ್ಕೆ ಶಾಸಕ ರವಿ ಸುಬ್ರಮಣ್ಯ ಚಾಲನೆ!
ವರದಿ: ಅರುಣ್ ಜಿ.,
ಈ ಹಿಂದೆ ಉಪೇಂದ್ರ ಅವರ ನಿರ್ದೇಶನದಲ್ಲಿ ಮೂಡಿಬಂದಿದ್ದ ಓಂ, ಸ್ವಸ್ತಿಕ್, ಸೂಪರ್ ನಂಥ ಚಿತ್ರಗಳು ಮಾಡಿದ ದಾಖಲೆ ನಿಮಗೆಲ್ಲ ಗೊತ್ತೇ ಇದೆ. ಅದೇ ರೀತಿಯ ಟೈಟಲ್ ಇರುವ ಮತ್ತೊಂದು ಚಿತ್ರಕ್ಕೆ ಇತ್ತೀಚೆಗೆ ಚಾಲನೆ ದೊರೆತಿದೆ. ಅದರ ಹೆಸರು ಸ್ಟಾರ್. ನಕ್ಷತ್ರದ ಗುರುತನ್ನೇ ತಮ್ಮ ಚಿತ್ರದ ಶೀರ್ಷಿಕೆಯಾಗಿಟ್ಟುಕೊಂಡು, ಚಿತ್ರ ಮಾಡಲು ಹೊರಟಿರುವವರು ನಿರ್ಮಾಪಕ ಶರತ್; ಅವರೇ ಚಿತ್ರದ ಹೀರೋ ಕೂಡ. ಈ ಚಿತ್ರಕ್ಕೆ ಪತಿ, ಪತ್ನಿ ಜಂಟಿಯಾಗಿ ನಿರ್ದೇಶನ ಮಾಡುತ್ತಿದ್ದಾರೆ. ಶ್ರೀಮತಿ ಅನು ಹಾಗೂ ಮಂಜು ವಿಜಯಸೂರ್ಯ ಸೇರಿ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಶ್ರೀನಿವಾಸ ನಗರದ ಕೆಂಪೇಗೌಡ ಆಟದ ಮೈದಾನದಲ್ಲಿ ನಡೆದ ಈ ಚಿತ್ರದ ಮುಹೂರ್ತ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶಾಸಕ ರವಿ ಸುಬ್ರಮಣ್ಯ ಅವರು ಪ್ರಥಮ ದೃಶ್ಯಕ್ಕೆ ಕ್ಲಾಪ್ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಚಿತ್ರದ ನಾಯಕ ಹಾಗೂ ನಿರ್ಮಾಪಕರೂ ಆದ ಶರತ್ ಮಾತನಾಡಿ, “ನಮ್ಮ ತಂದೆ ಪ್ರಕಾಶ್ ಫೈಟರ್ ಆಗಿ ಚಿತ್ರರಂಗದಲ್ಲಿ ಕೆಲಸ ಮಾಡಿದ್ದಾರೆ. ಅದೇ ನಾನು ಚಿತ್ರರಂಗಕ್ಕೆ ಬರಲು ಕಾರಣ. ಈ ಹಿಂದೆ ನಾನು ‘ಪ್ಯಾಟಿ ಮಂದಿ ಕಾಡಿಗ್ ಬಂದ್ರು’ ಶೋನಲ್ಲಿ ಭಾಗವಹಿಸಿ ವಿನ್ನರ್ ಆಗಿದ್ದೆ, ಥೇಟರ್ ಹಿನ್ನಲೆಯೂ ನನಗಿದೆ. ಇದೊಂದು ರೌಡಿಸಂ ಬೇಸ್ ಸಬ್ಜೆಕ್ಟ್. ನಿರ್ದೇಶಕರು ತುಂಬಾ ಚೆನ್ನಾಗಿ ಪ್ಲಾನ್ ಮಾಡಿಕೊಂಡಿದ್ದಾರೆ. ವಿಭಿನ್ನವಾದ ಕಥೆ. ಕ್ಲೈಮ್ಯಾಕ್ಸ್ ನೋಡಿ ಹೊರ ಬರುವಾಗ ಎಂಥವರ ಕಣ್ಣಲ್ಲಾದರೂ ನೀರು ಬರುತ್ತದೆ. ಚಿತ್ರದಲ್ಲಿ ಒಂದಷ್ಟು ನೈಜ ಘಟನೆಗಳನ್ನು ಹೇಳಿದರೂ, ಯಾರ ಹೆಸರನ್ನೂ ಸಹ ಬಳಸಿಕೊಂಡಿಲ್ಲ” ಎಂದು ಹೇಳಿದರು.
ನಂತರ ನಿರ್ದೇಶಕ ಮಂಜು ವಿಜಯಸೂರ್ಯ ಮಾತನಾಡಿ, “16 ವರ್ಷಗಳ ಹಿಂದೆ ನಾನು ಒಬ್ಬ ಲೈಟ್ ಬಾಯ್ ಆಗಿ ಸಿನಿ ಜರ್ನಿ ಆರಂಭಿಸಿ, ಬರವಣಿಗೆಯಲ್ಲೇ ಹೆಚ್ಚು ಸಮಯ ಕಳೆದೆ. ಈಗ ನಿರ್ದೇಶಕನಾಗುತ್ತಿದ್ದೇನೆ. ನಮ್ಮ ಚಿತ್ರದ ಟೈಟಲ್ಲೇ ಕಥೆ ಹೇಳುತ್ತದೆ. ಇದು ಅಂಡರ್ ವರ್ಲ್ಡ್ ಸಬ್ಜೆಕ್ಟ್. ಹೀರೋಗೆ ನಾಯಕಿ ಹೇಗೆ ಬೆಂಬಲವಾಗಿ ನಿಲ್ತಾರೆ ಅಂತ ಹೇಳಿದ್ದೇವೆ. ನ್ಯಾಚುರಲ್ ಆದಂಥ ಫೈಟ್ಸ್ ಚಿತ್ರದಲ್ಲಿರುತ್ತವೆ. ಇದೊಂದು ಲೋಕಲ್ ಸಬ್ಜೆಕ್ಟ್ ಆಗಿರುವುದರಿಂದ ಬೆಂಗಳೂರಿನಲ್ಲೇ ಹೆಚ್ಚು ಭಾಗದ ಶೂಟಿಂಗ್ ಮಾಡುತ್ತೇವೆ. ಹೊಡೆದಾಟಕ್ಕಿಂತ ಹೆಚ್ಚಾಗಿ ಥ್ರಿಲ್ಲರ್ ಮೇಲೆ ಹೆಚ್ಚು ಫೋಕಸ್ ಮಾಡಿದ್ದೇವೆ. ಕ್ಯೂರಿಯಾಸಿಟಿ ಕ್ರಿಯೇಟ್ ಮಾಡಿಕೊಂಡು ಹೋಗುವ ಕಂಟೆಂಟ್” ಎಂದು ಹೇಳಿದರು.
ಚಿತ್ರದ ನಾಯಕಿಯಾಗಿ ನಟಿಸುತ್ತಿರುವ ನಟಿ ರಜತ ರಕ್ಷ ಮಾತನಾಡಿ, “ಈ ಹಿಂದೆ ಸದ್ದು, ವಿಚಾರಣೆ ನಡೆಯುತ್ತಿದೆ, ತಲವಾರ್ ಸೇರಿ ಮೂರು ಚಿತ್ರಗಳಲ್ಲಿ ನಟಿಸಿದ್ದೆ. ನಾಯಕಿಯಾಗಿ ಇದೇ ಮೊದಲ ಚಿತ್ರ. ನಾಯಕನಿಗೆ ಸಪೋರ್ಟ್ ಆಗಿರುವಂಥ ಪಾತ್ರ, ತುಂಬಾ ಚೆನ್ನಾಗಿದೆ” ಎಂದು ಹೇಳಿದರು. ಛಾಯಾಗ್ರಾಹಕ ಪ್ರವೀಣ್ ಎಂ.ಪ್ರಭು ಮಾತನಾಡಿ, “ಕಪಾಲ ನಂತರ ಮೂರನೇ ಚಿತ್ರ. ರಿಯಲಿಸ್ಟಿಕ್ ಆಗಿ ಸಿನಿಮಾವನ್ನು ಶೂಟ್ ಮಾಡೋಣ ಅಂತ ಪ್ಲಾನ್ ಮಾಡಿಕೊಂಡಿದ್ದೇನೆ. ನಿರ್ದೇಶಕರ ಜೊತೆ ಈ ಹಿಂದೆ ಶಾರ್ಟ್ ಫಿಲಂಸ್ ಮಾಡಿದ್ದೆ” ಎಂದರು. ಮತ್ತೊಬ್ಬ ನಿರ್ದೇಶಕಿ ಅನು ಮಾತನಾಡಿ, “ಸ್ಕ್ರಿಪ್ಟ್ ಕೆಲಸದಲ್ಲಿ ನಾನು ಜಾಸ್ತಿ ಇನ್‌ವಾಲ್ ಆಗಿದ್ದೇನೆ. ರಿಯಲಿಸ್ಟಿಕ್ ಆಗಿ ಚಿತ್ರವನ್ನು ತೆರೆಮೇಲೆ ತರಬೇಕು ಎಂದುಕೊಂಡಿದ್ದೇವೆ” ಎಂದರು. ಒಂದು ಪ್ಯಾಥೋ, ಒಂದು ಮಾಸ್ ಹಾಗೂ 2 ಲವ್ ಸಾಂಗ್ ಸೇರಿ ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ವಿಕಾಸ್ ವಸಿಷ್ಠ ಸಂಗೀತ ನೀಡುತ್ತಿದ್ದಾರೆ.