“ಹೆಜ್ಜಾರು” ಕುಂಬಳಕಾಯಿ ಒಡೆಯುವ ಕಾರ್ಯಕ್ರಮ: ಸದ್ಯದಲ್ಲೇ ಕಾನ್ಸೆಪ್ಟ್ ಪೋಸ್ಟರ್ ಬಿಡುಗಡೆ!
ವರದಿ: ಅರುಣ್ ಜಿ.,
ಕರ್ನಾಟಕದ ಕಿರುತೆರೆ ಲೋಕದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿ, ಕರುನಾಡಿನ ಜನ-ಮನ ಗೆದ್ದಿರುವ ಗಗನ ಎಂಟರ್‌ಪ್ರೈಸಸ್ ಮೊದಲ ಬಾರಿಗೆ ಹೆಜ್ಜಾರು ಸಿನಿಮಾದ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದೆ.
ಇಲ್ಲಿಯವರೆಗೆ ಬರೋಬ್ಬರಿ ಹದಿಮೂರು ದಾರಾವಾಹಿಯನ್ನು ನಿರ್ದೇಶಿಸಿ, ನಿರ್ಮಾಣ ಮಾಡಿರುವ ಕೆ.ಎಸ್.ರಾಮ್‌ಜಿ ಅವರ ಮೊದಲ ನಿರ್ಮಾಣದ ಹೆಜ್ಜಾರು ಸಿನಿಮಾದ ಕೊನೆಯ ದಿನದ ಚಿತ್ರೀಕರಣ ಕುಂಬಳಕಾಯಿ ಒಡೆಯುವ ಮೂಲಕ ಅದ್ದೂರಿಯಾಗಿ ಮುಗಿದಿದೆ.
ಕಿರುತೆರೆಯ ದಾರವಾಹಿಯ ಹೆಸರಾಂತ ಬರಹಗಾರ; ಜೀ ಕನ್ನಡ ವಾಹಿನಿಯ ಫಿಕ್ಷನ್ ಹೆಡ್ ಆಗಿ ಕಾರ್ಯ ನಿರ್ವಹಿಸಿ, ಯಶಸ್ಸು ಗಳಿಸಿದ ಹರ್ಷಪ್ರಿಯ, ಮೊದಲ ಬಾರಿಗೆ ಈ ಚಿತ್ರದ ಮೂಲಕ ನಿರ್ದೇಶನದ ಕ್ಯಾಪ್ ತೊಟ್ಟಿದ್ದಾರೆ. ಚಿತ್ರಕ್ಕೆ ಅಮರ್.ಎಲ್ ಛಾಯಾಗ್ರಹಣವಿದ್ದು, ಪೂರ್ಣಚಂದ್ರ ತೇಜಸ್ವಿಯವರ ಸಂಗೀತವಿದೆ. ಸಾಹಸ ದೃಶ್ಯದ ಸನ್ನಿವೇಶವನ್ನು ನರಸಿಂಹ ನಿರ್ದೇಶಿಸಿದ್ದು, ಭಜರಂಗಿ ಖ್ಯಾತಿಯ ಮೋಹನ್‌ರವರು ನೃತ್ಯ ನಿರ್ದೇಶನ ಮಾಡಿದ್ದಾರೆ.
ಕಾರ್ತಿಕ್ ಭಟ್ ಸಂಭಾಷಣೆ ಇರುವ ಈ ಚಿತ್ರದ ಮೂಲಕ ಭಗತ್ ಆಳ್ವ ನಾಯಕ ನಟನಾಗಿ ಹಿರಿತೆರೆಗೆ ಪಾದಾರ್ಪಣೆ ಮಾಡುತ್ತಿದ್ದು, ಇವರಿಗೆ ‘ಖಾಸಗಿ ಪುಟಗಳು’ ಖ್ಯಾತಿಯ ಲಿಯೋನಿಲ್ಲಾ ಶ್ವೇತಾ ಡಿಸೋಜ ನಾಯಕಿಯಾಗಿ ಕಾಣಿಸಿಕೊಂಡ್ಡಿದ್ದಾರೆ.
ಬಹುತೇಕ ರಂಗಭೂಮಿ ಕಲಾವಿದರಿರುವ ತಾರಾಗಣದಲ್ಲಿ ಗೋಪಾಲ್ ದೇಶ್ಪಾಂಡೆ, ನವೀನ್ ಕೃಷ್ಣ, ಮುನಿ, ಅರುಣ ಬಾಲರಾಜ್‌ರಂತಹ ಪರಿಚಿತ ಕಲಾವಿದರು ಜೊತೆಯಾಗಿದ್ದಾರೆ. ಈಗಷ್ಟೆ ಚಿತ್ರಿಕರಣ ಮುಗಿಸಿ ಕುಂಬಳಕಾಯಿ ಹೊಡೆದಿರುವಂತಹ ಚಿತ್ರತಂಡ, ಸದ್ಯದಲ್ಲೇ ಪ್ರಚಾರ ಕಾರ್ಯಕ್ರಮ ಆರಂಭಿಸುವ ಮಾಹಿತಿ ನೀಡಿದ್ದಾರೆ. ಚಿತ್ರದ ಕಥೆಯ ಕುರಿತು ಯಾವುದೇ ಸುಳಿವು ಬಿಟ್ಟುಕೊಡದ ಚಿತ್ರತಂಡ, ಸದ್ಯದಲ್ಲೇ ವಿಶೇಷ ರೀತಿಯ ಕಾನ್ಸೆಪ್ಟ್ ಪೋಸ್ಟರ್ ಬಿಡುಗಡೆ ಮಾಡವ ಸಿದ್ದತೆ ಮಾಡಿಕೊಂಡಿದೆ.