ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
Cinema News Archives » Dynamic Leader
October 23, 2024
Home Posts tagged Cinema News
ಸಿನಿಮಾ

ಓಂ ರಾವತ್ ನಿರ್ದೇಶನದ ಆದಿಪುರುಷ ಸಿನಿಮಾ ರಾಮಾಯಣ ಕಥೆಯನ್ನಾಧರಿಸಿ ತೆರೆಕಂಡಿದೆ. ಇದರಲ್ಲಿ ರಾಮನಾಗಿ ಪ್ರಭಾಸ್, ರಾವಣನಾಗಿ ಸೈಫ್ ಅಲಿ ಖಾನ್ ಮತ್ತು ಸೀತೆಯಾಗಿ ಕೀರ್ತಿ ಸನನ್ ನಟಿಸಿದ್ದಾರೆ. ಅದ್ಧೂರಿ ಚಿತ್ರವನ್ನು ಡಿ ಸಿರೀಸ್ ಮತ್ತು ರೆಟ್ರೋ ಪೈಲ್ಸ್ ಜಂಟಿಯಾಗಿ ನಿರ್ಮಿಸಿವೆ. ಕನ್ನಡ, ತೆಲುಗು, ತಮಿಳು, ಹಿಂದಿ, ಮಲಯಾಳಂ ಹಾಗೂ ಇತರ ಭಾಷೆಗಳಲ್ಲಿ 3ಡಿ ತಂತ್ರಜ್ಞಾನದಲ್ಲಿ ಆದಿಪುರುಷ ಚಿತ್ರ ನಿನ್ನೆ (ಜೂನ್ 16) ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಿದೆ.

ಭಾರೀ ನಿರೀಕ್ಷೆಗಳ ನಡುವೆ ತೆರೆಕಂಡಿರುವ ಆದಿಪುರುಷ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಪ್ರಭಾಸ್ ಅಭಿಮಾನಿಗಳಿಂದ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆಯಾದರೂ, ಚಿತ್ರವಾಗಿ ನಿರೀಕ್ಷೆಗೆ ತಕ್ಕಂತೆ ಇಲ್ಲ ಎಂಬ ನೆಗೆಟಿವ್ ವಿಮರ್ಶೆಗಳೂ ಬಂದಿವೆ.

ಸುಮಾರು ರೂ.500 ಕೋಟಿ ಬಜೆಟ್ ನಲ್ಲಿ ಮೋಷನ್ ಕ್ಯಾಪ್ಚರ್ ತಂತ್ರಜ್ಞಾನದೊಂದಿಗೆ ತಯಾರಾಗಿರುವ ಚಿತ್ರದ ಅನಿಮೇಷನ್ ದೃಶ್ಯಗಳನ್ನು ನೆಟ್ಟಿಗರು ಟೀಕಿಸುತ್ತಿದ್ದಾರೆ. VFX ದೃಶ್ಯಗಳು ಇನ್ನೂ ಚೆನ್ನಾಗಿರಬಹುದಿತ್ತು ಎಂಬುದು ಹೆಚ್ಚಿನ ಅಭಿಮಾನಿಗಳ ಸಾಮಾನ್ಯ ಅಭಿಪ್ರಾಯವಾಗಿದೆ.

ಈ ಹಿನ್ನಲೆಯಲ್ಲಿ ಹಿಂದೂಸೇನಾ ಸಂಘಟನೆಯು ಆದಿಪುರುಷ ಚಿತ್ರದ ವಿರುದ್ಧ ದೆಹಲಿ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದೆ. ರಾಮಾಯಣ ಕಥೆಯಾಧಾರಿತ ಆದಿಪುರುಷ ಸಿನಿಮಾದಲ್ಲಿ ವಿವಾದಾತ್ಮಕ ದೃಶ್ಯಗಳಿದ್ದು, ಅದನ್ನು ತೆಗೆಯಬೇಕು ಎಂದು ಹಿಂದೂ ಸೇನೆಯ ರಾಷ್ಟ್ರೀಯ ಅಧ್ಯಕ್ಷರು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ. ರಾಮ, ರಾಮಾಯಣ, ಹಿಂದೂ ಸಂಸ್ಕೃತಿಯನ್ನು ಗೇಲಿ ಮಾಡಲಿಕ್ಕಾಗಿ ಆದಿಪುರುಷ ಸಿನಿಮಾ ಮಾಡಲಾಗಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ಈ ಹಿಂದೆ, ಆದಿಪುರುಷ ಚಿತ್ರದಲ್ಲಿ, ಸೀತೆಯನ್ನು ಭಾರತದ ಮಗಳು ಎಂದು ಉಲ್ಲೇಖಿಸಿದ್ದಕ್ಕಾಗಿ ನೇಪಾಳದಲ್ಲಿ ತೀವ್ರ ಪ್ರತಿಭಟನೆಯನ್ನು ಹುಟ್ಟುಹಾಕಿತ್ತು. ರಾಮಾಯಣದ ಪ್ರಕಾರ ಸೀತೆ ನೇಪಾಳದಲ್ಲಿ ಜನಿಸಿದವಳು. ರಾಮ ಬಂದು ಸೀತೆಯನ್ನು ಮದುವೆಯಾಗುತ್ತಾರೆ.

ಇದಾದ ನಂತರ ನೇಪಾಳದ ಕಠ್ಮಂಡುವಿನ ಮೇಯರ್ ಬಲೇನ್ ಶಾ ಟ್ವೀಟ್ ಮಾಡಿ, “ಸೀತೆ ಭಾರತದ ಮಗಳು ಎಂಬ ವಿವಾದಾತ್ಮಕ ದೃಶ್ಯವನ್ನು ತೆಗೆದುಹಾಕದಿದ್ದರೆ ನೇಪಾಳದಲ್ಲಿ ಆದಿಪುರುಷ ಚಿತ್ರವನ್ನು ಬಿಡುಗಡೆ ಮಾಡುವುದಿಲ್ಲ” ಎಂದು ಹೇಳಿದ್ದಾರೆ. ಆ ನಂತರ ಆದಿಪುರುಷ ಚಿತ್ರತಂಡ ವಿವಾದಕ್ಕೆ ಎಡೆಮಾಡಿಕೊಟ್ಟಿದ್ದ ಆ ಸಂಭಾಷಣೆಯನ್ನು ತೆಗೆದು ಹಾಕಿದ್ದಾರೆ ಎಂದು ಹೇಳಲಾಗುತ್ತಿದೆ.

ಸಿನಿಮಾ

ವರದಿ: ಅರುಣ್ ಜಿ.,

ಮತ್ತೆ ಶುರು ಡಾ.ರಾಜ್ ಕಪ್! ದುಬೈನಲ್ಲಿ ನಡೆಯಲಿದೆ ರಾಜ್ ಕಪ್ ಸೀಸನ್-6 ಹರಾಜು ಪ್ರಕ್ರಿಯೆ; ವಿಶೇಷ ಅತಿಥಿಯಾಗಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಭಾಗಿ!

ಸ್ಯಾಂಡಲ್ ವುಡ್‌ನಲ್ಲಿ ಮತ್ತೆ ಕ್ರಿಕೆಟ್ ಸಂಭ್ರಮ ಶುರುವಾಗ್ತಿದೆ. ಸಿಸಿಎಲ್ ಕ್ರಿಕೆಟ್ ಲೀಗ್ ಬೆನ್ನಲ್ಲೀಗ ಡಾ.ರಾಜ್ ಕಪ್ ಸೀಸನ್ 6ಗೆ ಮುಹೂರ್ತ ಫಿಕ್ಸ್ ಆಗಿದ್ದು, ಇದಕ್ಕಾಗಿ ತಾರೆಯರು ತಯಾರಿ ಆರಂಭಿದ್ದಾರೆ. ಪುನೀತ್ ರಾಜ್‌ಕುಮಾರ್ ಅವರ ಸ್ಮಾರಣಾರ್ಥವಾಗಿ ರಾಜ್ ಕಪ್ ಆಯೋಜಿಸಲಾಗಿದ್ದು, ಇದೇ ಜೂನ್ 17 ರಂದು ದುಬೈನಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದೆ. ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ವಿಶೇಷ ಅತಿಥಿಯಾಗಿ ಆಗಮಿಸಲಿದ್ದಾರೆ. ಕ್ರಿಕೆಟ್ ಪಂದ್ಯಾವಳಿಗೆ ಸಂಬಂಧಪಟ್ಟಂತೆ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ, ಆಯೋಜರಾದ ರಾಜೇಶ್ ಬ್ರಹ್ಮಾವರ, ಅನಿರುದ್, ಮಣಿಕಾಂತ್ ಕದ್ರಿ, ಸಿಂಪಲ್ ಸುನಿ, ರವಿಶಂಕರ್ ಗೌಡ, ಜೇಮ್ಸ್ ಚೇತನ್, ಪವನ್ ಒಡೆಯರ್ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು. 

ರಾಜ್ ಕಪ್ ಆಯೋಜಕರಾದ ರಾಜೇಶ್ ಬ್ರಹ್ಮಾವರ ಮಾತನಾಡಿ, “ಇದೇ 17ಕ್ಕೆ ದುಬೈನಲ್ಲಿ ರಾಜ್ ಕಪ್ ಆಟಗಾರರ ಹರಾಜು ಪ್ರಕ್ರಿಯೆ ನಡೆಯಲಿದೆ. ಕಳೆದ ಬಾರಿ 8 ತಂಡ ಇತ್ತು. ಈ ಬಾರಿ 12 ತಂಡಗಳಾಗಿವೆ.  1000ಕ್ಕೂ ಹೆಚ್ಚು ಅಪ್ಲೀಕೇಷನ್ ಬಂದಿತ್ತು. ಅವುಗಳಲ್ಲಿ ರೂಲ್ಸ್ ಗೆ ತಕ್ಕಂತೆ ಆಯ್ಕೆ ಮಾಡಲಾಗಿದೆ. 12 ತಂಡಗಳಿಗೆ 12 ಕ್ಯಾಪ್ಟನ್, 12 ವೈಸ್ ಕ್ಯಾಪ್ಟನ್, ಸ್ಟಾರ್ ಕ್ಯಾಪ್ಟನ್ ಇರಲಿದ್ದಾರೆ. ರಾಜ್ ಕಪ್ ಸೀಸನ್ 6ನ್ನು ಆರು ದೇಶಗಳಲ್ಲಿ ಮಾಡುವ ಪ್ಲಾನ್ ನಡೆದಿದೆ. ಶ್ರೀಲಂಕಾ, ಸಿಂಗಾಪುರ್, ಮಲೇಷ್ಯಾ, ಬ್ಯಾಂಕಾಕ್ ಮತ್ತು ದುಬೈನಲ್ಲಿ ಪಂದ್ಯ ನಡೆಯಲಿವೆ. ಇನ್ನೊಂದು ದೇಶ ಬಾಕಿ ಉಳಿದಿದೆ. ದುಬೈನಲ್ಲಿ ನಡೆಯುವ ಆಟಗಾರರ ಹರಾಜಿನಲ್ಲಿ ಮುಖ್ಯ ಅತಿಥಿಯಾಗಿ ಪುನೀತ್ ರಾಜ್ ಕುಮಾರ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ಭಾಗಿಯಾಗಲಿದ್ದಾರೆ” ಎಂದು ತಿಳಿಸಿದರು. 

ನಟ ಅನಿರುದ್ಧ್ ಮಾತನಾಡಿ, “ಡಾ.ರಾಜ್ ಕಪ್ ಹೆಸರಲ್ಲೇ ಸಕಾರಾತ್ಮಕತೆ ಇದೆ. ಆ ಒಂದು ವ್ಯಕ್ತಿಗೆ ಮಹಾನ್ ಕಲಾವಿದರಿಗೆ ಅವರ ಹೆಸರಲ್ಲಿ ಅವರ ಸ್ಮಾರಣಾರ್ಥವಾಗಿ ಕ್ರಿಕೆಟ್ ಪಂದ್ಯಾವಳಿ ಆಡುತ್ತಿರುವುದು ನಿಜಕ್ಕೂ ಸಂತೋಷ. ಅದರಲ್ಲಿ ನಾನೂ ಭಾಗಿಯಾಗಿದ್ದು, ರಾಜೇಶ್ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ. ನನಗೆ ವೈಯಕ್ತಿಕವಾಗಿ ಬಹಳ ಸಂತೋಷವಾಗಿದೆ. ರಾಜೇಶ್ ನನಗೆ ಆತ್ಮೀಯರು. ನನ್ನ ಮೊದಲ ಸಿನಿಮಾದಲ್ಲಿ ಒಟ್ಟಿಗೆ ಅಭಿನಯಿಸಿದ್ದೇವೆ. ಕ್ರಿಕೆಟ್ ಅನ್ನೋದು ನಿಮಿತ್ತ ಅಷ್ಟೇ. ಕನ್ನಡ ಚಿತ್ರರಂಗಲ್ಲಿ ನಾವೆಲ್ಲಾ ಒಗ್ಗಟ್ಟಾಗಿದ್ದೇವೆ; ನಮ್ಮಲ್ಲಿ ಬಾಂಧವ್ಯ ಇದೆ ಅನ್ನೋದನ್ನು ತೋರಿಸಿಕೊಡುತ್ತದೆ. ಈ ಪಂದ್ಯಾವಳಿ ಯಶಸ್ವಿಯಾಗಲಿ ಎಂದರು. 

ಡಾ.ರಾಜ್ ಕಪ್ ಸೀಸನ್ 6ರಲ್ಲಿ ಒಟ್ಟು 12 ತಂಡಗಳು ಭಾಗಿಯಾಗಲಿದ್ದು, 27 ಮ್ಯಾಚ್‌ಗಳು ನಡೆಯಲಿದೆ.  ಡಾಲಿ ಧನಂಜಯ್, ಅನಿರುದ್, ಡಾರ್ಲಿಂಗ್ ಕೃಷ್ಣ , ಅಭಿಷೇಕ್ ಅಂಬರೀಶ್, ನೀನಾಸಂ ಸತೀಶ್, ಲೂಸ್ ಮಾದ ಯೋಗಿ, ವಶಿಷ್ಠ ಸಿಂಹ, ಪ್ರಜ್ವಲ್, ಕೋಮಲ್, ಶ್ರೀನಗರ ಕಿಟ್ಟಿ, ರಾಜುಗೌಡ ನೇತೃತ್ವದ ತಂಡಗಳು ಪಾಲ್ಗೊಳ್ಳಲಿವೆ. ಇನ್ನು, ರಾಜ್ ಕಪ್ ಸೀಸನ್ 6ರ ಲೀಗ್ ಮ್ಯಾಚ್‌ಗಳು ವಿದೇಶದಲ್ಲಿ ನಡೆಯಲಿದೆ. ಈ ಬಾರಿ ಲೀಗ್ ಪಂದ್ಯಗಳು ಶ್ರೀಲಂಕಾ, ಸಿಂಗಾಪುರ್, ಮಲೇಷ್ಯಾ ಬ್ಯಾಂಕಾಕ್ ಮತ್ತು ದುಬೈನಲ್ಲಿ ನಡೆಯಲಿವೆ. ಈ ಮಹತ್ವದ ರಾಜ್ ಕಫ್ ಟೂರ್ನಿಗಾಗಿ ಸ್ಯಾಂಡಲ್ ವುಡ್ ತಾರೆಯರು, ತಂತ್ರಜ್ಞರ, ರಾಜಕೀಯ, ಮಾಧ್ಯಮದವರು ಭಾಗಿಯಾಗಲಿದ್ದಾರೆ.

ಸಿನಿಮಾ

ವರದಿ: ಅರುಣ್ ಜಿ.,

ಈ ಹಿಂದೆ ‘ಡಿಸೆಂಬರ್ 24’ ಎಂಬ ಹಾರರ್ ಚಿತ್ರವನ್ನು ನಿರ್ದೇಶಿಸಿದ್ದ ನಾಗರಾಜ್ ಎಂ.ಜಿ.ಗೌಡ ಅವರು ಸದ್ದಿಲ್ಲದೆ ಮತ್ತೊಂದು ಚಿತ್ರ ನಿರ್ದೇಶನಕ್ಕೆ ಕೈಹಾಕಿದ್ದಾರೆ. ಚಿತ್ರದ ಹೆಸರು ‘ಕಾನೂನು ಅಸ್ತ್ರ’ ಈ ಚಿತ್ರದ ಮುಹೂರ್ತ ಸಮಾರಂಭ ಸುಂಕದಕಟ್ಟೆಯ ನಿರ್ಮಾಪಕರ ಕಛೇರಿಯಲ್ಲಿ ನಡೆಯಿತು.

ಸಮಾಜದಲ್ಲಿ ಕಾನೂನಿನ ಬಗ್ಗೆ ಅರಿವಿಲ್ಲದವರು ಹೇಗೆ ತೊಂದರೆ ಅನುಭವಿಸುತ್ತಿದ್ದಾರೆ. ಕಾನೂನು ಅಸ್ತ್ರ ಉಪಯೋಗಿಸಿಕೊಂಡು ಅದರಿಂದ ಹೇಗೆ ಪಾರಾಗಬಹುದು ಎಂದು ಈ ಚಿತ್ರದಲ್ಲಿ ಹೇಳಲಾಗಿದೆ. ಮದ್ಯಮವರ್ಗದ ಜನ ವಾಹನ ಸಾಲ ಪಡೆದುಕೊಂಡು, ಕಂತು ಕಟ್ಟುವುದು ಸ್ವಲ್ಪ ತಡವಾದರೂ ಅವರ ಮೇಲೆ ಸೀಜಿಂಗ್ ನವರು ನಡೆಸುವ ದೌರ್ಜನ್ಯ, ಗೃಹ ಸಾಲ ಪಡೆದವರ ಮೇಲೆ ಬ್ಯಾಂಕ್‌ಗಳು ಬೇಕಾಬಿಟ್ಟಿ ಬಡ್ಡಿ ವಿಧಿಸುವಿಕೆ, ಸಾಲ ಪಡೆಯುವಾಗ ಖಾಲಿ ಚೆಕ್ ನೀಡಿದರೆ ಆಗುವ ಪರಿಣಾಮಗಳು, ಗಂಡ ಹೆಂಡತಿ ನಡುವಿನ ಸಂಸಾರ ಕಲಹಗಳು, ಡೈವೊರ್ಸ್ ಗೆ ಕಾರಣಗಳು, ನಿರಪರಾಧಿಯ ಮೇಲೆ ಕೊಲೆ ಅಪರಾಧ ಬಂದಾಗ ಕಾನೂನು ಅಂತಹವರನ್ನು ಹೇಗೆ ಸಂರಕ್ಷಿಸುತ್ತದೆ ಎಂಬ ಹಲವಾರು ಅಂಶಗಳನ್ನು ಹೇಳುವ ಚಿತ್ರವೇ ಕಾನೂನು ಅಸ್ತ್ರ. ಬಡವ, ಶ್ರೀಮಂತ, ಗಂಡು, ಹೆಣ್ಣು, ಸಾಲದ ಸುಳಿಯಿಂದ ಪಾರಾಗುವುದಕ್ಕೆ ಕಾನೂನು ಅಸ್ತ್ರ ಹೇಗೆ ಸಹಕಾರಿಯಾಗುತ್ತದೆ ಎಂಬುದನ್ನು  ಪರಿಣಾಮಕಾರಿಯಾಗಿ ಹೇಳುವ ಪ್ರಯತ್ನವಿದು. ಇದೆ 15 ರಿಂದ ಆರಂಭಿಸಿ ಮಡಿಕೇರಿ, ಸಕಲೇಶಪುರ, ಚಿಕ್ಕಮಗಳೂರು ಸುತ್ತಮುತ್ತ  ಚಿತ್ರೀಕರಣ ನಡೆಸಲಾಗುವುದು.

ಪುಟ್ಟೇಗೌಡ ಎನ್. ಪ್ರೊಡಕ್ಷನ್ ಅಡಿಯಲ್ಲಿ ಪುಟ್ಟೇಗೌಡ ಎನ್. ಅವರು ಕಥೆ, ಸಂಭಾಷಣೆ ಬರೆದು ನಿರ್ಮಾಣ ಮಾಡುತ್ತಿದ್ದಾರೆ. ನಾಗರಾಜ್ ಎಂ.ಜಿ. ಗೌಡ ನಿರ್ದೇಶನ ಮಾಡುತ್ತಿದ್ದು, ವೆಂಕಿ ಯು.ಡಿ.ವಿ. ಅವರ ಸಂಕಲನ, ವಿನಯ್ ಗೌಡ ಅವರ ಛಾಯಾಗ್ರಹಣ, ಚಿತ್ರದ 5 ಹಾಡುಗಳಿಗೆ ಮಂಜು ಮಹದೇವ್ ಅವರ ಸಂಗೀತ, ಚಂದ್ರು ಬಂಡೆ ಅವರ ಸಾಹಸ, ಬಾಲು ಮಾಸ್ಟರ್ ಅವರ ಕೊರಿಯೋಗ್ರಫಿ ಇದೆ. ಅಲ್ಕದೆ ಪುಟ್ಟೇಗೌಡ. ಎನ್, ಜಗದೀಶ್. ಹೆಚ್.ಜಿ. ದೊಡ್ಡಿ, ಬಾಬು. ಬಿ.ಬಿ.ಆರ್, ಲಕ್ಷ್ಮಿನಾರಾಯಣ್, ಕವಿತ, ಸಾನ್ವಿ ಗೌಡ, ಯೋಗೇಶ್, ಮಂಜುನಾಥ್, ಶೈಲೇಶ್ ಮುಂತಾದವರು ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ‌.

ಸಿನಿಮಾ

ವರದಿ: ಅರುಣ್ ಜಿ.,

ಹಿರಿಯ ನಿರ್ದೇಶಕ ಕೆ.ಎಚ್.ವಿಶ್ವನಾಥ್ ಸಾರಥ್ಯದ ಹೊಸ ಸಿನಿಮಾಗೆ ಟೈಟಲ್ ಫಿಕ್ಸ್ ‘ಆಡೇ ನಮ್ God’ ಅಂತಿದ್ದಾರೆ ರಾಮ ರಾಮ ರೇ ನಟರಾಜ್.

ಬಿ.ಬಿ.ಆರ್ ಫಿಲ್ಮಂಸ್ ಹಾಗೂ ಎವರೆಸ್ಟ್ ಇಂಡಿಯಾ ಎಂಟರ್‌ಟೈನರ್ ಬ್ಯಾನರ್‌ನಡಿ ಪ್ರೊ.ಬಿ.ಬಸವರಾಜ್ ಹಾಗೂ ರೇಣುಕಾ ಬಸವರಾಜ್ ಚೊಚ್ಚಲ ಬಾರಿಗೆ ನಿರ್ಮಾಣ ಮಾಡ್ತಿರುವ ಹೊಸ ಸಿನಿಮಾಗೆ ಟೈಟಲ್ ಫಿಕ್ಸ್ ಆಗಿದೆ. ಪಂಚಮ ವೇದ, ಶ್ರೀಗಂಧ, ಅರಗಿಣಿ, ಅರುಣೋದಯ, ರಂಗೋಲಿ, ಅಂಡಮಾನ್, ಮುಂಜಾನೆ ಮಂಜು, ಮುಸುಕು ಸಿನಿಮಾಗಳ ಖ್ಯಾತಿ ಹಿರಿಯ ನಿರ್ದೇಶಕ ಕೆ.ಎಚ್.ವಿಶ್ವನಾಥ್ ಆಕ್ಷನ್ ಕಟ್ ಹೇಳ್ತಿರುವ ಚಿತ್ರಕ್ಕೆ ‘ಆಡೇ ನಮ್ God’ ಎಂಬ ಶೀರ್ಷಿಕೆ ಇಡಲಾಗಿದೆ.

ಇದನ್ನೂ ಓದಿ: ದರ್ಬಾರ್ ಪರಿಶುದ್ದ ಹಾಸ್ಯ ಚಿತ್ರ: ನಾಯಕ ಸತೀಶ್

ಮೂಡನಂಬಿಕೆ ಸುತ್ತ ಸಾಗುವ ಈ ಕಥೆಯಲ್ಲಿ ಮ್ಯಾನ್ ಆಫ್ ದಿ ಮ್ಯಾಚ್, ರಾಮ ರಾಮ ರೇ ಸಿನಿಮಾ ಖ್ಯಾತಿಯ ನಟರಾಜ್, ಮಂಜುನಾಥ್ ಜಂಬೆ, ಅಜಿತ್ ಬೊಪ್ಪನಹಳ್ಳಿ, ಪಿಂಕಿ ಎಲ್ಲಿ ಚಿತ್ರದ ಅನೂಪ್ ಶೂನ್ಯ, ಸಾರಿಕ ರಾವ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದು, ಬಿ.ಸುರೇಶ್ ಸೇರಿದಂತೆ ಇತರರು ತಾರಾ ಬಳಗದಲ್ಲಿದ್ದಾರೆ. ಪಿ.ಕೆ.ಎಚ್.ದಾಸ್ ಛಾಯಾಗ್ರಹಣ, ಬಿ.ಎಸ್,ಕೆಂಪರಾಜು ಸಂಕಲನ, ಸ್ವಾಮಿನಾಥನ್ ಸಂಗೀತ, ಹೊಸ್ಮನೆ ಮೂರ್ತಿ ಕಲಾ ನಿರ್ದೇಶನ, ಅಕ್ಷಯ್ ವಿಶ್ವನಾಥ್ ಚಿತ್ರಕಥೆ-ಸಹ ನಿರ್ದೇಶನ ‘ಆಡೇ ನಮ್ God’ ಚಿತ್ರಕ್ಕಿದೆ. ಸೆನ್ಸಾರ್ ಪಾಸಾಗಿರುವ ಸಿನಿಮಾ ಶೀಘ್ರದಲ್ಲಿಯೇ ತೆರೆಗೆ ತರಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.

ಸಿನಿಮಾ

ವರದಿ: ಅರುಣ್ ಜಿ.,

ಬೆಂಗಳೂರು: ಇನ್ನೇನು ಬಹುದಿನಗಳಿಂದ ಕಾಯುತ್ತಿದ್ದ ದರ್ಬಾರ್ ಚಲನಚಿತ್ರ ಈ ಶುಕ್ರವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಸಂಗೀತ ನಿರ್ದೇಶಕ ವಿ.ಮನೋಹರ್ ಅವರನ್ನು 23 ವರ್ಷಗಳ‌ ನಂತರ ಮತ್ತೆ ನಿರ್ದೇಶನಕ್ಕೆ ಕೈ ಹಾಕುವಂತೆ ಪ್ರೇರೇಪಿಸಿದ್ದು “ದರ್ಬಾರ್” ಚಿತ್ರದ ಕಂಟೆಂಟ್.  ಇದೇ 9 ರಂದು ತೆರೆ ಕಾಣಲಿರುವ ಈ ಚಿತ್ರದ ಬಿಡುಗಡೆಪೂರ್ವ ಪತ್ರಿಕಾಗೋಷ್ಟಿ ಇತ್ತೀಚೆಗೆ ನಡೆದಿದ್ದು, ಈ ಸಂದರ್ಭದಲ್ಲಿ ಸಿನಿಮಾ ಕುರಿತಂತೆ ನಿರ್ದೇಶಕ ವಿ.ಮನೋಹರ್, ನಾಯಕ ಸತೀಶ್, ನಾಯಕಿ ಜಾಹ್ನವಿ, ಕಾಮಿಡಿ ಕಿಲಾಡಿ ಸಂತು, ಹುಲಿ ಕಾರ್ತೀಕ್  ಮಾತನಾಡಿದರು. 

ಮೊದಲು ವಿ.ಮನೋಹರ್ ಮಾತನಾಡುತ್ತ  “ಸಂತು ಕಾರ್ತೀಕ್ ನಮ್ಮ ಚಿತ್ರದಲ್ಲಿ  ಪ್ರಧಾನ ಪಾತ್ರ ವಹಿಸಿದ್ದಾರೆ. ಮೈಸೂರು, ಚನ್ನಪಟ್ಟಣ, ದಾವಣಗೆರೆ ಇಲ್ಲೆಲ್ಲ ಟ್ಯಾಬುಲೋ ಜೊತೆ ಹೋದಾಗ ಬಹಳ ದೊಡ್ಡ ರೆಸ್ಪಾನ್ಸ್ ಬಂತು. ಕಾಲೇಜ್ ಸ್ಟೂಡೆಂಟ್ ಗಳಲ್ಲಿ  ಜೋಷ್ ಇತ್ತು. 23 ವರ್ಷಗಳ ವನವಾಸ ಮುಗಿಸಿ ಬಂದಿದ್ದೀರಿ ಎಂದು ಒಬ್ಬ ಪತ್ರಕರ್ತರು ಹೇಳಿದರು. ನಮ್ಮ‌ ನೋವು ದುಃಖಗಳನ್ನು ಕಾಮಿಡಿಯಾಗಿ ತಗೊಂಡಾಗ ತೃಪ್ತಿಯಾಗುತ್ತೆ. ಮ್ಯೂಸಿಕ್ ಮಾಡುವುದು ಇನ್ನೊಬ್ಬರ ಕನಸಿಗೆ, ಸಿನಿಮಾ ಮಾಡುವುದು ನಮ್ಮ‌ ಕನಸಿಗೆ. ಸತೀಶ್ ನಮ್ಮ‌ ಕನಸಿಗೆ ಜೊತೆಯಾದರು. ಈಚೆಗೆ ಚಿತ್ರದ ಟೆಸ್ಟ್ ಷೋ‌ ಮಾಡಿದಾಗ ಒಳ್ಳೆಯ ಅಭಿಪ್ರಾಯ ಬಂತು. ಥಿಯೇಟರಿಗೆ ಬರುವ ಪ್ರೇಕ್ಷಕರಿಗೆ ಮನರಂಜನೆ ಖಚಿತ. ಚಂದನ್ ಶೆಟ್ಟಿ ಅವರು ಹಾಡಿದ ಹೀರೋ ಇಂಟ್ರಡಕ್ಷನ್ ಹಾಡನ್ನು ಮಂಗಳವಾರ ರಿಲೀಸ್ ಮಾಡುತ್ತೇವೆ. ಚಿತ್ರದ ಆರಂಭದಲ್ಲಿ ಬರುವ, ನಾಯಕನ ನೈತಿಕ ದಾದಾಗಿರಿ ಹೇಳುವ ಸಾಂಗ್ ಅದು” ಎಂದರು. 

ನಂತರ ಸಂತು ಮಾತನಾಡಿ, “ಅದ್ಭುತವಾದ ಸಿಚುಯೇಶನ್ ಕಾಮಿಡಿ ಇರುವಂಥ ಚಿತ್ರ. ಟೆಕ್ನಿಕಲ್ ಪ್ರೀಮಿಯರ್ ಷೋ ಮಾಡಿದಾಗ ಬಂದ ರಿಯಾಕ್ಷನ್ ಕಂಡು ನಿಜಕ್ಕೂ ಖುಷಿ ಆಯ್ತು. ಜನ ದುಡ್ಡು ಇಸ್ಕೊಂಡು ಓಟ್ ಹಾಕಿದರೆ ಏನಾಗುತ್ತೆ ಅನ್ನೋದು ಈ ಸಿನಿಮಾದಲ್ಲಿದೆ. ಪ್ರಾಮಾಣಿಕ‌ ವ್ಯಕ್ತಿಗೆ‌ ನಮ್ಮ ಮತ ಹಾಕಬೇಕು ಎಂಬ ಅರಿವು ಮೂಡಿಸುತ್ತದೆ. ನನ್ನ ಪಾತ್ರ ತುಂಬಾ ನಗಿಸುತ್ತದೆ. ಕಾರ್ತೀಕ್ ಕಾಮಿಡಿ ಬಿಟ್ಟು ಫಸ್ಟ್ ಟೈಮ್ ವಿಲನ್ ರೋಲ್ ಮಾಡಿದ್ದಾರೆ. ಸತೀಶ್ ತಾವೊಬ್ಬರೇ ಸ್ಕ್ರೀನ್ ಮೇಲಿರಬೇಕು ಎಂದು ಯೋಚಿಸದೆ ಎಲ್ಲರಿಗೂ ಸಮಾನ ಅವಕಾಶ ನೀಡಿದ್ದಾರೆ. ಪ್ರತಿ ಪಾತ್ರಕ್ಕೂ ನುರಿತ ಕಲಾವಿದರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ನನ್ನದು ವೈರ ಎಂಬ ಪಾತ್ರ” ಎಂದು ಹೇಳಿದರು.

ನಾಯಕ ಸತೀಶ್ ‌ಮಾತನಾಡಿ, “ಇತ್ತೀಚಿಗೆ ಜನ ಯಾಕೆ ಸಿನಿಮಾಗೆ ಬರುತ್ತಿಲ್ಲ ಅಂತ ನಾನೂ ಯೋಚಿಸಿದೆ. ನಮ್ಮ ಚಿತ್ರವು ಖಂಡಿತ ಮನರಂಜನೆ ನೀಡುತ್ತದೆ. ಕಾರ್ತೀಕ್ ಅವರು ನಾವು ಜೀವನದಲ್ಲಿ ನೋಡುವಂಥ ಅನೇಕ ಚಪ್ಪರ್ ಗಳ ಪಾತ್ರವನ್ನು ಪ್ರತಿನಿಧಿಸಿದ್ದಾರೆ. ಇನ್ನು ಸಂತು ಇಬ್ಬರಿಗೆ ಜಗಳ ತಂದಿಟ್ಟು ಎಂಜಾಯ್ ಮಾಡುವಂಥ ಪಾತ್ರ. ಸಿನಿಮಾದಲ್ಲಿ ಪಾತ್ರಗಳು ಗಂಭೀರವಾಗಿರುತ್ತೆ. ಅದು ನೋಡುಗರಿಗೆ ಮನರಂಜನೆ ನೀಡುತ್ತೆ. ಸಾಂದರ್ಭಿಕ ಹಾಸ್ಯ ದೃಶ್ಯಗಳನ್ನು ಜಾಸ್ತಿ ಇಟ್ಟಿದ್ದೇವೆ. ಇಂಡಸ್ಟ್ರಿ ಮತ್ತೆ ಮೊದಲಿನಂತಾಗಬೇಕು. ಅದು ನಮ್ಮ ಚಿತ್ರದಿಂದಲೇ ಆಗಲಿ. ನಾನು ಸಿನಿಮಾದಲ್ಲಿ ದುಡ್ಡು ಮಾಡಲು ಬಂದಿಲ್ಲ. ಜನರಿಗೆ  ಒಳ್ಳೆಯ ಸಿನಿಮಾ ಕೊಡಬೇಕು ಅಂತ ಬಂದಿದ್ದೇನೆ. ಹತ್ತು ಜನ ಬಂದು ಸಿನಿಮಾ ನೋಡಿದರೆ ಅವರು ನೂರು ಜನಕ್ಕೆ ಖಂಡಿತ ಹೇಳ್ತಾರೆ. ಸಿನಿಮಾ‌ ಕಮರ್ಷಿಯಲಿ ಏನಾಗುತ್ತೋ ಗೊತ್ತಿಲ್ಲ. ಒಳ್ಳೆಯ ಸಿನಿಮಾ ಟೀಮ್ ನೊಂದಿಗೆ ಕೆಲಸ ಮಾಡಿದ ತೃಪ್ತಿಯಿದೆ” ಎಂದು ಹೇಳಿದರು.

ಇದನ್ನೂ ಓದಿ: ಆಡೆ ನಮ್ God: ಕೆ.ಹೆಚ್.ವಿಶ್ವನಾಥ್ ಸಾರಥ್ಯದ ಹೊಸ ಸಿನಿಮಾ ಟೈಟಲ್!

ನಂತರ ನಾಯಕಿ ಜಾಹ್ನವಿ, ಖಳನಾಯಕನ ಪಾತ್ರ ಮಾಡಿರುವ ಹುಲಿ ಕಾರ್ತೀಕ್ ತಮ್ಮ ಪಾತ್ರಗಳ ಬಗ್ಗೆ ಮಾತನಾಡಿದರು. ಚಿತ್ರದ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಗಳನ್ನು ಸತೀಶ್ ಅವರೇ  ಬರೆದಿದ್ದು, ದರ್ಬಾರ್ ಪ್ರೊಡಕ್ಷನ್ಸ್ ಮೂಲಕ ಬಿ.ಎನ್.ಶಿಲ್ಪ ಅವರು ನಿರ್ಮಾಣ ಮಾಡಿದ್ದಾರೆ. ಮಾಸ್ ಮಾದ, ವಿನೋದ್ ಸಾರಥ್ಯದ 3 ಸಾಹಸ ದೃಶ್ಯಗಳು ಚಿತ್ರದಲ್ಲಿವೆ. ಹಿರಿಯ ಕಲಾವಿದರಾದ ಎಂ.ಎನ್.ಲಕ್ಷ್ಮಿದೇವಿ, ಅಶೋಕ್ ಹೀಗೆ ಸಾಕಷ್ಟು ಜನ ಅಭಿನಯಿಸಿದ್ದಾರೆ. ಮೂರು ಹಾಡುಗಳು ಚಿತ್ರದಲ್ಲಿದ್ದು, ಟೈಟಲ್ ಸಾಂಗನ್ನು ಚಂದನ್ ಶೆಟ್ಟಿ ಹಾಡಿದ್ದಾರೆ, ರಾಜಕೀಯ ವಿಡಂಬನೆಯ ಹಾಡನ್ನು ಉಪೇಂದ್ರ ಹಾಡಿದ್ದಾರೆ, ಇನ್ನು ಡ್ಯುಯೆಟ್ ಹಾಡಿಗೆ ಜಯಂತ್ ಕಾಯ್ಕಿಣಿ ಸಾಹಿತ್ಯ ಬರೆದಿದ್ದಾರೆ.

ಸಿನಿಮಾ

ವರದಿ: ಅರುಣ್ ಜಿ.,

ಕರ್ನಾಟಕದ ಕಿರುತೆರೆ ಲೋಕದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿ, ಕರುನಾಡಿನ ಜನ-ಮನ ಗೆದ್ದಿರುವ ಗಗನ ಎಂಟರ್‌ಪ್ರೈಸಸ್‌ ಮೊದಲ ಬಾರಿಗೆ ಹೆಜ್ಜಾರು ಸಿನಿಮಾದ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದೆ.

ಇಲ್ಲಿಯವರೆಗೆ ಬರೋಬ್ಬರಿ ಹದಿಮೂರು ದಾರಾವಾಹಿಯನ್ನು ನಿರ್ದೇಶಿಸಿ, ನಿರ್ಮಾಣ ಮಾಡಿರುವ ಕೆ.ಎಸ್‌.ರಾಮ್‌ಜಿ ಅವರ ಮೊದಲ ನಿರ್ಮಾಣದ ಹೆಜ್ಜಾರು ಸಿನಿಮಾದ ಕೊನೆಯ ದಿನದ ಚಿತ್ರೀಕರಣ ಕುಂಬಳಕಾಯಿ ಒಡೆಯುವ ಮೂಲಕ ಅದ್ದೂರಿಯಾಗಿ ಮುಗಿದಿದೆ.

ಕಿರುತೆರೆಯ ದಾರವಾಹಿಯ ಹೆಸರಾಂತ ಬರಹಗಾರ; ಜೀ ಕನ್ನಡ ವಾಹಿನಿಯ ಫಿಕ್ಷನ್‌ ಹೆಡ್‌ ಆಗಿ ಕಾರ್ಯ ನಿರ್ವಹಿಸಿ, ಯಶಸ್ಸು ಗಳಿಸಿದ ಹರ್ಷಪ್ರಿಯ, ಮೊದಲ ಬಾರಿಗೆ ಈ ಚಿತ್ರದ ಮೂಲಕ ನಿರ್ದೇಶನದ ಕ್ಯಾಪ್‌ ತೊಟ್ಟಿದ್ದಾರೆ. ಚಿತ್ರಕ್ಕೆ ಅಮರ್‌.ಎಲ್‌ ಛಾಯಾಗ್ರಹಣವಿದ್ದು, ಪೂರ್ಣಚಂದ್ರ ತೇಜಸ್ವಿಯವರ ಸಂಗೀತವಿದೆ. ಸಾಹಸ ದೃಶ್ಯದ ಸನ್ನಿವೇಶವನ್ನು ನರಸಿಂಹ ನಿರ್ದೇಶಿಸಿದ್ದು, ಭಜರಂಗಿ ಖ್ಯಾತಿಯ ಮೋಹನ್‌ರವರು ನೃತ್ಯ ನಿರ್ದೇಶನ ಮಾಡಿದ್ದಾರೆ.

ಕಾರ್ತಿಕ್‌ ಭಟ್ ಸಂಭಾಷಣೆ ಇರುವ ಈ ಚಿತ್ರದ ಮೂಲಕ ಭಗತ್‌ ಆಳ್ವ ನಾಯಕ ನಟನಾಗಿ ಹಿರಿತೆರೆಗೆ ಪಾದಾರ್ಪಣೆ ಮಾಡುತ್ತಿದ್ದು, ಇವರಿಗೆ ‘ಖಾಸಗಿ ಪುಟಗಳು’ ಖ್ಯಾತಿಯ ಲಿಯೋನಿಲ್ಲಾ ಶ್ವೇತಾ ಡಿಸೋಜ ನಾಯಕಿಯಾಗಿ ಕಾಣಿಸಿಕೊಂಡ್ಡಿದ್ದಾರೆ.

ಬಹುತೇಕ ರಂಗಭೂಮಿ ಕಲಾವಿದರಿರುವ ತಾರಾಗಣದಲ್ಲಿ ಗೋಪಾಲ್‌ ದೇಶ್ಪಾಂಡೆ, ನವೀನ್‌ ಕೃಷ್ಣ, ಮುನಿ, ಅರುಣ ಬಾಲರಾಜ್‌ರಂತಹ ಪರಿಚಿತ ಕಲಾವಿದರು ಜೊತೆಯಾಗಿದ್ದಾರೆ. ಈಗಷ್ಟೆ ಚಿತ್ರಿಕರಣ ಮುಗಿಸಿ ಕುಂಬಳಕಾಯಿ ಹೊಡೆದಿರುವಂತಹ ಚಿತ್ರತಂಡ, ಸದ್ಯದಲ್ಲೇ ಪ್ರಚಾರ ಕಾರ್ಯಕ್ರಮ ಆರಂಭಿಸುವ ಮಾಹಿತಿ ನೀಡಿದ್ದಾರೆ. ಚಿತ್ರದ ಕಥೆಯ ಕುರಿತು ಯಾವುದೇ ಸುಳಿವು ಬಿಟ್ಟುಕೊಡದ ಚಿತ್ರತಂಡ, ಸದ್ಯದಲ್ಲೇ ವಿಶೇಷ ರೀತಿಯ ಕಾನ್ಸೆಪ್ಟ್‌ ಪೋಸ್ಟರ್‌ ಬಿಡುಗಡೆ ಮಾಡವ ಸಿದ್ದತೆ ಮಾಡಿಕೊಂಡಿದೆ.

ಸಿನಿಮಾ

ವರದಿ: ಅರುಣ್ ಜಿ.,

200 ರಿಂದ 300 ಕೋಟಿ ಬಜೆಟ್‌ನಲ್ಲಿ “ಶಕ್ತಿಮಾನ್” ಸರಣಿಯನ್ನು ಸಿನಿಮಾ ಮಾಡಲು ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಸರಣಿಯಲ್ಲಿ ನಟಿಸಿದ ನಟ ಮುಖೇಶ್ ಖನ್ನಾ ಮಾಹಿತಿ ನೀಡಿದ್ದಾರೆ.

90ರ ದಶಕದ ಮಕ್ಕಳ ನೆಚ್ಚಿನ ಟಿವಿ ಸರಣಿಗಳಲ್ಲಿ ಒಂದಾಗಿದ್ದ ‘ಶಕ್ತಿಮಾನ್’: 1997 ರಿಂದ 2005 ರವರೆಗೆ ಈ ಸರಣಿಯು ದೂರದರ್ಶನದಲ್ಲಿ ಪ್ರಸಾರವಾಯಿತು. ಇದನ್ನು ಬಾಲಿವುಡ್ ನಟ ಮುಖೇಶ್ ಖನ್ನಾ ನಿರ್ಮಿಸಿ, ಸ್ವತಃ ಶಕ್ತಿಮಾನ್ ಆಗಿಯೂ ನಟಿಸಿದ್ದರು. ಹಿಂದಿಯಲ್ಲಿ ಚಿತ್ರೀಕರಣಗೊಂಡು ಬೇರೆ ಭಾಷೆಗಳಿಗೆ ಡಬ್ ಆಗಿರುವ ಈ ಸರಣಿಯನ್ನು ಸಿನಿಮಾ ಮಾಡುವುದಾಗಿ ಮುಕೇಶ್ ಖನ್ನಾ ಈಗಾಗಲೇ ಘೋಷಿಸಿದ್ದರು. ಈಗಾಗಲೇ ‘Announcement’ ವಿಡಿಯೋ ಕೂಡ ಬಿಡುಗಡೆಯಾಗಿದೆ. ಆದರೆ ಕೊರೊನಾ ಕಾರಣದಿಂದ ಚಿತ್ರದ ಕೆಲಸ ತಡವಾಗಿತ್ತು.

ಈ ಹಿನ್ನಲೆಯಲ್ಲಿ ಮುಖೇಶ್ ಖನ್ನಾ ಅವರು ‘ಶಕ್ತಿಮಾನ್’ ಸರಣಿಯನ್ನು 200 ರಿಂದ 300 ಕೋಟಿ ರೂಪಾಯಿಗಳ ಬಜೆಟ್‌ನಲ್ಲಿ ಚಿತ್ರ ಮಾಡಲು ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ. ಈ ಕುರಿತು ಮಾತನಾಡಿದ ಅವರು, “ಶಕ್ತಿಮಾನ್ ಧಾರಾವಾಹಿಯನ್ನು ಸಿನಿಮಾ ಮಾಡಲು ಒಪ್ಪಂದ ಮಾಡಿಕೊಳ್ಳಲಾಗಿದೆ. ಸೋನಿ ಪಿಕ್ಚರ್ಸ್ 200 ರಿಂದ 300 ಕೋಟಿ ಬಜೆಟ್‌ನಲ್ಲಿ ಚಿತ್ರವನ್ನು ನಿರ್ಮಿಸಲಿದೆ. ಕೊರೊನಾ ವೈರಸ್‌ನಿಂದಾಗಿ ಚಿತ್ರದ ಆರಂಭ ತಡವಾಗಿತ್ತು.

ನಿರ್ದಿಷ್ಟವಾಗಿ ನಾನು ಇದನ್ನು ಹೇಳಲೇಬೇಕು. ಚಿತ್ರದಲ್ಲಿ ನಾನು ಶಕ್ತಿಮಾನ್ ಪಾತ್ರ ಮಾಡಿಲ್ಲ; ವಿಶೇಷ ಪಾತ್ರದಲ್ಲೂ ನಟಿಸುತ್ತಿಲ್ಲ. ಸದ್ಯದಲ್ಲೇ ಚಿತ್ರದ ಅಧಿಕೃತ ಘೋಷಣೆ ಹೊರಬೀಳಲಿದೆ. ಯಾರೆಲ್ಲಾ ನಟಿಸುತ್ತಿದ್ದಾರೆ ಎಂಬುದನ್ನು ನಂತರ ಪ್ರಕಟಿಸಲಾಗುವುದು. ಈ ಚಿತ್ರ ಇನ್ನೊಂದು ಹಂತದಲ್ಲಿ ವಿಭಿನ್ನವಾಗಿರಲಿದೆ” ಎಂದರು.