ಮಾತು ಕೊಡುವುದು ದೊಡ್ಡದಲ್ಲ; ಕೊಟ್ಟ ಮಾತು ಉಳಿಸಿಕೊಳ್ಳುವುದೇ ನಿಜವಾದ ಸವಾಲು!
“BJP-JDSನವರು ನಾವು ಕೊಟ್ಟ ಗ್ಯಾರಂಟಿಗಳು ಜಾರಿಯಾಗಲ್ಲ ಎಂದು ಕಂಡ ಕಂಡಲ್ಲಿ ಹೇಳಿಕೊಂಡು ತಿರುಗಾಡುತ್ತಿದ್ದರು. ಹಾಗೆ ಹೇಳಿಕೊಂಡು ತಿರುಗಾಡುವುದು ಅವರ ಸಹಜ ಗುಣ. ತಾನು ಕಳ್ಳ ಪರರ ನಂಬ ಮನಃಸ್ಥಿತಿ ಅವರದ್ದು”
ಬೆಂಗಳೂರು: ಚುನಾವಣಾ ಪೂರ್ವದಲ್ಲಿ ನಾವು ಕೊಟ್ಟ 5 ಗ್ಯಾರಂಟಿಗಳ ಪೈಕಿ ಗೃಹಜ್ಯೋತಿ ಹಾಗೂ ಅನ್ನಭಾಗ್ಯ ಯೋಜನೆ ಇಂದಿನಿಂದ ಆರಂಭವಾಗಲಿದೆ. ಗೃಹಜ್ಯೋತಿ ಯೋಜನೆಯಡಿ ಈ ತಿಂಗಳಿನಿಂದ ನಮ್ಮ ಸರ್ಕಾರ 200 ಯೂನಿಟ್‌ವರೆಗೆ ವಿದ್ಯುತ್ ಉಚಿತವಾಗಿ ನೀಡಲಿದೆ. ಅನ್ನಭಾಗ್ಯ ಯೋಜನೆಯಡಿ 5 kg ಅಕ್ಕಿ ಹಾಗೂ ಇನ್ನುಳಿದ 5 kg ಅಕ್ಕಿಯ ಬದಲಾಗಿ ರೂ. 170 ನೀಡಲಿದ್ದೇವೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
“BJP-JDS ನವರು ನಾವು ಕೊಟ್ಟ ಗ್ಯಾರಂಟಿಗಳು ಜಾರಿಯಾಗಲ್ಲ ಎಂದು ಕಂಡ ಕಂಡಲ್ಲಿ ಹೇಳಿಕೊಂಡು ತಿರುಗಾಡುತ್ತಿದ್ದರು. ಹಾಗೆ ಹೇಳಿಕೊಂಡು ತಿರುಗಾಡುವುದು ಅವರ ಸಹಜ ಗುಣ. ತಾನು ಕಳ್ಳ ಪರರ ನಂಬ ಮನಃಸ್ಥಿತಿ ಅವರದ್ದು. ಆದರೆ ನಾವು ಅಧಿಕಾರಕ್ಕೆ ಬಂದ ಹದಿನೈದೇ ದಿನದಲ್ಲಿ ಶಕ್ತಿ ಯೋಜನೆ ತಂದೆವು. ಇಂದಿನಿಂದ ಗೃಹಜ್ಯೋತಿ/ಅನ್ನಭಾಗ್ಯ ಜಾರಿಗೆ ಬರಲಿದೆ.
ಗೃಹಜ್ಯೋತಿ ಹಾಗೂ ಅನ್ನಭಾಗ್ಯ ಯೋಜನೆ ಇಂದಿನಿಂದ ಜಾರಿಯಾಗುವ ಮೂಲಕ ನಾವು ಕೊಟ್ಟ 5 ಗ್ಯಾರಂಟಿಗಳ ಪೈಕಿ ಮೂರು ಈಡೇರಿದಂತಾಗಿದೆ. ಗೃಹಲಕ್ಷ್ಮಿ ಯೋಜನೆ ಆಗಸ್ಟ್ 15 ರಂದು ಪ್ರಾರಂಭವಾಗಲಿದೆ. ಮಾತು ಕೊಡುವುದು ದೊಡ್ಡದಲ್ಲ. ಆದರೆ ಕೊಟ್ಟ ಮಾತನ್ನು ಉಳಿಸಿಕೊಳ್ಳುವುದು ನಿಜವಾದ ಸವಾಲು. ಆ ಸವಾಲನ್ನು ನಾವು ಇಂದು ಮೆಟ್ಟಿ ನಿಂತಿದ್ದೇವೆ” ಎಂದು ಸರ್ಕಾರದ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.