ಯಾದಗಿರಿಯಲ್ಲಿ ದಲಿತ ಯುವಕನ ಹತ್ಯೆ: ದಲಿತ-ಮುಸ್ಲಿಂ ಬಾಂಧವ್ಯವನ್ನು ಹಾಳುಗೆಡವಲು ಸಂಚು! - ಡಿ.ಸಿ.ಪ್ರಕಾಶ್ » Dynamic Leader
October 22, 2024
ಕ್ರೈಂ ರಿಪೋರ್ಟ್ಸ್

ಯಾದಗಿರಿಯಲ್ಲಿ ದಲಿತ ಯುವಕನ ಹತ್ಯೆ: ದಲಿತ-ಮುಸ್ಲಿಂ ಬಾಂಧವ್ಯವನ್ನು ಹಾಳುಗೆಡವಲು ಸಂಚು! – ಡಿ.ಸಿ.ಪ್ರಕಾಶ್

ಡಿ.ಸಿ.ಪ್ರಕಾಶ್ ಸಂಪಾದಕರು

ರಾಜ್ಯದಲ್ಲಿ ಲೋಕಸಭಾ ಚುನಾವಣೆ ಬೆನ್ನಲ್ಲೇ ಕೋಮು ಘರ್ಷಣೆ, ಹಲ್ಲೆ, ಕೊಲೆ ಪ್ರಕರಣಗಳು ಹೆಚ್ಚಾಗುತ್ತಿವೆ. ಇತ್ತೀಚೆಗೆ ಬೆಂಗಳೂರಿನಲ್ಲಿ ರಾಮನವಮಿ ದಿನದಂದು ಜೈ ಶ್ರೀರಾಂ ಘೋಷಣೇ ಕೂಗಿದ್ದವರ ಮೇಲೆ ಹಲ್ಲೆ ಮಾಡಲಾಗಿತ್ತು. ಆರೋಪಿಗಳು ತಪ್ಪೊಪ್ಪಿಕೊಂಡಿದ್ದರು. ಬಳಿಕ ನೇಹಾ ಹತ್ಯೆಯಾಗಿದೆ. ಇದೀಗ ಯಾದಗಿರಿಯಲ್ಲಿ ಮುಸ್ಲಿಂ ಯುವಕನಿಂದ ದಲಿತ ಯುವಕನ ಹತ್ಯೆ ಮಾಡಲಾಗಿದೆ ಎಂದು ವರದಿಯಾಗಿದೆ.

ಹುಬ್ಬಳ್ಳಿಯಲ್ಲಿ ನಡೆದ ನೇಹಾ ಕೊಲೆ ಪ್ರಕರಣದ ಕಹಿ ನೆನಪು ಇನ್ನೂ ಮಾಸಿಲ್ಲ. ಸರ್ಕಾರ ಪ್ರಕರಣವನ್ನು ಸಿಐಡಿಗೆ ವರ್ಗಾಯಿಸಿದೆ. ಅದುಮಾತ್ರವಲ್ಲ, ವಿಚಾರಣೆಯನ್ನು ತ್ವರಿತಗತಿಯಲ್ಲಿ ಮುಗಿಸಿ ಆರೋಪಿಗೆ ಶಿಕ್ಷೆ ಕೊಡಿಸುವ ಸಲುವಾಗಿ ವಿಶೇಷ ನ್ಯಾಯಾಲಯವನ್ನು ಸ್ಥಾಪಿಸುವುದಾಗಿಯೂ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಅಷ್ಟರಲ್ಲಾಗಲೇ, ಯಾದಗಿರಿಯ ಶಗಾಪುರಪೇಟೆ ಬಡಾವಣೆಯಲ್ಲಿ ಮುಸ್ಲಿಂ ಯುವಕನೊಬ್ಬ ದಲಿತ ಯುವಕನನ್ನು ಹತ್ಯೆ ಮಾಡಿದ್ದಾನೆ. ರಾಕೇಶ್ (22) ಕೊಲೆಯಾದ ಯುವಕ. ರೊಟ್ಟಿ ಕೇಂದ್ರದ ಸದಸ್ಯ ಫಯಾಜ್ ಸೇರಿದಂತೆ ನಾಲ್ವರು ಕೃತ್ಯ ಎಸಗಿದ್ದಾರೆ.

ನಿನ್ನೆ ರಾತ್ರಿ ರೊಟ್ಟಿ ಕೇಂದ್ರಕ್ಕೆ ರೊಟ್ಟಿ ತರಲು ರಾಕೇಶ್ ಹೋಗಿದ್ದ. ಇದೇ ವೇಳೆ ರೊಟ್ಟಿ ಕೇಂದ್ರದ ಫಯಾಜ್ ಜೊತೆ ಜಗಳವಾಗಿದೆ. ರಾಕೇಶ್ ಮನೆಗೆ ಮರಳಿದ ನಂತರ ಮತ್ತೆ ಜಗಳವಾಗಿದ್ದು, ಈ ವೇಳೆ ರಾಕೇಶ್​ನ ಮರ್ಮಾಂಗಕ್ಕೆ ಒದ್ದು ಕೊಲೆ ಮಾಡಿರುವ ಆರೋಪ ಮಾಡಲಾಗಿದೆ.

ಮೇಲಿನ ಎರಡೂ ಪ್ರಕರಣಗಳಲ್ಲಿ, ಕೊಲೆ ಮಾಡಿದವರು ಯಾರೇ ಆಗಿದ್ದರು ಕಾನೂನಿನಡಿಯಲ್ಲಿ ಶಿಕ್ಷೆ ಆಗಲಿದೆ. ಕಾನೂನಿಗೆ ಹಿಂದೂ, ಮುಸ್ಲಿಂ, ಕ್ರೈಸ್ತ, ದಲಿತ ಎಂಬ ಭೇದಭಾವ ಇರುವುದಿಲ್ಲ. ಇದರಲ್ಲಿ ಜಾತಿ, ಧರ್ಮ ಬೆರಸುವುದೇಕೆ? ಅಮಾಯಕರ ಸಾವು ನೋವುಗಳ ಮೇಲೆ ರಾಜಕೀಯ ಲೆಕ್ಕಾಚಾರ ಮಾಡುತ್ತಿರುವ ನಾಚಿಕೆಗೆಟ್ಟ ರಾಜಕೀಯ ವ್ಯವಸ್ಥೆಯನ್ನು ಬದಿಗೊತ್ತಿ ಮಾನವೀಯತೆಗೆ ಆದ್ಯತೆ ಕೊಡಿ.

ಪ್ರತಿಭಾರಿಯೂ ಹಿಂದೂ-ಮುಸ್ಲಿಂ ಎಂದು ದ್ವೇಶಕಾರುತ್ತಿರುವ ಕೋಮು ಮನಸ್ಥಿತಿಯ ಮತಾಂಧ ಶಕ್ತಿಗಳು, ಇದೀಗ ದಲಿತ-ಮುಸ್ಲಿಂ ಎಂಬ ಹೊಸ ವರೆಸೆಯನ್ನು ಕೈಗೆತ್ತಿಕೊಂಡಿದೆ. ಪ್ರತಿಯೊಂದನ್ನೂ ಹಿಂದೂ-ಮುಸ್ಲಿಂ ಹಿನ್ನಲೆಯಿಂದಲೇ ನೋಡುವ ಕಾಮಾಲೆ ಕಣ್ಣುಗಳಿಗೆ ರಾಕೇಶ್ ಹಿಂದೂ ಯುವಕ ಎಂದು ಏಕೆ ಗೊತ್ತಾಗುತ್ತಿಲ್ಲ.

ಚುನಾವಣೆ ಸಂದರ್ಭದಲ್ಲಿ ನಡೆದಿರುವ ವೈಯಕ್ತಿಕ ಕೊಲೆಗಳನ್ನು ರಾಜಕೀಯ ಗೊಳಿಸುತ್ತಿರುವ ಮತಾಂಧ ಶಕ್ತಿಗಳು, ರಾಕೇಶ್ ಕೊಲೆಯನ್ನು ದಲಿತ-ಮುಸ್ಲಿಂ ಬಾಂಧವ್ಯವನ್ನು ಹಾಳುಗೆಡವಲು ಬಳಸುತ್ತಿದೆ ಎಂದು ಅನುಮಾನ ವ್ಯಕ್ತವಾಗುತ್ತಿದೆ. ದಲಿತರು ಮತ್ತು ಅಲ್ಪಸಂಖ್ಯಾತರು ಇಂತಹ ಕುತಂತ್ರಗಳಿಗೆ ಬಲಿಯಾಗಬಾರದು. ಅದೇ ಸಂದರ್ಭದಲ್ಲಿ, ದಲಿತ ಯುವಕ ರಾಕೇಶನ ಸಾವಿಗೆ ನ್ಯಾಯ ಸಿಗಬೇಕು; ಫಯಾಜ್ ಮತ್ತು ಇತರರಿಗೆ ಶಿಕ್ಷೆ ಆಗಲೇಬೇಕು. ಇದು ನಮ್ಮ ಒತ್ತಾಯ!

Related Posts