ಸಿನಿಮಾ Archives » Page 9 of 10 » Dynamic Leader
November 24, 2024
Home Archive by category ಸಿನಿಮಾ (Page 9)

ಸಿನಿಮಾ

ಸಿನಿಮಾ

ಅರುಣ್ ಜಿ.,

ವರ್ಷಗಳ ಕಾಲ ಪ್ರೇಮಿಗಳಾಗಿದ್ದು ಇತ್ತೀಚಿಗಷ್ಟೆ ದಂಪತಿಗಳಾದ ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ಅವರು ತಮ್ಮ ವ್ಯಾಂಲಂಟೈನ್ ಡೇನ ಈ ಬಾರಿ ವಿಶೇಷವಾಗಿ ಸೆಲಬ್ರೇಟ್ ಮಾಡಿಕೊಂಡಿದ್ದಾರೆ. ಪ್ರೇಮಿಗಳ ದಿನಾಚರಣೆಯಂದು ಒಂದು ಪ್ರೇಮಕತೆಗಳ ಪುಸ್ತಕವನ್ನು ಲೋಕಾರ್ಪಣೆ ಮಾಡುವುದರ ಮೂಲಕ ತಮ್ಮ ಪ್ರೇಮದ ದಿನಗಳನ್ನು ಮೆಲುಕು ಹಾಕಿದ್ದಾರೆ. ಮಾವಲಿ ಪಬ್ಲಿಕೇಶನ್ ನ ಮೊದಲ ಪುಸ್ತಕವಾದ ಶಿವಕುಮಾರ ಮಾವಲಿಯವರ “ಪ್ರೇಮಪತ್ರದ ಆಫೀಸು ಮತ್ತು ಅವಳು” ಎಂಬ ವಿಶಿಷ್ಟ ಶೀರ್ಷಿಕೆಯ ಕಥಾ ಸಂಕಲನವನ್ನು ಅವರಿಬ್ಬರೂ ಬಿಡುಗಡೆ ಮಾಡಿದ್ದಾರೆ. ಲೇಖಕ ಶಿವಕುಮಾರ ಮಾವಲಿ, ಪ್ರಕಾಶಕಿ ಪ್ರೇಮ ಶಿವಕುಮಾರ ಜೊತೆಗೂಡಿ ಇಬ್ಬರೂ ಪ್ರೇಮ ಪುಸ್ತಕವೊಂದನ್ನು ಬಿಡುಗಡೆ ಮಾಡುವ ಮೂಲಕ ತಮ್ಮ ವಾಲಂಟೈನ್ ದಿನಗಳ ನೆನಪು ಮಾಡಿಕೊಂಡರು.

ಪ್ರೇಮಪತ್ರದ ಆಫೀಸು ಎಂಬ ಶೀರ್ಷಿಕೆಯೇ ಆಸಕ್ತಿ ಹುಟ್ಟಿಸುವಂತಿದೆ, ನಾವೂ ಪ್ರೇಮಪತ್ರಗಳನ್ನ ಬರೆದುಕೊಳ್ತಿದ್ವಿ ಎಂದು ನೆನಪು ಮಾಡಿಕೊಂಡು, ಪುಸ್ತಕದಲ್ಲಿದ್ದ ಎರಡು ಪತ್ರಗಳ ಸಾಲುಗಳನ್ನು ಪರಸ್ಪರರು ಪತ್ರದ ರೀತಿಯಲ್ಲಿ ಓದಿಕೊಂಡರು. 

ಹರಿಪ್ರಿಯ, ”ಸಾವಿರ ಜನರ ಮಧ್ಯೆ ಇದ್ದರೂ ನಾನು ಏಕಾಂಗಿಯೇ, ನಿನ್ನ ನೆನಪಿನ ಭಾವವಿರದಿದ್ದರೆ” ಎಂದು ಹೇಳಿದರೆ, ವಸಿಷ್ಠ ಸಿಂಹ, “ತನಗಾಗಿ ಏನನ್ನೂ ಮಾಡಿಕೊಳ್ಳದ ನೀರಿನಂತೆ ನಾನು ನಿನ್ನನ್ನು ಪ್ರೀತಿಸುತ್ತೇನೆ” ಎಂದು ಹರಿಪ್ರಿಯಾರ ಮುಖದಲ್ಲಿ ನಗು ಮೂಡಿಸಿದರು. ಮಾವಲಿ ಪಬ್ಲಿಕೇಶನ್ ಪ್ರಕಟಮಾಡುತ್ತಿರುವ ಈ ಕಥಾ ಸಂಕಲನವನ್ನು ಹೆಚ್ಚು ಜನ ಓದಲಿ ಮತ್ತು ಇಂಥ ಅನೇಕ ಪುಸ್ತಕಗಳು ಅವರಿಂದ ಮೂಡಿ ಬರಲಿ ಎಂದು ಆಶಿಸಿದರು.

‘ಇಷ್ಟು ವರ್ಷಗಳಿಗಿಂತ ಈ ಬಾರಿ ನಮ್ಮ ವ್ಯಾಲಂಟೈನ್ ಡೇ ವಿಶೇಷವಾಗಿ ಆಯಿತು, ಪ್ರೇಮಪುಸ್ತಕವೊಂದು ನಮ್ಮಿಂದ ಬಿಡುಗಡೆ ಆಗುವಂತಾಯಿತು’ ಎಂದು ಹರಿಪ್ರಿಯ ಹೇಳಿದರು. 

‘ದೇವರು ಅರೆಸ್ಟ್ ಆದ’ ಮತ್ತು ‘ಟೈಪಿಸ್ಟ್ ತಿರಸ್ಕರಿಸಿದ ಕತೆ’ ಎಂಬ ಕತಾ ಸಂಕಲನಗಳ ಮೂಲಕ ಹೊಸ ರೀತಿಯ ಕತೆಗಳನ್ನು ಪರಿಚಯಿಸಿದ ಶಿವಕುಮಾರ ಮಾವಲಿಯವರ ‘ಸುಪಾರಿ ಕೊಲೆ’ ನಾಟಕ ಒಂದು ಪತ್ತೇದಾರಿ ಮಾದರಿಯ ನಾಟಕವಾಗಿದ್ದರೆ, ಇತ್ತೀಚಿಗೆ ಪ್ರದರ್ಶನಗೊಂಡ ಅವರ ‘ಒಂದು ಕಾನೂನಾತ್ಮಕ ಕೊಲೆ’ ನಾಟಕವು, ಪ್ರಸ್ತುತ ರಾಜಕೀಯ ಮತ್ತು ಸಾಮಾಜಿಕ ಸ್ಥಿತಿಗತಿಗಳನ್ನು ಬಳಸಿಕೊಂಡು ಸಶಕ್ತವಾಗಿ ರಾಜಕೀಯ ವಿಡಂಬನೆ ಮಾಡುವ ನಾಟಕವಾಗಿದೆ. ಹಾಗೆಯೇ ರಾಜೀವ್ ಗಾಂಧಿ ಹತ್ಯೆಯ ಸಮಯದಲ್ಲಿ ಬೆಂಗಳೂರಿನ ವ್ಯಕ್ತಿಯೊಬ್ಬರ ಬದುಕಲ್ಲಿ ನಡದ ಘಟನೆಯಾಧಾರಿತ ಕಾದಂಬರಿ ‘LTTE Murthy Calling’ ಇತ್ತೀಚಿಗಷ್ಟೆ ತಮಿಳಿಗೆ ಅನುವಾದಗೊಂಡಿದೆ.

ಈಗ ಅವರ ಹೊಸ ಕತಾ ಸಂಕಲನ “ಪ್ರೇಮಪತ್ರದ ಆಫೀಸು ಮತ್ತು ಅವಳು” ಮಾವಲಿ ಪಬ್ಲಿಕೇಶನ್ ನಿಂದ ಪ್ರಕಟವಾಗುತ್ತಿರುವ ಮೊದಲ ಪುಸ್ತಕವಾಗಿದೆ. ಪುಸ್ತಕವು ಮಾರುಕಟ್ಟೆಯಲ್ಲಿ ಲಭ್ಯವಿದೆ.

ಸಿನಿಮಾ

ಅರುಣ್, ಜಿ.,

ಎರಡು ಲಕ್ಷಕ್ಕೆ ಮಾರಾಟವಾಯಿತು ಚಿತ್ರದ ಮೊದಲ ಟಿಕೆಟ್!!

ಶೀರ್ಷಿಕೆ, ಹಾಡುಗಳು ಹಾಗೂ ಟೀಸರ್ ಮೂಲಕ ಈಗಾಗಲೇ ಕನ್ನಡಿಗರ ಮನ‌ ತಲುಪಿರುವ “ಕಡಲ ತೀರದ ಭಾರ್ಗವ” ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಮಾಜಿ ಉಪ ಮಹಾಪೌರರಾದ ಮೋಹನ್ ರಾಜು,  “ನೀರ್ ದೋಸೆ” ಚಿತ್ರದ ನಿರ್ಮಾಪಕರಾದ ಪ್ರಸನ್ನ ಹಾಗೂ “ಗಜಾನನ ಗ್ಯಾಂಗ್” ಚಿತ್ರದ ನಿರ್ಮಾಪಕರಾದ ನಾಗೇಶ್ ಟ್ರೇಲರ್ ಬಿಡುಗಡೆ ಮಾಡಿ ಶುಭ ಕೋರಿದರು.

ಮಾರ್ಚ್ 3 ನೇ ತಾರೀಖು ರಾಜ್ಯಾದ್ಯಂತ ಈ ಚಿತ್ರ ಬಿಡುಗಡೆಯಾಗುತ್ತಿದೆ. ಚಿತ್ರದ ಮೊದಲ ಟಿಕೆಟ್ ಹರಾಜಿನ ಮೂಲಕ ಮಾರಾಟ ಮಾಡಲಾಯಿತು. ಅತಿಥಿಯಾಗಿ ಆಗಮಿಸಿದ್ದ ಮೋಹನ್ ರಾಜು ಅವರು 2 ಲಕ್ಷ ರೂಪಾಯಿ ನೀಡಿ ಈ ಚಿತ್ರದ ಮೊದಲ ಟಿಕೆಟ್ ಪಡೆದುಕೊಂಡರು.

ಭಾರೀ ಬೆಲೆಗೆ ಟಿಕೆಟ್ ಮಾರಾಟವಾಗಿರುವುದಕ್ಕೆ ಸಂತೋಷ ವ್ಯಕ್ತಪಡಿಸಿರುವ ನಿರ್ಮಾಪಕರಾದ ಪಟೇಲ್ ವರುಣ್ ರಾಜು ಹಾಗೂ ಭರತ್ ಗೌಡ ಮೊದಲ ಟಿಕೆಟ್ ಮಾರಾಟದಿಂದ ಬಂದ ಹಣವನ್ನು ಬಡ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ನೀಡುವುದಾಗಿ ತಿಳಿಸಿದ್ದಾರೆ.  

ಕನ್ನಡದಲ್ಲಿ ಈಗ ಕಂಟೆಂಟ್ ಓರಿಯಂಟೆಡ್ ಚಿತ್ರಗಳು ಗೆಲ್ಲುತ್ತಿದೆ. ಅದರಲ್ಲೂ “ಕ” ಹೆಸರಿನಿಂದ ಆರಂಭವಾಗುವ “ಕೆ.ಜಿ.ಎಫ್”, “ಕಾಂತಾರ” ಚಿತ್ರಗಳು ಭರ್ಜರಿ ಯಶಸ್ಸು ಕಂಡಿದೆ. ಅದೇ “ಕ” ಅಕ್ಷರದಿಂದ ಆರಂಭವಾಗುವ “ಕಡಲ ತೀರದ ಭಾರ್ಗವ” ಕೂಡ ಪ್ರಚಂಡ ಯಶಸ್ಸು ಕಾಣಲಿ ಎಂದು ಮೋಹನ್ ರಾಜು ಹಾರೈಸಿದರು. ‌

ಚಿತ್ರದಲ್ಲಿ ಕಡಲ ತೀರದಲ್ಲಿ ವಾಸಿಸುವ ಭಾರ್ಗವನಾಗಿ ನಾನು ಅಭಿನಯಿಸಿದ್ದೇನೆ. ಚಿತ್ರ ಚೆನ್ನಾಗಿ ಬಂದಿದೆ. ಅಧಿಕ ಮೊತ್ತ ಕೊಟ್ಟು ಟಿಕೆಟ್ ಖರೀದಿಸಿದ ಮೋಹನ್ ರಾಜು ಅವರಿಗೆ ಹಾಗೂ ಚಿತ್ರಕ್ಕೆ ಸಹಕಾರ ‌ನೀಡಿದ್ದ ಪ್ರತಿಯೊಬ್ಬರಿಗೂ ನನ್ನ ಧನ್ಯವಾದ ಎಂದರು ನಟ – ನಿರ್ಮಾಪಕ ಪಟೇಲ್ ವರುಣ್ ರಾಜು.

ನಾನು ಭರತ್ ಎಂಬ ಪಾತ್ರದಲ್ಲೇ ಕಾಣಿಸಿಕೊಂಡಿದ್ದೇನೆ. ಚಿತ್ರದ ಹಾಡುಗಳು ಹಾಗೂ ಟ್ರೇಲರ್ ಗೆ ಸಿಗುತ್ತಿರುವ ಪ್ರತಿಕ್ರಿಯೆಗೆ ಮನತುಂಬಿ ಬಂದಿದೆ ಎಂದು ನಾಯಕ‌ ಭರತ್ ಗೌಡ ತಿಳಿಸಿದರು.

ಚಿತ್ರದ ಒಂದು ಸನ್ನಿವೇಶದ ಮೂಲಕ ಮಾತು ಪ್ರಾರಂಭಿಸಿದ ನಿರ್ದೇಶಕ ಪನ್ನಗ ಸೋಮಶೇಖರ್, ಇದು ಹಿರಿಯ ಸಾಹಿತಿ ಶಿವರಾಮ ಕಾರಂತರ ಜೀವನ್ನಾಧಾರಿತ ಚಿತ್ರವಲ್ಲ. ಕಡಲ ತೀರದಲ್ಲಿ ವಾಸಿಸುವ ನಮ್ಮ ನಾಯಕನ ಹೆಸರು ಭಾರ್ಗವ ಎಂದರು.

ಸಮಾರಂಭದಲ್ಲಿ ಹಾಜರಿದ್ದ ಅತಿಥಿಗಳು ಹಾಗೂ ಚಿತ್ರತಂಡದ ಸದಸ್ಯರು ತಮ್ಮ ಅನುಭವ ಹಂಚಿಕೊಂಡರು.

ಸಿನಿಮಾ

ಅರುಣ್ ಜಿ.,

ದುಡ್ಡೊಂದಿದ್ರೆ ಸಾಕು ಎಲ್ಲವನ್ನೂ ಪಡೆದುಕೊಳ್ಳಬಹುದು ಎನ್ನುವ ಮನಸ್ಥಿತಿಯ ಹುಡುಗರು. ಹಣ ಎಲ್ಲರ ಅವಶ್ಯಕತೆ, ಅನಿವಾರ್ಯತೆ ನಿಜ. ಹಾಗಂತ ಅದನ್ನು ಹೇಗೆ ಬೇಕಾದರೂ ಹಾಗೆ ಸಂಪಾದಿಸಿಬಿಡಲು ಸಾಧ್ಯವಿಲ್ಲವಲ್ಲಾ? ಒಳ್ಳೇ ಮಾರ್ಗಗಳನ್ನು ಕಂಡು ಹಿಡಿದುಕೊಂಡು ಶ್ರಮವಹಿಸಿ ಸಂಪಾದಿಸಬೇಕು. ಹಣ ಮಾಡುವ ಧಾವಂತಕ್ಕೆ ಬಿದ್ದು ಯಾವ್ಯಾವುದೋ ದಾರಿಯಲ್ಲಿ ದುಡಿದರೆ ಅದೂ ಒಂದು ಬದುಕು ಅನ್ನಿಸಿಕೊಳ್ಳುತ್ತಾ? ದುಡ್ಡಿನ ಕುರಿತು ನಾನಾ ಮಜಲುಗಳನ್ನು ತೆರೆದು ತೋರಿಸುವ ಸಿನಿಮಾ ʻರೂಪಾಯಿʼ.

ಎಲ್ಲೆಲ್ಲಿಂದಲೋ ಬಂದು ಒಂದು ಕಡೆ ಸೇರಿದವರ ಮನಸ್ಥಿತಿ, ಪರಿಸ್ಥಿತಿಗಳು ಬೇರೆಯದ್ದೇ ಆಗಿರುತ್ತದೆ. ಆದರೆ ಎಲ್ಲರ ಅಗತ್ಯ ಮಾತ್ರ ದುಡ್ಡು. ಇವರೊಂದಿಗೆ ದೊಡ್ಡ ಮಟ್ಟದ ಹಣ ಕೂಡಾ ಜರ್ನಿ ಮಾಡುತ್ತಿರುತ್ತದೆ. ಆದರೆ ಅದು ಇವರಿಗೆ ಗೊತ್ತೇ ಇರೋದಿಲ್ಲ. ಆ ಹಣವನ್ನು ಇನ್ಯಾರೋ ಬೆನ್ನಟ್ಟಿರುತ್ತಾರೆ. ಮನುಷ್ಯ ಹಣದ ಹಿಂದೆ ಓಡೋದನ್ನು ಇಲ್ಲಿ ರೂಪಕಗಳ ಮೂಲಕ ಬಿಚ್ಚಿಟ್ಟಿದ್ದಾರೆ. ಬದುಕಿನ ಅನಿವಾರ್ಯಗಳಿಗಾಗಿ ದೇಹವನ್ನೇ ಬಂಡವಾಳ ಮಾಡಿಕೊಂಡ ಹೆಣ್ಣುಮಕ್ಕಳ ಕತೆ ಕೇಳಿರ್ತೀವಿ. ನೀವಿಲ್ಲಿ ಗಂಡು ವೇಶ್ಯೆಯನ್ನೂ ನೋಡಬಹುದು. ಒಟ್ಟಾರೆ ಜೀವನದ ವಾಸ್ತವಗಳನ್ನು ಅಷ್ಟೇ ತಮಾಷೆ ರೀತಿಯಲ್ಲಿ ಅನಾವರಣಗೊಳಿಸಿರುವ ಸಿನಿಮಾ ರೂಪಾಯಿ!

ವಿಜಯ್ ಜಗದಾಲ್ ಮೊದಲ ಬಾರಿಗೆ ನಟಿಸಿ, ನಿರ್ದೇಶಿಸಿರುವ ಸಿನಿಮಾ ‘ರೂಪಾಯಿ’. ಆದರೆ ಇದು ಇವರ ಮೊದಲ ಸಿನಿಮಾ ಅಂತಾ ಅನ್ನಿಸೋದೇ ಇಲ್ಲ.  

‘ರೂಪಾಯಿ’ ಒಂದು ಪಕ್ಕಾ ಮನರಂಜನಾತ್ಮಕ ಚಿತ್ರವಾಗಿದ್ದು, ಒಂದು ಕಮರ್ಷಿಯಲ್ ಚಿತ್ರಕ್ಕೆ ಬೇಕಾದ ಎಲ್ಲಾ ಅಂಶಗಳೂ ಈ ಚಿತ್ರದಲ್ಲಿದೆ. ‘ಪ್ರೇಕ್ಷಕರಿಗೆ ಎಲ್ಲೂ ಬೋರ್ ಆಗದ ಹಾಗೆ ಚಿತ್ರಕಥೆ ಮಾಡಿದ್ದು, ಹಣದ ಮೌಲ್ಯದ ಕುರಿತು ನಗುವಿನ ಮೂಲಕ ಹೇಳುವ ಪ್ರಯತ್ನ ಮಾಡಿದ್ದಾರೆ. ಇಲ್ಲಿ ನಗಿಸುವುದಕ್ಕೆ ಯಾವುದೇ ಪ್ರತ್ಯೇಕ ಪಾತ್ರಗಳಿಲ್ಲ. ಸನ್ನಿವೇಶಗಳೇ ನಗು ತರಿಸುತ್ತದೆ. ಸಡನ್ನಾಗಿ ಹಣ ಸಿಕ್ಕಿಬಿಟ್ಟರೆ ಸಂಬಂಧಗಳು ಹೇಗೆ ಹದಗೆಡುತ್ತವೆ ಎನ್ನುವ ವಿಚಾರದೊಂದಿಗೆ ಕ್ರಿಕೆಟ್ ಹಗರಣದ ಎಳೆಯೂ ಇಲ್ಲಿ ಬಂದು ಹೋಗುತ್ತದೆ. 

ವಿಜಯ್ ಜಗದಾಲ್ ಜೊತೆಗೆ ಕೃಷಿ ತಾಪಂಡ, ಯಶ್ವಿಕ್, ‘ಮೈತ್ರಿ’ ಜಗದೀಶ್, ಶಂಕರ್ ಮೂರ್ತಿ, ರಾಮ್ ಚಂದನ್, ಚಂದನಾ ರಾಘವೇಂದ್ರ, ಪ್ರಮೋದ್ ಶೆಟ್ಟಿ, ರಾಕ್ಲೈನ್ ಸುಧಾಕರ್, ಮೋಹನ್ ಜನೇಜ ಮುಂತಾದವರು ಪಾತ್ರಕ್ಕೆ ಹೇಗೆ ಬೇಕೋ ಹಾಗೆ ನಟಿಸಿದ್ದಾರೆ. ಚಿತ್ರಕ್ಕೆ ಆನಂದ್ ರಾಜವಿಕ್ರಮ್ ಅವರ ಸಂಗೀತ, ಆರ್.ಡಿ.ನಾಗಾರ್ಜುನ್ ಅವರ ಛಾಯಾಗ್ರಹಣ ಮತ್ತು ಶಿವರಾಜ್ ಮೇಹು ಅವರ ಸಂಕಲನ ಕೂಡಾ ಅಚ್ಚುಕಟ್ಟಾಗಿದೆ.

ಸಿನಿಮಾ ರೇಟಿಂಗ್: 3.5/5

ಸಿನಿಮಾ

ಅರುಣ್ ಜಿ.,

ಬೇಲೂರಿನ ಸಂತೋಷ್ ನಾಗೇನಹಳ್ಳಿ ಅವರು ಸಮನ್ವಿ ಕ್ರಿಯೇಷನ್ಸ್ ಬೇಲೂರು ಸಂಸ್ಥೆಯಡಿ ನಿರ್ಮಿಸಿರುವ ಪ್ರಥಮ ಚಿತ್ರ “1 RAಬರಿ ಕಥೆ”. ಇತ್ತೀಚೆಗಷ್ಟೆ ತನ್ನ ಚಿತ್ರೀಕರಣ ಮುಗಿಸಿಕೊಂಡು ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ತೊಡಗಿರುವ ಚಿತ್ರತಂಡ ಶೀಘ್ರದಲ್ಲೇ ಚಿತ್ರವನ್ನು ತೆರೆಗೆ ತರಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. 

ಎಲ್ಲಾ ವರ್ಗದ ಪ್ರೇಕ್ಷಕರನ್ನು ಸೆಳೆಯುವಂಥ ಪಕ್ಕಾ ಮಾಸ್ ಕಮರ್ಷಿಯಲ್ ರೊಮ್ಯಾಂಟಿಕ್, ಕಾಮಿಡಿ, ಆಕ್ಷನ್, ಸಸ್ಪೆನ್ಸ್-ಥ್ರಿಲ್ಲರ್, ಸೆಂಟಿಮೆಂಟ್ ಕಥಾಹಂದರ ಒಳಗೊಂಡಿರುವ ‘ಒನ್ ರಾಬರಿ ಕಥೆ’ ಚಿತ್ರಕ್ಕೆ ಗೋಪಾಲ್ ಹಳ್ಳೇರ್ ಹೊನ್ನಾವರ ಅವರು ಕಥೆ, ಚಿತ್ರಕಥೆ ಬರೆದು ನಿರ್ದೇಶನದ ಜವಾಬ್ದಾರಿ ನಿಭಾಯಿಸಿದ್ದಾರೆ.

ಬಹುತಾರಾಗಣ ಒಳಗೊಂಡ ಈ ಚಿತ್ರದಲ್ಲಿ ರಕ್ಕಂ ಖ್ಯಾತಿಯ ರಣಧೀರ್ ಗೌಡ ನಾಯಕನಾಗಿ ನಟಿಸಿದರೆ, ಹೊಸ ಪ್ರತಿಭೆ ರಿಷ್ವಿ ಭಟ್ ನಾಯಕಿಯ ಪಾತ್ರ ನಿರ್ವಹಿಸಿದ್ದಾರೆ. ನಿರ್ಮಾಪಕ  ಬೇಲೂರಿನ ಸಂತೋಷ್ ನಾಗೇನಹಳ್ಳಿ  ಅವರು ನಿರ್ಮಾಣದ ಜೊತೆಗೆ ವಿಶೇಷ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ.

ಜೊತೆಗೆ ಸುಂದರ್ ರಾಜ್, ಕರಿಸುಬ್ಬು, ಕಡ್ಡಿಪುಡಿ ಚಂದ್ರು, ಶಿವರಾಜ್ ಕೆ.ಆರ್.ಪೇಟೆ, ತಬಲಾನಾಣಿ, ಜಹಾಂಗೀರ್, ಗಿರೀಶ್ ಶಿವಣ್ಣ, ಮೂಗ್ ಸುರೇಶ್, ಎಂ.ಕೆ.ಮಠ್, ನವೀನ್ ಪಡೀಲ್, ಸಂಜು ಬಸಯ್ಯ ಮತ್ತು  ಕಿರುತೆರೆ ಹಾಗೂ ಮಜಾ ಟಾಕೀಸ್ ನ ಹಲವಾರು ಕಲಾವಿದರು ನಟಿಸಿದ್ದಾರೆ.

ಬೇಲೂರು, ಚಿಕ್ಕಮಗಳೂರು, ಸಕಲೇಶಪುರ, ಹೊನ್ನಾವರ ಮತ್ತು ಸಿಂದನೂರಿನ ರವಕುಂದದಲ್ಲಿ ಚಿತ್ರದ ಚಿತ್ರೀಕರಣ ನಡೆಸಲಾಗಿದೆ. ಪ್ರಕಾಶ್ ಜಿ. ಅವರ ಸಂಭಾಷಣೆ, ಸಂತೋಷ್ ನಾಗೇನಹಳ್ಳಿ, ಪ್ರಕಾಶ್ ಅವರ ಸಾಹಿತ್ಯ, ಡಿರೆಂಟ್ ಡ್ಯಾನಿ ಅವರ ಸಾಹಸ, ಹರೀಶ್ ಜಿಂದೆ ಅವರ ಛಾಯಾಗ್ರಹಣ, ಸಂಜಿವರೆಡ್ಡಿ ಅವರ ಸಂಕಲನ, ಶ್ರೀವತ್ಸ ಅವರ  ಸಂಗೀತ ಮತ್ತು ಚಾಮರಾಜ್, ರೋಹಿತ್ ಅರುಣ್ ಕೊರಿಯೋಗ್ರಫಿ ಈ ಚಿತ್ರಕ್ಕಿದೆ.

ಸಿನಿಮಾ

ಅರುಣ್ ಜಿ.,

ಲಂಕಾಸುರ ಚಿತ್ರದ “ಮಾಡರ್ನ್ ಮಹಾಲಕ್ಷ್ಮಿ” ಹಾಡನ್ನು ಖ್ಯಾತ ಸಿನಿಮಾ ನಟಿ ಮಾಲಾಶ್ರೀ ಬಿಡುಗಡೆ ಮಾಡಿದರು.

ವಿನೋದ್ ಪ್ರಭಾಕರ್ ನಾಯಕರಾಗಿ ನಟಿಸಿರುವ ಹಾಗೂ ಟೈಗರ್ ಟಾಕೀಸ್ ಮೂಲಕ ನಿಶಾ ವಿನೋದ್ ಪ್ರಭಾಕರ್ ನಿರ್ಮಿಸಿರುವ “ಲಂಕಾಸುರ” ಚಿತ್ರಕ್ಕಾಗಿ “ಬಹದ್ದೂರ್”  ಚೇತನ್ ಕುಮಾರ್ ಬರೆದಿರುವ “ಮಾಡರ್ನ್ ಮಹಾಲಕ್ಷ್ಮಿ” ಹಾಡನ್ನು ಖ್ಯಾತ ನಟಿ ಮಾಲಾಶ್ರೀ ಬಿಡುಗಡೆ ಮಾಡಿದ್ದಾರೆ. A2 music ಮೂಲಕ ಈ ಹಾಡು ಬಿಡುಗಡೆಯಾಗಿದೆ.  ಇತ್ತೀಚಿಗೆ ಅದ್ದೂರಿಯಾಗಿ ನಡೆದ ಈ ಹಾಡು ಬಿಡುಗಡೆ ಸಮಾರಂಭದಲ್ಲಿ ಹಿರಿಯ ನಟಿ ಶೃತಿ, ನಟ ಶ್ರೀನಗರ ಕಿಟ್ಟಿ, ನಿರ್ಮಾಪಕ ಎಂ.ಜಿ.ರಾಮಮೂರ್ತಿ, ನಿರ್ದೇಶಕ ಗುರು ದೇಶಪಾಂಡೆ ಸೇರಿದಂತೆ ಅನೇಕ ಚಿತ್ರರಂಗದ ಗಣ್ಯರು ಉಪಸ್ಥಿತರಿದ್ದರು.

‘ನಾನು ವಿನೋದ್ ಪ್ರಭಾಕರ್ ಅವರ ದೊಡ್ಡ ಅಭಿಮಾನಿ. ಅವರು ಮಾಡುವ ಸಾಹಸ ಸನ್ನಿವೇಶಗಳು ನನಗೆ ತುಂಬಾ ಇಷ್ಟ. ಟೈಗರ್ ಟಾಕೀಸ್ ಮೂಲಕ ವಿನೋದ್ ಪ್ರಭಾಕರ್ ಹಾಗೂ ನಿಶಾ ವಿನೋದ್ ಪ್ರಭಾಕರ್ ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ಚಿತ್ರ ಭರ್ಜರಿ ಯಶಸ್ಸು ಕಾಣಲಿ’ ಎಂದು ಮಾಲಾಶ್ರೀ ಹಾರೈಸಿದರು.

‘ನಾನು ಪ್ರಭಾಕರ್ ಅವರ ಜೊತೆ ನಟಿಸಿದ್ದೆ. ಈಗ “ಮಾದೇಶ” ಚಿತ್ರದಲ್ಲಿ ವಿನೋದ್ ಪ್ರಭಾಕರ್ ಅವರ ಜೊತೆ ನಟಿಸಿದ್ದೇನೆ.‌ “ಲಂಕಾಸುರ” ಚಿತ್ರದ ಮೂಲಕ ವಿನೋದ್ ಹಾಗೂ ನಿಶಾ ನಿರ್ಮಾಪಕರು ಆಗಿದ್ದಾರೆ ಒಳ್ಳೆಯದಾಗಲಿ’ ಎಂದರು ನಟಿ ಶೃತಿ.

ನಟ ಶ್ರೀನಗರ ಕಿಟ್ಟಿ‌, ನಿರ್ಮಾಪಕ ಎಂ.ಜಿ.ರಾಮಮೂರ್ತಿ ಸೇರಿದಂತೆ ಅನೇಕ ಗಣ್ಯರು ತಮ್ಮ ಮಾತುಗಳ ಮೂಲಕ ಶುಭ ಕೋರಿದರು. ‘ಇಡೀ ಚಿತ್ರತಂಡದ ಸಹಕಾರದಿಂದ ಚಿತ್ರ ಚೆನ್ನಾಗಿ ಬಂದಿದೆ ನೋಡಿ ಹಾರೈಸಿ’ ಎಂದರು ನಿರ್ಮಾಪಕಿ ನಿಶಾ ವಿನೋದ್ ಪ್ರಭಾಕರ್.

‘ಕೊರೋನ ಬರುವ ಮುಂಚೆ ರಾಘವ ಮುನಿಸ್ವಾಮಿ ಅವರು ನನಗೆ ಅಡ್ವಾನ್ಸ್ ನೀಡಿ “ಲಂಕಾಸುರ” ಚಿತ್ರ ಆರಂಭಿಸಿದ್ದರು. ಆನಂತರ ಕಾರಣಾಂತರದಿಂದ ನಾವೇ ಟೈಗರ್ ಟಾಕೀಸ್ ಸಂಸ್ಥೆ ಮೂಲಕ ಈ ಚಿತ್ರವನ್ನು ನಿರ್ಮಾಣ ಮಾಡಿದ್ದೆವು. ಟೀಸರ್ ಬಿಡುಗಡೆ ಮಾಡಿದ ಕ್ರೇಜಿಸ್ಟಾರ್ ರವಿಚಂದ್ರನ್ ಅವರಿಗೆ, ಲೋಗೊ ಅನಾವರಣ ಮಾಡಿದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ನಾನು ಆಭಾರಿ. ನನ್ನ ಇಡೀ ಚಿತ್ರತಂಡದ ಸಹಕಾರ ಮರೆಯಲು ಸಾಧ್ಯವಿಲ್ಲ‌. ಎಲ್ಲರೂ ಇಷ್ಟಪಡುವ ಚಿತ್ರ ಮಾಡಿದ್ದೇವೆ‌. ನೋಡಿ ಪ್ರೋತ್ಸಾಹ ನೀಡಿ’ ಎಂದರು ನಾಯಕ  ವಿನೋದ್ ಪ್ರಭಾಕರ್.

‘ಚಿತ್ರದಲ್ಲಿ ನಾಲ್ಕು ಹಾಡುಗಳಿದೆ. ಎಲ್ಲಾ ಹಾಡುಗಳನ್ನು ಚೇತನ್ ಕುಮಾರ್ ಬರೆದಿದ್ದಾರೆ. “ಮಾರ್ಡನ್ ಮಹಾಲಕ್ಷ್ಮಿ” ಹಾಡನ್ನು ನಾನೇ ಹಾಡಿದ್ದೇನೆ’ ಎಂದು ಸಂಗೀತ ನಿರ್ದೇಶಕ ವಿಜೇತ್ ಕೃಷ್ಣ ಹೇಳಿದರು.

ನಿರ್ದೇಶಕ ಪ್ರಮೋದ್ ಕುಮಾರ್, ಛಾಯಾಗ್ರಾಹಕ ಸುಜ್ಞಾನ್, ನೃತ್ಯ ನಿರ್ದೇಶಕ ಭಜರಂಗಿ ಮೋಹನ್ ಮುಂತಾದವರು “ಲಂಕಾಸುರ” ಚಿತ್ರದ ಕುರಿತು ಮಾತನಾಡಿದರು.

ಸಿನಿಮಾ

ಅರುಣ್ ಜಿ.,

ಈ ಜಗತ್ತಿರುವುದೇ ಹೀಗೆ ಇಲ್ಲಿ ಯಾರನ್ನೂ ಒಳ್ಳೆಯವರು ಅಥವಾ ಕೆಟ್ಟವರು ಅಂಥಾ ಒಂದೇ ಏಟಿಗೆ ಏಳಿಬಿಡಲು ಸಾಧ್ಯವಿಲ್ಲ. ಪರಿಸ್ಥಿತಿಗಳು ಯಾರನ್ನು ಹೇಗೆ ಬೇಕಾದರೂ ಬಳಸಿಕೊಳ್ಳುತ್ತವೆ. ಬರಿಯ ಒಳ್ಳೆಯತನ, ಪ್ರಾಮಾಣಿಕತೆ ವ್ಯಕ್ತಿಯೊಬ್ಬನನ್ನು ನೋಡುಗರ ದೃಷ್ಟಿಯಲ್ಲಿ ಬೇರೆಯದ್ದೇ ರೀತಿಯಲ್ಲಿ ಚಿತ್ರಿಸಿಬಿಡುತ್ತದೆ. ಹಾಗೆಯೇ, ವ್ಯಸನಕ್ಕೆ ಬಿದ್ದ ವ್ಯಕ್ತಿ ಎಂಥ ಹೀನ ಕೆಲಸ ಮಾಡಲು ಕೂಡಾ ಮುಂದಾಗುತ್ತಾನೆ. ಯಾವತ್ತಾದರೊಂದು ದಿನ ಮುಖವಾಡ ಕಳಚಿಬೀಳುತ್ತದೆ ಅನ್ನೋ ಭಯದಲ್ಲಿ ಬದುಕುವುದಕ್ಕಿಂತಾ ಗೌರವಯುತವಾಗಿ ಬಾಳ್ವೆ ನಡೆಸೋದು ಉತ್ತಮ…

ʻಲಾಂಗ್ ಡ್ರೈವ್ʼ ಹೆಸರಿನ ಸಿನಿಮಾವೊಂದು ತೆರೆಗೆ ಬಂದಿದೆ. ಈ ಚಿತ್ರದಲ್ಲೂ ಇಂಥ ಅನೇಕ ವಿಚಾರಗಳಿವೆ. ಪ್ರೀತಿಗೆ ಬಿದ್ದ ಜೋಡಿ ಲಾಂಗ್ ಡ್ರೈವ್ ಹೊರಟಿರುತ್ತದೆ. ಅಲ್ಲಿ ಎದುರಾಗುವ ಘಟನೆಗಳು ಹುಡುಗನ ಬಗ್ಗೆ ಹುಡುಗಿಯ ಮನಸ್ಸಿನಲ್ಲಿ ಕೀಳು ಭಾವನೆ ಮೂಡಿಸುತ್ತದೆ. ಹಾಗೆಂದು ಹುಡುಗ ಅವಳ ಹತ್ತಿರ ಅನುಚಿತವಾಗಿ ವರ್ತಿಸಿರುವುದಿಲ್ಲ. ʻತನ್ನನ್ನು ಈತ ರಕ್ಷಿಸಲಾರʼ ಎನ್ನುವಂತಾ ಮನಸ್ಥಿತಿಗೆ ದೂಡುತ್ತದಷ್ಟೇ. ಇದೇ ಕಾರಣಕ್ಕೆ ಆಕೆ `ಒಂದು ಹುಡುಗೀನ ಇಷ್ಟ ಪಡೋದು ಗಂಡಸ್ತನ ಅಲ್ಲ. ಅವಳನ್ನು ಮದುವೆಯಾಗಿ ಮಗು ಕೊಡೋದು ಗಂಡಸ್ತನ ಅಲ್ಲ. ಇಷ್ಟ ಪಟ್ಟೋಳು ಒಂದು ಹುಡುಗನ ಜೊತೆ ಬರ್ತಾಳೆ ಅಂದ್ರೆ, ಅವನ ಮೇಲಿಟ್ಟಿರೋ ನಂಬಿಕೆಯಿಂದ….’ ಅಂತಾ ಕಮೆಂಟು ಮಾಡುತ್ತಾಳೆ. ಕಣ್ಣೀರಿಡುತ್ತಾ ಹೊರಟುಬಿಡುತ್ತಾಳೆ. ಅಲ್ಲಿ ನಡೆದ ಆ ಘಟನೆ ಯಾವುದು? ಅದಕ್ಕೆ ಯಾರು ಕಾರಣ? ಹುಡುಗಿಯ ಮುಂದೆ ತನ್ನ ಇಮೇಜು ಹಾಳು ಮಾಡಿಕೊಂಡ ಹುಡುಗ ಮುಂದೆ ಏನೆಲ್ಲಾ ಮಾಡುತ್ತಾನೆ…? ಎಂಬಿತ್ಯಾದಿ ವಿಚಾರಗಳ ಸುತ್ತ ಬೆಸೆದುಕೊಂಡ ಕಥೆ ಲಾಂಗ್ ಡ್ರೈವ್ನಲ್ಲಿದೆ.

ಸಾಮಾನ್ಯಕ್ಕೆ ಅನ್ಯಾಯಕ್ಕೊಳಗಾದವರು ಸೇಡು ತೀರಿಸಿಕೊಳ್ಳೋದು, ದುಷ್ಟನನ್ನು ಶಿಕ್ಷಿಸಿ ಹೀರೋ ಆಗೋದು ಬಹುತೇಕ ಎಲ್ಲ ಸಿನಿಮಾಗಳಲ್ಲೂ ಇರುತ್ತವೆ. ಅದನ್ನು ಮೀರಿ ಬೇರೊಂದು ಪ್ರಯತ್ನ ಈ ಚಿತ್ರದಲ್ಲಾಗಿದೆ. ಅದೆಷ್ಟು ಹೊಸತನದಿಂದ ಕೂಡಿದೆಯೆಂದರೆ ಈ ಚಿತ್ರದಲ್ಲಿ ಹೀರೋ ಯಾರು? ವಿಲನ್ ಯಾರು ಎನ್ನುವ ಗೊಂದಲ ಸೃಷ್ಟಿಸುವ ಮಟ್ಟಿಗೆ! ಅದೇನೇ ಇರಲಿ, ತಪ್ಪು ಮಾಡಿದವನಿಗೆ ಪರಿವರ್ತನೆಗೊಳ್ಳಲು ಅವಕಾಶ ಕೊಡಬೇಕು ಅನ್ನೋದನ್ನು ಈ ಸಿನಿಮಾದ ಕಂಟೆಂಟು ಪ್ರತಿಪಾದಿಸಿದೆ. ವಿಕಾಸ್ ವಸಿಷ್ಟ ಸಂಗೀತ ನೀಡಿರುವ ಮಾಯಾವಿಯೇ ಹಾಡು ಅದ್ಭುತವಾಗಿದೆ. ಜೀವನ್ ಚೆಂದಚೆಂದ ಪದಗಳನ್ನು ಪೋಣಿಸಿದ್ದಾರೆ. ಛಾಯಾಗ್ರಾಹಕ ಕಿಟ್ಟಿ ಕೌಶಿಕ್ ಸಿಕ್ಕಿರುವ ಸೀಮಿತ ಸೌಲಭ್ಯದಲ್ಲಿ ಅಚ್ಚುಕಟ್ಟಾದ ಕೆಲಸ ಮಾಡಿ ತೋರಿಸಿದ್ದಾರೆ. 

ಅರ್ಜುನ್ ಯೋಗಿ, ಸುಪ್ರಿತಾ ಸತ್ಯನಾರಾಯಣ್ ನಟನೆ ಇಷ್ಟವಾಗುತ್ತದೆ. ತೇಜಸ್ವಿನಿ ಶೇಖರ್ ಎಂಟ್ರಿ ಕೊಟ್ಟಮೇಲೆ ಚಿತ್ರಕತೆಯ ಲಯ ಪಡೆಯುತ್ತದೆ. ಅಷ್ಟು ಸಹಜವಾಗಿ ಈಕೆ ಅಭಿನಯಿಸಿದ್ದಾರೆ. ಲಾಂಗ್ ಡ್ರೈವ್ ನಲ್ಲಿ ಹೆಚ್ಚು ಸ್ಕೋರ್ ಮಾಡುವುದು ವಿಲನ್ ನಂತೆ ಎಂಟ್ರಿ ಕೊಟ್ಟು ಹೀರೋ ಲೆವೆಲ್ಲು ತಲುಪುವ ಶಬರಿ ಮಂಜು. ಸ್ವತಃ ನಿರ್ಮಾಪಕರೂ ಆಗಿರುವ ಶಬರಿ ಮಂಜು ಕನ್ನಡದಲ್ಲಿ ಉತ್ತಮ ಪೋಷಕ ಕಲಾವಿದನಾಗಿ ನಿಲ್ಲೋದು ನಿಜ. ಜಿಮ್ ಕೀರ್ತೀ ಕಡಿಮೆ ದೃಶ್ಯಗಳಲ್ಲಿ ಕಾಣಿಸಿಕೊಂಡರೂ, ನೆನಪಿನಲ್ಲುಳಿಯುವ ಪಾತ್ರ ಮಾಡಿದ್ದಾರೆ. ಈತ್ತೀಚೆಗೆ ಬರುತ್ತಿರುವ ಉತ್ತಮ ಹಾಸ್ಯ ಕಲಾವಿದರ ಲಿಸ್ಟಿಗೆ ಜಿಮ್ ಕೀರ್ತಿ ಕೂಡಾ ಸೇರಿಕೊಂಡಿದ್ದಾರೆ. ಹಾಗಂತಾ ಕೀರ್ತಿ ಬರೀ ಕಾಮಿಡಿ ಪಾತ್ರಕ್ಕಷ್ಟೇ ಸೂಟ್ ಆಗುತ್ತಾರಂತೇನೂ ಇಲ್ಲ. ಯಾವುದೇ ಪಾತ್ರ ಕೊಟ್ಟರೂ ಅದನ್ನು ದಕ್ಕಿಸಿಕೊಳ್ಳುವ ಶಕ್ತಿ ಇವರಲ್ಲಿದೆ. ಬಲ ರಾಜ್ ವಾಡಿ ಅವರನ್ನು ನಿರ್ದೇಶಕರು ಇನ್ನೂ ಉತ್ತಮ ರೀತಿಯಲ್ಲಿ ಬಳಸಿಕೊಳ್ಳಬಹುದಿತ್ತು. ನಿರ್ದೇಶಕ ಶ್ರೀರಾಜ್ ಈ ಹಿಂದೆ ರವಿ ಶ್ರೀವತ್ಸ ಗರಡಿಯಲ್ಲಿ ಬೆಳೆದವರು. ʻಲಾಂಗ್ ಡ್ರೈವ್ʼ ನೋಡಿದರೆ ಶ್ರೀರಾಜ್ ಶ್ರೀವತ್ಸರ ಯಾವ ಛಾಯೆಯನ್ನು ಅನುಕರಿಸಿದಂತೆ ಕಾಣಿಸಿಲ್ಲ. ಬದಲಿಗೆ ತಮ್ಮದೇ ಹೊಸ ಶೈಲಿಯನ್ನು ಪರಿಚಯಿಸುವ ಪ್ರಯತ್ನ ಮಾಡಿದ್ದಾರೆ. ಲವ್ ಕಂ ಥ್ರಿಲ್ಲರ್ ಜಾನರಿನ ʻಲಾಂಗ್ ಡ್ರೈವ್ʼನಲ್ಲಿ ವಿಪರೀತ ತಿರುವು, ಭಯಾನಕ ದೃಶ್ಯಗಳನ್ನು ತುರುಕಿಲ್ಲ.  ಸಣ್ಣದೊಂದು ಕತೆಯನ್ನು ಎಷ್ಟು ಸರಳವಾಗಿ ಹೇಳಿ ಮುಗಿಸಬೇಕೋ ಅದನ್ನಷ್ಟೇ ಮಾಡಿದ್ದಾರೆ.

ಸಿನಿಮಾ ರೇಟಿಂಗ್: 3.5/5

ಸಿನಿಮಾ

ಅರುಣ್ ಜಿ.,

ಬೆಂಗಳೂರು: ಸೈನ್ಸ್‌ ಜೊತೆಗೆ ಹಾರರ್‌, ಥ್ರಿಲ್ಲರ್‌ ಅಂಶಗಳನ್ನು ಹೊಂದಿಸೋದು ಕಷ್ಟ. ಇಂಥ ಸಿನಿಮಾಗಳು ಕನ್ನಡದಲ್ಲಿ ಬಹಳ ಅಪರೂಪವಾಗುತ್ತಿವೆ. ಈ ಹೊತ್ತಲ್ಲಿ ಜ್ಞಾನದ ಜೊತೆಗೆ ಕಲ್ಪನೆಯನ್ನು ಬೆಸುಗೆ ಹಾಕಿ ದೃಶ್ಯದ ಮೂಲಕಗ ತೆರೆಗೆ ಬಂದಿರುವ ಚಿತ್ರ ಡಿಸೆಂಬರ್ 24.

ʻನವಜಾತ ಶಿಶುಗಳ ಮರಣʼ ಎನ್ನುವ ಸುದ್ದಿಗಳನ್ನು ಆಗಾಗ ನೋಡುತ್ತಿರುತ್ತೇವಲ್ಲಾ? ಒಂದೇ ಏಟಿಗೆ ಅದಕ್ಕೆ ಕಾರಣ ಮತ್ತು ಪರಿಹಾರವನ್ನು ಎರಡನ್ನೂ ಹುಡುಕುವ ಪ್ರಯತ್ನ ಮಾಡಿರುವ ಸಿನಿಮಾ ಇದು. 2015 ರಿಂದ 2019ರ ನಡುವೆ ಹುಲಿಯೂರು ದುರ್ಗ ಸುತ್ತಮುತ್ತ ಹಲವಾರು ಮಕ್ಕಳು ಉಸಿರಾಟದ ಸಮಸ್ಯೆಯಿಂದ ಸಾವನ್ನಪ್ಪುವ ನೈಜ ಘಟನೆಯನ್ನು ಇಟ್ಟುಕೊಂಡು ತಯಾರಾದ ಹಾರರ್, ಥ್ರಿಲ್ಲರ್ ಚಿತ್ರ ಡಿಸೆಂಬರ್ 24

ಆಗತಾನೆ ಹುಟ್ಟಿದ ಮಕ್ಕಳು ಉಸಿರಾಟದ ಸಮಸ್ಯೆಯಿಂದ ಇದ್ದಕ್ಕಿದ್ದಹಾಗೆ ಸಾವನ್ನಪ್ಪುತ್ತಿರುವ ಘಟನೆಗೆ ಸಂಬಂಧಿಸಿದಂತೆ ನಡೆಯುವ ಘಟನೆಗಳನ್ನಿಟ್ಟುಕೊಂಡು ನಾಗರಾಜ್ ಎಂಜಿ ಗೌಡ ಅವರು  ಡಿಸೆಂಬರ್ 24 ಚಿತ್ರವನ್ನು ಕಟ್ಟಿಕೊಟ್ಟಿದ್ದಾರೆ. ಪಕ್ಕಾ ಥ್ರಿಲ್ಲರ್ ಜಾನರ್ನಲ್ಲಿ ಮೂಡಿಬಂದಿರುವ ಈ ಚಿತ್ರದಲ್ಲಿ ನಾಯಕ ಅಜಯ್ (ಅಪ್ಪು ಬಡಿಗೇರ್) ತನ್ನ ಅಕ್ಕನ ಮಗು ಹುಟ್ಟಿದ ಕೂಡಲೇ ಉಸಿರಾಟ ನಿಲ್ಲಿಸಿದ ಘಟನೆಯಿಂದ ವಿಚಲಿತನಾದಾಗ ಆತನ ಸ್ನೇಹಿತರೆಲ್ಲ ದೈರ್ಯ ತುಂಬುತ್ತಾರೆ. ಅವರೆಲ್ಲ ಮೆಡಿಕಲ್ ಓದುತ್ತಿರುವ ಗೆಳೆಯರು. ಹೇಗಾದರೂ ಮಾಡಿ ಈ ಸಮಸ್ಯೆಗೆ ಒಂದು ಪರಿಹಾರ ಕಂಡುಹಿಡಿಯಬೇಕೆಂದು ಸಾಕಷ್ಟು ಸರ್ಚ್ ಮಾಡಿದಾಗ ಉಡದ ಮೊಟ್ಟೆ, ಅದರಲ್ಲೂ  ಅದು ಕಾವು ಕೊಟ್ಟಿರುವ ಮೊಟ್ಟೆಯಿಂದ ಈ ಸಮಸ್ಯೆಗೆ ಔಷಧವನ್ನು ತಯಾರಿಸಬಹುದೆಂದು ತಿಳಿಯುತ್ತದೆ. ಅದನ್ನು ನಂಬಿದ ಈ ಎಂಟು ಜನ ವಿದ್ಯಾರ್ಥಿಗಳು ಉಡದ ಮೊಟ್ಟೆಯನ್ನರಸಿಕೊಂಡು ಕಾಡಿಗೆ ಬರುತ್ತಾರೆ. ಇಲ್ಲಿ ‘ಡಿಸೆಂಬರ್ 24’ ಉಡ ತಾನಿಟ್ಟ ಮೊಟ್ಟೆಗೆ ಕಾವು ಕೊಡುವ ದಿನ. ಅದೇ ಚಿತ್ರದ ಶೀರ್ಷಿಕೆಯಾಗಿದೆ.

ಅಜಯ್, ಕಾವ್ಯ (ಭೂಮಿಕಾ ರಮೇಶ್) ಸೇರಿದಂತೆ ಗೆಳೆಯರೆಲ್ಲ ಒಂದು ದಟ್ಟ ಕಾಡಿಗೆ ಬಂದು ಅಲ್ಲಿ ಮಾದಕ ವಸ್ತುಗಳನ್ನು ಕಳ್ಳಸಾಗಾಣಿಕೆ ಮಾಡುತ್ತಿದ್ದ ಗ್ಯಾಂಗ್ ಲೀಡರ್ (ಅನಿಲ್ ಗೌಡ್ರು) ಕೈಗೆ ಸಿಕ್ಕಿ ಹಾಕಿಕೊಳ್ಳುತ್ತಾರೆ. ಆ ಗ್ಯಾಂಗ್ನೊಂದಿಗೆ ಹೊಡೆದಾಟ ನಡೆಸಿ ಹೇಗೋ ತಪ್ಪಿಸಿಕೊಂಡು ಬಂದ ಈ ಸ್ನೇಹಿತರಿಗೆ ತಾವು ಹುಡುಕುತ್ತಿದ್ದ  ಮೊಟ್ಟೆಗಳು ಕೊನೆಗೂ ಸಿಗುತ್ತವೆ. ಮೊಟ್ಟೆ ಸಿಕ್ಕ ಖುಷಿಯಲ್ಲೆ ಆ ಕಾಡಿಂದ ಹೊರಹೋಗಬೇಕೆನ್ನುವ ಹೊತ್ತಿಗೆ ಕತ್ತಲಾಗಿ ಒಂದು ಹಾಳು ಮನೆಯೊಳಗೆ ಸೇರಿಕೊಳ್ಳುತ್ತಾರೆ. ಆ ಮನೆ ಭೂತಬಂಗ್ಲೆ ಎಂದೇ ಆ ಭಾಗದಲ್ಲಿ ಹೆಸರುವಾಸಿಯಾಗಿರುತ್ತದೆ, ಆ ಮನೆಯೊಳಗೆ ಹೋದ ಯಾರೊಬ್ಬರೂ ಇದುವರೆಗೆ ಬದುಕಿಬಂದ ಉದಾಹರಣೆಗಳಿಲ್ಲ. ಅಂಥಾ ಸಾವಿನ ಮನೆಯೊಳಗೆ ಹೋದ ಇವರನ್ನು ಆರಂಭದಿಂದಲೂ ಗಮನಿಸುತ್ತಿದ್ದ ಸ್ಥಳೀಯ ಫಾರೆಸ್ಟ್ ಆಫೀಸರ್ (ಆನಂದ್ ಪಟೇಲ್ ಹುಲಿಕಟ್ಟೆ) ಆ ವಿದ್ಯಾರ್ಥಿಗಳನ್ನು ಅಲ್ಲಿಂದ ರಕ್ಷಿಸಿ ಹೊರತರುತ್ತಾರೆ. ಆ ಮನೆಯಲ್ಲಿ  ಅಂಥಾದ್ದೇನಿದೆ, ಅಲ್ಲಿ ಹೋದವರು ಯಾಕೆ ಬದುಕಿ ಬರೋದಿಲ್ಲ, ಇದಕ್ಕೆಲ್ಲ ಉತ್ತರ ಬೇಕೆಂದರೆ ನೀವೆಲ್ಲ ಒಮ್ಮೆ ಥೇಟರ್ಗೆ ಹೋಗಿ  ಡಿಸೆಂಬರ್ 24 ಚಿತ್ರವನ್ನು ವೀಕ್ಷಿಸಲೇಬೇಕು.

ಇಲ್ಲಿ ಭಾಗ್ಯಲಕ್ಷ್ಮಿ ಖ್ಯಾತಿಯ ಭೂಮಿಕಾ ರಮೇಶ್ ನಾಯಕಿಯಾಗಿ ತನ್ನ ಮುಗ್ಧ ಅಭಿನಯದ ಮೂಲಕ ನೋಡುಗರಿಗೆ ಇಷ್ಟವಾಗುತ್ತಾರೆ.  ನಾಯಕನಾಗಿ ಅಪ್ಪು ಬಡಿಗೇರ್ ತನ್ನ ಸಹಜಾಭಿನಯದಿಂದಲೇ ಗಮನ ಸೆಳೆಯುತ್ತಾರೆ. ಉಳಿದಂತೆ ರವಿ ಕೆ.ಆರ್.ಪೇಟೆ, ಜಗದೀಶ್, ದಿವ್ಯಆಚಾರ್, ಸಾಗರ್ ಸೇರಿದಂತೆ ಎಲ್ಲರೂ ತಂತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಛಾಯಾಗ್ರಾಹಕ ವಿನಯ್ಗೌಡ ಅವರ ಕ್ಯಾಮೆರಾದಲ್ಲಿ ದಾಂಡೇಲಿ ಫಾರೆಸ್ಟ್ ಅತ್ಯದ್ಭುತವಾಗಿ  ಸೆರೆಯಾಗಿದೆ. ಫ್ರೆಂಡ್ಷಿಪ್ಗೆ ಹೆಚ್ಚು ಪ್ರಾಮುಖ್ಯತೆ ಇರುವ ಕಥೆ ಇದಾಗಿದ್ದು, ಇದೇ ಕಾರಣಕ್ಕೆ ಚಿತ್ರ ನೋಡುಗರಿಗೂ ಇಷ್ಟವಾಗುತ್ತದೆ. ಪ್ರವೀಣ್ ನಿಕೇತನ್ ಹಾಗೂ ವಿಶಾಲ್ ಆಲಾಪ್ ಅವರ ಸಂಗೀತದಲ್ಲಿ ಮೂಡಿಬಂದಿರುವ  ಹಾಡುಗಳು ಒಮ್ಮೆ ಕೇಳಲು ಅಡ್ಡಿಯೇನಿಲ್ಲ. ಹಿನ್ನೆಲೆ ಸಂಗೀತ ಇನ್ನಷ್ಟು ಪರಿಣಾಮಕಾರಿಯಾಗಿರಬೇಕಿತ್ತು.  ನಿರ್ದೇಶಕ ನಾಗರಾಜ್ ಎಂ.ಜಿ. ಗೌಡ ಅವರ ಮೊದಲ ಪ್ರಯತ್ನ ಎಂಬ ಕಾರಣಕ್ಕೆ,  ಮೊದಲ ಚಿತ್ರದಲ್ಲೇ ಹೊಸತನದ ಕಥೆ ಹೇಳಿರುವ ಶೈಲಿಯನ್ನು ಮೆಚ್ಚಬೇಕು.  ಇನ್ನು ಈ ಚಿತ್ರಕ್ಕೆ  ರಘು ಎಸ್, ಮಂಜು ಡಿ.ಟಿ, ಸಿದ್ದಮ್ಮ ಕಂಬಾರ್, ಮಹಂತೇಶ್ ನೀಲಪ್ಪ ಚೌಹಾಣ್ ಹಾಗೂ ವಿ.ಬೆಟ್ಟೇಗೌಡ ಇವರೆಲ್ಲ ಸೇರಿ ಬಂಡವಾಳ ಹಾಕಿದ್ದು, ಇವರೆಲ್ಲರೂ ರೈತರೆನ್ನುವುದು ಇಲ್ಲಿ ವಿಶೇಷ.

ಸಿನಿಮಾ ರೇಟಿಂಗ್: 3.5/5

ಸಿನಿಮಾ

ಅರುಣ್ ಜಿ.,

ಬೆಂಗಳೂರು: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ‘ವೇದ’ ಸಿನಿಮಾ ಒಟಿಟಿಗೆ ಎಂಟ್ರಿ ಕೊಡಲು ಡೇಟ್ ಫಿಕ್ಸ್ ಆಗಿದೆ. ಶಿವಣ್ಣ ಕೆರಿಯರ್ ನ ವಿಶೇಷ ಸಿನಿಮಾಗಳಲ್ಲೊಂದಾಗಿದೆ ಈ ಚಿತ್ರ. ಹ್ಯಾಟ್ರಿಕ್ ಹೀರೋ ಸಿನಿ ಕೆರಿಯರ್ ನ 125ನೇ ಸಿನಿಮಾ ಒಂದು ಕಡೆಯಾದ್ರೆ, ಗೀತಾ ಶಿವಕುಮಾರ್ ನಿರ್ಮಾಣದ ಮೊದಲ ಸಿನಿಮಾ. ನಿರ್ದೇಶಕ ಎ.ಹರ್ಷ ಹಾಗೂ ಶಿವಣ್ಣ ಕಾಂಬಿನೇಶನ್ ನಲ್ಲಿ ಮೂಡಿ ಬಂದ ನಾಲ್ಕನೇ ಸಿನಿಮಾ. ಹೀಗೆ ಸಾಕಷ್ಟು ವಿಶೇಷತೆಯೊಂದಿಗೆ ತೆರೆಕಂಡ ಈ ಚಿತ್ರ ದೊಡ್ಮನೆ ಅಭಿಮಾನಿಗಳ ಮನಗೆದ್ದಿತ್ತು.

ದೊಡ್ಮನೆ ಅಭಿಮಾನಿಗಳಲ್ಲಿ, ಸಿನಿ ಪ್ರೇಕ್ಷಕರಲ್ಲಿ ಸಾಕಷ್ಟು ನಿರೀಕ್ಷೆ ಮೂಡಿಸಿದ್ದ ‘ವೇದ’ ಚಿತ್ರ ಕಳೆದ ವರ್ಷ ಡಿಸೆಂಬರ್ 23ರಂದು ತೆರೆಕಂಡಿತ್ತು. ಎ.ಹರ್ಷ ಹಾಗೂ ಶಿವಣ್ಣ ಹಿಟ್ ಕಾಂಬಿನೇಶನ್ ಮತ್ತೊಮ್ಮೆ ತೆರೆ ಮೇಲೆ ಮೋಡಿ ಮಾಡುವಲ್ಲಿ ಯಶಸ್ವಿಯಾಗಿತ್ತು. ಚಿತ್ರಮಂದಿರದಲ್ಲಿ ದೊಡ್ಮನೆ ಅಭಿಮಾನಿ ಬಳಗ ಹಾಗೂ ಪ್ರೇಕ್ಷಕ ಪ್ರಭುಗಳ ಮನಗೆದ್ದ ಈ ಚಿತ್ರ ಬಾಕ್ಸ್ ಆಫೀಸ್ ನಲ್ಲೂ ಸೂಪರ್ ಸಕ್ಸಸ್ ಕಂಡಿದ್ದು ಹಿಟ್ ಲಿಸ್ಟ್ ಸೇರಿದೆ. ಇದೀಗ ಒಟಿಟಿ ಪ್ರೇಕ್ಷಕರ ಮನಗೆಲ್ಲಲು ‘ವೇದ’ ಚಿತ್ರ ರೆಡಿಯಾಗಿದ್ದು ಫೆಬ್ರವರಿ 10ಕ್ಕೆ ಜೀ5ನಲ್ಲಿ ಬಿಡುಗಡೆಯಾಗುತ್ತಿದೆ.

ಗಾನವಿ ಲಕ್ಷ್ಮಣ್, ಶ್ವೇತ ಚೆಂಗಪ್ಪ, ಉಮಾಶ್ರೀ, ಅದಿತಿ ಸಾಗರ್, ವೀಣಾ ಪೊನ್ನಪ್ಪ, ಕುರಿ ಪ್ರತಾಪ್, ಲಾಸ್ಯ ನಾಗರಾಜ್ ಸೇರಿದಂತೆ ಬಹುದೊಡ್ಡ ತಾರಗಣ ‘ವೇದ’ ಚಿತ್ರದಲ್ಲಿದೆ. ಅರ್ಜುನ್ ಜನ್ಯ ಸಂಗೀತ ನಿರ್ದೇಶನ, ಸ್ವಾಮಿ ಜೆ ಗೌಡ‌ ಛಾಯಾಗ್ರಹಣ, ದೀಪು.ಎಸ್. ಕುಮಾರ್ ಸಂಕಲನ ಚಿತ್ರಕ್ಕಿದೆ.

ಸಿನಿಮಾ

ಅರುಣ್ ಜಿ.,

ಕೊಪ್ಪದಲ್ಲಿ ಇನಾಮ್ದಾರ್ ಸಿನಿಮಾದ ಸಿಲ್ಕು ಮಿಲ್ಕು ಸಾಂಗ್ ಬಿಡುಗಡೆ: ಸ್ಯಾಂಡಲ್ ವುಡ್  ಘಟೋದ್ಗಜ ಎಂದು ಪ್ರಮೋದ್ ಶೆಟ್ಟಿಗೆ ಟೈಟಲ್ ನೀಡಿದ ನಿರ್ದೇಶಕ!

ಬೆಂಗಳೂರು: ಬಹು ನಿರೀಕ್ಷೆಯ ಇನಾಮ್ದಾರ್ ಸಿನಿಮಾ, ಟೀಸರ್ ಮೂಲಕ ರಾಜ್ಯದಾದ್ಯಂತ ಸದ್ದು ಮಾಡಿದ್ದು, ಇದೀಗ ಕೊಪ್ಪದಲ್ಲಿ ತನ್ನ ಮೊದಲ ಹಾಡು ಬಿಡುಗಡೆ ಮಾಡುವ ಮೂಲಕ ಜನರಲ್ಲಿ ಮತ್ತಷ್ಟು ಕುತೂಹಲವನ್ನು ಕೆರಳಿಸಿದೆ.

ಸಂದೇಶ್ ಶೆಟ್ಟಿ ಆಜ್ರಿ ನಿರ್ದೇಶನದ ಸಿನಿಮಾ ಇದಾಗಿದ್ದು, ಕುಂತಿ ಅಮ್ಮ ಪ್ರೊಡಕ್ಷನ್ ಮೂಲಕ ನಿರಂಜನ್ ಶೆಟ್ಟಿ ತಲ್ಲೂರು ಬಂಡವಾಳ ಹೂಡಿದ್ದಾರೆ. ಕೊಪ್ಪದಲ್ಲಿ ‘ಸಿಲ್ಕು-ಮಿಲ್ಕು’ ಹಾಡನ್ನು ಬಿಡುಗಡೆ ಮಾಡುವ ಮೂಲಕ ಕೊಪ್ಪ ಜನತೆಯನ್ನ ಹುಚ್ಚೆಬ್ಬಿಸಿದ ಇನಾಮ್ದಾರ ಚಿತ್ರ ತಂಡ, ಮತ್ತಷ್ಟು ಭರವಸೆಯನ್ನು ಮೂಡಿಸುವ ನಿಟ್ಟಿನಲ್ಲಿ ಜನರನ್ನು ಆಕರ್ಷಿಸುತ್ತಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಕಲಾವಿದರ ದಂಡೆ ಇರುವ ಈ ಸಿನಿಮಾ ಎರಡು ಬಣ್ಣಗಳ ನಡುವಿನ ಘರ್ಷಣೆಯ ಸುತ್ತ ಹೆಣೆದಿರುವ ಕಥೆ ಎಂದು ನಿರ್ದೇಶಕರು ಹೇಳುತ್ತಾರೆ.

ಕೊಪ್ಪದಲ್ಲಿ ಸಾವಿರಾರು ಜನರ ಮುಂದೆ ಕೊಪ್ಪದ ಮಕ್ಕಳ ಕೈಯಲ್ಲಿ ಸಿಲ್ಕು-ಮಿಲ್ಕು ಸಾಂಗ್ ಅನ್ನು ಬಿಡುಗಡೆ ಮಾಡಿರುವ ಚಿತ್ರತಂಡ ಕೊಪ್ಪದ ಜನತೆಯನ್ನು ಸ್ಮರಿಸಿಕೊಂಡಿದ್ದಾರೆ. ಖಡಕ್ ಧ್ವನಿಯಲ್ಲಿ ಪ್ರಮೋದ್ ಶೆಟ್ಟಿಯ ಡೈಲಾಗ್ ಕೇಳಿ ಹುಚ್ಚೆದ್ದು ಕುಣಿದ ಕೊಪ್ಪದ ಜನತೆಗೆ ನಿರ್ದೇಶಕ ಸಂದೇಶ ಶೆಟ್ಟಿ, ಪ್ರಮೋದ್ ಶೆಟ್ಟಿ ಅವರಿಗೆ ಸ್ಯಾಂಡಲ್ವುಡ್ ಘಟೋದ್ಗಜ ಎಂದು ಬಿರುದನ್ನು ನೀಡಿದ್ದಾರೆ. ಇದು ಕೊಪ್ಪದ ಜನತೆಯಲ್ಲಿ ಮತ್ತಿಷ್ಟು ಜೋಶ್ ತಂದು ಕೊಟ್ಟಿದೆ.

ಇಡೀ ಸಿನಿಮಾ ಟೆಕ್ನಿಕಲ್ ಆಗಲಿ, ಕಥೆಯಾಗಲಿ ಎಲ್ಲವೂ ಕೂಡ ಅದ್ಭುತವಾಗಿ ಮೂಡಿ ಬಂದಿದೆ. ಹಾಗೂ ಒಬ್ಬ ಹೊಸ ನಿರ್ಮಾಪಕ, ನಿರ್ದೇಶಕ ಉಳಿಯಬೇಕಾದರೆ ನಿಮ್ಮ ಸಹಕಾರ ಅಗತ್ಯ ಎಂದು ಪ್ರಮೋದ್ ಶೆಟ್ಟಿ ಹೇಳಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ನಿರ್ಮಾಪಕ ನಿರಂಜನ್ ಶೆಟ್ಟಿ ಸಿನಿಮಾ ಉತ್ತಮವಾಗಿ ಮೂಡಿ ಬಂದಿದೆ, ಎರಡು ಜನಾಂಗ ಘರ್ಷಣೆಯನ್ನ ತೆರೆ ಮೇಲೆ ತರಲು ನಿರ್ದೇಶಕರು ಹೊಸತನದ ಪ್ರಯತ್ನವನ್ನ ಮಾಡಿದ್ದಾರೆ, ನಿಮಗೆಲ್ಲರಿಗೂ ಈ ಸಿನಿಮಾ ಇಷ್ಟ ಆಗುತ್ತೆ ನಮ್ಮ ತಂಡವನ್ನ ಬೆಂಬಲಿಸಿ, ನೀವು ನಮಗೆ ಶಕ್ತಿಯಾಗಿ ಎಂದು ತಿಳಿಸಿದರು.

ಸಂಗೀತ ನಿರ್ದೇಶಕ ರಾಕೇಶ್ ಆಚಾರ್ಯ ಮಾತನಾಡಿ ಇದೊಂದು ಸೂಕ್ಷ್ಮವಾದ ಕಥಾಹಂದರ ಬಲು ಅಚ್ಚುಕಟ್ಟಾಗಿ ಈ ಸಿನಿಮಾವನ್ನ ತೆರೆಯ ಮೇಲೆ ತರಲು ನಿರ್ದೇಶಕರು ಪ್ರಯತ್ನಪಟ್ಟಿದ್ದಾರೆ. ಈ ಸಿನಿಮಾದಲ್ಲಿ ನಾನು ಮೂರು ಹಾಡುಗಳನ್ನ ಮಾಡಿದ್ದೇನೆ. ನಿಮ್ಮೆಲ್ಲರ ಬೆಂಬಲ ಈ ಸಿನಿಮಾದ ಮೇಲೆ ಇರಲಿ ಎಂದು ಕೇಳಿಕೊಂಡರು. ನಾಯಕ ನಟ ರಂಜನ್  ಛತ್ರಪತಿ, ನಟಿ ಚಿರಶ್ರೀ ಅಂಚನ್ ಹಾಗೂ ಏಸ್ತಾರ್ ನೆರೋನಾ, ರಘು ಪಾಂಡೇಶ್ವರ್, ಕರಣ್ ಕುಂದರ್, ಯಶ್ ಆಚಾರ್ಯ, ಮಹಾಬಲೇಶ್ವರ ಕ್ಯಾದಗಿ, ರಕ್ಷಿತ್ ಶೆಟ್ಟಿ, ಇತರರು ಕಾರ್ಯಕ್ರಮದಲ್ಲಿ ಭಾಗಿಯಾಗಿ ಕೊಪ್ಪದ ವೇದಿಕೆಯಲ್ಲಿ ಸಂತೋಷವನ್ನು ಹಂಚಿಕೊಂಡರು.

ಸಿನಿಮಾ

ಅರುಣ್ ಜಿ.,

ಬೆಂಗಳೂರು: ವಿಜಯ್​ ಜಗದಾಲ್​ ಮೊದಲ ಬಾರಿಗೆ ನಟಿಸಿ-ನಿರ್ದೇಶಿಸಿರುವ ‘ರೂಪಾಯಿ’ ಚಿತ್ರವು ಫೆಬ್ರವರಿ 10 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಕಳೆದ ವಾರವಷ್ಟೇ ಚಿತ್ರದ ಟ್ರೈಲರ್​ ಬಿಡುಗಡೆಯಾಗಿ ಜನರ ಮೆಚ್ಚುಗೆ ಪಡೆದಿತ್ತು. ಈಗ ‘ಉಸಿರಾಟ’ ಎಂಬ ಹೊಸ ಹಾಡು ಬಿಡುಗಡೆಯಾಗಿದ್ದು. ಈ ಹಾಡಿಗೂ ಕೇಳುಗರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಯೂಟ್ಯೂಬ್​ನ ಆನಂದ್​ ಆಡಿಯೋ ಚಾನಲ್​ನಲ್ಲಿ ಬಿಡುಗಡೆಯಾಗಿರುವ ‘ಉಸಿರಾಟ’ ಹಾಡನ್ನು ವ್ಯಾಸರಾಜ ಸೋಸಲೆ ಹಾಡಿದ್ದು, ಆನಂದ್​ ರಾಜಾವಿಕ್ರಮ್​ ಸಂಗೀತ ಸಂಯೋಜಿಸಿದ್ದಾರೆ. ಇನ್ನು, ನಟ-ನಿರ್ದೇಶಕ ವಿಜಯ್​ ಜಗದಾಲ್​ ಅವರೇ ಈ ಚಿತ್ರಕ್ಕೆ ಸಾಹಿತ್ಯ ರಚಿಸಿದ್ದಾರೆ.

‘ರೂಪಾಯಿ’ ಒಂದು ಪಕ್ಕಾ ಮನರಂಜನಾತ್ಮಕ ಚಿತ್ರವಾಗಿದ್ದು, ಒಂದು ಕಮರ್ಷಿಯಲ್​ ಚಿತ್ರಕ್ಕೆ ಬೇಕಾದ ಎಲ್ಲಾ ಅಂಶಗಳೂ ಈ ಚಿತ್ರದಲ್ಲಿದೆಯಂತೆ. ‘ಪ್ರೇಕ್ಷಕರಿಗೆ ಎಲ್ಲೂ ಬೋರ್ ಆಗದ ಹಾಗೆ ಚಿತ್ರಕಥೆ ಮಾಡಿದ್ದು, ಹಣದ ಮೌಲ್ಯದ ಕುರಿತು ನಗುವಿನ ಮೂಲಕ ಹೇಳುವ ಪ್ರಯತ್ನ ಮಾಡಿದ್ದೇವೆ. ಇಲ್ಲಿ ನಗಿಸುವುದಕ್ಕೆ ಯಾವುದೇ ಪ್ರತ್ಯೇಕ ಪಾತ್ರಗಳಿಲ್ಲ. ಸನ್ನಿವೇಶಗಳೇ ನಗು ಉಕ್ಕಿಸುವಂತಿದೆ’ ಎನ್ನುತ್ತಾರೆ ವಿಜಯ್​ ಜಗದಾಲ್​. ಈ ಚಿತ್ರವನ್ನು ನಿರ್ದೇಶಿಸುವುದರ ಜೊತೆಗೆ ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯನ್ನೂ ಅವರೇ ರಚಿಸಿದ್ದಾರೆ.

ಈ ಚಿತ್ರದ ಕುರಿತು ಮಾತನಾಡುವ ವಿಜಯ್​ ಜಗದಾಲ್​, ‘ಇದೊಂದು ರೆಗ್ಯುಲರ್​ ಚಿತ್ರ ಅಲ್ಲ. ಐದು ಜನರ ಸುತ್ತ ಸುತ್ತುವ ಕಥೆ ಇಲ್ಲಿದೆ. ಅವರಿಗೆ ಆಕಸ್ಮಿಕವಾಗಿ ಒಂದಿಷ್ಟು ಹಣ ಸಿಗುತ್ತದೆ. ಒಂದ ದೊಡ್ಡ ಹಗರಣಕ್ಕೆ ಸಂಬಂಧಿಸಿದ ಹಣ, ಮಧ್ಯಮ ವರ್ಗದ ಜನರಿಗೆ ಸಿಕ್ಕಾಗ ಅವರ ಜೀವನದಲ್ಲಿ ಏನೆಲ್ಲ ಬದಲಾವಣೆ ಆಗುತ್ತದೆ ಎಂಬುದರ ಕುರಿತು ಹೇಳುವುದಕ್ಕೆ ಹೊರಟಿದ್ದೇವೆ. ದುಡ್ಡಿಗಿಂತ ಸಂಬಂಧಗಳ ಕುರಿತಾದ ಚಿತ್ರ ಇದು. ಆ ದುಡ್ಡು ಸಂಬಂಧಗಳನ್ನು ಹೇಗೆ ಹಾಳು ಮಾಡುತ್ತದೆ ಎಂದು ಹೇಳುವ ಚಿತ್ರ ಇದು’ ಎಂದು ಹೇಳುತ್ತಾರೆ.

ವಿವಿಧ್​ ಸಿನಿಮಾಸ್​ ಬ್ಯಾನರ್​ನಡಿ ಮಂಜುನಾಥ್​ ಎಂ., ಹರೀಶ್​,ಬಿ.ಕೆ. ಮತ್ತು ವಿನೋದ ಎನ್​. ಜಂಟಿಯಾಗಿ ನಿರ್ಮಿಸಿರುವ ಈ ಚಿತ್ರದಲ್ಲಿ ವಿಜಯ್ ಜಗದಾಲ್​ ಜೊತೆಗೆ ಕೃಷಿ ತಾಪಂಡ, ಯಶ್ವಿಕ್​, ‘ಮೈತ್ರಿ’ ಜಗದೀಶ್​, ಶಂಕರ್​ ಮೂರ್ತಿ, ರಾಮ್​ ಚಂದನ್​, ಚಂದನಾ ರಾಘವೇಂದ್ರ, ಪ್ರಮೋದ್​ ಶೆಟ್ಟಿ, ರಾಕ್​ಲೈನ್​ ಸುಧಾಕರ್​, ಮೋಹನ್​ ಜನೇಜ ಮುಂತಾದವರು ನಟಿಸಿದ್ದಾರೆ. ಚಿತ್ರಕ್ಕೆ ಆನಂದ್ ರಾಜವಿಕ್ರಮ್​ ಅವರ ಸಂಗೀತ, ಆರ್​.ಡಿ.ನಾಗಾರ್ಜುನ್​ ಅವರ ಛಾಯಾಗ್ರಹಣ ಮತ್ತು ಶಿವರಾಜ್​ ಮೇಹು ಅವರ ಸಂಕಲನವಿದೆ.