ಕ್ರೈಂ ರಿಪೋರ್ಟ್ಸ್ Archives » Page 2 of 5 » Dynamic Leader
October 17, 2024
Home Archive by category ಕ್ರೈಂ ರಿಪೋರ್ಟ್ಸ್ (Page 2)

ಕ್ರೈಂ ರಿಪೋರ್ಟ್ಸ್

ಕ್ರೈಂ ರಿಪೋರ್ಟ್ಸ್ ದೇಶ

ಮಧ್ಯಪ್ರದೇಶದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಲ್ಲಿದೆ. ಆದರೂ ಅಕ್ರಮ ಗೋಮಾಂಸ ದಂಧೆ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ. ಇಂತಹ ಗೋಮಾಂಸ ದಂಧೆ ಮಾಡುವವರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳುತ್ತಿದ್ದಾರೆ. ದೇಶದ ಕೆಲವೆಡೆ ವಾಹನಗಳಲ್ಲಿ ಗೋವುಗಳನ್ನು (ಅಕ್ರಮವಾಗಿ) ಸಾಗಾಟ ಮಾಡುವವರನ್ನು ಗೋರಕ್ಷಕರು ಎಂದು ಹೇಳಿಕೊಳ್ಳುವ ಹಿಂದುತ್ವವಾದಿಗಳು ಹೊಡೆದು ಸಾಯಿಸಿದ ಘಟನೆಗಳು ನಡೆದಿವೆ.

ಈ ಹಿನ್ನೆಲೆಯಲ್ಲಿ, ಮಧ್ಯಪ್ರದೇಶದ ಮಾಂಡ್ಲಾ ಬಳಿಯ ಬೈನ್ವಾಹಿಯಲ್ಲಿ ಮಾಂಸಕ್ಕಾಗಿ ಅಕ್ರಮವಾಗಿ ಗೋವುಗಳನ್ನು ಸಾಕಲಾಗುತ್ತಿದೆ ಎಂಬ ಮಾಹಿತಿ ಪೊಲೀಸರಿಗೆ ಲಭಿಸಿದೆ. ತಕ್ಷಣ ಪೊಲೀಸರು ಮತ್ತು ಆರೋಗ್ಯಾಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ. ಅಲ್ಲಿ ಮಾಂಸಕ್ಕಾಗಿ 150 ಹಸುಗಳನ್ನು ಕಟ್ಟಲಾಗಿದ್ದು, ಅವುಗಳನ್ನು ರಕ್ಷಿಸಿದ ಅಧಿಕಾರಿಗಳು ಹಸುಗಳನ್ನು ಕಟ್ಟಿ ಹಾಕಿದ್ದವರ ಮನೆಗಳಲ್ಲಿ ತಪಾಸಣೆ ನಡೆಸಲಾಗಿ ಅವರ ಮನೆಯಲ್ಲಿ ಫ್ರಿಡ್ಜ್ ನಲ್ಲಿ ಮಾಂಸ ಇತ್ತು ಎಂದು ಹೇಳಲಾಗುತ್ತದೆ.

ಮಾಂಸವನ್ನು ವಶಪಡಿಸಿಕೊಂಡ ಅಧಿಕಾರಿಗಳು, ಅದನ್ನು ಪರೀಕ್ಷಿಸಿದಾಗ ಅದು ಹಸುವಿನ ಮಾಂಸ ಎಂದು ತಿಳಿದುಬಂದಿರುತ್ತದೆ. ಬಳಿಕ ಹಸುಗಳನ್ನು ಕಟ್ಟುತ್ತಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ. ಇನ್ನೂ 10 ಮಂದಿ ತಲೆಮರೆಸಿಕೊಂಡಿದ್ದಾರೆ. ಮಾಂಸಕ್ಕಾಗಿ ಹಸುಗಳನ್ನು ಕಟ್ಟಿ ಹಾಕಿ ಮಾಂಸವನ್ನು ಮನೆಯಲ್ಲಿ ಬಚ್ಚಿಟ್ಟಿದ್ದ 11 ಮಂದಿಯ ಮನೆಗಳನ್ನು ಅಧಿಕಾರಿಗಳು ಬುಲ್ಡೋಜರ್ ಸಹಾಯದಿಂದ ಕೆಡವಿ ಹಾಕಿದ್ದಾರೆ. ಆ ಮನೆಗಳು ಸರ್ಕಾರಿ ಜಾಗದಲ್ಲಿ ನಿರ್ಮಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ಜಿಲ್ಲಾ ಉಸ್ತುವಾರಿ ರಜತ್, “ಆರೋಪಿಯ ಮನೆಯ ಕೊಠಡಿಯೊಂದರಲ್ಲಿ ಹಸುವಿನ ಚರ್ಮ, ಕೊಬ್ಬು, ಮೂಳೆಗಳನ್ನು ಬಚ್ಚಿಟ್ಟಿದ್ದು, ಅದನ್ನು ಪತ್ತೆ ಹಚ್ಚಿ ಜಪ್ತಿ ಮಾಡಲಾಗಿದೆ” ಎಂದು ಹೇಳಿದ್ದಾರೆ. ಎಲ್ಲಾ 11 ಆರೋಪಿಗಳು ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಮಧ್ಯಪ್ರದೇಶದಲ್ಲಿ ಗೋಹತ್ಯೆಯಲ್ಲಿ ತೊಡಗುವವರಿಗೆ 7 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸುವ ಕಾನೂನು ಜಾರಿಯಲ್ಲಿದೆ ಎಂಬುದು ಗಮನಾರ್ಹ.

ಕ್ರೈಂ ರಿಪೋರ್ಟ್ಸ್

ಡಿ.ಸಿ.ಪ್ರಕಾಶ್

ಅಯಾಹುವಾಸ್ಕಾ ಎಂಬುದು ಆಧ್ಯಾತ್ಮಿಕ ಭಾವಪರವಶತೆಯ ಹಬ್ಬವಾಗಿ ಪ್ರಪಂಚದಾದ್ಯಂತ ಕಂಡುಬರುವ ಒಂದು ಘಟನೆಯಾಗಿದೆ. ಅಯಾಹುವಾಸ್ಕಾ ಹಬ್ಬವು ಅಮೆಜಾನ್ ಕಾಡು ಮತ್ತು ದಕ್ಷಿಣ ಅಮೆರಿಕಾದ ದೇಶಗಳಲ್ಲಿ ಸ್ಥಳೀಯ ಸಂಸ್ಕೃತಿಯೊಂದಿಗೆ ಸಂಬಂಧಿಸಿದ ಹಬ್ಬವಾಗಿದೆ.

ಅಯಾಹುವಾಸ್ಕಾ ಮೂಲಿಕೆಯಿಂದ ಮಾಡಿದ ಕಷಾಯ ತರಹದ ಪಾನೀಯವಾಗಿದೆ. ಮಾನಸಿಕ ಕಾಯಿಲೆಗಳನ್ನು ಗುಣಪಡಿಸಲು ಮತ್ತು ಆಧ್ಯಾತ್ಮಿಕ ಭಾವಪರವಶತೆಯನ್ನು ಉಂಟುಮಾಡಲು ಇದನ್ನು ಬಳಸಲಾಗುತ್ತಿದೆ. ಆದರೆ ಈಗ ಅದೊಂದು ವ್ಯಸನಕಾರಿ ವಸ್ತುವಾಗಿ ಬದಲಾಗಿರುವುದು ದುರಾದೃಷ್ಟ.

ಮನಸ್ಸಿನಲ್ಲಿ ಭ್ರಮೆಯನ್ನು ಉಂಟುಮಾಡುವ ಅಯಾಹುವಾಸ್ಕಾದ ಬಳಕೆಯನ್ನು ಭಾರತದಲ್ಲಿ ಮಾದಕ ದ್ರವ್ಯ ನಿಗ್ರಹ (NDPS Act) ಕಾಯ್ದೆಯಡಿ ನಿಷೇಧಿಸಲಾಗಿದೆ. ಆದರೂ ನಿಷೇಧವನ್ನು ಉಲ್ಲಂಘಿಸಿ ಈ ಮಾದಕ ದ್ರವ್ಯ (Narcotics) ಗಿಡಮೂಲಿಕೆ ಉತ್ಸವ ಅಕ್ರಮವಾಗಿ ಭಾರತವನ್ನು ಪ್ರವೇಶಿಸಿ ಇಲ್ಲಿ ಸದ್ದು ಮಾಡುತ್ತಿದೆ.

ಜೂನ್ 15 ರಿಂದ 2 ದಿನಗಳ ಕಾಲ ಆಧ್ಯಾತ್ಮಿಕ ಭೂಮಿಯೆಂದು ಕರೆಯಲ್ಪಡುವ ತಮಿಳುನಾಡಿನ ತಿರುವಣ್ಣಾಮಲೈನಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ಬಗ್ಗೆ ದೊರೆತ ಗುಪ್ತ ಮಾಹಿತಿ ಮೇರೆಗೆ ಕೇಂದ್ರ ಮಾದಕ ವಸ್ತು ನಿಯಂತ್ರಣ ದಳ, ವಿಶೇಷ ಪಡೆ ರಚಿಸಿ ಶೋಧ ನಡೆಸಿದೆ. ಅನುಮಾನಸ್ಪದವಾಗಿ ತಿರುಗಾಡುತ್ತಿದ್ದ ರಷ್ಯಾದ ಒಬ್ಬ ಪುರುಷ ಮತ್ತು ಮಹಿಳೆಯನ್ನು ಕರೆತಂದು ವಿಚಾರಣೆಗೆ ಒಳಪಡಿಸಿದಾಗ ಅವರು ನೀಡಿದ ಹೇಳಿಕೆಗಳು ಅಧಿಕಾರಿಗಳನ್ನು ಬೆಚ್ಚಿಬೀಳುವಂತೆ ಮಾಡಿದೆ.

ಆಧ್ಯಾತ್ಮಿಕತೆ ಮತ್ತು ಪ್ರವಾಸೋದ್ಯಮದಲ್ಲಿ ಉತ್ಕೃಷ್ಟವಾಗಿರುವ ಮನಾಲಿಯ ರಿಷಿಕೇಶದಲ್ಲಿ ಅಯಾಹುವಾಸ್ಕಾ ಉತ್ಸವವನ್ನು ಆಯೋಜಿಸಲಾಗಿದ್ದು, ಅದರ ಯಶಸ್ಸನ್ನು ಆಚರಿಸಲು ಅವರು ತಿರುವಣ್ಣಾಮಲೈಗೆ ಬಂದಿದ್ದಾರೆ. 20 ರಿಂದ 35 ವರ್ಷ ವಯಸ್ಸಿನ ಪುರುಷರು ಮತ್ತು ಮಹಿಳೆಯರು ಅವರ ಗುರಿಯಾಗಿದ್ದಾರೆ. ಅಯಾಹುವಾಸ್ಕಾ ಕಷಾಯವನ್ನು ಕುಡಿದು, ದೇಹದಲ್ಲಿ ಸಣ್ಣ ರಂಧ್ರವನ್ನು ಏರ್ಪಡಿಸಿ, ಕಪ್ಪೆ ವಿಷವನ್ನು ಚುಚ್ಚುವುದರ ಮೂಲಕ ಅಮಲನ್ನು ಉಂಟು ಮಾಡುತ್ತಾರೆ.

ಅಮಲು ಉತ್ತುಂಗಕ್ಕೇರಿದಾಗ ಅಲ್ಲಿ ಅನಿಯಂತ್ರಿತ ಅತಿಕ್ರಮಣಗಳು ಮತ್ತು ಅಶ್ಲೀಲತೆಯನ್ನು ಪ್ರದರ್ಶಿಸಲಾಗುತ್ತದೆ. ಈ ಭ್ರಮೆಯು ಸುಮಾರು 6 ಗಂಟೆಗಳವರೆಗೆ ಇರುತ್ತದೆ. ಇದಕ್ಕಾಗಿ ಒಬ್ಬ ವ್ಯಕ್ತಿಗೆ ಒಂದು ಸಾವಿರ ಡಾಲರ್ ವರೆಗೆ ಅಂದರೆ ಭಾರತೀಯ ಕರೆನ್ಸಿಯಲ್ಲಿ 80 ಸಾವಿರ ರೂಪಾಯಿಗೂ ಹೆಚ್ಚು ಶುಲ್ಕ ವಿಧಿಸಲಾಗುತ್ತದೆ. ಬಂಧಿತ ರಷ್ಯನ್ನರಿಂದ ಅಯಾಹುವಾಸ್ಕಾ ಹೊರತುಪಡಿಸಿ, ಮ್ಯಾಜಿಕ್ ಅಣಬೆಗಳು ಮತ್ತು ಕಂಬೋ ಎಂದು ಕರೆಯಲ್ಪಡುವ ಕಪ್ಪೆ ವಿಷವನ್ನು ಸಹ ವಶಪಡಿಸಿಕೊಳ್ಳಲಾಗಿದೆ.

ಅವರ ಬಳಿ 239 ಗ್ರಾಂ ಸೈಲೋಸಿಬಿನ್, ಟಿಎಂಡಿಯಂತಹ ಮಾನಸಿಕ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಬಳಸುವ ರಾಸಾಯನಿಕವಿರುವುದು ಪತ್ತೆಯಾಗಿದೆ. ತಮಿಳುನಾಡಿನ ಇತರ ಯಾವ ಪ್ರದೇಶಗಳಲ್ಲಿ ಇದೇ ರೀತಿಯ ಗಿಡಮೂಲಿಕೆ ಉತ್ಸವಗಳನ್ನು ನಡೆಸಲು ಯೋಜಿಸಲಾಗಿದೆ ಮತ್ತು ಯಾರೆಲ್ಲ ಭಾಗಿಯಾಗಿದ್ದಾರೆ ಎಂದು ಮಾದಕ ದ್ರವ್ಯ ನಿಗ್ರಹ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಭಾರತದಲ್ಲಿ ಅಧ್ಯಾತ್ಮದ ಹೆಸರಲ್ಲಿ ಇಂತಹ ಮಾನಸಿಕ ಗೊಂದಲ ಉಂಟು ಮಾಡುವ ಘಟನೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇವೆ.

ಕ್ರೈಂ ರಿಪೋರ್ಟ್ಸ್

ಬೆಂಗಳೂರು: ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಂಧಿತರಾಗಿರುವ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು 6 ದಿನಗಳ ಎಸ್.ಐ.ಟಿ ಕಸ್ಟಡಿಗೆ ನ್ಯಾಯಾಲಯ ಆದೇಶಿಸಿದೆ. ಜಾತ್ಯತೀತ ಜನತಾದಳದ ರಾಷ್ಟ್ರೀಯ ನಾಯಕ ಹಾಗೂ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಮೊಮ್ಮಗ ಪ್ರಜ್ವಲ್ ರೇವಣ್ಣ ಅವರು ಹಾಸನದ ಸಂಸದರಾಗಿದ್ದಾರೆ. ಮತ್ತೆ ಅದೇ ಕ್ಷೇತ್ರದಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿಕೂಟದ ಅಭ್ಯರ್ಥಿಯಾಗಿಯೂ ಸ್ಪರ್ಧಿಸಿದ್ದಾರೆ.

ಸಂಸದ ಪ್ರಜ್ವಲ್ ರೇವಣ್ಣ ಕೆಲವು ಮಹಿಳೆಯರನ್ನು ಬೆದರಿಸಿ ಅತ್ಯಾಚಾರವೆಸಗಿದ್ದಾರೆ. ಸಾಕಷ್ಟು ಅಶ್ಲೀಲ ವಿಡಿಯೋಗಳನ್ನು ಹೊಂದಿದ್ದಾರೆ ಎಂದು ಕಳೆದ ತಿಂಗಳು ಹಲವು ಫೋಟೋ ಮತ್ತು ವಿಡಿಯೋಗಳು ಪೆನ್ ಡ್ರೈವ್ ಮೂಲಕ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಸೋರಿಕೆಯಾಗಿದ್ದವು ಎಂದು ವರದಿಯಾಗಿತ್ತು. ಈ ಹಿನ್ನೆಲೆಯಲ್ಲಿ, ಕಳೆದು ಏಪ್ರಿಲ್ 26 ರಂದು ಹಾಸನದಲ್ಲಿ ಮೊದಲ ಹಂತದ ಚುನಾವಣೆ ನಡೆದ ನಂತರ ಪ್ರಜ್ವಲ್ ಜರ್ಮನಿಗೆ ಪಲಾಯನ ಮಾಡಿದರು.

ಸಂತ್ರಸ್ತ ಮಹಿಳೆಯರು ನೀಡಿದ ದೂರಿನ ಮೇರೆಗೆ ಹೊಳೆನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಜ್ವಲ್ ವಿರುದ್ಧ ಮೂರು ಅತ್ಯಾಚಾರ ಪ್ರಕರಣಗಳು ದಾಖಲಾದವು. ಈ ಪ್ರಕರಣವನ್ನು ವಿಶೇಷ ತನಿಖಾ ತಂಡವಾದ ಎಸ್‌ಐಟಿ ತನಿಖೆ ನಡೆಸುತ್ತಿದೆ. ಪ್ರಜ್ವಲ್ ರೇವಣ್ಣ ನಿನ್ನೆ ಮಧ್ಯರಾತ್ರಿ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದರು. ಅಲ್ಲಿ ಅವರನ್ನು ಎಸ್‌ಐಟಿ ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದರು.

ಈ ಹಿನ್ನೆಲೆಯಲ್ಲಿ, ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ವಿಶೇಷ ತನಿಖಾ ತಂಡ, 14 ದಿನಗಳ ಕಾಲ ಕಸ್ಟಡಿಗೆ ಪಡೆದು ತನಿಖೆ ನಡೆಸಲು ಅನುಮತಿ ಕೋರಿತ್ತು. ನ್ಯಾಯಾಧೀಶರು 6 ದಿನ ಮಾತ್ರ ರಿಮಾಂಡ್‌ಗೆ ಅನುಮತಿ ನೀಡಿದ್ದು, ಜೂನ್ 6 ರಂದು ಪ್ರಜ್ವಲ್ ರೇವಣ್ಣ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಆದೇಶಿಸಿದರು.  

ಕ್ರೈಂ ರಿಪೋರ್ಟ್ಸ್

ಬರೈಲಿ: ಮೂವತ್ತು ವರ್ಷಗಳ ಹಿಂದೆ ಸಾಮೂಹಿಕ ಅತ್ಯಾಚಾರಕ್ಕೊಳಗಾದ ಆಕೆಯ ತಾಯಿಗೆ ನ್ಯಾಯ ದೊರಕಿಸಿಕೊಟ್ಟ ಮಗ. 1994ರಲ್ಲಿ, ತನ್ನೆ 12ನೇ ವಯಸ್ಸಿನಲ್ಲಿ ಸಾಮೂಹಿಕ ಅತ್ಯಾಚಾರಕ್ಕೊಳಗಾದ ಮಹಿಳೆಯೊಬ್ಬರು ತನ್ನ ಮಗನ ಸಹಾಯದಿಂದ ಪ್ರಕರಣ ದಾಖಲಿಸಿ 30 ವರ್ಷಗಳ ಬಳಿಕ ಅಪರಾಧಿಗಳಿಗೆ ಶಿಕ್ಷೆ ಕೊಡಿಸುವುದರಲ್ಲಿ ಯಶಸ್ವಿಯಾಗಿದ್ದಾರೆ.

ಅತ್ಯಾಚಾರಕ್ಕೊಳಗಾದ ನಂತರ ಜನಿಸಿದ ಗಂಡು ಮಗುವನ್ನು ಸಂಬಂಧಿಕರ ಬಳಿ ನೀಡಿದ ಮಹಿಳೆಗೆ, ಬೇರೆಯವರೊಂದಿಗೆ ವಿವಾಹ ಮಾಡಿಸಿದ್ದಾರೆ. 2022ರಲ್ಲಿ ಸತ್ಯವನ್ನು ತಿಳಿದುಕೊಂಡ ಮಗ, ತನ್ನ ತಾಯಿಗೆ ನ್ಯಾಯ ದೊರಕಿಸಲು ಸಹಾಯ ಮಾಡಿದ್ದಾರೆ.

ಶಹಜಹಾನ್‌ಪುರದಲ್ಲಿ ನಡೆದ ಈ ಪ್ರಕರಣವು ಕಳೆದ ಬುಧವಾರ ಅಂತ್ಯಗೊಂಡಿದೆ. ಎರಡೂ ಲೈಂಗಿಕ ಅಪರಾಧಿಗಳಿಗೆ 10 ವರ್ಷಗಳ ಜೈಲು ಶಿಕ್ಷೆ, ರೂ.30,000 ದಂಡವನ್ನುವಿಧಿಸಿ ನ್ಯಾಯಾಧೀಶರು ತೀರ್ಪು ನೀಡಿದ್ದಾರೆ.

ಈ ಕುರಿತು ಪತ್ರಕರ್ತರೊಂದಿಗೆ ಮಾತನಾಡಿದ ಸಂತ್ರಸ್ತ ಮಹಿಳೆ, “ನಾನು ಬಹಳ ದಿನಗಳಿಂದ ಭಯದಿಂದ ಬದುಕಿದ್ದೇನೆ. ಪ್ರಸ್ತುತ “ನನ್ನ ಮಗ ನನಗೆ ಮಾನಸಿಕ ಶಕ್ತಿಯನ್ನು ತುಂಬಿದ್ದಾನೆ ಮತ್ತು ಅಪರಾಧಿಗಳಿಗೆ ಶಿಕ್ಷೆಯನ್ನು ಕೊಡಿಸುವುದರಲ್ಲಿ ಯಶಸ್ವಿಯಾಗಿದ್ದಾನೆ” ಎಂದು ಮಹಿಳೆ ಹೇಳಿದ್ದಾರೆ.

ಕ್ರೈಂ ರಿಪೋರ್ಟ್ಸ್

ಉತ್ತರಪ್ರದೇಶದಲ್ಲಿ ಆಘಾತಕಾರಿ ಘಟನೆಯೊಂದರಲ್ಲಿ, ಹುಟ್ಟಲಿರುವ ಮಗುವಿನ ಲಿಂಗವನ್ನು ಕಂಡುಹಿಡಿಯಲು ತನ್ನ ಗರ್ಭಿಣಿ ಹೆಂಡತಿಯ ಹೊಟ್ಟೆಯನ್ನು ಕುಡಗೋಲಿನಿಂದ ಕತ್ತರಿಸಿದ ಪತಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.

ಈ ಭಯಾನಕ ಘಟನೆ 2020ರ ಸೆಪ್ಟೆಂಬರ್ 19 ರಂದು ಬದೌನ್ ಪ್ರದೇಶದಲ್ಲಿ ನಡೆದಿದೆ. ಇದರಲ್ಲಿ ಸಂತ್ರಸ್ತೆಯ ಹೆಸರು ಅನಿತಾ, ಹಲ್ಲೆಮಾಡಿದ ಗಂಡನ ಹೆಸರು ಪನ್ನಾ ಲಾಲ್. ಘಟನೆ ನಡೆದಾಗ ಅನಿತಾ ಎಂಟು ತಿಂಗಳ ಗರ್ಭಿಣಿಯಾಗಿದ್ದಳು. ಅಲ್ಲದೆ, ಆ ಸಮಯದಲ್ಲಿ ಇಬ್ಬರಿಗೂ ಐದು ಹೆಣ್ಣು ಮಕ್ಕಳಿದ್ದರು.

ಆದರೆ ಪನ್ನಾ ಲಾಲ್ ಆಗಾಗ ಪತ್ನಿಯೊಂದಿಗೆ ಹುಟ್ಟುವ ಮಗು ಗಂಡಾಗಿರಬೇಕು ಎಂದು ಜಗಳವಾಡುತ್ತಿದ್ದರು. ಗಂಡು ಮಗುವಾಗದಿದ್ದರೆ ಅನಿತಾಗೆ ವಿಚ್ಛೇದನ ನೀಡಿ ಬೇರೆ ಮಹಿಳೆಯನ್ನು ಮದುವೆಯಾಗುವುದಾಗಿ ಅನಿತಾ ಮನೆಯವರಿಗೆ ಬೆದರಿಕೆ ಹಾಕಿದ್ದ. ಇಂತಹ ವಾತಾವರಣದಲ್ಲಿ, ಸ್ಥಳೀಯ ಅರ್ಚಕರೊಬ್ಬರು, ಅನಿತಾ ಅವರಿಗೆ ಆರನೇ ಮಗು ಕೂಡ ಹೆಣ್ಣು ಮಗುವೇ ಎಂದು ಹೇಳಿದ್ದನ್ನು ನಂಬಿದ್ದ ಪನ್ನಾ ಲಾಲ್ ಪತ್ನಿಯೊಂದಿಗೆ ಜಗಳವಾಡುತ್ತಿದ್ದರು.

ಒಂದು ಹಂತದಲ್ಲಿ, ಅನಿತಾ ಹೊಟ್ಟೆಯನ್ನು ಹರಿದು ಒಳಗಿರುವ ಮಗುವಿನ ಲಿಂಗ ಪತ್ತೆ ಮಾಡುವುದಾಗಿ ಪನ್ನಾ ಲಾಲ್ ಬೆದರಿಕೆ ಹಾಕಿದ್ದರು. ಇದರಿಂದ ಆಘಾತಕ್ಕೊಳಗಾದ ಅನಿತಾ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಪನ್ನಾ ಲಾಲ್ ಕುಡುಗೋಲಿನಿಂದ ಆಕೆಯ ಹೊಟ್ಟೆಯನ್ನು ಕೊಯ್ದಿದ್ದಾರೆ. ಈ ವಿಷಯ ತಿಳಿದ ಅನಿತಾ ಸಹೋದರ ಘಟನಾ ಸ್ಥಳಕ್ಕೆ ಬರುವ ಹೊತ್ತಿಗೆ ಪನ್ನಾ ಲಾಲ್ ಅಲ್ಲಿಂದ ಪರಾರಿಯಾಗಿದ್ದರು. ನಂತರ ಪೊಲೀಸರು ಕೂಡಲೇ ಅನಿತಾಳನ್ನು ರಕ್ಷಿಸಿ ದೆಹಲಿಯ ಸಪ್ತರ್ಜಂಗ್ ಆಸ್ಪತ್ರೆಗೆ ದಾಖಲಿಸಿ ರಕ್ಷಿಸಿದರು. ಆದರೆ ಆಕೆಯ ಹೊಟ್ಟೆಯಲ್ಲಿದ್ದ ಗಂಡು ಮಗು ದಾರುಣವಾಗಿ ಸಾವನ್ನಪ್ಪಿತು.

ಅದರ ನಂತರ, ಪನ್ನಾ ಲಾಲ್ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 307 (ಕೊಲೆ ಯತ್ನ) ಮತ್ತು 313 (ಮಹಿಳೆಯ ಒಪ್ಪಿಗೆಯಿಲ್ಲದೆ ಗರ್ಭಪಾತಕ್ಕೆ ಕಾರಣವಾಗುವುದು) ಅಡಿಯಲ್ಲಿ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸಲಾಯಿತು. ಬಳಿಕ ಅನಿತಾ ಕೂಡ ತನಗೆ ನಡೆದ ದೌರ್ಜನ್ಯದ ಬಗ್ಗೆ ನ್ಯಾಯಾಲಯದ ಮುಂದೆ ಹೇಳಿಕೊಂಡಳು.

ಆಗಲೂ ಪನ್ನಾ ಲಾಲ್, ಅನಿತಾ ತನ್ನ ಸಹೋದರರೊಂದಿಗೆ ಆಸ್ತಿ ವಿವಾದದಲ್ಲಿದ್ದ ಕಾರಣ ಸುಳ್ಳು ಪ್ರಕರಣ ದಾಖಲಿಸಲು ತನ್ನನ್ನು ಗಾಯಗೊಳಿಸಿಕೊಂಡಿದ್ದಾಳೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು. ಇದನ್ನು ಒಪ್ಪದ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಸೌರಭ್ ಸಕ್ಸೇನಾ ಅವರು ಪನ್ನಾ ಲಾಲ್‌ಗೆ ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ.

ಕ್ರೈಂ ರಿಪೋರ್ಟ್ಸ್ ದೇಶ

ನವದೆಹಲಿ: ಭಾರತೀಯ ದಂಡ ಸಂಹಿತೆ (IPC), ಭಾರತೀಯ ಅಪರಾಧ ಪ್ರಕ್ರಿಯಾ ಸಂಹಿತೆ (CRPC) ಮತ್ತು ಭಾರತೀಯ ಸಾಕ್ಷಿ ಕಾಯಿದೆ (IEC) ಬದಲಿಗೆ ಭಾರತೀಯ ನ್ಯಾಯ ಸಂಹಿತಾ 2023, ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ 2023 ಮತ್ತು ಭಾರತೀಯ ಸಾಕ್ಷಿ ಅಧಿನಿಯಮ್ 2023 ಅನ್ನು ಪರಿಚಯಿಸಲಾಗಿದೆ.

ಈ ಹೊಸ ಕ್ರಿಮಿನಲ್ ತಿದ್ದುಪಡಿ ಕಾಯ್ದೆಗಳು ಜುಲೈ 1 ರಿಂದ ಜಾರಿಗೆ ಬರಲಿವೆ ಎಂದು ಕೇಂದ್ರ ಸರ್ಕಾರ ಕಳೆದ ಫೆಬ್ರವರಿಯಲ್ಲಿ ಘೋಷಿಸಿತು. ತರುವಾಯ, ಕೇಂದ್ರ ಗೃಹ ಸಚಿವಾಲಯವು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕಳುಹಿಸಿದ ಸುತ್ತೋಲೆಯಲ್ಲಿ, “ವಸಾಹತುಶಾಹಿ ಆಳ್ವಿಕೆಗೆ ಅನುಗುಣವಾಗಿ ಬ್ರಿಟಿಷರ ಆಳ್ವಿಕೆಯಲ್ಲಿ ಜಾರಿಗೆ ಬಂದ ಕಾನೂನುಗಳನ್ನು ಎಲ್ಲರಿಗೂ ನ್ಯಾಯ ಒದಗಿಸುವ ಕಾನೂನುಗಳಾಗಿ ಬದಲಾಯಿಸುವುದು ಈ ತಿದ್ದುಪಡಿಯ ಉದ್ದೇಶವಾಗಿದೆ.

ಹೊಸ ಕ್ರಿಮಿನಲ್ ಕಾನೂನುಗಳಲ್ಲಿನ ಸಕಾರಾತ್ಮಕ ಅಂಶಗಳು ಮತ್ತು ನವೀಕೃತ ಬದಲಾವಣೆಗಳ ಕುರಿತು ದೇಶದ ಎಲ್ಲಾ ಪೊಲೀಸ್ ಮತ್ತು ಜೈಲು ಅಧಿಕಾರಿಗಳಿಗೆ ತರಬೇತಿ ನೀಡಲು ಭಾರತ ಸರ್ಕಾರ ಬದ್ಧವಾಗಿದೆ. ಇದಕ್ಕಾಗಿ ತರಬೇತಿ ಪಡೆಯುವ ಮೂಲಕ ಅವರು ಹೊಸ ಕಾನೂನುಗಳ ಬಗ್ಗೆ ಸರಿಯಾದ ತಿಳುವಳಿಕೆಯನ್ನು ಹೊಂದಿರುತ್ತಾರೆ ಮತ್ತು ಸರಿಯಾದ ರೀತಿಯಲ್ಲಿ ಆತ್ಮ ವಿಶ್ವಾಸವನ್ನೂ ತೋರಿಸುತ್ತಾರೆ.

ಭಾರತ ಸರ್ಕಾರದ ಪೊಲೀಸ್ ಸಂಶೋಧನೆ ಮತ್ತು ಅಭಿವೃದ್ಧಿ ಬ್ಯೂರೋ ತರಬೇತುದಾರರಿಗೆ ತರಬೇತಿ ನೀಡಲು ಕಾರ್ಯಕ್ರಮ ರೂಪಿಸಿದೆ. ವಿವಿಧ ಸ್ತರಗಳಿಗೆ ಸೇರಿದ ಪೊಲೀಸ್ ಮತ್ತು ಜೈಲು ಸಿಬ್ಬಂದಿಗೆ ಈ ತರಬೇತಿಯನ್ನು ಯೋಜಿಸಲಾಗಿದೆ. ಸಂಯೋಜಿತ ಸರ್ಕಾರಿ ಆನ್‌ಲೈನ್ ತರಬೇತಿ ವೇದಿಕೆಯಲ್ಲಿ ಅನುಗುಣವಾದ ಪಠ್ಯಕ್ರಮಗಳನ್ನು ಅಪ್‌ಲೋಡ್ ಮಾಡಲಾಗಿದೆ.

ದೇಶದಾದ್ಯಂತ ಪೊಲೀಸ್ ತರಬೇತಿ ಶಾಲೆಗಳಲ್ಲಿ ವಿಶೇಷ ಶಿಬಿರಗಳನ್ನು ನಡೆಸಲು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಹೊಸ ಕ್ರಿಮಿನಲ್ ಕಾನೂನುಗಳ ಕುರಿತು ಆನ್‌ಲೈನ್ ಕೋರ್ಸ್‌ಗಳನ್ನು ಪೊಲೀಸ್ ಸಂಶೋಧನೆ ಮತ್ತು ಅಭಿವೃದ್ಧಿ ಬ್ಯೂರೋ ಕಳುಹಿಸಿದೆ ಎಂದು” ಅದರಲ್ಲಿ ಹೇಳಲಾಗಿದೆ.

ಕ್ರೈಂ ರಿಪೋರ್ಟ್ಸ್

ಡಿ.ಸಿ.ಪ್ರಕಾಶ್ ಸಂಪಾದಕರು

ರಾಜ್ಯದಲ್ಲಿ ಲೋಕಸಭಾ ಚುನಾವಣೆ ಬೆನ್ನಲ್ಲೇ ಕೋಮು ಘರ್ಷಣೆ, ಹಲ್ಲೆ, ಕೊಲೆ ಪ್ರಕರಣಗಳು ಹೆಚ್ಚಾಗುತ್ತಿವೆ. ಇತ್ತೀಚೆಗೆ ಬೆಂಗಳೂರಿನಲ್ಲಿ ರಾಮನವಮಿ ದಿನದಂದು ಜೈ ಶ್ರೀರಾಂ ಘೋಷಣೇ ಕೂಗಿದ್ದವರ ಮೇಲೆ ಹಲ್ಲೆ ಮಾಡಲಾಗಿತ್ತು. ಆರೋಪಿಗಳು ತಪ್ಪೊಪ್ಪಿಕೊಂಡಿದ್ದರು. ಬಳಿಕ ನೇಹಾ ಹತ್ಯೆಯಾಗಿದೆ. ಇದೀಗ ಯಾದಗಿರಿಯಲ್ಲಿ ಮುಸ್ಲಿಂ ಯುವಕನಿಂದ ದಲಿತ ಯುವಕನ ಹತ್ಯೆ ಮಾಡಲಾಗಿದೆ ಎಂದು ವರದಿಯಾಗಿದೆ.

ಹುಬ್ಬಳ್ಳಿಯಲ್ಲಿ ನಡೆದ ನೇಹಾ ಕೊಲೆ ಪ್ರಕರಣದ ಕಹಿ ನೆನಪು ಇನ್ನೂ ಮಾಸಿಲ್ಲ. ಸರ್ಕಾರ ಪ್ರಕರಣವನ್ನು ಸಿಐಡಿಗೆ ವರ್ಗಾಯಿಸಿದೆ. ಅದುಮಾತ್ರವಲ್ಲ, ವಿಚಾರಣೆಯನ್ನು ತ್ವರಿತಗತಿಯಲ್ಲಿ ಮುಗಿಸಿ ಆರೋಪಿಗೆ ಶಿಕ್ಷೆ ಕೊಡಿಸುವ ಸಲುವಾಗಿ ವಿಶೇಷ ನ್ಯಾಯಾಲಯವನ್ನು ಸ್ಥಾಪಿಸುವುದಾಗಿಯೂ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಅಷ್ಟರಲ್ಲಾಗಲೇ, ಯಾದಗಿರಿಯ ಶಗಾಪುರಪೇಟೆ ಬಡಾವಣೆಯಲ್ಲಿ ಮುಸ್ಲಿಂ ಯುವಕನೊಬ್ಬ ದಲಿತ ಯುವಕನನ್ನು ಹತ್ಯೆ ಮಾಡಿದ್ದಾನೆ. ರಾಕೇಶ್ (22) ಕೊಲೆಯಾದ ಯುವಕ. ರೊಟ್ಟಿ ಕೇಂದ್ರದ ಸದಸ್ಯ ಫಯಾಜ್ ಸೇರಿದಂತೆ ನಾಲ್ವರು ಕೃತ್ಯ ಎಸಗಿದ್ದಾರೆ.

ನಿನ್ನೆ ರಾತ್ರಿ ರೊಟ್ಟಿ ಕೇಂದ್ರಕ್ಕೆ ರೊಟ್ಟಿ ತರಲು ರಾಕೇಶ್ ಹೋಗಿದ್ದ. ಇದೇ ವೇಳೆ ರೊಟ್ಟಿ ಕೇಂದ್ರದ ಫಯಾಜ್ ಜೊತೆ ಜಗಳವಾಗಿದೆ. ರಾಕೇಶ್ ಮನೆಗೆ ಮರಳಿದ ನಂತರ ಮತ್ತೆ ಜಗಳವಾಗಿದ್ದು, ಈ ವೇಳೆ ರಾಕೇಶ್​ನ ಮರ್ಮಾಂಗಕ್ಕೆ ಒದ್ದು ಕೊಲೆ ಮಾಡಿರುವ ಆರೋಪ ಮಾಡಲಾಗಿದೆ.

ಮೇಲಿನ ಎರಡೂ ಪ್ರಕರಣಗಳಲ್ಲಿ, ಕೊಲೆ ಮಾಡಿದವರು ಯಾರೇ ಆಗಿದ್ದರು ಕಾನೂನಿನಡಿಯಲ್ಲಿ ಶಿಕ್ಷೆ ಆಗಲಿದೆ. ಕಾನೂನಿಗೆ ಹಿಂದೂ, ಮುಸ್ಲಿಂ, ಕ್ರೈಸ್ತ, ದಲಿತ ಎಂಬ ಭೇದಭಾವ ಇರುವುದಿಲ್ಲ. ಇದರಲ್ಲಿ ಜಾತಿ, ಧರ್ಮ ಬೆರಸುವುದೇಕೆ? ಅಮಾಯಕರ ಸಾವು ನೋವುಗಳ ಮೇಲೆ ರಾಜಕೀಯ ಲೆಕ್ಕಾಚಾರ ಮಾಡುತ್ತಿರುವ ನಾಚಿಕೆಗೆಟ್ಟ ರಾಜಕೀಯ ವ್ಯವಸ್ಥೆಯನ್ನು ಬದಿಗೊತ್ತಿ ಮಾನವೀಯತೆಗೆ ಆದ್ಯತೆ ಕೊಡಿ.

ಪ್ರತಿಭಾರಿಯೂ ಹಿಂದೂ-ಮುಸ್ಲಿಂ ಎಂದು ದ್ವೇಶಕಾರುತ್ತಿರುವ ಕೋಮು ಮನಸ್ಥಿತಿಯ ಮತಾಂಧ ಶಕ್ತಿಗಳು, ಇದೀಗ ದಲಿತ-ಮುಸ್ಲಿಂ ಎಂಬ ಹೊಸ ವರೆಸೆಯನ್ನು ಕೈಗೆತ್ತಿಕೊಂಡಿದೆ. ಪ್ರತಿಯೊಂದನ್ನೂ ಹಿಂದೂ-ಮುಸ್ಲಿಂ ಹಿನ್ನಲೆಯಿಂದಲೇ ನೋಡುವ ಕಾಮಾಲೆ ಕಣ್ಣುಗಳಿಗೆ ರಾಕೇಶ್ ಹಿಂದೂ ಯುವಕ ಎಂದು ಏಕೆ ಗೊತ್ತಾಗುತ್ತಿಲ್ಲ.

ಚುನಾವಣೆ ಸಂದರ್ಭದಲ್ಲಿ ನಡೆದಿರುವ ವೈಯಕ್ತಿಕ ಕೊಲೆಗಳನ್ನು ರಾಜಕೀಯ ಗೊಳಿಸುತ್ತಿರುವ ಮತಾಂಧ ಶಕ್ತಿಗಳು, ರಾಕೇಶ್ ಕೊಲೆಯನ್ನು ದಲಿತ-ಮುಸ್ಲಿಂ ಬಾಂಧವ್ಯವನ್ನು ಹಾಳುಗೆಡವಲು ಬಳಸುತ್ತಿದೆ ಎಂದು ಅನುಮಾನ ವ್ಯಕ್ತವಾಗುತ್ತಿದೆ. ದಲಿತರು ಮತ್ತು ಅಲ್ಪಸಂಖ್ಯಾತರು ಇಂತಹ ಕುತಂತ್ರಗಳಿಗೆ ಬಲಿಯಾಗಬಾರದು. ಅದೇ ಸಂದರ್ಭದಲ್ಲಿ, ದಲಿತ ಯುವಕ ರಾಕೇಶನ ಸಾವಿಗೆ ನ್ಯಾಯ ಸಿಗಬೇಕು; ಫಯಾಜ್ ಮತ್ತು ಇತರರಿಗೆ ಶಿಕ್ಷೆ ಆಗಲೇಬೇಕು. ಇದು ನಮ್ಮ ಒತ್ತಾಯ!

ಕ್ರೈಂ ರಿಪೋರ್ಟ್ಸ್

ಬೆಂಗಳೂರು: ಬೆಂಗಳೂರಿನ ಜನಪ್ರಿಯ ‘ರಾಮೇಶ್ವರಂ ಕೆಫೆ’ಯಲ್ಲಿ ನೆನ್ನೆ ನಡೆದ ಬಾಂಬ್ ಸ್ಫೋಟದ ಶಂಕಿತ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು  ಇಂದು ಬಿಡುಗಡೆಗೊಳಿಸಿದ್ದಾರೆ.

ಬೆಂಗಳೂರಿನ ‘ವೈಟ್ ಫೀಲ್ಡ್’ ಪ್ರದೇಶದಲ್ಲಿರುವ ‘ರಾಮೇಶ್ವರಂ ಕೆಫೆ’ಯಲ್ಲಿ ನಿನ್ನೆ ಮಧ್ಯಾಹ್ನ ಬಾಂಬ್ ಸ್ಫೋಟಗೊಂಡಿತ್ತು. ಘಟನೆಯಲ್ಲಿ 3 ಮಹಿಳೆಯರು ಸೇರಿದಂತೆ 10 ಮಂದಿ ಗಾಯಗೊಂಡಿದ್ದರು. ಮಾಹಿತಿ ತಿಳಿದ ಡಿಜಿಪಿ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು.

ಅಲ್ಲದೆ ಆ ಪ್ರದೇಶದಲ್ಲಿನ ಸಿಸಿಟಿವಿ ಕ್ಯಾಮೆರಾಗಳನ್ನೂ ಪರಿಶೀಲಿಸಲಾಯಿತು. ಹಲವು ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು 4 ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಈ ಹಿನ್ನಲೆಯಲ್ಲಿ, ಪೊಲೀಸರು ಘಟನೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಇಂದು ಬಿಡುಗಡೆ ಮಾಡಿದ್ದಾರೆ. ಅದರಲ್ಲಿ ಸ್ಫೋಟಕ್ಕೆ ಕಾರಣವಾದ ಶಂಕಿತ ವ್ಯಕ್ತಿಯ ಫೋಟೋವನ್ನು ಸೇರಿಸಲಾಗಿದೆ.  ಮುಖಕ್ಕೆ ಮಾಸ್ಕ್ ಹಾಕಿಕೊಂಡು, ಕನ್ನಡಕ, ಟೋಪಿ ಹಾಕಿಕೊಂಡು ತಿರುಗಾಡುತ್ತಿರುವ ಮತ್ತು ಸ್ಫೋಟಕ್ಕೂ ಮುನ್ನ ಹೊಟೇಲ್‌ಗೆ ತೆರಳುವ ವೇಳೆ ಬ್ಯಾಗ್‌ ಇಟ್ಟು ಅಲ್ಲಿಂದ ತೆರಳುವ ದೃಶ್ಯಗಳು ಅದರಲ್ಲಿ ದಾಖಲಾಗಿರುತ್ತವೆ. ಪೊಲೀಸರು ಆತನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಏತನ್ಮಧ್ಯೆ, ಪ್ರಮುಖ ಆರೋಪಿಯನ್ನು ಬಂಧಿಸಲಾಗಿದೆ ಎಂದು ದೃಢೀಕರಿಸದ ವರದಿಗಳು ರಾರಾಜಿಸುತ್ತಿವೆ. ಆದರೆ, ಪೊಲೀಸರು ಇದನ್ನು ಖಚಿತಪಡಿಸಿಲ್ಲ.

ಕ್ರೈಂ ರಿಪೋರ್ಟ್ಸ್ ದೇಶ

ಹರಿಯಾಣದಲ್ಲಿ ನಿಗೂಢ ಗ್ಯಾಂಗ್ ನಡೆಸಿದ ಗುಂಡಿನ ದಾಳಿಯಲ್ಲಿ ರಾಜಕೀಯ ಪಕ್ಷದ ಮುಖಂಡರೊಬ್ಬರು ಸಾವನ್ನಪ್ಪಿರುವುದು ಅಲ್ಲಿ ಉದ್ವಿಗ್ನತೆಯನ್ನು ಸೃಷ್ಟಿಸಿದೆ!

ಚಂಡೀಗಢ: ಭಾರತೀಯ ರಾಷ್ಟ್ರೀಯ ಲೋಕದಳ ನಾಯಕ ಹಾಗೂ ಮಾಜಿ ಶಾಸಕ ನಫೆ ಸಿಂಗ್ ರಾಠಿ ಅವರನ್ನು ಹರಿಯಾಣದಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಬಹದ್ದೂರ್ ಎಂಬಲ್ಲಿ ಕಾರಿನಲ್ಲಿ ತೆರಳುತ್ತಿದ್ದಾಗ ನಿಗೂಢ ವ್ಯಕ್ತಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.

ಅವರ ಪಕ್ಷದ ಹಿರಿಯ ಮುಖಂಡ ಜೈಕಿಶನ್ ಕೂಡ ಗುಂಡಿನ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ. ಗಾಯಗೊಂಡಿದ್ದ ಇನ್ನೂ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇಬ್ಬರೂ ಚಿಂತಾಜನಕ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಮೀನು ವಿವಾದದಿಂದ ಈ ಗುಂಡಿನ ದಾಳಿ ನಡೆದಿರಬಹುದು ಎನ್ನಲಾಗಿದೆ.

ಹರಿಯಾಣದಲ್ಲಿ ನಿಗೂಢ ಗ್ಯಾಂಗ್ ನಡೆಸಿದ ಗುಂಡಿನ ದಾಳಿಯಲ್ಲಿ ರಾಜಕೀಯ ಪಕ್ಷದ ಮುಖಂಡರೊಬ್ಬರು ಸಾವನ್ನಪ್ಪಿರುವುದು ಅಲ್ಲಿ ಉದ್ವಿಗ್ನತೆಯನ್ನು ಸೃಷ್ಟಿಸಿದೆ.

ಕ್ರೈಂ ರಿಪೋರ್ಟ್ಸ್

ಬೆಂಗಳೂರು: ನಿಷೇಧಿತ ಭಯೋತ್ಪಾಧಕ ಸಂಘಟನೆಯಾದ ಐಎಸ್‌ಐಎಸ್‌ಗೆ ಬೆಂಬಲ್ ಸೂಚಿಸಿ, ಟ್ವಿಟ್ಟರ್ ಮೂಲಕ ಉಗ್ರ ಸಂಘಟನೆಗೆ ಸದಸ್ಯರನ್ನು ನೇಮಕಾತಿ ಮಾಡಿಕೊಳ್ಳುತ್ತಿದ್ದ ಆರೋಪಿಗೆ 10 ವರ್ಷ ಕಾರಾಗೃಹ ಶಿಕ್ಷೆ ಮತ್ತು 2,15,000/- ರೂ ದಂಡ ವಿಧಿಸಿದ ವಿಶೇಷ ನ್ಯಾಯಾಲಯ!

2014ರಲ್ಲಿ ಐಎಸ್‌ಐಎಸ್‌ ಎಂಬುವ ನಿಷೇಧಿತ ಭಯೋತ್ಪಾಧಕ ಸಂಘಟನೆಯು ಅಬೂಬಕ್ಕರ್ ಬಾಗ್ದಾದಿ ಎಂಬಾತನ ನೇತೃತ್ವದಲ್ಲಿ ಸಿರಿಯಾ ದೇಶದಲ್ಲಿ ಭಯೋತ್ಪಾದಕ ಕೃತ್ಯವನ್ನು ನಡೆಸುತ್ತಾ ಆ ದೇಶದ ಮೇಲೆ ಯುದ್ಧ ಸಾರಿದ್ದು, ಆ ಸಮಯದಲ್ಲಿ, ಪಶ್ಚಿಮ ಬಂಗಾಳ ಮೂಲದ ಮೆಹದಿ ಮೆಸ್ರೂಸ್ ಬಿಸ್ವಾಸ್ ಎಂಬಾತನು ಬೆಂಗಳೂರು ನಗರದ ಗಂಗಮ್ಮನಗುಡಿ ಪೊಲೀಸ್ ಠಾಣೆಯ ಸರಹದ್ದಿನ ಅಪಾರ್ಟ್ ಮೆಂಟ್ ಒಂದರಲ್ಲಿ ವಾಸಮಾಡಿಕೊಂಡು, “SAMY WITNESS” ಎಂಬುವ ಟ್ವಿಟ್ಟರ್ ಖಾತೆಯ ಮೂಲಕ ಐಎಸ್‌ಐಎಸ್‌ ಉಗ್ರರಿಗೆ ಬೆಂಬಲವನ್ನು ಸೂಚಿಸುತ್ತಾ, ಐಎಸ್‌ಐಎಸ್ ಸಂಘಟನೆಗೆ ಹಲವಾರು ಸದಸ್ಯರನ್ನು ನೇಮಕಾತಿ ಮಾಡಿಕೊಳ್ಳುವ ಕಾರ್ಯದಲ್ಲಿ ತೊಡಗಿಕೊಂಡಿದ್ದನು.

ಈ ಕುರಿತು ಖಚಿತ ಮಾಹಿತಿ ಸಂಗ್ರಹಿಸಿದ್ದ ಬೆಂಗಳೂರು ನಗರ ಕೇಂದ್ರ ಅಪರಾಧ ವಿಭಾಗದ ಅಧಿಕಾರಿ ಮತ್ತು ಸಿಬ್ಬಂಧಿಗಳು ದಾಳಿ ಮಾಡಿ, ಆರೋಪಿ ಮೆಹದಿ ಮೆಸ್ರೂರ್ ಬಿಸ್ವಾಸ್‌ನನ್ನು ದಸ್ತಗಿರಿ ಮಾಡಿರುತ್ತಾರೆ. ಈ ಬಗ್ಗೆ ಗಂಗಮ್ಮನಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಈ ಪ್ರಕರಣ ತನಿಖೆಯನ್ನು ಸಿಸಿಬಿ ಘಟಕದ ಹಿಂದಿನ ಸಹಾಯಕ ಪೊಲೀಸ್ ಕಮೀಷನರ್ ಎಂ.ಕೆ.ತಿಮ್ಮಯ್ಯ ಮತ್ತು ಅವರ ತಂಡದವರು ಕೈಗೊಂಡು, ಆರೋಪಿಯು ಕೃತ್ಯಕ್ಕೆ ಉಪಯೋಗಿಸುತ್ತಿದ್ದ ಲ್ಯಾಪ್‌ಟ್ಯಾಪ್ ಹಾಗೂ ಇನ್ನಿತರ ಎಲೆಕ್ಟ್ರಾನಿಕ್ ವಸ್ತುಗಳಿಂದ ಆರೋಪಿತನು ಕೃತ್ಯವೆಸಗಿರುವ ಬಗ್ಗೆ ಸಾವಿರಾರು ಪುಟಗಳ ದಾಖಲೆಗಳನ್ನು ಸಂಗ್ರಹಿಸಿ, ಅಮೆರಿಕಾ ದೇಶದಲ್ಲಿರುವ ಟ್ವಿಟ್ಟರ್ ಸಂಸ್ಥೆಯಿಂದ ದಾಖಲಾತಿಗಳನ್ನು ಸಂಗ್ರಹಿಸುತ್ತಾರೆ.

ನಂತರ ಈ ಪ್ರಕರಣದಲ್ಲಿ ವಿಶೇಷ ಎನ್‌ಐಎ ನ್ಯಾಯಾಲಯಕ್ಕೆ (ಸಿಸಿಹೆಚ್-50) ಸುಮಾರು 37 ಸಾವಿರ ಪುಟಗಳ ದಾಖಲಾತಿಗಳನ್ನೊಳಗೊಂಡ ದೋಷಾರೋಪಣ ಪಟ್ಟಿ ಸಲ್ಲಿಸಿದ್ದು, ವಿಶೇಷ ನ್ಯಾಯಾಲಯದಲ್ಲಿ, ಪ್ರಕರಣ ಸಂಖ್ಯೆ: ಎಸ್.ಸಿ. ನಂ.272/2016 ರಲ್ಲಿ ವಿಚಾರಣೆ ನಡೆದು ದಿನಾಂಕ: 25.01.2024 ರಂದು ಆರೋಪಿತನಿಗೆ 10 ವರ್ಷ ಕಾರಾಗೃಹ ಶಿಕ್ಷೆ ಮತ್ತು 2 ಲಕ್ಷ 15 ಸಾವಿರ ರೂಪಾಯಿಗಳು ದಂಡ ವಿಧಿಸಿರುತ್ತದೆ.

ಈ ಪ್ರಕರಣವು ದೇಶದಲ್ಲಿಯೇ ಐಎಸ್‌ಐಎಸ್‌ ಭಯೋತ್ಪಾದಕ ಸಂಘಟನೆಯ ವಿರುದ್ಧ ದಾಖಲಾಗಿದ್ದ ಮೊದಲ ಪ್ರಕರಣವಾಗಿರುವುದು ಗಮನಾರ್ಹ.

ಈ ಪ್ರಕರಣದಲ್ಲಿ ಎಸಿಪಿ ಎಂ.ಕೆ.ತಮ್ಮಯ್ಯ ತನಿಖಾಧಿಕಾರಿಗಳಾಗಿದ್ದು, ನ್ಯಾಯಾಲಯದಲ್ಲಿ ವಿಶೇಷ ಸಾರ್ವಜನಿಕ ಅಭಿಯೋಜಕರಾದ ಬಿಕ್ಕಣ್ಣನವರ್ ಸರ್ಕಾರದ ಪರವಾಗಿ ವಾದವನ್ನು ಮಂಡಿಸಿದ್ದರು. ಈ ಪ್ರಕರಣವನ್ನು ಭಯೋತ್ಪಾದಕ ನಿಗ್ರಹ ದಳದ (ಎಟಿಸಿ) ಎಸಿಪಿ ಬಿ.ಆರ್.ವೇಣುಗೋಪಾಲ್ ಹಾಗೂ ಅವರ ತಂಡದವರು ನ್ಯಾಯಾಲಯದ ದಿನನಿತ್ಯದ ಪ್ರಕ್ರಿಯೆಗಳ ಮೇಲ್ವಿಚಾರಣೆ ನಡೆಸಿ, ಈ ಪ್ರಕರಣದಲ್ಲಿ ಆರೀಪಿತನಿಗೆ ಶಿಕ್ಷೆ ಕೊಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿರುತ್ತಾರೆ.