ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
Kannada News Archives » Page 9 of 13 » Dynamic Leader
October 23, 2024
Home Posts tagged Kannada News (Page 9)
ರಾಜಕೀಯ

ಡಿ.ಸಿ.ಪ್ರಕಾಶ್ ಸಂಪಾದಕರು

ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು 135 ಸ್ಥಾನಗಳನ್ನು ಗೆದ್ದು, ಆಡಳಿತ ನಡೆಸುತ್ತಿದ ಬಿಜೆಪಿ ಸರ್ಕಾರವನ್ನು ಅಧಿಕಾರದಿಂದ ಕೆಳೆಗಿಳಿಸಿತು. ನಂತರ ಮೇ 20 ರಂದು ಸಿದ್ದರಾಮಯ್ಯನವರು ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ಅವರೊಂದಿಗೆ ಡಿ.ಕೆ.ಶಿವಕುಮಾರ್ ಉಪ ಮುಖ್ಯಮಂತ್ರಿಯಾಗಿ ಹಾಗೂ 8 ಜನ ಶಾಸಕರು ಸಚಿವರಾಗಿ ಅಧಿಕಾರ ಸ್ವೀಕರಿಸಿಕೊಂಡರು.

ಮುಂದುವರಿದು, ಮೇ 22 ರಿಂದ 24 ರವರೆಗೆ 3 ದಿನಗಳ ಕಾಲ ಕರ್ನಾಟಕ ವಿಧಾನಸಭೆ ಅಧಿವೇಶನ ನಡೆಯಿತು. ಇದರಲ್ಲಿ ನೂತನ ಶಾಸಕರುಗಳು ಪ್ರಮಾಣವಚನ ಸ್ವೀಕರಿಸಿಕೊಂಡರು. ಮೇ 24 ರಂದು  ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ದೆಹಲಿಗೆ ತೆರಳಿದರು.

ದೆಹಲಿಯಲ್ಲಿ ಅಖಿಲ ಭಾರತ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ಕರ್ನಾಟಕ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಅವರನ್ನು ಭೇಟಿ ಮಾಡಿ ಸಚಿವ ಸಂಪುಟ ವಿಸ್ತರಣೆ ಕುರಿತು ಚರ್ಚೆ ನಡೆಸಲಾಯಿತು.

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇಬ್ಬರೂ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯನ್ನು ಅವರ ನಿವಾಸದಲ್ಲಿ ಪ್ರತ್ಯೇಕವಾಗಿ ಭೇಟಿಯಾದರು. ಒಟ್ಟು ಶಾಸಕರ ಪೈಕಿ ಶೇ.15ರಷ್ಟು ಶಾಸಕರಿಗೆ ಸಚಿವ ಸ್ಥಾನ ನೀಡಬಹುದು ಎಂಬುದು ನಿಯಮ. ಅದರಂತೆ ಕರ್ನಾಟಕದಲ್ಲಿ 224 ಶಾಸಕರಿರುವುದರಿಂದ 34 ಮಂದಿ ಸಚಿವರಾಗಬಹುದು. ಈ ಪೈಕಿ 10 ಹುದ್ದೆಗಳು ಈಗಾಗಲೇ ಅಧಿಕಾರ ವಹಿಸಿಕೊಂಡಿದ್ದು, 24 ಹುದ್ದೆಗಳು ಖಾಲಿ ಉಳಿದಿವೆ.

ಈ ಹಿನ್ನಲೆಯಲ್ಲಿ ನೂತನವಾಗಿ ನೇಮಕಗೊಂಡಿರುವ 24 ಸಚಿವರ ಪಟ್ಟಿಯನ್ನು ಕಾಂಗ್ರೆಸ್ ವರಿಷ್ಠರು ನಿನ್ನೆ ರಾತ್ರಿ ಬಿಡುಗಡೆ ಮಾಡಿದರು. ಇದರ ಬೆನ್ನಲ್ಲೇ ಇಂದು ಕರ್ನಾಟಕ ಸಚಿವ ಸಂಪುಟ ವಿಸ್ತರಣೆ ನಡೆದಿದೆ. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ನೂತನ ಸಚಿವರಿಗೆ ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣ ವಚನ ಬೋಧಿಸಿದರು.

ನೂತನ ಸಚಿವರಾಗಿ ದಿನೇಶ್ ಗುಂಡೂರಾವ್ (ಗಾಂಧಿನಗರ), ಈಶ್ವರ್ ಖಂಡ್ರೆ (ಭಾಲ್ಕಿ), ಲಕ್ಷ್ಮೀ ಹೆಬ್ಬಾಳ್ಕರ್ (ಬೆಳಗಾವಿ ಗ್ರಾಮೀಣ), ಶಿವಾನಂದ ಪಾಟೀಲ್ (ಬಸವನ ಬಾಗೇವಾಡಿ), ಶರಣಬಸಪ್ಪ ದರ್ಶನಾಪುರ (ಶಹಾಪುರ), ಎಚ್.ಸಿ.ಮಹದೇವಪ್ಪ (ಟಿ.ನರಸೀಪುರ), ಕೆ.ವೆಂಕಟೇಶ್ (ಪಿರಿಯಾಪಟ್ಟಣ), ಎಸ್.ಎಸ್.ಮಲ್ಲಿಕಾರ್ಜುನ್ (ದಾವಣಗೆರೆ), ಭೈರತಿ ಸುರೇಶ್ (ಹೆಬ್ಬಾಳ), ಕೃಷ್ಣ ಬೈರೇಗೌಡ (ಬ್ಯಾಟರಾಯನಪುರ),

ರಹೀಂ ಖಾನ್ (ಬೀದರ್ ಉತ್ತರ), ಡಾ.ಎಂ.ಸಿ.ಸುಧಾಕರ್ (ಚಿಂತಾಮಣಿ), ಡಿ.ಸುಧಾಕರ್ (ಹಿರಿಯೂರು), ಎಚ್.ಕೆ.ಪಾಟೀಲ್ (ಗದಗ), ಚೆಲುವರಾಯಸ್ವಾಮಿ (ನಾಗಮಂಗಲ), ಕೆ.ಎನ್.ರಾಜಣ್ಣ (ಮಧುಗಿರಿ), ಸಂತೋಷ್ ಲಾಡ್ (ಕಲಘಟಗಿ), ಮಧು ಬಂಗಾರಪ್ಪ (ಸೊರಬ), ಮಂಕಾಳ ವೈದ್ಯ (ಭಟ್ಕಳ), ಶಿವರಾಜ್ ತಂಗಡಕಿ (ಕನಕಗಿರಿ), ಆರ್.ಬಿ.ತಿಮ್ಮಾಪುರ (ಮುಧೋಳ), ಡಾ.ಶರಣಪ್ರಕಾಶ್ ಪಾಟೀಲ (ಸೇಡಂ), ಎನ್.ಎಸ್.ಬೋಸರಾಜು (ಮಾನ್ವಿ), ಬಿ.ನಾಗೇಂದ್ರ (ಬಳ್ಳಾರಿ ಉಪನಗರ) ಸ್ಥಾನ ಸ್ವೀಕರಿಸಿದರು.

ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಶಾಸಕರು, ವಿರೋಧ ಪಕ್ಷದ ನಾಯಕರು ಸೇರಿದಂತೆ ಪ್ರಮುಖರು ಭಾಗವಹಿಸಿದ್ದರು. ಇಂದು ಸಂಜೆ ವೇಳೆಗೆ ಸಚಿವರಿಗೆ ಖಾತೆ ಹಂಚಿಕೆಯಾಗುವ ನಿರೀಕ್ಷೆ ಇದೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ 2 ಪ್ರಮುಖ ಖಾತೆಗಳು ಸಿಗಬಹುದು ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ಈ ಸರ್ಕಾರದ ಮೇಲೆ ಜನರು ಹೆಚ್ಚಿನ ನಿರೀಕ್ಷೆಯನ್ನು ಇಟ್ಟಿದ್ದಾರೆ. ಕಾರಣ ಕೊಟ್ಟಿರುವ ವಾಗ್ದಾನಗಳು ಆ ರೀತಿಯಾಗಿದೆ. ಚುನಾವಣೆ ಮುಗಿದು 17 ದಿನಗಳು ಕಳೆದೋಗಿದೆ. ಸರ್ಕಾರ ಅಸ್ತಿತ್ವಕ್ಕೆ ಬಂದು ಒಂದು ವಾರಗಳು ಆಗಿವೆ. ವಿರೋಧಪಕ್ಷಗಳು “ಕರೆಂಟ್ ಬಿಲ್ ಕಟ್ಟಬೇಡಿ; ಬಸ್ ಟಿಕೆಟ್ ತೆಗೆಯಬೇಡಿ” ಎಂದು ಜನರನ್ನು ಸರ್ಕಾರದ ವಿರುದ್ಧ ಎತ್ತಿಕಟ್ಟುತ್ತಿದ್ದಾರೆ. ಆದ್ದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಬಹುಮತ ಸರ್ಕಾರ ಹಾಗೂ ಪೂರ್ಣವಾದ ಮಂತ್ರಿಮಂಡಲ ಇನ್ನು ಕಾಲವಿಳಂಬ ಮಾಡದೆ, ಬೇಗನೆ ಟೇಕಪ್ ಆದರೆ, ಅದು ಸರಕಾರಕ್ಕೆ ಒಳ್ಳೆಯದು; ಜನರಿಗೂ ಒಳ್ಳೆಯದು!

ದೇಶ

ಎಲಾನ್ ಮಸ್ಕ್ ಅವರ ನ್ಯೂರಾಲಿಂಕ್ ಸಂಸ್ಥೆಯು ಮಾನವನ ಮೆದುಳಿನಲ್ಲಿ “ಚಿಪ್” ಅನ್ನು ಅಳವಡಿಸಿ, ಅದನ್ನು ಕಂಪ್ಯೂಟರ್‌ಗೆ ಜೋಡಿಸುವ ತಂತ್ರಜ್ಞಾನದ ಮೂಲಕ ನರ ಸಂಬಂಧಿ ಕಾಯಿಲೆಗಳಿಗೆ ವೈದ್ಯಕೀಯ ನೆರವು ನೀಡುವ ಸಂಶೋಧನೆ ನಡೆಸುತ್ತಿದೆ.

ನರರೋಗದಿಂದ ಬಳಲುತ್ತಿರುವವರು, ಪಾರ್ಶ್ವವಾಯು ಮತ್ತು ದೃಷ್ಟಿಹೀನತೆ ಹೊಂದಿದವರು ಸ್ಮಾರ್ಟ್‌ಫೋನ್‌ ಮತ್ತು ಕಂಪ್ಯೂಟರ್‌ಗಳಂತಹ ಸ್ಮಾರ್ಟ್ ಡಿವೈಸ್‌ಗಳನ್ನು ಸುಲಭವಾಗಿ ಬಳಸಬೇಕೆಂಬ ಉದ್ದೇಶದಿಂದ ಅವರ ಮಿದುಳಿಗೆ ಮೈಕ್ರೋಚಿಪ್ ಅಳವಡಿಸುವ ಸಂಶೋಧನೆಯಲ್ಲಿ ತೊಡಗಿದೆ. ಈ ಮೂಲಕ ಕಣ್ಣಿನ ದೃಷ್ಟಿ ಮತ್ತು ಪಾರ್ಶ್ವವಾಯು ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸುತ್ತಿದೆ.

‘ಮಂಗಗಳ ಮಿದುಳಿಗೆ ‘ಚಿಪ್’ ಅಳವಡಿಸಿ ನಡೆಸಿದ ಬಹು ಹಂತದ ಪ್ರಯೋಗವು ಯಶಸ್ವಿಯಾಗಿದೆ’ ಎಂದು ಪ್ರಕಟಿಸಿದೆ. ಇದರ ಬಗ್ಗೆ ನ್ಯೂರಾಲಿಂಕ್ ಸಂಸ್ಥೆ ಮಾಡಿದ ಅಧ್ಯಯನ ವರದಿಯನ್ನು ಅಮೆರಿಕ ಆಹಾರ ಮತ್ತು ಔಷಧ ಕಾರ್ಯಾಲಯಕ್ಕು ಸಲ್ಲಿಸಿ, ಮುಂದುವರಿದು ಮಾನವರ ಮೇಲೆ ಸಂಶೋಧನೆ ನಡೆಸಲು ಅನುಮತಿ ಕೋರಿದೆ.

ಎಲಾನ್ ಮಸ್ಕ್

ಈ ಹಿನ್ನಲೆಯಲ್ಲಿ ಮಾನವನ ಮೆದುಳಿಗೆ ಮೈಕ್ರೋಚಿಪ್ ಅಳವಡಿಸುವ ಅಧ್ಯಯನಕ್ಕೆ ಅಮೆರಿಕ ಸರ್ಕಾರ ಅನುಮತಿ ನೀಡಿದೆ. ಈ ಅನುಮೋದನೆಗಾಗಿ ನ್ಯೂರಾಲಿಂಕ್ ಸಂಸ್ಥೆಯು ಈ ಹಿಂದೆ ಹಲವು ಬಾರಿ ಅಮೆರಿಕ ಸರ್ಕಾರಕ್ಕೆ ಅರ್ಜಿ ಸಲ್ಲಿಸಿತ್ತು; ಆದರೆ, ಅವುಗಳನ್ನು ನಿರಾಕರಿಸುತ್ತಲೇ ಬಂದ ಅಮೆರಿಕ ಇದೀಗ ಅನುಮೋದನೆಯನ್ನು ನೀಡಿದೆ.

ಈ ನಿಟ್ಟಿನಲ್ಲಿ, ನ್ಯೂರಾಲಿಂಕ್ ತನ್ನ ಟ್ವಿಟರ್ ಪುಟದಲ್ಲಿ, “ನಮ್ಮ ತಂತ್ರಜ್ಞಾನವು ಒಂದು ದಿನ ಅನೇಕ ಜನರಿಗೆ ಹೇಗೆ ಸಹಾಯ ಮಾಡುತ್ತದೆ ಎಂಬುದರ ಕಡೆಗೆ ಇದು ಪ್ರಮುಖ ಮೊದಲ ಹೆಜ್ಜೆಯಾಗಿದೆ” ಎಂದು ಹೇಳಿದೆ. ನ್ಯೂರಾಲಿಂಕ್ ತಂಡವು ಮಾಡಿದ ನಿರ್ಣಾಯಕ ಕೆಲಸದಿಂದಾಗಿ ಅಮೆರಿಕ ಆಹಾರ ಮತ್ತು ಔಷಧ ಆಡಳಿತವು ಈ ಅನುಮೋದನೆಯನ್ನು ನೀಡಿದೆ” ಎಂದು ಅಮೆರಿಕ ಹೇಳಿಕೊಂಡಿದೆ.

ಬ್ಲೂಟೂತ್ ಮೂಲಕ ಮೆದುಳಿನಿಂದ ಎಲೆಕ್ಟ್ರಾನಿಕ್ ಸಾಧನಗಳಿಗೆ ಮಾಹಿತಿಯನ್ನು ಕಳುಹಿಸುವ ಪ್ರಯೋಗದಲ್ಲಿ ಭಾಗವಹಿಸುವವರ ದಾಖಲಾತಿ ಕುರಿತು ಹೆಚ್ಚಿನ ಮಾಹಿತಿಯನ್ನು ಶೀಘ್ರದಲ್ಲೇ ನೀಡುವುದಾಗಿ ಕಂಪನಿ ಹೇಳಿದೆ. ನ್ಯೂರಾಲಿಂಕ್ ಕೆಲವು ತಿಂಗಳುಗಳಲ್ಲಿ ಪ್ರಯೋಗವನ್ನು ಪ್ರಾರಂಭಿಸಲು ಸಿದ್ಧವಾಗಿದೆ.      

Elon Musk Ncuralink Human Brain America Government 

ಶಿಕ್ಷಣ

ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಮತ್ತೆ ಅಧಿಕಾರಕ್ಕೆ ಬಂದಾಗ, ಅದು ಹೆಣ್ಣುಮಕ್ಕಳ ಶಿಕ್ಷಣವನ್ನು ನಿಷೇಧಿಸಿತು. ಉಲ್ಲಂಘಿಸುವವರಿಗೆ ಕಠಿಣ ಶಿಕ್ಷೆಯ ಎಚ್ಚರಿಕೆಯನ್ನೂ ನೀಡಿತು.

ಈ ಹಿನ್ನಲೆಯಲ್ಲಿ 2021ರಲ್ಲಿ ಚೆನ್ನೈ ಐಐಟಿಯಲ್ಲಿ ಎಂ.ಟೆಕ್ ಪ್ರವೇಶ ಪರೀಕ್ಷೆ ಬರೆದು, ಫಲಿತಾಂಶಕ್ಕಾಗಿ ಕಾಯುತ್ತಿದ್ದ ದೇಶದ ವಿದ್ಯಾರ್ಥಿ ಬೆಹಿಸ್ತಾ ತಾಲಿಬಾನಿಗಳ ಕೈಗೆ ಸಿಕ್ಕಿಬಿದ್ದಳು. ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾದ ನಂತರವೂ ಬೆಹಿಸ್ತಾ ಕಾಲೇಜು ಸೇರಲು ಸಾಧ್ಯವಾಗಲಿಲ್ಲ. ಮೂಲಭೂತವಾದಿ ಪ್ರತಿಗಾಮಿ ನೀತಿಗಳನ್ನು ಪ್ರತಿಪಾದಿಸುವ ತಾಲಿಬಾನ್‌ಗಳು ಅವರನ್ನು ಗೃಹ ಬಂಧನದಲ್ಲಿ ಇರಿಸಿದರು.

ಆದರೆ ವಿದ್ಯಾರ್ಥಿಯು ಎಂದಿಗೂ ತನ್ನ ಆತ್ಮವಿಶ್ವಾಸವನ್ನು ಕಳೆದುಕೊಳ್ಳದೆ, ತನ್ನ ಎಲ್ಲಾ ಸೆಮಿಸ್ಟರ್‌ಗಳನ್ನು ಅಲ್ಲಿಂದಲೇ ಆನ್‌ಲೈನ್‌ ಮೂಲಕ ಪೂರ್ಣಗೊಳಿಸಿದಳು. ಪ್ರಸ್ತುತ ಚೆನ್ನೈನ ಐಐಟಿಯಲ್ಲಿ ಎಂಟೆಕ್ ಕೋರ್ಸ್ ಪೂರ್ಣಗೊಳಿಸಿದ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳಲ್ಲಿ ಬೆಹಿಸ್ತಾ ಕೂಡ ಒಬ್ಬರಾಗಿ ಸಾಧನೆ ಮಾಡಿದ್ದಾರೆ.

ಈ ಬಗ್ಗೆ ಮಾತನಾಡಿದ ವಿದ್ಯಾರ್ಥಿನಿ, ‘ತಾಲಿಬಾನ್ ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡಾಗ ನಾನು ರಾಸಾಯನಿಕ ಎಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿಗಾಗಿ ಚೆನ್ನೈ ಐಐಟಿಯನ್ನು ಆಯ್ಕೆ ಮಾಡಿಕೊಂಡಿದ್ದೆ. ನಂತರ ನಾನು ಸಂದರ್ಶನದಲ್ಲಿ ಉತ್ತೀರ್ಣನಾಗಿದ್ದೇನೆ ಎಂಬ ಮಾಹಿತಿ ಸಿಕ್ಕಿತು. ಆದರೆ ತಾಲಿಬಾನಿಗಳ ಹಿಡಿತದಲ್ಲಿದ್ದ ಕಾರಣ ನಾನು ತಕ್ಷಣ ಚೆನ್ನೈಗೆ ಮರಳಲು ಸಾಧ್ಯವಾಗಲಿಲ್ಲ. ಈ ಬಗ್ಗೆ ಕಾಲೇಜಿಗೆ ಇಮೇಲ್ ಮೂಲಕ ತಿಳಿಸಿದ್ದೆ. ಪ್ರೊ.ರಘು ಅವರು ಈ ವಿಚಾರದಲ್ಲಿ ನನಗೆ ಸಹಾಯ ಮಾಡಿದರು.

ನಂತರ ನನ್ನ ಅಧ್ಯಯನವನ್ನು ಆನ್‌ಲೈನ್ ಮೂಲಕ ಮುಂದುವರಿಸಿದೆ. ಮೊದಲ ಎರಡು ಸೆಮಿಸ್ಟರ್‌ಗಳಿಗೆ ನಾನು ತುಂಬಾ ಕಷ್ಟಪಟ್ಟೆ. ನಾನು ಈಗಾಗಲೇ ಅಫ್ಘಾನಿಸ್ತಾನದಲ್ಲಿ ಬಿ.ಟೆಕ್ ಮುಗಿಸಿದ್ದೇನೆ. ಇಲ್ಲಿ ಅಧ್ಯಯನದ ಮೂಲಕ ಪಡೆದ ಜ್ಞಾನಕ್ಕೆ ಹೋಲಿಸಿದರೆ ಚೆನ್ನೈ ಐಐಟಿಯಲ್ಲಿ ಸಾಕಷ್ಟು ವಿಷಯಗಳನ್ನು ಕಲಿತಿದ್ದೇನೆ. ಅಫ್ಘಾನಿಸ್ತಾನದಲ್ಲಿ ಅಂತಹ ಶಿಕ್ಷಣ ವ್ಯವಸ್ಥೆಯ ಅಗತ್ಯವಿದೆ ಎಂದು ನಾನು ಭಾವಿಸುತ್ತೇನೆ. ಐ.ಐ.ಟಿ. ಮಾದರಿಯ ಉತ್ತಮ ಗುಣಮಟ್ಟವನ್ನು ನನ್ನ ದೇಶಕ್ಕೆ ತರಲು ನಾನು ಬಯಸುತ್ತೇನೆ. ನನ್ನನ್ನು ನಿರ್ಬಂಧಿಸಿದ್ದರಿಂದ ನಾನು ಇನ್ನೊಂದು ಮಾರ್ಗವನ್ನು ಕಂಡುಕೊಂಡೆ. ತಾಲಿಬಾನ್ ಬಗ್ಗೆ ನನಗೆ ಕನಿಕರವಿದೆ. ಅಧಿಕಾರವಿದೆ ಎಂಬುದಕ್ಕಾಗಿ ಆಟವಾಡುತ್ತಿದ್ದಾರೆ’ ಎಂದರು.

ಈಗಾಗಲೇ ಅಫ್ಘಾನಿಸ್ತಾನದಲ್ಲಿ ದೇಶದ ಮಾತೃಭಾಷೆಯಲ್ಲಿ ವ್ಯಾಸಂಗ ಮಾಡಿರುವ ಬೆಹಿಸ್ತಾ, ಇಂಗ್ಲಿಷ್ ಕಲಿತು ಪ್ರಸ್ತುತ ಆನ್‌ಲೈನ್‌ನಲ್ಲಿ ಎಂ.ಟೆಕ್ ಮಾಡಿ ಉತ್ತೀರ್ಣರಾಗಿರುವುದು ದೊಡ್ಡ ಸಾಧನೆ ಎಂದು ಪರಿಗಣಿಸಲಾಗಿದೆ. ಪ್ರೊ.ರಘು ಮಾತನಾಡಿ, ‘ವಿದ್ಯಾರ್ಥಿ ಬೆಹಿಸ್ತಾ ಈಗ ಇಂಗ್ಲಿಷ್‌ನಲ್ಲಿ ನಿರರ್ಗಳವಾಗಿ ಮಾತನಾಡುತ್ತಿದ್ದಾಳೆ. ವಿದ್ಯಾರ್ಥಿಯು ರಾತ್ರಿಯಲ್ಲಿ ನಾಲ್ಕೈದು ಗಂಟೆಗಳ ಕಾಲ ಮಾತ್ರ ವಿಶ್ರಾಂತಿ ಪಡೆಯುತ್ತಿದ್ದಳು. ಉಳಿದ ಸಮಯವನ್ನು ವಿದ್ಯಾಭ್ಯಾಸದಲ್ಲಿಯೇ ಕಳೆದಳು’ ಎಂದರು.

ರಾಜಕೀಯ

ಡಿ.ಸಿ.ಪ್ರಕಾಶ್ ಸಂಪಾದಕರು

2014ರಲ್ಲಿ ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷ ಅಧಿಕಾರಕ್ಕೆ ಬಂದಿತ್ತು. ಅಂದಿನಿಂದ ಕೇಂದ್ರ ಸರ್ಕಾರವು ದೆಹಲಿ ಸರ್ಕಾರದ ನಿರ್ಧಾರಗಳಲ್ಲಿ ನಿರಂತರವಾಗಿ ಹಸ್ತಕ್ಷೇಪ ಮಾಡುತ್ತಾ ಬರುತ್ತಿದೆ. ಇದರಿಂದಾಗಿ ಕೇಂದ್ರ ಸರ್ಕಾರ ಮತ್ತು ದೆಹಲಿ ಸರ್ಕಾರದ ನಡುವೆ ಸಂಘರ್ಷ ಏರ್ಪಟ್ಟಿದೆ. ಮತ್ತು 2019ರಲ್ಲಿ ನ್ಯಾಯಾಧೀಶ ಅಶೋಕ್ ಭೂಷಣ್ ಅವರ ಪೀಠವು “ದೆಹಲಿ ಸರ್ಕಾರಕ್ಕೆ ಯಾವುದೇ ಅಧಿಕಾರವಿಲ್ಲ” ಎಂದು ತೀರ್ಪು ನೀಡಿತ್ತು. ತರುವಾಯ, ಕೇಂದ್ರ ಸರ್ಕಾರದ ಅಧಿಕಾರದ ವಿರುದ್ಧ ಆಮ್ ಆದ್ಮಿ ಪಕ್ಷದ ಪರವಾಗಿ ಸುಪ್ರೀಂ ಕೋರ್ಟ್‌ನಲ್ಲಿ ಮೊಕದ್ದಮೆ ಹೂಡಲಾಯಿತು.

ಈ ಪ್ರಕರಣದಲ್ಲಿ ಸಾಂವಿಧಾನಿಕ ಪೀಠದ 5 ನ್ಯಾಯಮೂರ್ತಿಗಳು ಇತ್ತೀಚೆಗೆ ಸರ್ವಾನುಮತದ ತೀರ್ಪು ನೀಡಿದರು. ನ್ಯಾಯಮೂರ್ತಿಗಳ ತೀರ್ಪಿನಲ್ಲಿ, ‘‘2019ರಲ್ಲಿ ನ್ಯಾಯಮೂರ್ತಿ ಅಶೋಕ್ ಭೂಷಣ್ ಅವರ ಪೀಠ ನೀಡಿದ ತೀರ್ಪಿಗೆ ಒಮ್ಮತವಿಲ್ಲ; ಜನರ ಹಿತವನ್ನು ಈಡೇರಿಸಲಿಕ್ಕಾಗಿಯೇ ಕಾನೂನುಗಳನ್ನು ಅಂಗೀಕರಿಸುವ ಅಧಿಕಾರವನ್ನು ಶಾಸಕಾಂಗ ಸಭೆಗಳಿಗೆ ನೀಡಲಾಗಿದೆ.

ಇದು ಕೇಂದ್ರಾಡಳಿತ ಪ್ರದೇಶವಾಗಿದ್ದರೂ, ದೆಹಲಿ ಸರ್ಕಾರ ಒಕ್ಕೂಟದ ವ್ಯವಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತದೆ. ಪ್ರಜಾಪ್ರಭುತ್ವ ಮತ್ತು ಒಕ್ಕೂಟದ ನೀತಿ ಎಂದರೆ ನಮ್ಮ ರಾಜಕೀಯ ಶಾಸನದ ಮೂಲಭೂತ ರಚನೆಯ ಅಂಗ. ಕೆಲವು ನಿರ್ದಿಷ್ಟ ಅಂಶಗಳಲ್ಲಿ ಮಾತ್ರ ಕೇಂದ್ರ ಸರ್ಕಾರವು ಮಧ್ಯ ಪ್ರವೇಶಿಸುವ ಅಧಿಕಾರವನ್ನು ಹೊಂದಿರುತ್ತದೆ. ಅಧಿಕಾರಿಗಳು, ಸಚಿವರ ಆದೇಶವನ್ನು ಕಾರ್ಯಗತಗೊಳಿಸುವುದನ್ನು ತಡೆದರೆ, ಜಂಟಿ ಹೊಣೆಗಾರಿಕೆಗೆ ತೊಂದರೆಯಾಗುತ್ತದೆ.

ವಿಧಾನಸಭೆಯ ಅಧಿಕಾರಕ್ಕೆ ಹೊರಗೆ ಇರುವ ಕೆಲವು ಅಂಶಗಳಲ್ಲಿ ಮಾತ್ರ ಲೆಫ್ಟಿನೆಂಟ್ ಗವರ್ನರ್ ಮಧ್ಯೆ ಪ್ರವೇಶಿಸಬಹುದು. ಜನರ ಆಯ್ಕೆಯನ್ನು ಪ್ರತಿನಿಧಿಸುವ ಅಧಿಕಾರವನ್ನು ಶಾಸನಸಭೆಗೆ ನೀಡಲಾಗಿದೆ. ಪ್ರಜಾಪ್ರಭುತ್ವ ಸರ್ಕಾರದಲ್ಲಿ ಆಡಳಿತದ ಅಧಿಕಾರ, ಜನರಿಂದ ಆಯ್ಕೆಯಾದವರೊಂದಿಗೆ ಮಾತ್ರ ಇರಬೇಕು. ದೆಹಲಿಯಲ್ಲಿ ಲೆಫ್ಟಿನೆಂಟ್ ಗವರ್ನರ್‌ಗಿಂತ ಮುಖ್ಯಮಂತ್ರಿಗೆ ಹೆಚ್ಚಿನ ಅಧಿಕಾರವಿದೆ” ಎಂದು ಹೇಳಿದೆ.

ಆದರೆ, ಸುಪ್ರೀಂ ಕೋರ್ಟ್‌ನ ಈ ಐತಿಹಾಸಿಕವಾದ ತೀರ್ಪನ್ನು ರದ್ದುಗೊಳಿಸುವ ಸಲುವಾಗಿ, ಕೇಂದ್ರ ಸರ್ಕಾರ ದೆಹಲಿಯ ಅಧಿಕಾರವನ್ನು ಲೆಫ್ಟಿನೆಂಟ್ ಗವರ್ನರ್‌ಗೆ ನೀಡುವ ತುರ್ತು ಕಾನೂನನ್ನು ರಾತ್ರೋರಾತ್ರಿ ಜಾರಿಗೆ ತಂದಿದೆ. ಜನರಿಂದ ಆಯ್ಕೆಯಾದ ಶಾಸಕಾಂಗಕ್ಕೆ ಅಧಿಕಾರ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದ ಹಿನ್ನಲೆಯಲ್ಲಿ, ‘ಯಾವುದೇ ಶಾಸಕಾಂಗ ಅಥವಾ ನ್ಯಾಯಾಲಯವು ಆದೇಶವನ್ನು ಬದಲಾಯಿಸಲು ಸಾಧ್ಯವಿಲ್ಲ’ ಎಂಬ ಷರತ್ತಿನೊಂದಿಗೆ ಕೇಂದ್ರ ಸರ್ಕಾರ ತುರ್ತು ಕಾನೂನನ್ನು ಜಾರಿಗೆ ತಂದಿದೆ.

ಮುಂದಿನ 6 ತಿಂಗಳೊಳಗೆ ಸಂಸತ್ತಿನ ಉಭಯ ಸದನಗಳು ಅಂಗೀಕರಿಸಿದರೆ ಮಾತ್ರ ಈ ಸುಗ್ರೀವಾಜ್ಞೆ ಕಾನೂನಾಗಲಿದೆ. ಈ ಹಿನ್ನಲೆಯಲ್ಲಿ ದೆಹಲಿಯ ಆಮ್ ಆದ್ಮಿ ಸರ್ಕಾರವು ಈ ಕಾನೂನನ್ನು ಜಾರಿಗೆ ತರದಂತೆ ತಡೆಯಲು ಪ್ರಯತ್ನಿಸುತ್ತಿದೆ. ಲೋಕಸಭೆಯಲ್ಲಿ ಬಿಜೆಪಿ ಬಹುಮತ ಹೊಂದಿದ್ದರೆ, ರಾಜ್ಯಸಭೆಯಲ್ಲಿ ಪ್ರತಿಪಕ್ಷಗಳು ಬಹುಮತವನ್ನು ಹೊಂದಿವೆ.

ಇದರಿಂದಾಗಿ ವಿರೋಧ ಪಕ್ಷಗಳ ಬೆಂಬಲ ಪಡೆಯಲು ದೆಹಲಿ ಸರ್ಕಾರ ತೀವೃತೆಯನ್ನು ತೋರುತ್ತಿದೆ. ಇದಕ್ಕಾಗಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಪ್ರತಿಪಕ್ಷ ನಾಯಕರನ್ನು ಭೇಟಿ ಮಾಡಿ ಬೆಂಬಲ ಕೋರುತ್ತಿದ್ದಾರೆ. ಅವರು ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ ಮತ್ತು ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರನ್ನು ಭೇಟಿಯಾಗಿ ಬೆಂಬಲ ಕೋರಿದ್ದಾರೆ. ಇದೀಗ ಎನ್‌ಸಿಪಿ ನಾಯಕ ಶರದ್ ಪವಾರ್ ಅವರನ್ನು ಭೇಟಿಮಾಡಿ ಬೆಂಬಲ ಕೋರಿದ್ದಾರೆ. ಬಳಿಕ ಮಾತನಾಡಿದ ಅರವಿಂದ್ ಕೇಜ್ರಿವಾಲ್, “ರಾಜ್ಯಸಭೆಯಲ್ಲಿ ತುರ್ತು ಕಾಯ್ದೆಯನ್ನು ಸೋಲಿಸಿದರೆ, ಅದುವೇ 2024ರ ಲೋಕಸಭೆ ಚುನಾವಣೆಗೆ ಸೆಮಿಫೈನಲ್ ಪಂದ್ಯ ಆಗಲಿದೆ. 2024ರಲ್ಲಿ ಮೋದಿ ಮತ್ತೆ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಎಂಬ ಸಂದೇಶ ಇದಾಗಿರುತ್ತದೆ” ಎಂದು ಹೇಳಿದರು.

   

ರಾಜಕೀಯ

ಬೆಂಗಳೂರು: ಬಿಜೆಪಿ ಮಾಜಿ ಮುಖಂಡ ಅಣ್ಣಾದೊರೈ ಅವರು, ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ವಿರುದ್ಧ ಕೊಯಮತ್ತೂರು ಪೊಲೀಸ್ ಕಮಿಷನರ್ ಕಚೇರಿಯಲ್ಲಿ ದೂರು ದಾಖಲಿಸಿದ್ದಾರೆ. ಬಿಜೆಪಿಯ ಸ್ಥಳೀಯಾಡಳಿತ ಅಭಿವೃದ್ಧಿ ವಿಭಾಗದ ಕಾರ್ಯದರ್ಶಿಯಾಗಿದ್ದ ಅಣ್ಣಾದೊರೈ ಅವರನ್ನು 4 ದಿನಗಳ ಹಿಂದೆ ಪಕ್ಷದಿಂದ ಉಚ್ಚಾಟಿಸಲಾಗಿತ್ತು. ಈ ಹಿನ್ನಲೆಯಲ್ಲಿ ಕೊಯಮತ್ತೂರು ಪೊಲೀಸ್ ಕಮಿಷನರ್ ಕಚೇರಿ ಎದುರು ಅಣ್ಣಾದೊರೈ ಸುದ್ದಿಗಾರರನ್ನು ಭೇಟಿ ಮಾಡಿದರು.

“ನಾನು ಚೆನ್ನೈ, ಪಾಂಡಿಚೇರಿ ಮತ್ತು ಕೊಯಮತ್ತೂರಿನಲ್ಲಿ ‘ಪಳೆಯ ಸೋರು ಡಾಟ್ ಕಾಮ್’ ಅನ್ನು ನಡೆಸುತ್ತಿದ್ದೇನೆ. ಕೊಯಮತ್ತೂರಿನ ಕಟ್ಟಡ ಮಾಲೀಕರೊಂದಿಗೆ ನಮಗೆ ಸಮಸ್ಯೆ ಇತ್ತು, ಆದ್ದರಿಂದ ನಾವು ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದೇವೆ. ನಾನು ಬಿಜೆಪಿಯಲ್ಲಿದ್ದೇನೆ ಎಂಬ ಕಾರಣಕ್ಕೆ ಕಟ್ಟಡ ಮಾಲೀಕರು ಅಣ್ಣಾಮಲೈ ಅವರ ಬಳಿ ಮಾತನಾಡಿದ್ದಾರೆ. ಅಣ್ಣಾಮಲೈ ಆದೇಶದ ಮೇರೆಗೆ ಬಿಜೆಪಿ ಜಿಲ್ಲಾಧ್ಯಕ್ಷರು, ‘ಪಳೆಯ ಸೋರು ಡಾಟ್ ಕಾಮ್’ ನಡೆಸುತ್ತಿದ್ದ ನನ್ನ ಕಚೇರಿಯ ಬೀಗವನ್ನು ಒಡೆದು, ಒಳಗಿದ್ದ ಸಾಮಾನುಗಳನ್ನು ಕದ್ದು, ಬಿಜೆಪಿ ಧ್ವಜ ನೆಟ್ಟು, ಸೇವಾ ಕೇಂದ್ರ ಎಂಬ ಬೋರ್ಡನ್ನು ಹಾಕಿದ್ದಾರೆ.

ಬಿಜೆಪಿಯವರು ಈ ರೀತಿ ಅನ್ಯಾಯ ಮಾಡುತ್ತಾರೆ ಎಂದು ಗೊತ್ತಿದ್ದರೆ ನಾನು ಈ ಪಕ್ಷಕ್ಕೆ ಸೇರುತ್ತಿರಲಿಲ್ಲ. ಸ್ವಪಕ್ಷದ ಕಾರ್ಯಕರ್ತರನ್ನು ಕರೆದು ಪ್ರಶ್ನಿಸದೆ, ಪಕ್ಷದ ಕಾರ್ಯಕರ್ತರಿಂದಲೇ ಕೊಲೆ ಬೆದರಿಕೆ ಹಾಕುತ್ತಿದ್ದಾರೆ. ನಾನು ಮಾಲೀಕನಿಗೆ ಹಣ ಪಾವತಿಸುವುದಾಗಿಯೇ ಇರಲಿ, ಪ್ರಕರಣ ನ್ಯಾಯಾಲಯದಲ್ಲಿರುವಾಗ ಕಚೇರಿಯ ಪೀಠೋಪಕರಣಗಳನ್ನು ಒಡೆದು ಖಾಲಿ ಮಾಡುವುದು ಯಾವ ನ್ಯಾಯ? ನನ್ನನ್ನು ಬಿಜೆಪಿಯಿಂದ ಉಚ್ಚಾಟಿಸಿರುವ ವಿಷಯ ನಿನ್ನೆ ಬೆಳಗ್ಗೆಯಷ್ಟೇ ತಿಳಿದು ಬಂದಿತು. ಅಣ್ಣಾಮಲೈ ಇದರಲ್ಲಿ ನೇರವಾಗಿ ಭಾಗವಾಗಿದ್ದಾರೆ. ಆದ್ದರಿಂದಲೇ ಅವರ ವಿರುದ್ಧ ದೂರು ದಾಖಲಿಸಿದ್ದೇನೆ. ಎಲ್ಲರ ಮೇಲೂ FIR ದಾಖಲು ಮಾಡುವಂತೆ ಪೊಲೀಸ್ ಅಧಿಕಾರಿಯ ಬಳಿ ಮನವಿ ಮಾಡಿದ್ದೇನೆ” ಎಂದರು.

ರಾಜಕೀಯ

“ರಾಷ್ಟ್ರಪತಿಗೆ ನೀಡಿರುವ ಸಾಂವಿಧಾನಿಕ ಹಕ್ಕನ್ನು ನಿರಾಕರಿಸುತ್ತದೆ ಒಬ್ಬ ಮನುಷ್ಯನ ದುರಹಂಕಾರ” ಎಂದು ಕಾಂಗ್ರೆಸ್ ಅಪಾದಿಸಿದೆ. ಈ ಕುರಿತು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಮಾಡಿರುವ ಟ್ವೀಟ್ ನಲ್ಲಿ, “ನಿನ್ನೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಾಂಚಿಯ ಜಾರ್ಖಂಡ್ ಹೈಕೋರ್ಟ್ ಸಂಕೀರ್ಣದಲ್ಲಿ ದೇಶದ ಅತಿದೊಡ್ಡ ನ್ಯಾಯಾಂಗ ಸಂಕೀರ್ಣವನ್ನು ಉದ್ಘಾಟಿಸಿದರು. ರಾಷ್ಟ್ರಪತಿಗೆ ನೀಡಿರುವ ಸಾಂವಿಧಾನಿಕ ಹಕ್ಕನ್ನು ಒಬ್ಬ ವ್ಯಕ್ತಿಯ ದುರಹಂಕಾರವು ನಿರಾಕರಿಸಿದೆ. ನೂತನ ಸಂಸತ್ ಭವನವನ್ನು ಉದ್ಘಾಟಿಸುವ ಹಕ್ಕು ರಾಷ್ಟ್ರಪತಿಗಳಿಗೆ ಇದೆ.

ಒಬ್ಬ ವ್ಯಕ್ತಿಯ ಸ್ವಯಂ ಪ್ರಚಾರದ ದುರಾಸೆಯಿಂದ ಆದಿವಾಸಿ ಸಮುದಾಯದ ಪ್ರಥಮ ಪ್ರಜೆಯ ಹಕ್ಕುನ್ನು ಕಸಿದುಕೊಳ್ಳಲಾಗಿದೆ. ರಾಷ್ಟ್ರಪತಿಗಳಿಗೆ ಪ್ರಧಾನಿ ಅವಮಾನ ಮಾಡಿದ ಹಿನ್ನೆಲೆಯಲ್ಲಿ 20 ಪಕ್ಷಗಳು ಸಂಸತ್ತಿನ ಉದ್ಘಾಟನೆಯನ್ನು ಬಹಿಷ್ಕರಿಸುವುದಾಗಿ ಘೋಷಿಸಿವೆ. ಕಾಂಗ್ರೆಸ್, ಎಡ ಪಕ್ಷಗಳು, ಟಿಎಂಸಿ, ಎಸ್‌ಪಿ ಮತ್ತು ಆಮ್ ಆದ್ಮಿ ಪಕ್ಷ ಸೇರಿದಂತೆ 19 ವಿರೋಧ ಪಕ್ಷಗಳು ಜಂಟಿಯಾಗಿ ಬಹಿಷ್ಕಾರವನ್ನು ಘೋಷಿಸಿವೆ. ಪ್ರಜಾಪ್ರಭುತ್ವದ ಆತ್ಮವು ಹೀರಿಕೊಂಡಾಗ ಹೊಸ ಕಟ್ಟಡದಲ್ಲಿ ಯಾವುದೇ ಮೌಲ್ಯವನ್ನು ಕಾಣಲಾಗದು ಎಂದು ಅವರು ಬಣ್ಣಿಸಿದ್ದಾರೆ.

ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರು ನೂತನ ಸಂಸತ್ ಭವನವನ್ನು ಉದ್ಘಾಟಿಸದಿದ್ದರೆ ತಮ್ಮ ಪಕ್ಷ ಪಾಲ್ಗೊಳ್ಳುವುದಿಲ್ಲ ಎಂದು ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಹೇಳಿದ್ದಾರೆ. 19 ವಿರೋಧ ಪಕ್ಷಗಳ ಜಂಟಿ ಹೇಳಿಕೆಯಲ್ಲಿ, ರಾಷ್ಟ್ರಪತಿ ದ್ರೌಪದಿ ಮುರ್ಮುವನ್ನು ಸಂಪೂರ್ಣವಾಗಿ ಪಕ್ಕಕ್ಕೆ ಇರಿಸಿ, ನೂತನ ಸಂಸತ್ ಭವನವನ್ನು ತಾವೇ ಉದ್ಘಾಟಿಸವ ಪ್ರಧಾನಿ ಮೋದಿಯ ನಿರ್ಧಾರ, ಗಂಭೀರ ಅವಮಾನ ಮಾತ್ರವಲ್ಲ ನಮ್ಮ ಪ್ರಜಾಪ್ರಭುತ್ವದ ಮೇಲಿನ ನೇರ ದಾಳಿ” ಎಂದು ಅವರು ತಮ್ಮ ಟ್ವಿಟ್ಟರ್ ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದಾರೆ.

ಸಿನಿಮಾ

ವರದಿ: ಅರುಣ್ ಜಿ.,

ಅರವತ್ತಕ್ಕೂ ಹೆಚ್ಚು ಚಿತ್ರಗಳಿಗೆ ಸಂಕಲನಕಾರರಾಗಿ ಕೆಲಸ ಮಾಡಿರುವ ಹಾಗೂ ಸೀಯು, ಫ್ಲಾಪ್ ಡೈರೆಕ್ಟರ್, ಕರ್ತ ಮೊದಲಾದ ಚಿತ್ರಗಳನ್ನು ನಿರ್ದೇಶಿಸಿರುವ ದುರ್ಗಾ ಪಿ.ಎಸ್. ಅವರ ನಿರ್ದೇಶನದ ಮತ್ತೊಂದು ಚಿತ್ರ  ದಿಗ್ವಿಜಯ. ಒಬ್ಬ  ವರದಿಗಾರ ಮನಸು ಮಾಡಿದ್ರೆ ಸಮಾಜದ ಎಷ್ಟೇ ದೊಡ್ಡ ಸಮಸ್ಯೆಯನ್ನಾದರೂ ಬಗೆಹರಿಸಬಹುದು ಎಂದು ಈ ಚಿತ್ರದಲ್ಲಿ ಹೇಳಲಾಗಿದೆ.  ವರದಿಗಾರನೊಬ್ಬ ಹುಚ್ಚನನ್ನು ಇಟ್ಟುಕೊಂಡು ಕೇವಲ ಮೂರು ದಿನದಲ್ಲಿ ರಾಜ್ಯದ ಎಲ್ಲಾ ರೈತರ ಸಾಲವನ್ನು  ಮನ್ನಾ ಮಾಡಿಸುತ್ತಾನೆ. ಅದು ಹೇಗೆ ಎನ್ನುವುದೇ ಈ ಚಿತ್ರದ ಕಥೆ. ನಾಯಕನ ತಂದೆ ತಾಯಿ ಕೂಡ ರೈತರೇ ಆಗಿದ್ದು, ಅವರೂ ಸಾಲಬಾಧೆಯಿಂದಲೇ ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಬೆಳೆನಷ್ಠ ಅನುಭವಿಸಿ, ತಂದೆ ತಾಯಿ ವಿಷ ಸೇವಿಸಿದ ಶಾಕ್ ನಿಂದ ನಾಯಕನ ಗೆಳೆಯ ಹುಚ್ಚನಾಗಿರುತ್ತಾನೆ.

ಜೆ.ಪಿ. ಎಂಟರ್‌ಟೈನ್‌ಮೆಂಟ್ ನಿರ್ಮಾಣದ ಈ ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ ಯಾವುದೇ ಕಟ್ ಇಲ್ಲದ ‘ಯು’ ಸರ್ಟಿಫಿಕೇಟ್ ದೊರೆತಿದೆ. ಗೋವಾ ಫಿಲಂ ಫೆಸ್ಟಿವಲ್‌ನಲ್ಲಿ ಈ ಚಿತ್ರಕ್ಕೆ 2 ಅವಾರ್ಡ್ ಬಂದಿದೆ. ಜೂನ್ ತಿಂಗಳಲ್ಲಿ ಬಿಡುಗಡೆಯಾಗಲಿರುವ ಈ ಚಿತ್ರವನ್ನು ಜಯಪ್ರಭು ಆರ್.ಲಿಂಗಾಯತ್. ಅರುಣ್ ಸುಕದರ್. ಹರೀಶ್ ಆರ್.ಸಿ ಅವರು  ನಿರ್ಮಾಣ ಮಾಡಿದ್ದಾರೆ. ಕಥೆ-ಚಿತ್ರಕಥೆ-ಸಂಭಾಷಣೆ-ಸಾಹಿತ್ಯ-ಸಂಕಲನ ಮತ್ತು ನಿರ್ದೇಶನ ದುರ್ಗಾ ಪಿ.ಎಸ್ ಅವರದು.

ಜಯಪ್ರಭು ಆತಗ. ಲಿಂಗಾಯತ್ ಚಿತ್ರದ ನಾಯಕನಾಗಿ ನಟಿಸಿದ್ದು,  ಸ್ನೇಹ ನಾಯಕಿಪಾತ್ರ ನಿರ್ವಹಿಸಿದ್ದಾರೆ. ಸುಚೇಂದ್ರ ಪ್ರಸಾದ್. ಪಟ್ರೆಬ ನಾಗರಾಜ್. ಹೊನ್ನವಳ್ಳಿ ಕೃಷ್ಣ. ಹೊನ್ನವಳ್ಳಿ ಶ್ರೀಕಾಂತ್. ಕಿಲ್ಲರ್ ವೆಂಕಟೇಶ್. ಶಿವಕುಮಾರ್ ಆರಾಧ್ಯ. ಮುಂತಾದವರು ಉಳಿದ ಪಾತ್ರಗಳಲ್ಲಿ ನಟಿಸಿದ್ದಾರೆ. ಬೆಂಗಳೂರು, ಮಂಡ್ಯ, ಮಂಗಳೂರು ಸುತ್ತಮುತ್ತ ಸುಮಾರು 30 ದಿನಗಳ ಕಾಲ ಚಿತ್ರಿಕರಣ ನೆಡೆಸಲಾಗಿದೆ. ಚಿತ್ರದಲ್ಲಿ 4 ಫೈಟ್, 5 ಹಾಡುಗಳಿದ್ದು ಹರ್ಷ ಸಂಗೀತ ನೀಡಿದ್ದಾರೆ. ಛಾಯಾಗ್ರಹಣ ವಿನಸ್ ಮೂರ್ತಿ. ಸಾಹಸ-ಸೂಪ್ಪರ್ ಸುಬ್ಬು. ಡ್ಯಾನ್ಸ್ ಮಾಸ್ಟರ್ ಜಗ್ಗು ಅವರದು.

ಸಿನಿಮಾ

ವರದಿ: ಅರುಣ್ ಜಿ.,

ಈ ಹಿಂದೆ ಉಪೇಂದ್ರ ಅವರ ನಿರ್ದೇಶನದಲ್ಲಿ ಮೂಡಿಬಂದಿದ್ದ ಓಂ, ಸ್ವಸ್ತಿಕ್, ಸೂಪರ್ ನಂಥ ಚಿತ್ರಗಳು ಮಾಡಿದ ದಾಖಲೆ ನಿಮಗೆಲ್ಲ ಗೊತ್ತೇ ಇದೆ. ಅದೇ ರೀತಿಯ ಟೈಟಲ್ ಇರುವ ಮತ್ತೊಂದು ಚಿತ್ರಕ್ಕೆ ಇತ್ತೀಚೆಗೆ ಚಾಲನೆ ದೊರೆತಿದೆ. ಅದರ ಹೆಸರು ಸ್ಟಾರ್. ನಕ್ಷತ್ರದ ಗುರುತನ್ನೇ ತಮ್ಮ ಚಿತ್ರದ ಶೀರ್ಷಿಕೆಯಾಗಿಟ್ಟುಕೊಂಡು, ಚಿತ್ರ ಮಾಡಲು ಹೊರಟಿರುವವರು ನಿರ್ಮಾಪಕ ಶರತ್; ಅವರೇ ಚಿತ್ರದ ಹೀರೋ ಕೂಡ. ಈ ಚಿತ್ರಕ್ಕೆ ಪತಿ, ಪತ್ನಿ ಜಂಟಿಯಾಗಿ ನಿರ್ದೇಶನ ಮಾಡುತ್ತಿದ್ದಾರೆ. ಶ್ರೀಮತಿ ಅನು ಹಾಗೂ ಮಂಜು ವಿಜಯಸೂರ್ಯ ಸೇರಿ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಶ್ರೀನಿವಾಸ ನಗರದ ಕೆಂಪೇಗೌಡ ಆಟದ ಮೈದಾನದಲ್ಲಿ ನಡೆದ ಈ ಚಿತ್ರದ ಮುಹೂರ್ತ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶಾಸಕ ರವಿ ಸುಬ್ರಮಣ್ಯ ಅವರು ಪ್ರಥಮ ದೃಶ್ಯಕ್ಕೆ ಕ್ಲಾಪ್ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಚಿತ್ರದ ನಾಯಕ ಹಾಗೂ ನಿರ್ಮಾಪಕರೂ ಆದ ಶರತ್ ಮಾತನಾಡಿ, “ನಮ್ಮ ತಂದೆ ಪ್ರಕಾಶ್ ಫೈಟರ್ ಆಗಿ ಚಿತ್ರರಂಗದಲ್ಲಿ ಕೆಲಸ ಮಾಡಿದ್ದಾರೆ. ಅದೇ ನಾನು ಚಿತ್ರರಂಗಕ್ಕೆ ಬರಲು ಕಾರಣ. ಈ ಹಿಂದೆ ನಾನು ‘ಪ್ಯಾಟಿ ಮಂದಿ ಕಾಡಿಗ್ ಬಂದ್ರು’ ಶೋನಲ್ಲಿ ಭಾಗವಹಿಸಿ ವಿನ್ನರ್ ಆಗಿದ್ದೆ, ಥೇಟರ್ ಹಿನ್ನಲೆಯೂ ನನಗಿದೆ. ಇದೊಂದು ರೌಡಿಸಂ ಬೇಸ್ ಸಬ್ಜೆಕ್ಟ್. ನಿರ್ದೇಶಕರು ತುಂಬಾ ಚೆನ್ನಾಗಿ ಪ್ಲಾನ್ ಮಾಡಿಕೊಂಡಿದ್ದಾರೆ. ವಿಭಿನ್ನವಾದ ಕಥೆ. ಕ್ಲೈಮ್ಯಾಕ್ಸ್ ನೋಡಿ ಹೊರ ಬರುವಾಗ ಎಂಥವರ ಕಣ್ಣಲ್ಲಾದರೂ ನೀರು ಬರುತ್ತದೆ. ಚಿತ್ರದಲ್ಲಿ ಒಂದಷ್ಟು ನೈಜ ಘಟನೆಗಳನ್ನು ಹೇಳಿದರೂ, ಯಾರ ಹೆಸರನ್ನೂ ಸಹ ಬಳಸಿಕೊಂಡಿಲ್ಲ” ಎಂದು ಹೇಳಿದರು.

  ನಂತರ ನಿರ್ದೇಶಕ ಮಂಜು ವಿಜಯಸೂರ್ಯ ಮಾತನಾಡಿ, “16 ವರ್ಷಗಳ ಹಿಂದೆ ನಾನು ಒಬ್ಬ ಲೈಟ್ ಬಾಯ್ ಆಗಿ ಸಿನಿ ಜರ್ನಿ ಆರಂಭಿಸಿ, ಬರವಣಿಗೆಯಲ್ಲೇ ಹೆಚ್ಚು ಸಮಯ ಕಳೆದೆ. ಈಗ ನಿರ್ದೇಶಕನಾಗುತ್ತಿದ್ದೇನೆ.  ನಮ್ಮ ಚಿತ್ರದ ಟೈಟಲ್ಲೇ ಕಥೆ ಹೇಳುತ್ತದೆ. ಇದು ಅಂಡರ್‌ ವರ್ಲ್ಡ್ ಸಬ್ಜೆಕ್ಟ್. ಹೀರೋಗೆ ನಾಯಕಿ ಹೇಗೆ ಬೆಂಬಲವಾಗಿ ನಿಲ್ತಾರೆ ಅಂತ ಹೇಳಿದ್ದೇವೆ. ನ್ಯಾಚುರಲ್ ಆದಂಥ ಫೈಟ್ಸ್ ಚಿತ್ರದಲ್ಲಿರುತ್ತವೆ. ಇದೊಂದು ಲೋಕಲ್ ಸಬ್ಜೆಕ್ಟ್ ಆಗಿರುವುದರಿಂದ ಬೆಂಗಳೂರಿನಲ್ಲೇ ಹೆಚ್ಚು ಭಾಗದ ಶೂಟಿಂಗ್ ಮಾಡುತ್ತೇವೆ. ಹೊಡೆದಾಟಕ್ಕಿಂತ ಹೆಚ್ಚಾಗಿ ಥ್ರಿಲ್ಲರ್ ಮೇಲೆ ಹೆಚ್ಚು ಫೋಕಸ್ ಮಾಡಿದ್ದೇವೆ. ಕ್ಯೂರಿಯಾಸಿಟಿ ಕ್ರಿಯೇಟ್ ಮಾಡಿಕೊಂಡು ಹೋಗುವ ಕಂಟೆಂಟ್” ಎಂದು ಹೇಳಿದರು.

ಚಿತ್ರದ ನಾಯಕಿಯಾಗಿ ನಟಿಸುತ್ತಿರುವ ನಟಿ ರಜತ ರಕ್ಷ ಮಾತನಾಡಿ, “ಈ ಹಿಂದೆ ಸದ್ದು, ವಿಚಾರಣೆ ನಡೆಯುತ್ತಿದೆ, ತಲವಾರ್ ಸೇರಿ ಮೂರು ಚಿತ್ರಗಳಲ್ಲಿ ನಟಿಸಿದ್ದೆ. ನಾಯಕಿಯಾಗಿ ಇದೇ ಮೊದಲ ಚಿತ್ರ. ನಾಯಕನಿಗೆ ಸಪೋರ್ಟ್ ಆಗಿರುವಂಥ ಪಾತ್ರ, ತುಂಬಾ ಚೆನ್ನಾಗಿದೆ” ಎಂದು ಹೇಳಿದರು. ಛಾಯಾಗ್ರಾಹಕ ಪ್ರವೀಣ್ ಎಂ.ಪ್ರಭು ಮಾತನಾಡಿ, “ಕಪಾಲ ನಂತರ ಮೂರನೇ ಚಿತ್ರ. ರಿಯಲಿಸ್ಟಿಕ್ ಆಗಿ ಸಿನಿಮಾವನ್ನು ಶೂಟ್ ಮಾಡೋಣ ಅಂತ ಪ್ಲಾನ್ ಮಾಡಿಕೊಂಡಿದ್ದೇನೆ. ನಿರ್ದೇಶಕರ ಜೊತೆ ಈ ಹಿಂದೆ ಶಾರ್ಟ್ ಫಿಲಂಸ್ ಮಾಡಿದ್ದೆ” ಎಂದರು. ಮತ್ತೊಬ್ಬ ನಿರ್ದೇಶಕಿ ಅನು ಮಾತನಾಡಿ, “ಸ್ಕ್ರಿಪ್ಟ್ ಕೆಲಸದಲ್ಲಿ ನಾನು ಜಾಸ್ತಿ ಇನ್‌ವಾಲ್ ಆಗಿದ್ದೇನೆ. ರಿಯಲಿಸ್ಟಿಕ್ ಆಗಿ ಚಿತ್ರವನ್ನು ತೆರೆಮೇಲೆ ತರಬೇಕು ಎಂದುಕೊಂಡಿದ್ದೇವೆ” ಎಂದರು. ಒಂದು ಪ್ಯಾಥೋ, ಒಂದು ಮಾಸ್ ಹಾಗೂ 2 ಲವ್ ಸಾಂಗ್ ಸೇರಿ ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ವಿಕಾಸ್ ವಸಿಷ್ಠ ಸಂಗೀತ ನೀಡುತ್ತಿದ್ದಾರೆ.

ಸಿನಿಮಾ

ವರದಿ: ಅರುಣ್ ಜಿ.,

ಇದು ಆಟೋ ಚಾಲಕರ ಬದುಕು ಹಾಗೂ ಸಾಧನೆಗಳ ಪರಿಚಯಿಸುವ ಅಪರೂಪದ ಕಾರ್ಯಕ್ರಮ.

“ನಮ್ಮೂರ ಮಂದಾರ ಹೂವೆ” ಚಿತ್ರದ ಮೂಲಕ ಬಾಲನಟನಾಗಿ ಚಿತ್ರರಂಗ ಪ್ರವೇಶಿಸಿದ ವಿನಾಯಕ ಜೋಶಿ, ಈತನಕ ಸುಮಾರು 85ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದಾರೆ. ನಟನಾಗಷ್ಟೇ ಅಲ್ಲದೆ, ವಿನಾಯಕ ಜೋಶಿ ಆರ್.ಜೆ ಹಾಗೂ ನಿರೂಪಕನಾಗೂ ಚಿರಪರಿಚಿತ.

ಪ್ರಸ್ತುತ ವಿನಾಯಕ ಜೋಶಿ, ತಮ್ಮದೇ ಆದ ಜೋಶಿ ಚಿತ್ರ ಲಾಂಛನದಲ್ಲಿ ‌”ಮೀಟರ್ ಹಾಕಿ ಪ್ಲೀಸ್ ” ಎಂಬ ವೆಬ್ ಸೀರಿಸ್ ನಿರ್ಮಾಣ ಮಾಡಿದ್ದಾರೆ. ನಿರ್ದೇಶನ ಹಾಗೂ ನಿರೂಪಣೆ ಕೂಡ ಅವರದೆ. ಇತ್ತೀಚೆಗೆ ಈ ವೆಬ್ ಸಿರೀಸ್ ಟ್ರೇಲರ್ ಬಿಡುಗಡೆ ಹಾಗೂ ಮೊದಲ ಸಂಚಿಕೆ ಪ್ರದರ್ಶನ ನಡೆಯಿತು.‌ ಅಮೋಘವರ್ಷ (ಗಂಧದಗುಡಿ ಖ್ಯಾತಿ), ಧರ್ಮೇಂದ್ರ ಕುಮಾರ್ ಮುಂತಾದವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಈ ವೆಬ್ ಸಿರೀಸ್ ಗೆ ಶುಭ ಕೋರಿದರು.

“ಬಾಲನಟನಾಗಿ ಬಂದ ನಾನು, ನಾಯಕನೂ ಆದೆ. ಆನಂತರ ವಿವಿಧ ಕ್ಷೇತ್ರಗಳಲ್ಲಿ ಸಕ್ರಿಯವಾದೆ. ಕೆಲವು ವರ್ಷಗಳ ಹಿಂದೆ “ಜೋಶ್ ಲೆ” ಎಂಬ ವೆಬ್ ಸಿರೀಸ್ ನಿರ್ಮಿಸಿದ್ದೆ. ಈಗ “ಮೀಟರ್ ಹಾಕಿ ಪ್ಲೀಸ್” ಎಂಬ ವಿಭಿನ್ನ ವೆಬ್ ಸಿರೀಸ್ ನಿರ್ಮಿಸುವುದರ ಜೊತೆಗೆ ನಿರ್ದೇಶನವನ್ನೂ ಮಾಡಿದ್ದೇನೆ. ಆಟೋ ಚಾಲಕರ ಜೀವನ ಹಾಗೂ ಸಾಧನೆಯನ್ನು ಪರಿಚಯಿಸುವ ವೆಬ್ ಸಿರೀಸ್ ಇದಾಗಿದೆ. ಸುಮಾರು ಏಳು ಕಂತುಗಳಲ್ಲಿ ಯೂಟ್ಯೂಬ್ ಹಾಗೂ Spotify ನಲ್ಲಿ ಇದು ಪ್ರಸಾರವಾಗಲಿದೆ. ಕರ್ನಾಟಕದಾದ್ಯಂತ ಇರುವ ಹತ್ತಕ್ಕೂ ಹೆಚ್ಚು ಜನಪ್ರಿಯ ಆಟೋಚಾಲಕರನ್ನು ಸಂದರ್ಶಿಸಿದ್ದೇನೆ.‌ 40 ನಿಮಿಷಗಳ ಕಾಲ ಈ ಕಾರ್ಯಕ್ರಮ ಪ್ರಸಾರವಾಗಲಿದೆ. ನಮ್ಮ‌ ಸುಮಾರು 25 ಜನರ ತಂಡದ ಪರಿಶ್ರಮದಿಂದ ಈ ವೆಬ್ ಸಿರೀಸ್ ಮೂಡಿಬಂದಿದೆ. ಹಲವು ಪ್ರಾಯೋಜಕರ ಬೆಂಬಲ ನಮಗಿದೆ” ಎಂದು ವಿನಾಯಕ ಜೋಶಿ “ಮೀಟರ್ ಹಾಕಿ ಪ್ಲೀಸ್” ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು. ಇದೇ ಸಂದರ್ಭದಲ್ಲಿ ರಾಜ್ಯದ ವಿವಿಧ ಕಡೆಗಳಿಂದ ಆಗಮಿಸಿದ್ದ ಆಟೋ ಚಾಲಕರನ್ನು ಸನ್ಮಾನಿಸಲಾಯಿತು.

ರಾಜಕೀಯ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದಿನ ಅಧಿವೇಶನದಲ್ಲಿ ನೂತನ ಸಭಾಧ್ಯಕ್ಷರಾಗಿ ಆಯ್ಕೆಯಾದ ಯು.ಟಿ.ಖಾದರ್ ಅವರನ್ನು ಅಭಿನಂದಿಸಿ ಮಾತನಾಡಿದರು.

“ವಿಧಾನಸಭೆಯಲ್ಲಿ ಆರೋಗ್ಯಪೂರ್ಣ ಹಾಗೂ ರಾಜ್ಯದ ಹಿತದೃಷ್ಟಿಯಿಂದ ಕೂಡಿದ ಚರ್ಚೆಗಳಾಗುವ ಮೇಲ್ಪಂಕ್ತಿಯನ್ನು ಎತ್ತಿಹಿಡಿವ ಜವಾಬ್ದಾರಿ ಸಭಾಧ್ಯಕ್ಷರ ಮೇಲಿದೆ. ಸದನದ ಘನತೆ, ಗಾಂಭೀರ್ಯ, ಗೌರವವನ್ನು ಸ್ಪೀಕರ್ ಎತ್ತಿಹಿಡಿಯಬೇಕು. ಖಾದರ್ ಅವರ ಮುಂದಾಳ್ವತ್ವದಲ್ಲಿ ಸದನದ ಚರ್ಚೆ ಮೇಲ್ಮಟ್ಟಕ್ಕೇರಲಿ ಎಂದು ಆಶಿಸುತ್ತೇನೆ.

ಖಾದರ್ ಅವರು ಸಭಾದ್ಯಕ್ಷರ ಜವಾಬ್ದಾರಿಯನ್ನು ಉತ್ತಮವಾಗಿ ನಿರ್ವಹಿಸುವ ನಂಬಿಕೆ, ವಿಶ್ವಾಸವಿದೆ. ಅವರು ಬಹಳ ತಾಳ್ಮೆ ಇರುವ ವ್ಯಕ್ತಿ. ಅದು ಈ ಹುದ್ದೆಗೆ ಅಗತ್ಯವಾದ ಗುಣ. ಸದನದಲ್ಲಿ ರಾಜ್ಯದ ಅಭಿವೃದ್ಧಿಯ ದೃಷ್ಟಿಯಿಂದ ಚರ್ಚೆಗಳಾಗಲಿ. ಹೊಸದಾಗಿ ಆರಿಸಿ ಬಂದ ಸದಸ್ಯರಿಗೆ ಅಭಿನಂದನೆಗಳು. ಸರ್ಕಾರವಾಗಿ ತಮಗೆ ನಾವು ಎಲ್ಲ ರೀತಿಯ ಸಹಕಾರವನ್ನು ನೀಡುತ್ತೇವೆ.

ರಾಜಕಾರಣದ ಕುಟುಂಬದಿಂದ ಬಂದಿರುವ ಯು.ಟಿ.ಖಾದರ್ ಅವರು ತಮ್ಮ ತಂದೆಯ ನಿಧನದ ನಂತರ ಉಳ್ಳಾಲ ಕ್ಷೇತ್ರದ ಶಾಸಕರಾಗಿ ಆಯ್ಕೆಯಾದರು. ಅತ್ಯಂತ ಉತ್ಸಾಹಿ, ಸಕ್ರಿಯ ರಾಜಕಾರಣಿಯಾದ ಖಾದರ್ ಅವರು ಶಾಸಕರಾಗಿ ಹಾಗೂ ಸಚಿವರಾಗಿ ಕಾರ್ಯನಿರ್ವಹಿಸಿದ್ದು, 2018ರಲ್ಲಿ ಅತಿ ಹೆಚ್ಚು ಪ್ರಶ್ನೆಗಳನ್ನು ಕೇಳಿದ್ದಕ್ಕಾಗಿ “ಸದನವೀರ” ಪ್ರಶಸ್ತಿಯೂ ದೊರೆತಿತ್ತು.

ಯು.ಟಿ.ಖಾದರ್ ಅವರು ಮಾದರಿ ಶಾಕಸರಾಗಿ ಕೆಲಸ ಮಾಡಿದ್ದು, ವಿರೋಧ ಪಕ್ಷದಲ್ಲಿದ್ದ ಸಂದರ್ಭದಲ್ಲಿ ವಿರೋಧಪಕ್ಷದ ಉಪನಾಯಕರಾಗಿ ಪರಿಣಾಮಕಾರಿಯಾಗಿ, ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಿದ್ದಾರೆ. ಅವರು ಜಾತ್ಯಾತೀತ ಮನೋಭಾವ ಉಳ್ಳವರು ಕೂಡ.

ಸಭಾಧ್ಯಕ್ಷರಾದವರು ಪಕ್ಷಾತೀತವಾಗಿ ಕೆಲಸ ಮಾಡಬೇಕೆಂದು ಎಲ್ಲ ಸದಸ್ಯರೂ ಬಯಸುತ್ತಾರೆ. ವಿಧಾನಸಭೆಯಲ್ಲಿ ಈ ರಾಜ್ಯದ ಜ್ವಲಂತ ಸಮಸ್ಯೆಗಳ ಬಗ್ಗೆ ಮಾತನಾಡಬೇಕು. ಇತ್ತೀಚಿನ ದಿನಗಳಲ್ಲಿ ವಿಧಾನಸಭೆಯ ಗುಣಮಟ್ಟ ಕಡಿಮೆಯಾಗುತ್ತಿದೆ ಎಂಬ ಭಾವನೆ ಅನೇಕರಲ್ಲಿದೆ. ಆ ಭಾವನೆ ಹೋಗಲಾಡಿಸುವ ಕೆಲಸವನ್ನು ಎಲ್ಲರೂ ಮಾಡಬೇಕಿದೆ. “ವಿಧಾನಸಭೆ ಪ್ರಜಾಪ್ರಭುತ್ವದ ದೇಗುಲ”. ಇಲ್ಲಿ ಏಳು ಕೊಟಿ ಕನ್ನಡಿಗರ ಸಮಸ್ಯೆಗಳನ್ನು ಚರ್ಚೆ ಮಾಡಬೇಕು.

ಸದನದ ಅಧ್ಯಕ್ಷರಿಗೆ ಪ್ರಜಾಪ್ರಭುತ್ವದಲ್ಲಿ ಮಹತ್ವದ ಸ್ಥಾನವಿದೆ. ಸದನದ ಚರ್ಚೆಯಲ್ಲಿ ಅನೇಕ ವಿಚಾರಗಳು ಬರುತ್ತವೆ. ಚರ್ಚೆಯಲ್ಲಿ ಭಾಗವಹಿಸುವಾಗ ಪದಬಳಕೆಯಲ್ಲಿ ಬಹಳ ಎಚ್ಚರಿಕೆ ವಹಿಸಬೇಕು. ಅಸಂವಿಧಾನಾತ್ಮಕ ಪದಬಳಕೆಗೆ ಅವಕಾಶವಿರಬಾರದು. ರಚನಾತ್ಮಾಕವಾದ ಸಲಹೆಗಳನ್ನು ನೀಡಲು ಎಲ್ಲರಿಗೂ ಅವಕಾಶ ಹಾಗೂ ಹಕ್ಕುಗಳಿವೆ.

ಕಾನೂನು ಸುವ್ಯವಸ್ಥೆ ಹಾಗೂ ರಾಜ್ಯದ ಬೆಳವಣಿಗೆ ಒಂದಕ್ಕೊಂದು ಪೂರಕ. ವಿಧಾನಸಭೆಗೆ ಬಂದ ಮೇಲೆ ರಾಜ್ಯದ ಅಭಿವೃದ್ಧಿ, ಜನರ ರಕ್ಷಣೆ, ಕಾನೂನು ಸುವ್ಯವಸ್ಥೆ ಇರಬೇಕು. ಕಾನೂನು ಸುವ್ಯವಸ್ಥೆ ಇಲ್ಲದಿದ್ದರೆ ಬಂಡವಾಳ ಹೂಡಿಕೆಯಾಗುವುದಿಲ್ಲ. ಬಂಡವಾಳ ಹೂಡಿಕೆಯಾಗದಿದ್ದರೆ, ಉದ್ಯೋಗ ಸೃಷ್ಟಿಯಾಗುವುದಿಲ್ಲ. ಉದ್ಯೋಗ ಸೃಷ್ಟಿಯಾಗದಿದ್ದರೆ ನಿರುದ್ಯೋಗದ ಸಮಸ್ಯೆ ಬಗೆಹರಿಸಲು ಆಗುವುದಿಲ್ಲ. ರಾಜ್ಯದ ಅಭಿವೃದ್ಧಿ, ಜಿಡಿಪಿ ಬೆಳವಣಿಗೆಯೂ ಆಗುವುದಿಲ್ಲ. ಆದ್ದರಿಂದ ಕಾನೂನು ಸುವ್ಯವಸ್ಥೆ ಹಾಗೂ ರಾಜ್ಯದ ಬೆಳವಣಿಗೆ ಒಂದಕ್ಕೊಂದು ಪೂರಕವಾಗಿದೆ” ಎಂದು ಹೇಳಿದರು.