ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ವಿರುದ್ಧ ಹೊಟೇಲ್ ಮಾಲೀಕ ಹಾಗೂ ಪಕ್ಷದ ಮಾಜಿ ಮುಖಂಡ ಅಣ್ಣಾದೊರೈ ಪೊಲೀಸರಿಗೆ ದೂರು!
ಬೆಂಗಳೂರು: ಬಿಜೆಪಿ ಮಾಜಿ ಮುಖಂಡ ಅಣ್ಣಾದೊರೈ ಅವರು, ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ವಿರುದ್ಧ ಕೊಯಮತ್ತೂರು ಪೊಲೀಸ್ ಕಮಿಷನರ್ ಕಚೇರಿಯಲ್ಲಿ ದೂರು ದಾಖಲಿಸಿದ್ದಾರೆ. ಬಿಜೆಪಿಯ ಸ್ಥಳೀಯಾಡಳಿತ ಅಭಿವೃದ್ಧಿ ವಿಭಾಗದ ಕಾರ್ಯದರ್ಶಿಯಾಗಿದ್ದ ಅಣ್ಣಾದೊರೈ ಅವರನ್ನು 4 ದಿನಗಳ ಹಿಂದೆ ಪಕ್ಷದಿಂದ ಉಚ್ಚಾಟಿಸಲಾಗಿತ್ತು. ಈ ಹಿನ್ನಲೆಯಲ್ಲಿ ಕೊಯಮತ್ತೂರು ಪೊಲೀಸ್ ಕಮಿಷನರ್ ಕಚೇರಿ ಎದುರು ಅಣ್ಣಾದೊರೈ ಸುದ್ದಿಗಾರರನ್ನು ಭೇಟಿ ಮಾಡಿದರು.
“ನಾನು ಚೆನ್ನೈ, ಪಾಂಡಿಚೇರಿ ಮತ್ತು ಕೊಯಮತ್ತೂರಿನಲ್ಲಿ ‘ಪಳೆಯ ಸೋರು ಡಾಟ್ ಕಾಮ್’ ಅನ್ನು ನಡೆಸುತ್ತಿದ್ದೇನೆ. ಕೊಯಮತ್ತೂರಿನ ಕಟ್ಟಡ ಮಾಲೀಕರೊಂದಿಗೆ ನಮಗೆ ಸಮಸ್ಯೆ ಇತ್ತು, ಆದ್ದರಿಂದ ನಾವು ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದೇವೆ. ನಾನು ಬಿಜೆಪಿಯಲ್ಲಿದ್ದೇನೆ ಎಂಬ ಕಾರಣಕ್ಕೆ ಕಟ್ಟಡ ಮಾಲೀಕರು ಅಣ್ಣಾಮಲೈ ಅವರ ಬಳಿ ಮಾತನಾಡಿದ್ದಾರೆ. ಅಣ್ಣಾಮಲೈ ಆದೇಶದ ಮೇರೆಗೆ ಬಿಜೆಪಿ ಜಿಲ್ಲಾಧ್ಯಕ್ಷರು, ‘ಪಳೆಯ ಸೋರು ಡಾಟ್ ಕಾಮ್’ ನಡೆಸುತ್ತಿದ್ದ ನನ್ನ ಕಚೇರಿಯ ಬೀಗವನ್ನು ಒಡೆದು, ಒಳಗಿದ್ದ ಸಾಮಾನುಗಳನ್ನು ಕದ್ದು, ಬಿಜೆಪಿ ಧ್ವಜ ನೆಟ್ಟು, ಸೇವಾ ಕೇಂದ್ರ ಎಂಬ ಬೋರ್ಡನ್ನು ಹಾಕಿದ್ದಾರೆ.
ಬಿಜೆಪಿಯವರು ಈ ರೀತಿ ಅನ್ಯಾಯ ಮಾಡುತ್ತಾರೆ ಎಂದು ಗೊತ್ತಿದ್ದರೆ ನಾನು ಈ ಪಕ್ಷಕ್ಕೆ ಸೇರುತ್ತಿರಲಿಲ್ಲ. ಸ್ವಪಕ್ಷದ ಕಾರ್ಯಕರ್ತರನ್ನು ಕರೆದು ಪ್ರಶ್ನಿಸದೆ, ಪಕ್ಷದ ಕಾರ್ಯಕರ್ತರಿಂದಲೇ ಕೊಲೆ ಬೆದರಿಕೆ ಹಾಕುತ್ತಿದ್ದಾರೆ. ನಾನು ಮಾಲೀಕನಿಗೆ ಹಣ ಪಾವತಿಸುವುದಾಗಿಯೇ ಇರಲಿ, ಪ್ರಕರಣ ನ್ಯಾಯಾಲಯದಲ್ಲಿರುವಾಗ ಕಚೇರಿಯ ಪೀಠೋಪಕರಣಗಳನ್ನು ಒಡೆದು ಖಾಲಿ ಮಾಡುವುದು ಯಾವ ನ್ಯಾಯ? ನನ್ನನ್ನು ಬಿಜೆಪಿಯಿಂದ ಉಚ್ಚಾಟಿಸಿರುವ ವಿಷಯ ನಿನ್ನೆ ಬೆಳಗ್ಗೆಯಷ್ಟೇ ತಿಳಿದು ಬಂದಿತು. ಅಣ್ಣಾಮಲೈ ಇದರಲ್ಲಿ ನೇರವಾಗಿ ಭಾಗವಾಗಿದ್ದಾರೆ. ಆದ್ದರಿಂದಲೇ ಅವರ ವಿರುದ್ಧ ದೂರು ದಾಖಲಿಸಿದ್ದೇನೆ. ಎಲ್ಲರ ಮೇಲೂ FIR ದಾಖಲು ಮಾಡುವಂತೆ ಪೊಲೀಸ್ ಅಧಿಕಾರಿಯ ಬಳಿ ಮನವಿ ಮಾಡಿದ್ದೇನೆ” ಎಂದರು.