ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
ಪೆರಿಯಾರ್ Archives » Dynamic Leader
October 19, 2024
Home Posts tagged ಪೆರಿಯಾರ್
ಲೇಖನ

ಪ್ರವಚನ: ಪೆರಿಯಾರ್
ಕನ್ನಡಕ್ಕೆ: ಡಿ.ಸಿ.ಪ್ರಕಾಶ್

‘ದಲಿತರ ಪ್ರಗತಿಗಾಗಿ ದುಡಿಯುತ್ತಿದ್ದೇವೆ’ ಎಂದು ಅಂದುಕೊಂಡು, ‘ಅವರಿಗಾಗಿ ದುಡಿಯುತ್ತಿದ್ದೇವೆ’ ಎಂದು ಹೇಳಿಕೊಂಡು ತಿರುಗಾಡುವುದೆಲ್ಲವೂ ಅವರನ್ನು ವಂಚಿಸಲಿಕ್ಕಾಗಿಯೇ ಎಂಬುದು ನನ್ನ ಅಭಿಪ್ರಾಯ. ಅಂದರೆ, ಯುರೋಪಿಯನ್ನರು ಭಾರತದ ಒಳಿತಿಗಾಗಿಯೇ ಭಾರತವನ್ನು ಆಳುತ್ತಿದ್ದಾರೆ ಎಂಬಂತಿದೆ. ಇದರಲ್ಲಿ ಬೇರೇನು ವಿಶೇಷತೆಯಿಲ್ಲ.

ನಮ್ಮ ದೇಶದಲ್ಲಿ ‘ದಲಿತ’ ಎಂಬ ಜಾತಿಯ ಹೆಸರು ಇರುವುದರಿಂದಲೇ ‘ಶೂದ್ರ’ ಎಂಬ ಜಾತಿಯ ಹಸರೂ ನಮ್ಮಲ್ಲಿದೆ. ‘ದಲಿತ’ ಎಂಬ ಜಾತಿ ಹೆಸರಿಗಿಂತ ‘ಶೂದ್ರ’ ಎಂಬ ಜಾತಿಯ ಹೆಸರೇ ಅವಹೇಳನಕಾರಿಯಾದದ್ದು. ಹಿಂದೂ ಶಾಸ್ತ್ರದ ಪ್ರಕಾರ, ದಲಿತ ಮಹಿಳೆಯರಲ್ಲಿ ಪತಿವ್ರತೆಯರೂ, ಪರಿಪೂರ್ಣ ತಾಯಿ, ತಂದೆಗೆ ಜನಿಸಿದವರೂ ಇರಬಹುದು. ಶೂದ್ರರಲ್ಲಿ ಹಾಗಿರಲು ಸಾಧ್ಯವಿಲ್ಲ. ಏಕೆಂದರೆ ‘ಶೂದ್ರಳು’ ಎಂದರೆ ದಾಸಿ, ವೇಶ್ಯೆಯ ಮಗಳು ಎಂಬುದು ಇದರರ್ಥ. ‘ಶೂದ್ರ’ ಎಂದರೆ ದಾಸಿಯ ಮಗ, ವೇಶ್ಯೆಯ ಮಗ ಎಂದರ್ಥ. ಇದನ್ನು ಒಪ್ಪದವನು ಹಿಂದೂ ಆಗಲಾರ ಎಂಬುದು ಶಾಸ್ತ್ರದ ನಿಯಮ.

ಆದ್ದರಿಂದ, ‘ಶೂದ್ರ’ ಎಂದು ಕರೆಯಲ್ಪಡುವ ನನ್ನಂತವರು, ‘ದಲಿತ’ ಎಂದು ಕರೆಸಿಕೊಳ್ಳುವವರ ಪ್ರಗತಿಗಾಗಿ ದುಡಿಯುತ್ತಿದ್ದೇನೆ ಎಂದು ಹೇಳಿಕೊಳ್ಳುವುದೆಲ್ಲವೂ ನಮ್ಮನ್ನು ‘ಶೂದ್ರ’ ಎಂದು ಯಾರೂ ಭಾವಿಸಬಾರದು ಎಂಬುದಕ್ಕಾಗಿಯೇ ಹೊರತು ಇದರಲ್ಲಿ ಬೇರೇನೂ ಇಲ್ಲ. ಹಾಗಾಗಿ, ನಾನು ನನಗಾಗಿ ಶ್ರಮಿಸುತ್ತಿರುವುದು ನಿಮ್ಮ ದೃಷ್ಟಿಯಲ್ಲಿ ನಿಮಗಾಗಿ ಶ್ರಮಿಸುತ್ತಿರುವುದಾಗಿ ತೋರುತ್ತದೆ. ನಿನ್ನನ್ನು ಕೀಳಾಗಿ ಕಾಣುವ ಮಹಿಳೆಯರು ಮತ್ತು ಪುರುಷರು, ತಮ್ಮನ್ನು ಇತರರು ನಿಮಗಿಂತ ಕೀಳಾಗಿ ಕಾಣುತ್ತಿದ್ದಾರೆ ಎಂಬುದು ಅರ್ಥವಾಗುತ್ತಿಲ್ಲ. ಇತರರನ್ನು ಕೀಳಾಗಿ ಭಾವಿಸುವ ಅಜ್ಞಾನದಿಂದಾಗಿ, ತಮ್ಮನ್ನು ಮತ್ತವರು ಕೀಳಾಗಿ ಭಾವಿಸುವುದು ತಮಗೆ ಹೀನವಾಗಿ ಕಾಣುವುದಿಲ್ಲ.

ಈ ಹಿನ್ನೆಲೆಯಲ್ಲಿ, ನಿಮ್ಮಲ್ಲಿನ ತಪ್ಪುಗಳನ್ನು ಪತ್ತೆಹಚ್ಚಿ, “ನಿಮ್ಮ ದೇಹದಲ್ಲಿ ದುರ್ವಾಸನೆ ಬೀಸುತ್ತಿದೆ; ನೀವು ಸ್ನಾನ ಮಾಡುವುದಿಲ್ಲ; ಬಟ್ಟೆ ಒಗೆಯುವುದಿಲ್ಲ; ನೀವು ಗೋಮಾಂಸ ತಿನ್ನುತ್ತೀರಿ; ನೀವು ಮದ್ಯಪಾನ ಮಾಡುತ್ತೀರಿ; ಇದನ್ನು ಬಿಟ್ಟುಬಿಡಿ” ಎಂದು ಉಪದೇಶ ಮಾಡುತ್ತಾರೆ.

ನೀವು ಬಟ್ಟೆ ಒಗೆಯದೆ, ಸ್ನಾನ ಮಾಡದೆ ಇರುವುದಕ್ಕೆ ಯಾರು ಹೊಣೆ ಎಂದು ಅವರು ಭಾವಿಸುತ್ತಿಲ್ಲ. ನಿಮಗೆ ಕುಡಿಯಲು ನೀರೇ ಇಲ್ಲದಿರುವಾಗ ಸ್ನಾನ ಮಾಡುವುದಾದರೂ ಹೇಗೆ! ಕೊಳಕು ಮತ್ತು ವಾಸನೆ ನಿಮ್ಮ ಜೊತೆಯಲ್ಲಿ ಹುಟ್ಟಿದ್ದೇ ಎಂದು ನಾನು ನಿಮ್ಮನ್ನು ಕೇಳುತ್ತೇನೆ.

ಸ್ನಾನ ಮಾಡಲು, ಬಟ್ಟೆ ಒಗೆಯಲು, ಹಲ್ಲುಜ್ಜಲು ನೀರು ಕೊಡದೆ, ಮಠಾಧೀಶರುಗಳನ್ನು, ಶಂಕರಾಚಾರ್ಯರನ್ನು ತಂದು ಮನೆಯಲ್ಲಿ ಕೂಡಿಹಾಕಿದರೆ ಅವರ ಬಟ್ಟೆ ಶುಚಿಯಾಗಿರುತ್ತದೆಯೇ! ಅವರ ಬಟ್ಟೆ ಸ್ವಚ್ಛವಾಗಿರುತ್ತದೆಯೇ? ಅವರ ದೇಹ ಮತ್ತು ಬಾಯಿ ದುರ್ವಾಸನೆ ಹೊಡೆಯುವುದಿಲ್ಲವೇ? ಯೋಚಿಸಿ ನೋಡಿ. ನೀವು ಒಬ್ಬರನ್ನು ಹಸಿವಿಗೆ ದೂಡಿ, ಅವನು ಸತ್ತ ಮೇಲೆ, “ಅವನು ಹಸಿವಿನಿಂದ ಸತ್ತಿದ್ದಾನೆ ಪಾಪಿ” ಎಂದು ಹೇಳಿದರೆ, ಆ ಪಾಪಿ ಯಾರೆಂದು ಯೋಚಿಸಿ ನೋಡಿ!

ಅಲ್ಲದೆ, ಗೋಮಾಂಸ ತಿಂದು ಮದ್ಯಪಾನ ಮಾಡುತ್ತಿರುವುದೇ ನೀವು ದಲಿತರಾಗಿರಲು ಕಾರಣ ಎಂದು ಹೇಳುವುದು ಸಮಂಜಸವಲ್ಲ. ಗೋಮಾಂಸ ತಿಂದು ಮದ್ಯ ಸೇವಿಸುವವರೆ ಇಂದು ಜಗತ್ತನ್ನು ಆಳುತ್ತಿದ್ದಾರೆ. ಅಲ್ಲದೆ, ನೀವು ಗೋಮಾಂಸ ತಿನ್ನುತ್ತಿರುವುದು ನಿಮ್ಮ ತಪ್ಪಲ್ಲ. ನಿಮಗೆ, ಇತರರಂತೆ ಸರಿಯಾಗಿ ಸಂಪಾದಿಸುವ, ಉದಾರವಾಗಿ ತಿನ್ನುವ, ಬೀದಿಯಲ್ಲಿ ನಡೆಯುವ, ಸ್ವತಂತ್ರವಾಗಿ ಎಲ್ಲಿಯಾದರೂ ಹೋಗಿ ದುಡಿದು ಸಂಪಾದಿಸುವ ಅವಕಾಶವನ್ನು ನೀಡದಿರುವುದರಿಂದ, ಸ್ವಲ್ಪ ಹಣಕ್ಕೆ ಹೆಚ್ಚು ಆಹಾರವಾಗಬಹುದಾದ ಗೋಮಾಂಸವನ್ನು ತಿನ್ನಬೇಕಾಯಿತು.

ಗೋಮಾಂಸವನ್ನು ಅನುಮತಿಸುವ ಧರ್ಮಗಳಿಗೆ ಸೇರಿದ ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರಲ್ಲಿಯೂ ಕೆಲವರು ಸ್ವಲ್ಪ ಧಾರಾಳವಾಗಿ ಹಣ ಸಂಪಾದಿಸಲು ತೊಡಗಿದ ಕೂಡಲೇ “ನಮ್ಮಲ್ಲಿ ಗೋಮಾಂಸ ತಿನ್ನುವ ಪದ್ಧತಿ ಇಲ್ಲ” ಎಂದು ಹೇಳುತ್ತಾರೆ. ಆದ್ದರಿಂದ, ನಮ್ಮ ದೇಶದಲ್ಲಿ ದನದ ಮಾಂಸ ತಿನ್ನಲು ಬಡತನವೇ ಮುಖ್ಯ ಕಾರಣವಾಗಿದೆ. ಅಲ್ಲದೆ, ಮೇಕೆ, ಕೋಳಿ, ಮೀನು ಮತ್ತು ಹಂದಿ ಮಾಂಸಕ್ಕಿಂತ ದನದ ಮಾಂಸ ತಿನ್ನುವುದು ಅಷ್ಟುದೊಡ್ಡ ಪಾಪವಾಗಿದೆಯೇ?

ಕೋಳಿ, ಮೀನು ಮತ್ತು ಹಂದಿಗಳು ಲಾಲಾರಸ, ಹುಳುಗಳು, ಕೊಳಕು ಮತ್ತು ಮಲವನ್ನು ತಿನ್ನುತ್ತವೆ. ಹಾಗಿರುವಾಗ, ಇದನ್ನು ತಿನ್ನುವ ಉತ್ತರದ ಬ್ರಾಹ್ಮಣರಿಂದ ದಕ್ಷಿಣದ ಶೂದ್ರರವರೆಗೂ ಒಳ್ಳೆಯ ಜಾತಿ ಮತ್ತು ಸ್ಪರ್ಶಕ್ಕೆ ಅರ್ಹರಾಗಿರುವಾಗ! ಹುಲ್ಲು, ಹತ್ತಿ, ಹೊಟ್ಟು ತಿನ್ನುವ ಹಸುವಿನ ಮಾಂಸ ತಿಂದ ಮಾತ್ರಕ್ಕೆ ಮನುಷ್ಯ ಹೇಗೆ ಕೀಳಾಗುತ್ತಾನೆ? ಬದಲಾಗಿ, ದನದ ಮಾಂಸ ತಿನ್ನುವವರನ್ನು “ಮುಟ್ಟಬೇಡ; ಬೀದಿಯಲ್ಲಿ ನಡೆಯಬೇಡ; ಹೊಂಡದಲ್ಲಿ ನೀರು ಕುಡಿಯಬೇಡ; ಊರಿನೊಳಗೆ ಇರಬೇಡ” ಎನ್ನುತ್ತಾರ! ಇದು ನಿಜವಾದ ಕಾರಣವೇ ಅಲ್ಲ. ಇದು ಉದ್ದೇಶಪೂರ್ವಕವಾಗಿ, ಬೇಕೆಂದೇ ನಿಮ್ಮನ್ನು ಶೋಷಿಸಲು ಯೋಗ್ಯ ಬೇಜವಾಬ್ದಾರಿಯ ಕಾರಣವಾಗಿದೆ ಎಂಬುದು ನನ್ನ ಅಭಿಪ್ರಾಯ.

ಮದ್ಯಪಾನ ಮತ್ತು ಗೋಮಾಂಸವನ್ನು ತಿರಸ್ಕರಿಸುವುದನ್ನು ನಾನು ವಿರೋಧಿಸುತ್ತಿಲ್ಲ. ಮದ್ಯಪಾನ ಮತ್ತು ಗೋಮಾಂಸವನ್ನು ತ್ಯಜಿಸುವುದರಿಂದ ನಿಮ್ಮ ಜಾತಿ  ಮೇಲೇರುತ್ತದೆ ಎಂದು ಕೆಲವರು ಹೇಳುವ ಅಸಂಬದ್ಧ ಕಾರಣವನ್ನು ನಾನು ಒಪ್ಪಲಾರೆ. ನಿಮ್ಮ ಜಾತಿ ಮೇಲೇರಲು ಮದ್ಯ ಮತ್ತು ಗೋಮಾಂಸವನ್ನು ತ್ಯಜಿಸಿ ಎಂದು ನಾನು ಕೇಳುವುದಿಲ್ಲ. ಅದಕ್ಕಾಗಿ ನೀವು ತ್ಯಜಿಸುವ ಅಗತ್ಯವೂ ಇಲ್ಲ.

ನಮ್ಮ ದೇಶದಲ್ಲಿ, ತೆಂಗಿನಮರ ಮತ್ತು ತಾಳೆ ಮರಗಳಿಂದ ಸಿಗುವ ಸೇಂದಿ, ತಯಾರಿಸುವ ಸಾರಾಯಿ ಮತ್ತು ವಿದೇಶಗಳಿಂದ ಬರುವ ಮದ್ಯಪಾನಗಳು, ಚೆನ್ನೈ ಪ್ರಾಂತ್ಯದ 15.20 ಕೋಟಿ ರೂ.ಗಳ ವಹಿವಾಟಿನ ಎಲ್ಲ ರೀತಿಯ ಮದ್ಯಪಾನಗಳನ್ನು ನೀವೇ ಕುಡಿಯುತ್ತಿದ್ದಿರಾ? ಇದನ್ನು ಯಾರಾದರೂ ನಂಬುತ್ತಾರೆಯೇ? ಯಾರೂ ನಂಬುವುದಿಲ್ಲ. ಆದ್ದರಿಂದ ನೀವು, ಜಾತಿಯ ಉನ್ನತಿಯ ಉದ್ದೇಶದಿಂದ ಇವುಗಳನ್ನು ಬಿಡಲು ಬಯಸಿದರೆ, ಮೊದಲು ಇತರರು ಬಿಡಲಿ.

ಮದ್ಯವು ಮಾನವ ನೈತಿಕತೆಗೆ ವಿರುದ್ಧವಾಗಿದೆ ಎಂಬುದನ್ನು ನಾನು ಒಪ್ಪುತ್ತೇನೆ. ಮದ್ಯಪಾನ ನಿಷಧಕ್ಕಾಗಿ ನಾನೂ ಒಂದಿಷ್ಟು ಸೇವೆ ಸಲ್ಲಿಸಿದ್ದೇನೆ. ಆದರೆ ಜಾತಿ ಉನ್ನತಿಗಾಗಿ ಎಲ್ಲ ಜಾತಿಯವರು ಸೇವಿಸುವ ಮದ್ಯಕ್ಕೆ ಯಾವುದೇ ನಿಷೇಧವಿರುವುದಿಲ್ಲ. ಆದ್ದರಿಂದ, ಜಾತಿ ಔನ್ನತ್ಯಕ್ಕೆ ಮದ್ಯಪಾನ ನಿಶೇಧ, ಮಾಂಸಾಹಾರ ವರ್ಜನೆ ಅಗತ್ಯ ಎಂದು ಹೇಳುತ್ತಿರುವುದು ಉದ್ದೇಶಪೂರ್ವಕವಾಗಿ ಹೇಳುತ್ತಿರುವ ಸುಳ್ಳು.

ಆದರೂ, ನಿಮ್ಮಲ್ಲಿರುವ ಕೆಲವು ತಪ್ಪುಗಳನ್ನು ಹೇಳದೆ ಇರಲು ಆಗುತ್ತಿಲ್ಲ. ಅಂದರೆ, ನಿಮ್ಮ ಜಾತಿಗೆ ನೀವೇ ಅವಮಾನವನ್ನು ತಂದುಕೊಳ್ಳುತ್ತಿದ್ದೀರಿ. ಅನಗತ್ಯವಾಗಿ ಯಾರನ್ನು ಕಂಡರೂ ‘ಸ್ವಾಮಿ’ ಎಂದು ನಮಸ್ಕರಿಸುತ್ತೀರಿ. ನೀವು ಕೀಳು ಎಂಬ ಭಾವನೆ ನಿಮ್ಮ ರಕ್ತದಲ್ಲಿದೆ. ಅದು ಬದಲಾಗಬೇಕು. ನೀವು ಒಬ್ಬರನ್ನು ಕಂಡಾಗ, ಅವರ ಮತ್ತು ನಿಮ್ಮ ನಡುವಿನ ವ್ಯತ್ಯಾಸವೇನು ಎಂಬುದು ನಿಮ್ಮ ಮನಸ್ಸಿನಲ್ಲಿ ಉದ್ಭವಿಸಬೇಕು. ಸ್ವಾಭಿಮಾನದ ಬಗ್ಗೆ ಎಚ್ಚರವಿರದ ಜಾತಿಗಳನ್ನು ಬೆಳೆಸಿದರೂ ಮೇಲೇಳುವುದಿಲ್ಲ. ಅವನಿಗೆ ತಾನೊಬ್ಬ ಮನುಷ್ಯ ಎಂಬ ಭಾವನೆ ಮೊದಲು ಬರಬೇಕು.

ನೀವು ಇನ್ನು ಮುಂದೆ ಯಾರನ್ನೂ ‘ಸ್ವಾಮಿ’ ಎಂದು ಕರೆಯಬಾರದು. ಬೇಕಿದ್ದರೆ ‘ಸರ್’ ಎಂದು ಕರೆಯಿರಿ. ನೀವಾಗಿಯೇ ನುಸುಳಿಕೊಳ್ಳುವುದು, ದೂರವಾಗುವುದು ಮುಂತಾದ ದುರ್ಗುಣಗಳು ನಿಮ್ಮನ್ನು ಬಿಟ್ಟು ದೂರವಾಗಬೇಕು. ಆಗ ಮಾತ್ರ ನಿಮ್ಮನ್ನು ಸಮಾನವಾಗಿ ಪರಿಗಣಿಸಲಾಗುತ್ತದೆ.

Source: Thoughts of Periyar E.V.R-1
ತಮಿಳುನಾಡಿನ ಶಿವಗಂಗೈ ಜಿಲ್ಲೆ, ಸಿರಾವಯಲ್ ನಲ್ಲಿ ದಿನಾಂಕ: 07.04.1926 ರಂದು ಪೆರಿಯಾರ್ ಮಾಡಿದ ಪ್ರವಚನ: ದಿನಾಂಕ: 25.04.1926 ರಂದು ‘ಕುಡಿ ಅರಸು’ (Republic) ಪತ್ರಿಕೆಯಲ್ಲಿ ಪ್ರಕಟವಾಗಿದೆ.

ದೇಶ

ಚೆನ್ನೈ: ಭಾರತದ ಸಾಮಾಜಿಕ ನ್ಯಾಯ ಸಮರದಲ್ಲಿ “ವೈಕಂ ಚಳುವಳಿ” ಮೊದಲನೆಯದು. ಕೇರಳದ ವೈಕಂನಲ್ಲಿ, ಮಹಾದೇವ ದೇವಸ್ಥಾನದ ಸುತ್ತಲಿನ ಬೀದಿಗಳಲ್ಲಿ ದಲಿತರು ನಡೆದಾಡುವುದನ್ನು ನಿಷೇಧಿಸಲಾಗಿತ್ತು. ಇದರ ವಿರುದ್ಧ 1924ರಲ್ಲಿ ಅಲ್ಲಿ ಬೃಹತ್ ಪ್ರತಿಭಟನೆಗಳು ನಡೆದವು.

ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಎಲ್ಲಾ ಮುಖಂಡರುಗಳನ್ನು ಬಂಧಿಸಿದ್ದರಿಂದ ಪ್ರತಿಭಟನೆ ಮುಂದುವರಿಸಲು ಸಾಧ್ಯವಾಗಲಿಲ್ಲ. ಆಗ ಕೇರಳದ ಮುಖಂಡರುಗಳು ತಂದೆ ಪೆರಿಯಾರ್ ಅವರಿಗೆ ಪತ್ರ ಬರೆದು, ಈ ಹೋರಾಟಕ್ಕೆ ಜೀವ ತುಂಬುವಂತೆ ಒತ್ತಾಯಿಸಿದರು.

ಈ ಪತ್ರವನ್ನು ಸ್ವೀಕರಿಸಿದ ತಂದೆ ಪೆರಿಯಾರ್ ತಮಿಳುನಾಡಿನಿಂದ ಕೇರಳಕ್ಕೆ ತೆರಳಿ ವೈಕಂ ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ಈ ಹೋರಾಟ ಆ ಸಮಯದಲ್ಲಿ ದೊಡ್ಡ ಕೋಲಾಹಲಕ್ಕೆ ಕಾರಣವಾಯಿತು. ಜನರು ದೊಡ್ದಮಟ್ಟದಲ್ಲಿ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದರು.

ಇದರ ಪರಿಣಾಮವಾಗಿ ತಂದೆ ಪೆರಿಯಾರ್ ಎರಡು ಬಾರಿ ಬಂಧನಕ್ಕೊಳಗಾದರು. ಅವರು ಮೊದಲ ಬಾರಿಗೆ ಒಂದು ತಿಂಗಳು ಮತ್ತು ಎರಡನೇ ಬಾರಿಗೆ ಆರು ತಿಂಗಳು ಜೈಲು ಶಿಕ್ಷೆ ಅನುಭವಿಸಿದರು.

ಜೈಲಿನಲ್ಲಿ ಕೈಕಾಲು ಸರಪಳಿಯಿಂದ ಬಿಗಿದು ಚಿತ್ರಹಿಂಸೆ ನೀಡಲಾಗಿತ್ತು. ಆ ಸಮಯದಲ್ಲಿ ತಿರುವಾಂಕೂರಿನ ಮಹಾರಾಜರು ಮರಣಹೊಂದಿದ್ದರಿಂದ ರಾಣಿಯವರು ಅವರೆಲ್ಲರನ್ನೂ ಬಿಡುಗಡೆಗೊಳಿಸಿದರು.

ಅದಲ್ಲದೆ, ವೈಕಂ ಬೀದಿಯಲ್ಲಿ ದಲಿತರು ನಡೆದಾಡಬಾರದು ಎಂಬ ನಿಷೇಧವನ್ನೂ ರಾಣಿ ತೆಗೆದುಹಾಕಿದರು. ಪರಿಣಾಮವಾಗಿ, ಪೆರಿಯಾರ್ ಅವರ ಹೋರಾಟವು ವಿಜಯದಲ್ಲಿ ಕೊನೆಗೊಂಡಿದ್ದ ಕಾರಣ ಅವರನ್ನು ‘ವೈಕಂ ವೀರರ್’ ಎಂದು ಕರೆಯಲಾಯಿತು.

ಈ ಹೋರಾಟಕ್ಕೆ 100 ವರ್ಷ ತುಂಬಿದ ಹಿನ್ನೆಲೆಯಲ್ಲಿ ತಮಿಳುನಾಡು ಸರ್ಕಾರದ ವತಿಯಿಂದ ವೈಕಂ ಚಳುವಳಿಯ ಶತಮಾನೋತ್ಸವದ ವಿಶೇಷ ಆಚರಣೆಯನ್ನು ಚೆನ್ನೈನಲ್ಲಿ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಘೋಷಿಸಿದ್ದರು.

ಅದರಂತೆ, ವೈಕಂ ಚಳುವಳಿಯ ಶತಮಾನೋತ್ಸವ ನಂದಂಪಾಕ್ಕಂ ಟ್ರೇಡ್ ಸೆಂಟರ್‌ನಲ್ಲಿ ಇಂದು ನಡೆಯಬೇಕಿತ್ತು. ಖ್ಯಾತ ಚಿತ್ರನಟ ಮತ್ತು ಮಾಜಿ ವಿರೋಧಪಕ್ಷದ ನಾಯಕ ಹಾಗೂ ಎಂಡಿಎಂಕೆ ಪಕ್ಷದ ಅಧ್ಯಕ್ಷ ವಿಜಯಕಾಂತ್ ನಿಧನ ಹೊಂದಿದ್ದರಿಂದ ಇಂದು ಬೆಳಗ್ಗೆ ಇದ್ದಕ್ಕಿದ್ದಂತೆ ಸಮಾರಂಭವನ್ನು ವೇಪ್ಪೇರಿ ಪೆರಿಯಾರ್ ಸಭಾಂಗಣಕ್ಕೆ ಸ್ಥಳಾಂತರಿಸಲಾಯಿತು.

ಸಮಾರಂಭದಲ್ಲಿ ಪಾಲ್ಗೊಳ್ಳಲು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನಿನ್ನೆ ಚೆನ್ನೈಗೆ ಆಗಮಿಸಿದ್ದರು. ಅವರನ್ನು ಸಚಿವರಾದ ಅನ್ಬರಸನ್ ಮತ್ತು ಮಾ.ಸುಬ್ರಮಣ್ಯನ್ ಅವರು ಬರಮಾಡಿಕೊಂಡರು.

ಇಂದು ಬೆಳಗ್ಗೆ ಕಾರ್ಯಕ್ರಮ ನಡೆಯುವ ವೇಪ್ಪೇರಿ ಪೆರಿಯಾರ್ ಸಭಾಂಗಣಕ್ಕೆ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್, ಪಿಣರಾಯಿ ವಿಜಯನ್ ಮತ್ತು ಎಲ್ಲಾ ಸಚಿವರುಗಳು ಆಗಮಿಸಿದ್ದರು. ಅವರೆಲ್ಲರನ್ನು “ದ್ರಾವಿಡರ್ ಕಳಗಂ” ಅಧ್ಯಕ್ಷ ಕೆ.ವೀರಮಣಿ ಸ್ವಾಗತಿಸಿದರು.

ಆ ಬಳಿಕ ಅಲ್ಲಿನ ಪೆರಿಯಾರ್ ಸ್ಮಾರಕದಲ್ಲಿ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಮತ್ತು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪುಷ್ಪ ನಮನ ಸಲ್ಲಿಸಿದರು. ಬಳಿಕ ಪೆರಿಯಾರ್ ಸಭಾಂಗಣದಲ್ಲಿರುವ ಸ್ಮಾರಕ ಸ್ತಂಭದ ಬಳಿ ಸರಳ ರೀತಿಯಲ್ಲಿ ಸಮಾರಂಭ ನಡೆಯಿತು.

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಪೆರಿಯಾರ್ ಸ್ಮರಣಿಕೆ ನೀಡಿ ಗೌರವಿಸಿದರು. ಇದಾದ ನಂತರ ಶತಮಾನೋತ್ಸವದ ವಿಶೇಷ ಸಂಚಿಕೆ ಬಿಡುಗಡೆ ಸಮಾರಂಭ ನಡೆಯಿತು. ಮುಖ್ಯಮಂತ್ರಿ ಸ್ಟಾಲಿನ್ ವಿಶೇಷ ಸಂಚಿಕೆ ಬಿಡುಗಡೆ ಮಾಡಿದರು. ಪಿಣರಾಯಿ ವಿಜಯನ್ ಅದನ್ನು ಸ್ವೀಕರಿಸಿಕೊಂಡರು.

ಹಾಗೆಯೇ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, “ಪೆರಿಯಾರ್ ಮತ್ತು ವೈಕಂ ಚಳುವಳಿ” ಎಂಬ ಪುಸ್ತಕವನ್ನು ಬಿಡುಗಡೆಗೊಳಿಸಿದರು. ಅದನ್ನು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಸ್ವೀಕರಿಸಿಕೊಂಡರು.

ದೇಶ

ಡಿ.ಸಿ.ಪ್ರಕಾಶ್ ಸಂಪಾದಕರು

ತಂದೆ ಪೆರಿಯಾರ್ (ಈರೋಡ್ ವೆಂಕಟಪ್ಪ ರಾಮಸ್ವಾಮಿ):
ಅವರು ತಮಿಳುನಾಡು ಈರೋಡ್‌ನಲ್ಲಿ 1879ರ ಸೆಪ್ಟೆಂಬರ್ 17 ರಂದು ವೆಂಕಟಪ್ಪ ನಾಯಕರ್ ಮತ್ತು ಚಿನ್ನತಾಯಿ ದಂಪತಿಗಳ ಮಗನಾಗಿ ಜನಿಸಿದರು. ಪೆರಿಯಾರ್ ಅವರ ಮಾತೃಭಾಷೆ ಕನ್ನಡವಾದರು ಅವರು ತಮಿಳು, ತೆಲುಗು ಮತ್ತು ಕನ್ನಡ ಮೂರು ದ್ರಾವಿಡ ಭಾಷೆಗಳನ್ನು ನಿರರ್ಗಳವಾಗಿ ಮಾತನಾಡುತ್ತಿದ್ದರು. 1915ರಲ್ಲಿ ರಾಜಕೀಯದಲ್ಲಿ ತೊಡಗಿಸಿಕೊಂಡಿದ್ದ ಪೆರಿಯಾರ್ ಈರೋಡ್‌ನಲ್ಲಿ ಬ್ರಾಹ್ಮಣೇತರ ಕಾಂಗ್ರೆಸ್ ಸಮ್ಮೇಳನವನ್ನು ನಡೆಸಿದರು.

1918ರಲ್ಲಿ ಈರೋಡ್ ಮುನ್ಸಿಪಲ್ ಕೌನ್ಸಿಲ್‌ನ ಅಧ್ಯಕ್ಷರಾಗಿ ಆಯ್ಕೆಯಾದರು. ನಂತರ 1919ರಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರಿದರು. 1920ರಲ್ಲಿ ಅಸಹಕಾರ ಚಳವಳಿಯಲ್ಲಿ ಭಾಗವಹಿಸಿದ್ದರು. 1921ರಲ್ಲಿ ಪೆರಿಯಾರ್ ಅವರ ಪತ್ನಿ ನಾಗಮ್ಮ ಮತ್ತು ಅಕ್ಕ ಕಣ್ಣಮ್ಮ ಅವರೊಂದಿಗೆ ಈರೋಡ್‌ನಲ್ಲಿ ನಡೆದ ಸೇಂದಿ ಅಂಗಡಿ ಮುಷ್ಕರದಲ್ಲಿ ಭಾಗವಹಿಸಿದರು. ಈ ಸೇಂದಿ ಅಂಗಡಿ ಮುಷ್ಕರದ ಸಮಯದಲ್ಲಿ, ಅವರು ತಮ್ಮ ಸ್ವಂತ ತೋಪಿನಲ್ಲಿದ್ದ 1000 ತೆಂಗಿನ ಮರಗಳನ್ನು ಕಡಿದು ಹಾಕಿದರು.

1922ರಲ್ಲಿ ಮದ್ರಾಸ್ ಪ್ರಾಂತೀಯ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾದರು. ಬಳಿಕ ನಡೆದ ಸಭೆಯಲ್ಲಿ ತಿರುಪ್ಪೂರದಲ್ಲಿ ಸರ್ಕಾರಿ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು. ಮಾರ್ಚ್ 3, 1924ರಂದು, ಕೇರಳ ರಾಜ್ಯದ ವೈಕಂ ಎಂಬ ಪಟ್ಟಣದಲ್ಲಿ, ದಲಿತ ಜನರಿಗಾಗಿ ದೇವಾಲಯ ಪ್ರವೇಶಕ್ಕಾಗಿ ಪ್ರತಿಭಟನೆಯನ್ನು ಮಾಡಿ ಯಶಸ್ವಿಯಾದರು. ಹೀಗಾಗಿ ಅವರನ್ನು ‘ವೈಕಂ ವೀರ’ ಎಂದು ಕರೆಯಲಾಗುತ್ತದೆ.

ಕಾಂಗ್ರೆಸ್ ಪಕ್ಷದಲ್ಲಿದ್ದಾಗಲೇ ಬ್ರಾಹ್ಮಣೇತರರ ಹಿತಾಸಕ್ತಿ ಕಾಪಾಡಲು 1924ರ ಮೇ 2ರಂದು ‘ಕುಡಿಅರಸು’ (Republic) ಎಂಬ ತಮಿಳು ವಾರಪತ್ರಿಕೆಯನ್ನು ಆರಂಭಿಸಿದರು. 1925ರಲ್ಲಿ ವಿವಿಎಸ್ ಅಯ್ಯರ್ ಅವರ ಚೇರನ್ ಮಾದೇವಿ ಗುರುಕುಲದಲ್ಲಿ ಚಾಲ್ತಿಯಲ್ಲಿದ್ದ ವರುಣಾಶ್ರಮ ಕ್ರಮವನ್ನು ಪೆರಿಯಾರ್ ವಿರೋಧಿಸಿದರು. ನವೆಂಬರ್ 1925ರಲ್ಲಿ ಕಾಂಚಿಪುರಂನಲ್ಲಿ ತಿರು ವಿಕ ಅವರ ನೇತೃತ್ವದಲ್ಲಿ ನಡೆದ ರಾಜ್ಯ ಕಾಂಗ್ರೆಸ್ ಸಮ್ಮೇಳನದಲ್ಲಿ ಪೆರಿಯಾರ್ ಮಂಡಿಸಿದ ಜಾತಿವಾರು ಪ್ರಾತಿನಿಧ್ಯದ ಬೇಡಿಕೆಯನ್ನು ಒಪ್ಪಿಕೊಳ್ಳಲು ಕಾಂಗ್ರೆಸ್ ನಿರಾಕರಿಸಿದಾಗ ಪೆರಿಯಾರ್ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದರು.

1925ರಲ್ಲಿ ಕಾಂಗ್ರೆಸ್ ಪಕ್ಷವನ್ನು ತೊರೆದ ನಂತರ ಅವರು ಸ್ವಾಭಿಮಾನ ಚಳವಳಿಯನ್ನು ಪ್ರಾರಂಭಿಸಿದರು. 1929ರಲ್ಲಿ ಚೆಂಗಲ್ಪಟ್ಟುವಿನಲ್ಲಿ ಸ್ವಾಭಿಮಾನ ಚಳವಳಿಯ ಮೊದಲ ಸಮ್ಮೇಳನ ನಡೆಯಿತು. ಸೌಂದರ ಪಾಂಡ್ಯನಾರ್, ಕುತ್ತೂಸಿ ಗುರುಸ್ವಾಮಿ, ಮೂವಲೂರು ರಾಮಾಮೃತಂ ಅಮ್ಮಯಾರ್ ಮೊದಲಾದವರು ಇದರಲ್ಲಿ ಭಾಗವಹಿಸಿದ್ದರು. 1926ರಲ್ಲಿ, ಅವರು “ದ್ರಾವಿಡನ್” ಪತ್ರಿಕೆಯ ಸಂಪಾದಕರಾಗಿ ಅಧಿಕಾರ ವಹಿಸಿಕೊಂಡರು. ನವೆಂಬರ್ 7, 1928 ರಂದು “ರಿವೋಲ್ಟ್” (Revolt) ಎಂಬ ಇಂಗ್ಲಿಷ್ ಪತ್ರಿಕೆಯನ್ನು ಪ್ರಾರಂಭಿಸಿದರು.

ಜನವರಿ 1930ರಲ್ಲಿ, ಕುಟುಂಬ ಯೋಜನೆ ಕುರಿತು ಪುಸ್ತಕವನ್ನು ಪ್ರಕಟಿಸಿ, ಭಾರತದಲ್ಲಿ ಮೊದಲ ಬಾರಿಗೆ ಜನಸಂಖ್ಯೆ ನಿಯಂತ್ರಣಕ್ಕಾಗಿ ಜನರಲ್ಲಿ ಜಾಗೃತಿ ಮೂಡಿಸಿದರು. 1933ರಲ್ಲಿ ‘ಕುಡಿಅರಸು’ ವಾರ ಪತ್ರಿಕೆಯನ್ನು ಬ್ರಿಟಿಷ್ ಸರ್ಕಾರ ನಿಷೇಧಿಸಿದ ಕಾರಣ, 20.11.1933 ರಂದು ಅವರು “ಪುರಟ್ಚಿ” (ಕ್ರಾಂತಿ) ಎಂಬ ವಾರಪತ್ರಿಕೆಯನ್ನು ಪ್ರಾರಂಭಿಸಿದರು. 1934 ರಿಂದ ಜಸ್ಟೀಸ್ ಪಾರ್ಟಿಯನ್ನು ಬೆಂಬಲಿಸಲು ಪ್ರಾರಂಭಿಸಿದ ಪೆರಿಯಾರ್, ಜನವರಿ 12, 1934 ರಂದು ‘ಪಗುತ್ತರಿವು’ (ವಿಚಾರವಾದ)  ಎಂಬ ತಮಿಳು ವಾರಪತ್ರಿಕೆಯನ್ನು ಪ್ರಕಟಿಸಿದರು. ಜೂನ್ 1, 1935 ರಂದು ಜಸ್ಟೀಸ್ ಪಾರ್ಟಿಯಿಂದ ಪ್ರಾರಂಭವಾದ ‘ವಿಡುದಲೈ’ (ವಿಮೋಚನೆ) ವಾರ ಪತ್ರಿಕೆಯನ್ನು ಪೆರಿಯಾರ್ ಜನವರಿ 1, 1937 ರಂದು ದಿನಪತ್ರಿಕೆಯಾಗಿ ಪ್ರಕಟಿಸಿದರು.

1937ರಲ್ಲಿ ಅಂದಿನ ತಮಿಳುನಾಡು ಮುಖ್ಯಮಂತ್ರಿ ರಾಜಾಜಿ ಸರ್ಕಾರದಿಂದ ಶಾಲೆಗಳಲ್ಲಿ ಹಿಂದಿಯನ್ನು ಕಡ್ಡಾಯಗೊಳಿಸುವುದನ್ನು ವಿರೋಧಿಸಿ ಜೈಲಿಗೆ ಹೋಗಿದ್ದರು. ನವೆಂಬರ್ 13, 1938 ರಂದು, ಮರೈಮಲೈ ಅಡಿಗಳ್ ಅವರ ಪುತ್ರಿ ನೀಲಾಂಬಿಕೆ ಅಮ್ಮಯಾರ್ ನೇತೃತ್ವದಲ್ಲಿ ಚೆನ್ನೈನಲ್ಲಿ ನಡೆದ ಮಹಿಳಾ ಸಮ್ಮೇಳನದಲ್ಲಿ, ಅವರಿಗೆ “ಪೆರಿಯಾರ್” ಎಂಬ ಬಿರುದು ನೀಡಲಾಯಿತು. ಡಿಸೆಂಬರ್ 29, 1938 ರಂದು ಜಸ್ಟೀಸ್ ಪಕ್ಷದ ನಾಯಕರಾದರು. 1939ರಲ್ಲಿ, ದ್ರಾವಿಡ ಜನಾಂಗೀಯ ಏಕತಾ ಸಮ್ಮೇಳನದ ಮೂಲಕ ದ್ರಾವಿಡ ರಾಷ್ಟ್ರದ ಬೇಡಿಕೆಯನ್ನು ಎತ್ತಿದರು.

ಆಗಸ್ಟ್ 27, 1944 ರಂದು, ಸೇಲಂನಲ್ಲಿ ಜಸ್ಟೀಸ್ ಪಾರ್ಟಿ ಸಮ್ಮೇಳನದಲ್ಲಿ, ಅಣ್ಣಾದುರೈ ಅವರ ನಿರ್ಣಯದ ಪ್ರಕಾರ, ಜಸ್ಟೀಸ್ ಪಾರ್ಟಿಯ ಹೆಸರನ್ನು “ದ್ರಾವಿಡರ್ ಕಳಗಂ” ಎಂದು ಬದಲಾಯಿಸಲಾಯಿತು. 1957ರಲ್ಲಿ ಜಾತಿ ನಿರ್ಮೂಲನೆಗಾಗಿ ಭಾರತದ ನಕ್ಷೆಯನ್ನು ಸುಡಲಾಯಿತು ಮತ್ತು ದೇವಸ್ಥಾನಗಳಲ್ಲಿ ಜಾತಿ ಪ್ರಾಬಲ್ಯವನ್ನು ಕೊನೆಗಾಣಿಸಲು ಚಳುವಳಿಯನ್ನು ನಡೆಸಿದರು. 1970ರಲ್ಲಿ ಉನ್ಮಯ್ (ಸತ್ಯ) ಎಂಬ ಪಾಕ್ಷಿಕ ಪತ್ರಿಕೆಯನ್ನು ತಿರುಚ್ಚಿಯಿಂದ ಪ್ರಾರಂಭಿಸಿದರು. ಇವರು 1970ರಲ್ಲಿ ಎಲ್ಲಾ ಜಾತಿಯವರೂ ಅರ್ಚಕರಾಗಿಸುವ ಹೋರಾಟವನ್ನು ಮುನ್ನಡೆಸಿದರು.

ಸಮಾಜಕ್ಕೆ ಅವರ ಕೊಡುಗೆಯನ್ನು ಶ್ಲಾಘಿಸಿ, ಜೂನ್ 27, 1970 ರಂದು ವಿಶ್ವಸಂಸ್ಥೆಯ ಯುನೆಸ್ಕೋ “ಆಧುನಿಕ ಪ್ರಪಂಚದ ದಾರ್ಶನಿಕ”, “ಆಗ್ನೇಯ ಏಷ್ಯಾದ ಸಾಕ್ರಟೀಸ್”, “ಸಮಾಜ ಸುಧಾರಣಾ ಚಳವಳಿಯ ಪಿತಾಮಹ” ಅಜ್ಞಾನ, ಮೂಢನಂಬಿಕೆ, ಅರ್ಥಹೀನ ಆಚರಣೆಗಳು ಮತ್ತು ಪದ್ಧತಿಗಳ ಶತ್ರು ಎಂದು ಮೆಚ್ಚುಗೆ ಸೂಚಿಸಿ ಪ್ರಮಾಣ ಪತ್ರ ನೀಡಿದೆ.

ಮಹಿಳಾ ಹಕ್ಕು:
ಮಹಿಳೆಯರು ಪುರುಷರುಗಿಂತ ಕೀಳಲ್ಲ ಎಂದು ಭಾವಿಸಿದವರು ಪೆರಿಯಾರ್. ಮಹಿಳೆಯರು ಪುರುಷ ಸಮಾಜದ ಗುಲಾಮರಾಗದೇ, ಮಾನವ ಸಮಾಜಕ್ಕೆ ಕೊಡುಗೆ ನೀಡುವ ಖ್ಯಾತ ಮಹಿಳೆಯರಾಗಬೇಕು ಎಂದು ಅವರು ಒತ್ತಯಿಸುತ್ತಿದ್ದರು.

ಆಸ್ತಿ ಹಕ್ಕುಗಳು:
ಮಹಿಳೆಯರಿಗೆ ಆಸ್ತಿ ಹಕ್ಕು ನಿರಾಕರಣೆಯೇ ಅವರ ಗುಲಾಮಗಿರಿಗೆ ಕಾರಣ ಎಂದು ಅವರು ಅಭಿಪ್ರಾಯಪಟ್ಟರು. ಅದಕ್ಕಾಗಿ ಮಹಿಳೆಯರು ಸಂಘಟಿತ ಹೋರಾಟ ನಡೆಸಬೇಕು ಎಂದರು.

ಸರ್ಕಾರಿ ಕೆಲಸ:
ಸರ್ಕಾರದ ಎಲ್ಲಾ ಇಲಾಖೆಗಳಲ್ಲಿ ಮಹಿಳೆಯರು ಕೆಲಸ ಮಾಡಿದಾಗ ನಮ್ಮ ಸಮಾಜದಲ್ಲಿ ಕ್ರಾಂತಿಯಾಗುತ್ತದೆ ಎಂದರು.

ಬಾಲ್ಯ ವಿವಾಹ:
ಬಾಲ್ಯ ವಿವಾಹದ ಬಗ್ಗೆ “ಸ್ಲೇಟು ಒಡೆದು ಆಡುವ ಸಮಯದಲ್ಲಿ, ಹೆತ್ತವರು ಮಾಡಿದ ಸಂಕಟದ ಆಟ” ಎಂದು ಹೇಳಿ ಅದನ್ನು ತಡೆಯಲು ಪ್ರಯತ್ನಿಸಿದರು.

ವರದಕ್ಷಿಣೆ ನಿರಾಕರಣೆ ಮತ್ತು ವಿಧವಾ ಪದ್ಧತಿ ನಿರ್ಮೂಲನೆ:
ಸಮಾಜದಲ್ಲಿ ಸರಿಯಾದ ಪ್ರೀತಿ, ತ್ಯಾಗ, ಪ್ರಜ್ಞೆ ಇದ್ದರೆ ಮಾತ್ರ ಇಂತಹ ಅನಿಷ್ಟಗಳು ನಿರ್ಮೂಲನೆ ಸಾಧ್ಯ. ಯುವಕರು, ವಿದ್ಯಾರ್ಥಿಗಳು ಮತ್ತು ಪದವೀಧರರು ಎತ್ತಿನ ಗಾಣದಂತೆ ಆಗದೆ ರೇಸು ಕುದುರೆಗಳಾಗಬೇಕು. ಕಷ್ಟಪಟ್ಟು ದುಡಿದು ಮುನ್ನಡೆಯುವ ಉದಾತ್ತ ಚಿಂತನೆ ನಮ್ಮ ಯುವಕರಲ್ಲಿ ಬೆಳೆಯಬೇಕು. ಪತಿಯನ್ನು ಕಳೆದುಕೊಂಡವರು ಮರುಮದುವೆ ಮಾಡಿಕೊಳ್ಳುವುದು ತಪ್ಪಿಲ್ಲ ಎಂದರು.

ಶಿಸ್ತು:
ನೈತಿಕತೆ ಮತ್ತು ಪರಿಶುದ್ಧತೆ ಹೆಣ್ಣಿಗಷ್ಟೇ ಅಲ್ಲ, ಪುರುಷ ಮತ್ತು ಮಹಿಳೆ ಇಬ್ಬರಿಗೂ ಸಾಮಾನ್ಯವಾಗಿದೆ ಎಂದರು. ಮಹಿಳೆಯರು ಸಮಾಜದ ಕಣ್ಣುಗಳು ಎಂದು ಪೆರಿಯಾರ್ ನಂಬಿದ್ದರು.

ವೈಚಾರಿಕತೆ:
ಪೆರಿಯಾರ್ ಎಂದ ಕೂಡಲೇ ನಮ್ಮ ಮನಸ್ಸಿಗೆ ಬರುವುದು ಅವರ ವೈಚಾರಿಕತೆಯ ತತ್ವ. ವೈಜ್ಞಾನಿಕ ದೃಷ್ಟಿಕೋನದಿಂದ ಎಲ್ಲವನ್ನೂ ಸಮೀಪಿಸಿ, ಏಕೆ? ಹೇಗೆ? ಎಂದು ಪ್ರಶ್ನೆಗಳನ್ನು ಎತ್ತಿ, ಜ್ಞಾನದ ಮೂಲಕ ಯೋಚಿಸಿ, ನಿರ್ಧಾರವನ್ನು ತೆಗೆದುಕೊಳ್ಳುವುದೇ ವೈಚಾರಿಕತೆ. ನಮ್ಮ ಪೂರ್ವಜರು ಅದನ್ನು ಮಾಡಿದರು ಎಂಬ ಕಾರಣಕ್ಕೆ ನಾವು ಇಂದು ಅದನ್ನು ಅನುಸರಿಸಬಾರದು. ಅವರು ಕಾಲಕ್ಕೆ ತಕ್ಕಂತೆ ಮಾಡುತ್ತಿದ್ದರು; ಇಂದು ಕಾಲ ಬದಲಾಗಿದೆ. ಆಧುನಿಕ ಯುಗದ ಬೆಳವಣಿಗೆಗೆ ಅನುಗುಣವಾಗಿ, ಜ್ಞಾನದ ಸ್ಥಿತಿಯಲ್ಲಿ ಪ್ರಾಯೋಗಿಕ ರೀತಿಯಲ್ಲಿ ನಾವು ವರ್ತಿಸಬೇಕು.

ಪೆರಿಯಾರ್ ಆ ದೃಷ್ಟಿಕೋನದಿಂದ ಚಿಂತಿಸಿದರು. ಅವರ ಚಿಂತನೆಯು ಸಮಾಜ, ಭಾಷೆ, ಶಿಕ್ಷಣ, ಸಂಸ್ಕೃತಿ ಮತ್ತು ಆರ್ಥಿಕತೆಯಂತಹ ಎಲ್ಲಾ ಕ್ಷೇತ್ರಗಳಲ್ಲಿ ಹೊಸ ಆಯಾಮವನ್ನು ಉಂಟುಮಾಡಿತು.

ಸಮಾಜ:
ತಂದೆ ಪೆರಿಯಾರ್ ಅವರ ಜೀವಿತಾವಧಿಯಲ್ಲಿ ಸಮಾಜದಲ್ಲಿ ಜಾತಿ ಮತ್ತು ಧರ್ಮದ ವಿಭಜನೆಗಳು ತಾಂಡವವಾಡುತ್ತಿದ್ದವು. ಹುಟ್ಟಿನ ಆಧಾರದ ಮೇಲೆ ಮೇಲ್ಜಾತಿ ಮತ್ತು ಕೆಳಜಾತಿಗಳ ನಡುವೆ ವ್ಯತ್ಯಾಸವಿತ್ತು. ಜಾತಿಯ ಹೆಸರಿನಲ್ಲಿ ಪರಸ್ಪರ ನಿಂದಿಸುವ ಕ್ರೌರ್ಯ ನಡೆದಿತ್ತು. ಈ ಅವಮಾನದಿಂದ ತಂದೆ ಪೆರಿಯಾರ್ ಕೋಪಗೊಂಡಿದ್ದರು. “ಜಾತಿ ಪ್ರಜ್ಞೆಯು ಪ್ರಾಬಲ್ಯದ ಭಾವನೆಯನ್ನು ಬೆಳೆಸುತ್ತದೆ. ಇತರರ ಹಕ್ಕುಗಳನ್ನು ಕಸಿದುಕೊಳ್ಳುತ್ತದೆ. ಮನುಷ್ಯರನ್ನು ಅವಮಾನಿಸುತ್ತದೆ. ಆ ಜಾತಿ ರಚನೆ ಒಡೆಯಬೇಕು’’ ಎಂದರು. ಜಾತಿಯಿಂದ ಮಾನವನ ಬದುಕಿಗೆ ಯಾವುದೇ ಪ್ರಯೋಜನವಿಲ್ಲ. ಅದರಿಂದ ನಿರರ್ಥಕ ಜಗಳಗಳು ಮತ್ತು ಗೊಂದಲಗಳು ಮೇಲುಗೈ ಸಾಧಿಸುತ್ತವೆ. ಅಂತಹ ಜಾತಿ, ಮನುಷ್ಯನಿಗೆ ಅಗತ್ಯವಿಲ್ಲ ಎಂದು ಅವರು ಒತ್ತಾಯಿಸಿದರು.

ಧರ್ಮ:
ಧರ್ಮಗಳು ಮಾನವ ಸಮಾಜದ ಕಲ್ಯಾಣಕ್ಕಾಗಿ ರಚಿಸಲಾಗಿದೆ. ಆದರೆ ಇಂದು ಧರ್ಮದ ಸ್ಥಿತಿ ಹೇಗಿದೆ? ಎಚ್ಚರಿಕೆಯಿಂದ ಯೋಚಿಸಿ: ಮನುಷ್ಯರಿಗಾಗಿ ಧರ್ಮವೇ? ಧರ್ಮಕ್ಕಾಗಿ ಮನುಷ್ಯರೇ? ಧರ್ಮವೆಂದರೆ ಜನರನ್ನು ಒಗ್ಗೂಡಿಸುವುದಕ್ಕಾಗಿಯೇ? ಅಥವಾ ಪ್ರತ್ಯೇಕಗೊಳಿಸುವುದಕ್ಕಾಗಿಯೇ?’ ಪೆರಿಯಾರ್ ಈ ರೀತಿಯ ತರ್ಕಬದ್ಧ ಪ್ರಶ್ನೆಗಳನ್ನು ಎತ್ತಿದರು; ದೇವರು ನಿರಾಕರಣೆ ತತ್ವವನ್ನು ಪಾಲಿಸಿದರು.

ಶಿಕ್ಷಣ:
ಪೆರಿಯಾರ್ ಶಿಕ್ಷಣವನ್ನು ಸಾಮಾಜಿಕ ಅಭಿವೃದ್ಧಿಗೆ ಅತ್ಯುತ್ತಮ ಸಾಧನವೆಂದು ಪರಿಗಣಿಸಿದರು. ‘ಕಲಿಸಿದ ಶಿಕ್ಷಣವು ಜನರಲ್ಲಿ ವಿವೇಚನೆ, ಸ್ವಾಭಿಮಾನ ಮತ್ತು ಸದ್ಗುಣವನ್ನು ಬೆಳೆಸಬೇಕು; ಶ್ರೇಷ್ಠತೆಯ ಜೀವನವು ಬದುಕುವುದಕ್ಕಾಗಿ ವೃತ್ತಿ ಮಾಡಿ, ಕಚೇರಿಯಲ್ಲಿ ಕೆಲಸ ಮಾಡಲು ಬಳಸಿಕೊಳ್ಳಬೇಕು’ ಎಂದರು. ‘ಶಾಲೆಗಳು ಅವೈಜ್ಞಾನಿಕ ಸಂದೇಶಗಳು ಮತ್ತು ಮೂಢನಂಬಿಕೆಗಳನ್ನು ಕಲಿಸಬಾರದು, ಆತ್ಮಾವಲೋಕನ ಮತ್ತು ಆತ್ಮಸ್ಥೈರ್ಯವನ್ನು ಬೆಳೆಸುವ ಶಿಕ್ಷಣವನ್ನು ಕಲಿಸಬೇಕು’ ಎಂದು ಪೆರಿಯಾರ್ ವಾದಿಸಿದರು.

‘ಸಮಾಜದ ಎಲ್ಲ ವರ್ಗದವರಿಗೂ ಶಿಕ್ಷಣ ನೀಡಬೇಕು. ಕೆಲವು ವರ್ಗಗಳಿಗೆ ಮಾತ್ರ ಶಿಕ್ಷಣದ ಹಕ್ಕಿದೆ ಮತ್ತು ಕೆಲವು ವರ್ಗಗಳಿಗೆ ಶಿಕ್ಷಣದ ಹಕ್ಕಿಲ್ಲ ಎಂಬ ಕಲ್ಪನೆಯನ್ನು ಪೆರಿಯಾರ್ ಕಟುವಾಗಿ ವಿರೋಧಿಸಿದರು. ಎಲ್ಲರಿಗೂ ಶಿಕ್ಷಣ ನೀಡಬೇಕು.ವಿಶೇಷವಾಗಿ ಮಹಿಳೆಯರ ಶಿಕ್ಷಣಕ್ಕೆ ಆದ್ಯತೆ ನೀಡಬೇಕು ಎಂದರು. ಮಹಿಳೆಯರಿಗೆ ಶಿಕ್ಷಣ ನೀಡುವುದರಿಂದ ಸಮಾಜವು ವೇಗವಾಗಿ ಪ್ರಗತಿ ಹೊಂದುತ್ತದೆ ಎಂದು ಪೆರಿಯಾರ್ ನಂಬಿದ್ದರು. ಕಂಠಪಾಠಕ್ಕೆ ಆದ್ಯತೆ ನೀಡುವ ಪರೀಕ್ಷಾ ಪದ್ಧತಿ ಮತ್ತು ಅಂಕಗಳಿಗೆ ಆದ್ಯತೆ ನೀಡುವ ಪದ್ಧತಿಯನ್ನು ಪೆರಿಯಾರ್ ಕಟುವಾಗಿ ವಿರೋಧಿಸಿದರು.

ಸ್ತ್ರೀ ಶಿಕ್ಷಣ:
ಮಹಿಳೆಯರು ಶಿಕ್ಷಣ ಪಡೆಯದ ಹೊರತು ಸಾಮಾಜಿಕ ಬದಲಾವಣೆಗಳು ಆಗುವುದಿಲ್ಲ ಎಂದರು. ಪುರುಷರು ಮಹಿಳೆಯರಿಗೆ ಶಿಕ್ಷಣ ನೀಡಬೇಕು. ಅವರಿಗೆ ಲೌಕಿಕ ಶಿಕ್ಷಣ ಮತ್ತು ಸಂಶೋಧನಾ ಶಿಕ್ಷಣವನ್ನು ಉದಾರವಾಗಿ ನೀಡಬೇಕು. ದೇಶದಲ್ಲಿರುವ ಅನಿಷ್ಟಗಳಿಗೆಲ್ಲ ದೊಡ್ಡ ಅನಿಷ್ಟ ಎಂದರೆ ಹೆಣ್ಣನ್ನು ವಿವೇಚನಾರಹಿತ ಜೀವಿಗಳನ್ನಾಗಿ ಇಟ್ಟುಕೊಂಡಿರುವ ಕ್ರೌರ್ಯವೇ ಆಗಿದೆ. ಈ ಪರಿಸ್ಥಿತಿ ಹೋಗಲಾಡಿಸಬೇಕು ಎಂದರು.

ಪೆರಿಯಾರ್ ವಿರೋಧಿಸಿದ್ದು:
ಹಿಂದಿ ಹೇರಿಕೆ, ಕುಲ ಶಿಕ್ಷಣಾ ನೀತಿ, ದೇವದಾಸಿ ಪದ್ಧತಿ, ಮದ್ಯಪಾನ, ಬಾಲ್ಯ ವಿವಾಹ ಮತ್ತು ವರದಕ್ಷಿಣೆ.

ಭಾಷೆ, ಸಾಹಿತ್ಯ:
ಭಾಷೆಯ ಅವಶ್ಯಕತೆಯು ಅದರ ಬಳಕೆಯ ವಿಧಾನವನ್ನು ಅವಲಂಬಿಸಿರುತ್ತದೆ; ಭಾಷೆ, ಪುಸ್ತಕ, ಸಾಹಿತ್ಯ ಯಾವುದೇ ಇದ್ದರೂ ಮನುಷ್ಯನಿಗೆ ಘನತೆ, ವೈಚಾರಿಕತೆ, ಬೆಳವಣಿಗೆ ಮತ್ತು ಸದ್ಗುಣಗಳನ್ನು ನೀಡಬೇಕು ಎಂದು ಭಾವಿಸಿ ಭಾಷೆ, ಸಾಹಿತ್ಯದ ಬೆಳವಣಿಗೆಯ ಬಗ್ಗೆಯೂ ಪೆರಿಯಾರ್ ಹೇಳಿದ್ದಾರೆ. ಧರ್ಮ ಮತ್ತು ದೇವರಿಗೆ ಸಂಬಂಧವಿಲ್ಲದ ಸಾಹಿತ್ಯ, ಎಲ್ಲರಿಗೂ ಸಾಮಾನ್ಯವಾದ ನೈಸರ್ಗಿಕ ಜ್ಞಾನವನ್ನು ನೀಡುವ ಸಾಹಿತ್ಯ, ಯಾರೂ ನಿರಾಕರಿಸಲಾಗದ ವಿಜ್ಞಾನದ ಸಾಹಿತ್ಯ ಇವುಗಳಿಂದ ಮಾತ್ರ ಒಂದು ಭಾಷೆ ಮತ್ತು ಅದರ ಸಾಹಿತ್ಯ ಉನ್ನತವಾಗತ್ತದೆ.

ಅದರೊಂದಿಗೆ ಅದನ್ನು ನಿಭಾಯಿಸುವವರು ಜಾಣರಾಗುತ್ತಾರೆ ಎಂದು ಪೆರಿಯಾರ್ ಹೇಳಿದರು. ಪೆರಿಯಾರ್ ತಿರುಕ್ಕುರಳ್ ಅನ್ನು ಅಮೂಲ್ಯವಾದ ಪುಸ್ತಕವೆಂದು ಪರಿಗಣಿಸಿದ್ದಾರೆ. ಏಕೆಂದರೆ, ಇದು ಎಲ್ಲರಿಗೂ ಸಾಮಾನ್ಯವಾದ ವೈಜ್ಞಾನಿಕ ಪರಿಕಲ್ಪನೆಗಳು ಮತ್ತು ತತ್ವಶಾಸ್ತ್ರಗಳನ್ನು ಒಳಗೊಂಡಿದೆ. ರಾಜಕೀಯ, ಸಮಾಜ, ಆರ್ಥಿಕತೆ ಸೇರಿದಂತೆ ಎಲ್ಲವನ್ನೂ ಈ ಪುಸ್ತಕ ಒಳಗೊಂಡಿದೆ ಇದನ್ನು ಕಲಿತವರಿಗೆ ಸ್ವಾಭಿಮಾನ ಮೂಡುತ್ತದೆ ಎಂದರು.

ಮಹಿಳೆಯರ ಕಲ್ಯಾಣ:
ಆ ಕಾಲದಲ್ಲಿ ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ತುಳಿತಕ್ಕೊಳಗಾಗಿದ್ದರು. ಆದ್ದರಿಂದ ದೇಶ ವಿಮೋಚನೆಗಿಂತ ಮಹಿಳಾ ವಿಮೋಚನೆ ಮುಖ್ಯ ಎಂದು ಪೆರಿಯಾರ್ ಮನಗಂಡರು. ಶಿಕ್ಷಣ ಮತ್ತು ಉದ್ಯೋಗದಲ್ಲಿ ಮಹಿಳೆಯರಿಗೆ-ಪುರುಷರಿಗೆ ಸಮಾನವಾದ ಹಕ್ಕುಗಳನ್ನು ನೀಡಬೇಕು. ಮಹಿಳೆಯರಿಗೆ ಉದ್ಯೋಗದಲ್ಲಿ ಶೇ.50ರಷ್ಟು ಮೀಸಲಾತಿ ನೀಡಬೇಕು. ಮಹಿಳೆಯರು ಆರ್ಥಿಕವಾಗಿ ಇತರರ ಮೇಲೆ ಅವಲಂಬಿತರಾಗಬಾರದು. ಸುಶಿಕ್ಷಿತರಾಗಿ, ಸ್ವಂತ ದುಡಿಮೆಯಲ್ಲಿ, ಸಂಪನ್ಮೂಲಗಳನ್ನು ಕ್ರೋಢೀಕರಿಸಿಕೊಳ್ಳಬೇಕು. ಸ್ಪಷ್ಟ ಜ್ಞಾನದಿಂದ ಹಾಗೂ ಆತ್ಮವಿಶ್ವಾಸದಿಂದ ಕಾಣಿಸಿಕೊಳ್ಳಬೇಕು ಎಂದರು.

ಹೆಣ್ಣು ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲಿ ಮದುವೆ ಮಾಡಬಾರದು; ವಿಧವೆಯರು ಮರುಮದುವೆಯಾಗಲು ದಾರಿ ಮಾಡಿಕೊಡಬೇಕು ಎಂಬ ವಿಚಾರವನ್ನು ಒತ್ತಿ ಹೇಳಿದರು. ಕುಟುಂಬದಲ್ಲಿ ಪುರುಷರಿಗೆ ಸಮಾನವಾದ ಹಕ್ಕುಗಳನ್ನು ಮಹಿಳೆಯರಿಗೂ ನೀಡಬೇಕು. ಮಹಿಳೆಯರ ಅಭಿಪ್ರಾಯಗಳನ್ನೂ ಗೌರವಿಸಬೇಕು. ಕೌಟುಂಬಿಕ ಆಸ್ತಿಯಲ್ಲಿ ಪುರುಷರಿಗೆ ಸಮಾನವಾದ ಹಕ್ಕುಗಳನ್ನು ಮಹಿಳೆಯರಿಗೆ ನೀಡಬೇಕು. ಕೌಟುಂಬಿಕ ಕೆಲಸದಲ್ಲಿ ಪುರುಷರಿಗೆ ಪ್ರತ್ಯೇಕ ಕಾರ್ಯಗಳಿಲ್ಲ. ಪುರುಷರು ಕೂಡ ಕುಟುಂಬದ ಕೆಲಸದಲ್ಲಿ ಪಾಲ್ಗೊಳ್ಳಬೇಕು ಎಂದರು.

ಪೆರಿಯಾರ್ ಬಿತ್ತಿದ ಬೀಜಗಳು:
ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ, ಮಹಿಳೆಯರಿಗೆ ಮೀಸಲಾತಿ, ಮಹಿಳೆಯರಿಗೆ ಆಸ್ತಿ ಹಕ್ಕುಗಳು, ಕುಟುಂಬ ಕಲ್ಯಾಣ ಯೋಜನೆ, ಅಂತರ್ಜಾತಿ ವಿವಾಹ, ಸುಧಾರಿತ ವಿವಾಹ ಕಾಯಿದೆ ಮುಂತಾದವುಗಳು.

ಮಿತವ್ಯಯ:
ಪೆರಿಯಾರ್ ಅವರು ಮಿತವ್ಯಯ ಮಾಡುವ ಸದ್ಗುಣವನ್ನು ಹೆಚ್ಚು ಒತ್ತಿಹೇಳುತ್ತಿದ್ದರು; ಅದಕ್ಕೆ ತಕ್ಕಂತೆ ಬದುಕಿದರು. ಆರ್ಥಿಕ ಸ್ವಾವಲಂಬನೆ ಇಲ್ಲದಿರುವಾಗ ಎಲ್ಲರೂ ಮಿತವ್ಯಯ ರೂಢಿಸಿಕೊಳ್ಳಬೇಕು ಎಂದರು. ಹಬ್ಬ, ಆಚರಣೆಗಳಿಂದ ಮೂಢನಂಬಿಕೆಗಳು, ದುಂದುವೆಚ್ಚಗಳು ಉಂಟಾಗುವುದರಿಂದ ಅನಾವಶ್ಯಕವಾದ ಆಚಾರ-ವಿಚಾರಗಳನ್ನು ತಪ್ಪಿಸಬೇಕು ಎಂದರು. ಮದುವೆಯಂತಹ ಸಮಾರಂಭಗಳನ್ನು ಆಡಂಬರವಿಲ್ಲದೆ ಅತ್ಯಂತ ಸರಳವಾಗಿ ಹಾಗೂ ಸುಧಾರಿತ ರೀತಿಯಲ್ಲಿ ನಡೆಸಬೇಕು ಎಂದರು.

ಆಲೋಚನಾ ಕೌಶಲ್ಯಗಳು:
ಪೆರಿಯಾರ್ ಅವರ ಚಿಂತನೆಗಳು ದಾರ್ಶನಿಕವಾದದ್ದು; ವೈಜ್ಞಾನಿಕ ಆಧಾರಿತವಾದದ್ದು; ಮಾನವೀಯತೆ ಬೆಳೆಯಲು ಜನ್ಮತಾಳಿದ್ದು; ಅವರು ಎಂದಿಗೂ ಪ್ರಾಯೋಗಿಕವಲ್ಲದ ಅಭಿಪ್ರಾಯಗಳನ್ನು ಹೇಳಲಿಲ್ಲ. ಅಲ್ಲದೆ, ಅವರು ತಮ್ಮ ಸುಧಾರಣಾ ಕಲ್ಪನೆಗಳಿಗೆ ತಕ್ಕಂತೆ ಬದುಕಿದರು; ಅವರ ಜೀವನದುದ್ದಕ್ಕೂ ವಿಚಾರವಾದವನ್ನು ಪ್ರತಿಪಾದಿಸಿದರು; ಸಮಾಜವು ಮೂಢನಂಬಿಕೆಗಳಿಂದ ಚೇತರಿಸಿಕೊಳ್ಳಲು ಶ್ರಮಿಸಿದರು; ಅದಕ್ಕಾಗಿ ಹಲವು ಬಾರಿ ಜೈಲಿಗೆ ಹೋದರು; ಅವರು ಅನೇಕ ಜನರ ತೀವ್ರ ವಿರೋಧವನ್ನು ಎದುರಿಸಿದ್ದಾರೆ.

ಆದರೆ, ಕೊನೆಯ ಉಸಿರು ಇರುವವರೆಗೂ ಸಮಾಜ ಸುಧಾರಕರಾಗಿಯೇ ಬದುಕಿ, ತೀರಿಕೊಂಡರು. ಪೆರಿಯಾರ್ ಅವರ ಚಿಂತನೆಗಳು ಜ್ಞಾನದ ಜಗತ್ತಿಗೆ ಕೀಲಿ ಇದ್ದಂತೆ; ವೈಚಾರಿಕತೆಯ ಮಾರ್ಗಕ್ಕೆ ಮಾರ್ಗದರ್ಶಕರಂತೆ. ಮಾನವ ನೇಮದ ಕರೆ ಗಂಟೆ. ಪ್ರಬಲ ಜಾತಿಗಳಿಗೆ ಎಚ್ಚರಿಕೆ ಧ್ವನಿ. ಸಾಮಾಜಿಕ ಅನಿಷ್ಟಗಳನ್ನು ಹೋಗಲಾಡಿಸಲು ಇವರೇ ಸರಿಯಾದ ಮದ್ದು ಎಂದು ವಿದ್ವಾಂಸರು ಹೇಳುತ್ತಾರೆ.

ಉದ್ಯೋಗ ವಿದೇಶ

ತಮಿಳುನಾಡಿನಲ್ಲಿ ‘ಸರ್ವ-ಜಾತಿ ಪುರೋಹಿತರು’ ಯೋಜನೆಯಡಿ ಅರ್ಚಕರಾಗಲು ಮೂವರು ಮಹಿಳೆಯರು ಕೋರ್ಸ್ ಪೂರ್ಣಗೊಳಿಸಿದ್ದಾರೆ.

ತಮಿಳುನಾಡು ಸರ್ಕಾರವು ಎಲ್ಲಾ ಸಮುದಾಯಗಳ ಪುರೋಹಿತರಿಗೆ ತರಬೇತಿ ನೀಡುವ ‘ಅರ್ಚಕರ್ ಪಯಿರ್ಚಿ ಪಲ್ಲಿ’ (ಪುರೋಹಿತರ ತರಬೇತಿ ಶಾಲೆಗಳು) ನಡೆಸುತ್ತದೆ. ಇದೇ ಮೊದಲ ಬಾರಿಗೆ ಮಹಿಳೆಯರು ದಾಖಲಾಗಿದ್ದು ಮತ್ತು ಕೋರ್ಸ್ ಪೂರ್ಣಗೊಳಿಸಿದ್ದಾರೆ.

ಇದರ ಬಗ್ಗೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ತಮ್ಮ ಎಕ್ಸ್ ಸೈಟ್‌ನಲ್ಲಿ, (ಹಿಂದೆ ಟ್ವಿಟರ್) “ಮಹಿಳೆ ವಿಮಾನವನ್ನು ಚಲಿಸಿದರೂ, ಬಾಹ್ಯಾಕಾಶಕ್ಕೆ ಹೋಗಿ ಬಂದಿದ್ದರೂ, ದೇವಾಲಯದ ಗರ್ಭಗುಡಿಗಳು ಅವರು ಪ್ರವೇಶಿಸಲು ಸಾಧ್ಯವಾಗದ ಸ್ಥಳಗಳಾಗಿದ್ದವು. ಸ್ತ್ರೀ ದೇವತೆಗಳ ದೇವಾಲಯಗಳ ವಿಷಯವೂ ಇದೇ ಆಗಿತ್ತು.

ಆದರೆ, ಇನ್ನು ಮುಂದೆ ಹಾಗಾಗುವುದಿಲ್ಲ! ಎಲ್ಲ ಜಾತಿಯವರೂ ಅರ್ಚಕರಾಗಬಹುದು ಎಂಬ ಪೆರಿಯಾರ್ ಅವರ ಎದೆಗೆ ಚುಚ್ಚಿದ ಮುಳ್ಳನ್ನು ನಮ್ಮ ದ್ರಾವಿಡ ಮಾದರಿಯ ಆಡಳಿತ ತೆಗೆದುಹಾಕಿದಾಗ, ಗರ್ಭಿಣಿಯರೂ ಗರ್ಭಗುಡಿಯೊಳಗೆ…. ಎಂದು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಪೋಸ್ಟ್ ಮಾಡಿದ್ದಾರೆ.

ದೇಶ

ಯಾವುದೇ ಧಾರ್ಮಿಕ ವಿಧಿಯಿಲ್ಲದೆ ಸ್ವಾಭಿಮಾನದ ವಿವಾಹವಾಗುತ್ತಿರುವ ದಂಪತಿಗಳನ್ನು ಪರಿಚಯವಿರುವ ವಕೀಲರು ಮಾನ್ಯತೆ ನೀಡಬಹುದು ಎಂದು ಸುಪ್ರೀಂ ಕೋರ್ಟ್ ಆದೇಶಿಸಿದೆ.

1968ರಲ್ಲಿ, ತಮಿಳುನಾಡು ಸರ್ಕಾರ ಯಾವುದೇ ಸಾಮಾನ್ಯ ಧಾರ್ಮಿಕ ಆಚರಣೆಗಳಿಲ್ಲದೆ ಸ್ವಾಭಿಮಾನದ ವಿವಾಹಗಳನ್ನು ಗುರುತಿಸಲು ಕಾನೂನನ್ನು ಜಾರಿಗೆ ತಂದಿತು. ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ಹಿಂದೂ ವಿವಾಹ ತಿದ್ದುಪಡಿ ಕಾಯ್ದೆಯೂ ಇದಕ್ಕೆ ಮನ್ನಣೆ ನೀಡಿತು. ಈ ಕಾನೂನು, ಸಂಬಂಧಿಕರು ಮತ್ತು ಸ್ನೇಹಿತರ ಸಮ್ಮುಖದಲ್ಲಿ ಸರಳ ವಿವಾಹಗಳನ್ನು ಪ್ರೋತ್ಸಾಹಿಸುತ್ತದೆ. ಅದೇ ವೇಳೆಯಲ್ಲಿ, ಅಂತಹ ವಿವಾಹಗಳನ್ನು ಕಾನೂನಿನ ಪ್ರಕಾರ ನೋಂದಾಯಿಸಿಕೊಳ್ಳಬೇಕು.

ಈ ಹಿನ್ನಲೆಯಲ್ಲಿ ಇಳವರಸನ್ ಎಂಬುವವರು ಧಾರ್ಮಿಕ ಆಚರಣೆಗಳಿಲ್ಲದೆ ಸ್ವಾಭಿಮಾನದ ವಿವಾಹವನ್ನು ಮಾಡಿಕೊಂಡರು. ಆದರೆ, ಪತ್ನಿಯ ಸಂಬಂಧಿಕರು ವಿವಾಹಿತಳನ್ನು ಬಲವಂತವಾಗಿ ಕರೆದೊಯ್ದು ಅಕ್ರಮ ಬಂಧನದಲ್ಲಿಟ್ಟಿದ್ದಾರೆ ಎಂದು ಆರೋಪಿಸಿ ಇಳವರಸನ್ ಮದ್ರಾಸ್ ಹೈಕೋರ್ಟ್ ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದರು. ವಕೀಲರ ಸಮ್ಮುಖದಲ್ಲಿಯೇ ಸ್ವಾಭಿಮಾನದ ವಿವಾಹ ನಡೆದಿರುವುದಾಗಿಯೂ ಅವರು ತಮ್ಮ ಅರ್ಜಿಯಲ್ಲಿ ಉಲ್ಲೇಖಿಸಿದ್ದರು.

ಅವರ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ಇಂತಹ ಸ್ವಾಭಿಮಾನದ ಮದುವೆಗಳನ್ನು ವಕೀಲರೇ ನಡೆಸಿ, ಆ ನಂತರ ಪ್ರಮಾಣಪತ್ರ ನೀಡುವಂತಿಲ್ಲ ಎಂದು ಆದೇಶಿಸಿ, ಇಳವರಸನ್ ಅರ್ಜಿಯನ್ನು ವಜಾಗೊಳಿಸಿತು. ಅಲ್ಲದೇ ಇಂತಹ ನಕಲಿ ವಿವಾಹ ಪ್ರಮಾಣ ಪತ್ರ ನೀಡುವ ವಕೀಲರ ವಿರುದ್ಧ ಕ್ರಮ ಕೈಗೊಳ್ಳುವಂತೆಯೂ ಬಾರ್ ಕೌನ್ಸಿಲ್ ಗೆ ಸೂಚಿಸಿತು.

ನಂತರ ಇಳವರಸನ್ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದರು. ನ್ಯಾಯಮೂರ್ತಿಗಳಾದ ಎಸ್.ರವೀಂದ್ರ ಭಟ್ ಮತ್ತು ಅರವಿಂದ್ ಕುಮಾರ್ ಅವರನ್ನೊಳಗೊಂಡ ಪೀಠವು ಸೋಮವಾರ ಅರ್ಜಿಯ ವಿಚಾರಣೆ ನಡೆಸಿತು. ನ್ಯಾಯಾಧೀಶರು ಎರಡೂ ಕಡೆಯ ವಾದವನ್ನು ಆಲಿಸಿ ಮದ್ರಾಸ್ ಹೈಕೋರ್ಟ್ ಆದೇಶವನ್ನು ರದ್ದುಗೊಳಿಸಿದರು. ವಕೀಲರು ಸ್ವಾಭಿಮಾನಿ ವಿವಾಹಗಳನ್ನು ಗುರುತಿಸಬಹುದು ಎಂದೂ ಆದೇಶ ಮಾಡಿದರು.

“ಅದೇ ಸಮಯದಲ್ಲಿ, ವಕೀಲರು ದಂಪತಿಗಳ ವೈಯಕ್ತಿಕ ಪರಿಚಯವಾಗಿ ಮಾತ್ರ ಸ್ವಾಭಿಮಾನದ ಮದುವೆಗಳನ್ನು ಮಾಡಬಹುದು ಮತ್ತು ನ್ಯಾಯಾಲಯದ ಪ್ರತಿನಿಧಿಯಾಗಿ ಅಲ್ಲ” ಎಂದೂ ನ್ಯಾಯಾಧೀಶರು ಹೇಳಿದ್ದಾರೆ.

ದೇಶ

ಮೋದಿಯ ಧಾರ್ಮಿಕ ಆರ್ಯ ಮಾದರಿಯನ್ನು ಸೋಲಿಸಲು ನಾಯಕರು ಮತ್ತು ಕಾರ್ಯಕರ್ತರ ಪಡೆ ಸಾಲುವುದಿಲ್ಲ; ಮೋದಿ ಮಾದರಿಯನ್ನು ಸೋಲಿಸಲು ಪೆರಿಯಾರ್ ಅವರ ದ್ರಾವಿಡ ಮಾದರಿಯೇ ಸರಿಯಾದ ಅಸ್ತ್ರ. ಎಂದು ಡಿಎಂಕೆ ಸಂಸದ ಎ.ರಾಜ ಹೇಳಿದ್ದಾರೆ.

ನೆನ್ನೆ ತಿರುಚ್ಚಿಯಲ್ಲಿ ಡಿಎಂಕೆ ತರಬೇತಿ ಶಿಬಿರವನ್ನು ಉದ್ದೇಶಿಸಿ ಮಾತನಾಡಿದ ರಾಜ, “ಇಂದು ಜಗತ್ತು ಭಾರತವನ್ನು ನೋಡಿ ಉಗುಳುತ್ತಿದೆ. ನಮ್ಮ ಊರಿನಲ್ಲಿ ಹಲವು ಜಾತಿ ಭೇದಗಳಿವೆ. ಬಡವ-ಶ್ರೀಮಂತ ಎಂಬ ಭೇದವಿದೆ. ಆದರೆ ಅದು ಯಾವುದೇ ಜಾತಿಯ ಮಹಿಳೆಯಾಗಿರಲಿ. ಆ ಮಹಿಳೆಯನ್ನು ಯಾರಾದರೂ ವಿವಸ್ತ್ರಗೊಳಿಸಲು ಸಾಧ್ಯವೇ? ನಾವು ಬಿಟ್ಟುಬಿಡುತ್ತೇವಾ? ಜಾತಿ ಭೇದ ನೋಡುವವರೂ ಕೂಡ, ಬೇರೆ ಜಾತಿಯ ಮಹಿಳೆಗೆ ಅನ್ಯಾಯವಾಗುತ್ತಿದ್ದರೆ ಪ್ರಶ್ನೆ ಮಾಡುತ್ತಾರೆ. ಈ ಮಣ್ಣಿನಲ್ಲಿ ಮಹಿಳೆಗೆ ಪ್ರತ್ಯೇಕ ಗೌರವವಿದೆ. ಆದರೆ ಇದು ಮೋದಿಯ ಬಳಿ ಕಾಣತ್ತಿಲ್ಲ.

ಒಂದು ಕಡೆ ಭ್ರಷ್ಟಾಚಾರ; ಒಂದು ಕಡೆ ಸರ್ವಾಧಿಕಾರ; ಇನ್ನೊಂದು ಕಡೆ ಧಾರ್ಮಿಕತೆ. ಮತೀಯತೆ ಮತ್ತು ಭ್ರಷ್ಟಾಚಾರ ಸೇರಿಕೊಂಡು ಡಿಎಂಕೆ ಪಕ್ಷವನ್ನು ನೋಡಿ, ಇದೊಂದು ಭ್ರಷ್ಟ ಪಕ್ಷ ಮತ್ತು ಕುಟುಂಬ ಆಡಳಿತ ಎಂದು ಹೇಳುತ್ತಿದೆ. ಹೌದು, ಇದು ಕುಟುಂಬ ಆಡಳಿತವೇ? ಗೋಪಾಲಪುರಂನ ಮನೆಯನ್ನು ಅಡಮಾನವಿಟ್ಟು, ಮಿಸಾದಲ್ಲಿ ಬಂಧಿತರಾಗಿ ಒಂದು ವರ್ಷಗಳಿಗೂ ಮೇಲಾಗಿ ಜೈಲಿನಲ್ಲಿದ್ದ ಕಾರ್ಯಕರ್ತರ ಕುಟುಂಬಕ್ಕೆ ಹಣ ಕಳುಹಿಸಿದ ಕುಟುಂಬದ ಯಜಮಾನನೇ ನಮ್ಮ ಕರುಣಾನಿಧಿ. ಈ ರೀತಿ ನೋಡುವುದಾದರೆ ಇದು ಕುಟುಂಬ ಆಡಳಿತವೇ? ನಮ್ಮ ಕುಟುಂಬವನ್ನು ಪ್ರಶ್ನಿಸುವ ಯೋಗ್ಯತೆ ನಿಮಗೆ (ಬಿಜೆಪಿ) ಇಲ್ಲ.

ಮೋದಿ ವಿರುದ್ಧ ಉತ್ತರದ ರಾಜ್ಯಗಳಲ್ಲಿ ದೊಡ್ಡ ಪಡೆಯೇ ಸೇರುತ್ತಿದೆ. ಆದರೆ ಮೋದಿ ಎಂಬ ಮತೀಯವಾದವನ್ನು ಸೋಲಿಸಲು ಈ ಪಡೆ ಸಾಲುವುದಿಲ್ಲ. ತತ್ವದ ಅಗತ್ಯವಿದೆ. ಪೆರಿಯಾರ್ ರವರ ದ್ರಾವಿಡ ತತ್ವವು ಮೋದಿಯನ್ನು ಬೀಳಿಸಬಲ್ಲ ಸರಿಯಾದ ಆಯುಧವಾಗಿದೆ. ಮೋದಿಯವರ ಆರ್ಯ ಮಾದರಿಯನ್ನು ಪೆರಿಯಾರ್ ಅವರ ದ್ರಾವಿಡ ಮಾದರಿಯಿಂದ ಮಾತ್ರ ಸೋಲಿಸಲು ಸಾಧ್ಯ” ಎಂದರು.

ದೇಶ

ಚೆನ್ನೈ: ವೈಕಂ ಚಳವಳಿಯ ಶತಮಾನೋತ್ಸವವನ್ನು ಒಂದು ವರ್ಷ ಆಚರಿಸಲಾಗುವುದು ಎಂದು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ವಿಧಾನಸಭೆಯಲ್ಲಿ ಘೋಷಿಸಿದರು. ನಿಯಮ 110ರ ಅಡಿಯಲ್ಲಿ ಹೊಸ ಅಧಿಸೂಚನೆಗಳನ್ನು ಹೊರಡಿಸಿ ಮಾತನಾಡಿದ ಎಂ.ಕೆ.ಸ್ಟಾಲಿನ್, “ವೈಕಂ ಚಳುವಳಿ ಪ್ರಾರಂಭವಾದ ಶತಮಾನದ ಆರಂಭದ ದಿನ ಇಂದು; ಇಂದು ಐತಿಹಾಸಿಕ ದಿನ. ಪ್ರತಿಭಟನೆಯ ಯಶಸ್ಸಿಗೆ ಕಾರಣರಾದ ತಂದೈ ಪೆರಿಯಾರನ್ನು ಗೌರವಿಸುವ ರೀತಿಯಲ್ಲಿ ಐತಿಹಾಸಿಕವಾದ ವಿಶೇಷ ಪ್ರಕಟಣೆಯನ್ನು ಪ್ರಕಟಿಸುತ್ತಿದ್ದೇನೆ. ಒಂದುವರೆ ವರ್ಷಗಳ ಮೇಲೆ ನಡೆದ ಈ ಚಳುವಳಿ, 1925 ನವೆಂಬರ್ 23 ರಂದು ಕೊನೆಗೊಂಡಿತು. ಅದೇ ವರ್ಷ ನವೆಂಬರ್ 29 ರಂದು ಪೆರಿಯಾರ್ ನೇತೃತ್ವದಲ್ಲಿ ವೈಕಂನಲ್ಲಿ ವಿಜಯೋತ್ಸವ ಆಚರಿಸಲಾಯಿತು.

ಭಾರತದಲ್ಲಿ ನಡೆದ ಎಲ್ಲಾ ದೇವಾಲಯದ ಗರ್ಭಗುಡಿ ಪ್ರವೇಶದ ಹೋರಾಟಗಳಿಗೆ ವೈಕಂ ಚಳುವಳಿಯೇ ಮಾದರಿಯಾಗಿತ್ತು. ದಬ್ಬಾಳಿಕೆಗೆ ಒಳಗಾದವರು ಸಮತ್ವದ ಹಕ್ಕನ್ನು ಪಡೆಯುವುದರಲ್ಲಿ ಇದುವೇ ಪ್ರೇರಣೆಯಾಗಿತ್ತು ಎಂದು ಹೇಳಿದರೆ ಅದು ಹೆಚ್ಚೇನೂ ಆಗುವುದಿಲ್ಲ. ವೈಕಂ ದೇವಾಲಯ ಪ್ರವೇಶ ಚಳುವಳಿಯ ಶತಮಾನೋತ್ಸವ ಸಮಾರಂಭವನ್ನು ತಮಿಳುನಾಡು ಸರ್ಕಾರ ಬಹಳ ಅದ್ದೂರಿಯಾಗಿ ಆಚರಿಸುತ್ತದೆ. ವರ್ಷಾದ್ಯಂತ ವೈಕಂ ಚಳುವಳಿಯ ಉದ್ದೇಶ, ಯಶಸ್ಸನ್ನು ಸಾರ್ವಜನಿಕರು, ವಿದ್ಯಾರ್ಥಿಗಳು ತಿಳಿದುಕೊಳ್ಳುವ ರೀತಿಯಲ್ಲಿ ಕಾರ್ಯಕ್ರಮವನ್ನು ನಡೆಸಲಾಗುತ್ತದೆ. ವೈಕಂ ಚಳುವಳಿಯಲ್ಲಿ ಪೆರಿಯಾರ್ ಅವರನ್ನು ಬಂಧಿಸಿ ಜೈಲಿಗಟ್ಟಿದ ಅರುವಿಕ್ಕುತ್ತು ಗ್ರಾಮದಲ್ಲಿ ಸ್ಮಾರಕ ಸ್ಥಾಪಿಸಲು ಪ್ರಯತ್ನಿಸಲಾಗುವುದು. ಸೆಪ್ಟಂಬರ್ 17ರ ಸಾಮಾಜಿಕ ನ್ಯಾಯ ದಿನದಂದು (ಪೆರಿಯಾರ್ ಜನ್ಮ ದಿನಾಚರಣೆ) ತಮಿಳುನಾಡು ಸರ್ಕಾರ ವೈಕಂ ಪ್ರಶಸ್ತಿ ಪ್ರದಾನ ಮಾಡಲಿದೆ” ಎಂದು ಹೇಳಿದರು.

Periyar, the unsung hero who breathed life back into Vaikom Satyagraha
An unsung hero, he has been a forgotten face in Kerala’s Renaissance history. He’s known for reinvigorating a historic people’s movement from a sinking space — the Vaikom Satyagraha.