ದರ್ಬಾರ್ ಪರಿಶುದ್ದ ಹಾಸ್ಯಚಿತ್ರ: ನಾಯಕ‌ ಸತೀಶ್ » Dynamic Leader
October 31, 2024
ಸಿನಿಮಾ

ದರ್ಬಾರ್ ಪರಿಶುದ್ದ ಹಾಸ್ಯಚಿತ್ರ: ನಾಯಕ‌ ಸತೀಶ್

ವರದಿ: ಅರುಣ್ ಜಿ.,

ಬೆಂಗಳೂರು: ಇನ್ನೇನು ಬಹುದಿನಗಳಿಂದ ಕಾಯುತ್ತಿದ್ದ ದರ್ಬಾರ್ ಚಲನಚಿತ್ರ ಈ ಶುಕ್ರವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಸಂಗೀತ ನಿರ್ದೇಶಕ ವಿ.ಮನೋಹರ್ ಅವರನ್ನು 23 ವರ್ಷಗಳ‌ ನಂತರ ಮತ್ತೆ ನಿರ್ದೇಶನಕ್ಕೆ ಕೈ ಹಾಕುವಂತೆ ಪ್ರೇರೇಪಿಸಿದ್ದು “ದರ್ಬಾರ್” ಚಿತ್ರದ ಕಂಟೆಂಟ್.  ಇದೇ 9 ರಂದು ತೆರೆ ಕಾಣಲಿರುವ ಈ ಚಿತ್ರದ ಬಿಡುಗಡೆಪೂರ್ವ ಪತ್ರಿಕಾಗೋಷ್ಟಿ ಇತ್ತೀಚೆಗೆ ನಡೆದಿದ್ದು, ಈ ಸಂದರ್ಭದಲ್ಲಿ ಸಿನಿಮಾ ಕುರಿತಂತೆ ನಿರ್ದೇಶಕ ವಿ.ಮನೋಹರ್, ನಾಯಕ ಸತೀಶ್, ನಾಯಕಿ ಜಾಹ್ನವಿ, ಕಾಮಿಡಿ ಕಿಲಾಡಿ ಸಂತು, ಹುಲಿ ಕಾರ್ತೀಕ್  ಮಾತನಾಡಿದರು. 

ಮೊದಲು ವಿ.ಮನೋಹರ್ ಮಾತನಾಡುತ್ತ  “ಸಂತು ಕಾರ್ತೀಕ್ ನಮ್ಮ ಚಿತ್ರದಲ್ಲಿ  ಪ್ರಧಾನ ಪಾತ್ರ ವಹಿಸಿದ್ದಾರೆ. ಮೈಸೂರು, ಚನ್ನಪಟ್ಟಣ, ದಾವಣಗೆರೆ ಇಲ್ಲೆಲ್ಲ ಟ್ಯಾಬುಲೋ ಜೊತೆ ಹೋದಾಗ ಬಹಳ ದೊಡ್ಡ ರೆಸ್ಪಾನ್ಸ್ ಬಂತು. ಕಾಲೇಜ್ ಸ್ಟೂಡೆಂಟ್ ಗಳಲ್ಲಿ  ಜೋಷ್ ಇತ್ತು. 23 ವರ್ಷಗಳ ವನವಾಸ ಮುಗಿಸಿ ಬಂದಿದ್ದೀರಿ ಎಂದು ಒಬ್ಬ ಪತ್ರಕರ್ತರು ಹೇಳಿದರು. ನಮ್ಮ‌ ನೋವು ದುಃಖಗಳನ್ನು ಕಾಮಿಡಿಯಾಗಿ ತಗೊಂಡಾಗ ತೃಪ್ತಿಯಾಗುತ್ತೆ. ಮ್ಯೂಸಿಕ್ ಮಾಡುವುದು ಇನ್ನೊಬ್ಬರ ಕನಸಿಗೆ, ಸಿನಿಮಾ ಮಾಡುವುದು ನಮ್ಮ‌ ಕನಸಿಗೆ. ಸತೀಶ್ ನಮ್ಮ‌ ಕನಸಿಗೆ ಜೊತೆಯಾದರು. ಈಚೆಗೆ ಚಿತ್ರದ ಟೆಸ್ಟ್ ಷೋ‌ ಮಾಡಿದಾಗ ಒಳ್ಳೆಯ ಅಭಿಪ್ರಾಯ ಬಂತು. ಥಿಯೇಟರಿಗೆ ಬರುವ ಪ್ರೇಕ್ಷಕರಿಗೆ ಮನರಂಜನೆ ಖಚಿತ. ಚಂದನ್ ಶೆಟ್ಟಿ ಅವರು ಹಾಡಿದ ಹೀರೋ ಇಂಟ್ರಡಕ್ಷನ್ ಹಾಡನ್ನು ಮಂಗಳವಾರ ರಿಲೀಸ್ ಮಾಡುತ್ತೇವೆ. ಚಿತ್ರದ ಆರಂಭದಲ್ಲಿ ಬರುವ, ನಾಯಕನ ನೈತಿಕ ದಾದಾಗಿರಿ ಹೇಳುವ ಸಾಂಗ್ ಅದು” ಎಂದರು. 

ನಂತರ ಸಂತು ಮಾತನಾಡಿ, “ಅದ್ಭುತವಾದ ಸಿಚುಯೇಶನ್ ಕಾಮಿಡಿ ಇರುವಂಥ ಚಿತ್ರ. ಟೆಕ್ನಿಕಲ್ ಪ್ರೀಮಿಯರ್ ಷೋ ಮಾಡಿದಾಗ ಬಂದ ರಿಯಾಕ್ಷನ್ ಕಂಡು ನಿಜಕ್ಕೂ ಖುಷಿ ಆಯ್ತು. ಜನ ದುಡ್ಡು ಇಸ್ಕೊಂಡು ಓಟ್ ಹಾಕಿದರೆ ಏನಾಗುತ್ತೆ ಅನ್ನೋದು ಈ ಸಿನಿಮಾದಲ್ಲಿದೆ. ಪ್ರಾಮಾಣಿಕ‌ ವ್ಯಕ್ತಿಗೆ‌ ನಮ್ಮ ಮತ ಹಾಕಬೇಕು ಎಂಬ ಅರಿವು ಮೂಡಿಸುತ್ತದೆ. ನನ್ನ ಪಾತ್ರ ತುಂಬಾ ನಗಿಸುತ್ತದೆ. ಕಾರ್ತೀಕ್ ಕಾಮಿಡಿ ಬಿಟ್ಟು ಫಸ್ಟ್ ಟೈಮ್ ವಿಲನ್ ರೋಲ್ ಮಾಡಿದ್ದಾರೆ. ಸತೀಶ್ ತಾವೊಬ್ಬರೇ ಸ್ಕ್ರೀನ್ ಮೇಲಿರಬೇಕು ಎಂದು ಯೋಚಿಸದೆ ಎಲ್ಲರಿಗೂ ಸಮಾನ ಅವಕಾಶ ನೀಡಿದ್ದಾರೆ. ಪ್ರತಿ ಪಾತ್ರಕ್ಕೂ ನುರಿತ ಕಲಾವಿದರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ನನ್ನದು ವೈರ ಎಂಬ ಪಾತ್ರ” ಎಂದು ಹೇಳಿದರು.

ನಾಯಕ ಸತೀಶ್ ‌ಮಾತನಾಡಿ, “ಇತ್ತೀಚಿಗೆ ಜನ ಯಾಕೆ ಸಿನಿಮಾಗೆ ಬರುತ್ತಿಲ್ಲ ಅಂತ ನಾನೂ ಯೋಚಿಸಿದೆ. ನಮ್ಮ ಚಿತ್ರವು ಖಂಡಿತ ಮನರಂಜನೆ ನೀಡುತ್ತದೆ. ಕಾರ್ತೀಕ್ ಅವರು ನಾವು ಜೀವನದಲ್ಲಿ ನೋಡುವಂಥ ಅನೇಕ ಚಪ್ಪರ್ ಗಳ ಪಾತ್ರವನ್ನು ಪ್ರತಿನಿಧಿಸಿದ್ದಾರೆ. ಇನ್ನು ಸಂತು ಇಬ್ಬರಿಗೆ ಜಗಳ ತಂದಿಟ್ಟು ಎಂಜಾಯ್ ಮಾಡುವಂಥ ಪಾತ್ರ. ಸಿನಿಮಾದಲ್ಲಿ ಪಾತ್ರಗಳು ಗಂಭೀರವಾಗಿರುತ್ತೆ. ಅದು ನೋಡುಗರಿಗೆ ಮನರಂಜನೆ ನೀಡುತ್ತೆ. ಸಾಂದರ್ಭಿಕ ಹಾಸ್ಯ ದೃಶ್ಯಗಳನ್ನು ಜಾಸ್ತಿ ಇಟ್ಟಿದ್ದೇವೆ. ಇಂಡಸ್ಟ್ರಿ ಮತ್ತೆ ಮೊದಲಿನಂತಾಗಬೇಕು. ಅದು ನಮ್ಮ ಚಿತ್ರದಿಂದಲೇ ಆಗಲಿ. ನಾನು ಸಿನಿಮಾದಲ್ಲಿ ದುಡ್ಡು ಮಾಡಲು ಬಂದಿಲ್ಲ. ಜನರಿಗೆ  ಒಳ್ಳೆಯ ಸಿನಿಮಾ ಕೊಡಬೇಕು ಅಂತ ಬಂದಿದ್ದೇನೆ. ಹತ್ತು ಜನ ಬಂದು ಸಿನಿಮಾ ನೋಡಿದರೆ ಅವರು ನೂರು ಜನಕ್ಕೆ ಖಂಡಿತ ಹೇಳ್ತಾರೆ. ಸಿನಿಮಾ‌ ಕಮರ್ಷಿಯಲಿ ಏನಾಗುತ್ತೋ ಗೊತ್ತಿಲ್ಲ. ಒಳ್ಳೆಯ ಸಿನಿಮಾ ಟೀಮ್ ನೊಂದಿಗೆ ಕೆಲಸ ಮಾಡಿದ ತೃಪ್ತಿಯಿದೆ” ಎಂದು ಹೇಳಿದರು.

ಇದನ್ನೂ ಓದಿ: ಆಡೆ ನಮ್ God: ಕೆ.ಹೆಚ್.ವಿಶ್ವನಾಥ್ ಸಾರಥ್ಯದ ಹೊಸ ಸಿನಿಮಾ ಟೈಟಲ್!

ನಂತರ ನಾಯಕಿ ಜಾಹ್ನವಿ, ಖಳನಾಯಕನ ಪಾತ್ರ ಮಾಡಿರುವ ಹುಲಿ ಕಾರ್ತೀಕ್ ತಮ್ಮ ಪಾತ್ರಗಳ ಬಗ್ಗೆ ಮಾತನಾಡಿದರು. ಚಿತ್ರದ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಗಳನ್ನು ಸತೀಶ್ ಅವರೇ  ಬರೆದಿದ್ದು, ದರ್ಬಾರ್ ಪ್ರೊಡಕ್ಷನ್ಸ್ ಮೂಲಕ ಬಿ.ಎನ್.ಶಿಲ್ಪ ಅವರು ನಿರ್ಮಾಣ ಮಾಡಿದ್ದಾರೆ. ಮಾಸ್ ಮಾದ, ವಿನೋದ್ ಸಾರಥ್ಯದ 3 ಸಾಹಸ ದೃಶ್ಯಗಳು ಚಿತ್ರದಲ್ಲಿವೆ. ಹಿರಿಯ ಕಲಾವಿದರಾದ ಎಂ.ಎನ್.ಲಕ್ಷ್ಮಿದೇವಿ, ಅಶೋಕ್ ಹೀಗೆ ಸಾಕಷ್ಟು ಜನ ಅಭಿನಯಿಸಿದ್ದಾರೆ. ಮೂರು ಹಾಡುಗಳು ಚಿತ್ರದಲ್ಲಿದ್ದು, ಟೈಟಲ್ ಸಾಂಗನ್ನು ಚಂದನ್ ಶೆಟ್ಟಿ ಹಾಡಿದ್ದಾರೆ, ರಾಜಕೀಯ ವಿಡಂಬನೆಯ ಹಾಡನ್ನು ಉಪೇಂದ್ರ ಹಾಡಿದ್ದಾರೆ, ಇನ್ನು ಡ್ಯುಯೆಟ್ ಹಾಡಿಗೆ ಜಯಂತ್ ಕಾಯ್ಕಿಣಿ ಸಾಹಿತ್ಯ ಬರೆದಿದ್ದಾರೆ.

Related Posts