ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
Rahul Gandhi Archives » Page 5 of 8 » Dynamic Leader
October 23, 2024
Home Posts tagged Rahul Gandhi (Page 5)
ರಾಜಕೀಯ

ಡಿ.ಸಿ.ಪ್ರಕಾಶ್ ಸಂಪಾದಕರು

ಚುನಾವಣಾ ಆಯೋಗವು ಮಧ್ಯಪ್ರದೇಶ, ಛತ್ತೀಸ್‌ಗಢ, ರಾಜಸ್ಥಾನ, ತೆಲಂಗಾಣ ಮತ್ತು ಮಿಜೋರಾಂ ವಿಧಾನಸಭಾ ಚುನಾವಣಾ ದಿನಾಂಕಗಳನ್ನು ಪ್ರಕಟಿಸಿದೆ.

ಮಧ್ಯಪ್ರದೇಶ ಮತ್ತು ರಾಜಸ್ಥಾನ ಸೇರಿದಂತೆ ಐದು ರಾಜ್ಯಗಳ ವಿಧಾನಸಭಾ ಚುನಾವಣೆಗಳು ಮುಂಬರುವ ಸಂಸತ್ತಿನ ಚುನಾವಣೆಯ ಮುನ್ನೋಟ ಎಂದು ಪರಿಗಣಿಸಲಾಗಿದೆ. ಹೀಗಾಗಿ ಬಿಜೆಪಿ, ಕಾಂಗ್ರೆಸ್ ಸೇರಿದಂತೆ ಎಲ್ಲಾ ರಾಜಕೀಯ ಪಕ್ಷಗಳು ಐದು ರಾಜ್ಯಗಳ ಚುನಾವಣಾ ಕಾರ್ಯದಲ್ಲಿ ಕೆಲ ತಿಂಗಳ ಹಿಂದೆಯೇ ನಿರತವಾಗಿದ್ದು, ಇದೀಗ ಚುನಾವಣಾ ಆಯೋಗ ದಿನಾಂಕ ಪ್ರಕಟಿಸಿದೆ.

ಮಧ್ಯಪ್ರದೇಶ, ಛತ್ತೀಸ್‌ಗಢ, ರಾಜಸ್ಥಾನ, ತೆಲಂಗಾಣ ಮತ್ತು ಮಿಜೋರಾಂ ಐದು ರಾಜ್ಯಗಳ ಚುನಾವಣಾ ವೇಳಾಪಟ್ಟಿಯನ್ನು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಇಂದು ಪ್ರಕಟಿಸಿದ್ದಾರೆ. ಅದರಂತೆ ಛತ್ತೀಸ್ ಗಢದಲ್ಲಿ ನವೆಂಬರ್ 7 ಮತ್ತು 17 ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ನವೆಂಬರ್ 7 ರಂದು ಮಿಜೋರಾಂ, ನವೆಂಬರ್ 17 ರಂದು ಮಧ್ಯಪ್ರದೇಶ, ನವೆಂಬರ್ 23 ರಂದು ರಾಜಸ್ಥಾನ ಮತ್ತು ನವೆಂಬರ್ 30 ರಂದು ತೆಲಂಗಾಣದಲ್ಲಿ ಚುನಾವಣೆ ನಡೆಯಲಿದೆ ಎಂದು ಆಯುಕ್ತ ರಾಜೀವ್ ಕುಮಾರ್ ತಿಳಿಸಿದ್ದಾರೆ.

ರಾಜಸ್ಥಾನ ಮತ್ತು ಛತ್ತೀಸ್‌ಗಢದಲ್ಲಿ ಕಾಂಗ್ರೆಸ್‌ ಪಕ್ಷ ಆಡಳಿತ ನಡೆಸುತ್ತಿದೆ. ಮಧ್ಯಪ್ರದೇಶದಲ್ಲಿ ಬಿಜೆಪಿ, ತೆಲಂಗಾಣದಲ್ಲಿ ಭಾರತ್ ರಾಷ್ಟ್ರ ಸಮಿತಿ ಮತ್ತು ಮಿಜೋರಾಂನಲ್ಲಿ ಮಿಜೋ ನ್ಯಾಷನಲ್ ಫ್ರಂಟ್ ಆಡಳಿತ ನಡೆಸುತ್ತಿದೆ. ರಾಜಸ್ಥಾನ 200 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದೆ. ಅಲ್ಲಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹಾಗೂ ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ನಡುವಿನ ಆಂತರಿಕ ಸಂಘರ್ಷ ಕಾಂಗ್ರೆಸ್ ಗೆ ಹಿನ್ನಡೆಯಾಗಿ ಪರಿಣಮಿಸಿತ್ತು. ಆದರೆ, ಕಾಂಗ್ರೆಸ್ ವರಿಷ್ಠರು ಮಧ್ಯಪ್ರವೇಶಿಸಿ ಸಮಸ್ಯೆಯನ್ನು ಸರಿಪಡಿಸಿದ ನಂತರ, ಪರಿಸ್ಥಿತಿ ಸ್ಥಿರವಾಗಿದೆ.

ಈ ಹಿನ್ನೆಲೆಯಲ್ಲಿ ಬಿಜೆಪಿ ರಾಜಸ್ಥಾನದಲ್ಲಿ ಅಧಿಕಾರ ಹಿಡಿಯಲು ಹವಣಿಸುತ್ತಿದೆ. ಇತ್ತೀಚೆಗಷ್ಟೇ ಪ್ರಧಾನಿ ಮೋದಿ ಅಲ್ಲಿ ರೂ.7,000 ಕೋಟಿಗಳ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದ್ದರು. ರಾಜಸ್ಥಾನದಲ್ಲಿ ಕಾಂಗ್ರೆಸ್‌ನಂತೆಯೇ ಬಿಜೆಪಿಯಲ್ಲೂ ಗುಂಪು ಸಂಘರ್ಷಗಳಿವೆ. ಈ ಬಾರಿಯೂ ಬಿಜೆಪಿಯ ಮಾಜಿ ಮುಖ್ಯಮಂತ್ರಿ ವಸುಂದರಾ ರಾಜೇ ಸಿಂಧಿಯಾ ಅವರಿಗೆ ಮುಖ್ಯಮಂತ್ರಿಯಾಗುವ ಅವಕಾಶ ಸಿಗಲಿಲ್ಲ. ಇದರಿಂದ ಉದ್ಭವಿಸಿರುವ ಆಂತರಿಕ ಕಲಹಗಳನ್ನು ನಿಭಾಯಿಸಲು ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸದೆ ವಿಧಾನಸಭೆ ಚುನಾವಣೆ ನಡೆಸಲು ನಿರ್ಧರಿಸಿದೆ.

ಮಧ್ಯಪ್ರದೇಶದಲ್ಲಿ ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದಲ್ಲಿ ಬಿಜೆಪಿ ಆಡಳಿತ ನಡೆಸುತ್ತಿದೆ. 230 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ರಾಜ್ಯದಲ್ಲಿ 2018ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿತ್ತು. ಕಮಲ್ ನಾಥ್ ನೇತೃತ್ವದಲ್ಲಿ ಕಾಂಗ್ರೆಸ್ ಒಂದು ವರ್ಷ ಆಡಳಿತ ನಡೆಸಿತು. ಜ್ಯೋತಿರಾದಿತ್ಯ ಸಿಂಧಿಯಾ ನೇತೃತ್ವದ ಕೆಲವು ಕಾಂಗ್ರೆಸ್ ಶಾಸಕರು ಬಿಜೆಪಿಗೆ ಪಕ್ಷಾಂತರಗೊಂಡಿದ್ದರಿಂದ, ಬಿಜೆಪಿ ಅಧಿಕಾರ ಹಿಡಿಯಿತು.

ಕಳೆದ ಕೆಲವು ತಿಂಗಳುಗಳಿಂದ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಚುನಾವಣಾ ಭರವಸೆಗಳ ಘೋಷಣೆಯಲ್ಲಿ ಭಾರಿ ಪೈಪೋಟಿ ಏರ್ಪಟ್ಟಿದೆ. ಮಹಿಳೆಯರಿಗೆ ತಿಂಗಳಿಗೆ ರೂ.1,000 ನೀಡುವ ಯೋಜನೆಯನ್ನು ಬಿಜೆಪಿ ಸರ್ಕಾರ ಆರಂಭಿಸಿತು. ಆದರೆ, ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ರೂ.1,500 ನೀಡಲಾಗುವುದು ಎಂದು ಹೇಳಿದೆ. ಅಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ ಎಂದು ವರದಿಗಳು ತಿಳಿಸುತ್ತಿವೆ.

ತೆಲಂಗಾಣದಲ್ಲಿ ಮುಖ್ಯಮಂತ್ರಿ ಚಂದ್ರಶೇಖರ ರಾವ್ ನೇತೃತ್ವದಲ್ಲಿ ಭಾರತ್ ರಾಷ್ಟ್ರ ಸಮಿತಿ ಪಕ್ಷ ಆಡಳಿತ ನಡೆಸುತ್ತಿದೆ. ಹೇಗಾದರೂ ಮಾಡಿ ಅಲ್ಲಿ ಅಧಿಕಾರ ಹಿಡಿಯಬೇಕೆಂದು ಬಿಜೆಪಿ ಕಳೆದ ಕೆಲವು ತಿಂಗಳುಗಳಿಂದ ಕಸರತ್ತು ನಡೆಸುತ್ತಿದೆ. ಅದೇ ಸಮಯದಲ್ಲಿ, ಕರ್ನಾಟಕದಲ್ಲಿ ಕಾಂಗ್ರೆಸ್ ಭರ್ಜರಿ ಜಯಗಳಿಸಿದ ನಂತರ ತೆಲಂಗಾಣದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಪ್ರಭಾವ ಹೆಚ್ಚಾಗಿದೆ.

ಹೀಗಾಗಿ ಕಾಂಗ್ರೆಸ್ ಪಕ್ಷವೂ ಅಧಿಕಾರ ಹಿಡಿಯಲು ತೀವ್ರ ಪೈಪೋಟಿ ನಡೆಸುತ್ತಿದೆ. ಭಾರತ್ ರಾಷ್ಟ್ರ ಸಮಿತಿಯ 12 ಮಾಜಿ ಸಚಿವರು ಸೇರಿದಂತೆ 35 ಪ್ರಮುಖ ಕಾರ್ಯಕರ್ತರು ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಸಮ್ಮುಖದಲ್ಲಿ ಕಾಂಗ್ರೆಸ್ ಸೇರಿದ್ದರು. ಇದು ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಉತ್ತೇಜನ ನೀಡಿದೆ. ತೆಲಂಗಾಣ ಚುನಾವಣಾ ಕ್ಷೇತ್ರವು ಬಿಆರ್‌ಎಸ್, ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ತ್ರಿಕೋನ ಸ್ಪರ್ಧೆಯಾಗಿ ಮಾರ್ಪಟ್ಟಿದೆ.

ರಾಜಕೀಯ

ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರಿಗೆ ಸಲಹೆ ನೀಡುತ್ತಿದ್ದ, ಚುನಾವಣಾ ತಂತ್ರಗಾರ್ತಿ ಸ್ಟೆಫನಿ ಕಟ್ಟರ್, ರಾಹುಲ್ ಗಾಂಧಿ ಅವರಿಗೆ ರಾಜಕೀಯ ಸಲಹೆಗಾರರನ್ನಾಗಿ ನೇಮಿಸಲಾಗಿದೆ ಎಂದು ವರದಿಯಾಗಿದೆ.

2024ರ ಲೋಕಸಭೆ ಚುನಾವಣೆಯಲ್ಲಿ ಗೆಲ್ಲಲು ಯಾವ ರೀತಿಯ ತಂತ್ರಗಳನ್ನು ಅನುಸರಿಸಬೇಕು? ಎಂಬುದರ ಕುರಿತು, ರಾಹುಲ್‌ಗೆ ಸಲಹೆ ನೀಡಲು, ಅಮೆರಿಕ ಮೂಲದ ಚುನಾವಣಾ ತಂತ್ರಗಾರ್ತಿ ಸ್ಟೆಫನಿ ಕಟ್ಟರ್ ಅವರನ್ನು ನೇಮಕ ಮಾಡಲಾಗಿದೆ. ಅಮೆರಿಕದ ಮಾಜಿ ಅಧ್ಯಕ್ಷ ಒಬಾಮಾ ಅವರ ಚುನಾವಣಾ ತಂತ್ರಗಾರರಾಗಿ ಹಾಗೂ ಉಪ ಪ್ರಚಾರ ವ್ಯವಸ್ಥಾಪಕರಾಗಿಯೂ ಸ್ಟೆಫನಿ ಕಟ್ಟರ್ ಸೇವೆ ಸಲ್ಲಿಸಿದ್ದಾರೆ.

ಅವರು ಅಮೆರಿಕಾದ ಕೆಲವು ರಿಪಬ್ಲಿಕನ್ ಪಕ್ಷದ ನಾಯಕರಿಗೂ ರಾಜಕೀಯ ಸಲಹೆಗಾರರಾಗಿದ್ದರು. ಪ್ರಸ್ತುತ, ಅವರು ರಾಹುಲ್‌ಗೆ ರಾಜಕೀಯ ಸಲಹೆಗಾರರಾಗಿ ಮತ್ತು ಕಾಂಗ್ರೆಸ್ ಪಕ್ಷದ ಲೋಕಸಭಾ ಚುನಾವಣಾ ತಂತ್ರಗಾರರಾಗಿ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಎಂದು ಹೇಳಲಾಗುತ್ತಿದೆ.    

ದೇಶ ರಾಜಕೀಯ

ನವದೆಹಲಿ: ‘ಭಾರತ ಮಾತೆ’ ಕೇವಲ ಭೂಮಿ ಅಲ್ಲ ಎಂದು ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಇಂದು ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಇಂದು ಪ್ರಕಟಿಸಿದ ಪೋಸ್ಟ್‌ನಲ್ಲಿ, ‘ಕಳೆದ ವರ್ಷ ನಾನು ಕನ್ಯಾಕುಮಾರಿಯಿಂದ ಜಮ್ಮು ಮತ್ತು ಕಾಶ್ಮೀರದವರೆಗೆ 145 ದಿನಗಳ ಕಾಲ ಪಾದಯಾತ್ರೆ ಮಾಡಿದ್ದೇನೆ. ಸಮುದ್ರ ತೀರದಿಂದ ಪ್ರಾರಂಭವಾದ ನನ್ನ ಪ್ರಯಾಣ, ಬಿಸಿಲು, ಧೂಳು, ಮಳೆ, ಕಾಡು, ನಗರಗಳು, ಪರ್ವತಗಳ ಮೂಲಕ ನಾನು ಕಾಶ್ಮೀರದ ಹಿಮವನ್ನು ತಲುಪಿದೆ. ಅನೇಕ ವರ್ಷಗಳಿಂದ ನಾನು ಪ್ರತಿದಿನ 8 ಕಿಮೀ ಓಡುತ್ತೇನೆ.

ಹಾಗಾದರೆ ಪ್ರತಿದಿನ ಏಕೆ 25 ಕಿಮೀ ಓಡಬಾರದು ಎಂದು ನಾನು ಯೋಚಿಸಿದೆ? ನಿತ್ಯ 25 ಕಿ.ಮೀ.ಗಳನ್ನು ಸುಲಭವಾಗಿ ಕ್ರಮಿಸಬಲ್ಲೆ ಎಂದು ನಂಬಿದ್ದೆ. ಹಾಗೆ ಪಾದಯಾತ್ರೆ ಮಾಡುವಾಗ ಮೊಣಕಾಲು ನೋವು ಕಾಣಿಸಿಕೊಂಡಿತು. 3,800 ಕಿಲೋಮೀಟರ್ ಪ್ರಯಾಣವನ್ನು ನಾನು ಹೇಗೆ ಪೂರ್ಣಗೊಳಿಸುವುದು? ಎಂದು ಯೋಚಿಸುತ್ತಾ ಒಬ್ಬನೇ ಅಳುತ್ತಿದ್ದೆ. ಈ ಪ್ರಯಾಣವನ್ನು ನಿಲ್ಲಿಸಲು ಅಥವಾ ಈ ಯೋಜನೆಯನ್ನು ಬಿಡಲು ನಾನು ಯೋಚಿಸಿದಾಗ, ಯಾರಾದರೂ ಎಲ್ಲಿಂದಲೋ ಓಡಿ ಬಂದು ನನಗೆ ಪ್ರೀತಿಯ ಉಡುಗೊರೆಯನ್ನು ನೀಡುತ್ತಿದ್ದರು.

ಒಮ್ಮೆ ಹುಡುಗಿ ಪತ್ರ ಕೊಟ್ಟಳು; ಅಜ್ಜಿ ಬಾಳೆಹಣ್ಣಿನ ಚಿಪ್ಸ್ ಕೊಟ್ಟರು; ಒಬ್ಬರು ಓಡಿ ಬಂದು ನನ್ನನ್ನು ತಬ್ಬಿಕೊಂಡರು. ‘ಭಾರತ ಮಾತೆ’ ಕೇವಲ ಭೂಮಿ ಅಲ್ಲ. ನಿರ್ದಿಷ್ಟ ಸಂಸ್ಕೃತಿ, ಇತಿಹಾಸ, ಧರ್ಮಕ್ಕೆ ಸಂಬಂಧಿಸಿಲ್ಲ. ಭಾರತ ಪ್ರತಿಯೊಬ್ಬ ಭಾರತೀಯನ ಧ್ವನಿಯಾಗಿದೆ. ಭಾರತವು ಎಷ್ಟೇ ದುರ್ಬಲ ಅಥವಾ ಬಲಶಾಲಿಯಾಗಿದ್ದರೂ, ನೋವು, ಸಂತೋಷ ಮತ್ತು ಭಯದಿಂದ ನಿಗ್ರಹಿಸಲ್ಪಟ್ಟಿದೆ’ ಎಂದು ಹೇಳಿದ್ದಾರೆ.

ರಾಹುಲ್ ಗಾಂಧಿಯವರ ಭಾರತ ಏಕತಾ ಪಾದಯಾತ್ರೆಯ ಎರಡನೇ ಹಂತದ ಕೆಲಸಗಳು ನಡೆಯುತ್ತಿರುವ ಈ ವೇಳೆಯಲ್ಲಿ ಇಂದು ರಾಹುಲ್ ಗಾಂಧಿ ಅವರ ಪೋಸ್ಟ್ ಮಹತ್ವವನ್ನು ಪಡೆದುಕೊಂಡಿದೆ. ಅಕ್ಟೋಬರ್ 2 ರಿಂದ ಗುಜರಾತ್‌ನ ಪೋರಬಂದರ್‌ನಿಂದ ಪ್ರಾರಂಭಿಸಿ ಅರುಣಾಚಲ ಪ್ರದೇಶದ ಲೋಹಿತ್ ಜಿಲ್ಲೆಯಲ್ಲಿ ಕೊನೆಗೊಳ್ಳುವ ಎರಡನೇ ಹಂತದ ಪಾದಯಾತ್ರೆಯನ್ನು ಅವರು ಮುಂದುವರಿಸಲಿದ್ದಾರೆ ಎಂದು ಕಾಂಗ್ರೆಸ್ ಉನ್ನತ ನಾಯಕರಿಂದ ತಿಳಿದುಬಂದಿದೆ.

ದೇಶ

2019ರ ಲೋಕಸಭೆ ಚುನಾವಣೆಗೂ ಮುನ್ನ ಮೋದಿ ಉಪನಾಮದ ಟೀಕೆಗೆ ಸಂಬಂಧಿಸಿದ ಮಾನನಷ್ಟ ಪ್ರಕರಣದಲ್ಲಿ ಕಾಂಗ್ರೆಸ್ ಹಿರಿಯ ನಾಯಕ ರಾಹುಲ್ ಗಾಂಧಿ ಅವರಿಗೆ ಜಾರ್ಖಂಡ್ ಹೈಕೋರ್ಟ್ ಮಂಗಳವಾರ ರಿಲೀಫ್ ನೀಡಿದೆ. ಖುದ್ದು ಹಾಜರಾಗುವಂತೆ ರಾಂಚಿ ಸಂಸದ-ಶಾಸಕ ನ್ಯಾಯಾಲಯ ಈ ಹಿಂದೆ ಗಾಂಧಿ ಅವರಿಗೆ ಸೂಚಿಸಿತ್ತು.

ನ್ಯಾಯಮೂರ್ತಿ ಎಸ್.ಕೆ.ದ್ವಿವೇದಿಯವರು ರಾಹುಲ್ ಗಾಂಧಿಯವರ ವೈಯಕ್ತಿಕ ಹಾಜರಾತಿಯಿಂದ ವಿನಾಯಿತಿ ನೀಡಿದರು ಮತ್ತು ಅವರ ವಿರುದ್ಧ ಯಾವುದೇ ಬಲವಂತದ ಕ್ರಮವನ್ನು ತೆಗೆದುಕೊಳ್ಳದಂತೆ ನಿರ್ದೇಶಿಸಿದ್ದಾರೆ. ನ್ಯಾಯಾಲಯವು ಮುಂದಿನ ಆಗಸ್ಟ್ 16 ರಂದು ಪ್ರಕರಣದ ವಿಚಾರಣೆ ನಡೆಸಲಿದೆ.

ರಾಂಚಿಯಲ್ಲಿ ವಕೀಲರಾದ ಪ್ರದೀಪ್ ಮೋದಿ ಅವರು ಸಲ್ಲಿಸಿದ್ದ ಮಾನನಷ್ಟ ಮೊಕದ್ದಮೆಯು 2019ರ ಲೋಕಸಭೆ ಚುನಾವಣೆಗೆ ಮುನ್ನ ಚುನಾವಣಾ ರ‍್ಯಾಲಿಯಲ್ಲಿ ‘ಮೋದಿಗಳು’ ಕುರಿತು ರಾಹುಲ್ ಗಾಂಧಿ ಮಾಡಿದ ಹೇಳಿಕೆಗೆ ಸಂಬಂಧಿಸಿದೆ.

ರಾಹುಲ್ ಗಾಂಧಿಯವರು, “ನನಗೊಂದು ಪ್ರಶ್ನೆಯಿದೆ. ಇವರೆಲ್ಲರ – ಈ ಎಲ್ಲಾ ಕಳ್ಳರು – ಅವರ ಹೆಸರಿನಲ್ಲಿ ಮೋದಿ ಮೋದಿ ಮೋದಿ ಏಕೆ? ನೀರವ್ ಮೋದಿ, ಲಲಿತ್ ಮೋದಿ, ನರೇಂದ್ರ ಮೋದಿ ಮತ್ತು ನಾವು ಸ್ವಲ್ಪ ಹೆಚ್ಚು ಹುಡುಕಿದರೆ, ಇನ್ನೂ ಅನೇಕ ಮೋದಿಗಳು ಹೊರಬರುತ್ತಾರೆ” ಎಂದು ಹೇಳಿದ್ದರು.

ಈ ಮಾನನಷ್ಟ ಪ್ರಕರಣಕ್ಕೆ ಸಂಬಂಧ್ಪಟ್ಟಂತೆ ಈ ವರ್ಷದ ಮಾರ್ಚ್‌ನಲ್ಲಿ ಗುಜರಾತ್‌ನ ಸೂರತ್ ನ್ಯಾಯಾಲಯವು ರಾಹುಲ್ ಗಾಂಧಿಯವರ ಹೇಳಿಕೆಗಳ ವಿರುದ್ಧ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ಅವರನ್ನು ದೋಷಿ ಎಂದು ಘೋಷಿಸಿತು. ಅವರಿಗೆ ನ್ಯಾಯಾಲಯವು ಎರಡು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿತು. ಸೂರತ್ ನ್ಯಾಯಾಲಯದ ತೀರ್ಪಿನ ಒಂದು ದಿನದ ನಂತರ, ಕಾಂಗ್ರೆಸ್ ನಾಯಕನನ್ನು ಲೋಕಸಭಾ ಸಂಸದ ಸ್ಥಾನದಿಂದ ಅನರ್ಹಗೊಳಿಸಲಾಯಿತು.

Modi Surname Defamation Case: Jharkhand High Court Protects Rahul Gandhi From Coercive Action
The Jharkhand High Court on Tuesday granted relief to senior Congress leader Rahul Gandhi in a defamation case related to the Modi surname remark he made before the Lok Sabha elections in 2019. Gandhi had earlier been directed by the Ranchi MP-MLA court to appear in person in the defamation case.

Justice S.K. Dwivedi exempted Gandhi from personal appearance and also directed that no coercive action be taken against him. The court will hear the case next on August 16.

ದೇಶ ರಾಜಕೀಯ

ಇಂದು ಬಿಹಾರದ ಪಾಟ್ನಾದಲ್ಲಿ ನಡೆದ ಪ್ರತಿಪಕ್ಷಗಳ ಸಮಾಲೋಚನಾ ಸಭೆ ಮುಕ್ತಾಯವಾಗಿದೆ. ಜೆಡಿಯು ಅಧ್ಯಕ್ಷ ಹಾಗೂ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದಲ್ಲಿ ಸುಮಾರು 4 ಗಂಟೆಗಳ ಕಾಲ ಸಮಾಲೋಚನೆ ಸಭೆ ನಡೆಯಿತು.

ಸಭೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಹಾಗೂ ಕೆ.ಸಿ.ವೇಣುಗೋಪಾಲ್, ಡಿಎಂಕೆ ಅಧ್ಯಕ್ಷ ಎಂ.ಕೆ.ಸ್ಟಾಲಿನ್ ಹಾಗೂ ಟಿ.ಆರ್.ಬಾಲು, ರಾಷ್ಟ್ರೀಯವಾದಿ ಕಾಂಗ್ರೆಸ್ ಅಧ್ಯಕ್ಷ ಶರದ್ ಪವಾರ್, ನ್ಯಾಷನಲ್ ಕಾನ್ಫರೆನ್ಸ್‌ನ ಉಮರ್ ಅಬ್ದುಲ್ಲಾ,  ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ, ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್, ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್ ಹಾಗೂ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್, ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ನಾಯಕಿ ಮೆಹಬೂಬಾ ಮುಫ್ತಿ, ರಾಷ್ಟ್ರೀಯ ಜನತಾ ದಳದ ನಾಯಕ ಲಾಲು ಪ್ರಸಾದ್ ಯಾದವ್ ಹಾಗೂ ತೇಜಸ್ವಿ ಯಾದವ್, ಭಾರತೀಯ ಕಮ್ಯುನಿಸ್ಟ್ ಪಕ್ಷದ ನಾಯಕ ಡಿ.ರಾಜಾ, ಮಾರ್ಕ್ಸ್‌ವಾದಿ ಕಮ್ಯುನಿಸ್ಟ್ ಪಕ್ಷದ ಸೀತಾರಾಂ ಯೆಚೂರಿ, ಶಿವಸೇನಾ ಉದ್ಧವ್ ಬಾಳಾಸಾಹೇಬ್ ಠಾಕ್ರೆ ಅಧ್ಯಕ್ಷ ಉದ್ಧವ್ ಠಾಕ್ರೆ,  ಜಾರ್ಖಂಡ್ ಮುಕ್ತಿ ಮೋರ್ಚಾ ಅಧ್ಯಕ್ಷ ಹೇಮಂತ್ ಸೊರೆನ್ ಸೇರಿದಂತೆ 15ಕ್ಕೂ ಹೆಚ್ಚು ವಿರೋಧ ಪಕ್ಷದ ನಾಯಕರು ಭಾಗವಹಿಸಿದ್ದರು.

ಸಮಾಲೋಚನಾ ಸಭೆಯ ನಂತರ, ವಿರೋಧ ಪಕ್ಷಗಳ ನಾಯಕರು ಜಂಟಿಯಾಗಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದರು. ಈ ವೇಳೆ ಭಾರತ ಕಮ್ಯುನಿಸ್ಟ್ ಪಕ್ಷದ ಪ್ರಧಾನ ಕಾರ್ಯದರ್ಶಿ ಡಿ.ರಾಜಾ ಮಾತನಾಡಿ, “ದೇಶದ ಪ್ರಸ್ತುತ ರಾಜಕೀಯ ಪರಿಸ್ಥಿತಿ ಕುರಿತು ಚರ್ಚಿಸಲಾಯಿತು. ಬಿಜೆಪಿಯ ಕಳೆದ 9 ವರ್ಷಗಳ ಆಡಳಿತ ಅನಾಹುತಕ್ಕೆ ಕಾರಣವಾಗಿದೆ. ಬಿಜೆಪಿ ಆಡಳಿತದಲ್ಲಿ ದೇಶದ ಪ್ರಜಾಪ್ರಭುತ್ವ ಮತ್ತು ಸಮಾಜ ದುರಂತವಾಗಿದೆ. ಮೋದಿ ನೇತೃತ್ವದ ಸರ್ಕಾರ ದೊಡ್ಡ ಉದ್ಯಮಿಗಳ ಪರವಾಗಿ ನಾಚಿಕೆಯಿಲ್ಲದೆ ಕೆಲಸ ಮಾಡುತ್ತಿದೆ. ಇದೇ ಪರಿಸ್ಥಿತಿ ಮುಂದುವರೆದರೆ ದೇಶದಲ್ಲಿ ಪ್ರಜಾಪ್ರಭುತ್ವ ಕಣ್ಮರೆಯಾಗುತ್ತದೆ. ಬಿಜೆಪಿಯನ್ನು ಸೋಲಿಸಲೇಬೇಕು ಎಂದು ವಿರೋಧ ಪಕ್ಷಗಳು ತೀರ್ಮಾನಿಸಿವೆ” ಎಂದರು.

ಮಲ್ಲಿಕಾರ್ಜುನ ಖರ್ಗೆ: “ಜಾತ್ಯತೀತ ಪಕ್ಷದ ನಾಯಕರ ಮುಂದಿನ ಸಭೆ ಜುಲೈ 12 ರಂದು ಶಿಮ್ಲಾದಲ್ಲಿ ನಡೆಯಲಿದೆ. ಸಭೆಯಲ್ಲಿ ರಾಜ್ಯಗಳ ಪ್ರಮುಖ ನಾಯಕರು ತಮ್ಮ ಅಭಿಪ್ರಾಯಗಳನ್ನು ಮಂಡಿಸಿದ್ದಾರೆ. ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಪ್ರಾದೇಶಿಕ ಪಕ್ಷಗಳ ವಿಲೀನದ ಬಗ್ಗೆಯೂ ಚರ್ಚಿಸಿದ್ದೇವೆ” ಎಂದರು.

ರಾಹುಲ್ ಗಾಂಧಿ: ” ಬಿಜೆಪಿ ಮತ್ತು ಆರ್‌ಎಸ್‌ಎಸ್ ದೇಶದ ರಚನೆಯನ್ನು ಹಾಳು ಮಾಡುತ್ತಿವೆ. ನಮ್ಮ ಭಿನ್ನಾಭಿಪ್ರಾಯಗಳ ಹೊರತಾಗಿಯೂ ನಾವು ಸಿದ್ಧಾಂತದಲ್ಲಿ ಒಂದಾಗಿದ್ದೇವೆ” ಎಂದರು.

ಮಮತಾ ಬ್ಯಾನರ್ಜಿ: “ಬಿಹಾರದಲ್ಲಿನ ಗೊಂದಲವೇ ವಿರೋಧ ಪಕ್ಷಗಳು ಒಗ್ಗೂಡಲು ಕಾರಣ. ಸಿಬಿಐ ಹಾಗೂ ಇಡಿಯನ್ನು ಬಿಜೆಪಿ ಸರ್ಕಾರ ದುರ್ಬಳಕೆ ಮಾಡಿಕೊಳ್ಳುತ್ತಿದೆ. ಎಲ್ಲದಕ್ಕೂ ಕೇಂದ್ರ ಸರ್ಕಾರದ ಬಳಿ ಹೋರಾಡಬೇಕಿದೆ. ಕೇಂದ್ರ ಸರ್ಕಾರ ಯಾವುದೇ ವಿಷಯದ ಬಗ್ಗೆ ರಾಜ್ಯ ಸರ್ಕಾರಗಳೊಂದಿಗೆ ಸಮಾಲೋಚನೆ ನಡೆಸುವುದಿಲ್ಲ. ನಾವು ಒಗ್ಗಟ್ಟಾಗಿದ್ದೇವೆ; ಒಟ್ಟಾಗಿ ಚುನಾವಣೆ ಎದುರಿಸುತ್ತೇವೆ. ಮುಂದಿನ ಸಭೆಯಲ್ಲಿ ಬಿಜೆಪಿಯನ್ನು ಸೋಲಿಸುವ ಬಗ್ಗೆ ವಿವರವಾಗಿ ಚರ್ಚಿಸುತ್ತೇವೆ. ಇತಿಹಾಸ ಇಲ್ಲಿಂದ ಆರಂಭವಾಗುತ್ತದೆ. ಇತಿಹಾಸ ಬದಲಿಸುವ ಬಿಜೆಪಿಯ ಪ್ರಯತ್ನವನ್ನು ಒಗ್ಗಟ್ಟಾಗಿ ಎದುರಿಸೋಣ. ಈ ಬಾರಿಯೂ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಗೆದ್ದರೆ ಅದು ಭಾರತದ ಕೊನೆಯ ಸಾರ್ವತ್ರಿಕ ಚುನಾವಣೆಯಾಗಲಿದೆ” ಎಂದರು.

ಮೆಹಬೂಬಾ ಮುಫ್ತಿ: “ದೇಶದ ಜಾತ್ಯತೀತ ಸ್ವರೂಪದ ಮೇಲೆ ದಾಳಿ ನಡೆಯುತ್ತಿದೆ. ಗಾಂಧಿಯನ್ನು ಬೆಂಬಲಿಸೋಣ; ಗೋಡ್ಸೆಯನ್ನು ಅಲ್ಲ” ಎಂದು ಹೇಳಿದರು.

ವಿರೋಧ ಪಕ್ಷದ ನಾಯಕರ ಮುಂದಿನ ಸಭೆ ಜುಲೈ 12 ರಂದು ಶಿಮ್ಲಾದಲ್ಲಿ ನಡೆಯಲಿದೆ. ಈ ಸಭೆಗೆ ಕಾಂಗ್ರೆಸ್ ನೇತೃತ್ವ ವಹಿಸಲಿದೆ ಎಂದು ತಿಳಿದು ಬಂದಿದೆ.

ವಿದೇಶ

ಭಾರತ್ ಜೋಡೋ ಪಯಣ ಮುಗಿಸಿದರೂ ರಾಹುಲ್ ಪಯಣ ವಿಶ್ರಮಿಸಲಿಲ್ಲ. ಕೆಲವು ವಾರಗಳ ಹಿಂದೆ ಅವರು ದೆಹಲಿ-ಚಂಡೀಗಢದಲ್ಲಿ ರಾತ್ರಿ ಸರಕು ಟ್ರಕ್‌ನಲ್ಲಿ ಪ್ರಯಾಣಿಸಿ, ಚಾಲಕನ ಕಷ್ಟದ ಬಗ್ಗೆ ಕೇಳಿದ್ದರು. ಪ್ರಸ್ತುತ ಅವರು ಅಮೆರಿಕಾದ ವಾಷಿಂಗ್ಟನ್‌ನಿಂದ ನ್ಯೂಯಾರ್ಕ್‌ಗೆ ಟ್ರಕ್‌ನಲ್ಲಿ ಪ್ರಯಾಣಿಸಿದ್ದಾರೆ. ಆ ವಿಡಿಯೋ ಈಗ ವೈರಲ್ ಆಗಿದೆ.

ರಾಹುಲ್ ಗಾಂಧಿ ಇತ್ತೀಚೆಗೆ ಅಮೆರಿಕಕ್ಕೆ ಭೇಟಿ ನೀಡಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ಅದರ ಒಂದು ಭಾಗವಾಗಿ, ವಾಷಿಂಗ್ಟನ್‌ನಿಂದ ನ್ಯೂಯಾರ್ಕ್ ನಗರಕ್ಕೆ ‘ಅಮೆರಿಕನ್ ಟ್ರಕ್ ಯಾತ್ರಾ’ ಹೆಸರಿನಲ್ಲಿ 190 ಕಿಲೋ ಮೀಟರ್, ಭಾರತೀಯರೊಬ್ಬರು ಚಾಲಕಾರಾಗಿರುವ ಅತ್ಯಾಧುನಿಕ ಟ್ರಕ್‌ನಲ್ಲಿ ಪ್ರಯಾಣಿಸಿದ್ದಾರೆ.

“ಸಮುದಾಯದಲ್ಲಿನ ವೈವಿಧ್ಯಮಯ ಜನರ ಧ್ವನಿಗಳನ್ನು ಕೇಳುವ ಪ್ರಯಾಣವು ಅಮೆರಿಕಾದಲ್ಲೂ ಮುಂದುವರೆದಿದೆ. ಭಾರತದ ದೆಹಲಿಯಿಂದ ಚಂಡೀಗಢಕ್ಕೆ ಹೋದ ನನ್ನ ಟ್ರಕ್ ಪ್ರಯಾಣದಂತೆ, ಈ ಬಾರಿ ಅಮೆರಿಕಾದಲ್ಲಿರುವ ಭಾರತೀಯ ಮೂಲದ ಟ್ರಕ್ ಡ್ರೈವರ್‌ಗಳ ದೈನಂದಿನ ಜೀವನವನ್ನು ನಾನು ತಿಳಿದುಕೊಂಡೆ.

ಅವರೊಂದಿಗಿನ ಸಂಭಾಷಣೆ ಹೃದಯಸ್ಪರ್ಶಿಯಾಗಿತ್ತು. ಚಾಲಕನ ಸೌಕರ್ಯಗಳಿಗೆ ಒತ್ತು ನೀಡುವ ವ್ಯವಸ್ಥೆ, ಅವರು ಗಳಿಸುವ ನ್ಯಾಯಯುತ ವೇತನವನ್ನು ನೋಡಿ ನನಗೆ ಸಂತೋಷವಾಯಿತು. ಭಾರತದಲ್ಲಿ ಕಷ್ಟಪಟ್ಟು ಕೆಲಸ ಮಾಡುವ ಟ್ರಕ್ ಚಾಲಕರು ಸಹ ಯೋಗ್ಯವಾದ ಜೀವನಕ್ಕೆ ಅರ್ಹರಾಗಿದ್ದಾರೆ. ಅವರನ್ನು ಮುಂದೆ ಕೊಂಡೊಯ್ಯುವ ಯೋಜನೆ, ನಮ್ಮ ಇಡೀ ದೇಶದ ಆರ್ಥಿಕತೆಯ ಮೇಲೆ ಧನಾತ್ಮಕವಾದ ಶ್ರೇಣೀಕೃತ ಪರಿಣಾಮವನ್ನು ಬೀರುತ್ತದೆ” ಎಂದು ಹೇಳಿದ್ದಾರೆ.

ಟ್ರಕ್ ಚಾಲಕನೊಂದಿಗೆ ಮಾತನಾಡುತ್ತಲೇ ಸಾಗಿದ ರಾಹುಲ್ ಗಾಂಧಿಯೊಂದಿಗೆ ಮಾತನಾಡಿದ ಆ ಚಾಲಕ, “ಇಲ್ಲಿ ನನಗೆ ಮಾಸಿಕ ರೂ.6 ರಿಂದ 8 ಲಕ್ಷದವರೆಗೆ ವೇತನ ಸಿಗುತ್ತಿದೆ; ನಾನು ಸ್ವಂತವಾಗಿ ಟ್ರಕ್ ಹೊಂದಿದ್ದೇನೆ” ಎಂದು ಹೇಳಿದರು. “ಭಾರತದಲ್ಲಿ ಟ್ರಕ್ ಮಾಲೀಕರು ಬೇರೆಯವರಾಗಿರುತ್ತಾರೆ; ಚಾಲಕರೇ ಬೇರೆಯಾಗಿರುತ್ತಾರೆ. ಚಾಲಕರು ಅತೀ ಬಡವರಾಗಿರುತ್ತಾರೆ. ಅವರು ಆಸ್ತಿ ಇಲ್ಲದೆ ಸಾಲ ಪಡೆಯಲು ಸಾಧ್ಯವಿಲ್ಲ. ಅನೇಕ ಜನರು ಅಲ್ಲಿ ಆಸ್ತಿ ಹೊಂದಿರುವುದಿಲ್ಲ. ಹಾಗಾಗಿ ಅವರು ಚಾಲಕರಾಗಿ ಮುಂದುವರಿಯುತ್ತಾರೆ. ಭಾರತದಲ್ಲಿರುವಂತೆ ಆರ್‌ಟಿಒ ಕಿರುಕುಳ ಇಲ್ಲಿ ಇರುವುದಿಲ್ಲ” ಎಂದು ಹೇಳಿದರು. Rahul Gandhi takes truck ride from Washington to New York

ರಾಜಕೀಯ

ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಯು ಮೇ 10 ರಂದು ಎಲ್ಲಾ 224 ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ನಡೆಯಿತು. ಮೇ 13 ರಂದು ಮತ ಎಣಿಕೆ ನಡೆಯಿತು. ಇದರಲ್ಲಿ ಆಡಳಿತಾರೂಢ ಬಿಜೆಪಿ ಸರ್ಕಾರವನ್ನು ಸೋಲಿಸಿ ಬಹುಮತಕ್ಕಿಂತ ಹೆಚ್ಚು ಸ್ಥಾನಗಳನ್ನು ಕಾಂಗ್ರೆಸ್ ಗಳಿಸಿತು.

ಈ ಗೆಲುವಿನೊಂದಿಗೆ ಬಿಜೆಪಿಗೆ ದಕ್ಷಿಣ ಭಾರತದ ಬಾಗಿಲು ಸಂಪೂರ್ಣವಾಗಿ ಮುಚ್ಚಿದೆ ಎಂದು ರಾಜಕೀಯ ವಿಮರ್ಶಕರು ಅಭಿಪ್ರಾಯಪಡುತ್ತಿದ್ದಾರೆ. ಮೇಲಾಗಿ ಕರ್ನಾಟಕದಲ್ಲಿ ಬಿಜೆಪಿಯ ಸೋಲು ಇತರ ರಾಜ್ಯಗಳಲ್ಲೂ ಪ್ರತಿಧ್ವನಿಸಲಿದೆ ಎಂದು ಕಾಂಗ್ರೆಸ್ ಮತ್ತು ಪ್ರತಿಪಕ್ಷಗಳು ಹೇಳಿದ್ದವು.

ಈ ಹಿನ್ನಲೆಯಲ್ಲಿ ಬಿಜೆಪಿ ಆಡಳಿತವಿರುವ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಬಳಿ ಬಿಜೆಪಿ ಅಧಿಕಾರ ಕಳೆದುಕೊಳ್ಳಲಿದೆ ಎಂದು ಇತ್ತೀಚಿನ ಸಮೀಕ್ಷೆಯ ಫಲಿತಾಂಶಗಳು ಹೇಳುತ್ತಿವೆ. ಅಲ್ಲಿ ನಡೆದ 2018ರ ವಿಧಾನಸಭಾ ಚುನಾವಣೆಯಲ್ಲಿ ಒಟ್ಟು 230 ಸ್ಥಾನಗಳಲ್ಲಿ 114 ಸ್ಥಾನಗಳನ್ನು ಕಾಂಗ್ರೆಸ್ ಗೆದ್ದುಕೊಂಡಿತ್ತು. ನಂತರ ಸಣ್ಣ ಪಕ್ಷಗಳ ಬೆಂಬಲದೊಂದಿಗೆ ಅಧಿಕಾರ ಹಿಡಿಯಿತು.

ಆದರೆ ಕಳೆದ ವರ್ಷ 2020ರಲ್ಲಿ 6 ಸಚಿವರು ಸೇರಿದಂತೆ 22 ಶಾಸಕರು ಜ್ಯೋತಿರಾದಿತ್ಯ ಸಿಂಧಿಯಾ ನೇತೃತ್ವದಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರು. ಇದರ ಪರಿಣಾಮವಾಗಿ ಅಲ್ಲಿ ಕಾಂಗ್ರೆಸ್ ಸರ್ಕಾರ ಉರುಳಿ ಬಿಜೆಪಿ ಅಧಿಕಾರಕ್ಕೆ ಬಂತು. ಆದರೆ, ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದಲೂ ಅಲ್ಲಿ ಅಸಮಾಧಾನವೇ ಹೆಚ್ಚಾಗಿತ್ತು.

ಸದ್ಯದಲ್ಲೇ ಅಲ್ಲಿ ಚುನಾವಣೆ ನಡೆಯಲಿರುವ ಹಿನ್ನಲೆಯಲ್ಲಿ, ನವಭಾರತ್ ಸಮಾಚಾರ್ (Navbharat Samachar) ಎಂಬ ಸುದ್ದಿ ಸಂಸ್ಥೆ, ಮಧ್ಯಪ್ರದೇಶದಲ್ಲಿ ಮುಂದಿನ ಸರ್ಕಾರವನ್ನು ಯಾರು ರಚಿಸುತ್ತಾರೆ ಎಂಬುದರ ಕುರಿತು ಸಮೀಕ್ಷೆಯನ್ನು ಬಿಡುಗಡೆ ಮಾಡಿದೆ. ಆ ಸಮೀಕ್ಷೆಯಲ್ಲಿ ಬಿಜೆಪಿ ಕೇವಲ 55 ಸ್ಥಾನಗಳನ್ನು ಮಾತ್ರ ಪಡೆಯಲಿದೆ ಮತ್ತು ಕಾಂಗ್ರೆಸ್ ಬಹುಮತಕ್ಕಿಂತ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ ಎಂದು ಹೇಳಿದೆ.

ಈ ಹಿಂದಿನ ಸಮೀಕ್ಷೆಗಳು ಕೂಡ ಮಧ್ಯಪ್ರದೇಶದಲ್ಲಿ ಬಿಜೆಪಿ ಅಧಿಕಾರ ಕಳೆದುಕೊಳ್ಳಲಿದೆ ಎಂದು ಭವಿಷ್ಯ ನುಡಿದಿದ್ದವು ಎಂಬುದು ಗನಾರ್ಹ.

ರಾಜಕೀಯ

ಕಾಂಗ್ರೆಸ್ ಪಕ್ಷದ ಮಾಜಿ ನಾಯಕ ರಾಹುಲ್ ಗಾಂಧಿ ಕೇರಳದ ವಯನಾಡು ಕ್ಷೇತ್ರದ ಸಂಸದರಾಗಿದ್ದರು. ಚುನಾವಣೆ ವೇಳೆ ಪ್ರಧಾನಿ ಮೋದಿ ಅವರನ್ನು ಟೀಕಿಸಿದ್ದಕ್ಕೆ ಗುಜರಾತ್ ಕೋರ್ಟ್‌ನಲ್ಲಿ ಮಾನನಷ್ಟ ಮೊಕದ್ದಮೆ ಹೂಡಲಾಗಿತ್ತು. ಇದರ ವಿಚಾರಣೆ ನಡೆಸಿದ ನ್ಯಾಯಾಲಯ ರಾಹುಲ್ ಗಾಂಧಿಗೆ 2 ವರ್ಷ ಜೈಲು ಶಿಕ್ಷೆ ವಿಧಿಸಿತು. ತರುವಾಯ, ಚುನಾವಣಾ ನೀತಿ ನಿಯಮಗಳ ಅಡಿಯಲ್ಲಿ, ರಾಹುಲ್ ಗಾಂಧಿಯವರನ್ನು ಸಂಸದ ಸ್ಥಾನದಿಂದ ಅನರ್ಹ ಗೊಳಿಸಲಾಯಿತು. ಮತ್ತು ರಾಹುಲ್ ಗಾಂಧಿ ಸ್ಪರ್ಧಿಸಿದ್ದ ವಯನಾಡು ಕ್ಷೇತ್ರವು ಖಾಲಿಯಾಗಿದೆ ಎಂದೂ ಘೋಷಿಸಲಾಯಿತು.

ಮುಂದಿನ ವರ್ಷ ಮೇ ತಿಂಗಳಲ್ಲಿ ಸಂಸತ್ತಿಗೆ ಚುನಾವಣೆ ನಡೆಯಲಿದೆ. ಅದಕ್ಕೂ ಮುನ್ನ ತೆರವಾಗಿರುವ ವಯನಾಡು ಕ್ಷೇತ್ರಕ್ಕೆ ಚುನಾವಣೆ ನಡೆಸಲು ಚುನಾವಣಾ ಆಯೋಗ ಸಿದ್ಧತೆ ನಡೆಸುತ್ತಿದೆ. ಅದರಂತೆ ವಯನಾಡು ಕ್ಷೇತ್ರಕ್ಕೆ ಬೇಕಾದ ವಿದ್ಯುನ್ಮಾನ ಮತಯಂತ್ರಗಳನ್ನು ಕೋಳಿಕ್ಕೋಡ್, ವಯನಾಡ್ ಮತ್ತು ಮಲಪ್ಪುರಂ ಕಲೆಕ್ಟರ್ ಕಚೇರಿಗಳಲ್ಲಿ ಇರಿಸಲಾಗಿದೆ. ಕೋಳಿಕ್ಕೋಡ್ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಇರಿಸಲಾಗಿದ್ದ ವಿದ್ಯುನ್ಮಾನ ಮತಯಂತ್ರಗಳನ್ನು ನಿನ್ನೆ ಪರೀಕ್ಷೆಗೆ ಒಳಪಡಿಸಲಾಗಿತ್ತು. ಅದರಲ್ಲಿ ಮಾದರಿ ಮತದಾನವನ್ನೂ ನಡೆಸಲಾಯಿತು. ಪಕ್ಷದ ಎಲ್ಲ ಮುಖಂಡರು ಪಾಲ್ಗೊಂಡಿದ್ದರು.

ವಯನಾಡ್ ಲೋಕಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಡೆಸಲು ಕೇಂದ್ರ ಚುನಾವಣಾ ಆಯೋಗ ಸಿದ್ಧತೆ ನಡೆಸಿದ್ದು, ಅಲ್ಲಿ ಕಾಂಗ್ರೆಸ್ ಪಕ್ಷದ ಪರವಾಗಿ ಯಾರು ಸ್ಪರ್ಧಿಸುತ್ತಾರೆ ಎಂಬ ನಿರೀಕ್ಷೆ ಮೂಡಿದೆ. ರಾಹುಲ್ ಗಾಂಧಿ ಇಲ್ಲಿ ಸ್ಪರ್ಧಿಸಿದಾಗ ಅವರ ಸಹೋದರಿ ಪ್ರಿಯಾಂಕಾ ಗಾಂಧಿ ಅವರ ಪರ ಪ್ರಚಾರ ಮಾಡಿದ್ದರು. ಅವರನ್ನು ಸಂಸದ ಸ್ಥಾನದಿಂದ ಅನರ್ಹ ಗೊಳಿಸಿದ ನಂತರ ನಡೆದ ಕಾಂಗ್ರೆಸ್ ಸಭೆಯಲ್ಲೂ ಭಾಗವಹಿಸಿದ್ದರು. ಅವರು ನಿಯಮಿತವಾಗಿ ವಯನಾಡು ಕ್ಷೇತ್ರದ ಜನರನ್ನು ಭೇಟಿಯಾಗುತ್ತಾ ಪಕ್ಷದ ಪರವಾಗಿ ಪ್ರಚಾರವನ್ನೂ ಮಾಡಿದರು. ಇದರಿಂದಾಗಿ ಈ ಬಾರಿಯ ಉಪಚುನಾವಣೆಯಲ್ಲಿ ಅವರು ವಯನಾಡು ಕ್ಷೇತ್ರದಲ್ಲಿ ಕಾಂಗ್ರೆಸ್ ಪರವಾಗಿ ಸ್ಪರ್ಧಿಸಬಹುದು ಎನ್ನಲಾಗಿದೆ. ಇದನ್ನು ಕಾಂಗ್ರೆಸ್ ಕಾರ್ಯಕರ್ತರು ಕೂಡ ಕಾತರದಿಂದ ಕಾಯುತ್ತಿದ್ದಾರೆ.

ರಾಜಕೀಯ

ಸ್ಯಾನ್ ಫ್ರಾನ್ಸಿಸ್ಕೋ: ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ನಡೆದ ‘ಮೊಹಬ್ಬತ್ ಕಿ ದುಕಾನ್’ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, “ಭಾರತದಲ್ಲಿ 1980ರ ದಶಕದಲ್ಲಿ ದಲಿತರು ಎದುರಿಸಿದ್ದ ಪರಿಸ್ಥಿತಿಯನ್ನು ಇಂದು ಮುಸ್ಲಿಮರು ಎದುರಿಸುತ್ತಿದ್ದಾರೆ. ಇದರ ವಿರುದ್ಧ ಅಭಿಮಾನದಿಂದ ಹೋರಾಡಬೇಕು” ಎಂದರು.

“ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಕೆಲವು ಕ್ರಮಗಳು ಅಲ್ಪಸಂಖ್ಯಾತರು, ದಲಿತ ಮತ್ತು ಬುಡಕಟ್ಟು ಸಮುದಾಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಕೇಂದ್ರದ ಕ್ರಮಗಳು ಮುಸ್ಲಿಮರ ಮೇಲೆ ನೇರವಾಗಿ ಪರಿಣಾಮ ಬೀರುತ್ತಿವೆ. ಆದರೆ ವಾಸ್ತವವಾಗಿ, ಇದನ್ನು ಎಲ್ಲಾ ಸಮುದಾಯಗಳಿಗೆ ಮಾಡಲಾಗುತ್ತಿದೆ. ನೀವು (ಮುಸ್ಲಿಮರು) ಹೇಗೆ ದಾಳಿಗೆ ಒಳಗಾಗುತ್ತೀರಿ, ಹಾಗೆಯೇ ಸಿಖ್ಖರು, ಕ್ರಿಶ್ಚಿಯನ್ನರು, ದಲಿತರು ಮತ್ತು ಬುಡಕಟ್ಟು ಜನಾಂಗದವರೂ ದಾಳಿಗೆ ಒಳಗಾಗುತ್ತಿದ್ದಾರೆ. ಆದರೆ ನೀವು ದ್ವೇಷದಿಂದ ದ್ವೇಷವನ್ನು ಕತ್ತರಿಸಲು ಸಾಧ್ಯವಿಲ್ಲ. ಪ್ರೀತಿ ಮತ್ತು ವಾತ್ಸಲ್ಯದಿಂದ ಮಾತ್ರ ಸಾಧ್ಯ” ಎಂದು ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.

“ಇಂದು ಭಾರತದಲ್ಲಿ ಮುಸ್ಲಿಮರಿಗೆ ಏನಾಗುತ್ತಿದೆಯೋ ಅದನ್ನು 1980ರ ದಶಕದಲ್ಲಿ ದಲಿತರು ಅನುಭವಿಸಿದರು. ನೀವು 1980ರ ದಶಕದಲ್ಲಿ ಉತ್ತರ ಪ್ರದೇಶಕ್ಕೆ ಹೋಗಿದ್ದರೆ ದಲಿತರ ಪರಿಸ್ಥಿತಿ ತಿಳಿಯುತ್ತಿತ್ತು. ನಾವು ಅದನ್ನು ಸವಾಲಾಗಿ ಸ್ವೀಕರಿಸಬೇಕು ಮತ್ತು ಅದರ ವಿರುದ್ಧ ಹೋರಾಡಬೇಕು” ಎಂದಿದ್ದಾರೆ.

 

ದೇಶ ರಾಜಕೀಯ

ಡಿ.ಸಿ.ಪ್ರಕಾಶ್ ಸಂಪಾದಕರು

ಕಾಂಗ್ರೆಸ್ ಪಕ್ಷವು ರಾಜ್ಯ ಪಕ್ಷಗಳೊಂದಿಗೆ ಒಟ್ಟಾಗಿ ಕೆಲಸ ಮಾಡಿದರೆ ಮಾತ್ರ ಭಾರತೀಯ ಜನತಾ ಪಕ್ಷವನ್ನು ರಾಷ್ಟ್ರ ಮಟ್ಟದಲ್ಲಿ ಸೋಲಿಸಲು ಸಾಧ್ಯ ಎಂದು ಮಮತಾ ಬ್ಯಾನರ್ಜಿ, ಫಾರೂಕ್ ಅಬ್ದುಲ್ಲಾ, ನಿತೀಶ್ ಕುಮಾರ್, ಲಾಲೂ ಪ್ರಸಾದ್ ಯಾದವ್, ಶರದ್ ಪವಾರ್ ಮುಂತಾದ ನಾಯಕರು ಒತ್ತಾಯಿಸಿದ್ದಾರೆ. ಆದರೆ ಹಲವು ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷವು ರಾಜ್ಯ ಪಕ್ಷಗಳೊಂದಿಗೆ ಒಟ್ಟಾಗಿ ಕೆಲಸ ಮಾಡುವಲ್ಲಿ ವಿವಿಧ ಸಮಸ್ಯೆಗಳು ಕಂಡುಬರುತ್ತವೆ. ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ವಿರೋಧ ಪಕ್ಷಗಳನ್ನು ಕಾಂಗ್ರೆಸ್ ನೇತೃತ್ವದಲ್ಲಿ ಒಟ್ಟುಗೂಡಿಸಿ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.

ಇದುವರೆಗೆ ಮಮತಾ ಬ್ಯಾನರ್ಜಿ, ಶರದ್ ಪವಾರ್, ಚಂದ್ರಶೇಖರ್ ರಾವ್, ಅಖಿಲೇಶ್ ಯಾದವ್, ಕೇಜ್ರಿವಾಲ್ ಸೇರಿದಂತೆ ರಾಜ್ಯದ ವಿವಿಧ ಪಕ್ಷದ ನಾಯಕರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ಖರ್ಗೆ ಅವರನ್ನೂ ಭೇಟಿಯಾಗಿದ್ದರು. ಇದಾದ ಬಳಿಕ ವಿರೋಧ ಪಕ್ಷಗಳನ್ನು ಒಗ್ಗೂಡಿಸುವ ಪ್ರಯತ್ನ ಅಂತಿಮ ರೂಪ ಪಡೆಯುತ್ತಿದೆ. ಈ ವೇಳೆ ರಾಜಕೀಯ ತಜ್ಞರು ಕುತೂಹಲದಿಂದ ಕಾಯುತ್ತಿದ್ದ ಎಲ್ಲ ವಿರೋಧ ಪಕ್ಷಗಳು ಒಂದೆಡೆ ಸೇರುವ ಕಾರ್ಯಕ್ರಮ ಜೂನ್ 12 ರಂದು ಬಿಹಾರದ ರಾಜಧಾನಿ ಪಾಟ್ನಾದಲ್ಲಿ ನಡೆಯಲಿದೆ ಎಂದು ತಿಳಿದುಬಂದಿದೆ.

ಈ ಸಭೆಗೆ ಹಾಜರಾಗುವಂತೆ ನಿತೀಶ್ ಕುಮಾರ್ ವಿಪಕ್ಷ ನಾಯಕರಿಗೆ ಆಹ್ವಾನ ನೀಡಿದ್ದಾರೆ. ಈ ಸಭೆಯಲ್ಲಿ ಕಾಂಗ್ರೆಸ್ ಪರವಾಗಿ ಖರ್ಗೆ ಮತ್ತು ರಾಹುಲ್ ಭಾಗವಹಿಸುವುದು ಖಚಿತವಾಗಿದೆ. ಮಮತಾ ಬ್ಯಾನರ್ಜಿ, ಅಖಿಲೇಶ್ ಯಾದವ್, ಕೇಜ್ರಿವಾಲ್ ಮತ್ತು ಶರದ್ ಪವಾರ್ ಕೂಡ ಪಾಲ್ಗೊಳ್ಳುವ ನಿರೀಕ್ಷೆಯಿದೆ.ಈ ಸಭೆಯಲ್ಲಿ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಕೂಡ ಭಾಗವಹಿಸುವ ನಿರೀಕ್ಷೆಯಿದೆ. ಕಮ್ಯುನಿಸ್ಟರೂ ಭಾಗವಹಿಸಲಿದ್ದಾರೆ.

ಆದರೆ, ನಿತೀಶ್ ಕುಮಾರ್ ಅವರು ವಿರೋಧ ಪಕ್ಷಗಳನ್ನು ಒಟ್ಟುಗೂಡಿಸುವಲ್ಲಿ ಕೆಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಭಾರತ ರಾಷ್ಟ್ರೀಯ ಸಮಿತಿ ಅಧ್ಯಕ್ಷ ಚಂದ್ರಶೇಖರ್ ರಾವ್, ತೆಲುಗು ದೇಶಂ ಅಧ್ಯಕ್ಷ ಚಂದ್ರಬಾಬು ನಾಯ್ಡು, ವೈ.ಎಸ್.ಆರ್. ಕಾಂಗ್ರೆಸ್ ಅಧ್ಯಕ್ಷ ಜಗನ್ ಮೋಹನ್ ರೆಡ್ಡಿ, ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಮತ್ತು ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿ ಅವರನ್ನು ಸಮನ್ವಯಗೊಳಿಸಲು ನಿತೀಶ್ ಕುಮಾರ್ ಅವರಿಗೆ ಇನ್ನೂ ಸಾಧ್ಯವಾಗಿಲ್ಲ.

ಆದರೂ ನಿತೀಶ್ ಕುಮಾರ್ ಅವರು ಒಮ್ಮತದಿಂದ ಎಲ್ಲರನ್ನೂ ಒಟ್ಟುಗೂಡಿಸಿ ಕಾರ್ಯನಿರ್ವಹಿಸಲು ನಿರ್ಧರಿಸಿದ್ದಾರೆ. ಕಳೆದ 2019ರ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಶೇ.38ರಷ್ಟು ಮತಗಳನ್ನು ಪಡೆದಿತ್ತು. ವಿರೋಧ ಪಕ್ಷಗಳನ್ನು ಒಗ್ಗೂಡಿಸುವ ಮೂಲಕ ಭಾರತೀಯ ಜನತಾ ಪಕ್ಷಕ್ಕೆ ತೀವ್ರ ಬಿಕ್ಕಟ್ಟು ಸೃಷ್ಟಿಸಬಹುದು ಎಂದು ನಿತೀಶ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ. ಅದರಲ್ಲೂ ನಿರ್ದಿಷ್ಟವಾಗಿ ಒಟ್ಟು 543 ಎಂಪಿ ಕ್ಷೇತ್ರದಲ್ಲಿ ಕನಿಷ್ಠ 450 ಕ್ಷೇತ್ರಗಳಲ್ಲಿ ಸಾಮಾನ್ಯ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ.

450 ಕ್ಷೇತ್ರಗಳಲ್ಲಿ ಬಿಜೆಪಿ ವಿರುದ್ಧ ಸಾಮಾನ್ಯ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ ಖಂಡಿತವಾಗಿಯೂ ಭಾರತೀಯ ಜನತಾ ಪಕ್ಷಕ್ಕೆ ಬಹುಮತ ಬರದಂತೆ ತಡೆಯಬಹುದು ಎಂದು ನಿತೀಶ್ ಕುಮಾರ್ ರಾಜ್ಯ ಪಕ್ಷದ ನಾಯಕರೊಂದಿಗೆ ಮಾತನಾಡುತ್ತಿದ್ದಾರೆ. ಆದರೆ ರಾಜ್ಯ ಪಕ್ಷದ ನಾಯಕರು ಹೆಚ್ಚಿನ ಸ್ಥಾನಗಳಲ್ಲಿ ಸ್ಪರ್ಧಿಸುವ ಬಗ್ಗೆ ಗಂಭೀರವಾಗಿ ಚಿಂತಿಸುತ್ತಿರುವುದರಿಂದ ಕಾಂಗ್ರೆಸ್ ತನ್ನ ನಿಲುವು ಬದಲಿಸುತ್ತದೆಯೇ? ಎಂಬುದನ್ನು ಕಾದು ನೋಡಬೇಕು.